Friday 29 May 2020

ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆಭಾಗ: ೧.


ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆಭಾಗ: ೧.

೧)** ಕೃತಿಕರ್ತೃವನ್ನು ಕುರಿತು**

ಕ್ರಿ. ಶ. ೮೦೦ ರ ಸುಮಾರಿನಲ್ಲಿ ಕುಮುದೇಂದುಮುನಿಯು ರಚಿಸಿರುವ ಕನ್ನಡ ಅಂಕಕಾವ್ಯ ಸಿರಿಭೂವಲಯದ ಅಕ್ಷರ ಅವತರಣಿಕೆಯನ್ನು  ಬೆಂಗಳೂರಿನ ಸರ್ವಾರ್ಥಸಿದ್ಧಿ ಸಂಘದವರು ೧೯೫೩ ಹಾಗೂ ೧೯೫೫ ರಲ್ಲಿ ಪ್ರಕಟಿಸಿದ್ದರೂ ಈ ಕಾವ್ಯದ ರಚನೆಯು ಸಾಮಾನ್ಯ ಓದುಗರಿರಲೀ, ವಿದ್ವಾಂಸರಿಗೂ ಓದಲು ಸಾಧ್ಯವಾಗದ ಜಟಿಲವಾದ ರಚಾನಾಕ್ರಮವನ್ನು ಹೊಂದಿದ್ದ ಕಾರಣದಿಂದಾಗಿ ಅದೊಂದು ’ಕಬ್ಬಿಣದ ಕಡಲೆ’ ಎಂಬ ಅಪಖ್ಯಾತಿಗೆ ತುತ್ತಾಗಿ, ಕತ್ತಲಕೋಣೆಯನ್ನು ಸೇರಿತ್ತು. 
ಈ ಸಿರಿಭೂವಲಯಕಾವ್ಯವನ್ನು ಸಾಮಾನ್ಯ ಓದುಗರ ಆಲೋಚನೆಗೆ ನಿಲುಕುವಂತೆ  ಸರಳವಾಗಿ ಪರಿಚಯಿಸುವ ದಿಸೆಯಲ್ಲಿ ಹಾಸನದ ಸುಧಾರ್ಥಿಯು ಬೇರೆ ಬೇರೆ ಸ್ತರದಲ್ಲಿ ೧೧ ಪರಿಚಯ ಕೃತಿಗಳನ್ನು ರೂಪಿಸಿದ್ದಾಗಿದೆ.  ಸುಮಾರು ೩೦೦೦ ಪುಟಗಳಿಗೂ ಹೆಚ್ಚಿನ ವ್ಯಾಪ್ತಿಹೊಂದಿರುವ ಅವುಗಳನ್ನು ಓದುವುದೂ ಇಂದಿನ ಸಾಹಿತ್ಯಾಭ್ಯಾಸಿಗಳಿಗೆ  ಶ್ರಮದ ಕಾರ್ಯ. ಈ ಕಾರಣದಿಂದಾಗಿ ಅವುಗಳ ಸಂಕ್ಷಿಪ್ತ ಪರಿಚಯವನ್ನು ಈ ಲೇಖನಮಾಲೆಯ ರೂಪದಲ್ಲಿ ಇಲ್ಲಿನ ಓದುಗರಿಗೆ ಒದಗಿಸುವ ಕಾರ್ಯಕ್ಕೆ ಕೈಹಾಕಿದ್ದೇನೆ. ಆಸಕ್ತಿ ಇರುವ ಕೆಲವರಿಗಾದರೂ ಈ ಪ್ರಯತ್ನವು ಉಪಯುಕ್ತವಾದೀತೆಂಬ ನಂಬಿಕೆ ನನಗಿದೆ.
ಸುಧಾರ್ಥಿಯು ಪ್ರಾರಂಭಿಸಿದ ಸಿರಿಭೂವಲಯದ ಸರಳ ಪರಿಚಯಕೃತಿಗಳಪೈಕಿ ಮೊದಲನೆಯದಾದ  ’ಸರ್ವಭಾಷಾಮಯೀಭಾಷಾ ಸಿರಿಭೂವಲಯಸಾರ’  ಎಂಬ ಕೃತಿಯು ೨೦೧೦ರಲ್ಲಿ ಹುಬ್ಬಳ್ಳಿಯಲ್ಲಿ ಪ್ರಕಟವಾಯಿತು.
