Sunday 2 February 2020

ಸಿರಿಭೂವಲಯದ ಕಟ್ಟಡಗಳ ಸೊಬಗು!!!

 ಇಂದ್ರಭವನಗಳ ರಚನೆ ಹಾಗೂ ವಿಸ್ತಾರ ಗೊತ್ತೆ!!??

ಆಧುನಿಕ ಪರಿಸರದಲ್ಲಿ ಜಗತ್ತಿನಾದ್ಯಂತವೂ ಸುಂದರವಾದ ಕಟ್ಟಡಗಳು ನಿರ್ಮಾಣವಾಗುತ್ತಿರುವುದನ್ನು ನೋಡುತ್ತಿದ್ದೇವೆ. ಇಂಥ ಕಟ್ಟಡಗಳ ನಿರ್ಮಾಣವು ಭಾರತಲ್ಲಿಯೂ ಕಾಣಬರುತ್ತಿದೆ. ಈ ಕಟ್ಟಡಗಳ ಒಳಾಂಗಣದ ಹಾಗೂ ಹೊರಾಂಗಣದ  ಅಲಂಕಾರಕ್ಕಾಗಿ ಹಲವಾರು ವಿನ್ಯಾಸಗಳ ಗಾಜಿನ  ಬೃಹತ್ ಹಲಗೆಗಳನ್ನು ಬಳಸುವುದು, ಅವುಗಳಿಗೆ ಅನುಗುಣವಾದ ನಯವಾದ ಗಾರೆಯಕೆಲಸದ ಕುಶಲತೆ ಇತ್ಯಾದಿಗಳು ಊಹಾತೀತವಾಗಿ ಬಳಕೆಗೆ ಬಂದಿರುವುದು ಸರಿಯಷ್ಟೇ.
ಗಾಜಿನ ತಯಾರಿಕೆಯ ಇತಿಹಾಸದಲ್ಲಿ ಬೆಲ್ಜಿಯಂದೇಶವು ಹೆಚ್ಚು ಪ್ರಸಿದ್ಧಿ ಪಡೆದಿದೆ.  ಗಾಜಿನ ಹಲಗೆಗೆಳಲ್ಲಿ- ವಿಶೇಷವಾಗಿ ಕನ್ನಡಿಗಳಲ್ಲಿ- ಗಾಳಿಯನ್ನು ಬಳಸಿ ನಿರೂಪಿಸುವ ಕಲಾಕೌಶಲ್ಯವು ಬಹಳ ಮನಮೋಹಕವಾಗಿರುವುದೂ ನಿಶ್ಚಯ!
 ಈ ರೀತಿಯ ಕೌಶಲ್ಯವು ಇಂದಿನ ಆಧುನಿಕ ವಿಜ್ಞಾನದ  ಆವಿಷ್ಕಾರದ ಫಲ ಎಂಬುದರಲ್ಲಿ ಇಂದಿನವರಿಗೆ ಯಾವುದೇ ರೀತಿಯ ಸಂಶಯವಿರುವುದಿಲ್ಲ!  ಆದರೆ, ಇದೆಲ್ಲವನ್ನೂ ಮೀರಿಸಿದ ಕೌಶಲ್ಯವು ಪ್ರಾಚೀನಭಾರತೀಯರಿಗೆ ಕರಗತವಾಗಿತ್ತೆಂದರೆ ಅದನ್ನು ಯಾರೂ ನಂಬಲಾರರು!!
ಇಂದಿನ ಕಟ್ಟಡನಿರ್ಮಾಣ ತಂತ್ರಜ್ಞಾನವು ಎಷ್ಟು ಮುಂದುವರೆದಿದೆಯೆಂದರೆ, ಮುಗಿಲಿಗೆ ಮುತ್ತಿಕ್ಕುವಂತೆ ಗಗನದತ್ತ ತಲೆಎತ್ತಿದ ಕಟ್ಟಡಗಳ ನಿರ್ಮಾಣವು ಬಹಳ ಬಿರುಸಿನ ಪೈಪೋಟಿಯಿಂದ ಮುಂದುವರೆದು ನಗರ ಪ್ರದೇಶಗಳಲ್ಲಿ ಕಟ್ಟಡಗಳೆಲ್ಲವೂ ಗಗನದಲ್ಲೇ ತೇಲುವಂತೆ ಭಾಸವಾಗುವುದು ಸಹಜ.
