Monday 3 February 2020

ಸಿರಿಭೂವಲಯದಲ್ಲಿ ಅಣುವಿಜ್ಞಾನ


ಅಣು; ಪರಮಾಣು ಮುಂತಾದ ಅಣುವಿಜ್ಞಾನಕ್ಕೆ ಸಂಬಂಧಿಸಿದ ಪಾರಿಭಾಷಿಕ ಪದಗಳು ಜಗತ್ತಿನಲ್ಲಿ ಅಣುವಿಜ್ಞಾ ಕುರಿತ ಮಾಹಿತಿಗಳ ಪ್ರಸಾರದನಂತರ ಪ್ರಚಲಿತವಾದ, ಹೊಸದಾಗಿ ಎರಕಹೊಯ್ಯಲಾದ ಪದಗಳು ಎಂಬ ಭ್ರಮೆ ನಮ್ಮಲ್ಲಿ ಹಲವರನ್ನು ಆವರಿಸಿದೆ!  ಇದು ಸರಿಯಲ್ಲ.
ಪಾಶ್ಚಾತ್ಯಜಗತ್ತಿನಲ್ಲಿ ಆಧುನಿಕ ಭೌತಶಾಸ್ತ್ರವು ಕಣ್ಣುಬಿಡುವದಕ್ಕೆ ಮೊದಲೇ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಈ ಪಾರಿಭಾಷಿಕ ಪದಗಳು ಪ್ರಾಚೀನ ಭಾರತೀಯರಲ್ಲಿ ಪ್ರಚಲಿತವಿತ್ತು.
 ಜಗತ್ತಿನೆಲ್ಲೆಡೆಯೂ ಕಾಣಬರುವ ’ನೀರಿನ’ ಸಂಯೋಜನೆಯನ್ನುಕುರಿತು ಆಧುನಿಕ ವಿಜ್ಞಾನಿಗಳು ’ಎರಡುಜಲಜನಕದ ಕಣಗಳು ಹಾಗೂ ಒಂದು ಆಮ್ಲಜನಕದ ಕಣವು ಸೇರಿದ ರೂಪವೇ ’ನೀರು’ ಎಂದು ಸೂಚಿಸುವುದು ಸರಿಯಷ್ಟೆ. (H2O)  ಅಣುವಿಜ್ಞಾನಕ್ಕೆ ಸಂಬಂಧಿಸಿದ ಈ ಮಾಹಿತಿಯನ್ನುಕುರಿತು ಹಾಗೂ ಇದಕ್ಕಿಂತ ವಿಶೇಷವಾದ ಹಲವಾರು ಮಾಹಿತಿಗಳನ್ನು ಕುರಿತು,  ಜೊತೆಗೆ ಈ ಅಣು ಪರಮಾಣುಗಳ ಬೇರೆ ಬೇರೆ ಪ್ರಮಾಣಗಳ ವಿಂಗಡಣೆ ಹಾಗೂ ಸಂಯುಕ್ತರೂಪವನ್ನು ಕುರಿತು ಬೇರೆ ಬೇರೆ ಹೆಸರುಗಳನ್ನು ಬಳಸಿ ಸೂಚಿಸಿರುವುದನ್ನು ಕುಮುದೇಂದು ಮುನಿಯು ಸಿರಿಭೂವಲಯದಲ್ಲಿ  ೧೨೦೦ ವರ್ಷಗಳ ಹಿಂದೆಯೇ ಸೂಚಿಸಿರುವುದಿದೆ!! ನೋಡಿರಿ: ”ಅಣುವೆಂದು ಪರಮಾಣುವೆಂದುಪುದ್ಗಲವನು| ಗಣಿಸುವಾಗಿರುವಂಕವೆಷ್ಟು| ಅಣುವಿನಗುಣವೇನು| ಅಣುವಿನಕ್ಷಣವೇನು| ಅಣುವುನೀರೊಳಗೆಷ್ಟು| ಅನಲವಾಯುಗಳೆಷ್ಟು|  ನೆನೆದುಸುಡದ ಅಣುವೆಷ್ಟು|” ಎಂಬುದಾಗಿ ಹಲವಾರು ಪದ್ಯಗಳರೂಪದಲ್ಲಿ ಈ ಅಣುವಿಜ್ಞಾನ ಕುರಿತ ಸೂಕ್ಷ್ಮಾತಿ ಸೂಕ್ಷ್ಮವಾದ ಮಾಹಿತಿಗಳನ್ನು ಸೂಚಿಸಿರುವುದಿದೆ.  