Sunday 14 June 2020

ಸಿರಿಭೂವಲಯ ಕುರಿತ ನನ್ನ ವಿಶ್ಲೇಷಣೆ ಪಕ್ಷಪಾತದಿಂದ ಕೂಡಿದ್ದಲ್ಲ.

ಸಿರಿಭೂವಲಯ ಕುರಿತ ನನ್ನ ವಿಶ್ಲೇಷಣೆ ಪಕ್ಷಪಾತದಿಂದ ಕೂಡಿದ್ದಲ್ಲ.

ಸಂದೇಶ್ ಜೈನ್ ಅವರೇ,  ಸಿರಿಭೂವಲಯ ಕುರಿತ ನನ್ನ ವಿಶ್ಲೇಷಣೆ ಪಕ್ಷಪಾತದಿಂದ ಕೂಡಿದ್ದು;  ಎಂಬುದನ್ನು ನಾನು ಪ್ರಜ್ಞಾಪೂರ್ವಕವಾಗಿ ನಿರಾಕರಿಸುತ್ತೇನೆ.  ಸಾಮಾಜಿಕವಾಗಿ ಮನೆಬಿಟ್ಟುಹೋಗುವವರು  ಪೂರ್ವಿಕರ ಆಸ್ಥಿಯಲ್ಲಿ ಪಾಲುಪಡೆಯದೇ ಹೋಗುವುದಿಲ್ಲವೆಂಬುದು ಖಚಿತ. ಇದೇ ಅನಿಸಿಕೆ ಹಿಂದೂಧರ್ಮದಿಂದ ಬೇರ್ಪಟ್ಟ ಜೈನಸಂಪ್ರದಾಯಕ್ಕೂ ಅನ್ವಯಿಸುತ್ತದೆ! 
ಇದನ್ನು  ನೀವು ಒಪ್ಪುವಿರೋ ಬಿಡುವಿರೋ ಅದು ನಿಮಗೆ ಸೇರಿದ್ದು! ನಾನು ಈ ಮಾತು ಹೇಳಿದಮಾತ್ರಕ್ಕೆ, ಈ ಆಧಾರದಲ್ಲಿ ನಾನು ಸಿರಿಭೂವಲಯದ ಪರಿಚಯ ಮಾಡಿದ್ದೇನೆಂದು ನಿರ್ಧರಿಸಬಾರದು!  ವೇದಗಳು ಅಪೌರುಷೇಯವೋ ಅಲ್ಲವೋ ಎಂಬುದು ನಂಬಿಕೆಯ ವಿಚಾರ. ನಂಬುವವರು ಇರುವಂತೆಯೇ ನಿರಾಕರಿಸಿವವರೂ ಇದ್ದಾರೆ. ಮುಂದೆಯೂ ಇರುತ್ತಾರೆ. ಇದೊಂದು ನಿರಂತರ ಪ್ರವಾಹ. 
ಷಟ್ಖಂಡಾಗಮದ ಮೂಲ ವೇದವೆಂದು ಸೂಚಿಸಿರುವುದು ನನ್ನ ಅನಿಸಿಕೆಯೆಂದು ಭಾವಿಸಿ ನಿರ್ಧರಿಸಿದ್ದರೆ, ಅದು ಸರಿಯಲ್ಲ.  ತನ್ನ ಆರಾಧ್ಯದೈವ ಅಷ್ಟಮತೀರ್ಥಂಕರ ಚಂದ್ರಪ್ರಭದೇವನ  ವಾಣಿಯಲ್ಲಿ  ಸಂಪೂರ್ಣ ಶ್ರದ್ಧೆ ಹೊಂದಿದ್ದ ಕುಮುದೇಂದುಮುನಿಯ ಸಿರಿಭೂವಲಯದ ಮಾಹಿತಿಯನ್ನು  ನಾನು ವಿವರಿಸಿದ್ದೇನಷ್ಟೇ!  ಇದು ನನ್ನ ಸ್ವಕಪೋಲಕಲ್ಪಿತಮಾಹಿತಿಯಲ್ಲ!!
