Tuesday 26 May 2020

ಸಿರಿಭೂವಲಯದ ಒಳನೋಟ**

***ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆ***
ಭಾಗ: ೭

**ಸಿರಿಭೂವಲಯದ ಒಳನೋಟ**

ಸಿರಿಭೂವಲಯವನ್ನು ಕುರಿತು  ಸುಧಾರ್ಥಿಯು ರೂಪಿಸಿದ ೬ನೇ ಸರಳಪರಿಚಯಕೃತಿ ’ಸಿರಿಭೂವಲಯದ ಒಳನೋಟ’  ಬೆಂಗಳೂರಿನ  ಪಂ|| ಎ. ಶಾಂತಿರಾಜಶಾಸ್ತ್ರಿ ಟ್ರಸ್ಟಿನವರ ಮೂಲಕ ಪ್ರಕಟವಾಗಿರುವ ಈ ಕೃತಿಯು  ಟ್ರಸ್ಟಿನ ನೀತಿ, ನಿಲುವುಗಳಿಗನುಗುಣವಾಗಿಯೇ ರೂಪಿತವಾಗಿದ್ದರೂ, ”ಈ ಕೃತಿಯಲ್ಲಿ  ಪ್ರತಿಪಾದಿತವಾಗಿರುವ ವಸ್ತು, ವಿಷಯ, ವಿಚಾರಗಳು ಲೇಖಕರ ಅಭಿಪ್ರಾಯವಾಗಿರುತ್ತವೆಯೇ ಹೊರತು,ಈ ಕೃತಿಯನ್ನು ಪ್ರಕಾಶಿಸಿರುವ ಧರ್ಮಸಂಸ್ಥೆಯ(ಟ್ರಸ್ಟಿನ) ಅಭಿಪ್ರಾಯವಲ್ಲ. ಈ ಅಭಿಪ್ರಾಯಗಳಿಗೆ ಧರ್ಮಸಂಸ್ಥೆ ಯವುದೇ ರೀತಿಯ ಹೊಣೆಯಲ್ಲ”  ಎಂಬ ಮುಂಜಾಗ್ರತೆಯ ಸೂಚನೆಯನ್ನು ನಮೂದಿಸಿರುವುದು ವಿಶೇಷವಾಗಿದೆ! 
ಯಾವುದಾದರೂ ರಾಷ್ಟ್ರವಿರೋಧಿ ಬರಹಕ್ಕೆ ಪತ್ರಿಕಾಸಂಪಾದಕರು ಲೇಖನದ ಸಂಪೂರ್ಣ  ಹೊಣೆಗಾರಿಕೆಯನ್ನು ಲೇಖಕನ ಮೇಲೆ ಹೊರಿಸುವ ಸಂಪ್ರದಾಯವನ್ನು ಇದು ನೆನಪಿಸುತ್ತದೆ!! ಕುಮುದೇಂದು ಮುನಿಯಂಥ ಸರ್ವಜ್ಞಸ್ವರೂಪಿಯಾದ ಜಗದ್ವಿಖ್ಯಾತ ಕವಿಯ ಕಾವ್ಯವನ್ನು ಸರಳವಾಗಿ ಪರಿಚಯಿಸುವ ಕಿರುಹೊತ್ತಿಗೆಯು ಇಷ್ಟೊಂದು ’ಭಯೋತ್ಪದಕ’ ಎನಿಸುವುದಾಗಿದ್ದರೆ, ಪ್ರಕಾಶಕರು ಇದರ ಪ್ರಕಟಣೆಯನ್ನೇ ಕೈ ಬಿಡಬಹುದಿತ್ತು!! 
 ಈ ಕಿರುಹೊತ್ತಿಗೆಯು ೨೦೧೨ರಲ್ಲಿ ಪ್ರಕಟವಾಗಿದೆ.  