Sunday 23 February 2020

ಸಿರಿಭೂವಲಯದಲ್ಲಿ ವಿವೇಕಿಗಳು ಈ ಮಾಹಿತಿಯನ್ನು ಗಮನಿಸಲೇಬೇಕು


ನಿಮಗೆ ’ನೂರುಸಾವಿರಲಕ್ಷಕೋಟಿ’ ಶ್ಲೋಕಗಳ ವ್ಯಾಪ್ತಿಯ ಸಿರಿಭೂವಲಯಕಾವ್ಯವನ್ನು ಸಮಗ್ರವಾಗಿ ಓದಿ ತಿಳಿಯಲು ಆಗದಿದ್ದರೆ ಬೇಸರಿಸಬೇಡಿ!  ಇಲ್ಲಿಸೂಚಿಸಿರುವ ಎರಡು ಪದ್ಯಗಳ ಮಾಹಿತಿಯನ್ನರಿತರೂ ಅದು ನಿಮಗೆ ಎಷ್ಟೋ ಉಪಯುಕ್ತವೆನಿಸೀತು...
”ರಸಯುತವಾದಣುವ್ರತಗಳಿಲ್ಲದಜೀವ| ಹೊಸವಿದ್ಯೆ  ಇದಂ  ಕಾಣಲರಿದುಂ|
ರಸೆಯೊಳಗಿನ ಬ್ರಹ್ಮಚಾರಿಣಿಯರೆ ನೀವು| ಹಸನಾಗಿಸಿರಿಸೀವರನು||   
 ದೃಷ್ಟತ್ವವಾದೈದು ವ್ರತಗಳಬಿಟ್ಟು ಶಿಷ್ಟರನ್ನಾಗಿಸುವಣ್ಣ ದುಷ್ಟರೇಮುಂದೆ
ಶಿಷ್ಟರಾಗುವರೆಂಬಕಷ್ಟದ ವಿದ್ಯೆ ಭೋಧಿಪನು ಮಶುಭ ಪರಿಹಾರ||
ಜೈನಸಂಪ್ರದಾಯದಲ್ಲಿ ಅಣುವ್ರತವೆಂಬುದು ತುಂಬ ಸೂಕ್ಷ್ಮವಾದ ಕಠಿಣ ಜೀವನಕ್ರಮ. ಅದನ್ನು ತಿಳಿಯದ ಜೀವಗಳಿಗೆ ಈ ಸಿರಿಭೂವಲಯಕಾವ್ಯವು ಒಂದು ಹೊಸವಿದ್ಯೆ. ಇದನ್ನು ತಿಳಿಯಲಾಗದು, ಕಾಣಲಾಗದು. ಭೂಮಿಯಲ್ಲಿ  ಬ್ರಹ್ಮಜ್ಞಾನದೊಂದಿಗೆ ಚಲಿಸುವ ಮಹಿಳೆಯರೇ  ನೀವು  ಋಷಿವರನ ವಾಣಿಯನ್ನು ಸಾರಿಯಾಗಿ ಗ್ರಹಿಸಿರಿ- ಅಂದರೆ ನಿಮ್ಮ ’ರಿಸೀವರನ್ನು’ ಸ್ವಚ್ಚಗೊಳಿಸಿಕೊಂಡು ಋಷಿವಾಣಿಯ ಮಹತ್ವವನ್ನು ಗ್ರಹಿಸಿರಿ- ಎಂದುಅರ್ಥೈಸಿಕೊಂಡರೂ ತಪ್ಪೇನಿಲ್ಲ!!- ಕಣ್ಣಿಗೆಕಾಣುವಂತಿರುವ ಐದು ವ್ರತಗಳನ್ನು ಹೊರತುಪಡಿಸಿ (ಪಂಚಾಣುವ್ರತ) ಜ್ಞಾನಿಯು ನಮ್ಮನ್ನು ಶಿಷ್ಟರನ್ನಾಗಿಸುತ್ತಾನೆ.  ದುಷ್ಟರೇ ಮುಂದೆ ಶಿಷ್ಟರಾಗುತ್ತಾರೆ ಎಂಬ ಕಷ್ಟದ ವಿದ್ಯೆಯನ್ನು ಬೋಧಿಸುತ್ತಾನೆ .ಜೀವನದ ಅಶುಭವುಪರಿಹಾರವಾಗುತ್ತದೆ ಎಂಬು ಇಲ್ಲಿನ ಭಾವಾರ್ಥ.
