Friday 12 February 2021

ವೇದವಿಜ್ಞಾನದ ಮುಂದುವರೆದ ಸಂತತಿಯೇ ಆಧುನಿಕ ವಿಜ್ಞಾನ!!!

ಪ್ರಾಚೀನವಾದ  ವೇದವಿಜ್ಞಾನವು  ಇಂದಿನ ’ಆಧುನಿಕವಿಜ್ಞಾನದ’  ಪರಿಧಿಯನ್ನೂ  ಮೀರಿ, ’ವಿಜ್ಞಾವನ್ನು ಪ್ರತಿಪಾದಿಸುತ್ತದೆ!  ಎಂದು ಹೇಳಿದರೆ, ಕೆಲವು ’ಆಧುನಿಕ  ವಿಜ್ಞಾನಾಂಧಕಾರ’ ಪೀಡಿತರಿಗೆ ಪಥ್ಯವಾಗದ ಸಂಗತಿಯೆಂಬುದು ನನಗೆ ಅರಿವಿದೆ.  ವಿಚಾರಶಾಲಿಗಳಾದ ಕೆಲವರು ವಿಜ್ಞಾನಿಗಳು ವೇದವಿಜ್ಞಾನದ  ಮಹತ್ವವನ್ನು ಗ್ರಹಿಸಿರುತ್ತಾರೆ.  ಆದರೆ, ಆಧುನಿಕ ವಿಜ್ಞಾನದ  ’ಅತ್ಯಾಕರ್ಷಕಫಲ’ ಗಳಿಂದ  ಸುಖ; ಸೌಲಭ್ಯ; ಹಾಗೂ ಸಂತೋಷವನ್ನು ಅನುಭವಿಸುತ್ತಿರುವ ಅಕ್ಷರಸ್ತರಾದ, ಅಥವಾ ಅನಕ್ಷರಸ್ತರಾದ ಜನಸಾಮಾನ್ಯರಲ್ಲಿ ’ವಿಜ್ಞಾನಾಂಧಕಾರ’ ತುಂಬಿರುತ್ತದೆ.  ಬಹುಪಾಲು ಮಂದೆಯಂಥ ಮಂದಿಯು ಮೇಲಿನ ಹೇಳಿಕೆಗೆ ಸಮ್ಮತಿಸುವುದಿಲ್ಲ. ಇದಕ್ಕೆ ಮುಖ್ಯವಾದ ಕಾರಣ: ಅವರಲ್ಲಿ ವೇದಗಳ ವಿಚಾರವಾಗಿ  ಸದಭಿಪ್ರಾಯ ಇಲ್ಲದಿರುವುದು! 

ಕಳೆದ ೩-೪ ಶತಮಾನಗಳಿಂದೀಚೆಗೆ  ಆಧುನಿಕವಿಜ್ಞಾನವು  ಊಹಾತೀತವಾದ  ಅಭಿವೃದ್ಧಿಯನ್ನು ಸಾಧಿಸಿ, ತಾನು ಜಗತ್ತನ್ನೇ  ಸರ್ವನಾಶಮಾಡುವೆನೆಂಬ ಬೆದರಿಕೆ ಹಾಕುವ ಹಂತಕ್ಕೆ ತಲುಪಿರುವುದು ಸರ್ವವೇದ್ಯ.  ಇಂಥ ಅಚ್ಚರಿಯ ಸಾಧನೆಯು  ಆಧುನಿಕವಿಜ್ಞಾನಕ್ಕೆ ಇದ್ದಕ್ಕಿದ್ದಂತೆಯೇ ಒಂದೇ ರಾತ್ರಿಯಲ್ಲಿ ಬಂದುದೇನಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕಾದುದು  ಅನಿವಾರ್ಯ!  ಆಧುನಿಕವಿಜ್ಞಾನದ ಸಾಧನೆಗಳು ದಿನದಿಂದ ದಿನಕ್ಕೆ ವಿಕಾಸಗೊಂಡು, ಹೊಸಹೊಸತಂತ್ರಜ್ಞಾನಗಳ ಆವಿಷ್ಕಾರವಾಗಿದೆ. ಇದಕ್ಕೆ ಇಂದಿನ ವಿಜ್ಞಾನಿಗಳು ಹಾಗೂ ತಂತ್ರಜ್ಞರು  ತಮ್ಮ ಹಿಂದಿನ ವಿಜ್ಞಾನಿಗಳು ಹಾಗೂ ತಂತ್ರಜ್ಞರು ದಾಖಲಿಸಿಟ್ಟುರುವ ವೈಜ್ಞಾನಿಕ ಪ್ರಯೋಗಗಳಿಗೆ ಸಂಬಂಧಿಸಿದ ’ಟಿಪ್ಪಣಿಗಳು’ ಮೂಲಕಾರಣವೆಂಬುದು ಸರ್ವವಿಧಿತ.  

ಈ ರೀತಿಯ ವೈಜ್ಞಾನಿಕ-ತಾಂತ್ರಿಕ ಅಭಿವೃದ್ಧಿಯದಿಸೆಯಲ್ಲಿ ಅಚ್ಚರಿಯ ಸಾಧನೆ ಸಾಧಿಸಿರುವ  ಅಣುವಿಜ್ಞಾನ, ವೈಮಾನಿಕ ಕ್ಷೇತ್ರ,  ಬಾಹ್ಯಾಂತರಿಕ್ಷಯಾನ, , ದೂರದರ್ಶನ,, ಗಣಕಯಂತ್ರಕ್ರಮ,   ದೂರವಾಣಿ  ಇತ್ಯಾದಿ  ಎಲ್ಲ ಕ್ಷೆತ್ರಗಳ ಅಚ್ಚರಿಯ ಸಾಧನೆಗಳಿಗೂ ಹಿಂದಿನ ಮೇಧಾವಿಗಳು ದಾಖಲಿಸಿಟ್ಟಿರುವ ’ಟಿಪ್ಪಣಿ’ಗಳು ನೆರವಾಗಿರುವುದು ನಿಶ್ಚಯ.  ಇವುಗಳ ಪೈಕಿ ’ದೂವಾಣಿಗೆ ಸಂಬಂಧಿಸಿದ ಮಾಹಿತಿಯನ್ನೇ ಗಮನಿಸೋಣ.   ’ಸ್ಥಿರದೂರವಾಣಿ ’ ಸಂಪರ್ಕದಲ್ಲಿ ಬಳಸುವ ಸಂಪರ್ಕಯಂತ್ರವು ಹಿಂದೆ  ಬಹಳ ತೂಕದ್ದಾಗಿತ್ತು.  ಅದರ ರಿಸೀವರನ್ನು ಎತ್ತಿ ಹಿಡಿದುಕೊಳ್ಳುವುದೇ ವಯಸ್ಸಾದ ಕೆಲವರಿಗೆ  ಕಷ್ಟದ ಕೆಲಸವಾಗಿತ್ತು. ಅಂದಿನ ಪರಿಸರದಲ್ಲಿ ಈ ದೂರಸಂಪರ್ಕ ಕ್ಷೇತ್ರದಲ್ಲಿ  ’ಚರದೂರವಾಣಿ’ ಯ ಕಲ್ಪನೆಯೂ ಇರಲಿಲ್ಲ!  ಮೇಧಾವಿಯೊಬ್ಬ ಈ ಸಾಧನೆಯಲ್ಲೂ ಸಿದ್ಧಿಪಡೆದ!