೨೦೦-೩೦೦ ವರ್ಷಗಳಿಂದೀಚಿನ ಮೇಧಾವಿಗಳು ತಮ್ಮ ಬರಹದಮೂಲಕ ಜೈನಸಂಪ್ರದಾಯವು ವೇದಗಳಿಗಿಂತ ಪ್ರಾಚೀನವೆಂಬ ತಪ್ಪು ಗ್ರಹಿಕೆಯ ಭ್ರಮೆಯನ್ನು ರೂಪಿಸಿದ್ದಾರೆಂದು ನಾನು ಹಲವಾರು ಸಲ ಸೂಚಿಸಿದ್ದೇನೆ.  ಪ್ರಥಮಖಂಡ ೫೯ ಅಧ್ಯಾಯಗಳಲ್ಲೇ ’ಋಗ್’  ’ಋಗ್ವೇದ’  ’ಋಗ್ ಭೂವಲಯ’ ಎಂಬ ಪದಗಳು ಸಾವಿರಾರುಸಲ ಬರುತ್ತವೆ! ಇದು ನಾನು ಪರಿಚಯಿಸಿದ್ದಲ್ಲ!!  ಜೈನ ಸಂಪ್ರದಾಯದವರು ಸಿರಿಭೂವಲಯವನ್ನು ಕತ್ತಲಲ್ಲಿರಿಸಲು ಇದು ಮುಖ್ಯಕಾರಣ! ಆದರೆ ಅವರ ದುರಾದೃಷ್ಟ! ಈ ಮಾಹಿತಿಯು  ಪ್ರಥಮಖಂಡದಲ್ಲೇ  ಪ್ರತ್ಯಕ್ಷವಾಗಿದೆ. ಅಲ್ಲಿಗೆ ಯೋಜನೆ ವಿಫಲವಾಯಿತೆಂದು ನಾನು ವಿಶ್ಲೇಷಿಸಿರುವುದು ನಿಜ.
 ಮುಂದಿನ  ೮ ಖಂಡಗಳಲ್ಲಿ ಪ್ರಾಚೀನ ಶಾಸ್ತ್ರಗ್ರಂಥಗಳಿಗೆ ಸಂಬಂಧಿದ ಮಾಹಿತಿಗಳೇ ಹೆಚ್ಚಿರುತ್ತವೆಂದು ನನ್ನ ಅನಿಸಿಕೆ.  ಅವುಗಳ ಸರಳಪರಿಚದಿಂದ  ದೊರೆಯುವ ಮಾಹಿತಿಗಳನ್ನು”ನಮ್ಮ ಖಾತೆಗೆ ಸೇರಿಸಿವ ಪ್ರಯತ್ನ’  ಎಂದು ನಿರ್ಧರಿಸಬೇಡಿ!!  ಈಗ ಕಾಲ ಬದಲಾಗಿದೆ. ಯಾರೂ ಯಾರನ್ನೂ ಸುಲಭವಾಗಿ ವಂಚಿಸಲಾಗದು.
ನೇಮಿ ತೀರ್ಥಂಕರರಿಂದ ದ್ವಾರಕೆಯ ಶ್ರೀಕೃಷನಿಗೆ ಉಪದೇಶವಾದ ನೇಮಿ ಗೀತೆಯು ಜೈನಸಂಪ್ರದಾಯದ ಕೊಡುಗೆ ಎಂದು ನಾನು ಪರಿಚಯಿಸಿರುವುದು ನಿಮ್ಮಲ್ಲಿ ಯಾರಿಗೂ ತಿಳಿಯದು! ಕೃಷನು ಯುದ್ಧಕ್ಕೆ ಪ್ರೇರಣೆ ಮಾಡಿರುವುದರಿಂದ ಅದು ’ಅಹಿಂಸಾಧರ್ಮಕ್ಕೆ’ ವಿರೋಧವೆಂದು ಲೆಕ್ಕಾಚಾರ ಮಾಡಿ ಅದನ್ನು ಜೈನರ ಕೊಡುಗೆ ಎಂಬುದನ್ನು  ನಿರಾಕರಿಸಿದ್ದವರು, ಇನ್ನೂ ನಿರಾಕರಿಸುವವರು ಜೈನಸಂಪ್ರದಾಯದವರೇ. 