 ಇದೆಲ್ಲ ಭ್ರಮೆಯೂ ಎಷ್ಟೇ ಅದ್ಭುತವೆನಿಸಿದರೂ, ಈ ಕಟ್ಟಡಗಳ ಬುನಾದಿಗೆ ಭೂಮಿಯೇ ಆಧಾರವೆಂಬುದನ್ನು ಯಾರೂ ಅಲ್ಲಗಳೆಯಲಾಗದು!!  ಆದರೆ, ಸಿರಿಭೂವಲಯದಲ್ಲಿ ವರ್ಣಿತವಾಗಿರುವ  ಕಟ್ಟಡಗಳ ಪರಿ ಈ ರೀತಿಯದಲ್ಲ!! ಗಗನದಲ್ಲಿ ಹವಾರು ಲೋಕಗಳಿರುವುದನ್ನೂ,  ಅವುಗಳಲ್ಲಿ ನಿರ್ಮಾಣವಾಗಿರುವ ಊಹಾತೀತವಾದ ಕಟ್ಟಡಗಳ ಭವ್ಯತೆಯನ್ನೂ ವಿಸ್ತಾರವನ್ನೂ  ಸಿರಿಭೂವಲಯದಲ್ಲಿ ಕುಮುದೇಂದುಮುನಿಯು ವರ್ಣಿಸಿರುವುದಿದೆ!!
ಅಂದಿನ ಕಟ್ಟಡನಿರ್ಮಾಣಶೈಲಿಯ ವಿವರಗಳನ್ನು ಗಮನಿಸಿದಾಗ, ೧೨೦೦ ವರ್ಷಗಳಹಿಂದೆಯೂ ಕನ್ನಡಿಯ (ದರ್ಪಣ) ಬಳಕೆಇತ್ತೆಂಬುದು ಖಚಿತವಾಗುತ್ತದೆ. ಈಗಲೂ ಕನ್ನಡಿಯಲ್ಲಿ ಗಾಳಿಯನ್ನು ಬಳಸಿ ಸುಂದರವಾದ ಚಿತ್ರಗಳನ್ನು ಬಿಡಿಸುವ ಕಲೆಯು ಜೀವಂತವಾಗಿದೆ.  ಕಟ್ಟಡದ ನಿರ್ಮಾಣದಲ್ಲಿ ಇಂಥ ಗಾಜಿನಕನ್ನಡಿಯಂತೆ ನುಣುಪಾಗಿರುವ ನೆಲವನ್ನು ರಚನೆ ಮಾಡುತ್ತಿದ್ದರೆಂಬುದು ಹಾಗೂ ಅಂದಿನವರ ಕಟ್ಟಡನಿರ್ಮಾಣದ ಕೌಶಲ್ಯವು ಎಷ್ಟು ಉನ್ನತವಾಗಿದ್ದಿತೆಂಬುದು ಅಚ್ಚರಿಯ ವಿಚಾರವಾಗಿದೆ.
ಇಂದಿನ ಕಟ್ಟಡನಿರ್ಮಾಣದ ಸಾಮಗ್ರಿಗಳ ವಿಚಾರ ಬಂದಾಗ ಅಲ್ಲಿ ಕಲ್ಲು, ಗಾರೆ/ಸಿಮೆಂಟ್,  ಇಟ್ಟಿಗೆ , ಮರಳು ಮುಂತಾದುವು  ಅನಿವಾರ್ಯವಾದವಾಗಿರುತ್ತವೆ. ಆದರೆ  ಸಿರಿಭೂವಲಯದ ’ ದೇವನಿವಾಸ’ ಹಾಗೂ ’ಇಂದ್ರಭವನಗಳ’  ನಿರ್ಮಾಣದಲ್ಲಿ ಚಿನ್ನ, ಬೆಳ್ಳಿ, ವಜ್ರ ಹಾಗೂ ನವರತ್ನಗಳ ಬಳಕೆಯು ತೀರ ಸಾಮಾನ್ಯವಾದುದು!!!
