Friday 31 January 2020

ಸಿರಿಭೂವಲಯದ ಮಹತ್ವ ಎಂಥದು!!??

ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲ ಕಾರ್ಯಾಲಯಗಳಲ್ಲೂ  ’ಅಪ್ಪಣೆ ಇಲ್ಲದೇ ಪ್ರವೇಶವಿಲ್ಲ’   ’ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ’   ’ಅತಿಕ್ರಮಪ್ರವೇಶ ಶಿಕ್ಷಾರ್ಹ ಅಪರಾಧ’ ಮುಂತಾದ ಫಲಕಗಳಿರುತ್ತವೆ. ಅಲ್ಲಿ ಕೆಲಸಮಾಡುವವರ ಹಿತದೃಷ್ಟಿಯಿಂದ ಇದು ಅಗತ್ಯವೂ ಇರಬಹುದು.  ಇಲ್ಲಿನ ವಿಚಿತ್ರವೆಂದರೆ, ಸಿರಿಭೂವಲಯವೂ ಕೂಡ  ಅನರ್ಹರನ್ನು ಈ ರೀತಿಯಲ್ಲಿ ನಿಷೇಧಿಸಿರುವುದಿದೆ!! ಇಂಥ ನಿಷೇಧಕ್ಕೆ ಕಾರಣವೇನೆಂಬುದನ್ನೂ ಕೂಡ ಅಲ್ಲಿ ಸೂಚಿಸಲಾಗಿದೆ!!!
ವೈಶೇಷಿಕ, ನ್ಯಾಯ, ಯೋಗ, ಸಾಂಖ್ಯ, ವೇದಾಂತ, ಮೀಮಾಂಸೆಗಳೆಂಬ ತತ್ವಶಾಸ್ತ್ರದ ಸಮೂಹವನ್ನು ’ದರ್ಶನ’ ಎಂದು ಸೂಚಿಸಲಾಗುತ್ತದೆ. ಇಂಥ ದರ್ಶನದ ಶಕ್ತಿಯೊಂದಿಗೆ  ತಿಳುವಳಿಕೆಯ ಶಕ್ತಿ, ಸನ್ನಡತೆಯುಸೇರಿದ ರತ್ನಗಳ ಶಬ್ದ ಇವುಗಳನ್ನು ಬರೆಯಬಾರದು. ಬರೆದರೂ ಅವುಗಳನ್ನು ಓದಬಾರದು! ಈ ರೀತಿಯ ಸಂಪತ್ತಿನ ಸಿದ್ಧಿಯನ್ನು ಸಿರಿಭೂವಲಯವು ಹೊಂದಿದೆ. ಆದ ಕಾರಣ ಇಂಥ ಸಂಪತ್ತನ್ನು ಸಂಗ್ರಹಿಸಿ ಸಂರಕ್ಷಿಸಿರುವ ಕೋಶಾಗಾರಕ್ಕೆ  ಸಾಮನ್ಯ ಜನರಿಗೆ ಪ್ರವೇಶವಿರಲು ಹೇಗೆ ಸಾಧ್ಯಾ!!??  ನೋಡಿ: ’ದರುಷನಶಕ್ತಿ ಜ್ಞಾನದಶಕ್ತಿ ಚಾರಿತ್ರ|ವೆರಸಿದರತ್ನತ್ವರವ! ಬರೆಯಬಾರದ ಬರೆದರುಓದಬಾರದ|ಸಿರಿಯ ಸಿದ್ಧತ್ವ ಭೂವಲಯ||”
 ಹೆಚ್ಚು ಬೆಲೆಬಾಳುವ ಸಂಪತ್ತಿನ ಇನ್ನೊಂದು ರೂಪ ’ಶಕ್ತಿ’ ಇಂಥ ಶಾಕ್ತಿಯು ಹೇರಳವಾಗಿ ಸಂಗ್ರಹವಾಗಿರುವಲ್ಲಿ ಅದು ತನ್ನದೇಆದ ಶಬ್ದವನ್ನು ಹೊರಹೊಮ್ಮಿಸುವುದು ಸಹಜ ಸಂಗತಿ.
 ನಮ್ಮ ಕಣ್ಣಿಗೆ ಕಾಣಿಸುವ ಸೂರ್ಯನಲ್ಲಿ ಅಪಾರವಾದ ಶಕ್ತಿಯ ಸಂಗ್ರಹವಿದೆ. ಅಲ್ಲಿಂದ ಪಸರಿಸುವ ಬೆಳಕಿನ ಕಿರಣಗಳೊಂದಿಗೆ  ರವಿಯ’ರವ’ವೂ  ಸೇರಿರುತ್ತದೆ! ಅದು ’ಓಂ’ ಕಾರದ ರೂಪದಲ್ಲಿ ಹೊರಹೊಮ್ಮುವಂಥದು. ಅದನ್ನು ಇಂದಿನ ವಿಜ್ಞಾನಿಗಳೂ ಸಮರ್ಥಿಸುತ್ತಾರೆ.
ಸಿರಿಭೂವಲಯದಲ್ಲಿ  ಜಗತ್ತಿನ ಜ್ಞಾನವನ್ನೆಲ್ಲ ಒಂದೆಡೆಯಲ್ಲಿ ಸಂಗ್ರಹಿಸಿ ಸಂರಕ್ಷಿಸಲಾಗಿದೆ! ಇಲ್ಲಿಯೂ ಅಮೂಲ್ಯವಾದ ರತ್ನಗಳ’ರವ’ ವಿರುವುದು ಸಹಜವಲ್ಲವೇ!? ಇಂಥ ಮಹತ್ತರವಾದ ಕಾವ್ಯ ಸಿರಿಭೂವಲಯ ಎಂಬುದು ಕವಿಯಭಾವ. 
ಆತ್ಮೀಯ ಓದುಗರೇ, ಒಂದೊಂದು ಸಾಂಗತ್ಯ ಪದ್ಯಕ್ಕೂ ಈ ರೀತಿಯಲ್ಲಿ ಸರಳ ವಿವರಣೆಗಳನ್ನು ಬರೆಯುತ್ತ ಹೋದಲ್ಲಿ, ’ನೂರುಸಾವಿರಲಕ್ಷಕೋಟಿ’ ಶ್ಲೋಕಗಳ ವ್ಯಾಪ್ತಿಯ ಸಿರಿಭೂವಲಯದ ೬ ಲಕ್ಷ ಮೂಲಕನ್ನಡ ಪದ್ಯಗಳಪೈಕಿ ಪ್ರಕಟವಾಗಿರುವ ಸುಮಾರು ೨೧೦೦೦ ಪದ್ಯಗಳಿಗೆ ಸರಳ ವಿವರಣೆನೀಡಲು  ಎಷ್ಟು ಬರೆಯಬೇಕಾದೀತೆಂಬುದನ್ನು ದಯವಿಟ್ಟು ಗಮನಿಸಿರಿ.
ಈ ಕಾರಣದಿಂದಾಗಿಯೇ ಸಿರಿಭೂವಲಯದಸುಧಾರ್ಥಿಯು ತಾನು ಪ್ರತ್ಯಕ್ಷವಾಗಿ ಕಂಡ ಸುಮಾರು ೨೧ ಸಾವಿರ ಸಾಂಗತ್ಯ ಪದ್ಯಗಳ ಪೈಕಿ ಕೇವಲ ಹತ್ತಾರು ಸಾಂಗತ್ಯ ಪದ್ಯಗಳ ಸರಳಪರಿಚಯಮಾಡಿಕೊಡುವುದರೊಳಗೇ ತನ್ನ ಜೀವಿತದ ಮುಕ್ಕಾಲುಭಾಗವನ್ನು ಸವೆಸಿದ್ದಾಗಿದೆ!
ಓದುಗರು ದಯಮಾಡಿ ಹೆಚ್ಚಿನ ’ಸಾಂಗತ್ಯಪದ್ಯಗಳಿಗೆ ಸರಳ ಪರಿಚಯ ನೀಡಿ’ ಎಂದು ಅಪೇಕ್ಷಿಸಬಾರದಾಗಿ ವಿನಂತಿ.  ಸಾಂಗತ್ಯ ಪದ್ಯಗಳನ್ನು ಒಂದೆರಡುಸಲ ಓದಿನೋಡಿ. ನಿಮ್ಮಲ್ಲಿ ನನಗಿಂತಲೂ ಹೆಚ್ಚಿನ ಮೇಧಾಶಕ್ತಿ ಇರುವುದು ಸಹಜ. ನೀವೂ ಈದಿಸೆಯಲ್ಲಿ ಪ್ರಯತ್ನಮಾಡಿದಲ್ಲಿ ಹೆಚ್ಚಿನ ಲೋಕೋಪಕಾರವಾಗುವುದು ನಿಶ್ಚಿತ ಎಂದು ಸುಧಾರ್ಥಿಯು ನಂಬಿದ್ದಾನೆ.
                                 -ಸಿರಿಭೂವಲಯದಸುಧಾರ್ಥಿ.  

Tuesday 28 January 2020

ಸಿರಿಭೂವಲಯದಲ್ಲಿ ದ್ವೈತಾದ್ವೈತ ಹಾಗೂ ಅನೇಕಾಂತವಾದಗಳ ಸ್ಥಾನವೇನು?

