Tuesday 26 May 2020

ಸಿರಿಭೂವಲಯಸಾಗರರತ್ನಮಂಜೂಷ ೨. ** (ಭಾಗ-೩)


***ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆ*** ಭಾಗ: ೯.

** ಸಿರಿಭೂವಲಯಸಾಗರರತ್ನಮಂಜೂಷ ೨. ** (ಭಾಗ-೩)

ಬೆಲಗೂರು ಆಂಜನೇಯನ ಅನುಗ್ರಹ:  ಎಂಬ ಶೀರ್ಷಿಕೆಯಲ್ಲಿ  ಬೆಲಗೂರಿನಲ್ಲಿ ನಡೆದ ಒಂದು ಕಾರ್ಯಕ್ರಮವನ್ನು ಕುರಿತು ಸೂಚಿಸಲಾಗಿದೆ.   ಶಿವಮೊಗ್ಗೆಯ ಶ್ರೀ ಕವಿ ಸುರೇಶ್ ಅವರು ಸಿರಿಭೂವಲಯದ ಸರಳಪರಿಚಯಕೃತಿಯ ಆಂಗ್ಲಾ ಭಾವಾನುವಾದ ಮಾಡಿಕೊಟ್ಟ ಪರಿಚಯದ ನಿಮಿತ್ತ. ಅವರ ಶ್ರದ್ಧಾಕೇಂದ್ರವಾದ ಬೆಲಗೂರಿಗೆ ಹೋಗಿ ಸಿರಿಭೂವಲಯದ ಪರಿಚಯ ಕೃತಿಗಳನ್ನು ಅಲ್ಲಿನ ಅವಧೂತರಿಗೆ ಅರ್ಪಿಸಿ ಬರುವ ಅವಕಾಶ ಸುಧಾರ್ಥಿ ದಂಪತಿಗಳಿಗೆ ಒದಗಿತು.
ಸಂಸ್ಕೃತಮೂಲದ ’ಅದ್ಭುತರಾಮಯಣ’ವನ್ನು  ಅಯೋಧ್ಯೆಯ ನಿವಾಸಿ ಶ್ರೀ ಅಜಯಕುಮರ್ ಛವಛ್ಛಾರಿಯಾ ಎಂಬುವವರು ಆಂಗ್ಲಾಭಾಷೆಯಲ್ಲಿ ನಿರೂಪಿಸಿದ್ದಾರೆ. ಅದನ್ನು  ಶ್ರೀ ಕವಿ ಸುರೇಶ್ ಅವರು ಕನ್ನಡಕ್ಕೆ ಅನುವಾದಮಾಡಿದ್ದು, ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದಕ್ಕೆ ಅವರು ಸುಧಾರ್ಥಿಯನ್ನು ಆಹ್ವಾನಿಸಿದ್ದರು.
ಭಕ್ತಸಮೂಹವು ಹೆಚ್ಚಾಗಿರುವ ವಿಶೇಷಸಮಾರಂಭಗಳಲ್ಲಿ ಕ್ಷೇತ್ರದ ಅವಧೂತರೊಂದಿಗೆ  ಮಾತನಾಡುವುದು ಸಾಧ್ಯವಿಲ್ಲದ ಸಂಗತಿ. ಆದರೆ, ಶ್ರೀ ಸುರೇಶ್ ಅವರು ಅವಧೂತರ ಆಪ್ತ ವಲಯದವರಾದ ಕಾರಣದಿಂದಾಗಿ ಅಂದು ಅವಧೂತರೊಂದಿಗೆ ಮಾತನಾಡುವ ಅವಕಾಶ ದೊರೆಯಿತು.  ಕೆಲವೇ ನಿಮಿಷಗಳಲ್ಲಿ ಸಿರಿಭೂವಲಯದ ವಿಚಾರ ವಿವರಿಸಿ,  ಸುರೇಶ್ ಅವರು ರೂಪಿಸಿರುವ ಆಂಗ್ಲಾ ಭಾವಾನುವಾದವು ಮುದ್ರಣದ ಹಂತದಲ್ಲಿರುವುದನ್ನು ತಿಳಿಸಿ, ಸುಧಾರ್ಥಿಯು ಪ್ರಕಟಿಸಿರುವ ಪರಿಚಯಕೃತಿಗಳ ಕಟ್ಟನ್ನು ಅವರಿಗೆ ಅರ್ಪಿಸಲಾಯಿತು.  ಈ ವಿಚಾರವಾಗಿ ಸಂತಸ ಸೂಚಿಸಿದ ಅವಧೂತರು ಶುಭಹಾರೈಕೆ ಹಾಗೂ ಫಲಮಂಕ್ರಾಕ್ಷತೆಯೊಂದಿಗೆ ಅಂಗವಸ್ತ್ರನೀಡಿ  ಶುಭಾಶೀರ್ವಾದಮಾಡಿದರು.
*  *  *
ವೇದವಿದ್ವಾಂಸರ ಸಮೂಹದಲ್ಲಿ ಸಿರಿಭೂವಲಯ: ಎಂಬ ಶೀರ್ಷಿಕೆಯಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲಭಾರತ ವೇದವಿದ್ವಾಂಸರ ಸಮಾವೇಶವೊಂದರ ವಿವರವನ್ನು ಸೂಚಿಸಲಾಗಿದೆ.