 ಒಂದು ಕೈಮುಷ್ಟಿಯಲ್ಲಿ ಹಿಡಿದು ಮತನಾಡಬಲ್ಲ ಚರದೂರವಾಣಿಯ ಅವತಾರವಾಯಿತು!!  ಅದರಲ್ಲಿ ಅಳವಡಿಸಿರುವ ಅತಿ ಸೂಕ್ಷ್ಮವಾದ ಕೀಲಿಮಣೆಯ ಗುಂಡಿಗಳನ್ನು ಒತ್ತುವಮೂಲಕ ಸಂಪರ್ಕ ಸಾಧಿಸುವಂತಾಯಿತು.  ಮುಂದಿನ ಮೇಧಾವಿಗಳು ಅದನ್ನು ಇನ್ನೂ ಹೆಚ್ಚು ಅಭಿವೃದ್ಧಿ ಪಡಿಸಿ, ಮೊಬೈಲ್ಲಿನ ತೆರೆಯಮೇಲೆ ಬೆರಳಿಟ್ಟು  ಅಕ್ಷರಗಳ ಕೀಲೀಮಣೆಯನ್ನು  ಪಡೆದು, ಅದನ್ನು ಒತ್ತುವ ಮೂಲಕ  ಬಯಸಿದ ವ್ಯಕ್ತಿಯೊಂದಿಗೆ ಸಂಪರ್ಕಸಾಧಿವಂತಾಯಿತು. ಕಪ್ಪು ಬಿಳುಲಿನ ದರ್ಷಕವು ಬದಲಾಗಿ, ವರ್ಣರಂಜಿತವಾದ ಆಕರ್ಷಕ ತೆರೆಯು ಬಳಕೆಗೆ ಬಂದು, ಹೆಚ್ಚು ಜನಪ್ರಿಯವಾದದ್ದು ಇತಿಹಾಸ! 

ಈಗ ಈ ಮೊಬೈಲ್ ಗಳ ಮೂಲಕ ಸಂಪರ್ಕಿತರಾದ ವ್ಯಕಿಗಳ  ವೀಡಿಯೋಚಿತ್ರಗಳೂ ಪರಸ್ಪರರಿಗೆ ದೊರೆಯುವಂತಾಗಿ ಅವರ ಭ್ರಮಾಜೀವನಕ್ಕೆ ಹೆಚ್ಚಿನ ಆಸರೆಯಾಯಿತು!  ಇಷ್ಟೆಲ್ಲ ಅನೂಹ್ಯವಾದ ಸಾಧನೆ ಹಾಗೂ ಸಿದ್ದಿಗೆ ಈ ಸಂಪರ್ಕ ಸಾಧನದ ಮೂಲ ಯಂತ್ರವನ್ನು ರೂಪಿಸಿದವನ ತಂತ್ರಜ್ಞಾನದ ಮಾರ್ಗದರ್ಷಕ  ಟಿಪ್ಪಣಿಗಳು ಪ್ರಮುಖಕಾರಣವೆಂಬುದನ್ನು ಯಾರೂ ಅಲ್ಲಗಳೆಯಲಾಗದು. 

ಇದೇಕ್ರಮದಲ್ಲಿ ಉಳಿದೆಲ್ಲ ಕ್ಷೇತ್ರಗಳ ಅಭಿವೃದ್ಧಿಗೂ  ಆಯಾಯಕ್ಷೇತ್ರಗಳ ಮೂಲಭೂತ ಸಂಶೋಧಕರ  ಸಂಬಂಧಿಸಿದ ’ಟಿಪ್ಪಣಿಗಳೇ’  ಪ್ರಮುಖ ಆಧಾರವಾಗಿರುತ್ತವೆ. ಮುಂದಿನವರ ಮೇಧಾಶಕ್ತಿಯು ಸಂಬಂಧಿಸಿದ ಕ್ಷೇತ್ರದಲ್ಲಿ ಅಸಾಧಾರಣವಾದ ಅಭಿವೃದ್ಧಿ ಸಾಧಿಸಲು ಪಾವಟಿಕೆಗಳಾಗಿರುತ್ತವೆ. ಇದು ಎಲ್ಲರೂ ಸಮ್ಮತಿಸಲೇ ಬೇಕಾದ ವಿಚಾರ.   ಇಂದಿನವರ  ಇಂಥ ಅನೂಹ್ಯವೆನಿಸಿರುವ ಸಾಧನೆಗಳ ಆವಿಷ್ಕಾರವು ನಿಜಕ್ಕೂ ಶ್ಲಾಘನೀಯವಾದದ್ದು. ಇದನ್ನೂ ಯಾರೂ ನಿರಾಕರಿಸುವಂತಿಲ್ಲ. 

ಅನಾದಿಯೂ, ಅನಂತವೂ, ಅಪುರುಷೇಯವೂಆದ ಭಾರತೀಯ ವೇದೋಪನಿಷತ್ತುಗಳಲ್ಲಿ ಅಡಕವಾಗಿರುವ ಇಂಥ ಸಾಧನ ಸಲಕರಣೆಗಳ ತಂತ್ರಜ್ಞಾನವು ಜನಸಾಮಾನ್ಯರ ಅರಿವಿಗೆ ನಿಲುಕದ್ದಾಗಿದೆ. ಮೇಧಾವಿಗಳಾದ, ಜಗತ್ಪಸಿದ್ಧಿಪಡೆದ ವಿಜ್ಞಾನಿಗಳು ಬಹಳ ಶ್ರಮಪಟ್ಟು ಈ ವೇದಾಂತರ್ಗತವಾದ ಅಧ್ಬುತ ವೈಜ್ಞಾನಿಕ ಸೂತ್ರಗಳನ್ನು ಅಧ್ಯಯನಮಾಡಿ, ಅವನ್ನು ಪ್ರಯೋಗಶಾಲೆಯಲ್ಲಿ ಪರೀಕ್ಷಿಸಿ, ತಮ್ಮ ಅನ್ವೇಷಣೆಯಲ್ಲಿ ಯಶಸ್ಸುಪಡೆದಿರುವರೆಂಬ ವಿಚಾರೆದಲ್ಲಿ ಸಂದೇಹಕ್ಕೆ ಅವಕಾಶವೇ ಇಲ್ಲ!! 

ವೇದಾಂತರ್ಗತವಾದ ರಹಸ್ಯಮಾಹಿತಿಗಳನ್ನು ಶ್ರಮವಹಿಸಿ, ಸಂಸ್ಕೃತಭಾಷೆಯ ಅಧ್ಯಯನದಮೂಲಕ ತಾವು ಅರಿತು, ಅದನ್ನು ತಮ್ಮ ಮಾತೃಭಾಷೆಯಲ್ಲಿ ಅನುವಾದಿಸಿ ಟಿಪ್ಪಣಿಗಳನ್ನು ಸಿದ್ಧಪಡಿಸಿಕೊಂಡ ಯಾವ ಮೇಧಾವಿಯೂ ಪ್ರಾಮಾಣಿಕವಾಗಿ ತನ್ನ ಸಾಧನೆಯ ಹಿಂದಿನ ತೆರೆಮರೆಯ ಮಾಹಿತಿಗಳನ್ನು ಬಹಿರಂಗಪಡಿಸಿದ್ದಿಲ್ಲ! ಇದು ಅವರವರ ಕಾಲಘಟ್ಟದ ಸಾಮಾಜಿಕ ಪರಿಸರ ಹಾಗೂ ವಿಜ್ಞಾನಕ್ಷೇತ್ರದ ಅನಿವಾರ್ಯ ಪದ್ಧತಿಯಾಗಿತ್ತು. ಆದರೂ ಕೆಲವಾರು ಪ್ರಸಿದ್ಧ ವಿಜಾನಿಗಳು ಭಾರತೀಯ ವೇದೋಪನಿಶತ್ತುಗಳ ’ಮಹತ್ವವನ್ನು’  ಕುರಿತು ಪ್ರಶಂಸಿಸಿರುವುದಿದೆ. ಆಸಕ್ತಿ ಇರುವವರ ಗಮನಕ್ಕೆ ಇದು ಬಾರದ್ದೇನಲ್ಲ. 