ಈ ಮಾಹಿತಿಯನ್ನು ನಾನು ವಿಸ್ತಾರವಾಗಿ ಚರ್ಚಿಸಿದ್ದೇನೆ.  ಇಲ್ಲಿ ಅದು  ಸೇರಲಾಗದು. ಷಟ್ಖಂಡಾಗಮಗಳ ವಿಚಾರವೂ ಅಷ್ಟೇ! ಸಿರಿಭೂವಲಯದಲ್ಲಿರುವ ಮಾಹಿತಿಯನ್ನು ಪರಿಚಯಿಸಿದ್ದೇನೆ.   ಇದು ಪರಿಚಯಕಾರನ ’ತಿರುಚುವ’ ಪ್ರಯತ್ನವೆಂದು ಯಾರಾದರೂ ಭಾವಿಸಿದರೆ ಅದಕ್ಕೆ ನನ್ನ ಆಕ್ಷೇಪವಿಲ್ಲ. ಅವರಿಗೆ ಆ ಸ್ವಾತಂತ್ರವಿವೆ.  ಆದರೆ, ಇದು ಪಾರಿಚಯಕಾರನ ತಪ್ಪು ಎಂಬುದನ್ನು ಮಾತ್ರ ನಾನು ಜೀವಿಸಿರುವ ವರೆವಿಗೂ ನಿರಾಕರಿಸುತ್ತೇನೆ.  ಇಂದಿನ ಪರಿಸರದಲ್ಲಿ  ಸಂಸ್ಕೃತಭಾಷೆಯ ’ವೇದ’ ಸಾಹಿತ್ಯವು ಹೆಚ್ಚು ಜನಗಳಿಗೆ ಹತ್ತಿರವಾಗಲಾರದೆಂಬುದು ಸರ್ವವಿದಿತ.  ಆದರೆ ಸರ್ವಜ್ಞ ಸ್ವರೂಪಿಯಾದ ಕುಮುದೇಂದು ಮುನಿಯು  ವೇದೋಪನಿಷತ್ತುಗಳ ಸಮಗ್ರ ಮಾಹಿತಿಯನ್ನೂ ಆದಿನಾಥನ ಕೇವಜ್ಞಾನದ ಮಾಹಿತಿಗಳನ್ನೂ ಅಲ್ಲಿಂದ ತನ್ನವರೆಗೆ ಹರಿದುಬಂದಿರುವ ಜ್ಞಾನಗಂಗೆಯನ್ನು ಸಮಾವೇಶಗೊಳಿಸಿ, ಅತ್ಯಂತ ಪುರಾತನವಾದ ಕನ್ನಡಭಾಷೆಯಲ್ಲಿ ಸಿರಿಭೂವಲಯದ ನಿರೂಪಣೆಮಾಡಿರುವುದರಿಂದ ಇದನ್ನು ’ಕನ್ನಡದವೇದ’ ಎಂಬು ನಾನು ನಿರ್ಧರಿಸಿದ್ದೇನೆ. ಅಂದಮಾತ್ರಕ್ಕೇ ಇದನ್ನೂ ’ನಮ್ಮ ಖಾತೆಗೆ ಸೇರಿಸಿಕೊಂಡುಬಿಟ್ಟ’ ಎಂದು ಗಾಭರಿಯಾಗಬೇಡಿ!