ನಿಜಕ್ಕೂ ಇದು ಜಗತ್ತಿನ - ಭಾರತದ -ಇಂದಿನ ಪರಿಸರದಲ್ಲಿ ಅತಿ ಮಹತ್ವದ ಅಂಶವಾಗಿದೆ.  ಆತ್ಮದ ಅಗಾಧಕಾಲಾವಧಿಯ ಪಯಣದಲ್ಲಿ ಅದು ೮೪ ಲಕ್ಷ ಯೋನಿಗಳಲ್ಲಿ ಹುಟ್ಟಿಬಂದು ಉತ್ತಮವಾದ ಸಂಸ್ಕಾರವನ್ನು ಪಡೆಯುತ್ತದೆ. ಎಲ್ಲ ದೇಹಾಂತರ್ಗತವಾದ ಆತ್ಮವೂ ಒಂದೇ ಎಂಬುದು ಖಚಿತ.
ಹಾಗಿರುವಲ್ಲಿ ಭಾರತೀಯರುಮಾತ್ರ ಸುಸಂಸ್ಕೃತರು. ಒಳ್ಳೆಯವರು, ಸಭ್ಯರು, ಸುಹೃದಯಿಗಳು, ಉಳಿದೆಲ್ಲರೂ ಕೆಳಹಂತದವರು ಎಂದು ನಿರ್ಧರಿಸಲು ಹೇಗೆ ಸಾಧ್ಯ!!?  ಯಾವುದೇ ದೇಹದ ಅಂತ್ಯವಾದಕೂಡಲೇ ಆತ್ಮವು ತನಗೆ ಯೋಗ್ಯವಾದ ಬೇರೊಂದು ದೇಹದಲ್ಲಿ ಸೇರಿ ತನ್ನ ಪಯಣ ಮುಂದುವರೆಸುತ್ತದೆ.ಇದು ಖಚಿತ.
 ಹಿಂದೂ, ಜೈನ, ಬುದ್ಧ, ಕ್ರಿಶ್ಚಿಯನ್, ಮುಸ್ಲಿಮ್  ಇತ್ಯಾದಿ ಬೇರೆ ಬೇರೆ ಸಂಪ್ರದಾಯಗಳಲ್ಲಿ ಹುಟ್ಟಿಬೆಳೆದು  ದೇಹತ್ಯಾಗಮಾಡುವ ಆತ್ಮಕ್ಕೆ  ಆಯಾಯಾ ಸಂಪ್ರದಾಯಗಳ ’ಸಂಸ್ಕಾರ’ ದೊರೆತು, ಜೀವನಪ್ರಯಾಣ ಮುಂದುವರೆಯುತ್ತದೆ. ಇದು ಶಾಸ್ತ್ರವಚನ.
ಹಾಗಿರುವಲ್ಲಿ ತುಂಬಾ ಸಾತ್ವಿಕನಾದ ಉತ್ತಮಸಂಸ್ಕಾರದ ಯಾರೋಒಬ್ಬ ಸಜ್ಜನನು ಸತ್ತು, ಅವನ ಯಾವುದೋ ಪಾಪಕರ್ಮದ ಫಲವಾಗಿ ಮುಸ್ಲಿಮನಾಗಿಯೋ, ಕ್ರಿಶ್ಚಿಯನಾಗಿಯೋ  ದಲಿತನಾಗಿಯೋ ಹುಟ್ಟಿದಲ್ಲಿ ಪರಿಸರಕ್ಕನುಗುಣವಾಗಿ ಆ ಆತ್ಮವು ತಾತ್ಕಾಲಿಕವಾಗಿ ದುಷ್ಟತನದಿಂದಲೇ ಜೀವಿಸಬೇಕಾಗುತ್ತದೆ!
ಅದೇ ಕ್ರಮದಲ್ಲಿ  ತುಂಬ ದುಷ್ಟತನದಿಂದ ವರ್ತಿಸುತ್ತಿದ್ದ ಒಬ್ಬ ಕ್ರಿಶ್ಚಿಯನನೋ ಅಥವಾ ಮುಸ್ಲಿಮನೋ ಕಾಲವಶನಾಗಿ ಅವನ ಪುಣ್ಯದ ಫಲವಾಗಿ ಆ ದೇಹದ ಆತ್ಮವು ತುಂಬ  ’ ಸುಸಂಸ್ಕೃತವೂ, ಸಾತ್ವಿಕವೂ ಆದ’  ಹಿಂದುವೋ ಅಥವಾ  ಬ್ರಾಹ್ಮಣನ ಮನೆಯಲ್ಲೋ ಹುಟ್ಟಿಬಂದರೆ,  ಪೂರ್ವಜನ್ಮದ  ದುಷ್ಟತನವನ್ನು ತ್ಯಜಿಸಿ,  ಶಿಷ್ಟನಾಗಿ ಜೀವಿಸಬೇಕಾಗುತ್ತದೆ.   ಈ ಕ್ರಮದಲ್ಲಿ ದುಷ್ಟರು  ಶಿಷ್ಟರಾಗುವುದು , ಶಿಷ್ಟರು ದುಷ್ಟರಾಗುವುದು  ಪ್ರಕೃತಿ ಸಹಜವಾದ ಪರಿವರ್ತನೆ ಎಂದಾಯಿತು!