ಈ ಸರಳಪರಿಚಯಕೃತಿಯ ಲೇಖಕ ಸುಧಾರ್ಥಿಯವರು ’ಅನಂತ ಕೀಬೋರ್ಡಿನ ’  ನಿರೂಪಕ ಸ್ವರ್ಗೀಯ ಕೆ. ಅನಂತಸುಬ್ಬರಾಯರ ಅಭಿಮಾನಿ. ಸಿರಿಭೂವಲಯಕಾವ್ಯದ ಆಳವಾದ ಪರಿಚಯ ಹೊಂದಿದ್ದ ಕೆ. ಅನಂತಸುಬ್ಬರಾಯರು  ಅದರ ರಚನೆಯ ಸ್ವರೂಪವನ್ನು ಕುರಿತು ಸುಧಾರ್ಥಿಗೆ ಸಾಕಷ್ಟು ಮಾಹಿತಿಗಳನ್ನು ವಿವರಿಸಿ, ಈ ಕಾವ್ಯವನ್ನು ಸರಳವಾಗಿ ಪರಿಚಯಿಸುವ ಕಾರ್ಯಕ್ಕೆ ಪ್ರೇರೇಪಿಸಿದವರು.
ಈ ಮಹನೀಯರು ನೀಡಿದ ಸಮರ್ಥ ಮಾರ್ಗದರ್ಶನವನ್ನು  ಮನನ ಮಾಡಿಕೊಂಡು ಸುಮಾರು ೨೭ ವರ್ಷಗಳಕಾಲ ಏಕಾಂಗಿಯಾಗಿ ಈ ವಿಸ್ಮಯಕಾರಿ ಕಾವ್ಯದ ಅಧ್ಯಯನನಡೆಸಿ,  ಸಿರಿಭೂವಲಯಕಾವ್ಯಕ್ಕೆ ಸಂಬಂಧಿಸಿದಂತೆ  ಕಳೆದ ೬೫ ವರ್ಷಗಳಿಂದ ನಡೆದಿರುವ, ನಡೆಯಿತೆಂದು ದಾಖಲಾಗಿರುವ, ನಡೆಯಬೇಕಾಗಿದ್ದ ಹಾಗೂ ಮುಂದೆ ನಡೆಯಬೇಕಿರುವ ಚಟುವಟಿಕೆಗಳನ್ನು ಕುರಿತು ಡೆಮಿ ೧/೪ ಅಳತೆಯ ಸುಮಾರು ೪೫೦ ಪುಟಗಳ ವ್ಯಾಪ್ತಿಯಲ್ಲಿ ಬಹಳ ವಿಸ್ತಾರವಾದ  ಸರಳ ಪರಿಚಯವನ್ನು ರೂಪಿಸಲಾಗಿದೆ.   ಈ ಬರಹಗಳಲ್ಲಿ ತುಂಬಾ ಕಠಿಣವಾದ ಪದಗಳನ್ನು ಬಳಸಿ ಈ ಪರಿಚಯಕಾರನು  ವಿವರಣೆಗಳನ್ನು ನೀಡಿರುವುದಿದೆ.  ಅವುಗಳ ಪೈಕಿ ಕೆಲವೊಂದು ಪ್ರಮುಖ ಮಾಹಿತಿಗಳನ್ನು ಕುರಿತು ನೀವು ಇಲ್ಲಿ ಸಂಕ್ಷಿಪ್ತವಾದ ಮಾಹಿತಿಯನ್ನು ನೋಡಲಿರುವಿರಿ.