 ಇವುಗಳ ನಿರ್ಮಾಣಕ್ಕೆ  ತಳಪಾಯ ಹಾಕಲು ಭೂಮಿಯ ಆಧಾರವೂ ಬೇಕಿಲ್ಲ!!  ಇವೆಲ್ಲವೂ ನಿರ್ಮಾಣವಾಗಿರುವುದು ಬಾಹ್ಯಾಕಾಶದಲ್ಲಿ ಎಂಬುದನ್ನು ನಾವು ಗಮನದಲ್ಲಿರಿಸಿಕೊಳ್ಳಬೇಕು!!!
 ಈ ವಿವರಣೆಯನ್ನು ಓದುತ್ತಿರುವಂತೆಯೇ ನಿಮ್ಮ ಅಂತರಂಗದಲ್ಲಿ ಇವೆಲ್ಲವೂ ಕೇವಲ ಕಲ್ಪನೆಯ ಮಾಹಿತಿಗಳು ಎಂಬ ಹುಸಿನಗೆಯ ಭಾವನೆ ಉಂಟಾಗಿದೆಯೆಂಬುದು ನನಗೆ ಅರಿವಿದೆ. ಆದರೂ ಕಾವ್ಯಾಂತರಂಗದಲ್ಲಿ ಅಡಗಿದ್ದು ತನ್ನ ಒಳಗಣ್ಣಿಗೆ ಕಾಣಿಸಿದ ಮಾಹಿತಿಯನ್ನು ಇಲ್ಲಿ ವಿವರಿಸುವುದು ಈ ಕಾವ್ಯದ ಪರಿಚಯಕಾರನಿಗೆ ಅನಿವಾರ್ಯವಾದುದು.  ಇದನ್ನು ಒಪ್ಪಿಕೊಂಡು ನಂಬುವುದು ಅಥವಾ ನಂಬದಿರುವುದು ಓದುಗರ ಇಚ್ಛೆಗೆಬಿಟ್ಟ ಸಂಗತಿ. ಇದೊಂದು ರೀತಿಯ ವಿಲಕ್ಷಣವಾದ ಮಾಹಿತಿ (Fantastic) ಎಂದು ಬೇಕಾದರೂ ನೀವು ಇದನ್ನು ನಿರ್ಧರಿಸಬಹುದು.  ಏನೇ ಆಗಲೀ  ಸಿರಿಭೂವಲಯಕಾವ್ಯದಲ್ಲಿ ಇದಕ್ಕೆ ಸಂಬಂಧಿಸಿದ ಖಚಿತವಾದ ವಿವರಣೆಗಳು ತುಂಬಿರುವುದು ನಿಶ್ಚಯ. ನೋಡಿ:
”ಣವರತ್ನದಿಂದಶೋಭಿತವಾದಭವನದೆ|ಅವೆರಡೂಭಾಗದಲಿಪ್ರವರದ ಭರಭಾಗ ಹದಿನಾರುಸಾವಿರಯೋಜನವಿಹವು||
ಅಸುರರಿಗೆ ೬೪ ಲಕ್ಷಭವನಗಳು, ನಾಗಕುವರರಿಗೆ ೮೪ಲಕ್ಷಭವನಗಳು,ಸುಪರ್ಣರಿಗೆ೭೨ ಲಕ್ಷ, ಣವದೀಪಕುವರರ್ಗೆಪ್ಪತ್ತಾರುಲಕ್ಷ,..  ಇತ್ಯಾದಿಗಳ ಲೆಕ್ಕಹೇಳಿ,  ಧರಣಾನಂದ, ವೇಣುಧಾರಿ, ವಸಿಷ್ಟ, ಜಲಕಾಂತ, ಮಹಾಘೋಷ ,ಹರಿಕಾಂತ, ಮಿತವಾಹನ, ಮುಂತಾದ ಹಲವಾರು ಇಂದ್ರರ ಹೆಸರು ಸೂಚಿಸಿ,  ಅವರಿಗಾಗಿರುವ ಹಲವಾರು ಲಕ್ಷ ಇಂದ್ರಭವನಗಳ ವಿವರನೀಡಲಾಗಿದೆ!!