ಈರೀತಿಯಲ್ಲಿ ಪರಿಸರಕ್ಕನುಗುಣವಾಗಿ ಆತ್ಮವು ತನ್ನ ಸ್ವಭಾವವನ್ನು ಬದಲಿಸಿಕೊಳ್ಳುವುದುಂಟು. ಬದಲಿಸಿಕೊಳ್ಳದೇ ಹಿಂದಿನಂತೆಯೇ ದುಷ್ಟವೋ; ಶಿಷ್ಟವೋ ಆಗಿ ಬಾಳುವುದೂ ಉಂಟು!! ಇದು ಎಲ್ಲ ಜಾತಿ ಹಾಗೂ ಧರ್ಮದಲ್ಲಿಯೂ ಕಾಣಬರುವ ಸಂಗತಿ.
 ಜಗತ್ತಿನ ಪ್ರತಿಯೊಂದು ಧರ್ಮ, ಮತ, ಸಂಪ್ರದಾಯ, ಜಾತಿ ಉಪಜಾತಿಗಳಲ್ಲೂ ವ್ಯಕ್ತಿಯ ದೇಹಾಂತರ್ಗತವಾದ ಆತ್ಮದ ಸಂಸ್ಕಾರವನ್ನು ಪರಿಷ್ಕರಿಸುವ ಕಾರ್ಯ ನಡೆದೇ ಇರುತ್ತದೆ.  ಮುಸ್ಲಿಮರು ಹಾಗೂ ಕ್ರಿಶ್ಚಿಯನರು ಮಸೀದಿ ಹಾಗೂ ಚರ್ಚುಗಳಲ್ಲಿ ಪ್ರರ್ಥನೆಮಾಡುವ ಮೂಲಕ,  ಉಳಿದವರು ತಮ್ಮ ಪವಿತ್ರ ಮಠ ಮಂದಿರಗಳಲ್ಲಿ ಪೂಜೆಮಾಡುವ ಮೂಲಕ ತಮ್ಮ ಜೀವನದಲ್ಲಿ ನೆಮ್ಮದಿಯನ್ನು ಕಾಣುತ್ತಾರೆ.
 ಅಂದಮೇಲೆ ಎಲ್ಲ ಆತ್ಮಗಳ ಗುರಿಯೂ ಒಂದೇ ಎಂದಂತಾಯಿತು.  ಆದರೆ,  ಕೆಲವು ಆತ್ಮಗಳಿಗೆ ಜಗತ್ತೆಲ್ಲವೂ ತನ್ನ ಹಾದಿಯಲ್ಲೇ ಸಾಗಬೇಕೆಂಬ ಕೆಟ್ಟಹಟವಿರುತ್ತದೆ.  ಹಿಂಸೆಯಿಂದಾದರೂ ಅದನ್ನು ಸಾಧಿಸಲೇಬೇಕೆಂಬ ವ್ಯಾಧಿ ಇರುತ್ತದೆ! ಇದು ಕೆಲವರಲ್ಲಿ ಹೆಚ್ಚಿರ ಬಹುದು ; ಕೆಲವರಲ್ಲಿ ಕಡಿಮೆ ಇರಬಹುದು. -ಇದೂ ಕೂಡ ಎಲ್ಲ ಧರ್ಮ ಸಂಪ್ರದಾಯದವರಲ್ಲೂ ಕಾಣಬರುವ ವರ್ತನೆ.-  ಅಂಥವರ ಅವಿವೇಕದ ವರ್ತನೆಯನ್ನು ತಿದ್ದಿ ಸರಿಪಡಿಸಬೇಕಾದುದು ಒಂದು ಸಾಮಾಜಿಕ ಹೊಣೆಗಾರಿಕೆ.  ಪ್ರತಿಯೊಂದು ಧರ್ಮದವರೂ ಇದರತ್ತ ಗಮನ ಹರಿಸುವುದು ಅತ್ಯವಶ್ಯಕ.  ಇಂಥ ಸಾರ್ವಕಾಲಿಕವಾದ ಸೂಕ್ತ ಮಾರ್ಗದರ್ಶನವನ್ನು ಓದುಗರು ಸಿರಿಭೂವಲಯಕಾವ್ಬ್ಯದಲ್ಲಿ ಹೇರಳವಾಗಿ ಕಾಣಬಹುದಾಗಿದೆ.
                                                                   -ಸಿರಿಭೂವಲಯದಸುಧಾರ್ಥಿ.

No comments:

Post a Comment