 ಮೂಲತಃ ತುಮಕೂರುಜಿಲ್ಲೆಯ ಹೊನ್ನವಳ್ಳಿ ಎಂಬ ಗ್ರಾಮದವರು ಕಂದಚಾರ್   ರಾಮಸ್ವಾಮಯ್ಯನವರು.   ಅರಸೀಕೆರೆಯ ’ದಾಸಪ್ಪಾ ದಿ ಗ್ರೇಟ್’ ಅವರ ಮಗಳು ವೆಂಕಟಲಕ್ಷಮ್ಮ ಹಾಗೂ  ಶ್ರೀಕಂಠಯ್ಯ ದಂಪತಿಗಳ  ಮಗಳು ಶ್ರೀಮತಿ ನರಸಮ್ಮನವರು ಈ ರಾಮಸ್ವಾಮಯ್ಯನವರ ಧರ್ಮಪತ್ನಿ.  ಈ ದಂಪತಿಗಳ ಮಗನಾಗಿ ಹಾಸನ ನಗರದಲ್ಲಿ ಜನಿಸಿದ ಕೆ.ಆರ್. ಶಂಕರನಾರಾಯಣನಿಗೆ ಚಿಕ್ಕಂದಿನಿಂದಲೂ ಕನ್ನಡಸಾಹಿತ್ಯದಲ್ಲಿ ಆಸಕ್ತಿ.  ಹಾಸನದಲ್ಲಿ ಪುರಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಸಮಯದಲ್ಲೇ ಕನ್ನಡ ಬೆರಳಚ್ಚುಯಂತ್ರ ಶಿಲ್ಪಿ ಕೆ. ಅನಂತಸುಬ್ಬರಾಯರ ಪರಿಚಯ. 
ಶಾಲಾಶಿಕ್ಷಣ ಪೂರೈಸಿದನಂತರ, ಹಾಸನದಲ್ಲೇ ನೂತನವಾಗಿ ಪ್ರಾರಂಭವಾದ ’ಕೈಗಾರಿಕಾ ತರಬೇತಿ ಕೇಂದ್ರ’ದಲ್ಲಿ (ಐ. ಟಿ.ಸಿ) ತರಬೇತಿ.  ೧೯೬೫ರಲ್ಲಿ ಬೆಂಗಳೂರಿಗೆ ವಲಸೆ. ಬೆಂಗಳೂರಿನ ಭಾರತೀಯ ದೂರವಾಣಿ ಕಾರ್ಖಾನೆಯಲ್ಲಿ (ಐ.ಟಿ.ಐ)  ಉದ್ಯೋಗ.  ಬೆಂಗಳೂರು ಸೇರಿದಮೇಲೆ ಸಾಹಿತ್ಯ ಕ್ಷೇತ್ರದ ಹಿರಿಯ ಚೇತನಗಳಾದ ತಿ. ತಾ ಶರ್ಮರು, ಡಾ|| ಅ.ನ. ಕೃ, ಎಸ್. ಕೆ. ಕರೀಖಾನ್, ಟಿ. ಕೇಶವಭಟ್ಟ, ಡಾ|| ಎಸ್. ಎಲ್. ಭೈರಪ್ಪ,  ನಾಡಿಗೇರ್ ಕೃಷ್ಣರಾಯರು,  ಎಂ.ಕೆ. ಇಂದಿರಾ, ಚಿ.ನ, ಮಂಗಳ ಮುಂತಾದವರೊಂದಿಗೆ  ಹೆಚ್ಚಿನ ಪರಿಚಯ. ಇದರಿಂದಾಗಿ ವ್ಯಕ್ತಿಜೀವನದಲ್ಲಿ ಸಾಕಷ್ಟು ಪರಿಷ್ಕಾರ.  ಈ ದಿಸೆಯಲ್ಲಿ ಶ್ರೀ. ಪರಮಾನಂದಭಾರತೀ ಸ್ವಾಮಿಗಳ ಯುಕ್ತ ಮಾರ್ಗದರ್ಶನ.
ಈ ಹಿಂದೆಯೇ ಕೆಲವಾರು  ನಿಯತಕಾಲಿಕಗಳಿಗೆ ಲೇಖನಗಳ ರಚನೆಗಾಗಿ ’ಸುಧಾರ್ಥಿ’ ಎಂಬ ಕಾವ್ಯನಾಮದ  ಆಯ್ಕೆಯಾಗಿತ್ತು.  ಕವನ, ನಾಟಕ, ವಿಮರ್ಶೆ, ಕಾದಂಬರಿ, ಜೀವನಚರಿತ್ರೆ, ಸಂದರ್ಶನಗಳು, ಧಾರ್ಮಿಕ ವಿಚಾರಗಳು, ಗಾದೆಗಳು  ಇತ್ಯಾದಿ ವಿವಿಧ ಪ್ರಾಕಾರಗಳಿಗೆ ಸೇರಿದ ೧೧ ಕೃತಿಗಳ ರಚನೆ, ಹಾಗೂ ಪ್ರಕಟಣೆ.