ಇವುಗಳನ್ನೆಲ್ಲ ಲೆಕ್ಕಹಾಕಿ ಒಟ್ಟುಗೂಡಿಸಿ, ಅದನ್ನು ಕುರಿತು ಒಟ್ಟು ಏಳುಕೋಟಿ ಎಪ್ಪತ್ತೆರಡು ಲಕ್ಷ ಭನಗಳಿರುವುದೆಂದು ಸೂಚಿಸಲಾಗಿದೆ!! ನೋಡಿ: ’ಪಿಡಿದಿರುವನೆಲ್ಲಕೂಡಲುಏಳುಕೋಟಿಯಕಡೆಗೆ| ಎಪ್ಪತ್ತೆರಡುಲಕ್ಷಗಳು| ಪೊಡವಿಯ ಇಂದ್ರಭವನಗಳಿಹವು| ಬಿಡದೆಲೆಕ್ಕಗಳಮ್’|| ಈ ರೀತಿಯಲ್ಲಿ ಸೂಚಿಸಿರುವ ಇಂದ್ರಭವನಗಳ ಲೆಕ್ಕವು  ಸರಿಯೋ? ತಪ್ಪೋ?? ಎಂಬುದನ್ನು ಪರೀಕ್ಷಿಸುವುಇದಕ್ಕಾದರೂ ಕುತೂಹಲಿಗಳು ಇಲ್ಲಿನ ಲೆಕ್ಕವನ್ನು ಪರಿಶೀಲಿಸಬೇಕು!
 ಇದು ಅಂತರಿಕ್ಷದಲ್ಲಿ ಭವನಗಳು ಎಷ್ಟಿವೆಯೆಂಬುದನ್ನು ಕುರಿತು ಲೆಕ್ಕವಾಯಿತು.  ಇನ್ನು ಇವುಗಳು ನಿರ್ಮಾಣವಾಗಿರುವ ನಿವೇಶದ ಒಟ್ಟು ವಿಸ್ತೀರ್ಣವು  ಎಷ್ಟಿರಬಹುದು!? ಕಾವ್ಯದಲ್ಲಿ ಹದಿನಾರು ಸಾವಿರ ಯೋಜನಗಳೆಂದು ಸೂಚಿಸಲಾಗಿದೆ!!   ( ಒಂದು ಯೋಜನ ದೂರವು  ಸುಮಾರು ೧೨  ಮೈಲುಗಳಿಗೆ ಸಮ)  ವಿಸ್ಥೀರ್ಣದಲ್ಲಿ ಒಂದು ಯೋಜನವೆಂದರೆ ಅದು ೧೪೪ ಚದರ ಮೈಲಿಗಳಾಗುತ್ತದೆ!  ಅಲ್ಲಿಗೆ ಈ ಭವನಗಳ ಒಟ್ಟು ವಿಸ್ತೀರ್ಣವು ಎಷ್ಟು ? ಎಂಬುದನ್ನು ಕುರಿತು ನಿಮಗೆ ಬಿಡುವಾದಾಗ ಲೆಕ್ಕಹಾಕಿರಿ!!!
ಅಸುರರಿಗೆ ೬೪ಲಕ್ಷಭವನಗಳೆಂದು ಸೂಚಿಸಿರುವುದು ಸಾರಿಯಷ್ಟೇ. ಅವರುಗಳಿರುವ ಅವನಿಯು ’ಚಿತ್ರಾಪೃಥ್ವಿಯ’ ಕೆಳಗಿರುವುದೆಂದು ಸೂಚಿಸಲಾಗಿದೆ.
