Saturday 1 February 2020

ಶಾಸ್ತ್ರ ಮತ್ತು ವಿಜ್ಞಾನ


ಹಿಂದೆಲ್ಲ ನಮ್ಮ  ಸಾಮಾಜಿಕ ಜೀವನದಲ್ಲಿ ಶಾಸ್ತ್ರ ಮತ್ತು ಸಂಪ್ರದಾಯಗಳನ್ನು ಕುರಿತ ಮಾತುಗಳು ಕೇಳಿಬರುತ್ತಿದ್ದುವು. ಈಗ ಕಾಲಬದಲಾಗಿದೆ. ವ್ಯಕ್ತಿಜೀವನದ ಎಲ್ಲ ಕ್ಷೇತ್ರಗಳಲ್ಲೂ  ಆಧುನಿಕ ವಿಜ್ಞಾನವು ಆಕ್ರಮಣಮಾಡಿ; ಅವುಗಳನ್ನು ತನ್ನ ವಶಕ್ಕೆ ಪಡೆದಿದೆ.! ನಾವು ಮಾತನಾಡುವಾಗ ಬಳಸುವ ಪ್ರತಿಯೊಂದು ಪದಕ್ಕೂ ಹಲವಾರು ಅರ್ಥಗಳಿರುತ್ತವೆ. ಸಂದರ್ಭಕ್ಕೆ ಅನುಗುಣವಾಗಿ ಪ್ರತಿಯೊಂದು ಪದಕ್ಕೂ ನಾವು ಅರ್ಥವನ್ನು ಅನ್ವಯಿಸಿಕೊಳ್ಳಬೇಕಾಗುತ್ತದೆ.

ಶಾಸ್ತ್ರ ಎಂಬ ಪದಕ್ಕೆ ಸಂಪ್ರದಾಯ; ನಿಯಮ; ವಿಜ್ಞಾನ; ಮುಂತಾದ ಅರ್ಥಗಳಿವೆ. ವಿಜ್ಞಾನ ಎಂಬ ಪದಕ್ಕೆ ಶಾಸ್ತ್ರ; ಕ್ರಮಬದ್ಧವಾದ ತಿಳುವಳಿಕೆ; ವಿಶೇಷವಾದ ಜ್ಞಾನ; ಎಂಬ ಅರ್ಥವಿವರಣೆ ಇದೆ. ಆಂಗ್ಲಭಾಷೆಯಲ್ಲಿ ಸೈನ್ಸ್ ಎಂಬ ಪದಕ್ಕೆ ನಾಲೆಡ್ಜ್; (ತಿಳುವಳಿಕೆ) ಸಿಸ್ಟಮೆಟಿಕ್ ನಾಲೆಡ್ಜ್ (ಕ್ರಮಬದ್ಧವಾದ ತಿಳುವಳಿಕೆ) ಎಂಬ ಅರ್ಥವಿವರಣೆ ಇದೆ. ವಿಜ್ಞಾನಶಾಸ್ತ್ರ ಎಂಬ ಅರ್ಥವೂ ಬಳಕೆಯಲ್ಲಿದೆ. ಅಂದಮೇಲೆ; ಶಾಸ್ತ್ರ ಹಾಗೂ ವಿಜ್ಞಾನ ಎರಡೂ ಒಂದೇ ಎಂದಾಯಿತು! ಶಾಸ್ತ್ರವೆಂಬುದು ಭಾರತೀಯರು ಕಲ್ಪಿಸಿಕೊಂಡಿರುವ ಮೂಢನಂಬಿಕೆಗಳ ಕಂತೆ ಪುರಾಣವಾಗಿದೆ. ಆದರೆ, ವಿಜ್ಞಾನವೆಂಬುದು ಪಾಶ್ಚಿಮಾತ್ಯರು ಅಪಾರ ಬುದ್ಧಿಶಕ್ತಿಯಿಂದ ಪ್ರತ್ಯಕ್ಷ ಪ್ರಯೋಗಗಳ ಮೂಲಕ ಕಂಡುಕೊಂಡ ಸತ್ಯ ಸಂಗತಿಗಳಾಗಿವೆ ಎಂಬುದು ಸಾಮಾನ್ಯವಾಗಿ ವಿಜ್ಞಾನಾರಾಧಕರ ಭ್ರಮೆಯಾಗಿರುತ್ತದೆ.