ಕುಮುದೇಂದುಮುನಿಯು ಮೂರು  ಸಿದ್ಧಾಂತಗಳನ್ನು ರತ್ನತ್ರಯಗಳೆಂದು ಸೂಚಿಸಿರುವುದುಂಟು. ಅವುಗಳು ಯಾವುವು ಎಂಬುದನ್ನು  ವಿವರಿಸುವಲ್ಲಿ ಮೊದಲನೆಯದು ಅದ್ವೈತ, ಎರಡನೆಯದು  ದ್ವೈತ,  ಮೂರನೆಯದು  ದ್ವೈತಾದ್ವೈತವನ್ನು ಹಿತದಿಂದ ಸಾಧಿಸಿಕೊಂಡ ಅನೇಕಾಂತವೆನ್ನುವ ಜೈನಸಿದ್ಧಾಂಕ ಎಂಬುದಾಗಿ  ಹೇಳಿರುವುದಿದೆ.
  ಅದೈತವು ಆದಿಸಿದ್ಧಾಂತವೆನ್ನುವುದನ್ನು ದ್ವೈತಿಗಳು ವಿರೋಧಿಸುತ್ತಾರೆ! ಇವೆಡು ಸಿದ್ಧಾಂತಗಳನ್ನು ಸಮನ್ವಯಗೊಳಿಸಿಕೊಂಡು ಅನೇಕಾಂತ ಸಿದ್ಧಾಂತವು ರೂಪುಗೊಂಡಿದೆಯೆಂಬ ಮಾಹಿತಿಯನ್ನು ಇಂದಿನ ಜೈನಸಂಪ್ರದಾಯದವರು ನಿಶ್ಚಿತವಾಗಿ ಸಮ್ಮತಿಸುವುದಿಲ್ಲ!!
ಆದರೆ, ಪ್ರಾಜ್ಞರು ಈ ಖಚಿತ ಮಾಹಿತಿಯನ್ನು ಮಾನ್ಯಮಾಡಬೇಕಾದುದು ಅನಿವಾರ್ಯ.  ಮಧ್ವಾಚಾರ್ಯರಿಂದ  ಸಮರ್ಥಿಸಲ್ಪಟ್ಟ  ದ್ವೈತಸಿದ್ಧಾಂತವೇ ಸಮರ್ಪಕವಾದುದೆಂದು ಭಾವಿಸುವವರು,  ಶಂಕರರು  ಅದ್ವೈತಸಿದ್ಧಾಂತವನ್ನು ಪುನರುತ್ಥಾನಮಾಡುವ ಮೊದಲೇ ಲಕುಲೀಶನೆಂಬುವವನು ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದನೆಂಬುದನ್ನು ಗಮನಿಸಬೇಕು.
ಆದರೆ, ಲಕುಲೀಶನು ಪ್ರತಿಪಾದಿಸಿದ ದ್ವೈತಸಿಂದ್ಧಾಂತವು ಶಿವಪಾರಮ್ಯವಾದುದು! ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತವು ವಿಷ್ಣುಪಾರಮ್ಯವಾದುದು!
 ಆದರೆ, ದ್ವೈತಾದ್ವೈತಗಳೆರಡನ್ನೂ ಮಾನ್ಯಮಾಡಿರುವ ಕುಮುದೇಂದುಮುನಿಯು ತನ್ನ ಸ್ವಸಂಪ್ರದಾಯವಾದ ಅನೇಕಾಂತವನ್ನು ಇವುಗಳೊಂದಿಗೆ ತುಲನೆಮಾಡಿ, ಮೂರನೆಯ ಸ್ಥಾನದಲ್ಲಿ ನಿರ್ದೇಶಿಸಿರುವುದು ಕವಿಯ ನಿಷ್ಪಕ್ಷಪಾತವಾದ  ಧಾರ್ಮಿಕ ಮನೋಭಾವಕ್ಕೆ  ನಿದರ್ಶನವಾಗಿದೆ.  ಈ ಮಾಹಿತಿಗೆ ಸಮ್ಮತಿಸುವುದು ಅಥವಾ ವಿರೋಧಿಸುವುದ್ದು ಅವರವರ ಇಚ್ಛೆಗೆ ಬಿಟ್ಟಸಂಗತಿಯಾಗಿದೆ!!
ಈ ತತ್ವಸಿದ್ಧಾಂತಗಳ ಮಂಡನೆ . ಅವುಗಳ ಖಂಡನೆ ಪ್ರಾಚೀನಕಾಲದಿಂದಲೂ ವ್ಯಕ್ತಿಜೀವನದಲ್ಲಿ ಪ್ರವಹಿಸುತ್ತಲೇ ಇರುವುದಕ್ಕೆ ಖಚಿತವಾದ  ನಿದರ್ಶನಗಳಿವೆ.   ಮಧ್ವಾಚಾರ್ಯರು ದ್ವೈತಸಿದ್ಧಾಂತವನ್ನು ಪುನರುತ್ಥಾನಮಾಡುವಮೊದಲು ಶಂಕರರು ಅದ್ವೈತಸಿದ್ಧಾಂತವನ್ನು ಪುನರುತ್ಥಾನಮಾಡಿದವರಾಗಿದ್ದಾರೆ.  (ಗಮನಿಸಿ: ಇವರಿಬ್ಬರೂ  ದ್ವೈತಾದ್ವೈತವನ್ನು ಪುನರುತ್ಥಾನಮಾಡಿದವರೇ ವಿನಃ; ಅದನ್ನು ಸ್ಥಾಪಿಸಿದವರಲ್ಲ!!) ಶಂಕರರಿಗಿಂತಲೂ ಪ್ರಾಚೀನಕಾಲಾವಧಿಯ  ಮಹಾವೀರ ತೀರ್ಥಂಕರರು  ಅದ್ವೈತಸಿದ್ಧಾಂತದ ಪ್ರಸಿದ್ಧ ಘೋಷಣೆಯಾದ ’ತತ್ವಮಸಿ’ ಯನ್ನು ಪ್ರತಿಪಾದಿಸಿದ್ದರೆಂಬುದನ್ನು ಸಿರಿಭೂವಲಯವು ಖಚಿತವಾಗಿ ನಿರೂಪಿಸಿರುವುದಿದೆ! ನೋಡಿ:  ” ಮಹವೀರವಾಣಿಯೆಂಬುದೇ ತತ್ವಮಸಿಯಾಗಿ|ಮಹಿಮೆಯಮಂಗಲವದುಪ್ರಾ|ಭೃಹತ್ವ ಅಣುವಿನೊಳ್ ತೋರುವ ಮಹಿಮೆಯ| ವಹಿಸಿದದಿವ್ಯಪ್ರಾಭೃತದ”  ಇಷ್ಟು ಸರಳವಾದ ಖಚಿತವಾದ, ಸತ್ಯವಾದ ಮಾಹಿತಿಯನ್ನು ಗಮನಿಸದೇ , ವಿದ್ವಾಂಸರು ತಮ್ಮ ತತ್ವ ಸಿದ್ಧಾಂತವೇ ಪ್ರಾಚೀನವಾದುದು, ಸತ್ಯವಾದುದು, ಸತ್ವಶಾಲಿಯಾದುದು ಎಂದು ಹೋರಾಟಮಾಡುವುದು  ಎಷ್ಟು ಸಮಂಜಸ ಎಂಬುದನ್ನು ಹಿಂದಿನವರಂತೂ ಗಮನಿಸಲಿಲ್ಲ! ಇಂದಿನವರಾದರೂ ಇದನ್ನು ಗಮನಿಸುವ ವಿವೇಕ ಪ್ರದರ್ಶಿಸುವರೇ ಎಂಬುದನ್ನು ಕಾದು ನೋಡಬೇಕು.
                                                                        -ಸಿರಿಭೂವಲಯದಸುಧಾರ್ಥಿ. 

ಜಾತಿಪದ್ಧತಿಯನ್ನು ರೂಪಿಸಿದವರು ಬ್ರಾಹ್ಮಣರಲ್ಲ!!

ಜಾತಿಪದ್ಧತಿಯ ಮೂಲವನ್ನು ಸರಿಯಾಗಿ ಅರಿಯಬಯಸುವವರು ಅದರ ಮಾಹಿತಿಯನ್ನು ಸಿರಿಭೂವಲಯ ಕಾವ್ಯದಲ್ಲಿ ಹುಡುಕಬೇಕು!! ಈ ಕವ್ಯದ ಪ್ರಥಮಖಂಡದ ೪೩ನೇ ಅಧ್ಯಾಯದ ಮೊದಲನೇ ಪೂರ್ಣಪದ್ಯದ  ಮೊದಲನೇ ಪಾದದ  ಕೊನೆಯಿಂದ ನಾಲ್ಕನೇ ಅಕ್ಷರಗಳನ್ನು ಮೇಲಿನಿಂದ ಕೆಳಕ್ಕೆ ಸಾಗುತ್ತಾ  ಮೂರನೇ ಅಕ್ಷರಗಳನ್ನು ಕೆಳಗಿನಿಂದ ಮೇಲಕ್ಕೆ ಸಾಗಿ, ಎರಡನೇ ಅಕ್ಷರಗಳನ್ನು ಮೇಲಿನಿಂದ ಕೆಳಕ್ಕೆ ಸಾಗಿ, ಕೊನೆಯ ಅಕ್ಷರಗಳನ್ನು ಕೆಳಗಿನಿಂದ ಮೇಲಕ್ಕೆ ಸಾಗುತ್ತಾ ಜೋಡಿನಾಗರ ಬಂಧದಲ್ಲಿ ಸಾಗುತ್ತ ಪ್ರತ್ಯೇಕವಾಗಿ ಜೋಡಿಸಿಕೊಂಡಾಗ:
’ರಿಯಯ್ ಹೇಳುವೋಂಓಂದುಓಂಬತ್ತಿದಂಕವಂಕೇಳಿಂಓಂಬತ್ಓಂದೆಂಬಬಾರಿದಬೆಳೆಯುತಕಳೆದರೆಕೂಡುವಲೀಲೆ ತಾಗತತಾಂಕಓಂದುವಶವಾಗೆನವಸಿದ್ಧಚಕ್ರದಾರಾಧನೆರಸಯನ್ತ್ರಸೃಷ್ಟಿಯನಾದಿವಿಷಯಾವಗಾಹನಸಿದ್ಧಾನ್ತದೊಳುಬರ್ಪಹೊಸಶಂ(ಬಲಬದಿಯ ಅಕ್ಷರದಿಂದ ಕೆಳಗಿಳಿಯಬೇಕು)ಕೆಭರತಭೂವಲಯಜೀವದ್ರವ್ಯಗಳೆಷ್ಟು ಅವರಜಾತಿಗಳೆಷ್ಟು ಪಾವನಪರಿಶುದ್ಧರೆಷ್ಟು ಸಾವುಹುಟ್ಟಿಗೆಸಿಕ್ಕಿಬಾಳ್ವಜೀವರುಎಷ್ಟುರುವಾಂಬರುವಹಿಂದಿದ್ದವರ ಜ್ಞಾನವರಿವಿಲ್ಲದಿರುವ ಜೀವಗಳೆಷ್ಟುಅರಹಂತರಾಗುವರೆಷ್ಟುಸಿರಿಕ್ಷ್ಣಯೋಗಿಯಪರಿ (ಬಲಬದಿಯ ಅಕ್ಷರದಿಂದಮೇಲಕ್ಕೆಸಾಗಬೇಕು) ಯಾಯಹೋನ್ದದೆಸರುವಜ್ಞರಾಗುವರೆಷ್ಟುವರತತ್ವನ್ನಾಅಸ್ಜಿರಪ್ರಾಯಣಃಪರಃಪರರಾನದಿರುಮ್ಓಹ್ರಿಯಗಚಂಂದರೀಲರಿಚಿಜ್ಜಗತ್ಸರ್ವಂದ್ಋಂತ್ಹರಿಶ್ಯತೇಶ್ರ್ಯೂಯಶಿಯವ್ರತೇಪಿವಾದ್ರರ್ಬಹಿಡಿಶನರಶ್ಚತತ್ಸರ್ವಂವ್ಯಾಪ್ಸ ’ ಎಂಬ ಅಕ್ಷರಗಳ ಸರಪಣಿಯು ದೊರೆಯುತ್ತದೆ.
ಇದರಿಂದ ಉಗಮವಾಗುವ ಅಂತರ್ಸಾಹಿತ್ಯವು ಪ್ರಾರಂಭದಲ್ಲಿ ಕನ್ನಡಭಾಷಾಸಾಹಿತ್ಯದ ತುಣುಕಾಗಿದ್ದು, ಕೊನೆಯಲ್ಲಿ ಸಂಸ್ಕೃತಭಾಷಾಸಾಹಿತ್ಯದ ತುಣುಕಾಗುತ್ತದೆ! ಕನ್ನಡಭಾಷಾಸಾಹಿತ್ಯದ ತುಣುಕಿನಲ್ಲಿ ಜೀವಾತ್ಮಗಳು ತಮ್ಮ ಸಂಸ್ಕಾರಕ್ಕನುಗುಣವಾಗಿ ಬೇರೆ ಬೇರೆ ಹಂತಗಳಲ್ಲಿ ಪ್ರಕಟವಾಗುವ ವಿಚಾರವಿರುವುದನ್ನು ಗಮನಿಸಬೇಕು. ಇದನ್ನು ಜಾತಿಪದ್ಧತಿ ಎಂದು ಇಂದಿನ ಕೆಲವರು ನಿರಾಕರಿಸಬಹುದು.
ಜಾತಿಪದ್ಧತಿಯು ಪ್ರಾಚೀನವಾದುದುಲ್ಲ; ಯಾವುದೋ ಒಂದು ಕಾಲಘಟ್ಟದಲ್ಲಿ ನಮ್ಮ ಪೂರ್ವಜರು ಈ ಪದ್ಧತಿಯನ್ನು ಹುಟ್ಟುಹಾಕಿದ್ದಾರೆ, ಇದರಿಂದ ಮಾನವ ಸಮೂಹಕ್ಕೆ ಭಾರಿ ಅನ್ಯಾಯವಾಗಿದೆ. ಇದನ್ನು ತೊಡೆದುಹಾಕಿ ಎಲ್ಲರೂ ಒಂದೇ ಎಂಬುದನ್ನು ಅರಿತು ಸರ್ವಸಮಾನತೆಯ ಸಾಮೂಹಿಕ ಜೀವನ ಸಂಪ್ರದಾಯವನ್ನನುಸರಿಸಬೇಕು. ಇದಕ್ಕೆ ಅಂತರ್ಜಾತಿಯ ವಿವಾಹವೇ ಸೂಕ್ತವಾದ ಪರಿಹಾರ ಎಂದು ವಾದಿಸುವುದಿದೆ.
ಇದು ಸಮರ್ಪಕವಾದುದಲ್ಲವೆಂದು ನನ್ನ ಅನಿಸಿಕೆ. ಜಾತಿಪದ್ಧತಿಯು ಇತ್ತೀಚಿನ ಯಾವುದೋ ಕಾಲಘಟ್ಟದಲ್ಲಿ ನಮ್ಮ ಪೂರ್ವಿಕರು ಅಮಾಯಕರನ್ನು ಶೋಷಿಸಲು ಆಚರಣೆಗೆ ತಂದಿರುವ ಪದ್ಧತಿಯಲ್ಲ. ಅಥವಾ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಸೂಚಿಸಿರುವಂತೆ ಗುಣಕರ್ಮಗಳಿಗನುಸಾರವಾಗಿ ಸಮಾಜವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ಜಾತಿಗಳಾಗಿ ವಿಂಗಡಿಸಿದ್ದೂ ಅವನಲ್ಲ್ಲ!
ಕೋಟ್ಯಾಂತರ ವರ್ಷಗಳ ಹಿಂದೆ ಈ ಭೂಮಂಡಲವನ್ನಾಳಿದ ಭರತ ಚಕ್ರವರ್ತಿಯು ರೂಪಿಸಿದ ಪದ್ಧತಿ ಇದು ಎಂಬುದು ಪ್ರಾಚೀನ ಜೈನ ಸಂಪ್ರದಾಯದ ಗ್ರಂಥಗಳ ಹೇಳಿಕೆಯಾಗಿದೆ. ಇದು ಮಾನವಕುಲದ ಆತ್ಮೋನ್ನತಿಗೆ  ಸಾರ್ವಕಾಲಿಕವಾದ ಸುರಕ್ಷಿತವಾದ ಪದ್ಧತಿ.
 ಇದನ್ನು ನಿರಾಕರಿಸಿ ಕೇವಲ ದೈಹಿಕ ಆಕರ್ಷಣೆಯಿಂದ ಎಲ್ಲರೂ ಒಂದೇ ಎಂದು ನಿರ್ಧರಿಸಿ, ಇಚ್ಛಿಸಿದವರನ್ನು ವಿವಾಹವಾಗಿ ಹೊಸಸಮಾಜ ನಿರ್ಮಿಸುವ ಸ್ವೇಚ್ಛಾ ವರ್ತನೆಯು ಪ್ರಕೃತಿ ವಿರೋಧಿಯಾಗುವುದು ನಿಶ್ಚಿತ. ಇದರಿಂದ ವ್ಯಕ್ತಿಗೂ ಸುಖವಿಲ್ಲ; ಸಮಾಜಕ್ಕೂ ನೆಮ್ಮದಿಯಿಲ್ಲ!
ಸಮಾಜವಿರೋಧಿಯಲ್ಲದ, ಪರಸ್ಪರ ಆತ್ಮಸಾಕ್ಷಿಯ ಬೆಂಬಲಪಡೆದ ದೇಹ ಮನಸ್ಸುಗಳ ಒಂದುಗೂಡುವಿಕೆಯು ಮಾತ್ರ ನಿಜವಾದ ವಿವಾಹವಾದೀತೇ ಹೊರತು, ಕೇವಲ ತೋರಿಕೆಗಾಗಿ, ಸಾಂಪ್ರದಾಯಿಕವಾಗಿ ನಡೆಯುವ ಯಾವ ವಿವಾಹ ಕ್ರಿಯೆಯೂ ವ್ಯಕ್ತಿಗಾಗಲೀ ಸಮಾಜಕ್ಕಾಗಲೀ ನೆಮ್ಮದಿಯನ್ನು ತರಲಾರದು ಎಂಬುದು ಗಮನಾರ್ಹವಾದ ಸಂಗತಿ.
ವ್ಯಕ್ತಿಯ ಜಾತಿಯಿಂದ ಅವನ ಯೋಗ್ಯತೆಯನ್ನು ನಿರ್ಧರಿಸುವುದು ತಪ್ಪು. ವ್ಯಕ್ತಿಯ ಆತ್ಮಸಂಸ್ಕಾರವೇ ಅವನ/ಅವಳ ಯೋಗ್ಯತೆಯ ನಿಜವಾದ ಮಾನದಂಡ. ಮಾನವ ಕುಲದ ಪೂರ್ವಜರು ಇದನ್ನು ಖಚಿತವಾಗಿ ಅರಿತಿದ್ದರು. ಆದ್ದರಿಂದಲೇ ಅಂದಿನ ಸಮಾಜ ನೆಮ್ಮದಿಯಿಂದಿತ್ತು.
ದೇಹಾಕರ್ಷಣೆಯ ಕಾರಣಕ್ಕಾಗಿ ಯಾವುದೇ ಜಾತಿ, ಮತ, ಸಂಪ್ರದಾಯಗಳ ಗಂಡುಹೆಣ್ಣುಗಳು ಪರಸ್ಪರ ವಿವಾಹವಾಗುವುದು ಅಥವಾ ವಿವಾಹೇತರವಾದ ಸಂಬಂಧ ಹೊಂದುವುದು ಪ್ರಾಚೀನಕಾಲದಿಂದಲೂ ರೂಢಿಯಲ್ಲಿರುವುದೇ ಆಗಿದೆ. ಆದರೆ, ಸಾಮಾಜಿಕ ಸ್ವಾಸ್ತ್ಯ ಕೆಡದಂತೆ ಅಂದಿನ ದಿನಗಳಲ್ಲಿ ಇಂಥ ಸಂಬಂಧಗಳಿಗೆ ಒಂದು ಸೀಮಿತವಾದ ಇತಿಮಿತಿಗಳಿರುತ್ತಿದ್ದುದು ಗಮನಾರ್ಹ. ಜೀವಮಾನಪೂರ್ತ ಹಲವಾರು ದಶಕಗಳಕಾಲ ಈ ಸಂಬಂಧವು ಯಶಸ್ವಿಯಾಗಿ ಮುನ್ನಡೆಯುತ್ತಿತ್ತು.
ಈಗ ವ್ಯಕ್ತಿಯ ಇಚ್ಛಾನುಸಾರ ವರ್ತಿಸುವ ನಿರ್ಧಾರದಿಂದಾಗಿ ಗಂಡು ಹೆಣ್ಣುಗಳ ಸಂಬಂಧವು ಕೇವಲ ಕೆಲವೇ ಕ್ಷಣಗಳಿಗೆ ಸೀಮಿತವೆನ್ನುವಂತಾಗಿದೆ! ವ್ಯಕ್ತಿಜೀವನದ ಉಳಿದೆಲ್ಲ ಜೀವನದಮೌಲ್ಯಗಳೂ ಕಣ್ಮರೆಯಾಗುತ್ತಿವೆ!! ಮುಂದಿನ ಸಂತತಿಯ ಹಿತದೃಷ್ಟಿಯಿಂದ ಇದು ಸಮಂಜಸವೇ? ಎಂಬುದನ್ನು ವಿವೇಕಿಗಳು ಆಲೋಚಿಸಬೇಕು.
                                                                                          -ಸಿರಿಭೂವಲಯದಸುಧಾರ್ಥಿ. 