 ಅನಂತಸುಬ್ಬರಾಯರ ಪರಿಚಯದಿಂದ  ಸಿರಿಭೂವಲಯ ಕಾವ್ಯದ ಸಂಪರ್ಕ.  ಸಿರಿಭೂವಲಯಕುರಿತು ಅಧ್ಯಯನ ಹಾಗೂ ಅರಳಪರಿಚಯಕ್ಕಾಗಿ ಅವರಿಂದ ಒತ್ತಾಯ.  ಆ ವೇಳೆಗಾಗಲೇ ಕಾಲವಶರಾಗಿದ್ದ  ಕರ್ಲಮಂಗಲಂ ಶ್ರೀಕಂಠಯ್ಯನವರ ಪರೋಕ್ಷ ಪರಿಚಯ.  ಅನಂತಸುಬ್ಬರಾಯರ ಕಾಲಾನಂತರ ಅವರ ಸ್ಮಾರಕಸಂಸ್ಥೆಯಾಗಿ  ಬೆಂಗಳೂರಿನಲ್ಲಿ ’ಅನಂತಪ್ರಕಾಶನ’  ಸ್ಥಾಪಿಸಿ, ಒಂದು ದಶಕದಕಾಲ ಅದರ ಯಶಸ್ವೀ ನಿರ್ವಹಣೆ. ಈತ ರೂಪಿಸಿದ ’ಸಂಜೆಗತ್ತಲು’ ಎಂಬ ಐತಿಹಾಸಿಕ  ನಾಟಕವು ಬೆಂಗಳೂರಿನ ಆಕಾಶವಾಣಿ ನಿಲಯದಿಂದ ಪ್ರಸಾರವಾಗಿದೆ.
ಕೆ. ಅನತಸುಬ್ಬರಾಯರು, ಕೋಟವಾಸುದೇವಕಾರಂತರು, ಸುಪ್ರಸಿದ್ಧ ಆಯುರ್ವೇದ ವೈದ್ಯ ಡಾ|| ಮಳಿಯೆ ಗೋಪಾಲಕೃಷ್ಣರಾಯರು ಇವರುಗಳ ಜೀವನ ಸಾಧನೆ ಕುರಿತು ಮುಂದಿನ ತಲೆಮಾರಿಗೆ ಅಧಿಕೃತ ಆಧಾರಗ್ರಂಥಗಳ ರೂಪದಲ್ಲಿ  ’ಅನಂತ’  ’ವಾಸುದೇವ’  ’ ಧನ್ವಂತರಿ’ ಎಂಬ  ಪ್ರಮುಖ ಜೀವನಚರಿತ್ರೆಗಳ  ರಚನೆ ಹಾಗೂ ಪ್ರಕಟಣೆ. ಇವುಗಳ ಸಂಕ್ಷಿಪ್ತ ಮಾಹಿತಿಯು ಬೆಂಗಳೂರಿನ ಆಕಾಶವಾಣಿಯಿಂದ  ’ಬಾಳಬೆಳಕು’ ಕಾರ್ಯಕ್ರಮದಲ್ಲಿ ಪ್ರಸಾರವಾಗಿವೆ.
ಅಂತಸುಬ್ಬರಾಯರ ಒತ್ತಾಯದಿಂದಾಗಿ ಸಿರಿಭೂವಲಯ ಕಾವ್ಯದ ಅಭ್ಯಾಸಕ್ಕೆ ಪ್ರಯತ್ನ.  ೨೭ ವರ್ಷಗಳ ಅಧ್ಯಯನದ ಫಲವಾಗಿ ’ಸಿರಿಭೂವಲಸಾರ’ ಎಂಬ ಸರಳ ಪರಿಚಯ ಕೃತಿಯ ರಚನೆಮಾಡುವಷ್ಟರ ಮಟ್ಟಿಗೆ ಅದರಲ್ಲಿ ತಲ್ಲೀನತೆ.  ೧೯೯೮ರಲ್ಲಿ  ಐ.ಟಿ.ಐ. ನಿಂದ ಸ್ವಯಂ ನಿವೃತ್ತಿ ಪಡೆದು, ೨೦೦೦ ದಲ್ಲಿ ಹಾಸನದ ಸಮೀಪ ಹಾಲುವಾಗಿಲು ಎಂಬ  ಗ್ರಾಮಕ್ಕೆ ವಲಸೆ.
