Wednesday 1 February 2023

ತಪಸ್ಸನ್ನು ಕುರಿತು ಸಿರಿಭೂವಲಯದ ಹೇಳಿಕೆ ಏನು ?

ತಪಸ್ಸನ್ನು ಕುರಿತು ಸಿರಿಭೂವಲಯದ ಹೇಳಿಕೆ ಏನು ?


ತಪಸ್ಸೆಂದರೆ, ದೇವರನ್ನು ಕುರಿತು  ಕಾಡಿನಲ್ಲಿ ಧ್ಯಾನಮಾಡುವುದೆಂಬ ವಿಚಾರವಿದೆ. ಆದರೆ,  ಮೋಕ್ಷಸಾಧನೆಗೆ ಅಡ್ಡಿಯಾಗಿರುವ ನಮ್ಮ ಪ್ರಾಚೀನ ಕರ್ಮಫಲಗಳನ್ನು ನಾಶಮಾಡಲು, ಸುಡಲು, ತಪಿಸಲು ಅನುಸರಿಸುವ ಕ್ರಮವನ್ನು ತಪಸ್ಸು ಎನ್ನಲಾಗುತ್ತದೆ. ನಮ್ಮ ದೇಹಾಂತರ್ಗತವಾದ ಆತ್ಮವು ಲಕ್ಷಾಂತರ ಜನ್ಮಗಳಲ್ಲಿ ಸಂಪಾದಿಸಿದ ಪಾಪಕರ್ಮದ ರಾಶಿಯ ಅರಿವು ನಮಗಿರುವುದಿಲ್ಲ!  ಅದು ಊಹಾತೀತವಾದಷ್ಟು ಅಗಾಧವಾದುದು.  ನಾವು ಮಾಡಿದ ಪುಣ್ಯಕಾರ್ಯಗಳ ಫಲವನ್ನು ನಾವು ’ಕೃಷ್ಣಾರ್ಪಣಮಸ್ತು’ ಎಂದು ಬೇರೆಯವರಿಗೆ ದಾನಮಾಡಲು  ಸಾಧ್ಯವಿದೆ. ಆದರೆ;  ಪಾಪಕರ್ಮಗಳ ಫಲಕ್ಕೆ ಅನುಭವಿಸಲೇಬೇಕಾದ  ’ಶಿಕ್ಷೆ’ ಯನ್ನು ನಮ್ಮ ದೇಹಾಂತರ್ಗತವಾದ ಆತ್ಮವೇ ಅನುಭವಿಸಬೇಕಾದುದು ವಿಧಿನಿಯಮ.  ಅದನ್ನು ಬೇರೆಯವರಿಗೆ ಕೊಡಲು ಸಾಧ್ಯವಿಲ್ಲ! ಆತ್ಮವು ದೇಹವನ್ನು ತ್ಯಜಿಸಿದನಂತರ ಅದು ಸಂಪಾದಿಸಿದ ಪಾಪ- ಪುಣ್ಯಗಳ  ಲೆಕ್ಕಹಾಕಿ, ಅವನ್ನು ಪರಸ್ಪರ ವಜಾಮಾಡಿ ಲೆಕ್ಕವನ್ನು ಸರಿದೂಗಿಸಲು  ಅವಕಾಶವಿಲ್ಲ. ಮುಂದೆ ಎಷ್ಟೋ ಜನ್ಮಗಳನ್ನೆತ್ತಿದರೂ ನಮ್ಮ ಪಾಪದ ರಾಶಿಯನ್ನು ಶಿಕ್ಷೆಯ ಮೂಲಕ ಅನುಭವಿಸಿ ಮುಗಿಸಲು; ನಾಶಮಾಡಲು ಸಾಧ್ಯವಿರುವುದಿಲ್ಲ. ಮಾನವ ಜನ್ಮದಲ್ಲಿ ಮಾತ್ರವೇ ನಮ್ಮ ಆತ್ಮವು ಪಾಪ-ಪುಣ್ಯಗಳ ಸಂಪಾದನೆ ಹಾಗೂ, ಪುಣ್ಯಫಲವನ್ನು  ಸತ್ಪಾತ್ರರಿಗೆ ದಾನಮಾಡುವುದು ಹಾಗೂ ಪಾಪರಾಶಿಯನ್ನು ಧ್ಯಾನ; ತಪಸ್ಸಿನಮೂಲಕ ತಪಿಸಿ, ನಾಶಮಾಡಲು ಸಾಧ್ಯವೆಂಬುದು   ಶಾಸ್ತ್ರವಚನ.  