Saturday 25 January 2020

ಸಿರಿಭೂವಲಯದಲ್ಲಿ ಭೋಗಜೀವನದ ವಿವರ

ಈ ಕಾವ್ಯದಲ್ಲಿರುವುದು ಕೇವಲ ಶುಷ್ಕವಾದ ಯೋಗವಷ್ಟೇ ಅಲ್ಲ!
ಅನೂಹ್ಯವಾದ ಭೋಗವೂ ಸಿರಿಭೂವಲಯದಲ್ಲಿ ತುಂಬಿದೆ!!

ಋಷಿ, ಮುನಿಗಳೆಂದಮೇಲೆ, ಅವರು ಸರ್ವಸಂಗ ಪರಿತ್ಯಾಗಿಗಳು. ಯಾವಾಗಲೂ ಯಜ್ಞ ಯಾಗಗಳು, ತಪಸ್ಸು, ಧ್ಯಾನ, ಯೋಗಸಾಧನೆಯಲ್ಲಿ ನಿರತರಾಗಿರುವವರು ಎಂಬ ಕಲ್ಪನೆಯು ಜನಸಾಮನ್ಯರಲ್ಲಿರುವುದು ಸಹಜ.  ಕುಮುದೇಂದುವೂ ಸರ್ವಸಂಗಪರಿತ್ಯಾಗಿಯಾದ ದಿಗಂಬರ ಮುನಿಯಾಗಿದ್ದಕಾರಣದಿಂದ ಸಿರಿಭೂವಲಯಕಾವ್ಯದಲ್ಲಿ ಅಡಕವಾಗಿರುವುದೆಲ್ಲವೂ ಕೇವಲ ’ಯೋಗಕ್ಕೆ’ ಸಂಬಂಧಿಸಿದ್ದೆಂದು ಯಾರಾದರೂ ನಿರ್ಧರಿಸಿದರೆ, ಅದು ತಪ್ಪಾಗುತ್ತದೆ.
 ವ್ಯಕ್ತಿ ಜೀವನದಲ್ಲಿ ಯೋಗ ಹಾಗೂ ’ಭೋಗ’ದ ಸಮನ್ವಯವಿರಬೇಕೆಂಬುದನ್ನರಿತಿದ್ದ ಕವಿಯು ತನ್ನ ಕಾವ್ಯದಲ್ಲಿ ’ಭೋಗಜೀವನಕ್ಕೆ’ ಸಂಬಂಧಿಸಿದ ಹಲವಾರು ಮಹಿತಿಗಳನ್ನು ಸರಳವಾಗಿ ಸೂಚಿಸಿರುವುದೂ  ಇದೆ!!
ಸರ್ವಸಂಗ ಪರಿತ್ಯಾಗಿಯು ಭೂಗಜೀವನವನ್ನು ಕುರಿತು ಬರೆಯಲು ಹೇಗೆ ಸಾಧ್ಯ!? ಅದು ಅಶ್ಲೀಲವೆನಿಸುವುದಿಲ್ಲವೇ? ಎಂಬ ಪ್ರಶ್ನೆ ಕೆಲವರಲ್ಲಿ ತಲೆಯೆತ್ತಬಹುದು!! ಇಲ್ಲಿ ಶೀಲ; ಅಶ್ಲೀಲ ಎಂಬುದೇನೂ ಇಲ್ಲ!
ವ್ಯಕ್ತಿಜೀವನದಲ್ಲಿ ಸಮಗ್ರತೆ ಇರಬೇಕಾದಲ್ಲಿ ಯೋಗ-ಭೋಗಗಳನ್ನು ಸಮನ್ವಯಗೊಳಿಸಿಕೊಳ್ಳಲೇ ಬೇಕಾದುದು ಅನಿವಾರ್ಯ!! ಈರೀತಿಯಲ್ಲಿ ಈ ಅನಿವಾರ್ಯತೆಯನ್ನು ಮನಗೊಂಡು ಕವಿಯು ’ಭೋಗಜೀವನದ’ ವಿಚಾರವಾಗಿ ಬರೆದಿರುವ ಮಾಹಿತಿಯನ್ನಷ್ಟು ಇಲ್ಲಿ ಗಮನಿಸೋಣ.
ಪ್ರಿಯ ಓದುಗರೇ, ಗಗನದಲ್ಲಿ ನಿರ್ಮಾಣವಾಗಿರುವ ಭವ್ಯವಾದ ’ಇಂದ್ರಭವನ’ ಗಳ ಸೊಬಗನ್ನು ಕುರಿತು ನೀವಾಗಲೇ ತಿಳಿದಿರುವಿರಿ. ಇನ್ನು ಅಲ್ಲಿ ವಾಸಿಸುವರ ’ಭೋಗಜೀವನದ’ ಪರಿ ಹೇಗಿರಬಹುದೆಂಬುದನ್ನು ಕುರಿತು  ಈಗ ನೋಡೋಣ:
 ಶ್ರೀಭವ್ಯ ಜನರು ತಮ್ಮ ತಪಸ್ಸಿನಿಂದ ಜ್ಞಾನದ ಲಾಭವಾಗಿ ಪಡೆದ ಸಂಪತ್ತಿನಿಂದ ಭವ್ಯವಾದ ಭವನದಲ್ಲಿ ವಾಸಿಸುತ್ತ ಸುಖವನ್ನನುಭವಿಸುತ್ತಿದ್ದಾರೆ.  ಇಂಥಜೀವರು ನಿರ್ಮಲವಾದ ತಪಸ್ಸಿನಿಂದ ಹಿಂದಕ್ಕೆ ಸರಿದು, ಹೆಮ್ಮೆಯ ಸಂಸಾರಸುಖವು ಒಂದೇಕಾಲದಲ್ಲಿ ಬರಬೇಕೆಂದು ನಿಧಾನವಾಗಿ ಈ ಭವನ ನಿಲಯಗಳನ್ನು ನಂಬಿಕೊಂಡಿದ್ದಾರೆ.  ನೋಡಿ:
”ಭವ್ಯಭವನವಾಸಿಗಳಾಗಿಸುಖಿ|ಸುವಶ್ರೀಭವ್ಯಜನರಸಂಪ|ದವಲಾಭದಜ್ಞಾನದ ತಪದಿಂದಪಡೆದಿ|ಹಭವವಿಹಭೂವಲಯ|| ಹಿಮ್ಮೆಟ್ಟಿನಿರ್ಮಲತಪದಿಂದಜೀವರು|ಹೆಮ್ಮೆಯಸಂಸಾರಸುಖವುಒಮ್ಮೆಗೇಬರಬೇಕೆಂದು ನಿಧಾನದಿ| ನೆಮ್ಮಿದರೀಭವನನಿಲಯ|| ”
ಇಂಥ ಭವ್ಯ ಭವನಗಳ ನಿವಾಸಿಗಳು ಬಯಸಿರುವುದಾದರೂ ಏನು?
ಮನುಮಥನ ಆಟವು (ಕಾಮದಾಟವು) ನಮಗೆ ಬೇಕುಎಂದು ನಿರ್ಧರಿಸಿ, ಜಿನನನ್ನು ಕುರಿತ ತಪಸ್ಸನ್ನೂ ಮರೆತು ಕೊನೆಗೆ ಈ ಭವ್ಯ ಭವನಗಳಲ್ಲಿ ತಮ್ಮ ದೇವಿಯರೊಂದಿಗೆ ಸುಖವಾಗಿ ನೆಲೆಸುತ್ತಾರೆ, ಈ ರೀತಿಯ ಜಿನಭಕ್ತನ ಕಾವ್ಯ ಈ ಭೂವಲಯ. ನೋಡಿ:
”ಮನಸಿಜನಾಟವುಬೇಕೆಮಗೆನ್ನುತ|ಜಿನತಪವನುಮಾರಿಬಿಟ್ಟು|ಕೊನೆಗೆಬಂದಿಲ್ಲಿದೇವಿಯರಸೌಖ್ಯದೊಳಿದ್ದನ|ಜಿನಭಕ್ತಕಾವ್ಯಭೂವಲಯ||”
ಮನಸ್ಸನ್ನಾವರಿಸಿದ ಮೋಹವು ಬಿಡದಂತಿರುವಾಗ ಈ ದೇವರು ತಮ್ಮ ಮಡದಿಯ ಸುಂದರವಾದ ವೃತ್ತಾಕಾರದ ಕೆಂದುಟಿಯ ಸೊಬಗನ್ನು ಕುಡಿಯುತ್ತ ಅವರ ರೋಪ ಲಾವಣ್ಯವನ್ನು ನೋಡುತ್ತ ಅವರ ಕುಚಗಳಸ್ಪರ್ಶದ ಸುಖವನ್ನು ಬಿಡಲಾರದೇ ಇದ್ದರಂತೆ! ನೋಡಿ:  ”ಪಿಡಿದಮೋಹಂಬಿಡದಿರುತಲೀದೇವರು|ಮಡದಿಯಬಿಂಬಾಧರವಂ| ಕುಡಿಯುತರೂಪಲಾವಣ್ಯವನೋಡುತ| ಬಿಡದೆಕುಚಗಳಸ್ಪರ್ಶಸುಖ||”
ವನಿತೆಯರ ವೃತ್ತಾಕಾರದ ಸುಂದರ ತುಟಿಗಳರಸವನ್ನು ಹೀರಿ,  ಆ ರಸದ ರುಚಿಯಿಂದ ಉತ್ತೇಜಿತರಾಗಿ, ಅವರ ಶರೀರದ ಸೊಬಗಿನ ದರ್ಶನದಿಂದ ಲಾವಣ್ಯದ ಆನಂದಪರವಶರಾಗಿದ್ದರಂತೆ ಆ ಭವನಗಳ ಅಮರರು!! ನೋಡಿ:
”ವನಿತಾಬಿಂಬಾದರದರಸಪೀರ್|ದನದರರಸದರುಚಿಯಿಂತೇರಿದರ್|ಶನದಪರವಶರಾನಂದಲಾವಣ್ಯದ|ಯದುರಿನಭವನಾಮರರ್||”
ಇಂಥ ಸುಂದರವಾದ ಹೆಣ್ಣುಗಳೊಂದಿಗೆ ಸೇರಿ ಇವರು ಮಾಡುತ್ತಿದ್ದುದಾದರೂ ಏನು!?  ಎದೆಯನ್ನು ಎದೆಯಿಂದ ಒತ್ತುತ್ತಿದ್ದ ಭವನವಾಸಿಗಳು ಸಂಭೋಗಕ್ಕೆ ಸೇರುತ್ತಾರೆ.  ಇವರ ಸಂಭೋಗದ ವೈವಿಧ್ಯತೆಗೆ ಲೆಕ್ಕವಿಲ್ಲ. ಇದು ಅವರ ಕಾಮದ ವಿಸ್ತಾರ  ಈ ಸಿರಿಭೂವಲಯದ ಪುರುಷರಲ್ಲಿ ಪತ್ನಿಯಿಲ್ಲದವರಾರೂ ಇಲ್ಲ ಎಂದಿದೆ ! ನೋಡಿ: 
”ಎದೆಯಿಂದೆದೆಯನ್ನೊತ್ತುತ|ಸಂದಭನಾಮರರಮಿಥುನರ್  |ಮಿಥುನರದರವೈವಿದ್ಯಾಂಕವಿರುವಾಗಣನೆ| ಕಾಮದವಿಸ್ತಾರವಿದುರರಿಲ್ಲದಭೂವಲಯರ್||”
ಈ ಭವನಗಳಲ್ಲಿ ವಾಸಿಸುವವರಿಗೆ ೨ಸಾವಿರ ಹೆಂಡತಿಯರು. ಅವರೊಂದಿಗೆ ಆಡುವ ಕ್ರೀಡೆಗಳು ವಿಚಿತ್ರವಾದವು! ಎಚ್ಚರಿಕೆಯ ಪ್ರೀತಿಯಿಂದಾಡುವ ಜಲಕ್ರೀಡೆ. ಹೌದು! ಜಲಕ್ರೀಡೆಯು ಪ್ರೀತಿಯಿಂದ ಆಡುವ ಆಟ ನಿಜ. ಆದರೆ ಎಚ್ಚರಿಕೆಯಿಲ್ಲದಿದ್ದರೆ, ಅಪಾಯತಪ್ಪಿದ್ದಲ್ಲ!!
ಸುಗಂಧದ ಸ್ಪರ್ಶ, ನದಿ ಅಥವಾ ಸಮುದ್ರದ ದಂಡೆಯಲ್ಲಿರುವ ಮರಳ ಹಾಸಿನಮೇಲೆ ಪ್ರೇಮೋದ್ರೇಕದಿಂದ ಆಡುವ ’ನೆಲಕ್ರೀಡೆ’  ಈ ವನಿತೆಯರು ಆಡುವ ಅಸಾಧಾರಣವಾದ ಆಟವು ಕ್ರೀಡಾಗೃಹಗಳ ವಿಶೇಷವಾಗಿರುತ್ತದೆ.
 ಕಾಮಕಲೆಯ ವಿವಿಧ ಬಂಧಗಳ ಚಿತ್ರಗಳು, ಹಂಸದ ನುಣುಪಾದ ಪುಕ್ಕಗಳಿಂದ ಸಿದ್ಧಪಡಿಸಿದ ಹಾಸಿಗೆಯಲ್ಲಿ ಹಣದಆಶೆಯು ಕಳೆದುಹೋಗಿರುವ ಹೊಂಗಸರ ಕ್ರೀಡೆಯ ಆನಂದದ ದನಿ ತುಂಬಿರುತ್ತದೆ. 
ಈ ಕ್ರೀಡಾಗೃಹದಲ್ಲಿರುವ ಹೆಂಗಸರು ಯಾರೂ ಕೋಪದಿಂದ ಕೊಸರಾಡುವವರಲ್ಲ! ಇವರ ಕಾಮದ ದಾಹವನ್ನು ತಿರಿಸುವುದು ಸಾಧ್ಯವೇ ಇಲ್ಲ!!  ಹೌದು. ’ಕಾಮತುರಾಣಾಂ ನ ಭಯಂ ನ ಲಜ್ಜಾ’  ಎನ್ನುತ್ತಾರೆ ಪ್ರಾಚೀನರು. ಕಾಮದ ಸೆಳೆತಕ್ಕೆ ಸಿಕ್ಕಿದವರು ಗಂಡಸಾಗಿರಲೀ, ಹೆಂಗಸಾಗಿರಲೀ, ಅವರಿಗೆ ಭಯವಾಗಲೀ, ನಾಚಿಕೆಯಾಗಲೀ ಇರುವುದೇ ಇಲ್ಲ!! ಹಣದಾಶೆಯಹೆಣ್ಣಿಗೆ ಹಣದಲ್ಲಿಯೇ ಗಮನವಿರುತ್ತದೆ. ಅಂಥವರು ಜೊತೆಗಾರನೊಂದಿಗೆ ಕೊಸರಾಡುವುದಿರುತ್ತದೆ. ಆದರೆ, ಇಲ್ಲಿ ಈ ಇಂದ್ರಭನದಲ್ಲಿರುವ ನಿವಾಸಿಗಳೆಲ್ಲರೂ ಹಣದಾಶೆ ಕಳೆದಿರುವವರು. ಅವರ ಗಮನವೆಲ್ಲವೂ ಕೇವಲ ಸುರತದಲ್ಲೇ ನೆಲೆಯಾಗಿರುವಕಾರಣದಿಂದ ಅವರ ಕಾಮದ ದಾಹವನ್ನು ತೀರಿಸುವುದು ಸಾಧ್ಯವೇ ಇಲ್ಲ!!
ಹೊಸಕಾಲದ ಈ ಸುರಸುಂದರಿಯರ ಜೊತೆಯಲ್ಲಿದ್ದಾಗ ಅಮೃತದ ಸ್ಪರ್ಶವಾದಂತಿರುತ್ತದೆ. ಮರಗಳ ತುದಿಯಲ್ಲಿ ಕುಳಿತು ನಾಟ್ಯವಾಡುವುದು , ಹಾಡುಹೇಳುವುದು, ಪಗಡೆಯಾಡುವುದು ಬಹಳ ಮೋಜಿನ ಕ್ರೀಡೆಯಾಗಿರುತ್ತದೆಯಂತೆ!! ನೋಡಿ: 
”ವಲ್ಲಭೆಯರೆರಳ್ ಸಹಸ್ರವಿಚಿತ್ರಕ್ರಿಯೆ| ಜತನದಪ್ರೀತಿಯೊಳಿಹಜಲಕ್ರೀಡೆ|ಸುರಭಿಸುಸ್ಪರ್ಷಂಪುಳಿನಸ್ಥಳದನೆಲದೊಳ್| ಕ್ರೀಡಿಪಪ್ರೇಮೋದ್ರೇಕನೆಲಕ್ರೀಡೆಯ||”
”ಕ್ರೀಡಾಗೃಹಗಳ ಅತಿಶಯವಿದುವನಿತೆಯರಾಟ|ಕಾಮಕಲಾಬಂಧಭಿತ್ತಿಚಿತ್ರ|ಹಂಸತೂಲದಹಾಸಿಗೆಯಧನದಾಶೆಯಳಿದ|
ಕ್ರೀಡೆಯವನಿತೆಯರಾನಂದದನಿಯೊಳ್|| ಸಿಣಸಿಣವೆನುವರಿಲ್ಲತಿಣಿಸಲಶಕ್ಯವಾ| ಸುರತಮ್ ನವತರದಕಾಲದವರವರ|ಸನಿಹದೊಳಮೃತಸ್ಪರ್ಶನವೃಕ್ಷಶಾಖೆಯಗ್ರದ| ನಾಟ್ಯಗೀತದಪಗಡೆಯಾಟವದ||”
ಈ ರೀತಿಯಾದ ವಿವಿಧರೀತಿಯ ಮಹಿಳೆಯರೊಂದಿಗಿನ ಒಡನಾಟವನ್ನು ಕಲ್ಪಿಸಿಕೊಂಡಾಗ ಇಂದಿನ ಜನರಿಗೆ ಈ ಕಾವ್ಯಾಂತರ್ಗತವಾದ ಯೋಗ- ಭೂಗಗಳ ಸಮನ್ವಯವು ಎಷ್ಟು ಸೊಗಸಿನದೆಂಬುದು ವೇದ್ಯವಾಗುತ್ತದೆ.  ಪ್ರಿಯ ಓದುಗರೇ, ಈ ವಿವರಗಳೂ ಕೂಡ ಸಿರಿಭೂವಲಯದ ನೇರ ಮಾಹಿತಿಗಳೇ ವಿನಃ ಇದರಲ್ಲಿ ಕಾವ್ಯದ ಸರಳಪರಿಚಯಕಾರ ಸುಧಾರ್ಥಿಯ ಸ್ವಕಪೋಲಕಲ್ಪಿತವಾದುದು ಏನು ಇಲ್ಲ!!!
   -ಸಿರಿಭೂವಲಯದಸುಧಾರ್ಥಿ.  

Wednesday 15 January 2020

ಸಿರಿಭೂವಲಯದಲ್ಲಿ ಬಾಹ್ಯಾಕಾಶಯಾನದ ವಿಚಾರ

*** ಬಾಹ್ಯಾಕಾಶಯಾನವು ಭಾರತೀಯರಿಗೆ ಹೊಸದಲ್ಲ!!!***

ಉತ್ತರಾಯಣಪುಣ್ಯಕಾಲದಲ್ಲಿ ಈ ಕಾವ್ಯದ ಮಾಹಿತಿಯು
ಓದುಗರ ಜ್ಞಾನ ವೃದ್ಧಿಸಲೆಂದು ಆಶಿಸುವೆ.