ಪ್ರಕೃತ ಈ ಬರಹದ ಕರ್ತೃವು ವಿಜ್ಞಾನಿಯಲ್ಲ, ವೇದವಿದ್ವಾಂಸನೂ ಅಲ್ಲ!! ಹಾಗಿರುವಲ್ಲಿ ಈತನು ಬರೆದಿರುವ ಬರಹದ ಮೌಲ್ಯ ಎಷ್ಟಿರಬಹುದು ಎಂದು ಸಾಮಾನ್ಯವಾಗಿ ವಿಚರಶಾಲಿಗಳೆಲ್ಲರಿಗೂ ಅನಿಸುವುದು ಸಹಜ.  ಅದನ್ನು ಈ ಬರಹಗಾರನೂ ಅನುಮೋದಿಸುತ್ತಾನೆ.  ಆದರೆ, ಕಳೆದ ಸುಮಾರು ೧೨೦೦ ವರ್ಷಗಳ ಹಿಂದೆ ರೂಪಿತವಾದ ಕನ್ನಡಭಾಷೆಯ ಒಂದು ಅತ್ಯಂತ ಅಚ್ಚರಿಯ ರಹಸ್ಯಮಯವಾದ ಶೈಲಿಯಕನ್ನಡ ’ಅಕ್ಷರ’ ಹಾಗೂ ’ಅಂಕಿಗಳ’ ರೂಪದ ಸಿರಿಭೂವಲಯವೆಂಬ ಹೆಸರಿನ ’ಸಿರಿಭೂವಲಯವೇದಾಂತ’ ಎಂಬ ಅನೂಹ್ಯವಾದ ಮಾಹಿತಿಗಳ ಆಗರವಾದ  ಕಾವ್ಯವನ್ನು ಈ ವ್ಯಕ್ತಿಯು ಸುಮಾರು ಮೂರುದಶಕಗಳಿಂದಲೂ ಅತ್ಯಂತ ಆಸಕ್ತಿ ಹಾಗೂ ಶ್ರದ್ಧೆಯಿಂದ ಪರಿಶೀಲಿಸಿ, ಅಧ್ಯಯನಮಾಡಿದ ಫಲವಾಗಿ ಸಾಮಾನ್ಯ ಸ್ಥಿತಿಯಲ್ಲಿ ಯಾರೊಬ್ಬರೂ ಸಮ್ಮತಿಸಲಾಗದ ಮಹಾನ್  ಮಾಹಿತಿಗಳು ಕಳೆದೊಂದು ದಶಕದಿಂದ ಈಚೆಗೆ  ಈ ಕಾವ್ಯದ ಸರಳಪರಿಚಯ ರೂಪದಲ್ಲಿ ಒಂಬತ್ತು ಕಿರುಹೊತ್ತಿಗೆಗಳಾಗಿ ಪ್ರಕಟವಾಗಲು  ಸಾಧ್ಯವಾಯಿತು. . 

ಇವುಗಳ ಸಂಕ್ಷಿಪ್ತ ಭಾವಾನುವಾದವು ಹಿಂದಿಭಾಷೆ ಹಾಗೂ ಆಂಗ್ಲಾಭಾಷೆಯಲ್ಲೂ ರೂಪಗೊಂಡಿವೆ. ( ಹಿಂದಿರೂಪಾಂತರ::  ಹಿಂದೀವಿದ್ವಾಂಸ ಸ್ವರ್ಗೀಯ ಎಸ್. ರಾಮಣ್ಣನವರು. ಆಂಗ್ಲಾಭಾವಾನುವಾದ: ಶಿವಮೊಗ್ಗೆಯ ಕವಿ.  ಸುರೇಶ್ ಅವರು) ಸಿರಿಭೂವಲಯದ ಕವಿಯು ೮ನೇ ಶತಮಾನದವನು.  ಸರ್ವಜ್ಞ ಸ್ವರೂಪಿ.  ಪಶುಸಂರಕ್ಷಣೆ, ಅಣುವಿಜ್ಞಾನ, ಆಯುರ್ವೇದ,  ವಿಮಾನಶಾಸ್ತ್ರ; ಬಹ್ಯಾಕಾಶಯಾನ, ಉಪಗ್ರಹತಂತ್ರಜ್ಞಾನ;  ಅಣುವಿಜ್ಞಾನ, ಗಣಿತಶಾಸ್ತ್ರ; ಗಣಕಯಂತ್ರಕ್ರಮ, ಸಂಗೀತ, ಸಾಹಿತ್ಯ, ನೃತ್ಯಶಾಸ್ತ್ರ ಇತ್ಯಾದಿ ಎಲ್ಲ ವಿಚಾರಗಳಲ್ಲೂ  ಎಲ್ಲ ಮಾಹಿತಿಗಳನ್ನೂ ತಿಳಿದಿದ್ದವನು. ಈ ಕಾರಣದಿಂದಾಗಿ ಈ ಸರಳಪರಿಚಯಕಾರನು ಈ ಸಿರಿಭೂವಲಯ ಕಾವ್ಯವನ್ನು "ಕನ್ನಡದ ವೇದ’ ಎಂದು ಭಾವಿಸಿದ್ದಾಗಿದೆ.  ಇಂಥ ಸಿರಿಭೂವಲಯದ ಕವಿಯು ಲೌಕಿಕ ವಿಚಾರಗಳಿಗೆ ಸಂಬಂಧಿಸಿದ ಯಾವುದೇ ವಿಚಾರಕ್ಕೂ ಮಹತ್ವವಿಲ್ಲವೆಂದು ನಿರ್ಧರಿಸಿ, ಅವುಗಳನ್ನು ಕಾಲಿನಿಂದೊದ್ದು, ಪಾರಮಾರ್ಥಿಕದೆಡೆಗೆ ಗಮನಹರಿಸಿದವನು.   ಜಗದಚ್ಚರಿಯ ತನ್ನ ಸಿರಿಭೂವಲಯ ಕಾವ್ಯವನ್ನು  ಅದರ ಮಹತ್ವಕ್ಕೆ ತಕ್ಕಂತೆ ’ಸಿರಿಭೂವಲಯವೇದಾಂತ’ ಎಂದು ಪ್ರಶಂಸಿಸಿದವನು.  ತನ್ನ ಮುಂದಿನ ಮೇಧಾವಿಗಳ ’ಪ್ರಕ್ಷಿಪ್ತ’ ವಿಚಾರಗಳಿಗೆ ಬಲಿಯಾಗಬಾರದೆಂದು ತನ್ನ ಕಾವ್ಯವನ್ನು ತಂಬಾ ಕ್ಲಿಷ್ಟಕರವಾದ ಚಂಕ್ರಬಂಧಶೈಲಿಯಲ್ಲಿ ರಚಿಸಿದ್ದಲ್ಲದೇ,  ಅದನ್ನು ಗಣಕಯಂತ್ರ ಕ್ರಮಕ್ಕೆ ಮೂಲವಾದ ಗಣಿತದ "ಜೋಡಿಯಂಕದ ಕೂಟ"  ಕ್ರಮದಲ್ಲಿ, ಅತ್ಯಂತ ನಿಗೂಢವಾಗಿ ರಚನೆಮಾಡಿ, ಜಗತ್ತಿನಲ್ಲಿ ನಾಶವಾಗದರೀತಿಯಲ್ಲಿ ಸಂರಕ್ಷಿಸಿದವನು!! 

ಈ ಮಹನ್ ಕಾವ್ಯದ ಅಧ್ಯಯನದಿಂದ ಯಾರುಬೇಕಾದರೂ, ವೇದಾಂತರ್ಗತವಾದ ಮಹತ್ವದ ಮಾಹಿತಿಗಳನ್ನು ಸರಳವಾದ ಕನ್ನಡ ಸಾಂಗತ್ಯರೂಪದಲ್ಲಿ ಅಭಾಸಮಾಡಬಹುದಾಗಿದೆ. ಅಪಾರವಾದ ತಾಳ್ಮೆ, ಭಕ್ತಿ ಹಾಗೂ ದೀರ್ಘಕಾಲಾವಧಿಯ ಅಧ್ಯಯನಫಲವಾಗಿ, ಈ ಕಾವ್ಯವನ್ನು ಕುರಿತಂತೆ ಅಮೂಲ್ಯವಾಗ ಮಾಹಿತಿಗಳನ್ನೊಂಳಗೊಂಡು, ಮೇಲೆಸೂಚಿಸಿದ ’ಸರಳಪರಿಚಯಕೃತಿ’ ಗಳು ರೂಪುಗೊಂಡಿವೆ. 