 ’ಚಿತ್ರಾಪೃಥ್ವಿಯ’ ಕೆಳಗಿರುವ ಅವನಿಯಲ್ಲಿ ಅಲ್ಪರು ಅಧಿಕರೆಂದು ಹೇಳಲಾಗಿದೆ. ಇಲ್ಲಿಂದ ೨ ಸಾವಿರ ಯೋಜನದ ಕೆಳಗೆ ಇದಕ್ಕೆ ಸೇರದಂತಿರುವ ೪೨ಸಾವಿರ ಯೋಜನದ ಕೆಳಗೆ ಮಹರ್ಧಿಕರಿರುತ್ತಾರೆ! ಆಕಡೆ ಕೆಳಗೆ ಒಂದು ಲಕ್ಷಯೋಜನದ ಅಡಿಯಲ್ಲಿ  ಮೂರಾರ್ಧಿಧಾರಕರ ನಿವಾಸಗಳಿರುತ್ತವೆ.
 ಅವುಗಳೆಲ್ಲವೂ ವಿಸ್ತಾರವಾದ ಚತುಷ್ಕೋಣ ರೂಪದಲ್ಲಿರುವುವೆಂದೂ, ಅವುಗಳು  ವಜ್ರಮಯವಾದ ದ್ವಾರಗಳಿಂದ ಶೋಭಿಸುವ ಅವನಿಯ ಕಾವ್ಯ ಭೂವಲಯ ಎಂದು ವಿವರಿಸಲಾಗಿದೆ.
 ಒಟ್ಟು ೧೪೪೦೦೦ ಯೋಜನಗಳ ವ್ಯಾಪ್ತಿಯಲ್ಲಿ ಈ ಚಿತ್ರಾಪೃಥ್ವಿ, ಮಹರ್ಧಿಕರು ಹಾಗೂ ಮೂರಾರ್ಧಿಧಾರಕರ ವಸತಿ ಪ್ರದೇಶವು ಹರಡಿಕೊಂಡಿದ್ದರೆ, ಅದರ ವಿಸ್ಥಾರವು ಎಷ್ಟಾಗುವುದೆಂಬುದನ್ನು ಊಹಿಸಿಕೊಳ್ಳಬೇಕು!!!
ಪ್ರಿಯ ಓದುಗರೇ, ಸಿರಿಭೂವಲಯಕಾವ್ಯದ ಈಭಾಗದಲ್ಲಿ ವಿವರಿಸಿರುವ ಮಾಹಿತಿಯು ಕೇವಲ ಕವಿಕಲ್ಪನೆ ಎಂದು ಉಪೇಕ್ಷಿಸಲಾಗದು.ಆಕಾಶದ ವಿಸ್ತಾರವು ಎಷ್ಟಿರುವುದೆಂಬುದನ್ನು ಮಾನವಮಾತ್ರದವರು ಇದುವರೆವಿಗೂ ಅಳೆಯಲಾಗಿಲ್ಲವೆಂಬುದು ಸರ್ವವಿದಿತ.  ಮಂಗಳಗ್ರಹಕ್ಕೆ ಬಾರತವು ಕಳೆಸಿದ ಅತ್ಯಂತವೇಗವಾಗಿ ಚಲಿಸಿದ ಬಾಹ್ಯಾಕಾಶನೌಕೆಯು ಅಲ್ಲಿಗೆ ತಲುಪಲು ೩೬೫ ದಿನಗಳ ಸಮಯ ಹಿಡಿಯಿತು! ಅಂದರೆ ಅಷ್ಟು ದೂರದ ಪ್ರಯಾಣವಾಯಿತು. ಇಲ್ಲಿ ಸರ್ವಜ್ಞಸ್ವರೂಪಿಯಾದ ಕುಮುದೇಂದುಮುನಿಯು ಇವೆಲ್ಲ ಕಟ್ಟಡಗಳು ವ್ಯಾಪಿಸಿರುವ ಅನೂಹ್ಯವಾದ ನಗರಗಳ ವೈಭವವನ್ನು ಒಂದು ಅಂದಾಜಿನ ರೂಪದಲ್ಲೇ ಆಗಿರಲೀ  ಲೆಕ್ಕಹಾಕಿ ಅದನ್ನು ಯೋಜನದ ಮಾನದಲ್ಲಿ ಸೂಚಿಸಿರುವುದನ್ನು ಊಹಿಸಿಕೊಳ್ಳಲೂ ನಮಗೆ ಸಾಧ್ಯವಾಗದು.