ಸಾಮಾನ್ಯ ಕವಿಗಳೇ  ತಮ್ಮ ಕಾವ್ಯ/ಕವನಗಳ ರಚನೆಯ ಸಮಯದಲ್ಲಿ ಪ್ರಕೃತಿಯ ಸೊಬಗನ್ನು ಕುರಿತು ಬರೆಯುವುದು ಸಹಜ.  ಹಾಗಿರುವಲ್ಲಿ ಸಿರಿಭೂವಲಯದಂಥ ಮಹೋನ್ನತವಾದ ವಿಶ್ವಸಾಹಿತ್ಯವನ್ನು ಸೃಷ್ಟಿಸುವ ಸನ್ನಿವೇಶದಲ್ಲಿ ಕವಿಯು ತನ್ನ ಸುತ್ತಮುತ್ತಲಿನ ಪ್ರಕೃತಿಯ ವಿಶೇಷಗಳನ್ನು ಗಮನಿಸದಿರಲು ಸಾಧ್ಯವೇ!?  ಸರ್ವಜ್ಞಾನಮಯಿಯಾದ ಈ ಕಾವ್ಯರಚನೆಯ ಸನ್ನಿವೇಶದಲ್ಲಿ ಸರ್ವಜ್ಞಸ್ವರೂಪಿಯದ ಕುಮುದೇಂದುಮುನಿಯು ಈ ರೀತಿಯ ಪ್ರಾಕೃತಿಕ ವಿಶೇಷಗಳನ್ನು ತನ್ನ ಕಾವ್ಯದಲ್ಲಿ ಉಪಮೆಯಾಗಿ, ಪ್ರತಿಮೆಗಳಾಗಿ ಬಳಸಿರುವ ಉದಾಹರಣೆಗಳು ಹಲವಾರು!
ಇವುಗಳ ಪೈಕಿ ಇನ್ನೊಂದು ಉದಾಹರಣೆಯನ್ನು ಇಲ್ಲಿ ಗಮನಿಸೋಣ. ಸಾಮಾನ್ಯವಾಗಿ ಯಾವುದಾದರೊಂದು ವಿಷಯವನ್ನು ಕುರಿತ ಬರಹದಲ್ಲಿ ಆ ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳದೇ ಪ್ರಾಧಾನ್ಯತೆ.  ಆದರೆ ಸಿರಿಭೂವಲಯದ ಪರಿ ಇಂಥದಲ್ಲ!! ಇದು ಸರ್ವವಿಷಯಾತ್ಮಕವಾದ ಕಾವ್ಯವಾದುದರಿಂದ ಇಲ್ಲಿ ಪ್ರತಿಯೊಂದು ವಿಚಾರವೂ ಮಹತ್ವಪೂರ್ಣವಾದುದೇ ಆಗಿವೆ.
ನಮ್ಮ ಸಾಮಾಜಿಕ ಪರಿಸರದಲ್ಲಿ ನಾಣ್ನುಡಿಗಳ ಪ್ರಭಾವವು ದಟ್ಟವಾಗಿರುವುದು ಹಿಂದಿನಿಂದಲೂ  ಬೆಳೆದುಬಂದಿರುವ ಪರಂಪರೆ. ’ಬಾಳೆಗೆ ಒಂದೇ ಗೊನೆ; ಬಾಳುವವನಿಗೆ ಒಂದೇ ಮಾತು’ ಎಂಬುದೊಂದು ಗಾದೆ. ಇಲ್ಲಿ ಬಾಳಿಬದುಕುವವರು ಎಂದೆಂದಿಗೂ ತಮ್ಮ ಮಾತಿಗೆ ತಪ್ಪಬಾರದೆಂಬ ಸಂದೇಶದೊಂದಿಗೆ ಬಾಳೆಯಗಿಡವು ಕೊಡುವುದು ಒಂದೇ ಗೊನೆ ಎಂಬ ಮಾಹಿತಿಯೂ ಸೇರಿದೆ.
 ಈ ರಿತಿಯಲ್ಲಿ ಬರುವ ಒಂದು ಹೂವನ್ನು ಕುರಿತಂತೆಯೂ ನಮ್ಮಲ್ಲಿ ಮೊದಲಿನಿಂದಲೂ ಹಲವಾರು  ನಂಬಿಕೆಗಳು ಬೆಳೆದು ಉಳಿದುಬಂದಿವೆ.  ಬಾಳೆಯಗಿಡಲ್ಲಿ ಹೊರಹೊಮ್ಮುವ ಈ ಒಂದೇ ಒಂದು ಹೂವು ನಮ್ಮಲ್ಲಿರುವ ದಶದಿಕ್ಕುಗಳ ಪೈಕಿ ಯಾವುದಾದರೊಂದು ದಿಕ್ಕಿಗೆ ಮೂತಿಮಾಡಿಕೊಂಡು ಗಿಡಿದಿಂದ ಹೊರಹೊಮ್ಮಿ, ಕೊನೆಗೆ ನೆಲದತ್ತ ಮುಖಮಾಡಿ ಬಾಗುತ್ತದೆ.
ಗಿಡದಬುಡಕ್ಕೆ ಯಾವದಿಕ್ಕಿನಲ್ಲಿ ಈ ಹೂವು (ಮಾತೆ/ಮೂತಿ, ಬಾಳೆಗೊನೆಯ ಮುಂದಿನ ಹೂವು) ಬಾಗಿರುತ್ತದೆಯೋ ಅದನ್ನು ಅವಲಂಬಿಸಿ ಶುಭಾಶುಭಗಳನ್ನು  ಊಹಿಸುವ ಕ್ರಮವಿರುತ್ತದೆ.  ಇದನ್ನು ನಂಬುವುದೂ ಬಿಡುವುದೂ ಬೇರೆ ವಿಚಾರ. ಆದರೆ ಹಲಸಿನ ಮರದ ಹೂವುಗಳ ಪರಿ ಈರೀತಿಯದಲ್ಲ!!  ಅದು ಬಿಡುವುದು ಒಂದೆರಡು ಹೂವಲ್ಲ! ಸಾವಿರಾರು ಹೂವುಗಳು.  ಅವುಗಳ ಮೂತಿಯೂಕೂಡ ಯಾವುದೋ ಒಂದು ದಿಕ್ಕಿಗೆ ಸೀಮಿತವಲ್ಲ!! ದಶದಿಕ್ಕುಗಳಿಗೂ ಅದು ಮೂತಿಮಾಡಿಕೊಂಡು ಹೊರಹೊಮ್ಮುತ್ತವೆ!! ಇದೊಂದು ಪ್ರಕೃತಿಯ ಕೌತುಕ!!
ಸರ್ವ ವಿಷಯಾತ್ಮಕವಾದ ತನ್ನ ಸಿರಿಭೂವಲಯಕಾವ್ಯವು  ಹಲಸಿನಹೂವಿನಂತೆ ಬಹುಮುಖವಾಗಿ ವಿಕಸಿಸಿರುವುದೆಂಬುದನ್ನು ಸೂಚಿಸುವಲ್ಲಿ ಕುಮುದೇಂದು ಮುನಿಯು ಒಂದು ಸಾಂಗತ್ಯಪದ್ಯವನ್ನು ರಚಿಸಿರುವುದಿದೆ. ಅದರಲ್ಲಿ ಕೇವಲ ಹಲಸಿನಹೂವಿನ ವಿಚಾರಮಾತ್ರವಲ್ಲ; ಇಂದಿನ ದಿನಗಳಲ್ಲೂ ಅತಿ ಕಷ್ಟಕರವೆನಿಸಿರುವ ಬಾಹ್ಯಾಕಾಶಯಾನದ ವಿಚಾರವನ್ನು ಕುರಿತೂ ಖಚಿತವಾದ ವಿವರವನ್ನು ಸೂಚಿಸಿರುವುದಿದೆ.
ಅಗತ್ಯಕ್ಕೆ ಅನುಗುಣವಾದ  ಏರೋ ಇಂಜಿನ್ನಿನ ತಯಾರಿಕೆಯನಂತರ ಆಧುನಿಕ ವಿಜ್ಞಾನ ಕ್ಷೇತ್ರದಲ್ಲಿ ಮೊದಲಿಗೆ ಭೂಮಿಗೆ ಸಮಾಂತರವಾಗಿ ಆಕಾಶದಲ್ಲಿ ಹಾರಾಡುವ ವಿಮಾನಗಳ ಆವಿಷ್ಕಾರವಾಯಿತು.  ಕಾಲಕ್ರಮದಲ್ಲಿ ಭೂಮಿಯ ಗುರುತ್ವಾಕರ್ಷಣಶಕ್ತಿಯನ್ನು ಮೀರಿ ಗಗನದತ್ತ ಹಾರಿ, ಅಲ್ಲಿ ಒಂದು ಸ್ಥಿರವಾದ ಕಕ್ಷೆಯಲ್ಲಿ  ಉಪಗ್ರಹವನ್ನು ಸ್ಥಾಪಿಸುವತ್ತ ವಿಜ್ಞಾನಿಗಳು ಗಮನಹರಿಸಿದರು. ’ಕ್ರಯೋಜನಿಕ್’ ಇಂಜಿನ್ನಿನ ನಿರೂಪಣೆಯಿಂದ ಈ ಕಾರ್ಯ ಯಶಸ್ವಿಯಾಯಿತು.  ಇದು ಹಲವಾರು ದಶಕಗಳ ಸಾಧನೆಯ ಫಲವೆಂಬುದು ಸರ್ವವಿದಿತ. ಇದು ಆಧುನಿಕ ವಿಜ್ಞಾನದ ಮಹತ್ತರವಾದ ಸಾಧನೆಯೆಂಬುದು ಎಲ್ಲರ ಅನಿಸಿಕೆ.  ಆದರೆ, ೧೨೦೦ ವರ್ಷಗಳ ಹಿಂದಿನವನಾದ ಕುಮುದೇಂದುಮುನಿಯು ಈ ರೀತಿಯ ಅನೂಹ್ಯವಾದ ಕಾರ್ಯದ ಖಚಿತವಾದ ಸ್ಪಷ್ಟವಿವರಣೆಯನ್ನು ಸೂಚಿಸಿರುವುದಿದೆ!! ಸಿರಿಭೂವಲಯದಲ್ಲಿ ’ದೇಹವನ್ನು ಆಕಾಶಕ್ಕೆ ಹಾರಿಸಿ, ಅಲ್ಲಿ ಸ್ಥಿರವಾಗಿ ನಿಲ್ಲಿಸುವ ಘನವೈಮಾನಿಕಕಾವ್ಯ’ ಎಂದಿರುವುದಿದೆ!
 ’ ಸೆಟಲೈಟ್ ಟೆಕ್ನಾಲಜಿ’ಯು ಸಾಧಿಸಿರುವುದು ಇದೇ ಕಾರ್ಯವನ್ನು ತಾನೇ!!??  ’ಘನವೈಮಾನಿಕ’ ಎಂದರೆ, ವಿಮಾನಯಾನಕ್ಕಿಂತ ಮಿಗಿಲಾದ ’ಸ್ಪೂಟ್ನಿಕ್ ಟೆಕ್ನಾಲಜಿ’ ಎಂದು ಅರ್ಥೈಸಿಕೊಳ್ಳಬೇಕು. ”’ಹಲಸಿನಹೂವಿನಂಥ ಸರ್ವತೋಮುಖವಾದ ಈ ಕಾವ್ಯವು ವಿಶ್ವದ ಆಕಾಶದಂತಿರುವ ಕಾವ್ಯ. ಜೀವನದ ಜಂಜಡದಿಂದ ಬಿಡುಗಡೆಹೊಂದಿದವನ ರೂಪದ ಅಭೇದ್ಯವಾದಕಾವ್ಯ’’ ಎಂದೂ ಕವಿಯು ಸೂಚಿಸಿರುವುದಿದೆ. ನೋಡಿ:  ”ತನುವನು ಆಕಾಶಕೆ ಹಾರಿಸಿ ನಿಲಿಸುವ | ಘನವೈಮಾನಿಕದಿವ್ಯಕಾವ್ಯ| ಪನಸಪುಷ್ಪದಕಾವ್ಯವಿಶ್ವಂಭರಕಾವ್ಯ|ಜಿನರೂಪಿನಭದ್ರಕಾವ್ಯ||
ಇಲ್ಲಿ ನೀಡಿರುವ ಮಾಹಿತಿಯು ಮಿತಿಮೀರಿದ ಅರ್ಥವಿವರಣೆಯಾಗಿದೆ. ಇಂದಿನ ಆಧುನಿಕ ವಿಜ್ಞಾನಿಗಳ  ಸತತವಾದ ಪರಿಶ್ರಮದಿಂದ ನಡೆಸಿರುವ ಸಂಶೋಧನೆಯ ವಿವರಗಳೆಲ್ಲವೂ ನಮ್ಮ ಪ್ರಾಚೀನರಿಗೆ ಸಾವಿರಾರು ವರ್ಷಗಳ ಹಿಂದೆಯೇ ತಿಳಿದಿತ್ತೆಂದು ಸೂಚಿಸುವುದು ಮೌಢ್ಯತೆಯ ಪರಮಾವಧಿ.  ಎಂದು ಕೆಲವರು ಅವಹೇಳನಮಾಡಬಹುದು. ಅದರಿಂದ  ಕವಿಗೂ, ಕಾವ್ಯಕ್ಕೂ, ಕಾವ್ಯದ ಸಂಶೋಧಕರಿಗೂ, ಸರಳಪರಿಚಯಕಾರನಿಗೂ ನಷ್ಟವೇನಿಲ್ಲ!!
ಈ ಕಾವ್ಯವನ್ನು ಆಧುನಿಕ ಕಂಪ್ಯೂಟರ್  ಗೆ ಅಳವಡಿಸಿ,  ವ್ಯಾಪಕವಾದ ಸಂಶೋಧನೆಮಾಡುವ ಉದ್ದೇಶದಿಂದ ಮೈಸೂರಿನ ಭಾರತೀಯಭಾಷಾಸಂಸ್ಥಾನದಲ್ಲಿ ಒಂದು ವಿಚಾರ ವಿನಿಮಯಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
 ಡಾಕ್ಟರೇಟ್ ಪದವಿ ಪಡೆದ ಹಲವಾರು ವಿದ್ವಾಂಸರು, ವಿಜ್ಞಾನಿಗಳು ಅದರಲ್ಲಿ ಭಾಗವಹಿಸಿದ್ದರು. ಸಿರಿಭೂವಲಯದ ವಿಚಾರದಲ್ಲಿ ’ಏನೋ ಒಂದಿಷ್ಟು ಕೆಲಸಮಾಡಿದ್ದಾನೆ’ ಎಂಬ ಕಾರಣದಿಂದಾಗಿ  ಅನಿವಾರ್ಯವಾಗಿ ಈ ಸಿರಿಭೂವಲಯದಸುಧಾರ್ಥಿಗೂ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು’ ಅಪರೂಪದ ’ ಅವಕಾಶ ದೊರೆತಿತ್ತು!!