ವೇದಗಳು ಅಪುರುಷೇಯ ಎಂಬ ಪ್ರಾಚೀನ ನಿಲುವನ್ನೇ  ಹಿಂದಿನಿಂದಲೂ ಹಲವಾರು  ಮೇಧಾವಿಗಳು ನಿರಾಕರಿಸಿರುವುದಿದೆ. ಇಂಥ ಮಹತ್ತರವಾದ ವೇದಜ್ಞಾನವನ್ನು ನಾಶಮಾಡುವ ಸಾಹಸಕ್ಕೆ ಕೈಹಾಕಿದವರಿಗೂ ಜಗತ್ತಿನಲ್ಲಿ ಅಭಾವವಿಲ್ಲ! ಹಲವರು ಈ ಸಾಹಸಕ್ಕೆ ಕೈಹಾಕಿ ವಿಫಲರಾಗಿರುವುದಿದೆ!  ಆದರೆ,  ಇಂದಿನ ದಿನಗಳಲ್ಲಿ ಈ ವೇದಗಳ ವಿಚಾರವನ್ನು ಬಹಳ ಜಾಣ್ಮೆಯಿಂದ ಖಂಡಿಸಿ, ವೇದಾಭಿಮಾನಿಗಳನ್ನು ಕಂಗೆಡಿಸುವ ಪ್ರತಿಭಾಶಲಿಗಳು ಹೆಚ್ಚಾಗಿದ್ದಾರೆ! ವೇದಗಳ ನಿಜವಾದ ಸ್ವರೂಪವನ್ನರಿತವರೂ ಇಂಥ ’ಪ್ರತಿಭಾಶಾಲಿಗಳ’ ವಾದ ವೈಖರಿಯ ಎದುರು  ನಿರುತ್ತರರಾಗುವುದೂ ಇದೆ. ಆದರೆ, ಎಲ್ಲರು ನಿಲುವೂ ಒಂದೇ ರೀತಿಯದಲ್ಲ. ವೇದಗಳ ನಿಜವಾದ ರೂಪವನ್ನು ಖಚಿತವಾಗಿ ಕಂಡವರಾರೂ ಇಂಥ ಅಗ್ಗದ ವಾದ- ಪ್ರತಿವಾದಗಳಿಗೆ ಗಮನವೀಯುವುದಿಲ್ಲ.  ಇಂಥ ವಿಚಿತ್ರ ಪರಿಸರದಲ್ಲಿ ಈ ಬರಹವನ್ನು ರೂಪಿಸಲಾಗಿದೆ. !!!

ಯಾವುದೇ ವ್ಯಕ್ತಿಯ ವಿತಂಡವಾದಗಳನ್ನೂ ಇಲ್ಲಿ ಉಲ್ಲೇಖಿಸುವ ಅಗತ್ಯವಿಲ್ಲ. ಆದರೆ, ನಮ್ಮ ಕಣ್ಣೆದುರಿಗೆ ಪ್ರತ್ಯಕ್ಷವಾಗಿ ಕಾಣಿಸುವ  ಅಥವಾ ಭೂಮಂಡಲದ ಬೇರೆ ಪ್ರದೇಶಗಳ,  ಇಲ್ಲವೇ ನಮ್ಮ ಸೌರಮಂಡಲಕ್ಕೆ ಸೇರಿದ ಅತಿದೂರಲ್ಲಿ ನೆಲೆಗೊಂಡಿರುವ ಬೇರೆ ಬೇರೆ ಗ್ರಹಗಳಲ್ಲಿ ಎಲ್ಲೆಲ್ಲಿ ಹುಡುಕಿದರೂ ಈ ವೇದಗಳ ಹೇಳಿಕೆಯನ್ನು ಸಮರ್ಥಿಸುವ ದೇವಲೋಕ, ದೇವತೆಗಳು,  ಇತ್ಯಾದಿಗಳು  ಆಧುನಿಕವಿಜ್ಞಾನಕ್ಕೆ ಕಂಡುಬಂದಿಲ್ಲ,  ಅದರ ಬದಲಿಗೆ ವೇದಗಳನ್ನು ರಚಿಸಿದ ಹಲವಾರು ಋಷಿಗಳು ಮತ್ತು, ವೇದದ ವಿವರಣೆಯಲ್ಲಿ ಕಾಣಬರುವ ಹಲವಾರು ಭೂಪ್ರದೇಶಗಳ ವಿವರಣೆಯನ್ನು ನಾವು ಗಮನಿಸಬಹುದಷ್ಟೇ!  ಆದ್ದರಿಂದ ವೇದಗಳು ಮಾನವಕೃತವೇ ವಿನಃ ಅವು ’ಅಪೌರುಷೇಯ’ ಎಂಬುದಕ್ಕೆ ಯಾವುದೇ ಸಾಕ್ಷ್ಯವೂ ಇಲ್ಲ ಎಂದು ಕೆಲವರು ವಾದಿಸುವುದಿದೆ.   ಈ ವಾದವು ಕೆಲವು ವೇದಾಭಿಮಾನಿಗಳಿಗೂ ’ಸಮಂಜಸ’ ಅನಿಸುವುದು ಸಹಜ.  ಅಂದಮಾತ್ರಕ್ಕೆ ಇದು ಪ್ರಾಕೃತಿಕವಾದ ನಿಲುವಾಗಲು ಸಾಧ್ಯವಿಲ್ಲ!!!

ಜಗತ್ತೆಂದರೆ ಕೇವಲ ನಮ್ಮ ಸೌರಮಂಡಲಕ್ಕೆ ಸೇರಿದ ಭೂಮಿ ಹಾಗೂ ಇನ್ನುಳಿದ ಕೆಲವಾರು ಗ್ರಹಗಳೆಂಬ ಸಂಕುತ ವಿವರಣೆಯನ್ನು ವೇದಗಳು ಸಮರ್ಥಿಸುವುದಿಲ್ಲ.  ಬರಿಗಣ್ಣಿಗೆ ಕಾಣಿಸುವ ಆಕಾಶದ ವಿಸ್ತಾರವು ಎಷ್ಟೆಂಬುದನ್ನು ಅಳತೆಮಾಡಿರುವವರು ಯಾರೂ ಇಲ್ಲ! ನಮಗೆ ಅರ್ಥವಾಗದಿದ್ದರೂ ಅನುಭವಕ್ಕೆ ಬಂದಿರುವ ’ಕಾಲ’ ದ ನಿಜವಾದ ಪ್ರಮಾಣ ಎಷ್ಟೆಂಬುದನ್ನು ಅಳೆದವರು ಯಾರೂ ಇಲ್ಲ!! ಹಾಗಿರುವಲ್ಲಿ ಇಂಥ ಅಳತೆ ಮಾಡಲಾಗದ ಕಾಲ ಮತ್ತು ಆಕಾಶದ ವ್ಯಾಪ್ತಿಯಲ್ಲಿ ಅಡಗಿರುವ ಅಗೋಚರವಾದ ಹಲವಾರು ಸೌರಮಂಡಲಗಳಿಗೆ ಸೇರಿದ  ಜಗತ್ತನ್ನುಕುರಿತು ನಾವು ’ಅದುಇಲ್ಲವೇಇಲ್ಲ’ ಎಂದು ವಾದಿಸುವುದು ಸೂಕ್ತವಾದೀತೇ ಯೋಚಿಸಿರಿ.

 ಯಾವುದು ನಮ್ಮ ಕಣ್ಣಿಗೆ ಕಾಣಿಸುವುದೋ ಅದನ್ನು ಕುರಿತುಮಾತ್ರ ವಿವರವಾಗಿ ಸೂಚಿಸುವ ಸಾಮರ್ಥ್ಯವು ’ಆಧುನಿಕ ವಿಜ್ಞಾನಕ್ಕೆ’ ಇರುವ ಸೀಮಿತವಾದ ಶಕ್ತಿ ಎಂಬುದನ್ನು ವೇದ ಪರಂಪರೆಯರೂ ಒಪ್ಪುತ್ತಾರೆ. ಆದರೆ ನಮ್ಮ ಕಣ್ಣಿಗೆ ಅಗೂಚರವಾದ ಲೋಕಾತಂರಗಳ ಮಾಹಿತಿಯನ್ನು ತೋರಿಸಿಕೊಡುವುದೇ, ಅಪುರುಷೇಯವಾದ ವೇದಗಳ ಮುಖ್ಯ ಉದ್ದೇಶ ಎಂಬುದನ್ನು ಮಾತ್ರ ವೇದವಿರೋಧಿಗಳು ಒಪ್ಪುವುದಿಲ್ಲ!! 