ಇಲ್ಲಿ ಅಂಕಗಳು ಹಾಗೂ ವಸ್ತುಗಳಲ್ಲಿರುವ ಸೂಕ್ಷ್ಮಕಣಗಳಾದ ’ಅಣು, ಪರಮಾಣುಗಳ’  ವಿಚಾರ ವಿವರಿಸಿರುವುದು ಅಚ್ಚರಿ ಮೂಡಿಸುತ್ತದೆ.  ನೀರಿನಲ್ಲಿರುವ ಅಣುಗಳೆಷ್ಟು? ಬೆಂಕಿ ಹಾಗೂ ಗಾಳಿಯಲ್ಲಿರುವ ವಿಧಗಳೆಷ್ಟು?  ನೀರಿನಲ್ಲಿ ನೆನೆಯದ; ಬೆಂಕಿಯಲ್ಲಿ ಸುಟ್ಟುಹೋಗದಿರುವ  ಅಣುಗಳು ಎಷ್ಟೆಂಬ ವಿಚಾರವಾಗಿ ಇಲ್ಲಿ ಪ್ರಸ್ಥಾಪಿಸಿರುವುದನ್ನು ಪ್ರತ್ಯಕ್ಷವಾಗಿ ಕಾಣಬಹುದಾಗಿದೆ.
ವಸ್ತುಗಳ ಗುಣಲಕ್ಷಣಗಳು ಯಾವಾಗಲೂ ಬದಲಾಗುತ್ತಿರುತ್ತದೆ. ಆದರೂ ಅವು ಕೆಡುವುದಿಲ್ಲ. ಹಾಲು ಮೊಸರಾಗುತ್ತದೆ, ಮೊಸರು ಮಜ್ಜಿಗೆ ಹಾಗೂ ಬೆಣ್ಣೆಯಾಗಿ ಬದಲಾಗುತ್ತದೆ. ಬೆಣ್ಣೆಯು ತುಪ್ಪವಾಗಿ ಬದಲಾಗುತ್ತದೆ ಇತ್ಯಾದಿ. ಈ ರೀತಿಯಲ್ಲಿ ಕೆಡದೇ ಇರುವಂಥ ಅಣು- ಪರಮಾಣುಗಳ ಸಂಖ್ಯೆ ಎಷ್ಟಿವೆ? ಕಾಲವೆಂಬುದರ ಪ್ರಮಾಣವನ್ನು ಇದುವರೆವಿಗೂ ಯಾರೂ ಅಳತೆಮಾಡಿ ಅದು ಇಷ್ಟು ವ್ಯಾಪ್ತಿಯದೆಂದು ಹೇಳಿದವರು ಯಾರೂ ಇಲ್ಲ! ಆದರೂ ಅದರ ಗಣನೆಯನ್ನು ಹೇಳುವ ಕ್ರಮಯಾವುದು? ಎಂದು ಸಿರಿಭೂವಲಯದಲ್ಲಿ ಪ್ರಶ್ನಿಸಲಾಗಿದೆ. ನೋಡಿ:
ಅನುಗಾಲವು ಬದಲಾಗುತಿದ್ದರೂಕೆಡದಿಹ| ಅಣುಪರಮಾಣುಗಳೆಷ್ಟು| ಕೊನೆಮೊದಲಿಲ್ಲದಕಾಲವನಳೆಯುವ|
ಗಣನೆಯ ಪೇಳುವುದೆಂತು||
ಸಾಮಾನ್ಯವಾಗಿ ಅಕ್ಕಿ ಗಿರಣಿಗಳಲ್ಲಿ ಭತ್ತವನ್ನು ಮೋಟೆಗಟ್ಟಳೆ ಸುರಿದು ಅಕ್ಕಿಯನ್ನು ತಯಾರಿಸಲಾಗುತ್ತದೆ. ಬಹಳ ಹಿಂದಿನಕಾಲದಲ್ಲಿ ಈ ಕ್ರಮವಿರಲಿಲ್ಲ. ಒರಳು ಕಲ್ಲಿನಲ್ಲಿ ಭತ್ತವನ್ನುಹಾಕಿ, ಅದನ್ನು ಒನಕೆಯಿಂದ ಕುಟ್ಟಿ ಅಕ್ಕಿಯನ್ನು ತಯಾರಿಸಲಾಗುತ್ತಿತ್ತು!