 ಇದು ವೇದ ಹಾಗೂ ಜೈನ ಸಂಪ್ರದಾಯದ  ಜಂಟಿಖಾತೆ! ಇದನ್ನು ಯಾರೂ ಅಪಹರಿಸಲಾಗದು!!  ಕನ್ನಡದ ಇಂದಿನ ಶ್ರೇಷ್ಠತೆಗೆ, ಜಗದ್ವಿಖ್ಯಾತಿಗೆ  ಸಿರಿಭೂವಲಕಾರಣ. ಸಿರಿಭೂವಲಯದ ಕರ್ತೃ ಜೈನಸಂಪ್ರದಾಯದವನು.  ಈ ಶ್ರೇಯಸ್ಸಿನಲ್ಲಿ ಹೆಚ್ಚಿನಪಾಲು ಉಳಿದೆಲ್ಲ ಸಂಪ್ರದಾಯದವರಿಗಿಂತಲೂ ಜೈನಸಂಪ್ರದಾಯದವರಿಗೆ  ಸೇರುತ್ತದೆ ಎಂಬ ನನ್ನ ವಿಶ್ಲೇಷಣೆಯು ಬೆಳಗಾವಿಯ ಜೈನ ಸಮುದಾಯಕ್ಕೆ ಮನವರಿಕೆಯಾಗಿದೆ. ಸುಮಾರು ಒಂದು ಗಂಟೆಯ  ’ಪವರ್ ಪಾಯಿಂಟ್ ಪ್ರೆಸೆಂಟೇಷನ್’ ನಲ್ಲಿ  ಇದನ್ನು ಸೂಚಿಸಿದ್ದೇನೆ.  ಇಷ್ಟಾದರೂ ನಾನು ವೇದ ಸಮೂಹದ ಪಕ್ಷಪಾತಿ ಎಂದು ದೋಷಿಸುವುದಾದಲ್ಲಿ ನನಗೆ ತೊಂದರೆ ಏನಿಲ್ಲ!!
 ಸಿರಿಭೂವಲಯದ ಪರಿಚಯಕ್ಕಾಗಿ ಬ್ರಾಹ್ಮಣಸಮುದಾಯದ ಕೆಲವರು ಸುಧಾರ್ಥಿಯನ್ನು ದೂರವಿರಿಸಿರುವುದಿದೆ! ’ಸತ್ಯವನ್ನು ತಿರುಚಿ ತನ್ನ ಖಾತೆಗೆ ಸೇರಿಸಿಕೊಳ್ಳುತ್ತಾನೆ’  ಎಂಬುದು ಜೈನಸಂಪ್ರದಾಯದಲ್ಲಿ ಹಲವರ ಆಪಾದನೆ!!  (ಅಲ್ಲಿಯೂ ಸಲ್ಲದವ; ಇಲ್ಲಿಯೂ ಸೇರದವ; ಎಲ್ಲೂಸಲ್ಲದವನೇನೋ!?) ಇದಾವುದರಿಂದಲೂ ನನಗೆ ಆಗಬೇಕಾದ್ದೇನಿಲ್ಲ!! ಯಾರಹಂಗಿನಲ್ಲೂ ನಾನು ನನ್ನ ಜೀವನವನ್ನು ಸಾಗಿಸಬೇಕಿಲ್ಲ.  ಕನ್ನಡದ ಮಹಾನ್ ಅಭಿಮಾನಿ ಕೆ. ಅನಂತಸುಬ್ಬರಾಯರ ಕಾರಣದಿಂದ (ಅವರೂ ಹಲವಾರು ವೈದಿಕರಿಂದ, ಸ್ವಜಾತಿಯ ಬಂಧುಗಳಿಂದ ದೂರಸರಿಸಲ್ಪಟ್ಟವರು!) ನನಗೆ ಗಂಟುಬಿದ್ದ  ಅಮೂಲ್ಯಕೃತಿಯ ಸರಳಪರಿಚಯ ಮಾಡಿಕೊಡುವುದು ನನ್ನ ಪಾಲಿನ ಕರ್ತವ್ಯವಾಗಿತ್ತು  ಸಾಧ್ಯವಿರುವಷ್ಟನ್ನು ಸಮರ್ಪಕವಾಗಿ ಮಾಡಿ ಮುಗಿಸಿದೆ. ಇದನ್ನು ಯರು ಹೇಗೆಬೇಕಾದರೂ ಸ್ವೀಕರಿಸಬಹುದು/ ನಿರಾಕರಿಸಬಹುದು!  ಜೈನಧರ್ಮಕ್ಕೆ  ಇವನೊಬ್ಬ  ಉಗ್ರವಾದಿಯೆಂದುಬೇಕಾದರೂ ನಿರ್ಧರಿಸಬಹುದು. ಅದಕ್ಕೆ ನನ್ನ ವಿರೋಧವೇನಿಲ್ಲ. ಅದು ಅವರ ನಿಲುವಿನ ’ಸತ್ಯಾನ್ವೇಷಣೆ’ !! ಅಷ್ಟೇ!!
