Saturday 15 February 2020

ಸಿರಿಭೂವಲಯವು ಎಲ್ಲರಿಗೂ ದಕ್ಕುವುದೆಷ್ಟು!?


ಪ್ರಿಯ ಓದುಗರೇ, ಮೇಲುನೋಟಕ್ಕೆ ಸಿರಿಭೂವಲಯ ಕಾವ್ಯವು ಅತ್ಯಂತ ಕಠಿಣವಾದ ಕಾವ್ಯವೆಂಬಂತೆ ಕಾಣಿಸಿದರೂ, ಇಲ್ಲಿ ಬಳಕೆಯಾಗಿರುವ ಕನ್ನಡಭಾಷೆಯು ಅತ್ಯಂತಸರಳವೂ,  ಗೂಢಾರ್ಥಸಹಿತವೂ ಆಗಿರುವುದೆಂಬುದರಲ್ಲಿ ಸಂಶಯವಿಲ್ಲ. ಅವುಗಳನ್ನು ತಾಳ್ಮೆಯಿಂದ ಓದಿದಲ್ಲದೇ ಅಲ್ಲಿನ ಭಾವನೆಯು ಓದುಗರಿಗೆ ವೇದ್ಯವಾಗುವುದಿಲ್ಲ!
 ಇದುವರೆವಿಗೆ ಪ್ರಕಟವಾಗಿರುವ  ಕೇವಲ  ನಾನೂರುಪುಟಗಳವ್ಯಾಪ್ತಿಯ  ಮೂಲಸಾಹಿತ್ಯವನ್ನು  ಸರಳವಾಗಿ ಪರಿಚಯಿಸುವಕಾರ್ಯಕ್ಕೇ ಸುಮಾರು ೩೦೦೦ ಪುಟಗಳ ವಿವರಣೆಯಾಯಿತು. ಇದನ್ನೂ ಓದುವ ಶ್ರಮವಹಿಸದ ಕೆಲವು ವಿದ್ವಾಂಸರು ಸಿರಿಭೂವಲಯಕಾವ್ಯ ಹಾಗೂ ಕವಿ ಕುಮುದೇಂದುಮುನಿಯನ್ನೇ ಸಾರಾಸಗಟಾಗಿ ತಿರಸ್ಕರಿಸಿ, ಕವಿ ಹಾಗೂ ಕಾವ್ಯದ ಅಸ್ಥಿತ್ವವನ್ನೇ ನಿರಾಕರಿಸಿದ್ದಾಗಿದೆ!!
ಮೂಲಸಾಹಿತ್ಯದಿಂದ ಅಂತರ್ಸಾಹಿತ್ಯವನ್ನು ಹುಡುಕಿ, ಬೇರ್ಪಡಿಸುವ ಸನ್ನಿವೇಶದಲ್ಲಿ ಸುಧಾರ್ಥಿಯು ತನಗೆ  ಖುಷಿಕೊಟ್ಟ ಕೆಲವು  ಅತ್ಯಂತ ಸ್ವಾರಸ್ಯಕರವೆನಿಸಿದ ಸಾಂಗತ್ಯಗಳಿಗೆ ಮಾತ್ರವೇ ತನ್ನ ಇತಿಮಿತಿಯಲ್ಲಿ ಭಾವಾರ್ಥವನ್ನು ಸೂಚಿಸಿರುವುದಿದೆ. ಆದರೆ,ಅವುಗಳ ಸಮರ್ಪಕವಾದ ವಿಶ್ಲೇಷಣೆಗೆ ಕೈ ಹಾಕದೇ ಕೆಲವರು ’ಈ ಸುಧಾರ್ಥಿಯು ಬರೆದಿರುವುದೆಲ್ಲವೂ ಸ್ವಕಪೋಲಕಲ್ಪಿತಮಾಹಿತಿಗಳು. ಅದರವಿಚಾರವಾಗಿ ಜೈನಸಮುದಾಯದವರು ಹೆಚ್ಚಿನ ಗಮನಕೊಡುವ ಅಗತ್ಯವಿಲ್ಲ’ ಎಂದು ಮೌಖಿಕ ಫರ್ಮಾನು ಹೊರಡಿಸಿರುವುದಿದೆ!!
ಇದು ಸರಿಯಾದ ನಿಲುವೂ? ಅಲ್ಲವೋ ಎಂಬುದನ್ನು ಇಲ್ಲಿನ ಓದುಗರು ಸುಲಭವಾಗಿ ಓದಿತಿಳಿಯಬಹುದಾದ ಪ್ರಸಂಗ ಒಂದನ್ನು ಇಲ್ಲಿ ಸೂಚಿಸಲಾಗಿದೆ. ಓದುಗರು ಅದರತ್ತ ಗಮನಹರಿಸಬೇಕಾಗಿ ವಿನಂತಿ.
೨೧ ನೇ  ಅಧ್ಯಾಯದ ಪೂರ್ಣಪದ್ಯಗಳಲ್ಲಿ ಅಶ್ವಗತಿಯಲ್ಲಿ ಸಾಗಿದಾಗ ದೊರೆಯುವ ಕನ್ನಡ ಪದ್ಯಸಾಹಿತ್ಯದಲ್ಲಿ  ೫೨ ಹಾಗೂ ೫೩ನೇ ಪದ್ಯಗಳಲ್ಲಿ ಕಾಣಬರುವ ಮಾಹಿತಿಯನ್ನು ಗಮನಿಸಿರಿ. ”ರೆದಿಗೆತಮಹೆಚ್ಚಿದವನುಸಾಯಲಮೋಘ| ಓದಿನಿಸಿಲ್ಲದಜನರ|| ಕೇದಿನೊಳಗೆಹುಟ್ಟಿಅಥವಾತಿರಿಯಂಚ|ದಾದನದೊಳ್ಹುಟ್ಟುವವನ್|| ೫೨| ಯೆಯದನರಿಯಬೇಕಾದರೆಗಣಿತದ|ಯೆಯಸಿದ್ಧಾಂತದೊಳ್ಕುಗತಿ||