ಶಾಸ್ತ್ರವನ್ನು ನಂಬಿದವರು; (ಶಾಸ್ತ್ರಿಗಳು) ವಿಜ್ಞಾನವನ್ನು ಅರಿತವರು (ವಿಜ್ಞಾನಿಗಳು) ಇಬ್ಬರೂ ಮಾತನ್ನು ನಿರಾಕರಿಸುವುದಿಲ್ಲ. ಆದರೆ ಇಂದಿನ ವಿಜ್ಞಾನದ ಆರಾಧಕರುಮಾತ್ರ ಯಾವಕಾರಣಕ್ಕೂ ಇವೆರಡೂ ಒಂದೇ ಎಂಬ ಮಾತನ್ನು ಒಪ್ಪುವುದೇ ಇಲ್ಲ! ಅವರ ದೃಷ್ಟಿಯಲ್ಲಿ ಪ್ರಾಚೀನ ಭಾರತದ ಶಾಸ್ತ್ರಜ್ಞಾನವು ಪ್ರಯೋಜನವಿಲ್ಲದುದು; ವಿಜ್ಞಾನ; ವ್ಶೆಜ್ಞಾನಿಕ ಎಂದರೆ ಸರ್ವಶಕ್ತವಾದ ಹೆಚ್ಚಿನ ಮೌಲ್ಯವುಳ್ಳ ವಿಚಾರ ಎಂದಾಗಿರುತ್ತದೆ!!

ಶಾಸ್ತ್ರಗಳು  ಸೂಚಿಸುವ ಮಾಹಿತಿಗಳಿಗೆ ನಮ್ಮ ಪ್ರಾಚೀನ ಋಷಿ ಮುನಿಗಳು ತಮ್ಮ ಏಕಾಗ್ರ ಚಿತ್ತದ  ತಪಸ್ಸಿನ ಮೂಲಕ ಪ್ರತ್ಯಕ್ಷವಾಗಿ ಕಂಡ ಅನುಭವವು ಆಧಾರವಾಗಿರುತ್ತದೆ. ಇವುಗಳಿಗೆಲ್ಲ ವೇದಗಳೇ ಮೂಲ ಆಕರವಾಗಿರುತ್ತದೆ. ವಿಜ್ಞಾನಕ್ಕೆ ವಿಜ್ಞಾನಿಗಳ ಸತತವಾದ ಪ್ರಯೋಗ ಹಾಗೂ ಇಂಥ ಪ್ರಯೋಗಗಳ ವಿವರ ಮತ್ತು ಅದರ ಪರಿಣಾಮಗಳನ್ನು ಕುರಿತ ಟಿಪ್ಪಣಿಗಳು ಮುಂದಿನವರಿಗೆ ಮೂಲ ಆಕರವಾಗುತ್ತವೆ.  ಶಾಸ್ತ್ರಗಳಿಗೆ ಮೂಲವಾದ ಸನಾತನ ಧರ್ಮವು ಅನಾದಿ ಅನಂತ. ಇದರ ಹೇಳಿಕೆಗಳನ್ನು ಯಾರೂ ಅಲ್ಲಗಳೆದು ಬದಲಿಸುವಂತಿಲ್ಲ. ವಿಜ್ಞಾನವು ಕೇವಲ 300-400 ವರ್ಷಗಳ ಈಚಿನ ಹಸುಗೂಸುಗಳು. ಇದರ ಹೇಳಿಕೆಗಳನ್ನು ಕಾಲಕ್ರಮದಲ್ಲಿ ಮುಂದಿನ ಮೇಧಾವಿಯು ನಿರಾಕರಿಸಿ ನೂತನವಾದ ಸಮರ್ಪಕವಾದ ಹೊಸ ವಿಚಾರವನ್ನು ಪ್ರತಿಪಾದಿಸಬಹುದು. (ವಿದ್ಯುದುಪಕರಣಗಳು; ದೂರವಾಣಿ; ದೂರಸಂಪರ್ಕ ಇತ್ಯಾದಿಗಳಲ್ಲಿ ನೂತನ ಆವಿಷ್ಕಾರದಿಂದ ಊಹಾತೀತವಾದ ಬದಲಾವಣೆಗಳಾಗಿರುವುದು ಸಹಜ ಸಂಗತಿ) ಆದರೆ, ವೇದಶಾಸ್ತ್ರ್ರಗಳಲ್ಲಿ ರೀತಿಯ ಹೊಸವಿಚಾರಗಳ ಪ್ರತಿಪಾದನೆಗೆ ಅವಕಾಶವೇ ಇಲ್ಲ!