 ಈ ಕಾರಣದಿಂದಾಗಿ, ಆಧುನಿಕವಿಜ್ಞಾನದ ವಿವರಗಳನ್ನು ಒಪ್ಪಿಕೊಳ್ಳುವಂತೆಯೇ,  ’ವೇದವಿಜ್ಞಾನದ’ ಹೇಳಿಕೆಗಳನ್ನೂ ಒಪ್ಪಿಕೊಳ್ಳುವುದು ಅನಿವಾರ್ಯ ಎಂಬ ನಿಲುವಿಗೆ ಎಲ್ಲರೂ ಬರಲೇ ಬೇಕಾಗಿದೆ.  ಇದಕ್ಕೆ ಮೂಲಕಾರಣ ಕೇವಲ ೩೦೦-೪೦೦ ವರ್ಷಗಳಿಂದೀಚಿನ ’ಆಧುನಿಕ’ ವಿಚಾರಧಾರೆಗಳಿಗೆ ಮೂಲಾಧಾರವಾಗಿರುವ , ಅನಾದಿಯೂ ಅನಂತವೂ ಆದ ವೇದ ವಿಜ್ಞಾನದ ಮಾಹಿತಿಗಳು ಹೆಚ್ಚು ಮಹತ್ವಪೂರ್ಣವಾದುವಾಗಿರುವುದಾಗಿದೆ. 

ವೇದಮೂಲದ ಮಾಹಿತಿಗಳಿಗೆ ಅನುಗುಣವಾಗಿ ರೂಪಾತಂತಗೊಂಡು, ನೂತನವಾಗಿ ರಚನೆಯಾಗಿರುವ ಮುಂದಿನ ದೈವಿಕ ಸಾಹಿತ್ಯವು ಕೆಲವಾರು ಅರ್ವಾಚೀನ ಮಾಹಿತಿಗಳನ್ನು ಕುರಿತು ಸೂಚಿಸುವುದು  ಸಾಮಾನ್ಯವಾದರೂ  ಅವುಗಳಲ್ಲಿ ಅಡಕವಾಗಿರುವ ವೇದೋಕ್ತವಾದ  ಹಲವರು ಮಾಹಿತಿಗಳನ್ನು ನಿರಾಕರಿಸುವಂತಿಲ್ಲ!! 

ಈ ದಿಸೆಯಲ್ಲಿ ಉಪನಿಷತ್ತುಗಳು ಹಾಗೂ  ಸರ್ವಶಕ್ತನನ್ನು ವಿವರಿಸುವ ’ಸಹಸ್ರನಾಮಗಳ’ ಪಾತ್ರವು ಪ್ರಮುಖವಾದುವು. ’ಲಲಿತಾಸಹಸ್ರನಾಮ’ ಗಳ ಸರಣಿಯಲ್ಲಿ ’ಅಖಿಲಾಂಡಕೋಟಿಬ್ರಹ್ಮಾಂಡನಾಯಕಿ’ ಎಂಬ ಹೆಸರೊಂದು ಬರುತ್ತದೆ.   ನಮ್ಮ ಬರಿಗಣ್ಣಿಗೆ ಕಾಣಿಸುವ ಅಥವಾ ಅದಕ್ಕೂ ಮೀರಿದ ಭೂಪ್ರದೇಶಗಳು, ವಿದೇಶಗಳು. ಬೇರೇಬೇರೆ ಗ್ರಹಗಳನ್ನೊಂಳಗೊಂಡ ಒಂದು ಸೂರ್ಯಮಂಡಳದ,  ಒಂದು ಬ್ರಹ್ಮಾಂಡದ ವಿಚಾರವೇ ನಮಗೆ ಸರಿಯಾಗಿ ತಿಳಿಯದಿರುವಲ್ಲಿ, ಒಂದೆರಡು ಕೋಟಿಯಲ್ಲ! ಅಖಿಲಾಂಡ ಕೋಟಿ ಸಂಖ್ಯೆಯಲ್ಲಿರುವ ಬ್ರಹ್ಮಾಂಡಗಳ ಅಸ್ಥಿತ್ವವನ್ನು ಅತ್ಯಂತ ಸಾಮಾನ್ಯರಾದ ನಾವುಗಳು ನಿರಾಕರಿಸಲು ಹೇಗೆಸಾಧ್ಯವಾದೀತು ?

 ಆರೀತಿ ನಿರಾಕರಿಸುವುದು ಉದ್ಧಟತನವಾಗುವುದಲ್ಲವೇ??  ನಮ್ಮಕಣ್ಣಿಗೆ ಕಾಣಿಸದ, ನಾವು ನಂಬಲಾಗದ  ಹಲವಾರು ಲೋಕಗಳು; ಹಲವಾರು ದೇವತೆಗಳು, ಅವರಿಗೆ ಒಡೆಯರಾದ ಹಲವಾರು ಇಂದ್ರರು; ಇಂದ್ರಲೋಕಗಳು, ಇಂದ್ರಭವನಗಳು, ಮುಂತಾಗುವುಗಳ ಪ್ರತ್ಯಕ್ಷ ವರದಿಯನ್ನು ಸಿರಿಭೂವಲಯದ ಕವಿಯು ಖಚಿತವಾಗಿ ವಿವರಿಸಿರುವುದಿದೆ!  ಈ ಗಾಗಲೇ ಸೂಚಿಸಿರುವಂತೆ ನಮ್ಮ ಬಾಹ್ಯ ಚಕ್ಷುವಿಗೆ -ನಮ್ಮ ಪಂಚೇಂದ್ರಿಅಗಲಲ್ಲಿ ಒಂದಾದ ಹೊರಗಣ್ಣಿಗೆ ಕಾಣಿಸುವಂಥ ಲೌಕಿಕಮಾಹಿತಿಗಳನ್ನು ಮಾತ್ರವೇ ಆಧುನಿಕ ವಿಜ್ಞಾನವು ನಮಗೆ ಸಾಕ್ಷಾತ್ಕರಿಸಿ ಕೊಡಬಲ್ಲುದು.  ನಮ್ಮ ಹೊರಗಣ್ಣಿಗೆ ಕಾಣಿಸದ -ಅಂತರ್ದೃಷ್ಟಿಗೆಮಾತ್ರ ಗೋಚರವಾಗಬಲ್ಲ ಮಾಹಿತಿಗಳನ್ನೂ, ಲೋಕಗಳನ್ನೂ, ವಿಸ್ತು ವಿಷಯ ಹಾಗೂ ವ್ಯಕ್ತಿ ವಿಶೇಷಗಳನ್ನೂ ವೇದೋಪನಿಷತ್ತುಗಳು ನಮಗೆ ಸಾಕ್ಷಾತ್ಕರಿಸ್ಸಬಲ್ಲವು. ಇಂದಿನ ಆಧುನಿಕ ವಿಜ್ಞಾನಕ್ಕೆ ತನ್ನ ಪ್ರಯೋಗಗಳನ್ನು ನಡೆಸಲು ಸಾಧನ ಸಲಕರಣೆಗಳು (ಹಾರ್ಡ್ ವೇರ್) ಅತ್ಯವಶ್ಯಕ.  ಕಣ್ಣಿಗೆ ಕಾಣಿಸದ ಲೋಕಾಂತರಗಳ ವಿಚಾರಗಳನ್ನರಿಯಲು ನಮ್ಮ ಪ್ರಾಚೀನಋಷಿಗಳಿಗೆ ಇಂಥ ಸಾಧನ ಸಲಕರಣೆಗಳ ನೆರವು ಅಗತ್ಯವಿರಲಿಲ್ಲ.  ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಅವರು ತಮ್ಮ ಬೌತಿಕದೇಹವನ್ನು ಇಲ್ಲಿಯೇ ಬಿಟ್ಟು, ಸೂಕ್ಷ್ಮಶರೀರದಿಂದ  ಮನೋವೇಗದಲ್ಲಿ ಲೋಕಾಂತರಗಳ ಪ್ರವಾಸಮಾಡಿ ತಮ್ಮ ಕಾರ್ಯ ಪೂರೈಸಿಕೊಳ್ಳುವ ಸಾಮರ್ಥ್ಯ ಅವರಿಗಿತ್ತು .  ಇಂದಿಗೂ ಕೆಲವು ಯೋಗಿಗಳು ಈ ಕಾರ್ಯವನ್ನು ನಿರ್ವಹಿಸುವುದಿದೆ. ಹಾಗಿರುವಲ್ಲಿ ೧೨೦೦ ವರ್ಷಗಳಷ್ಟು ಅಗಾಧ ಕಾಲಘಟ್ಟದ ಹಿಂದೆ ಜೀವಿಸಿದ್ದ ಕುಮುದೇಂದುಮುನಿಯು ಇಂಥ ಅಲೌಕಿ ಸಾಮರ್ಥ್ಯಹೊಂದಿರುವುದು ಅಸಂಭವವೇನಲ್ಲ.  ಬ್ರಾಹ್ಮಣರು ಆಚರಿಸುವ ಸಂಧ್ಯಾವಂದನೆಯಲ್ಲಿ ಇದಕ್ಕೆ ಸಂಬಂಧಿಸಿದ ಮಂತ್ರದ ಪಳೆಯುಳಿಕೆಯು ಇನ್ನೂ ಉಳಿದುಬಂದಿರುವುದಿದೆ!  ಅದನ್ನೆಲ್ಲ ನಾವು ನಂಬುದುವುದಿಲ್ಲ. ಅದೆಲ್ಲವೂ ವಂಚನೆಯಜಾಲಗಳು ಎಂದು ವಾದಿಸುವವರನ್ನು ಯಾರು ತಾನೇ  ಸುಧಾರಿಸಲು ಸಾಧ್ಯವಿದೆ!?  