ಹೆಚ್ಚು ಅಕ್ಕಿ ತಯಾರಿಸಬೇಕಿದ್ದಲ್ಲಿ ಒನಕೆಯ ಬದಲಿಗೆ ಒರಳಿನಲ್ಲಿ ಏತವನ್ನು ಅಳವಡಿಸಲಾಗುತ್ತಿತ್ತು. ಈ ರೀತಿ ಕುಟ್ಟಿ ತಯಾರಿಸಿದ ಅಕ್ಕಿಗೆ ’ಕೊಟ್ಟಣದಕ್ಕಿ’ ಎಂಬ ಹೆಸರಿತ್ತು. ಈ ಕ್ರಮದಲ್ಲಿ ಭತ್ತದ ಮೇಲಿನ ಹೊಟ್ಟನ್ನು ಮಾತ್ರ ಬೇರ್ಪಡಿಸಲಾಗುತ್ತಿತ್ತು. ಬತ್ತದೊಳಗಿನ ಅಕ್ಕಿಯು ನಸುಗೆಂಪುಬಣ್ಣದ್ದಾಗಿರುತ್ತದೆ. ಇದರಿಂದ ತಯಾರಿಸಿದ ಅನ್ನದಲ್ಲಿ ಹೆಚ್ಚಿನ ಪೋಷಕಾಂಶಗಳಿರುತ್ತಿತ್ತು. ರೋಗ ನಿರೋಧಕಶಕ್ತಿ ಹೆಚ್ಚಿರುತ್ತಿತ್ತು.
ಆದರೆ, ಈ ಅಕ್ಕಿಯನ್ನು ಬೇಯಿಸಿ ಮಾಡಿದ ಅನ್ನವು ಬಿಸಿಯಾಗಿರುವಾಗ ತಿನ್ನಲು ಸುಲಭವಾಗಿರುತ್ತಿತ್ತು. ಅನ್ನದ ಬಿಸಿ ಆರಿ ತಣ್ಣಗಾದಮೇಲೆ ಅದನ್ನು ತಿನ್ನುವುದು ಶ್ರಮದಕಾರ್ಯವಾಗಿತ್ತು! ಕಾಲಕ್ರಮದಲ್ಲಿ ಅಕ್ಕಿಯಮೇಲಿರುವ ಈ ನಸುಗೆಂಪು ಬಣ್ಣದ ತೌಡನ್ನು ಬೇರ್ಪಡಿಸಿ, ಅನ್ನವನ್ನು ಮೃದುಗೊಳಿಸುವ ಕ್ರಮ ರೂಢಿಗೆಬಂದಿತು.
ಹೊರಮೈಯ್ಯಿನಮೇಲಿರುವ ಹೊಟ್ಟನ್ನು ಕಳೆದುಕೊಂಡು, ಬಿಳಿಯಕಣ್ಣಕ್ಕೆ ತಿರುಗಿದ ಅಕ್ಕಿಯು ವ್ಯಕ್ತಿಯ ಶರೀರದ ಪೋಷಣೆಗೆ ಅತ್ಯಗತ್ಯವಾದ ಆಹಾರ ಸತ್ವವನ್ನು ಕಳೆದುಕೊಂಡಿತು! ಭತ್ತವನ್ನು ಕುಟ್ಟಿ, ತೌಡೆಲ್ಲವನ್ನೂ ನುಚ್ಚಕ್ಕಿಯಿಂದ ಬೇರ್ಪಡಿಸಿದನಂತರ ಅದನ್ನು ದನಕರುಗಳ ಆಹಾರವಾಗಿ ಬಳಸುವ ಕ್ರಮ ರೂಢಿಗೆ ಬಂದಿತು. ಪುಷ್ಟಿದಾಯಕವಾದ ಈ ಅಕ್ಕಿಯ ತೌಡನ್ನು ಸೇವಿಸುವ ದನಕರುಗಳು ಆರೋಗ್ಯಶಾಲಿಯಾದರೆ, ಸತ್ವಹೀನವಾದ ಅಕ್ಕಿಯನ್ನು ತಿನ್ನುವ ಮನುಷ್ಯರು ರೋಗದ ಮೊಟ್ಟೆಗಳಾದರು!! ಅಪೌಷ್ಟಿಕತೆಗೆ ಸಂಬಂಧಿಸಿದ ಹಲವಾರು ರೋಗರುಜಿನಗಳಿಗೆ ಮಾನವ ಶರೀರವು ಆಶ್ರಯತಾಣವಾಯಿತು! ಈ ವಿಚಾರ ಹಾಗಿರಲೀ, ಈಗ ಇದಕ್ಕೆ ಸಂಬಂಧಿಸಿದ ಅಣುವಿಜ್ಞಾನವನ್ನು ಕುರಿತ ಮಾಹಿತಿಯನ್ನು ಗಮನಿಸೋಣ.