ಪಂಚಭೂತಗಳಿಂದ ರೂಪುಗೊಂಡಿರುವ ಶರೀರವು ಶಾಶ್ವತವಾದುದಲ್ಲ. ಒಂದು ನಿರ್ದಿಷ್ಟ ಅವಧಿಯನಂತರ ಅದು ನಾಶವಾಗುವುದು ನಿಶ್ಚಿತ. ಆದರೆ ಶರೀರದಲ್ಲಿ ಅಂತರ್ಗತವಾಗಿರುವ ಆತ್ಮವು ಶಾಶ್ವತವಾದುದು. ಎಂದಿಗೂ ಇದು ನಾಶವಾಗುವ ವಸ್ತುವಲ್ಲ. ಆದರೆ ಇದು ನಮ್ಮ್ಮ ಕಣ್ಣಿಗೆ ಕಾಣಿಸುವ ವಸ್ತುವಲ್ಲ! ಶಾಸ್ತ್ರವು ಆತ್ಮದ ಇರವನ್ನು ಕಂಡುಕೊಂಡಿದೆ. ಶರೀರ ಹಾಗೂ ಆತ್ಮದ ನೆಮ್ಮದಿಗೆ; ಉನ್ನತಿಗೆ  ಅತ್ಯಗತ್ಯವಾದ ಮಾರ್ಗದರ್ಶನವನ್ನು ಶಾಸ್ತ್ರವು ಮಾಡುತ್ತದೆ. ಶರೀರವು ಕಣ್ಣಿಗೆ ಪ್ರತ್ಯಕ್ಷವಾಗಿ ಕಾಣುತ್ತದೆ. ಪ್ರತ್ಯಕ್ಷವಾಗಿ ಕಾಣುವುದನ್ನು ಮಾತ್ರವೇ ವಿಜ್ಞಾನವು ನಂಬುತ್ತದೆ. ಅದಕ್ಕೆ ಅಗತ್ಯವಾದ ಸೌಲಭ್ಯಗಳನ್ನು ನಿrmiಸಲು ಪ್ರಯೋಗಗಳನ್ನು ನಡೆಸಿ; ನೂತನವೆನಿಸುವ  ಹಲವಾರು ಸಾಧನ ಸಲಕರಣೆಗಳನ್ನು ರೂಪಿಸಿಕೊಡುತ್ತದೆ! ಆದರೆ, ಕಣ್ಣಿಗೆ ಕಾಣಿಸದ ಆತ್ಮದ ನೆಮ್ಮ್ಮದಿಗೆ, ಉನ್ನತಿಗೆ ವಿಜ್ಞಾನವು ಯಾವುದೇ ಮಾರ್ಗದರ್ಶನ ಮಾಡಲೂ ಶಕ್ತವಾಗಿಲ್ಲ!