  ವೇದಗಳ ವಿಚಾರವನ್ನೇ ನಾವು ಮಾನ್ಯಮಾಡುವುದಿಲ್ಲವೆಂದಮೇಲೆ ಇನ್ನು ’ಸಹಸ್ರನಾಮಗಳ’ ಕಥೆಗಳಿಗೆ ಯಾರು ಕಿವಿಗೊಡುತ್ತಾರೆ? ಎಂದೂ ವಾದಿಸಬಹುದು.  ವೇದೋಕ್ತಕ್ರಮದಲ್ಲಿ ಮುಂದಿನ ಬ್ರಹ್ಮಾಂಡದ ಸೃಷ್ಟಿಗೆ ಅಗತ್ಯವಾದ ಮೂಲದ್ರವ್ಯಗಳನ್ನು ಲೋಕಾಕಾಶವು ಕಳೆದುಹೋಗಲು ಬಿಡದೇ, ತನ್ನಲ್ಲಿ ರಕ್ಷಿಸಿಕೊಂಡಿರುತ್ತದೆ’ ಎಂಬ ಗಹನವಾದ ವಿಚಾರವನ್ನು;  ಮಹತ್ತರವಾದ ಜ್ಞಾನವನ್ನು ಸಿರಿಭೂವಲಯವು ಸೂಚಿಸಿರುವುದಿದೆ.  ವೇದಗಳೆಂಬುವವು  ಅನಾದಿಯೂ, ಅನಂತವೂ  ಆದ ಅಖಿಲಾಂಡಕೋಟಿಬ್ರಹ್ಮಾಂಡಗಳ  ಸೃಷ್ಠಿ, ಸ್ಥಿತಿ, ಲಯಗಳಿಗೆ  ಸಂಬಂಧಿಸಿದ,  ಹಾಗೂ ಇಂಥ ಅಪಾರ ಬ್ರಹ್ಮಾಂಡಗಳಲ್ಲಿ ಜೀವಿಸುವ ಸಕಲ ಜೀವರಾಶಿಯೂ ಕಡ್ಡಾಯವಾಗಿ ಅನುಸರಿಸಲೇ ಬೇಕಾದ  ಒಂದು ಮಹತ್ತರವಾದ ’ಸಂವಿಧಾನ’  ಯಾವುದೇ ಸವಿಧಾನವಿರಲೀ, ಯುಗಧರ್ಮಕ್ಕೆ ಅನುಗುಣವಾಗಿ  ಕೆಲವೊಂದು ಬದಲಾವಣೆಗಳನ್ನು ಅಳವಡಿಸಿಕೊಳ್ಳಲೇ ಬೇಕಾದುದು ಅನಿವಾರ್ಯ.  ಈ ಅನಿವಾರ್ಯತೆಗೆ ಅನುಗುಣವಾಗಿಯೇ ಜಗತ್ತಿನ ಮೂಲ ಸೃಷ್ಟಿಯಾದದಂದಿನಿಂದ ಇದುವರೆವಿಗೂ  ಸಾವಿರಾರು  ಚತುರ್ಯುಗಗಳ ಚಕ್ರದಲ್ಲಿ ೨೮ ಜನ  ’ವ್ಯಾಸ’ ಪದವಿಯನ್ನು ಅಲಂಕರಿಸಿದವರು, ಆಯಾಯಾ ಯುಗಧರ್ಮಕ್ಕೆ ಅನುಸಾರವಾಗಿ,  ನಿಸರ್ಗದ ನಿಯಮಕ್ಕೆ ಬದ್ಧವಾಗಿ (ನಿಯತಿಯ ಆಣತಿಗನುಗುಣವಾಗಿ)  ವೇದಗಳ ರಾಶಿಯನ್ನು ವಿಂಗಡಿಸುವ ಕಾರ್ಯ ನಿರ್ವಹಿಸುತ್ತಾರೆ.  ಅದರಂತೆ ಮುಂದಿನವರು ಅದನ್ನು  ಪಾಲಿಸುತ್ತಾರೆ.  

ಈಗ ನಡೆಯುತ್ತಿರುವುದು  ೨೮ನೇ ವ್ಯಾಸಮಹರ್ಷಿ ಕೃಷ್ಣದ್ವೈಪಾಯನನು  ಪರಿಷ್ಕರಿಸಿದ ವೇದಗಳ ಆವೃತ್ತಿ. ಈ ಕಾರ್ಯವು  ಜಗತ್ತಿನ ಸಮರ್ಪಕ ಪರಿಪಾಲನೆಯ ಅತಿ ದೀರ್ಘಕಾಲೀನ ಮೇಲ್ವಿಚಾರಕರಾದ ಸಪ್ತರ್ಷಿಗಳ ಮಂಡಳಿಯ  ಸಮ್ಮತಿಯಂತೆ ನಡೆಯಬೇಕೇ ವಿನಃ  ಯಾರೊಬ್ಬ ಮೇಧಾವಿಯೂ ತನ್ನಿಚ್ಛೆಯಂತೆ  ಮಾಡುವ ರಚನೆ ಅಥಾ ಬದಲಾವಣೆಯ ಕಾರ್ಯವಲ್ಲ ಎಂಬುದನ್ನು ನಾವು ಗಮನದಲ್ಲಿರಿಸಿಕೊಲ್ಳಬೇಕಾದುದು ಅತ್ಯವಶ್ಯಕ.  ಆಗಮಾತ್ರವೇ ವೇದಗಳ ಪ್ರಚೀನತೆ  ಹಾಗೂ  ಪ್ರಾಮಣ್ಯವನ್ನು ಪ್ರಶ್ನಿಸುವ ಸಾಧ್ಯತೆ  ಇರುವುದಿಲ್ಲ.  ಇದು ಕೇವಲ ನಮ್ಮ ಸೌರಮಂಡಲದ  ಜಗತ್ತಿಗೆಮಾತ್ರ ಸಂಬಂಧಿಸಿದ್ದಲ್ಲ.  ಹಲವಾರು ಕೋಟಿ ಬ್ರಹ್ಮಾಂಡಗಳ ಸೃಷ್ಟಿ, ಸ್ಥಿತಿ, ಲಯಗಳಿಗೂ ಸಂಬಂಧಿಸಿದ ವಿಶಾಲ ವ್ಯಾಪ್ತಿಯ ನಿಯಮ  ಎಂಬುದನ್ನು ಯಾರೂ ಮರೆಯಬಾರದು. 