ಆಯತದಗುಣಕಾರಗಣಕರಿಂದರಿಪಾರ್ಥ|..."  ಎಂಬುದಾಗಿದೆ.
 ಇಲ್ಲಿ ದ್ವಾರಕೆಯ ಕೃಷ್ಣನು ಪಾರ್ಥನಿಗೆ  ಬೋಧಿಸಿದ ಭಗವದ್ಗೀತೆಯ ಮಾಹಿತಿಯನ್ನು ಕುಮುದೇಂದುಮುನಿಯು ಅಮೋಘವರ್ಷನಿಗೆ ವಿವರಿಸುವ ಸನ್ನಿವೇಶದ ಚಿತ್ರಣವಿದೆ.   ’ಜೀವನದಲ್ಲಿ ಜುಗುಪ್ಸೆಯ ತಮೋಗುಣವು ಹೆಚ್ಚಿರುವಾಗ ಸಾಯುವವನು ತನ್ನ ಮರುಹುಟ್ಟಿನಲ್ಲಿ ಅವಿದ್ಯಾವಂತರ ಮನೆಯಲ್ಲಿ, ತಿರುಪೆಯವರಮನೆಯಲ್ಲಿ, ಅಥವಾ ದನವಾಗಿ ಹುಟ್ಟುವನು ಎಂಬುದನ್ನು ಕವಿಯು ಅಮೋಘವರ್ಷನಿಗೆ ವಿವರಿಸಿದ್ದಾನೆ. ಇದನ್ನು ತಿಳಿಯಬೇಕಾದರೆ, ಗಣಿತ ಹಾಗೂ ಗಣಿತಜ್ಞರಿಂದ ತಿಳಿಯಬೇಕು ಪಾರ್ಥ’ ಎಂಬುದು ಇದರ  ಭಾವಾರ್ಥ . ಇದಕ್ಕಿಂತಸರಳವಾಗಿ ಈ ಮಾಹಿತಿಯನ್ನು ಸೂಚಿಸಲು ಸಾಧ್ಯವೇ? ಯೋಚಿಸಿರಿ.
 ನಾಲ್ಕು ಸಾಲಿನ ಎರಡು ಸಾಂಗತ್ಯಗಳ  ವಿಚಾರವನ್ನು ವಿವರಿಸುವಲ್ಲಿ ಇಷ್ಟು ಬರೆಯಬೇಕಿರುತ್ತದೆ. ಹೀಗೆ ಪ್ರತಿಯೊಂದು ಸಾಂಗತ್ಯಪದ್ಯಕ್ಕೂ ಭಾವಾರ್ಥವನ್ನು ಸೂಚಿಸುವುದಕ್ಕೆ ಹೊರಟರೆ, ಎಷ್ಟು ಬರೆಯಬೇಕಾಗುತ್ತದೆ ಎಂಬುದನ್ನು ಯೋಚಿಸಬೇಕು.
ಹಾಗೊಮ್ಮೆ ಬರೆದರೂ ಅದನ್ನು ಓದುವವರಾರು?  ಬರೆದಿರುವುದು ಸರಿಯೋ ತಪ್ಪೋ ಎಂದು ವಿಮರ್ಶಿಸುವವರಾರು?
ಇದೊಂದು ತೀರ ಸಣ್ಣ ಪ್ರಸಂಗ ಇಂಥವು ಸಿರಿಭೂವಲಯದಲ್ಲಿ ಲಕ್ಷಾಂತರ!! ಈಗ ಪ್ರಕಟವಾಗಿರುವ ಸುಮಾರು ೨೦೦೦೦  ಪದ್ಯಗಳಲ್ಲಿ ಪ್ರಾತಿನಿಧಿಕವೆನಿಸುವ ಕೆಲವಾರು  ಪದ್ಯಗಳ ಭಾವಾರ್ಥವನ್ನು ಈ ಕ್ರಮದಲ್ಲಿ ನಿರೂಪಿಸಿರುವುದು ವಾಸ್ತವವೋ? ಸ್ವಕಪೋಲಕಲ್ಪಿತವೋ? ಎಂಬುದನ್ನು ಪ್ರಜ್ಞಾವಂದರಾದ ಓದುಗರು ನಿರ್ಧರಿಸಬೇಕು.
 ಸಿರಿಭೂವಲಯ ಕಾವ್ಯವನ್ನೂ, ಅದನ್ನುಕುರಿತ ಸರಳಪರಿಚಯವನ್ನೂ ಮನಸೋಇಚ್ಛೆ ಅಲ್ಲಗಳೆಯುವವರು ಅವರ ಜೀವಮಾನದಲ್ಲಿ ಇಂಥ ಕಾವ್ಯವನ್ನು ಓದುವುದಿರಲೀ; , ಅದರ ಸರಳಪರಿಚಯವನ್ನು ಓದಲೂ ಸಾಧ್ಯವಾಗದೆಂದು ಸುಧಾರ್ಥಿಯು ಖಚಿತವಾಗಿ ಹೇಳಬಲ್ಲವನಾಗಿದ್ದಾನೆ.
                                            -ಸಿರಿಭೂವಲಯದಸುಧಾರ್ಥಿ.

No comments:

Post a Comment