ಮೇಲೆ ಸೂಚಿಸಿದಂತೆ ಭತ್ತವನ್ನು ಕುಟ್ಟಿದಾಗ, ದೊರೆಯುವ ಅಕ್ಕಿಯ ಲೆಕ್ಕ, ಆರೀತಿ ಅಕ್ಕಿಯನ್ನು ತಯಾರಿಸುವಾಗ ದೊರೆಯುವ ತೌಡಿನ ಲೆಕ್ಕ, ಈರೀತಿ ದೊರೆಯುವ ತೌಡನ್ನು ದನಕರುಕಳಿಗೆ ಉಣಿಸಿದಾಗ, ಉತ್ಪಾದನೆಯಾಗುವ ಹಾಲಿನ ಪ್ರಮಾಣ ಇತ್ಯಾದಿಗಳ ಲೆಕ್ಕವನ್ನು ಕರಾರುವಾಕ್ಕಾಗಿ ನೀಡುವ ಅಣುವಿಜ್ಞಾನವನ್ನು ಕುರಿತ ಮಾಹಿತಿಯು ಸಿರಿಭೂವಲಯದಲ್ಲಿ ಅಡಕವಾಗಿದೆ. ನೋಡಿ:
ಅಕ್ಕಿಯಕುಟ್ಟಲುಬರುವತೌಡೆಲ್ಲರ| ಚಿಕ್ಕನುಚ್ಚಕ್ಕಿಯಿಂಬಿಡಿಸಿ| ಅಕ್ಕಪಕ್ಕದಹಸುಕರುಗಳಿಗುಣಿಸುವ| ಅಕ್ಕಿಯಲೆಕ್ಕವದೆಂತು||
ಈ ಲೆಕ್ಕಾಚಾರವು ಇಲ್ಲಿಗೇ ಮುಗಿಯುವುದಿಲ್ಲ!! ಒಂದು ಅಗುಳು ಅನ್ನವನ್ನು ತಿಂದಾಗ ನಮ್ಮ ಶರೀರಕ್ಕೆ ಅದರಿಂದ ಒದಗುವ ಶಕ್ತಿಯ ಪ್ರಮಾಣವೆಷ್ಟು ಎಂಬುದನ್ನು ಪ್ರೀತಿಯಿಂದ ಹೇಳುವುದು ಹೇಗೆ? ಅನ್ನ ಹಾಗೂ ಚಿನ್ನದಲ್ಲಿ ಇರುವ ಭೇದದ ಮರ್ಮವನ್ನು ಚೆನ್ನಾಗಿ ಹೇಳುವುದು ಹೇಗೆ? ಎಂದೂ ಸಿರಿಭೂವಲಯವು ಸೂಚಿಸಿರುವುದಿದೆ! ನೋಡಿ:
” ಅನ್ನದಕಾಳೊಂದರಿಂಬಹಶಕ್ತಿಯ| ನನ್ನಿಯಿಂಪೇಳುವುದೆಂತು| ಅನಚಿನಗಳಲ್ಲಿರುವಭೇದದಮರ್ಮವ| ಚೆನ್ನಾಗಿಪೇಳುವುದೆಂತು||”
ಪದಾರ್ಥದ ಗಣಿತಾತ್ಮಕವಾದ ಲೆಕ್ಕಾಚಾರದಲ್ಲಿ ಬರುವ ಊಹೆ/ಅನುಮಾನ/ ಸಂದೇಹಗಳು ಲೆಕ್ಕವಿಡಲಾಗದಷ್ಟು ಇರುತ್ತವೆ! ಅಣುವಿನಲ್ಲಿ ಅಡಗಿರುವ ಜೀವ ವಿಜ್ಞಾನವನ್ನು ಹೇಳುವುದಕ್ಕೆ ಸಾಕಷ್ಟು ಕಾಲಾವಕಾಶಬೇಕಿರುತ್ತದೆ. ಅದನ್ನು ಒಂದು ಕ್ಷಣದಲ್ಲಿ ಹೇಳಾಲಾಗದು ಎಂದು ಸಿರಿಭೂವಲಯವು ಖಚಿತವಾಗಿ ಸೂಚಿಸಿರುವುದಿದೆ! ನೋಡಿ:
”ಗಣಿತಪ್ರಾರೂಪಣೆಯೊಳುಬರ್ಪದ್ರವ್ಯದ|ಗಣನೆಯನಂತವಿಕಲ್ಪ| ಅಣುವಿನೊಳಗಿರ್ಪಜೀವವಿಜ್ಞಾನವ| ಕ್ಷಣದೊಳ್ ಪೇಳಲಶಕ್ಯ||” ಇಂಥ ವಿಚಾರಗಳ ಸಾಕಷ್ಟು ಮಾಹಿತಿಗಳು ೯ ಖಂಡಗಳ ಸಿರಿಭೂವಲಯದ ಪ್ರಥಮಖಂಡದ ೫೯ ಅಧ್ಯಾಯಗಳ ಅಂತರ್ಸಾಹಿತ್ಯದಲ್ಲೇ ಸಾಕಷ್ಟು ಪ್ರಮಾಣದಲ್ಲಿ ಉಗಮವಾಗಿರುವುದನ್ನು ಕಂಡದ್ದಾಗಿದೆ. ಇವಾವುದೂ ಸಿರಿಭೂವಲಯದ ಸರಳ ಪರಿಚಯಕಾರನ ಸ್ವಕಪೋಲಕಲ್ಪಿತ ವಿಚಾರಗಳಲ್ಲವೆಂಬುದು ಖಚಿತ!
ಇದರೊಂದಿಗೆ ಇಲ್ಲಿ ಇನ್ನೂಒಂದು ಮಾಹಿತಿಯನ್ನು ಗಮನಿಸುವು ಅಗತ್ಯವಿದೆ.   ವೈದ್ಯಕೀಯಶಿಕ್ಷಣ ಪಡೆಯಲು ಹೋಗುವವರಿಗೆ ಗಣಿತಶಾಸ್ತ್ರ;  ಅಣುವಿಜ್ಞಾನದ  ಸಮರ್ಪಕ ಪರಿಚಯವಿರಲೇಬೇಕಾದುದು ಅಗತ್ಯವೆಂಬ ಮಾಹಿತಿಯನ್ನು ಆಧುನಿಕ ವಿಜ್ಞಾನಿಗಳು ರೂಪಿಸಿದ್ದೆಂದು ಕೆಲವರು ಭಾವಿಸಬಹುದು. ಆದರೆ ಈ ವಿಚಾರವನ್ನೂ ಸಿರಿಭೂವಲಯದ ಕವಿಯು ತನ್ನ ಕಾವ್ಯದಲ್ಲಿ ಸೂಚಿಸಿರುವುದಿದೆ!! ನೋಡಿ: ”ಗುಣವೃದ್ಧಿಯಾಗುವಗಣಿತವನರಿಯದೆ|ಅಣುಪರಮಾಣುಗಳ|ಅಣಕದಿಂಪುಟ್ಟುವವಿಪರೀತರೋಗದಾ|ಎಣಿಕೆಯನರಿಯಲಶಕ್ಯ||” ಎಂದು ಖಚಿತವಾಗಿ ನಮೂದಿಸಲಾಗಿದೆ!!  ಅಂದಮೇಲೆ ವೈದ್ಯಕೀಯದ ಅಧ್ಯಯನಮಾಡುವವರಿಗೆ ಗಣಿತ ಹಾಗೂ ಅಣುವಿಜ್ಞಾನದ ಪರಿಚಯವು ಅತ್ಯಗತ್ಯವೆಂಬ ಮಾಹಿತಿಯು ಪ್ರಾಚೀನಭಾರತೀಯರಿಗೆ ತಿಳಿದಿತ್ತೆಂಬುದರಲ್ಲಿ ಸಂದೇಹಕ್ಕೆ ಅವಕಾಶವೇಇಲ್ಲ!!! ಓದುಗರ ತಲೆಯಲ್ಲಿ ಇದನ್ನು ಕುರಿತು ಇನ್ನೂ ಸಂದೇಹವಿದ್ದಲ್ಲಿ ಮೂಲಕೃತಿಯಲ್ಲೇ ಈ ಮಾಹಿತಿಯ ವಿವರವನ್ನು ನೋಡಿ ಪರಿಶೀಲಿಸಬಹುದಾಗಿದೆ.
                                                                                                            -ಸಿರಿಭೂವಲಯದಸುಧಾರ್ಥಿ.

No comments:

Post a Comment