ಇಂಥ ಅಗಾಧಕಾಲವಧಿಯ  ವಿಶಾಲತಳಹದಿಯ  ’ವೇದ’ ಸಮುದಾಯವನ್ನು  ಯುಗಪರಿವರ್ತನೆಯ ನಿಯಮಾನುಸರವಾಗಿ ೨೮ನೇ  ಬಾರಿಗೆ ಪುನರ್ವಿಂಗಡಣೆಮಾಡಿದ  ಕೃಷ್ಣದ್ವೈಪಯನನು  ತನ್ನ ಕಾರ್ಯದಲ್ಲಿ ಸುಮಾರು ಮೂರುಸಾವಿರ ವರ್ಷಗಳನ್ನು ಸವೆಸಿದ ಕಾಲಘಟ್ಟದಲ್ಲಿ  ಅಂದರೆ, ಇಂದಿಗೆ  ಸುಮಾರು ೧೨೦೦ ವರ್ಷಗಳ ಹಿಂದೆ ಕುಮುದೇಂದುಮುನಿಯು ತನ್ನ ಸರ್ವಜ್ಞತ್ವದ ಬಲದಿಂದ ತ್ರಿಕಾಲಜ್ಞಾನಹೊಂದಿದವನಾಗಿ  ’ಆದಿವ್ಯಾಸನ’ ಕುರಿತು ತನ್ನ ಸಿರಿಭೂವಲಯಕಾವ್ಯದಲ್ಲಿ ಹೆಸರೆತ್ತಿರುವುದಿದೆ. . ಅತಿ ಹೆಚ್ಚುದೀರ್ಘಕಾಲ ದೇಹಧಾರಣೆಮಾಡಿಕೊಳ್ಳುತ್ತಿದ್ದ  ಪ್ರಾಚೀನ ಋಷಿಗಳ ವಿಚಾರ ಊಹಿಸಲೂ ಅಗದಷ್ಟು  ಹಿಂದಿನದು. ಹಾಗಿರುವಲ್ಲಿ  ’ಆದಿವ್ಯಾಸ’ ನ ಕಾಲ  ಯಾವುದೆಂಬುದನ್ನು  ಊಹಿಸಿ, ನಿರ್ಧರಿಸಿಕೊಳ್ಳಲು ಸಾಧ್ಯವಿಲ್ಲ!!! ಹಾಗಿರುವಲ್ಲಿ ಅವರೆಲ್ಲರೂ ಇದ್ದದ್ದೇ ಸುಳ್ಳು ಎಂದು ನಿರ್ಧರಿಸುವ ಅಧಿಕಾರ ನಮಗೆಲ್ಲಿದೇ!?

ಸಿರಿಭೂವಲಯವೆಂಬ ಕಾವ್ಯರಚಿಸಿದ ಕುಮುದೇಂದುವೆಂಬ ಮಹಾನ್ ಶಕ್ತಿಯು ೧೨೦೦ ವರ್ಷಗಳಾದರೂ ತನ್ನ ಮಹೋನ್ನತ  ಕಾವ್ಯದಿಂದಾಗಿ  ಇನ್ನೂ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಜೀವಂತವಾಗಿದ್ದಾನೆ. ಈಗ ಪ್ರಚಲಿತವಿರುವ ಹಿಂದಿನಕಾಲದ ಕೆಲವು  ಕವಿ-ಕವಯಿತ್ರಿಯರನ್ನು ಬಿಟ್ಟರೆ, ಕನ್ನಡನಾಡಿನಾದ್ಯತವೂ ಪ್ರಖ್ಯಾತರಾಗಿದ್ದ ಹಲವಾರು ಬರಹಗಾರರು ಈಗಾಗಲೇ ತೆರೆಮರೆಗೆ ಸರಿದದ್ದಾಗಿದೆ!  ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೇ ಒಂದುಕಾಲದಲ್ಲಿ ತಮಿಳರ ಪ್ರಾಭಲ್ಯವು ಹೆಚ್ಚಾಗಿ,  ಕನ್ನಡ ಸಾಹಿತ್ಯ, ಸಂಗೀತ, ಸಂಸ್ಕೃತಿಯು ಹೇಳಹೆಸರಿಲ್ಲದಂತಾಗುವ ಪರಿಸರ ನಿರ್ಮಾಣವಾಗಿತ್ತು!  ಅಂಥ ಪರಿಸರದಲ್ಲಿ ಕನ್ನಡಿಗರಲ್ಲಿ ಓದುವ ಹವ್ಯಾಸವನ್ನು ಜೀವಂತಗೊಳಿಸಿದ  ಮಹಾನ್ ಚೇತನ ಅನಕೃ.  ಅವರ ಹೆಸರೇ ಇಂದಿನ ಯುವಜನತೆಗೆ  ತಿಳಿಯದ್ದು!!  ಹಾಗಿರುವಲ್ಲಿ ಅದೆಷ್ಟುಜನ  ’ಪ್ರಖ್ಯಾತ ಕನ್ನಡ ಬರಗಾರರು ’ ಮುಂದೆ ಕುಮುದೇಂದುವಿನಂತೆ ದೀರ್ಘಕಾಲ  ಜೀವಂತವಿದ್ದಾರು!?  ಆದರೂ, ಇಂಥವರ ಹೆಸರು  ಚಿರಸ್ಥಾಯಿಯಾಗದಿದ್ದ ಮಾತ್ರಕ್ಕೆ,  ಅವರು ಹುಟ್ಟಿ, ಬೆಳೆದು, ಸಾಹಿತ್ಯಕೃಷಿಮಾಡಿ, ಕಾಲವಶರಾದದ್ದೇ ಸುಳ್ಳೆಂದು ಮುಂದೆ ಯಾರಾದರೂ ನಿರ್ಧರಿಸಲು ಸಾಧ್ಯವೇ!?  ಇಂಥವೆಲ್ಲ ಸಾಮಾನ್ಯ ಸಂಗತಿಗಾನ್ನು ಮೀರಿದ್ದು ’ವೇದ’ ಗಳ ವಿಚಾರ. ಅದನ್ನು ಕುರಿತು ಅವಹೇಳನಕಾರಿಯಾಗಿ  ಮಾತನಾಡುವುದು ಯಾರಿಗೂ ಶೋಭೆತರುವುದಲ್ಲ; ಶ್ರೇಯಸ್ಸನ್ನುಂಟುಮಾಡುವದೂ ಅಲ್ಲ. 

 ವ್ಯಕ್ತಿಜೀವನದ ಮುನ್ನಡೆಯ ಹಾದಿಯಲ್ಲಿ ಅತಗತ್ಯವಾದುದು. .’ಜ್ಞಾನ’  ಜ್ಞಾನವಿಲ್ಲದವನು ಪ್ರಜ್ಞಾಹೀನನಾಗಿ ಇದ್ದಲ್ಲಿಯೇ ಬಿದ್ದಿರುತ್ತಾನೆಂಬುದು ಸರ್ವವೇದ್ಯ. ೧೨೦೦ವರ್ಷಗಳ ಹಿಂದೆ ಮಹಾನ್ ಜ್ಞಾನಿಯಾಗಿದ್ದ ದಿಗಂಬರ ಜೈನಸಂಪ್ರದಾಯದ ಯತಿ ಕುಮುದೇಂದುವು ವೈದೀಕ ಸಂಪ್ರದಾಯಕ್ಕೆ ಸೇರಿದ ಸಕಲ ಮಾಹಿತಿಗಳನ್ನೂ ಸೂಕ್ತವಾಗಿ ಸಮರ್ಥಿಸಿರುವ ಮಹಾ ಮಹಿಮನಾಗಿದ್ದಾನೆ.   "ಜಗತ್ತಿನ ಎಲ್ಲರೀತಿಯ ಜ್ಞಾನಕ್ಕೂ ಋಗ್ವೇದವೇ ಮೂಲಆಕರ" ಎಂಬ ಖಚಿತವಾದ ಮಾಹಿತಿಯನ್ನು ಸಿರಿಭೂವಲಯದ ಕವಿಯು ಸೂಚಿಸಿರುವುದಿದೆ. 

