Wednesday 12 February 2020

ಸಿರಿಭೂವಲಯದಲ್ಲಿ ಋಗ್ಮಂತ್ರವಿರುವುದೆಲ್ಲಿ??



ಯಾವುದೇ ಸಾಹಿತ್ಯಭಾಗವಾಗಲೀ ಇಂದು ನಾವು ಸರಳವಾಗಿ ಓದಲು ಸಾಧ್ಯವಿರುವ ಲಿಪಿಕ್ರಮದಲ್ಲೇ ಸಿರಿಭೂವಲಯದಲ್ಲಿ  ದೊರೆಯುವುದಿಲ್ಲವೆಂಬ ವಿಚಾರವನ್ನು ಈಗಾಗಲೇ ಹಲವಾರುಸಲ ಸೂಚಿಸಿದ್ದಾಗಿದೆ.
ಮೂಲಕಾವ್ಯದಲ್ಲಿ ಈ ಮಾಹಿತಿಗಳು ಬಹಳ ರಹಸ್ಯವಾಗಿ ಅಡಗಿರುತ್ತವೆ. ಅವುಗಳನ್ನು ಕ್ರಮಬದ್ಧವಾಗಿ ಹುಡುಕಿ ಪ್ರತ್ಯೇಕಿಸಿ, ನಮ್ಮ ಇಂದಿನ ಲಿಪಿಕ್ರಮಕ್ಕೆ ಅನುಗುಣವಾಗಿ ಜೋಡಿಸಿಕೊಂಡಾಗಮಾತ್ರವೇ ನಮಗೆ ಯಾವುದೇ ಸಾಹಿತ್ಯಭಾಗವು ಗೋಚರವಾಗುತ್ತದೆ!!! ಇಲ್ಲವಾದಲ್ಲಿ ಅವು ಮೂಲರೂಪದಲ್ಲೇ  ಇದ್ದಲ್ಲಿ ಅಡಗಿಕುಳಿತಿರುತ್ತವೆ!! ಯಾರಕಣ್ಣಿಗೂ ಕಾಣಿಸುವುದಿಲ್ಲ!!
ಕೆಲವರು ಸಿರಿಭೂವಲಯದಲ್ಲಿ ಋಗ್ವೇದದ ಮಂತ್ರಗಳು ಎಲ್ಲಿವೆ ತೋರಿಸಿ? ಎಂದು ಪ್ರಶ್ನಿಸುವುದಿದೆ! ಅವು ಎಲ್ಲಿವೆ? ಎಂಬುದನ್ನು ಸುಧಾರ್ಥಿಯಲ್ಲ, ಕುಮುದೇಂದುಮುನಿಯೇ ಸರಳವಾಗಿ ಖಚಿತವಾಗಿ ಸೂಚಿಸಿರುವುದಿದೆ. ಆಸಕ್ತಿ ಇರುವವರು  ಸಿರಿಭೂವಲಯಸಾಗರದಲ್ಲಿ ಮುಳುಗಿ ಅದನ್ನು ಪತ್ತೆಮಾಡಿ, ಗುರುತಿಸಿ, ಗಮನಿಸಬಹುದು!!
ಸಿರಿಭೂವಲಯದ ಅಂತರ್ಸಾಹಿತ್ಯವು ಬೇರೆಬೇರೆ ’ಬಂಧಗಳು’ ,  ’ಅಶ್ವಗತಿ ’ ಹಾಗೂ  ’ಸ್ತಂಬಕಾವ್ಯ’ ರೂಪದಲ್ಲಿ ಉಗಮವಾಗುವುದನ್ನು ಕುರಿತು ಈಗಾಗಲೇ ವಿವರಿಸಲಾಗಿದೆ.  ಸ್ತಂಬಕಾವ್ಯರೂಪದ ಅಂತರ್ಸಾಹಿತ್ಯ ತೆಗೆಯುವಲ್ಲಿ ’ಶ್ರೇಣಿ’ಗಳ ಲೆಕ್ಕಾಚಾರವು ಪ್ರಮುಖವಾಗಿರುತ್ತದೆ.
 ಈ ಶ್ರೇಣಿಗಳು ಒಂದೇ ಅಧ್ಯಾಯದಲ್ಲಿರಬಹುದು, ಅಥವಾ ಹಲವಾರು ಅಧ್ಯಾಯಗಳಲ್ಲಿ ಪ್ರವಹಿಸಿರಬಹುದು. ಸಾಹಿತ್ಯವನ್ನು ಆಧರಿಸಿ ಅದರ ಜಾಡನ್ನು ಗುರುತಿಸಬೇಕಾಗುತ್ತದೆ.  ಪ್ರಕೃತ ಇಲ್ಲಿ ಋಗ್ಮಂತ್ರಗಳು ದೊರೆಯುವ ಸ್ಥಳವನ್ನು ಕುರಿತು ಕುಮುದೇಂದುಮುನಿಯು  ’’ಶ್ರೇಣಿಯನಿಳಿದು, ಏರಿ, ಬಲಭಾಗದಲ್ಲಿ ಅದರ ಅಂಕಿಗಳು ನಾಗಬಂಧದಲ್ಲಿ,  ಇತರಕೆಲವು ಬಂಧಗಳಲ್ಲಿ ಬೇರೆಬೇರೆ ಭಾಷೆಗಳಲ್ಲಿ ಹರಡಿಕೊಂಡು ಹುದುಗಿದೆ” ಎಂದು ಖಚಿತವಾಗಿ ಸೂಚಿಸಿರುವುದಿದೆ.
ಅವುಗಳನ್ನು ಹುಡುಕಿ ಪ್ರತ್ಯೇಕಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಬೇಕಿದ್ದಲ್ಲಿ ಋಗ್ಮಂತ್ರಗಳ ಪರಿಚಯವಿರುವವರು,  ಸೂಕ್ತ ಸಿದ್ಧತೆಯೊಂದಿಗೆ ಈ ಗಣಿಯೊಳಗಿಳಿದು ಹುಡುವಕಾರ್ಯ ನಡೆಸಬೇಕಿದೆ!!  ಬೇಕಿರುವವರು ಹುಡುಕಬಹುದು, ಬೇಡದವರು ಬಿಡಬಹುದು. ಇಲ್ಲಿ ಯಾರಿಗೂ ಯಾವುದೇ ರೀತಿಯ ಒತ್ತಾಯವು ಖಂಡಿತವಾಗಿಯೂ ಇಲ್ಲ!!
 (೨೪ನೇ ಅಧ್ಯಾಯದ ಅಶ್ವಗತಿಯ ಅಂತರ್ಸಾಹಿತ್ಯದ ೧೯ನೇ ಪದ್ಯನೋಡಿರಿ)   
                - ಸಿರಿಭೂವಲಯದಸುಧಾರ್ಥಿ.

No comments:

Post a Comment