ಕವಿಯು ನೀಡಿರುವ ಈ ಲೆಕ್ಕಾಚಾರವು ಅವನ ಯೋಗಬಲದ ಪ್ರಯಾಣದಿಂದ ಪ್ರತ್ಯಕ್ಷವಾಗಿ ಕಂಡ ಪರಿಸರದ ಚಿತ್ರಣವೆಂಬುದನ್ನು ನಿರಾಕರಿಸಲಾಗದು.
 ಒಂದು ಯೋಜನವೆಂದರೆ ನಮ್ಮ ಒಂದು ಮಿಲಿಮೀಟರಿಗೆ ಸಮಾನವೆಂಬ ಲೆಕ್ಕಾಚಾರದಲ್ಲಿ ಈ ಅದ್ಭುತ ಬಡಾವಣೆಯ ನಕ್ಷೆ ತಯಾರಿಸಿದರೆ, ಅದರ ಸ್ವರೂಪವು ಹೇಗಿರಬಹುದೆಂಬುದನ್ನು ಶಕ್ತಿಯಿರುವವರು ಚಿತ್ರಿಸಿ ತೋರಿಸಬಹುದಲ್ಲವೇ!!??
 ಭೂಮಿಯ ಆಧಾರವೇ ಇಲ್ಲದೆ ಗಗನದಲ್ಲಿ ನಿರ್ಮಿತವಾಗಿರುವ ಈ ವೈಭವೋಪೇತವಾದ ಬೃಹತ್ ಇಂದ್ರಭವನಗಳ ರಚನೆಗೆ ಬಳಕೆಯಾಗಿರುವ ಸಾಮಗ್ರಿಯು ಕೇವಲ ಕಲ್ಲು, ಇಟ್ಟಿಗೆ, ಗಾರೆಯಲ್ಲ.  ನವರತ್ನಕೆತ್ತಿದ ಹಾಸುಗಲ್ಲುಗಳು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.  ಮತ್ತು ಈ ಇಂದ್ರಭವನಗಳ ನೆಲವು  ’ನವರತ್ನಕೆತ್ತಿದ ಹಸೆಯ ದರ್ಪಣದಂತೆ ಹೊಳೆವ ನೆಲ ’ ಎಂಬ ವರ್ಣನೆಯು ನಿಜಕ್ಕೂ ಕವಿ ಕಲ್ಪನೆಯಲ್ಲ!!
ನಭೋಮಂಡಲದಲ್ಲಿ ಯಾವುದೇ ಆಧಾರವಿಲ್ಲದೇ ಇಂದ್ರಭವನಗಳನ್ನು ನಿರ್ಮಿಸುವುದು  ಹುಚ್ಚುಕಲ್ಪನೆ ಎಂದು ನಿರಾಕರಿಸಲಾಗದು!  ಆಧುನಿಕ ವಿಜ್ಞಾನವು ನಭೋಮಂಡಲಕ್ಕೆ ಕೃತಕ ಉಪಗ್ರಹಗಳನ್ನು  ಕಳಿಸಿ ಅಲ್ಲಿ ಸ್ಥಿರಕ್ಷೆಯಲ್ಲಿ ಸೇರಿಸುವಮೂಲಕ ಈ ಸಾಧನೆಯನ್ನು  ಸಾಕ್ಷಾತ್ಕರಿಸಿದ್ದಾಗಿದೆ!