೧) ಮಾನವರೆಲ್ಲರಿಗೂ ಒಂದೇ ಧರ್ಮ ಅದು  ’ಜೀವಧರ್ಮ’ ಎಂಬುದಾಗಿಯೂ,  ೨) ಜಗತ್ತಿನಲ್ಲಿ ನಡೆಯುವ ಯಾವುದೇ ಘಟನೆಯೂ ಆಕಸ್ಮಿಕವಾಗಿ ಸಂಭವಿಸುವುದಿಲ್ಲ; ಎಲ್ಲವೂ ಪೂರ್ವಭಾವಿಯಾಗಿ; ಸಂಬಂಧಿಸಿಗವರ ಕರ್ಮಾನುಸಾರವಾಗಿ;  ಗಣಿತಾತ್ಮಕವಾಗಿಯೇ ಸಂಭವಿಸುತ್ತವೆ. ೩) ಜಗತ್ತಿನಲ್ಲಿರುವ ಹುಟ್ಟು-ಸಾವು; ಸುಖ-ದುಃಖ;  ಪಾಪ-ಪುಣ್ಯ, ಒಳಿತು- ಕೆಡಕು; ಶೀಲ- ಅಶ್ಲೀಲ;  ಪ್ರೀತಿ- ದ್ವೇಶ; ಲಾಭ-ನಷ್ಟ; ಹಗಲು- ರಾತ್ರಿ; ಕಪ್ಪು ಬಿಳುಪು;  ಹಿಂಸೆ-ಅಹಿಂಸೆ; ಕರುಣೆ- ಕ್ರೌರ್ಯ ಇತ್ಯಾದಿ ದ್ವಂದ್ವಗಳೆಲ್ಲವೂ ಜಗತ್ತಿನಲ್ಲಿ ಸಮಸಮವಾಗಿವೆ. ಇದರಲ್ಲಿ ಎಲ್ಲರಿಗೂ ಸಮವಾದ ಪಾಲಿದೆ.  ಎಂಬ ನಾಲ್ಕು ಮೂಲಭೂತವಾದ ವಿಚಾರವನ್ನು ಸಿರಿಭೂವಲಯವು ಪ್ರಧಾನವಾಗಿ  ಪ್ರತಿಪಾದಿಸುತ್ತದೆ.  ಕೆಲವರು ಇದನ್ನೂ ವಿರೋಧಿಸಬಹುದು. 

 ಯಾವುದೇ ತಪ್ಪಿಲ್ಲದಿದ್ದರೂ,   ಕೆಲವರು ಜೀವಮಾನಪೂರ್ತ ಕಷ್ಟ; ನಷ್ಟ ಹಾಗೂ ಯಾತನೆಯನ್ನು ಅನುಭವಿಸುವುದನ್ನು ಕಾಣುತ್ತೇವೆ. ಕೆಲವರು  ಎಲ್ಲರೀತಿಯ ಅವ್ಯವಹಾರಗಳನ್ನು ನಡೆಸಿಯೂ ತಮ್ಮ ಜೀವಮಾನಪೂರ್ತ  ಸುಖ; ಲಾಭ ಹಾಗೂ ಸಂತೋಷವನ್ನೇ ಅನುಭವಿಸುತ್ತಾರೆ. ಇದರಲ್ಲಿ ಸಮಾನತೆಯ ವಿಚಾರವೆಲ್ಲಿ ಬಂತು!? ಎಂದು ವಾದಿಸುವುದಿದೆ. 

 ಯಾವುದೇ ವ್ಯಕ್ತಿಯ ಯಾವುದೇ ಜೀವನಸ್ಥಿತಿಗೂ ಅಗೋಚರವಾದ ದೈವೀಶಕ್ತಿಯೆಂಬುದು ಪ್ರತ್ಯಕ್ಷ ಕಾರಣವಲ್ಲ! ಸಂಬಂಧಿಸಿದ ದೇಹಾಂತರ್ಗತವಾದ  ’ಆತ್ಮವು’ ತನ್ನ ಪೂವಜನ್ಮಗಳಲ್ಲಿ ಸಂಪಾದಿಸಿದ ’ಕರ್ಮಫಲದಿಂದಾಗಿಯೇ’ ಈ ರೀತಿಯ ವಿರೋಧಾಭಾಸಗಳು ಉಂಟಾಗುತ್ತವೆ ಎಂಬುದನ್ನು  ನಮ್ಮ ಪ್ರಾಚೀನ ಶಾಸ್ತ್ರಗ್ರಂಥಗಳು ಸರಳವಾಗಿ, ಸ್ಪಷ್ಟವಾಗಿ ವಿವರಿಸಿರುವುದಿದೆ. ಅದನ್ನು ಗಮನವಿಟ್ಟು ಅರಿಯದೇ, ಮನಸೋಇಚ್ಛೆ ವಾದಿಸುವುದರಿಂದ ನಮ್ಮ ಮುಂದಿನ ಜೀವನವು ಇನ್ನಷ್ಟು ದುರ್ಗಮವಾಗುವುದೆಂಬುದನ್ನು ಎಲ್ಲರೂ ಅರಿಯಬೇಕಿದೆ.

 ಅಂಥ ಅರಿವನ್ನು ಹೊಂದಲು ಎಲ್ಲರಿಗೂ ಗುರುಕೃಪೆ ದೊರೆಯಲೆಂದು  ಆಶಿಸುತ್ತೇನೆ. ನಿಮಗೆ ಆಸಕ್ತಿ ಇದ್ದು ಈ ಬರಹವನ್ನು ಪೂರ್ಣವಾಗಿ  ಓದಿದರೆ; ಓದಿದ ಮಾಹಿತಿಯು ನಿಮಗೆ ಸೂಕ್ತವೆನಿಸಿದರೆ, ಈ ಜಾಲತಾಣದಲ್ಲಿ ಬೇರೆಯವರಿಗೂ ಇದು ಲಭ್ಯವಾಗುವಂತೆ ಹಂಚಿಕೊಳ್ಳಿರಿ. ಇಲ್ಲವಾದಲ್ಲಿ ನಿಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥಮಾಡಿದ್ದಕ್ಕೆ ಈ ಬರಹಗಾರನನ್ನು ಕ್ಷಮಿಸುವ ಕೃಪೆಮಾಡಬೇಕಾಗಿ ವಿನಂತಿ.

 ಇದರೊಂದಿಗೆ ಕೊನೆಯದಾಗಿ ಒದು ಮಾತು.  ತೆಂಗಿನಮರವನ್ನೇರಲು ಬಾರದ ವ್ಯಕ್ತಿಯೊಬ್ಬನನ್ನು ತೆಂಗಿನ ಮರಹತ್ತಿಸಲು  ಸಹಾಯಮಾಡುವುದೆಂದರೆ, ನೆಲದಮೇಲೆನಿಂತವರು ತಮ್ಮ ಕೈಗಳಿಗೆ ನಿಲುಕುವಷ್ಟು ಎರ್ರರಕ್ಕೆ ಅವನ ಕಾಲಿಗೆ ಆಸರೆನೀಡಿ, ಮೇಲೇರಲು ಸಹಾಯಮಾಡಬಹುದು, ಅಲ್ಲಿಂದ ಮುಂದೆ ಮೇಲಕ್ಕೇರುವುದು  ಆ ವ್ಯಕ್ತಿಯ ಶಕ್ತಿ ಸಾಮ್ರ್ಥ್ಯಕ್ಕೆ ಸೇರಿದ್ದು. ಶಕ್ತಿಯಿದ್ದು ಸಾಧ್ಯವಾದರೆ, ಆತನು ಮೇಲೇರಿ ಮರದಿಂದ ಎಳನೀರು ಕಿತ್ತು, ಕುಡಿದು, ಸಂತೋಷಿಸಬಹುದು, ಇಲ್ಲವಾದಲ್ಲಿ ಕೆಳಗೆಬಿದ್ದು, ಕೈಕಾಲುಗಳಿಗೆ ಊನ ಮಾಡಿಕೊಳಬಹುದು. ಇದು ಸಂಬಂಧಿದ ವ್ಯಕ್ತಿಯ ವಿವೇಚನೆಗೆ ಬಿಟ್ಟಸಂಗತಿಯಾಗಿರುತ್ತದೆ. 

*  *  *