ರಾಷ್ಟ್ರೀಯಮಟ್ಟದ ವೇದವಿದ್ವಾಂಸರು ಹಾಗೂ ಆಂಗ್ಲಾಭಾಷೆಯ ಮಹಾನ್ ವಿಜ್ಞಾನಿಗಳ ಸಮೂಹದಲ್ಲಿ ಸಿರಿಭೂವಲಯವನ್ನು ಪರಿಚಯಿಸುವ ಅವಕಾಶವೊಂದು ಈ ಪರಿಚಯಕಾರನಿಗೆ ಅನಿರೀಕ್ಷಿತವಾಗಿ ದೊರೆತಾಗ ಅದನ್ನು ನಿರಾಕರಿಸುವುದುಂಟೇ!?  ಬೆಂಗಳೂರಿನ  ’ಧರ್ಮಜಾಗೃತಿ ಟ್ರಸ್ಟ್’ ವತಿಯಿಂದ  ದಿನಾಂಕ ೨೮-೧೨-೨೦೧೩ರಂದು ಬೆಂಗಳೂರಿನ  ನೃಪತುಂಗ ರಸ್ತೆಯ ’ಮಿಥಿಕ್ ಸೊಸೈಟಿ’ ಯ  ಸಭಾಂಗಣದಲ್ಲಿ   ಎರಡು ದಿನಗಳ ಅವಧಿಯ  ’ದ್ವಿತೀಯ ರಾಷ್ಟ್ರೀಯ ವೇದ-ವಿಜ್ಞಾನ ಸಮ್ಮೇಲನ’ ನಡೆಯಿತು. ಪ್ರಾರಂಭದಲ್ಲಿ ಸಮರ್ಥರಾದ ವೇದವಿದ್ವಾಂಸರಿಂದ ನಾಲ್ಕು ವೇದಗಳ ಸುಶ್ರಾವ್ಯವಾದ ಮಂತ್ರಘೋಷ ನಡೆಯಿತು, ನಿಘಂಟುಬ್ರಹ್ಮ ಶತಾಯುಷಿ  ಪ್ರೊ|| ಜಿ ವೆಂಕಟಸುಬ್ಬಯ್ಯನವರು, ಅಂತರ್ ರಾಷ್ಟ್ರೀಯ ಖ್ಯಾತಿಯ ಯೋಗಗುರು ಬಾಬಾ ರಾಮದೇವ್ ,  ಸಂಸದ ಶ್ರೀ ಅನಂತಕುಮಾರ್ ಹಾಗೂ ಅವರ ಶ್ರೀಮತಿಯವರು ಮುಂತಾದ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.  ಶ್ರೀ ಸುಧಾಕರಶರ್ಮ ಅವರು  ಕಾರ್ಯಕ್ರಮದ ನಿರೂಪಕಾರಾಗಿದ್ದು,  ಕನ್ನಡ, ಸಂಸ್ಕೃತ ಹಾಗೂ ಆಂಗ್ಲಾಭಾಷೆಯ ಭಾಷಣಗಳನ್ನು  ಪರಸ್ಪರ ಭಾಷೆಗೆ ಸಂಕ್ಷಿಪ್ತವಾಗಿ ವಿವರಿಸುತ್ತಿದ್ದರು.
ಧರ್ಮಜಾಗೃತಿ ಟ್ರಸ್ಟ್ ನವರು ಪ್ರಕಟಿಸಿದ ಮೂರು ಕಿರುಹೊತ್ತಿಗೆಗಳನ್ನು ಲೋಕಾರ್ಪಣೆಮಾಡಿದ ಪೊ|| ಜಿ. ವೆಂಕಟಸುಬ್ಬಯ್ಯನವರು. ಸಮಯೋಚಿತವಾದ ಮಾತುಗಳನ್ನಾಡಿ, ’ಈಗ ಪ್ರಕಟಗೊಂಡ ಮೂರು ಕಿರುಹೊತ್ತಿಗೆಗಳನ್ನೇ ದೇವನಾಗರಿಲಿಪಿಯಲ್ಲಿ ಮೂಲಸಾಹಿತ್ಯ, ಕನ್ನಡಭಾಷೆಯಲ್ಲಿ ಅದರ ಪ್ರತಿಪದಾರ್ಥ,  ಸಾರಾಂಶ ಸೂಚಿಸಿ ವಿಸ್ತರಿಸಿದರೆ, ಪ್ರತಿಯೊಂದೂ ೪೦೦-೪೫೦ ಪುಟಗಳ ಉಪಯುಕ್ತ ಕೃತಿಗಳಾಗುತ್ತವೆ. ಸಂಸ್ಕೃತಭಷೆಯ ಸಾಹಿತ್ಯಕೃತಿಗಳನ್ನು ಸಂಸ್ಕೃತ ಹಾಗೂ ಕನ್ನಡಬಲ್ಲ ವಿದ್ವಾಂಸರು  ಸಮರ್ಪಕವಾಗಿ ಕನ್ನಡಭಾಷೆಗೆ ಅನುವಾದಮಾಡಬೇಕು.  ಇದರಿಂದ ಕನ್ನಡ ಸಾಹಿತ್ಯ ಸಂಪತ್ತು ವಿಸ್ತಾರಗೊಳ್ಳುತ್ತದೆ.... ಈ ದಿಸೆಯಲ್ಲಿ ಪ್ರಯತ್ನ ನಡೆಯಲಿ ಎಂದು ನಾನು ಆಶಿಸುತ್ತೇನೆ’ ಎಂದು ಅಭಿಪ್ರಾಯಪಟ್ಟರು.
ಶ್ರೀ ಬಾಬಾ ರಾಮದೇವ್ ಅವರು  ಸಭಿಕರನ್ನು ರಂಜಿಸುವ ಶೈಲಿಯಲ್ಲಿ ಮಾತನಾಡುತ್ತ.  ’ಇಂದಿನ ಪರಿಸರವು ಎಲ್ಲವಿಚಾರಗಳಲ್ಲೂ ಕಲಬೆರೆಕೆಯದಾಗಿದೆ.  ವೇದಮಂತ್ರಗಳುಮಾತ್ರ ಯಾವುದೇ ಕಲಬೆರಕೆಗೂ ಸಿಗದೇ, ಸಾವಿರಾರು ವರ್ಷಗಳಿಂದ ಒಂದೇ ಒಂದು ಸ್ವರವೂ ಬದಲಾಗದೇ ಪರಿಶುದ್ಧರೂಪದಲ್ಲಿ ಉಳಿದುಬಂದಿರುವುದು ಸಂತೋಷದಸಂಗತಿ. ಇದು ದಕ್ಷಿಣಭಾರತದ ವೇದವಿದ್ವಾಂಸರ ಸಾಧನೆಯಾಗಿದೆ.  ಇದಕ್ಕಾಗಿ ನಾನು ದಕ್ಷಿಣಭಾರತದ ಘನಪಾಠಿಗಳಾದ ವೇದವಿದ್ವಾಂಸರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ನುಡಿದು,  ಆಂಗ್ಲಾಭಾಷೆ ಹಾಗೂ ವಿಜ್ಞಾನವನ್ನು ಅಧ್ಯಯನಮಾಡಿದ ವಿದ್ವಂಸರಿಗೆ ನಮ್ಮಲ್ಲಿ ಅಪರ ಗೌರವ ಮನ್ನಣೆ ಇದೆ. ವೇದಾಧ್ಯಯನ ಮಾಡಿದ ವಿದ್ವಾಂಸರಿಗೂ  ಜಗತ್ತಿನಲ್ಲಿ  ಇದೇ ರೀತಿಯ ಮಾನ್ಯತೆ ದೊರೆಯಬೇಕು. ...ಸೂಕ್ತ ಪ್ರೋತ್ಸಾಹವಿಲ್ಲವಾದರೆ,  ವೇದವಿದ್ವಂಸರಿರುವುದಿಲ್ಲ ಅವರು ಇಲ್ಲವಾದರೆ, ವೇದಗಳೂ ಇಲ್ಲದಂತಾಗುತ್ತದೆ!  ಎಂದು ಅಭಿಪ್ರಾಯಪಟ್ಟರು.
ಮಾರನೆಯದಿನ ಬೆಳಗಿನ ೯ ಗಂಟೆಗೆ ಕಾರ್ಯಕ್ರಮವು ಸಾಮವೇದ ಘೋಷದೊಂದಿಗೆ ಪ್ರಾರಂಭವಾಯಿತು.  ಸಾಮವೇದದ ಪ್ರಮುಖ ಶಾಖೆಗಳನ್ನು ವಿವರಿಸಿದ ಮೈಸೂರಿನ ಸಾಮವೇದಮಹಾಮಂಡಲದ  ಅಧ್ಯಕ್ಷರಾದ ಪ್ರೊ||ಕೆ. ಆರ್. ಮಂಜುನಾಥ ಶ್ರೌತ್ರಿಯವರು ತಮ್ಮ ಅಪೂರ್ವವಾದ ಕಂಚಿನ ಕಂಠದ ನೆರವಿನಿಂದ ಸಾಮವೇದಗಾಯನದ ಪ್ರತ್ಯಕ್ಷ ವಿವರಣೆ ನೀಡಿ ಸಭಿಕರೆಲ್ಲರೂ ರೋಮಾಂಚನಗೊಳ್ಳುವ ಸನ್ನಿವೇಶವನ್ನು ನಿರ್ಮಾಣಮಡುವಲ್ಲಿ ಯಶಸ್ವಿಯಾದರು.  ವಿದ್ವಾನ್ ಮಹಾಬಲೇಶ್ವರಭಟ್, ಎಂ. ಎ. ಮತ್ತಿತರರು ಶ್ರೌತಿಯವರಿಗೆ ನೆರವಾಗಿದ್ದರು.
ಶ್ರೀ ಅರುಣ್ ಕುಮಾರ್ ಉಪಾಧ್ಯಾಯ ಅವರ ಅಧ್ಯಕ್ಶತೆಯಲ್ಲಿ  ’ಜ್ಞಾನ-ಪ್ರಜ್ಞಾನ’ ಗೋಷ್ಠಿಯು ಸ್ವಲ್ಪ ವಿಳಂಬವಾಗಿಯೇ ಪ್ರಾರಂಭವಾಯಿತು. ಡಾ|| ಇ.ಜಿ. ರಾಜನ್, ಡಾ||ಎಸ್.ಆರ್. ಕೃಷ್ಣಮೂರ್ತಿ, ಡಾ|| ವಸಂತಮಾಧವ, ಡಾ|| ರಾಮನಾಥಪಾಂಡೆ, ಡಾ||ವಿಠಲಪೋತದಾರ್, ಸುಧಾರ್ಥಿ,  ಮುಂತಾದವರು ಬೇರೆ ಬೇರೆ  ವಿಚಾರಗಳಿಗೆ ಸಂಬಂಧಿಸಿದಂತೆ ತಮ್ಮ ಪ್ರಾತ್ಯಕ್ಷಿಕೆ/ ಪ್ರಬಂಧಗಳನ್ನು ಮಂಡಿಸಲಿದ್ದರು. ಪ್ರತಿಯೊಬ್ಬರಿಗೂ ೧೫ ನಿಮಿಷಗಳ ಕಾಲಾವಧಿ ನಿಗಧಿಯಾಗಿತ್ತು.  ಇಷ್ಟೊಂದುಜನ ವಿದ್ವಾಂಸರು ಸೇರಿರುವ ಈ ವೇದಿಕೆಯಲ್ಲಿ ಸಾಕಷ್ಟು ಉತ್ತಮವಾದ ಮಹಿತಿಗಳನ್ನು ಉಲ್ಲೇಖಿಸಿ, ಎಲ್ಲರಿಗೂ ಸಿರಿಭೂವಲಯವನ್ನು ಕುರಿತು ವಿಸ್ಮಯಕಾರಿಯದ ಪರಿಚಯಮಾಡಿಕೊಡುವ ಮನಸ್ಥಿತಿಯು ಸುಧಾರ್ಥಿಯಲ್ಲಿ ಉಗಮವಾಗಿದ್ದಿತು.