 ಸಮಾರಂಭದಲ್ಲಿ ಭಾಗವಹಿಸಲು ಸೂಕ್ತವಾದ ವಸತಿ, ಊಟೋಪಚಾರದ ವ್ಯವಸ್ಥೆ,ಹಾಗು ವಿಮಾನಯಾನದ ವೆಚ್ಚಭರಿಸುವ ಸೌಲಭ್ಯವಿದ್ದ ಕಾರಣ ಹಲವಾರು ಹೆಸರಾಂತ ಗಣ್ಯರು ಅದರಲ್ಲಿ ಭಾಗವಹಿಸಿದ್ದರು. ವಾಸ್ತವವಾದ ಹಾಗೂ ವ್ಯಸನದ ಸಂಗತಿಯೆಂದರ, ಅಲ್ಲಿ ಸೇರಿದ್ದವರ ಪೈಕಿ ಎಂಟು-ಹತ್ತು ಜನಗಳನ್ನು  ಬಿಟ್ಟರೆ, ಉಳಿದವರಿಗೆ ಈ ಕಾವ್ಯದ ಹೆಸರೂ ಸರಿಯಾಗಿ ತಿಳಿಯದ್ದು!!
 ಕಾರ್ಯಕ್ರಮದ ಉದ್ಘಾಟನೆಗೆ ಮೊದಲೇ ವ್ಯವಸ್ಥಾಪಕರು  ’ನೀವೇ ಮೊದಲಿಗೆ ಭಾಷಣಮಾಡಿ’ ಎಂದು ಸುಧಾರ್ಥಿಗೆ ಸೂಚಿಸಿದರು. ”ಕಂಪ್ಯೂಟರ್ ಬಳಕೆಯಿಂದಮಾತ್ರವೇ ಸಿರಿಭೂವಲಯದ ಸಂಶೋಧನೆಸಾಧ್ಯ’’ ಎಂಬುದನ್ನು ಪ್ರತಿಪಾದಿಸುವುದೇ ಆ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಆದರೆ, ಅದು ಸಾಧ್ಯವಿಲ್ಲವೆಂಬ ಖಚಿತವಾದ ನಿರ್ಧಾರ ಸುಧಾರ್ಥಿಯದು!
 ಈ ಕಾರಣದಿಂದಾಗಿ ’ ದೂರದೂರದ ಊರುಗಳಿಂದ ಬಂದಿರುವ ವಿದ್ವಾಂಸರ ವಿಚಾರ ಮಂಡನೆ ಮೊದಲಾಗಲೀ,  ಕೊನೆಯಲ್ಲಿ ನಾನು ಮಾತನಾಡುತ್ತೇನೆ’ ಎಂದು ಸುಧಾರ್ಥಿ ಸೂಚಿಸಿದ್ದಾಯಿತು.  ಕಾರ್ಯಕ್ರಮದ ಪ್ರಾರಂಭದಲ್ಲಿ ’ಪ್ರಧಾನಭಾಷಣ’ ಮಾಡಿದ ಮಹನೀಯರ ’ಸಿರಿಭೂವಲಯದ ಪಾಂಡಿತ್ಯ’ ಎಷ್ಟಿದ್ದಿತೆಂದರೆ,  ಅದು ಅಗಾಧವಾದುದು!!
ಈಹಿಂದೆ ಸುಧಾರ್ಥಿಯ ಹಳ್ಳಿಗೆ ಬಂದಿದ್ದ ಈ ದಿಳ್ಳಿಯ ನಿವಾಸಿ ವಿದ್ವಾಂಸರು  ಅಂದಿನ ಕಾರ್ಯಕ್ರಮಕ್ಕೆ ಮೊದಲು ಸಭಿಕರ ಸಾಲಿನಲ್ಲಿದ ಸುಧಾರ್ಥಿಯಪಕ್ಕದಲ್ಲಿ ಕುಳಿತು,  ಕುಮುದೇಂದುವಿಗೆ ಸಂಬಂಧಿಸಿದ ಕೆಲವು ಪ್ರಮುಖ ಮಾಹಿತಿಗಳು, ಸಿರಿಭೂವಲಯ ಕುರಿತ ಕೆಲವು  ಮಾಹಿತಿಗಳನ್ನು ಮೌಖಿಕವಾಗಿ ಸಂಗ್ರಹಿಸಿಕೊಂಡು, ತಮ್ಮ ’ಪ್ರಧಾನಭಾಷಣವನ್ನು’ ಯಶಸ್ವಿಯಾಗಿ ಪೂರೈಸಿದರು. 
ಮುಂದೆ ಸಿರಿಭೂವಲಯಕುರಿತು ಮಾತನಾಡಿದವರಿಗೆ ಸಿರಿಭೂವಲಯನ್ನು ಕಂಪ್ಯೂಟರಿಗೆ ಹೇಗೆ ಅಳವಡಿಸ ಬೇಕೆಂಬುದರ ಚಿಂತನೆ ಇತ್ತೇ ಹೊರತು, ಸಿರಿಭೂವಲಯದ ಸ್ವರೂಪವೇನೆಂಬುದರ ಪರಿಚಯವಿರಲಿಲ್ಲ!! ಅದನ್ನು ಕುರಿತು ಪ್ರಶ್ನಿಸಿದವರಿಗೆ ’ಅದೆಲ್ಲವನ್ನೂ ಸುಧಾರ್ಥಿ ಜೀ ಯವರು ತಿಳಿಸುತ್ತಾರೆ’ ಎಂದು ಮುಂದುವರೆದರು!!
 ’ಸಿರಿಭೂವಲಯದಲ್ಲಿ ಸಂಸ್ಕೃತ ಸಾಹಿತ್ಯ ಉಗಮವಾಗುವ ಕ್ರಮ’ ಎಂಬ ವಿಚಾರವಾಗಿಮಾತನಾಡಿದ ವಿದ್ವಾಂಸರು ’ ಸಾಲಿನಲ್ಲಿ ಒಂದು ಅಕ್ಷರಹಿಡಿದು ಕೊನೆಯವರೆವಿಗೂ ಸಾಗಿದಲ್ಲಿ ಸಂಸ್ಕೃತ ಸಾಹಿತ್ಯ ಬರುತ್ತದೆ, ಸಾಲಿನಲ್ಲಿ ಕೆಲವು ಅಕ್ಷಬಿಟ್ಟು ಕೆಲವು ಅಕ್ಷರಗಳನ್ನು ಜೋಡಿಸಿಕೊಂಡು ಓದಿದರೆ, ಸಂಸ್ಕೃತ ಸಾಹಿತ್ಯ ಸಿಗುತ್ತದೆ’ ಎಂಬ ವಿವರಣೆಯಲ್ಲೇ ಸುತ್ತತೊಡಗಿದರು! 
ಪ್ರಸಿದ್ಧ ವಿದ್ವಾಂಸರೊಬ್ಬರು ಎದ್ದು ನಿಂತು ’ಅಲ್ಲಿ ಯಾವ ಸಾಹಿತ್ಯ ಸಿಗುತ್ತದೆ ಎಂಬುದನ್ನು ಸ್ವಲ್ಪ ತಿಳಿಸಿ’ ಎಂದು ಪ್ರಶ್ನಿಸಿದಾಗ ಅವರು ’ಸುಧಾರ್ಥಿಯವರು ಅದನ್ನೆಲ್ಲ ವಿಸ್ತಾರವಾಗಿ ಬರೆದಿದ್ದಾರೆ. ಮುಂದೆ ಅವರೇ ಇದನ್ನೆಲ್ಲ ವಿವರಿಸುತ್ತಾರೆ’  ಎಂದು ಸೂಚಿಸಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಕೊನೆಗೆ ಸುಧಾರ್ಥಿಯ ಸರದಿ ಬಂದಿತು. ”ನೀವು ಆಯೋಜಿಸಿರುವ ಈ ಕಾರ್ಯಕ್ರಮದ ಉದ್ದೇಶದಂತೆ ಸಿರಿಭೂವಲಯವನ್ನು ಕಂಪ್ಯೂಟರ್ ನೆರವಿನಿಂದ ಸಂಶೋಧನೆ ಮಾಡಲು ಸಾಧ್ಯವೇ ಇಲ್ಲ. ಕಂಪ್ಯೂಟರ್ ಬಳಕೆಯಿಂದ ಸಂಶೋಧನೆಯ ಕೆಲಸದ ವೇಗವನ್ನು ಮಾತ್ರ ಹೆಚ್ಚಿಸಬಹುದು.  ಸಿರಿಭೂವಲಯ ಕಾವ್ಯರನೆಯಾಗಿರುವುದು ಕನ್ನಡ ಭಾಷೆಯಲ್ಲಿ.  ಅಲ್ಲಿ ಉಗಮವಾಗಿ ಅಂತರ್ಸಾಹಿತ್ಯವು  ಯಾವುದೇ ಭಾಷೆಯಲ್ಲಿರಲೀ, ಅದನ್ನು ವಿಂಗಡಿಸಲು ಕನ್ನಡಭಾಷೆಯ ಪರಿಚಯ ಅತ್ಯವಶ್ಯಕ. ಸಿರಿಭೂವಲಯಕಾವ್ಯದ ವಿಚಾರವಾಗಿ ಸಾಕಷ್ಟು ಮಾಹಿತಿಯ ಅರಿವೂ ಇರಲೇಬೇಕು.
 ಇದನ್ನೋದುವುದಕ್ಕೂ, ಅರ್ಥಮಾಡಿಕೊಳ್ಳುವುದಕ್ಕೂ ಸಾಕಷ್ಟು ಸಾಹಿತ್ಯಿಕ ಜ್ಞಾನದ ಅಗತ್ಯವಿರುತ್ತದೆ. ಈ ವಿಚಾರದಲ್ಲಿ ಕಂಪ್ಯೂಟರ್ ನೆರವಾಗಬಹುದೇ ವಿನಃ ಅದೇ ಸ್ವತಂತ್ರವಾಗಿ  ಸಂಶೋಧನೆ ಮಾಡಲಾರದು’’ ಎಂಬ ಅಪ್ರಿಯವಾದ ಖಚಿತಮಾಹಿತಿಯನ್ನು ಸಭೆಯ ಗಮನಕ್ಕೆ ತರುವುದರೊಂದಿಗೆ , ಸುಧಾರ್ಥಿಯು ಈ  ’ಉಪಗ್ರಹ’ ವಿಚಾರಕ್ಕೆ ಸಂಬಂಧಿಸಿದ ಸಾಂಗತ್ಯ ಪದ್ಯವನ್ನು ಸೂಚಿಸಿ ಅದರ ವಿವರಣೆನೀಡಿದಾಗ, ಸಭೆಯಲ್ಲಿ ಕೆಲವರಿಗೆ ಅಚ್ಚರಿಯಾದರೇ, ಕೆಲವರಿಗೆ ವಿವರಿಸಲಾಗದ ’ಅಸಮಾಧಾನ’ ಉಂಟಾದುದು ನಿಶ್ಚಯ.
ಕಾರ್ಯಕ್ರಮ ಮುಕ್ತಾಯವಾದನಂತರ ಸಭಿಕರೆಲ್ಲರೂ ಗುಂಪುಗಳಾಗಿ ಕಲೆತು ಮಾತಿಗೆ ತೊಡಗಿದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಸೇರಿದ ಅಧಿಕಾರಿಯೊಬ್ಬರ ಸುತ್ತ ಸೇರಿದ ಕೆಲವರು ಸುಧಾರ್ಥಿಯು ವಿವರಿಸಿದ ಮಾಹಿತಿಯನ್ನು ಕುರಿತು ಅವರಲ್ಲಿ ಪ್ರಶ್ನಿಸ ತೊಡಗಿದರು.
 ವಿವೇಕಶಾಲಿಯಾಗಿದ್ದ ಅವರು ಕೂಡಲೇ ಯಾವುದೇ ನಿರ್ಧಾರಸೂಚಿಸದೇ. ’ಅವರು ವೇದಿಕೆಯಲ್ಲಿ ವಿವರಿಸಿದ ಮಾಹಿತಿಯನ್ನು ನಿರಾಕರಿಸುವುದು ಸುಲಭವಲ್ಲ. ಅದನ್ನು ಕುರಿತು ಕಾವ್ಯಾಭ್ಯಾಸಿಗಳು ಹೆಚ್ಚಿನ ವಿಚಾರ ಸೂಚಿಸಬೇಕು’ ಎಂದು ಉತ್ತರಿಸಿದರು.
ಇಲ್ಲಿರುವ ಸಮಸ್ಯೆ ಎಂದರೆ:  ’ಯಾವುದೇ ಪದವಿ, ಪ್ರಶಸ್ತಿ ಪಡೆಯದ ಗ್ರಾಮೀಣ ಬರಹಗಾರನ ವಿವರಣೆಯನ್ನು ವಿದ್ವಾಂಸರು ಮಾನ್ಯಮಾಡಲು ಹೇಗೆ ಸಾಧ್ಯ!?  ಎಂಬುದು!!!  ಈ ಕಾವ್ಯಕ್ಕೆ ಸಂಬಂಧಿಸಿದಂತೆ ಕಳೆದ ೬೫ ವರ್ಷಗಳಿಂದಲೂ ಈರೋಗ ಪ್ರಚಲಿತವಿದೆ!! ಇದಕ್ಕೆ ಮದ್ದು ಹುಡುಕುವುದು ವಿಜ್ಞಾನಿಗಳಿಗೆ ಬಿಟ್ಟ ಸಂಗತಿ!!!
ಕಾವ್ಯದೊಳಗೆ ಇಳಿದು ಹುಡುಕುವ ಯೋಗ್ಯತೆ ಇರಬೇಕು, ಅಥವಾ ಈಗ ಹುಡುಕಿರುವ ಮಾಹಿತಿಗಳಿಗೆ ಸಮ್ಮತಿಸುವ ಸೌಜನ್ಯವಿರಬೇಕು!! ಎರಡೂ ಇಲ್ಲದವರನ್ನು ಕುರಿತು ಈ ಕಾವ್ಯದ ಸಂಶೋಧಕ ಕರ್ಲಮಂಗಲಂ ಶ್ರೀಕಂಠಯ್ಯನವರು ”’ನೀವೆಲ್ಲ ಬಾಡಿಗೆ ವಿದ್ವಾಂಸರು. ವಿದ್ವತ್ ನಪುಂಸಕರು. ನಿಮಗೆ ಇವೆಲ್ಲ ಅರ್ಥವಾಗುವುದಿಲ್ಲ’ ಎಂದು  ೬೫ ವರ್ಷಗಳ ಹಿಂದೆಯೇ ಸೂಕ್ತವಾದ  ಪ್ರಶಸ್ತಿ ನೀಡಿದ್ದಾಗಿದೆ!!!
 ಇಂಥ ಖಚಿತವಾದ ವಿವರಣೆಗಳೂ  ಸುಳ್ಳು, ’ಸ್ವಕಪೋಲಕಲ್ಪಿತ’ವಾದುವು ಎಂದು ಇನ್ನೂ ಯಾರಾದರೂ ಸೂಚಿಸುವುದಾದಲ್ಲಿ ಅಂಥವರಿಗೆ ಉತ್ತರಿಸುವ ಅಗತ್ಯವಿದೆಯೇ? ಎಂಬುದನ್ನು ಓದುಗರೇ ನಿರ್ಧರಿಸಬೇಕು.
                                                                                                                 -ಸಿರಿಭೂವಲಯದಸುಧಾರ್ಥಿ.