ಆಧುನಿಕ ವಿಜ್ಞಾನವು ರೂಪಿಸಿರುವ ಅತ್ಯಾಧುನಿಕ ಸಾಧನ ಸಲಕರಣೆಗಳೆಲ್ಲವನ್ನೂ ಮೀರಿಸಿದ ಸೌಲಭ್ಯವನ್ನು ಪ್ರಾಚೀನ ಶಾಸ್ತ್ರ್ರಗಳ ಪರಿಣತರು ತಿಳಿದಿದ್ದರು. ಪಾರಮಾರ್ಥಕವಾಗಿ ಅವುಗಳು ನಿರುಪಯೋಗಿಯೆಂದು ಅವರು ಅವುಗಳನ್ನು ತ್ಯಜಿಸಿದ್ದರು. ಅವರ ಹೇಳಿಕೆಗಳ ಮೂಲಾಧಾದಲ್ಲಿಯೇ ಆಧುನಿಕ ವಿಜ್ಞಾನದ ತಳಪಾಯ ನಿಂತಿದೆ. ಕಾಲಕ್ರಮದಲ್ಲಿ ವಿಜ್ಞಾನದ ವಿಚಾರದಲ್ಲಿ ಮೇಧಾವಿಗಳಾದವರು ಅದನ್ನು ಪ್ರಾಯೋಗಿಕವಾಗಿ ಸಾಕ್ಷಾತ್ಕರಿಸಿಕೊಂಡಿದ್ದಾರೆ. ಅವರ ಮುಂದಿನ ಮೇಧಾವಿಗಳು ಅದನ್ನು ಇನ್ನೂ ಹೆಚ್ಚಾಗಿ ಅಭಿವೃದ್ಧಿ ಪಡಿಸುತ್ತಿರುವುದು  ನಿಜವಾದ ಸಂಗತಿಯಾಗಿದೆ.

ಮಾಹಿತಿಯನ್ನು ಖಚಿತವಾಗಿ ವಿವರಿಸುವ ಪ್ರಾಚೀನ ಸಾಹಿತ್ಯಕೃತಿಗಳು ನಮ್ಮ ಕನ್ನಡಭಾಷೆಯಲ್ಲಿಯೇ ಇನ್ನೂ ಜೀವಂತವಾಗಿವೆ. ಅವುಗಳನ್ನು ಶ್ರಮವಹಿಸಿ, ಅಧ್ಯಯನಮಾಡಿ ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ. ಸಮರ್ಪಕವಾಗಿ ಕಾರ್ಯ ನಡೆದಲ್ಲಿ ಶಾಸ್ತ್ರಕ್ಕೂ ವಿಜ್ಞಾನಕ್ಕೂ ಒಂದು ಹೊಸ ಅರ್ಥವ್ಯಾಪ್ತಿಯು ದಕ್ಕುತ್ತದೆ.

ಇದು ಕೇವಲ ವಾದಕ್ಕಾಗಿ ಸೂಚಿಸುವ ವಿಚಾರವಲ್ಲ. ಇಂದಿನ ವಿಜ್ಞಾನಿಗಳ ಅನುಭವ ಹಾಗೂ ಮಾಹಿತಿಗಳಿಗೆ ಮಾನ್ಯತೆ ನೀಡುವಂತಯೇ ಶಾಸ್ತ್ರ್ರಗಳು ನೀಡುವ ಮಾಹಿತಿಗಳ ವಿವರಗಳಿಗೂ ಮಾನ್ಯತೆ ನೀಡುವ ಮನೋಭಾವ ನಮ್ಮಲ್ಲಿ ಬೆಳೆಯಬೇಕಾಗಿದೆ. ಶಾಸ್ತ್ರ ಹಾಗೂ ವಿಜ್ಞಾನ ಎಂಬ ಎರಡು ಪದಗಳ ಅರ್ಥವೂ ಒಂದೇ ಆಗಿರುವುದರಿಂದ ಅದನ್ನು ನಿರಾಕರಿಸಲು ಸಾಧ್ಯವಿಲ್ಲ.

- ಸುಧಾರ್ಥಿ, ಹಾಸನ
*  *

No comments:

Post a Comment