ಬಹುಪಾಲು ಭಾಷಣಕಾರರು ಡಾಕ್ಟರೇಟ್ ಪಡೆದರೇ ಅಗಿದ್ದಕಾರಣದಿಂದಾಗಿ, ಗೋಷ್ಠಿಯಲ್ಲಿ ಭಾಗವಹಿಸುವ ಅತಿಥಿಯನ್ನು ವೇದಿಕೆಗೆ ಆಹ್ವಾನಿಸಿದ ನಿರೂಪಕರು ಸುಧಾರ್ಥಿಯ ಹೆಸರಿನಮುಂದೆಯೂ  ಡಾಕ್ಟರೇಟ್ ಸೇರಿಸಿಬಿಟ್ಟರು!
ಗೋಷ್ಠಿಯ ಅಧ್ಯಕ್ಷತೆಯೊಂದಿಗೆ ಪ್ರಾಸ್ತಾವಿಕ ಭಾಷಣಕಾರರೂ ಆಗಿದ್ದ ಶ್ರೀ  ಅರುಣಕುಮಾರ  ಉಪಾಧ್ಯಾಯ ಅವರು ಸಾಕಷ್ಟು ವಿಸ್ತಾರವಾಗಿಯೇ ತಮ್ಮ ವಿಚಾರ ಮಂಡನೆಮಾಡಿದರು. ಅವರನಂತರ ಮಾತನಾಡಿದ ಬಹುಪಾಲು ಎಲ್ಲರೂ ತಮ್ಮ ನಿಗಧಿತ ಅವಧಿಯನ್ನು ಮೀರಿಯೇ ಮಾತನಾಡುತ್ತಿದ್ದಕಾರಣ  ವ್ಯವಸ್ಥಾಪಕರು ಭಾಷಣಕಾರರಿಗೆ  ಚೀಟಿಕೊಡುವ ಮೂಲಕ ಸಮಯವು ಮೀರಿರುವುದನ್ನು  ನೆನಪುಮಾಡಿಕೊಡುವುದಾಯಿತು!
ಸಿರಿಭೂವಲಯದವಿಚಾರವಾಗಿ ೧೫ ನಿಮಿಷಗಳ ಅವಧಿಗೆ ಸೂಕ್ತವಾದ ಪ್ರಬಂಧವನ್ನು ಸಿದ್ಧಪಡಿಸಿಕೊಂಡುಬಂದಿದ್ದ ಸುಧಾರ್ಥಿಯು ಸಭಿಕರಿಗೆ ನಮಸ್ಕಾರ ಸೂಚಿಸುವುದರೊಂದಿಗೆ ’ನಾನು ಡಾ|| ಸುಧಾರ್ಥಿಯಲ್ಲ! ಪೇಷಂಟ್ ಸುಧಾರ್ಥಿಯಾಗಿದ್ದೇನೆ.  ಆದರೆ, ನನಗಿಲ್ಲಿ ಉಚಿತವಾಗಿ ಡಾಕ್ಟರೇಟ್ ಪದವಿ  ಸಿಕ್ಕಿತು!!  ಎಂದು ಸೂಚಿಸಿ,  ತನ್ನ ಪ್ರಬಂಧದ ಮಂಡನೆಗೆ ಪ್ರಾರಂಭಿಸಿದ್ದಾಯಿತು.  ಸಿರಿಭೂವಲಯದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಒಂದೆರಡು ನಿಮಿಷಗಳಲ್ಲಿ ಸೂಚಿಸಿದ್ದಾಯಿತು.  ಕವಿಯ ವಿಚಾರಸೂಚಿಸುವಲ್ಲಿ ಕುಮುದೇಂದುಮುನಿಯು ಯಾಪನೀಯಜೈನಸಂಪ್ರದಾಯದ ಯತಿ ಎಂಬ  ಮಾಹಿತಿಯನ್ನು ನೀಡಿದ್ದಾಯಿತು.  ೩-೪ ನಿಮಿಷಗಳೂ   ಕಳೆದಿರಲಿಲ್ಲ ಕೂಡಲೇ  ’ ನಿಮ್ಮ ಪ್ರಬಂಧವನ್ನು ಮೊಟಕುಗೊಳಿಸಿ, ಮುಕ್ತಾಯಮಾಡಿ’ ಎಂಬ  ಚೀಟಿ ಪ್ರತ್ಯಕ್ಷವಾಯಿತು!! ’ಈ ಮಹಾನ್ ಕಾವ್ಯದ ವಿಚಾರವಾಗಿ ನಿಮ್ಮೆಲ್ಲರೆದುರು ಹೇಳಲೇ ಬೇಕೆಂದುನಿರ್ಧರಿದ್ದೆ.  ೨೭ ವರ್ಷಗಳ ತಪಸ್ಸಿನ ಸಿದ್ಧಿಯು ಇದರಲ್ಲಿ ಅಡಕವಾಗಿದೆ.  ಈ ಕೃತಿಗಳನ್ನು ನಾನು ವಿದ್ವನ್ ಕೃಷ್ಣಭಟ್ ಹಾಗೂ ಅವರ ಶಕ್ತಿ ’ಶಾಲಿನಿ’ಅವರಿಗೆ ಅರ್ಪಿಸುಪಿಸುತ್ತಿದ್ದೇನೆ.  ಎಂದು ಸೂಚಿಸಿ,  ಪುಸ್ತಕಗಳನ್ನರ್ಪಿಸಿ, ವೇದಿಕೆಯಿಂದ ನಿರ್ಗಮಿಸುವಮೊದಲು ’ ಜೈನಸಂಪ್ರದಾಯದವರಿಗೆ ವೇದಗಳು ಪ್ರಮಾಣವಲ್ಲ. ಆದರೆ, ಕುಮುದೇಂದುಮುನಿಯು ಸರ್ವಧರ್ಮಸಮನ್ವಯಕಾರ.  ಜಗತ್ತಿನ ಎಲ್ಲ ಜ್ಞಾನಕ್ಕೂ ಋಗ್ವೇದವೇ ಮೂಲ ಆಕರ  ಎಂಬ ಖಚಿತಮಾಹಿತಿಯನ್ನು ಘೋಷಿಸಿರುವ ಮಹಾಮಹಿಮ’ ಎಂದು ಸೂಚಿಸಿದ್ದಾಯಿತು.
ನಿಜಕ್ಕೂ ಈವಾಕ್ಯಗಳು ಸ್ವಲ್ಪಮಟ್ಟಿಗೆ ಪ್ರಭಾವ ಬೀರಿತ್ತು!! ೩-೪ ಜನ ವೇದವಿದ್ವಾಂಸರು ಶಾಲಿನಿಯವರಿಂದ ಪುಸ್ತಕಪಡೆದು ಪುಟತಿರುಗಿಸಿದ್ದರು .  ಉಳಿದವರ ಭಾಷಣವು ಮುಗಿದು , ಅಧ್ಯಕ್ಷಭಾಷಣದೊಂದಿಗೆ  ಗೋಷ್ಠಿಯು ಮುಕ್ತಾಯವಾಯಿತು. ಭೋಜನ ವಿರಾಮವನ್ನು ಘೋಷಿಸಲಾಯಿತು.  ಈ ಅವಧಿಯಲ್ಲಿ ಸ್ವಲ್ಪ ಅವಕಾಶಸಿಕ್ಕಿದಂತಾಗಿ ಸುಧಾರ್ಥಿಯು ಕನ್ನಡಬಾರದ  ಶ್ರೀ ಅರುಣ್ ಕುಮಾರ್ ಉಪಾಧ್ಯಾಯ ಅವರಿಗೆ ’ಸಿರಿಭೂವಲಯ ಕೀ ಏಕ್ ಝಾಂಕಿ’ ಯ ಪ್ರತಿಯನ್ನು ನೀಡದ್ದಾಯಿತು.
ಒಳಪುಟದಲ್ಲಿ ಬಾಹುಬಲಿಯ ಚಿತ್ರವನ್ನು ನೋಡುತ್ತಿದ್ದಂತೆಯೇ  ಅವರ ಉತ್ಸಾಹ ತಣ್ಣಗಾಯಿತು! ’ದಿಸ್ ಈಸ್ ನಾಟ್ ಎ ವೇದಿಕ್ ಲಿಟರೇಚರ್. ದಿಸ್ ಬಿಲಾಂಗ್ಸ್ ಟು ಜೈನ್ ಟ್ರೆಡಿಷನ್’ ಎಂದು ರಾಗ ಎಳೆದು, ಬೇರೊಬ್ಬರೊಂದಿಗೆ ಮಾತನಾಡತೊಡಗಿದರು.   ಅವರಿಗೆ ಕಾವ್ಯದ ಮಹತ್ವವನ್ನು ತಿಳಿಸಲಾಗಲಿಲ್ಲ. ಹೇಗೂ ಹಿಂದೀ ಅವತರಣಿಕೆಯನ್ನು ಕೊಟ್ಟದ್ದಾಗಿದೆ. ಆಸಕ್ತಿ ಇದ್ದಲ್ಲಿ ಅದನ್ನು ನೋಡಿ ತಿಯುವರೆಂದು  ಸುಮ್ಮನಾದೆ.  ಸಭಾಂಗಣದಿಂದ ಹೊರಬರುತ್ತಿದ್ದಂತೆಯೇ ನೇಪಥ್ಯದಲ್ಲಿದ್ದ ಕೆಲವು ವೇದವಿದ್ವಾಸರು  ’ಬಹಳ ಶ್ಲಾಘನೀಯವಾದ ಕಾರ್ಯಸಾಧಿಸಿದ್ದೀರಿ. ನಿಮಗೆ ಅಭಿನಂದನೆಗಳು’  ಎಂದು ಸೂಚಿಸಿದರು!!
ಸುಧಾರ್ಥಿಗೆ ಸ್ವಲ್ಪ ಗಲಿಬಿಲಿಯುಂಟಾಯಿತು.  ’ವೇದಿಕೆಯಲ್ಲಿ ಸರಿಯಾಗಿ ವಿಚಾರಮಂಡನೆಮಾಡುವುದಕ್ಕೆ ಅವಕಾಶವೇ ಸಿಗಲಿಲ್ಲ!  ಪ್ರಾರಂಭದಲ್ಲೇ ಮುಕ್ತಾಯವಾಯಿತು! ಅಷ್ಟಕ್ಕೇ ಅಭಿನಂದಿಸಿದರೆ ಹೇಗೆ!?  ಎಂದು ಪ್ರಶ್ನಿಸಿದ.  ಸಿರಿಭೂವಲಯಸಾರ ಹಾಗೂ ಸಿರಿಭೂವಲಯಸಾಗರರತ್ನಮಂಜೂಷದ ಪ್ರತಿಗಳನ್ನು ಎತ್ತಿ ತೋರಿಸಿದ ವಿದ್ವಾಂಸರು ’ಶಾಲಿನಿಯವರಿಂದ ಪುಸ್ತಕಗಳನ್ನು ಪಡೆದು, ಮುನ್ನುಡಿಗಳನ್ನು ಓದಿ ಮುಗಿಸಿದೆವು.  ಅಂಥ ವಿದ್ವಾಂಸರ ಮನ್ನಣೆಗಳಿಸುವ ಕಾರ್ಯಮಾಡಿದ್ದೀರಿ.  ನಿಮಗೆ ಸರಸ್ವತಿಯ ಅನುಗ್ರಹವಾಗಿದೆ’ ಎಂದು ಮೆಚ್ಚುಗೆ ಸೂಚಿಸಿದರು.
