Monday 13 September 2021

ವೇದಗಳು ಅಪೌರುಷೇಯ ಎಂಬುದು ಪ್ರಶ್ನಾತೀತವಾದುದು.

 ವೇದಗಳು ಅಪೌರುಷೇಯ ಎಂಬುದು ಪ್ರಶ್ನಾತೀತವಾದುದು.

ವೇದವಿರೋಧಿಯದ ಯಾವ ಸಿದ್ಧಾಂತವೂ ಜಗತ್ತಿನಲ್ಲಿಲ್ಲ!
ಎಲ್ಲ ಸಿದ್ಧಾಂತಗಳೂ ರೂಪಾಂತರಗೊಂಡ (ಪರಿಷ್ಕಾರಗೊಂಡ) ಸಿದ್ಧಾಂತಗಳೇ ಆಗಿವೆ!!!!
ಜೈನಸಂಪ್ರದಾಯದ ’ಅಸಿಆಉಸಾ’ ಮಂತ್ರವು (ಅರ್ಹಂತಾಣಮ್; ಸಿದ್ಧಾಣಮ್; ಆಯಿರಿಯಾಣಮ್; ಉವಜ್ಝಾಯಾಣಮ್; ಸಾಹೂಣಮ್) ಎಂಬ ಪಂಚಪರಮೇಷ್ಠಿಯು ’ಶುಕ್ಲಋಗ್ವೇದಶಾಖೆ’ ಗೆ ಸೇರಿದ್ದೆಂಬ ಮಾಹಿತಿಯು ಸಿರಿಭೂವಲಯದಲ್ಲಿ ಸ್ಪಷ್ಟವಾಗಿದೆ. ಜೈನ ಸಂಪ್ರದಾಯವೂ ವೇದಮೂಲದ್ದೇ ಎಂಬುದನ್ನು ಅರಿಯಲು ಇದಕ್ಕಿಂತಲೂ ಖಚಿತವಾದ ಮಾಹಿತಿ ಇನ್ನೇನು ಬೇಕು!? ೫೦ನೇ ಅಧ್ಯಾಯದ ನಾಲ್ಕನೇ ಪಾದದ ಕೊನೆಯಿಂದ ಮೂರನೇ ಅಕ್ಷರಗಳ ಸ್ತಂಬಕಾವ್ಯದ ತುಣುಕಿನಲ್ಲಿ ಇದನ್ನು ಕಾಣಬಹುದು. ಇಲ್ಲಿ ಕುಮುದೇಂದುಮುನಿಯು ಶುಕ್ಲಋಗ್ವೇದ ಶಾಖೆ ಎಂದು ಸ್ಪಷ್ಟವಾಗಿ ಸೂಚಿಸಿರುವುದು ಗಮನಾರ್ಹ. ಋಗ್ವೇದಸಂಹಿತೆಯು ೨೧ ಶಾಖೆಗಳಲ್ಲಿ ಇತ್ತೆಂದು ಪತಂಜಲಿಯ ಹೇಳಿಕೆ ಇದೆ.. ಇವುಗಳು ಈಗ ಉಪಲಬ್ಧವಿಲ್ಲ. ಈಗಿನ ಶಾಖೆಗಳಲ್ಲಿ ಶಾಕಲ; ಬಾಷ್ಕಲ; ಆಶ್ವಲಾಯನ; ಶಾಂಖಾಯನ; ಮಾಂಡೂಕೇಯ ಶಾಖೆಗಳು ಪ್ರಮುಖವಾದುವು. ಸಾಮವೇದದಲ್ಲಿ ಸಾವಿರಶಾಖೆಗಳೆಂದು ಪತಂಜಲಿಯ ಹೇಳಿಕೆ. ಈಗ ೧೩ ಶಾಖೆಗಳು ಪ್ರಚಲಿತವಿವೆ. ಯಜುರ್ವೇದದಲ್ಲಿ ೮೫ ಶಾಖೆಗಳಿದ್ದು; ಈಗ ೪ ಶಾಖೆಗಳು ಮಾತ್ರ ಪ್ರಚಲಿತವಿವೆ. ಅಥರ್ವಣ ವೇದದಲ್ಲಿ ಒಂಬತ್ತು ಶಾಖೆಗಳಿದ್ದುವೆಂದು ಪತಂಜಲಿಯ ಹೇಳಿಕೆ ಎಂಬುದಾಗಿ ವೇದ ವಿದ್ವಾಂಸರು ಸೂಚಿಸಿರುವುದಿದೆ. ವೇದೋಪನಿಷತ್ತುಗಳ ವಿಚಾರದಲ್ಲಿ ಅಪರೂಪದ ಗೌರವಾದರಗಳನ್ನು ವ್ಯಕ್ತಪಡಿಸಿರುವ ಕುಮುದೇಂದುವಿನ ಹೇಳಿಕೆಯನ್ನು ಯಾರೊಬ್ಬರೂ ಸುಲಭವಾಗಿ ಅಲ್ಲಗಳೆಯಲು ಸಾಧ್ಯವಿಲ್ಲವೆಂಬುದು ನನ್ನ ಅನಿಸಿಕೆ. ಸನಾತನ ಧರ್ಮವೆಂದರೆ, ವೇದಮೂಲದ ಧರ್ಮ. ಈ ಧರ್ಮವನ್ನು ಪಾಲಿಸಲು ಇಚ್ಚಿಸದವರು ತಮ್ಮದೇ ಆದ ಹೊಸದಾರಿ ಹಿಡಿಯುವುದು ಜಗತ್ತಿನ ಆದಿಯಿಂದ ಇಂದಿನವರೆವಿಗೆ, ಅಷ್ಟೇಅಲ್ಲ! ಮುಂದೆಯೂ ಉಳಿದು ಬೆಳೆಯುವ ಪರಿಸ್ಥಿತಿ!! ಇದನ್ನು ಯರೊಬ್ಬರೂ ಬದಲಿಸಲು ಸಾಧ್ಯವಿಲ್ಲ! ಸನಾತನ ಧರ್ಮಾವಲಂಭಿಗಳೆಂದರೆ, ಸಾಕ್ಷಾತ್ ಸರ್ವಸಂಘ ಪರಿತ್ಯಾಗಿಗಳು; ಪರಬ್ರಹ್ಮದ ಅಪರಾವತಾರವೆಂದು ಯಾರೂ ಭಾವಿಸಬೇಕಿಲ್ಲ!! ಅರೀತಿ ಆಗಿದ್ದರೆ; ವಿಶ್ವಾಮಿತ್ರ; ಋಷಭದೇವ ಮುಂತಾದವರು ತಮ್ಮ ಸಮಕಾಲೀನ ಸಾಮಾಜಿಕ ಪರಿಸರದ ವಿರುದ್ಧ ಸಿಡಿದೇಳುವ ಅಗತ್ಯವೇ ಇರಲಿಲ್ಲ!! ತನ್ನಕಾಲದಲ್ಲಿ ತಲೆದೋರಿದ್ದ ಸಾಮಾಜಿಕ ಜೀವನದ ತೊಡಕುಗಳ ನಿವಾರಣೆಗಾಗಿ ಜೈನಸಂಪ್ರದಾಯದ ಆದಿತೀರ್ಥಂಕರ ಋಷಭದೇವನು ಸನಾತನಧರ್ಮದಿಂದ ಅತ್ಯಗತ್ಯವಾದ ವಿಚಾರಗಳನ್ನು ಮಾತ್ರ ಅಳವಡಿಸಿಕೊಂಡು, ಸಾಮಾಜಿಕಹಿಂಸೆ, ಹಾಗೂ ಶೋಷಣೆಯ ವಿರುದ್ಧ ಬಂಡಾಯವೆದ್ದು ’ಅಹಿಂಸಾಪರಮೋಧರ್ಮ’ ’ಸಹನೆಯೇ ಅತ್ಯುಚ್ಚಧರ್ಮ; ಎಂಬ ನೆಲೆಯಲ್ಲಿ ಜೀವನದ ಜಂಜಡವನ್ನು ಜಯಿಸುವ ಹಾದಿಯನ್ನು ಬೋಧಿಸಿದವನು. ಜೀವನದ ಜೊಂಜಡವನ್ನು ಯಶಸ್ವಿಯಾಗಿ ಜಯಿಸಿದ ಕಾರಣದಿಂದಾಗಿಯೇ ಈತನಿಗೆ ’ಜಿನ’ ಎಂಬ ಪದವಿ ಲಭಿಸಿತು. ಜಿನನ ಪಥದಲ್ಲಿ ಸಾಗುವವರು ಜೈನರೆಂದಾದರು. ಮುಂದೆ ಈ ಸಂಪ್ರದಾಯದಲ್ಲೂ ಹಲವಾರು ಕವಲುಗಳು ಉಗಮವಾದುವು! ಅವುಗಳ ಪೈಕಿ ಎಂಟನೇ ತೀರ್ಥಂಕರ ’ಚಂದ್ರಪ್ರಭ’ನು ಪ್ರತಿಪಾದಿಸಿದ ಸರ್ವಧರ್ಮ ಸಹಿಷ್ಣುತೆಯನ್ನು ಅಂಗೀಕರಿಸುವ ’ಯಾಪನೀಯ’ ಸಂಪ್ರದಾಯವೂ ಒಂದು. ಯಾಪನೀಯರನ್ನು ಜೈನರು ’ಜೈನ’ರೆಂದು ಮಾನ್ಯಮಾಡಿರಲಿಲ್ಲ!! ೧೨೦೦ ವರ್ಷಗಳಹಿಂದೆ ಅಷ್ಟಮತೀರ್ಥಂಕರ ಚಂದ್ರಪ್ರಭದೇವನನ್ನು ಆರಾದ್ಯದೈವವಾಗಿ ಪರಿಗಣಿಸಿದ್ದ ಕುಮುದೇಂದುಮುನಿಯು ತನ್ನ ಸಿರಿಭೂವಲಯದಲ್ಲಿ ಪ್ರಾಚೀನ ವಿಚಾರಗಳಿಗೆ ಬಂಧಿಸಿದ ಹಲವಾರು . ಮಾಹಿತಿಗಳನ್ನು ನಿರೂಪಿಸಿರುವುದಿದೆ. ಇದಾವುದರ ಪರಿವೆಯೂ ಇಲ್ಲದೇ, ಕೆಲವು ಜೈನ ವಿದ್ವಾಂಸರು ಸುಮಾರು ೨೦೦ ವರ್ಷಗಳಿಂದೀಚೆಗೆ, ’ಜೈನಧರ್ಮವು ವೇದಧರ್ಮಕ್ಕಿಂತಲೂ ಪ್ರಾಚೀನವಾದುದು’ ಎಂಬ ತಪ್ಪು ಗ್ರಹಿಕೆಯನ್ನು ಆ ಸಮುದಾಯದಲ್ಲಿ ಬಿತ್ತಿ ಬೆಳೆದು, ಸಫಲರಾಗಿದ್ದಾರೆ! ೧೯೫೩ರ ಅನಂತರ ಸಿರಿಭೂವಲಯದ ಅಂತರಂಗವನ್ನು ಕುರಿತು ಸಾಕಷ್ಟು ಮಾಹಿತಿಗಳು ಹೊರಬರಲಾರಂಬಿಸಿದಮೇಲೆ; ಈ ಸಮುದಾಯದ ಕೆಲವರ ಆಂತರ್ಯದಲ್ಲಿ ಕಸಿವಿಸಿಯು ಪ್ರಾರಂಭವಾದಂತೆ ಕಾಣುತ್ತದೆ! ಜೈನಸಂಪ್ರದಾಯವು ಈಚಿನವರು ನಂಬಿರುವಂತೆ ವೈದಿಕ ಸಂಪ್ರದಾಯಕ್ಕಿಂತ ಪ್ರಾಚೀನ ವಾಗಿದ್ದಲ್ಲಿ, ಅದರಿಂದ ಯಾರಿಗೂ ಯಾವುದೇ ಲಾಭವೂ ಇಲ್ಲ; ನಷ್ಟವೂ ಇಲ್ಲ!! ಇದೊಂದು ಕೇವಲ ಭಾವನಾತ್ಮಕ ವಿಚಾರ. ಆದರೆ, ಕುಮುದೇಂದುಮುನಿಯ ಸಿರಿಭೂವಲಯವು ಈ ಜಗತ್ತಿನ ಮೊಟ್ಟಮೊದಲನೇ ’ವಿಶ್ವಕೋಶ’! ಇದರಲ್ಲಿ ಅಡಕವಾಗಿರುವ ಸಾವಿರಾರು ಮಾಹಿತಿಗಳು ಆಧುನಿಕ ಜಗತ್ತಿನಲ್ಲಿ, ಕನ್ನಡದ ಹಾಗೂ ಭಾರತದಹಿರಿಮೆಯನ್ನು ಮುಗಿಲೆತ್ತರಕ್ಕೆ ಏರಿಸುವ ಸಾಧನಗಳಾಗಿವೆ!! ಅವುಗಳು ಬೆಳಕುಕಾಣುಅವಂತಾಗಲೆಂಬುದಷ್ಟೇ ಈ ಸಿರಿಭುವಲಯದಸುಧಾರ್ಥಿಯ ಪ್ರಮುಖ ಗುರಿ. ಸನಾತನ ಧರ್ಮಾವಲಂಬಿಗಳು ಅಥವಾ ಜೈನಸಂಪ್ರದಾಯದವರು ಈಗಾಗಲೇ ಹೊಂದಿರುವ ತಮ್ಮ ಧರ್ಮವೇ ಶ್ರೇಷ್ಟವೆಂಬ ಹಲವಾರು ’ಧರ್ಮದಅಂಗಡಿಗಳ’ ಜೊತೆ ಸ್ಪರ್ಧೆಗಿಳಿಯುವ ’ಹೊಸಧರ್ಮದಂಗಡಿ’ಯನ್ನು ತೆರೆದು ಇವರಿಗೆ ಸ್ಪರ್ಧೆನೀಡುವ ಉದ್ದೇಶವೇನೂ ಈತನಿಗಿಲ್ಲ! ಅದಕ್ಕೆ ಬೇಕಾದ ಸಂಪತ್ತಾಗಲೀ; ಅಸಕ್ತಿಯಾಗಲೀ ಈತನಿಗೆ ಖಂಡಿತವಾಗಿಯೂ ಇಲ್ಲ!! ಈ ಕಾರಣದಿಂದಾಗಿ ಸಿರಿಭೂವಲಯವನ್ನು ನಿರ್ಲಕ್ಷಿಸಿರುವ ಯಾವ ಸಮುದಾಯದವರೂ ಈತನ ಸಿರಿಭೂವಲಯದ ಆಸಕ್ತಿಯನ್ನು ಸಂಶಯಿಸಲಾಗದು!! ಈಗಾಗಲೇ ಸಿರಿಭೂವಲಯದ ಪರಿಚಯರೂಪದಲ್ಲಿ ಪ್ರಕಟವಾಗಿರುವ ಹಲವಾರು ’ಆತಂಕಕಾರಿ’ ಮಾಹಿತಿಗಳನ್ನು ವಿರೋಧಿಸಲು ಹೆಣಗಾಡುತ್ತಿರುವ ’ಕೆಲವರು’ ಈ ವಿಚಾರವಾಗಿ (ಸುಧಾರ್ಥಿಯು ಜೈನಸಂಪ್ರದಾಯಕ್ಕೆ ವಿಷ ಉಣಿಸಿಸುತ್ತಿದ್ದಾನೆ’ ಎಂಬ ಮಾಹಿತಿಯಮೂಲಕ) ಅಪಪ್ರಚಾರ ಮಾಡುವುದರಿಂದ ಯಾವುದೇ ಉಪಯೋಗವಿಲ್ಲ!! ವೈದಿಕ ಹಾಗೂ ಜೈನ ಸಂಪ್ರದಾಯಕ್ಕೆ ಸೇರಿದ ವಿವೇಕಿಗಳಾದ ಯುವಜನತೆಗೆ ಇಲ್ಲಿ ಪ್ರತಿಪಾದಿತವಾಗುತ್ತಿರುವ ಮಾಹಿತಿಗಳ ಉದ್ದೇಶವೇನೆಂಬುದು ಈ ಗಾಗಲೇ ಸಾಕಷ್ಟು ಮನದಟ್ಟಾಗಿದೆ. ಇಲ್ಲಿ ಯಾರನ್ನೂ ಅವಹೇಳನ ಮಾಡುವ ಅಥವಾ ಯಾವರೀತಿಯಲ್ಲೂ ವಂಚಿಸುವ ಉದ್ದೇಶವಿಲ್ಲವೆಂಬುದು ಅರಿವಾಗಿದೆ. ಸರ್ವಜ್ಞಸ್ವರೂಪಿಯಾಗಿದ್ದ ಕುಮುದೇಂದು ಮುನಿಯು ತನ್ನ ಪರಿಚಯನೀಡುವಲ್ಲಿ "ಅಣುವಿಜ್ಞಾನ; ಆಕಾಶಗಮನ, ಆಕಾಶವಾಣಿ; ಗಣಕಯಂತ್ರಕ್ರಮ; ದೂರದರ್ಶನ; ದೂರವಾಣಿ ಮುಂತಾದ ತಂತ್ರಜ್ಞಾನವೆಲ್ಲವೂ ತನಗೆ ಅಂಗೈಯಲ್ಲಿನ ನಲ್ಲಿಯಕಾಯಿಯಂತೆ ಚಿರಪರಿಚಿತವಾಗಿದೆ ಎಂಬ ವಿಚಾರವು ಸೈಗೊಟ್ಟ ಸಿವಮಾರನಿಗೂ; ಅಮೋಘವರ್ಷನಿಗೂ ತಿಳಿದಿದೆ" ಎಂಬ ಸೂಚನೆ ನೀಡಿರುವುದಿದೆ! ಆದರೆ ಇವೆಲ್ಲವೂ "ಪಾರಮಾರ್ಥಿಕವಾಗಿ ನಿಷ್ಪ್ರಯೋಜಕೆವೆಂದು ತಿಳಿದು ಕಾಲಿನಿಂದ ಒದ್ದು ಎದ್ದುಬಂದ ಮುನಿವಂಶದವರ ಕಾವ್ಯ ಭೂವಲಯ" ಎಂದು ಕಾವ್ಯದಲ್ಲಿ ಸ್ಪಷ್ಟವಾಗಿ ಸೂಚಿಸಿರುವುದಿದೆ!! ಇಂಥ ’ದಿಗಿಲು ಹುಟ್ಟಿಸುವ’ ಮಾಹಿತಿಗಳನ್ನು ಜಗತ್ತಿನ ಅರಿವಿಗೆ ತರುವುದೇ ಸುಧಾರ್ಥಿಯ ಮೂಲ ಉದ್ದೇಶ. ಜೈನಸಂಪ್ರದಾಯಕ್ಕೆ ನಿಧಾನಗತಿಯಲ್ಲಿ ವಿಷ ಉಣಿಸುವುದರಿಂದ ಈತನಿಗೆ ಯಾವುದೇ ಪ್ರಯೋಜನವೂ ಇಲ್ಲವೆಂಬುದು ಆ ಸಮುದಾಯದ ಯುವಜನತೆಗೆ ಅರಿವಾದರೆ ಸಾಕು!! ಆಗ ನಿಜಕ್ಕೂ ಈ ಸಿರಿಭೂವಲಯದ ಸರಳಪರಿಚಯಕ್ಕಾಗಿ ಒಬ್ಬ ’ಅನಾಮಧೇಯ’ ’ಅವಿದ್ಯಾವಂತನು’ ೩೫ ವರ್ಷಗಳಕಾಲ ಬುದ್ಧಿಯಿಲ್ಲದೇ ಶ್ರಮಿಸಿದ್ದು ಸಾರ್ಥಕವಾದಂತೆ ಎಂದು ಭಾವಿಸುತ್ತೇನೆ. ಇತ್ತೀಚೆಗೆ ಅರ್ಹಂತಾಧೀನರಾದ ದಿಗಂಬರ ಜೈನ ಮುನಿ ತರುಣಸಾಗರ ಮಹರಾಜರಿಗೆ ಸಿರಿಭೂವಲದ ವಿಚರವಾಗಿ ಅಪಾರವಾದ ಆಸಕ್ತಿಯಿತ್ತು. ಇದನ್ನು ಕುರಿತು ಸಂಶೋಧನೆ ಮಾಡಲು ಅವರು ಜೈನಸಮುದಾಯದ ಹಲವಾರು ’ವಿದ್ವಾಂಸರಿಗೆ’ ಆದೇಶನೀಡಿದ್ದೂ ಪ್ರಚಲಿತವಿದೆ. ಸಿರಿಭೂವಲಯವು ತಮ್ಮ ಕೈಗೆಟುಕದ ಹುಳಿದ್ರಾಕ್ಷಿ’ ಎಂಬ ಸಂಕಟ ದಿಂದ ಸುಧಾರ್ಥಿಯ ವಿರುದ್ಧ ಹಗೆಸಾಧಿಸುವವರು ಏನನ್ನಾದರೂ ಹೇಳಿಕೊಳ್ಳಲಿ; ಅದರ ಚಿಂತೆ ಈತನಿಗಿಲ್ಲ!!ಇನ್ನು ಕೆಲವರ ಅನಿಸಿಕೆಯಂತೆ ಈ ಕಾವ್ಯದಲ್ಲಿರುವ ವಿಚಾರಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವುದು ಅಗತ್ಯ; ಇಲ್ಲವಾದಲ್ಲಿ ಅದರಿಂದ ಇಂದಿನ ಸಮಾಜಕ್ಕೆ ಪ್ರಯೋಜನವೇನು? ಎಂಬುದಾಗಿದೆ!. ಇದೊಂದು ವಿಚಿತ್ರವಾದ ಅನಿಸಿಕೆ. ಪ್ರಾಚೀನಕಾವ್ಯದ ಪರಿಚಯಕಾರನು ಸಮರ್ಥ ವಿಜ್ಞಾನಿಯೂ ಆಗಿರಬೇಕೆಂದು ನಿರೀಕ್ಷಿಸಲು ಸಾಧ್ಯವೇ!!?? ಈ ಕಾವ್ಯದಲ್ಲಿ ನಾನು ಕಂಡಿರುವ ಮಾಹಿತಿಗಳನ್ನು ಯಥಾವತ್ತಾಗಿ, ಪ್ರಾಮಣಿಕತೆಯಿಂದ ನಾನು ಪರಿಚಯಿಸಿದ್ದೇನೆ. ಇದರಲ್ಲಿ ನನ್ನ ’ಕೈವಾಡ’ ಏನೂ ಇಲ್ಲ!! ಯಾರಿಗಾದರೂ ಈ ಮಾಹಿತಿಗಳ ವಿಚಾರದಲ್ಲಿ ಸಂದೇಹವಿದ್ದರೆ; ಅವರು ಅದನ್ನು ಸಕಾರಣವಾಗಿ ವಿರೋಧಿಸಲಿ; ಅದಕ್ಕೆ ನನ್ನದೇನೂ ಆಕ್ಷೇಪವಿಲ್ಲ. ಆದರೆ ಅನವಶ್ಯಕವಾಗಿ ಅರ್ಥಹೀನವಾದ ವಿವಾದಗಳನ್ನು ಹುಟ್ಟುಹಾಕುವುದರಿಂದ ಯಾವುದೇ ಪ್ರಯೋಜನ ವಿಲ್ಲ!! ಅದಕ್ಕೆ ನಾನು ಪ್ರತಿಕ್ರಿಯೆ ನೀಡುವುದೂ ಇಲ್ಲ. ಇತಿ ವಿವೇಕಿಗಳ ವಿಧೇಯ -ಸಿರಿಭೂವಲಯದಸುಧಾರ್ಥಿ.