Tuesday 7 January 2020

ಸಿರಿಭೂವಲಯಾಂತರ್ಗತ ಜ್ಞಾನದ ಪರಿಧಿಯೆಷ್ಟು


*** ಸಿರಿಭೂವಲಯಾಂತರ್ಗತ ಜ್ಞಾನದ ಪರಿಧಿಯೆಷ್ಟು!!!??***

ಕುಮುದೇಂದುಮುನಿಯ ಸಿರಿಭೂವಲಯದಲ್ಲಿ ಅಡಕವಾಗಿರುವ ಜ್ಞಾನದ ವಿಸ್ತಾರವೆಷ್ಟೆಂಬುದನ್ನು ಅಳತೆಮಾಡಿ ತಿಳಿಯಲು ಯಾರಿಂದಲೂ ಸಾಧ್ಯವಿಲ್ಲ!
ನಮ್ಮ ಕಣ್ಣಿಗೆ ಕಾಣಿಸುವ, ಕಾಣಿಸದಿರುವ  ಹಲವಾರು ಲೋಕಗಳಿಗೆ  ಅವುಗಳ ನಿಯಮದಂತೆ ಸಂಚರಿಸಲು ಅವಕಾಶನೀಡಿರುವ ಆಕಾಶದ ವಿಸ್ತಾರವನ್ನು ಇದುವರೆವಿಗೂ ಯಾರೊಬ್ಬ ಮೇಧಾವಿಯೂ  ಅಳತೆಮಾಡಲಾಗಿಲ್ಲ!!
ಈಗಿನ ಕಾಲದಲ್ಲಿ, ಯಾವುದೋಒಂದುಕಾಲದಲ್ಲಿ, ಹಿಂದಿನ ಕಾಲದಲ್ಲಿ, ಮುಂದೆಬರುವ ಎಲ್ಲಕಾಲವನ್ನೂ ಆಕಾಶವು ನೋಡುತ್ತಿರುತ್ತದೆ!
ಈ ರೀತಿಯ ಆಕಾಶದರೀತಿಯಲ್ಲಿ ಗಮನಹರಿಸುವಂಥ ಐವರು ಗುರುಗಳ ಜ್ಞಾನವು ಈ ಕಾವ್ಯದಲ್ಲಿ ಅಡಕವಾಗಿದೆ!  ಎಂದು ಕವಿ ಸೂಚಿಸಿದ್ದಾನೆ. ಇದಕ್ಕೊಂದು ಉದಾಹರಣೆಯನ್ನು ನಾವಿಲ್ಲಿ ಗಮನಿಸಬಹುದು.
ಆಧುನಿಕ ವಿಜ್ಞಾನದ ಅಗಾಧವಾದ ಸಾಧನೆಗಳ ಪ್ರತೀಕವಾಗಿ ಕಂಪ್ಯೂಟರ್ ತಂತ್ರಜ್ಞಾನವು ಊಹಾತೀತವಾಗಿ  ಬೆಳವಣಿಗೆ ಹೊಂದಿರುವುದು ಸರ್ವವೇದ್ಯ.
ಹಿಂದೆಲ್ಲ  ’ ಥರ್ಡ್ ಜನರೇಷನ್, ಫೋರ್ತ್  ಜನರೇಷನ್,  ಫಿಫ್ತ್ ಜನರೇಷನ್ ’ ಕಂಪ್ಯೂಟರ್ ಗಳೆಂದು ವರ್ಗೀಕರಣವಿತ್ತು. ಕೊನೆಗೆ ’ವಿಂಡೋಸ್’ ಕಾಲಿಟ್ಟಿತು. ಈಗ ಅದರಲ್ಲಿಯೂ ಹಲವಾರು ಆವೃತ್ತಿಗಳಾದುವು.
ಹಿಂದೆಲ್ಲ  ಮಾಹಿತಿಗಳ ಸಾಗಾಣಿಕೆಗೆ ’ ಫ್ಲಾಫಿ’ ಗಳ ನೆರವಿತ್ತು. ಅದಕ್ಕೆ ಒಂದು ಮಿತಿಯೂ ಇತ್ತು. ಅನಂತ ’ಸಿಡಿ’ ಗಳು ಬಂದುವು. ಅವುಗಳ ಸಾಮರ್ಥ್ಯ ಹೆಚ್ಚಿತು.  ಈಗ ’ಪೆನ್ಡ್ರೈವ್’ ಬಂದಿದೆ! ಇವುಗಳ ಸಾಮಾರ್ಥ್ಯ ವ್ಯಾಪಕವಾದುದು.  ಇದನ್ನೂ ಮೀರಿಸಿದ ಸಾಧನೆಯತ್ತ ವಿಜ್ಞಾನದ ಕ್ಷೇತ್ರವು ಯೋಚಿಸುವುದು  ಸಹಜ.
ಇಂಥ ಪರಿಸರಿದಲ್ಲಿ ಯಾರಿಗೂತಿಳಿಯದ ಅನಾಮಧೇಯ ಪರಿಚಯಕಾರನೊಬ್ಬನು  ಸುಮಾರು ೧೨೦೦ ವರ್ಷಗಳಿಗೆ ಹಿಂದೆಯೇ ಇಂದಿನ ’ಪೆನ್ ಡ್ರೈವ್ ’ ಅನ್ನೂ ಮೀರಿಸಿದ ಸಾಮರ್ಥ್ಯದ ಸಾಧನದ ವಿಚಾರ ಪ್ರಚಲಿತವಿತ್ತು ಎಂದು ವಿವರಿಸಿದರೆ, ಅದನ್ನು ಯಾರೂ ನಂಬಲಾರರು!! ಮತ್ತು ಆರೀತಿ ವಿವರಿಸಿದವನ ವಿಚಾರವಾಗಿ ’ಅನುಕಂಪ’ ಸೂಚಿಸಬಹುದು!
ಆದರೆ, ನಿಜಕ್ಕೂ ಇಂಥ ಅನುಕಂಪದ ಅಗತ್ಯವಿಲ್ಲ.  ತನ್ನ ಅಚ್ಚರಿಯಕಾವ್ಯ ಸಿರಿಭೂವಲಯದಲ್ಲಿ ಅಡಗಿರುವ ಜ್ಞಾನದ ಪರಿಧಿಯನ್ನು ಈಗ ಮೇಲೆ ವಿವರಿಸಿದಂತೆ ಸೂಚಿಸಿರುವ ಕುಮುದೇಂದು ಮುನಿಯು  ಜಗತ್ತಿನಲ್ಲಿ ವಿಜ್ಞಾನಕ್ಷೇತ್ರದ ಸಾಧನೆಗಳಿಗೆ ಮೂಲಾಧಾರವಾಗಿರುವ ’ಗಣಿತ’ಶಾಸ್ತ್ರದ ಮಹೋನ್ನತ ಸಾಧನೆಯ ಬಲದಿಂದ ಅಂದಿನ ಕಂಪ್ಯೂಟರ್ ಕ್ಷೇತ್ರದಲ್ಲಿ ಬಳಕೆಯಲ್ಲಿದ ತಂತ್ರಜ್ಞಾನವನ್ನು ಬಹಳ ಸರಳವಾಗಿ ಸೂಚಿಸಿರುವುದಿದೆ!!!
ಕುಮುದೇಂದುವಿನ ಗಣಿತಶಾಸ್ತ್ರದಲ್ಲಿ ದಶಮಾಂಶಪದ್ಧತಿಯಿಲ್ಲ! ಅಲ್ಲಿ ಬಳಕೆಯಾಗುವುದು ’ನವಮಾಂಕ’ಕ್ರಮ!!  ಈ ಕ್ರಮದಲ್ಲಿ  ಖಚಿತವಾದ ಲೆಕ್ಕಾಚಾರಕ್ಕೆ ಮಾನ್ಯತೆಯೇ ಹೊರತು, ಎಷ್ಟೇ ಸೂಕ್ಷ್ಮವಾದ ಅಂದಾಜಿನ ಲೆಕ್ಕಾಚಾರಕ್ಕೂ ಅವಕಾಶವಿಲ್ಲ!!!
ಗಣಿತಕ್ಷೇತ್ರದಲ್ಲಿ  ಎಣಿಕೆ ಮಾಡಲು ಬಿಡಿ, ಹತ್ತು ನೂರು, ಸಾವಿರ, ದಶಸಾವಿರ, (ಅಯುತಂ) ಲಕ್ಷ,  ದಶಲಕ್ಷ,  (ಪ್ರಯುತಂ) ಕೋಟಿ, ಅರ್ಬುದಮ್, ಪದ್ಮಮ್,ಖರ್ವಮ್, ನಿಖರ್ವಮ್, ಬೃಂದಮ್, ಮಹಾಪದ್ಮಮ್,ಶಂಖ, ಮಹಾಶಂಖಃ,  ಸಮುದ್ರಃ, ಮಹಾಸಮುದ್ರಃ, ಮಧ್ಯಮ್, ಪರಾರ್ಧಮ್,  ಪರಾ ಎಂಬುದಾಗಿ ಸುಮಾರು ೨೨ ಸ್ಥಾನಗಳಿಗಿಂತ ಹೆಚ್ಚಿನ ಅಂಕಿಯನ್ನು ಬಳಸಲಾಗುತ್ತದೆ. ಇದೊಂದು ಸಾಮಾನ್ಯ ಬಳಕೆಯ ಸ್ಥಾನನಿರ್ಣಯವಾಯಿತು. ಕುಮುದೇಂದು ಮುನಿಯು ಸೂಚಿಸುವ ಲೆಕ್ಕಾಚಾರದಲ್ಲಿ ಸುಮಾರು  ೧೨೦ ಸ್ಥಾನಗಳವರೆವಿಗೂ  ಲೆಕ್ಕಾಚಾರ ಮುಂದುವರೆಯುತ್ತದೆ!!! ( 64 to the power of 64)