ಇನ್ನು ಅಷ್ಟೊಂದು ವೈಭವೋಪೇತವಾದ ಇಂದ್ರಭವನಗಳ ನಿರ್ಮಾಣಕ್ಕೆ ಅಗತ್ಯವಾದ ಹಣಕಾಸಿನ ವ್ಯವಸ್ಥೆಗೂ  ಚಿಂತಿಸುವ ಅಗತ್ಯವಿಲ್ಲ!! ಜಗತ್ತಿನ ವಿಚಾರಬೇಡ, ಭಾರತದ ವಿಚಾರಬೇಡ, ನಮ್ಮ ಕರ್ನಾಟಕದ ರಾಜಕಾರಣಿಗಳು, ಅಧಿಕಾರಿಗಳು, ಉದ್ದಿಮೆದಾರರು ಸರ್ಕಾರಕ್ಕೆ ವಂಚಿಸಿ ಸಂಗ್ರಹಿಸಿಕೊಂಡಿರುವ ಸಂಪತ್ತಿನ ಪ್ರಮಾಣವನ್ನೇ ಸರಿಯಾಗಿ ಲೆಕ್ಕಹಾಕಿಕೊಳ್ಳಿ ಅದು ಇಂಥ ಮಹಾ ಇಂದ್ರಭವನಗಳ ನಗರ ನಿರ್ಮಾಣಕ್ಕೆ ಸಾಕಾಗಿ ಮಿಗುವಷ್ಟಾಗುತ್ತದೆ!!
 ಕುಶಲಕರ್ಮಿಗಳ ವಿಚಾರ ಬಂದಾಗ ಸ್ವಲ್ಪ ಸಮಸ್ಯೆ ಕಾಣಿಸಬಹುದು, ಭಾರತದಲ್ಲಿರುವ ಜಗತ್ಪ್ರಸಿದ್ಧವಾದ  ಸಾವಿರಾರು ದೇವಾಲಯಗಳ ಕುಸುರಿಕೆಲಸವನ್ನು ಮಾಡಿದಂಥ  ಶ್ರದ್ಧಾವಂತ ಪ್ರಾಮಾಣಿಕ ಕುಶಲಕರ್ಮಿಗಳು ಈಗ ಸಿಗದಿರಬಹುದು. ಈಗಿನ ಕುಶಲಕರ್ಮಿಗಳಿಗೆ ಮಾಡಲು ಉದ್ಯೋಗಬೇಕು, ವೆಚ್ಚಕ್ಕೆ ಹಣಬೇಕು! ಆದರೆ ಶ್ರಮವಹಿಸಿ ಕೆಲಸಮಾಡುವುದುಮಾತ್ರ ಯಾರಿಗೂ ಬೇಡದ ಸಂಗತಿ!! ಆದರೆ  ಈರೀತಿಯಲ್ಲಿ ಶ್ರಮವಹಿಸಿ ದುಡಿಯುವ ಕುಶಲಕರ್ಮಿಗಳು ಹಿಂದೆ  ಹೇರಳವಾಗಿದ್ದರು ಎಂಬುದಕ್ಕೆ  ಪ್ರತ್ಯಕ್ಷ ಸಾಕ್ಷಿಗಳು ಉಳಿದಿವೆ.
ಈ ವಿಚಾರಗಳ ಹಿನ್ನೆಲೆಯಲ್ಲಿ ನೀವು ಈ ಪರಿಚಯಲೇಖನದ ಮಾಹಿತಿಗಳನ್ನು ನಂಬಬಹುದು ಅಥವಾ ನಿರಾಕರಿಸಬಹುದು. ಕುಮುದೇಂದುಮುನಿಯ ಸಿರಿಭೂವಲಯವು ಇದನ್ನೆಲ್ಲ ವಿವರಿಸಿರುವುದಂತೂ ನಿಶ್ಚಯ.  ಇದು ಸುಧಾರ್ಥಿಯ ಸ್ವಕಪೋಲಕಲ್ಪಿತಮಾಹಿತಿಗಳಂತೂ ಅಲ್ಲ!!!
                                                    -ಸಿರಿಭೂವಲಯದಸುಧಾರ್ಥಿ.  

No comments:

Post a Comment