 ಹೋಗಲೀ ವೇದಿಕೆಯಮೇಲೆ ವಿಚಾರಮಂಡನೆಮಾಡಿ ಸಭಿಕರ ಮೆಚ್ಚುಗೆ ಪಡೆಯಲಾಗದಿದ್ದರೂ, ಪ್ರಕಟಿತ ಕೃತಿಯಮೂಲಕ ಕೆಲವು ವೇದವಿದ್ವಾಂಸರ ಮೆಚ್ಚುಗೆ ಪಡೆದದ್ದು ಸಾರ್ಥಕವಾಯಿತೆಂಬ ಭಾವದಿಂದ  ಜಗತ್ತಿನಲ್ಲಿ ಯಾರೊಬ್ಬರೂ ಎಲ್ಲರನ್ನೂ  ಒಪ್ಪಿಸಲು ಸಾಧ್ಯವಿಲ್ಲ.!  ಸಮ್ಮೇಳನದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸಿರಿಭೂವಲಯದ ಸಮಾರ್ಪಕವಿಚಾರವು ವೇದ್ಯವಾಗದಿದ್ದರೂ ಚಿಂತೆಯಿಲ್ಲ. ವೇದವಿದ್ವಂಸರಾದ ಕೆಲವರಾದರೂ ಈ ಮಹಾನ್ ಕೃತಿಯತ್ತ ಗಮನಹರಿಸುವಂತಾದುದು ನಿಜಕ್ಕೂ ಸುಧಾರ್ಥಿಗೆ ಸಾರ್ಥಕತೆಯನ್ನೊದಗಿಸಿದೆ. ಈ ಪ್ರಸಂಗಕ್ಕೆ ಸಂಬಂಧಿಸಿದ ಹೆಚ್ಚಿನ ಮಹಿತಿಗಳಿಗೂ ಮೂಲಕೃತಿಯನ್ನು ನೋಡಿ.
’ದೈವಸಾಕ್ಷಾತ್ಕಾರವೆಂದರೇನು?’  ಎಂಬ ಶೀರ್ಷಿಕೆಯಲ್ಲಿ  ’ಬ್ರಾಹ್ಮಣರು ಸ್ವಾರ್ಥಿಗಳು. ವೇದಸಾಹಿತ್ಯವನ್ನು ಬೇರೆಯವರಿಗೆ ತಿಳಿಯದಂತೆ ರಹಸ್ಯವಾಗಿ ಮುಚ್ಚಿರಿಸಿ, ಬೇರೆಜಾತಿಯವರಿಗೆ ಅನ್ಯಾಯಮಾಡಿದ್ದಾರೆ’ ಎಂಬ ಗಂಭೀರವಾದ ಆಕ್ಷೇಪಣೆ, ಆಪಾದನೆ  ಸಾರ್ವತ್ರಿಕವಾಗಿದೆ. ಇದೊಂದು ಅರ್ಥಹೀನವಾದ ಆಪಾದನೆ ಎಂಬುದು ನನ್ನ ಸ್ವಾನುಭವ. ಇದಕ್ಕೆ ಕಾರಣವಿಷ್ಟೇ : ಗುರುಮುಖೇನ ಉಪದೇಶವಾದ ವೇದೋಪನಿಷತ್ತುಗಳನ್ನು ಕಠಿಣವಾದ ಅಭ್ಯಾಸಕ್ರಮದಿಂದ ಕಂಠಪಾಠಮಾಡಿಕೊಂಡು, ಸೂಕ್ತ ಸಮಯದಲ್ಲಿ ಅದನ್ನು ಕ್ರಮಬದ್ಧವಾಗಿ ಪಠಣಮಾಡುತ್ತ,  ಪೂಜೆ, ವ್ರತ, ಯಜ್ಞ, ಯಾಗಗಳ  ಕ್ರಿಯಾಭಾಗವನ್ನು ನಡೆಸುವುದು ಪರಂಪರಾಗತವಾಗಿ ನಡೆದುಬಂದಿದೆ.