ಈ ಕಾರಣದಿಂದಾಗಿ ವಿವೇಕಿಗಳು ಧ್ಯಾನ/ ತಪಸ್ಸಿನಲ್ಲಿ ತೊಡಗುತ್ತಾರೆ. ಈ ತಪಸ್ಸಿನಲ್ಲಿ  ಏಳು ವಿಧಗಳಿವೆ ಎಂಬುದನ್ನು ದ್ವಾರಕೆಯ ಶ್ರೀಕೃಷ್ಣನು ತನ್ನಣ್ಣ ನೇಮಿಯಿಂದ ತಿಳಿದಿದ್ದವಿಚಾರ ಹಾಗೂ ಉಗ್ರ; ದೀಪ್ತ; ಸಹತಪ್ತ;  ಮಹಾಘೋರ ಮುಂತಾದುವು ಬೇರೆ ಬೇರೆ ತಪೋಕ್ರಮಗಳೆಂಬ ಮಾಹ್ಗಿತಿಯು ಸಿರಿಭೂವಲಕಾವ್ಯದಲ್ಲಿ ಸೂಚಿತವಾಗಿದೆ. ಕಠಿಣತಪಸ್ಸು;  ಹಾಗೂ ಘೋರತಪಸ್ಸು ಎಂಬ ಪದಬಳಕೆಯನ್ನು  ಇಂದಿಗೂ  ಕಾಣಬಹುದು. 

ತಪಸ್ಸುಮಾಡುವವರ ಉದ್ದೇಶವು ಸಾತ್ವಿಕವಾಗಿದ್ದಾಗ, ಅವರ ಮುಖದಲ್ಲಿ ಶಾಂತತೆ; ತೇಜಸ್ಸು  ಹೊರಹೊಮ್ಮುತ್ತಿರುತ್ತದೆ. ಇದನ್ನು ದೀಪ್ತತಪಸ್ಸು ಎಂದು ಸೂಚಿಸುವುದಿದೆ. ( ವಸಿಷ್ಠ, ವಾಲ್ಮಿಕಿ ಮುಂತಾದವರು) ರಾಕ್ಷಸರು ಮಾಡುವ ತಪಸ್ಸು  ಘೋರ ಹಾಗೂ ಮಹಾಘೋರವಾಗಿರುತ್ತದೆ.  ತಪಸ್ಸುಮಾಡುವಾಗ ಅವರ ಮುಖದಲ್ಲಿ  ಶಂತತೆ ಹಾಗೂ  ಪ್ರಸನ್ನತೆಯ ಬದಲಿಗೆ ಕಾಠಿಣ್ಯ ಹಾಗೂ  ಕ್ರೌರ್ಯ ತುಂಬಿರುತ್ತದೆ. ಇದರಿಂದ ಲೋಕಹಾನಿಗೆ ಕಾರಣವಾಗುವುದು ಸಹಜ. (ಹಿರಣ್ಯಕಶಿಪು; ರಾವಣ ಮುಂತಾದವರು) ಹಲವಾರು ಋಷಿ; ಮುನಿಗಳ ಕಠಿಣ ತಪಸ್ಸು ಉಗ್ರ ತಪಸ್ಸು ಹಾಗೂ ಸಹತಪ್ತ ಮುಂತಾದ ತಪಸ್ಸುಗಳಿಂದ  ಅವರಿಗೆ ವ್ಯಕ್ತಿಗತ ಶಕ್ತಿ ಸಾಮರ್ಥ್ಯಗಳು ದೊರೆತರೂ  ಅದರಿಂದ ಲೋಕೋಪಕಾರವೂ ಆಗುತ್ತದೆ!! (ಜಮದಗ್ನಿ; ವಿಶ್ವಾಮಿತ್ರ;  ದೂರ್ವಾಸ ಮುಂತಾದವರು) ಇಂಥವರ ತಪಸ್ಸಿನ ಸಮಯದಲ್ಲಿ ಅವರ ಮುಖದಲ್ಲಿ ತೇಜಸ್ಸು ತುಂಬಿರುತ್ತದೆ. ಇವರಿಂದ ಲೋಕಕಲ್ಯಾಣವೂ ಆಗುತ್ತದೆ. ವೈಯಕ್ತಿಕವಾಗಿ  ಸುಧಾರ್ಥಿಯಂತೂ ಕಳೆದ ಮೂರುದಶಕಗಳಿಂದ ಸಿರಿಭೂವಲಯದ ಅಧ್ಯಯನ ಹಾಗೂ ಸರಳಪರಿಚಯದ ಪರಿಚಾರಿಕೆಯಲ್ಲಿ ತೊಡಗಿದ್ದಾನೆ. ಪುಣ್ಯ ಲಭಿಸದಿದ್ದರೂ ಪಾಪಸಂಚಯವಂತೂ ಆಗಿಲ್ಲವೆಂಬುದು ಅನುಭವವೇದ್ಯವಾಗಿದೆ. ಸಿರಿಭೂವಲಯದ ಸರಳಪರಿಚಯಕೃತಿಗಳನ್ನಾದರೂ ಓದುವಮೂಲಕ ನೀವೂ ಈ ಪ್ರಯೋಗದಲ್ಲ್ಲಿ ಭಾಗವಹಿಸಬಹುದಲ್ಲವೇ!?? 

                                                    ಸಿರಿಭೂವಲಯದಸುಧಾರ್ಥಿ ಹಾಸನ. ೭೬೭೬೪೭೪೮೭೨. .