                        -ಸಿರಿಭೂವಲಯದಸುಧಾರ್ಥಿ. ೭೬೭೬೪೭೪೮೭೨.

ಸಿರಿಭೂವಲಯದ ಸರಳ ಪರಿಚಯಗಳನ್ನು ಕುರಿತು ಕನ್ನಡಿಗರ ಆಸಕ್ತಿ ಎಂಥದು!!!

ಸಿರಿಭೂವಲಯದ ಸರಳ ಪರಿಚಯಗಳನ್ನು ಕುರಿತು ಕನ್ನಡಿಗರ ಆಸಕ್ತಿ ಎಂಥದು!!!

ಸಿರಿಭೂವಲಯದ ಒಳಹೊಕ್ಕು, ಅಲ್ಲಿನ ಮಾಹಿತಿಗಳನ್ನು ಸರಳವಾಗಿ ಪರಿಚಿಯಿಸುವಕಾರ್ಯದಲ್ಲಿ ಶ್ರಮವಹಿಸಿ ಯಶಸ್ವಿಯದ ಹಾಸನದ ಸುಧಾರ್ಥಿಯು ,  ಕಳೆದ  ಒಂದು ದಶಕದ ಅವಧಿಯಲ್ಲಿ ಸುಮಾರು ೩೦೦೦ ಪುಟಗಳ ವ್ಯಾಪ್ತಿಯಲ್ಲಿ ೧೧ ಕೃತಿಗಳನ್ನು ಪ್ರಕಟಿಸಿದ್ದಾಯಿತು. ಅವುಗಳನ್ನು ಕೆಲವರು ಮಾತ್ರ ಗಮನಿಸಿ,  ಒಂದು ರೀತಿಯಲ್ಲಿ ಈ ಕೃತಿಗಳನ್ನು ಮೂಲೆಗುಂಪುಮಾಡಿದ್ದಾಯಿತು.  ಕಳೆದೊಂದು ವರ್ಷದಿಂದ ನಾನು fbನಲ್ಲಿ ಬರೆಯತೊಡಗಿದಮೇಲೂ ಕೇವಲ ಕೆಲವರಿಂದಮಾತ್ರ ಅದಕ್ಕೆ ಪ್ರತಿಕ್ರಿಯೆ ದೊರೆಯುತ್ತಿತ್ತು.  ಪ್ರಾಸಂಗಿಕವಾಗಿ ನಾನು ಸಿರಿಭೂವಲಯದಲ್ಲಿ ಅಂತರ್ಗತವಾಗಿರುವ ’ಋಗ್ವೇದವೇ ಜಗತ್ತಿನ ಎಲ್ಲ ಜ್ಞಾನಕ್ಕೂ ಮೂಲ’ ಎಂಬ ಮಾಹಿತಿಯನ್ನು ಸೂಚಿಸುವಲ್ಲಿ ಪ್ರಕಟಿಸಿದ ಕೆಲವು ಸಾಲಿನ ಲೇಖನಕ್ಕೆ ಜೈನಸಮುದಾಯದ ಕೆಲವು ಮಿತ್ರರು ಅದನ್ನು ಪ್ರಶ್ನಿಸಿ ತಮ್ಮ ಅನಿಸಿಕೆಗಳನ್ನು ಸೂಚಿಸಿದರು. ಅವುಗಳಿಗೆ ಸೂಕ್ತ ಉತ್ತರ ನೀಡಿದರೂ ಅವರಿಗೆ ಅದು ಸಮಂಜಸವೆನಿಸಲಿಲ್ಲ.  