ಈ ರೀತಿಯಲ್ಲಿ ಸಾಸ್ತ್ರೋಕ್ತವಾದ ಕ್ರಮದಲ್ಲಿ ಮಂತ್ರಘೋಷ ನಡೆದಾಗಮಾತ್ರವೇ ನಾವು ನಿರೀಕ್ಷಿಸಿದ ಫಲ ಪ್ರಾಪ್ತಿಯಾಗುತ್ತದೆ.  ಲೋಪವಾದಲ್ಲಿ ನಮ್ಮ ಕ್ರಿಯೆಯು ನಿಷ್ಫಲವಾಗುವುದು  ಮಾತ್ರವಲ್ಲ;  ವಿರುದ್ಧ ಪರಿಣಾಮವಾಗಿ ಅಪಾಯವು  ಎದುರಾಗುವಸಂಭವ ಖಚಿತ.  ಹಿಂದಿನ ಕಾಲದಲ್ಲೇನೋ ವೇದಪಾಠವು ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಮೀಸಲಾಗಿತ್ತು.  ಈಗ ಪರಿಸರ ಬದಲಾಗಿದೆ.  ವೇದಮಂತ್ರಗಳನ್ನು ಪುಸ್ತಕರೂಪದಲ್ಲಿ ಮುದ್ರಿಸಿ; ಹಾದಿಬೀದಿಗಳಲ್ಲಿ  ಮಾರಾಟಮಾಡಲಾಗುತ್ತಿದೆ! ಅಕ್ಷರಬಲ್ಲ ಯಾರುಬೇಕಾದರೂ ಅವುಗಳನ್ನು ಕೊಂಡು ಓದಿಕೊಳ್ಳಬಹುದು.  ಆದರೆ, ಆರೀತಿಯಲ್ಲಿ  ಆಸಕ್ತಿವಹಿಸಿ ವೇದವಿದ್ವಾಂಸರಾಗಿರುವ ಬ್ರಹ್ಮಣೇತರರು ಎಷ್ಟುಜನಗಳಿದ್ದಾರೆ!?  ಬ್ರಾಹ್ಮಣನೇ ಆಗಿರಲೀ,  ಬೇರೆಜಾತಿಯವರೇ ಆಗಿರಲಿ, ವೇದಮಂತ್ರಗಳನ್ನು ಓದಿಕೊಂಡು ದೇವತಾಪೂಜೆ ಮಾಡಿದಮಾತ್ರಕ್ಕೆ ದೇವರು ಒಲಿದು, ಪ್ರತ್ಯಕ್ಷವಾಗಿ ವರನೀಡುವ ಕ್ರಮವು ಇಲ್ಲ!!!   
ಸ್ವಲ್ಪವೂ ಲೋಪವಿಲ್ಲದೇ ವೇದಮಂತ್ರಗಳನ್ನು ಪರಂಪರಾಗತವಾದ ಕ್ರಮದಲ್ಲೇ  ಮುಗಿಲುಮುಟ್ಟುವಂತೆ ಸುಶ್ರಾವ್ಯವಾಗಿ ಘೋಷಿಸುವ ಶಕ್ತಿಯುಳ್ಳ ವೇದವಿದ್ವಾಂಸರು  ಮಂತ್ರಗಳನ್ನು ಹೇಳುವುದಕ್ಕೂ, ಪುಸ್ತಕವನ್ನು ನೋಡಿಕೊಂಡು ಸಾಮನ್ಯ ಗೃಹಸ್ಥರು  ತಡವರಿಸುತ್ತ, ತಪ್ಪು ತಪ್ಪಾಗಿ ಮಂತ್ರ ಹೇಳುವುದಕ್ಕೂ ಬಹಳ ವ್ಯತ್ಯಾಸವಿದೆ. ಈ ಎರಡೂ ಸನ್ನಿವೇಶಗಳಲ್ಲೂ ದೇವರು ಪ್ರತ್ಯಕ್ಷವಾಗಿ ಬಂದು ವರಕೊಡುವುದಿಲ್ಲವೆಂಬುದು ಮೇಲುನೋಟಕ್ಕೆ ನಿಶ್ಚಿತವಾದರೂ, ಸೂಕ್ತ ಪರಿಣಾಮಗಳ ದೃಷ್ಟಿಯಿಂದ ಇದು ಸರಿಯಲ್ಲ.  ಸಾಮಾನ್ಯ ವ್ಯಕ್ತಿಯು ತಡವರಿಸುತ್ತತಪ್ಪು ತಪ್ಪಾಗಿ ಮಂತ್ರ ಹೇಳುವುದರಿಂದ  ಅಲ್ಲಿನ ಪರಿಸರದಲ್ಲಿ ಯಾವುದೇ ಸತ್ಪರಿಣಮವೂ ಉಂಟಾಗಲಾರದು. ಆದರೆ,  ಸಾಂಪ್ರದಾಯಿಕವಾಗಿ, ಶಾಸ್ತ್ರೋಕ್ತವಾಗಿ ವೇದಾಧ್ಯಯನಮಾಡಿದವರು ಮಂತ್ರಘೋಷಮಾಡಿದಾಗ ಉಂಟಾಗುವ ಪರಿಣಾಮವು ಬೇರೆ ರೀತಿಯದಾಗಿರುತ್ತದೆ.
ದೈವೀಶಕ್ತಿಯೆಂಬುದು ನಮ್ಮ ಬಾಹ್ಯೇಂದ್ರಿಯಗಳಿಗೆ ಸುಲಭವಾಗಿ ಸ್ಥೂಲರೂಪದಲ್ಲಿ ಗೋಚರವಾಗುವುದಲ್ಲ!! ಇದನ್ನು ತೀರ ಸರಳವಾಗಿ ಹೇಳಬೇಕೆಂದರೆ,  ಹದಿಹರೆಯದ  ಅಥವಾ ಯಾವುದೇ ಪ್ರಾಯದ ಗಂಡು- ಹೆಣ್ಣುಗಳು  ಪರಸ್ಪರ ಎದುರಿಗೆ ಸಮೀಪದಲ್ಲಿ ಇಲ್ಲದ ಸನ್ನಿವೇಶದಲ್ಲಿ ಅವರ ನೆನಪು ಅಥವಾ ಒಂದು ಪತ್ರ ಇಲ್ಲವೇ ಅವರಿಂದ ಒಂದು ದೂರವಾಣಿಕರೆಬಂದಾಗ, ಪರಸ್ಪರರಲ್ಲಿ ಅತೀವ ಸಂತಸವುಂಟಾಗಿ, ಅವರು ಪುಳಕಿತರಗುವುದು ಸಾಮನ್ಯ ವಿಚಾರ.  ಇದೊಂದು ಅನುಭವವೇದ್ಯವಾದ ಭಾವನಾತ್ಮಕ ಸಂಗತಿ.  ಅವರವರಿಗೆ ಅನುಭವವದಾಗಮಾತ್ರ ಇದರ ಪರಿಚಯ ಸ್ಪಷ್ಟವಾಗುತ್ತದೆ. ಇದೇ ಕ್ರಮದಲ್ಲಿ ವೇದವಿದ್ವಾಂಸರು ವೇದಮಂತ್ರಗಳನ್ನು ಘೋಷಿಸಿದಾಗ, ಪರಿಸರದ ವತಾವರಣದಲ್ಲಿ ಸಾತ್ವಿಕಶಕ್ತಿಯು ಕಂಪನರೂಪದಲ್ಲಿ ಉಗಮವಾಗಿ, ಪರಿಸರದಲ್ಲಿದ್ದವರಮೇಲೆ ಸೂಕ್ತವಾದ ಪರಿಣಾಮ ಉಂಟುಮಾಡುತ್ತದೆ.  ಈ ರೀತಿಯಲ್ಲಿ ವ್ಯಾಪಕವಾದ ಸಮುದಾಯದ ವ್ಯಕ್ತಿಗಳ ಶರೀರದಲ್ಲಿ ಉಂಟಾಗುವ ಇಂಥ ಕಂಪನದ ಅನುಭವವೇ ಸಾತ್ವಿಕ ಶಕ್ತಿಯ ಸಾಕಾರರೂಪವೆಂದು ತಿಳಿಯಬೇಕು. ಇದೇ ದೈವಸಾಕ್ಷಾತ್ಕಾರ.
ನಮ್ಮ ಪೂರ್ವಾರ್ಜಿತ ಕರ್ಮಾನುಸಾರವಾಗಿ ಈ ಅನುಭವದ ಫಲ ಪ್ರಾಪ್ತಿಯಾಗುತ್ತದೆ.  ಈ ಸಾತ್ವಿಕ ಶಕ್ತಿಯ ಕಂಪನವು ಎಲ್ಲರ ಶರೀರದಲ್ಲೂ ಉಂಟಾಗುವ ಸಂಭವವಿರುವುದಿಲ್ಲ ! ಯಾವಜಾತಿಯವರೇ ಆಗಿರಲೀ, ಸೂಕ್ಷ್ಮವಾದ  ಸಂಸ್ಕಾರವಿರುವವರಿಗೆಮಾತ್ರ ಇದನ್ನು ಅನುಭವಿಸಲು ಸಾಧ್ಯ. ಉಳಿದವರಿಗೆ ಇಂದೊಂದು ಅರ್ಥಹೀನವಾದ  ಆಚರಣೆಯೇ ಸರಿ!!
ಇನ್ನು ದೈವೀಶಕ್ತಿಯನ್ನು ನಮಗೆ ಇಷ್ಟವಾದ ರೂಪದಲ್ಲಿ ಸಾಕ್ಷಾತ್ತಾಗಿ ಕಾಣುವವರವಿಚಾರ.  ಇದೊಂದು ಯೋಗಶಕ್ತಿಗೆ ಸಂಬಂಧಿಸಿದ್ದೆಂಬುದು ಸರ್ವವಿದಿತ. ಅಪಾರವಾದ ಯೋಗಶಕ್ತಿಸಂಪದಿಸಿದವರು ಈ ದೈವೀಶಕ್ತಿಯನ್ನು ತಮಗೆ ಬೇಕಾದ ಸ್ವರೂಪದಲ್ಲಿ ( ಶಿವ, ವಿಷ್ಣು, ನರಸಿಂಹ, ಸರಸ್ವತಿ. ಲಕ್ಷ್ಮಿ ಇತ್ಯಾದಿ ರೂಪಗಳಲ್ಲಿ)  ಸಾಕ್ಷಾತ್ಕರಿಸುವ ಶಕ್ತಿಯಲ್ಲಿ ಸಿದ್ಧಿಪಡೆದಿರುತ್ತಾರೆ. ಉದಾಹರಣೆಗೆ: ರಾಮಕೃಷ್ಣಪರಮಹಂಸರು,  ಅಂಥವರು ಪಡೆದಶಕ್ತಿ ತಮಗಿಲ್ಲದಮತ್ರಕ್ಕೇ ಇದೆಲ್ಲವೂ ಸುಳ್ಳು, ವಂಚನೆ, ಮೋಸ ಎಂದು ವಾದಿಸುವುದು ಸರಿಯಲ್ಲ.
ಮುಂದೆ ಸುಧಾರ್ಥಿಯ ವ್ಯಕ್ತಿಪರಿಚಯ ಹಾಗೂ ಸಾಹಿತ್ಯ ಕೃತಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ನಿಡಲಾಗಿದೆ. ರಕ್ಷಾಪುಟದ ಒಳಬದಿಯಲ್ಲಿ ಸಿರಿಭೂವಲಯದ ಪರಿಚಯಕೃತಿಗಳ ಮುಖಪುಟಗಳ ಚಿತ್ರಗಳನ್ನು ಅಳವಡಿಸಿರುವುದರಿಂದ ಇದೊಂದು ಕೃತಿಯನ್ನು ಮಾತ್ರ ನೋಡಿದವರಿಗೆ ಈ ವಿಚಾರಕ್ಕೆ ಸಂಬಂಧಿಸಿದ ಇತರ ಪ್ರಕಟಣೆಗಳ ಮಾಹಿತಿಯು ದೊರೆಯುವಲ್ಲಿ ಸಹಕಾರಿಯಾಗಿದೆ.  (ಮುಂದುವರೆಯುವುದು)
                                                             -ಜಮದಗ್ನಿಸುತ.

No comments:

Post a Comment