ಇದನ್ನೂ ಮೀರಿದಲ್ಲಿ ’ಅನಂತ’  (Infinate) ಎಂದು ಸೂಚಿಸಲಾಗುತ್ತದೆ. ಇಂಥ ’ಅನಂತವಾದ  ಅನಂತ’ಗಳ ವಿಚಾರವನ್ನು ಕುಮುದೇಂದುಮುನಿಯು ಸೂಚಿಸುವುದಿದೆ. ಅದನ್ನು  ’ಅನಂತಾನಂತ’  ಎಂಬ ಹೆಸರಿಂದ ಕಾವ್ಯದಲ್ಲಿ  ನಿರ್ದೇಶಿಸಿರುವುದಿದೆ.! ಇವುಗಳನ್ನು ಕುರಿತು ಗಣಿತಶಾಸ್ತ್ರವಿಶಾರದರು ಸೂತ್ರರೂಪದಲ್ಲಿ ಸಂಕ್ಷಿಪ್ತವಾಗಿ ನಿರ್ಧಾರಿಸುವುದಿದೆ.  ಇಂಥ ಅನಂತಾನಂತವಾದ ಜಗತ್ತನ್ನು ಒಂದು ಅಕ್ಕಿಯಕಾಳಿನ ವಿಸ್ತಾರದಷ್ಟು ಕೇತ್ರದಲ್ಲಿ ಅಡಗಿಸಿಡುವ ತಂತ್ರಜ್ಞಾನವನ್ನು ಕುಮುದೇಂದುಮುನಿಯು ಸಿರಿಭೂವಲಯದಲ್ಲಿ ಅಡಗಿಸಿರುವುದುಅಚ್ಚರಿಯಲ್ಲವೇ!!??!
ಜಗತ್ತಿನಲ್ಲಿರುವ ಚರಾಚರವಸ್ತುಗಳೆಲ್ಲವನ್ನೂ  ಪರಮಾಣುರೂಪಕ್ಕೆ ಪರಿವರ್ತಿಸಿ ಅವುಗಳಿಗೆ  ಪ್ರತಿಯೊಂದಕ್ಕೂ ಒಂದೊಂದು ಸಂಖ್ಯೆಯನ್ನು ಕೊಟ್ಟಾಗ, ಅದು  ಜಗತ್ತನ್ನೇ ತುಂಬುವವಷ್ಟು ಅಗಾಧವ್ಯಾಪ್ತಿಹೊಂದುತ್ತವೆ.  ಅವುಗಳನ್ನು ಒಂದರೊಳಗೆ ಒಂದನ್ನು ಸೂತ್ರರೂಪದಲ್ಲಿ ಜೋಡಿಸುತ್ತ ಮೂರು ಅಂಕಿಗಳಾಗಿ ಪರಿವರ್ತಿಸಬೇಕು.    ಈ ಮೂರು ಅಂಕಿಗಳನ್ನು ಅಕಾರ ಓಕಾರ, ಮಕಾರವೆಂಬ ಮೂರು ಅಕ್ಷರಗಳು ಪ್ರತಿನಿಧಿಸುತ್ತವೆ. ಇದೇ ಮೂರು ಅಕ್ಷರಗಳು ಜಗತ್ತಿನ ಸೃಷ್ಟಿ, ಸ್ಥಿತಿ, ಲಯವನ್ನೂ ಪ್ರತಿನಿಧಿಸುತ್ತವೆ!
ಈ ಮೂರು ಅಕ್ಷರಗಳ ಸಂಯುಕ್ತರೂಪವು  ’ಓಂ’ ಕಾರವಾಗುತ್ತದೆ. ಇದು ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳ ಸಂಯುಕ್ತರೂಪ. ಈ ಸೃಷ್ಟಿ, ಸ್ಥಿತಿ. ಲಯಗಳು ಬೇರೆ ಬೇರೆ ಕಾಲಘಟ್ಟದ ಅಗಾಧವಾದ ಕಾಲವಧಿಯಲ್ಲಿ ನಡೆಯುವ ಘನೆಗಳು. ಇದನ್ನು ಒಂದೇ ಕಾಲಘಟ್ಟದಲ್ಲಿ ನೋಡುವ ಅಸಾಮಾನ್ಯ ಸಾಧನೆಗಾಗಿಯೇ ಪ್ರಾಚೀನಕಾಲದಿಂದಲೂ ಋಷಿ, ಮುನಿಗಳು ಏಕಾಗ್ರಚಿತ್ತದಿಂದ ’ಓಂ’ ಕಾರದ ಅನುಸಂಧಾನದಲ್ಲಿ  ಲೀನವಾಗಿದ್ದಾರೆ!
 ಈ ವಿಚಾರ ಹಾಗಿರಲೀ,  ಕಂಪ್ಯೂಟರಿಗೆ ಸಂಬಂಧಿಸಿದ ವಿಚಾರನ್ನು ಈಗ ಮುಕ್ತಾಯಮಾಡೋಣ.  ’ಪೆನ್ ಡ್ರೈವ್’ ಗಳಲ್ಲಿಯೂ ಅದರ ಸಾಮರ್ಥ್ಯಕ್ಕೆ  ಇತಿಮಿತಿಗಳಿರುತ್ತವೆ. ಆದರೆ  ಮೇಲೆಸೂಚಿಸಿದ ಜಗತ್ತಿನ ಎಲ್ಲ ವಸ್ತುಗಳ ಪ್ರಾತಿನಿಧಿಕವಾದ ಪರಮಾಣುಗಳ ಅಗಾಧ ಸಂಖ್ಯೆಗಳನ್ನು  ಒಂದು ಅಕ್ಕಿಯಕಾಳಿನ ಕ್ಷೇತ್ರದ ವಿಸ್ತಾರದಲ್ಲಿ ಅಡಕಗೊಳಿಸುವ ವಿಚಾರವನ್ನು ಕುಮುದೇಂದುಮುನಿಯು ಸೂಚಿಸಿರುವುದಿದೆ.  ನೋಡಿ: " ಯವೆಯಕಾಳಿನ ಕ್ಷೇತ್ರದಳತೆಯೊಳಡಗಿಸಿ|ಅನಂತವ ಸಕಲಾನ್|ಕವನವದೊಳ್ ಸವಿಯಾಗಿಸಿಪೇಳುವ| ನವಸಿರಿ ಇರುವ ಭೂವಲಯ"
ನವಮಾಂಕಕ್ರಮದಲ್ಲಿ ಪರಸ್ಪರ ಸಂಯೋಗಗೊಳಿಸಿ ಮೂರು ಅಂಕಿಗಳಾಗಿ ಪರಿವರ್ತಿಸಿ, ಅದನ್ನೂ ’ಓಂ’ ಕಾರದಲ್ಲಿ ಅಡಕಗೊಳಿಸಿರುವ ಕ್ರಮವನ್ನು ಬಳಸಿಕೊಂಡು,  ಕುಮುದೇಂದು ಮುನಿಯು  ಒಂದು ಅಕ್ಕಿಕಾಳಿನ ವಿಸ್ತಾರದ ಕ್ಷೇತ್ರದಳತೆಯಲ್ಲಿ  ಅದನ್ನು ಸಂಗ್ರಹಿಸುವುದು ಪ್ರಾಯೋಗಿಕವಾಗಿಯೂ ಸಾಧ್ಯವಾದ ಸಂಗತಿಯಾಗಿದೆ.
 ರಾಮಾಯಣವನ್ನೇ  ಒಂದು ಅಕ್ಕಿಯಕಾಳಿನಮೇಲೆ ಬರೆಯವಂಥ ಸೂಕ್ಷ್ಮಬರಗಾರರಿರುವಲ್ಲಿ  ’ಓಂ’ ಕಾರವನ್ನು ಒಂದು ಅಕ್ಕಿಯಕಾಳಿನಲ್ಲಿ ಅಡಗಿಸಿಡುವುದು ಕಷ್ಟವೇ!!??   ಆದರೆ, ಅನಂತಾನಂತವಾದ ಜಗತ್ತನ್ನು ಸೂತ್ರಬದ್ಧವಾಗಿ ಓಂ’ ಕಾರಕ್ಕೆ ಪರಿವರ್ತಿಸಿದಂತೆಯೇ ಅದನ್ನು  ಯಾವುದೇ ಅಪಾಯಕ್ಕೂ ಸಿಗದಂತೆ , ಯಾವುದಕ್ಕೂ ಯಾವುದೇ ಊನವಾಗದಂತೆ ಎಚ್ಚರಿಕೆಯಿಂದ ಬಿಡಿಸುತ್ತ, ಪುನಃ ಅವುಗಳಿಗೆ  ಮೊದಲಿನದೇ ಆದ ನದಿ, ಬೆಟ್ಟ, ಸಾಗರ, ಮಾನವ, ಪಶು, ಪ್ರಾಣಿ,  ಪಕ್ಷಿಗಳ ಸಹಜರೂಪವನ್ನು ರೂಪಿಸಿಕೊಡುವ ಜ್ಞಾನವೂ ಸಾಧಕನಿಗೆ ಇರಬೇಕು!!
ಇಲ್ಲವಾದಲ್ಲಿ ಯಾವ ಚಮತ್ಕಾರವೂ ಸಾಧ್ಯವಿಲ್ಲ ಎಂಬುದನ್ನು ನಾವು ಮನಗೊಂಡಿರಬೇಕಲ್ಲವೇ?  ಇದು ನಿಜಕ್ಕೂ ಸಿರಿಭೂವಲಯದಲ್ಲಿ ಅಡಗಿರುವ ’ನವಸಿರಿ’ ಅಲ್ಲವೇನು!?  ಇದರಲ್ಲಿ ಊಹೆಯೂಇಲ್ಲ; ಸ್ವಕಪೋಲಕಲ್ಪಿತವಾದ ಮಾಹಿತಿಯೂ ಅಲ್ಲವೆಂಬುದು ಖಚಿತತಾನೇ!!!?? !!
                                 -ಸಿರಿಭೂವಲಯದಸುಧಾರ್ಥಿ.