ಉತ್ತರ; ಪ್ರತ್ಯುತ್ತರಗಳಸರಣಿಯು ಬೆಳೆದು ಅನಪೇಕ್ಷಿತವಾದ ಚರ್ಚೆಯಾಯುತು ಈ ಕಾರಣದಿಂದಾಗಿ ನಾನು ಆ ಚರ್ಚೆಯಿಂದ ಹೊರಬಂದು ಈ ಸಂಬಂಧದ ಚರ್ಚೆಯನ್ನು ಮುಕ್ತಾಯಗೊಳಿಸುವ ನಿರ್ಧಾರಮಾಡುವುದು ಅನಿವಾರ್ಯವಾಯಿತು.  ನನ್ನಲ್ಲಿ ಉಳಿದಿರುವ ಸಿರಿಭೂವಲಯದ ಸರಳ ಪರಿಚಯಕೃತಿಗಳ ದೊಡ್ಡ ರಾಶಿಯನ್ನು  ಮುಂದೆ ಹಣಕ್ಕೆ ಮಾರಾಟಮಾಡದೇ, ’ದಾನ’ವಾಗಿ ನೀಡುವ ನಿರ್ಧಾರಮಾಡಿದೆ.  ಆಸಕ್ತಿ ಇರುವವರು ಖುದ್ಧಾಗಿ ಬಂದು ಅದನ್ನು ಪಡೆಯಬಹುದು.  ಯಾಪನೀಯ ಜೈನಸಂಪ್ರದಾಯದ ಮುನಿ ಕುಮುದೇಂದುವಿನ ಮೂಲಕ ಬೆಳಕುಕಂಡಿರುವ ಜಗತ್ತಿನ ಈ ಅತ್ಯಂತ ಅಚ್ಚರಿಯ ಕಾವ್ಯದಲ್ಲಿ ನಿರೂಪಿತವಾಗಿರುವ ಕನ್ನಡದ  ಪ್ರಾಚೀನತೆ ಹಾಗೂ ಪ್ರಾಧಾನ್ಯತೆಯನ್ನು ಪರಿಚಯಿಸುವ ಏಕೈಕ ಉದ್ದೇಶದಿಂದ ಈ ಸರಳಪರಿಚಯಕಾರ್ಯಕ್ಕೆ ನಾನು ಕೈಹಾಕಿದ್ದೇ ವಿನಃ, ವೇದಸಂಪ್ರದಾಯ ಹಾಗೂ ಶ್ರವಣ ಸಂಪ್ರದಾಯದ ತಿಕ್ಕಾಟವನ್ನು ನೋಡುವುದು ಇದರ ಉದ್ದೇಶವಲ್ಲ,  ಎಂಬುದನ್ನು ಈ ಮೂಲಕ ನನ್ನ ಅಭಿಮಾನಗಳ ಗಮನಕ್ಕೆ ತರಲು ಇಚ್ಛಿಸಿದ್ದೇನೆ. ವಂದನೆಗಳು.
                 - ಸಿರಿಭೂವಲಯದ ಸುಧಾರ್ಥಿ