 ಫಲಭರಿತವಾದ  ಗಿಡಮರಗಳಿಂದ ಕೂಡಿದ, ಮನಸಿಗೆ ಮುದನೀಡುವ  ಚಿಕ್ಕದಾದ ಚೊಕ್ಕ ತೋಟವೊಂದರ ಅಭಿವೃದ್ಧಿಕಾರ್ಯದ ಪ್ರಾರಂಭ. ,  ೨೦೧೦ರಲ್ಲಿ  ಜೀವನದ ಮಹತ್ಸಾಧನೆಯಾಗಿ  ಸಿರಿಭೂವಲಯವನ್ನು ಸರಳವಾಗಿ, ಸಮರ್ಪಕವಾಗಿ ಪರಿಚಯಿಸುವ  ’ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಸಾರ’  ಎಂಬ ಕೃತಿಯ ಪ್ರಕಟಣೆ.
ಮುಂದೆ ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ೮ ಪರಿಚಯಕೃತಿಗಳ ರಚನೆ ಹಾಗೂ ಪ್ರಕಟಣೆ. ಇವುಗಳ ಸಂಕ್ಷಿಪ್ತ ಭಾವಾನುವಾದವು ಹಿಂದಿ ಹಾಗೂ ಇಂಗ್ಲಿಷ್  ಭಾಷೆಯಲ್ಲೂ ಪ್ರಕಟವಾಗಿವೆ. ತನ್ನ ಜೀವನದ ಸಂಗಾತಿ ಶ್ರೀಮತಿ ಗಿರಿಜೆಯು  ತನ್ನ ಕೈಹಿಡಿದಂದಿನಿಂದ  ಇಂದಿನವರೆವಿಗೂ ನೀಡಿರುವ ಸಹಕಾರವನ್ನು ಪ್ರಾಮಾಣಿಕವಾಗಿ ಸ್ಮರಿಸುವುದನ್ನೂ ಈ ವ್ಯಕ್ತಿ ಮರೆಯುವುದಿಲ್ಲ. ಸಿರಿಭೂವಲಯಕಾವ್ಯದಲ್ಲಿ ಕನ್ನಡ ಭಾಷಾ ಸ್ತಂಬಕಾವ್ಯವನ್ನು ಪ್ರತ್ಯೇಕಿಸುವಲ್ಲಿ ಶ್ರೀಮತಿ ಗಿರಿಜಾ ಅವರೂ ನೆರವುನೀಡಿ ಈ ಕಾರ್ಯದ ವೇಗವು ವೃದ್ಧಿಯಾಗುವಲ್ಲಿ ಸಹಕರಿಸಿರುವುದು ಗಮನಾರ್ಹ ಸಗತಿ.
ನಾಡಿನ ಹಿರಿಯ ವಿದ್ವಾಂಸರಾದ ಪ್ರೊ. ಜಿ. ವೆಂಕಟಸುಬ್ಬಯ್ಯನವರು ’ಸಿರಿಭೂವಲಯ ಸಾಗರ ರತ್ನ ಮಂಜೂಷ’ ಎಂಬ ಸರಳಪರಿಚಯಕೃತಿಗೆ ಮುನ್ನುಡಿ ಬರೆಯುವಲ್ಲಿ ಹಾಸನದ ಸುಧಾರ್ಥಿಯನ್ನು ’ಸಿರಿಭೂವಲಯದ ಸುಧಾರ್ಥಿ’  ಎಂದು ಸೂಚಿಸಿರುವುದು;  ಪ್ರೊ. ಜಿ. ಬ್ರಹ್ಮಪ್ಪನವರು  ’ಗೌತಮಗಣಧರರ ಸಂತತಿಗೆ ಸೇರಿದ ಸುಧಾರ್ಥಿ’ ಎಂದು  ಸೂಚಿಸಿರುವುದು ಇವರು ಜೀವನದಲ್ಲಿ ಸಾಧಿಸಿರುವ ಅಮೂಲ್ಯವಾದ ಗೌರವ ಹಾಗೂ ಪಾರಮಾರ್ಥಿಕವಾದ ಸಂಪತ್ತಾಗಿದೆ. ಸಾಹಿತ್ಯಕ್ಷೇತ್ರದಲ್ಲಿ ಅಪರಿಚಿತನಾಗಿಯೇ ಇರುವ ತನಗೆ ಇದನ್ನೂ ಮೀರಿದ ರಾಷ್ಟ್ರೀಯ/ ಅಂತರ್ ರಾಷ್ಟ್ರೀಯ ಪ್ರಶಸ್ತಿಯಗಲೀ ಪುರಸ್ಕಾರವಾಗಲೀ ಯಾವುದೂ ಇಲ್ಲವೆಂಬುದು ಈ ಪರಿಚಯಕಾರನ ನಿಲುವು.
ಕನ್ನಡದಲ್ಲಿ ಸಿರಿಭೂವಲದಂಥ ಮಹತ್ತರವಾದ ಕಾವ್ಯವಿದೆ ಎಂಬ ಮಾಹಿತಿಯು ಮುಂದಿನ ತಲೆಮಾರಿಗೆ  ಸಮರ್ಪಕವಾಗಿ ದೊರೆತರೆ,  ಮುಂದೆ ಇನ್ನೊಬ್ಬ ಸಿರಿಭೂವಲಯದ ಶ್ರೀಕಂಠಯ್ಯನವರ  ಅವತಾರವಾಗಿ, ಮುಂದಿನ ಕನ್ನಡಿಗರಿಗೆ ಸಿರಿಭೂವಲಯದ ಸಮಗ್ರ  ವಿಶ್ವರೂಪದರ್ಶನವಾಗಲು  ಅವಕಾಶವಾದೀತೆಂಬುದು  ಸುಧಾರ್ಥಿಯ  ಹಂಬಲ.   ಸಿರಿಭೂವಲಯಕಾವ್ಯದಲ್ಲಿ ಅಡಗಿರುವ ಹಲವಾರು ಅಚ್ಚರಿಯ ಮಾಹಿತಿಗಳ ಕಾರಣದಿಂದಾಗಿ,  ಸುಧಾರ್ಥಿಯನ್ನೂ, ಆತ ರೂಪಿಸಿರುವ ಸರಳಪರಿಚಯಕೃತಿಗಳನ್ನು ಬಹಳ ಜಾಣ್ಮೆಯಿಂದ ಉಪೇಕ್ಷಿಸುತ್ತ, ಪ್ರಬಲವಾಗಿ ವಿರೋಧಿಸುವವರೂ ಸಾಕಷ್ಟುಜನಗಳಿರುವುದುಂಟು.
ಇದಾವುದನ್ನೂ ಲೆಕ್ಕಿಸದೇ  ಈ ವ್ಯಕ್ತಿಯು ತನ್ನ ಹಾದಿಯಲ್ಲಿ ತಾನು,  ಶ್ರಮಿಸುವುದಾಗಿದೆ.   ಸಾಮಾಜಿಕವಾಗಿ ಯಾವುದೇ ಉನ್ನತಶಿಕ್ಷಣ ಹಾಗೂ ಸ್ಥಾನಮಾನಗಳನ್ನೂ ಹೊಂದಂದೇ  ಎಲೆಮರೆಯ ಕಾಯಿಯಂತೆ ಈ ಕ್ಷೇತ್ರದಲ್ಲಿ  ಇನ್ನೂ ಉಸಿರಾಡುತ್ತಿರುವ ಈ ಸಾಹಿತ್ಯ ಕೃಷಿಕನು ಪ್ರಕೃತ ತನ್ನ ಅಧ್ಯಯನದ ಫಲದ ಸಾರಾಂಶವನ್ನು    ಇಲ್ಲಿನ ಓದುಗರಿಗೆ ಈ ಲೇಖನಮಾಲೆಯ ಮೂಲಕ ಪರಿಚಯಿಸುವುದು ನನ್ನ ಉದ್ದೇಶವಾಗಿದೆ. ಇಲ್ಲಿನ ಓದುಗರ ಪೈಕಿ ಕೆಲವರಿಗಾದರೂ  ಇದರಲ್ಲಿ ಆಸಕ್ತಿ ಇರಬಹುದೆಂದು ಭಾವಿಸಿದ್ದೇನೆ. (ಇನ್ನೂಇದೆ)
                                               -ಜಮದಗ್ನಿಸುತ.

No comments:

Post a Comment