ಕ್ರೌನ್ ೧/೪ ಅಳತೆಯ ಸುಮಾರು ೧೨೮ ಪುಟಗಳವ್ಯಾಪ್ತಿಯ ಈ ಕಿರುಹೊತ್ತಿಗೆಯಲ್ಲಿ ಪೀಠಿಕೆ, ಸಿರಿಭೂವಲಯದ ಒಂದು ಪಕ್ಷಿನೋಟ,  ಸಿರಿಭೂವಲಯಕುರಿತು ಸ್ವಲ್ಪ ವಿವರ, ಸಿರಿಭೂವಲಯದ ಸ್ವರೂಪ, ಹುಟ್ಟು-ಬೆಳವಣಿಗೆ: ರಕ್ಷಣೆ, ಸಿರಿಭೂವಲಯದಲ್ಲಿ ದೊರೆಯುವ ಅಂತರ್ಸಾಹಿತ್ಯ ದರ್ಶನ, ಸಿರಿಭೂವಲಯದಲ್ಲಿ  ಪ್ರಕಟವಾಗಿರುವ ಅಂತರ್ಸಾಹಿತ್ಯದ ಕಿರುಪರಿಚಯ, ಅಧ್ಯಾಯ ೧ ರಿಂದ ೩೩ ರ ವರೆವಿಗೆ ಪ್ರತಿಯೊಂದು ಪೂರ್ಣಪದ್ಯದ  ೨೭ನೇ ಅಕ್ಷರಹಿಡಿದು  ಕೆಳಗೆ ಸಾಗಿದಾಗ ದೊರೆಯುವ  ಸಂಸ್ಕೃತಭಾಷಾ ಸಾಹಿತ್ಯ.  ಐದನೇ ಅಧ್ಯಾಯಾಂತರ್ಗತ ಸಂಸ್ಕೃತ ಸಾಹಿತ್ಯ, ೧೨ನೇ ಅಧ್ಯಾಯದ ಪಾದಪದ್ಯಗಳೂ ಸೇರಿದಂತೆ ಪೂರ್ಣಪದ್ಯಗಳಲ್ಲಿ  ಅಶ್ವಗತಿಯಲ್ಲಿ ಸಾಗಿದಾಗ ಸಿಗುವ ಕನ್ನಡಸಾಹಿತ್ಯ, ೨೦ನೇ ಅಧ್ಯಾಯಾಂತರ್ಗತ ಕನ್ನಡಸಾಹಿತ್ಯ, ೨೨ನೇ ಅಧ್ಯಾಯಾಂತರ್ಗತ ಕನ್ನಡ ಸಾಹಿತ್ಯ.  ೨೩ನೇ ಅಧ್ಯಾಯಾಂತರ್ಗತ ಕನ್ನಡ ಸಾಹಿತ್ಯ. ೧೬ನೇ ಅಧ್ಯಾಯಾಂತರ್ಗತ ಕನ್ನಡ ಸಾಹಿತ್ಯ. ೨೯ನೇ ಅಧ್ಯಾಯಾಂತರ್ಗತ ಕನ್ನಡ ಸಾಹಿತ್ಯ. ಅನುಬಂಧ, ೧. ದ್ವಿತೀಯಖಂಡದ  ವದನರಂಗಸ್ಥಲಾಧಿಕಾರವೆಂಬ ಒಂದನೇ  ’ಸ್’ ಅಧ್ಯಾಯ, ಸಿರಿಭೂವಲಯ ಕುರಿತು ಒಂದು ಪತ್ರಿಕೆಯ ಅನಿಸಿಕೆ, ಕಂಪ್ಯೂಟರ್ ಕ್ಷೇತ್ರದಲ್ಲಿ ಕನ್ನಡದ ಮಹತ್ವ,  ಸಿರಿಭೂವಲಯದ ಕೆಲವು ಸಾಂಗತ್ಯಪದ್ಯಗಳು,  ಸಿರಿಭೂವಲಯದ ಮೂಲಚಕ್ರಗಳನ್ನು ಓದುವಕ್ರಮ, ಇತ್ಯಾದಿ ಶೀರ್ಷಿಕೆಗಳಲ್ಲಿ  ವಿವರಗಳನ್ನು ರೂಪಿಸಲಾಗಿದೆ.
’ಕನ್ನಡದವೇದ’ ಎಂದು ಪರಿಗಣಿಸಬೇಕಿರುವ ಸಿರಿಭೂವಲಯದಲ್ಲಿ ಉಪನಿಷತ್ತುಗಳಿಗೆ ಸೇರಿದ ಹಲವಾರು ಮಹತ್ತರವಾದ ಮಹಿತಿಗಳು ಸರಳವಾದ ಕನ್ನಡಭಾಷ್ಯಲ್ಲಿ ನಿರೂಪಿತವಾಗಿವೆ.  ಕೇವಲ ಉಪನಿಷತ್ತುಗಳ ಮಾಹಿತಿ ಮಾತ್ರವಲ್ಲ. ಕವಿಯು ಸಿರಿಭೂವಲಯದಲ್ಲಿ ಒಂದೆಡೆ ’ಋಗ್ಮಂತ್ರ’ವು ಉಗಮವಗುವ ಸ್ಥಳವನ್ನು ಕುರಿತು  ಖಚಿತವಾದ ಸುಳಿವು ನೀಡಿರುವುದೂ ಇದೆ.  ೧೯೫೩ರರ ಅಕ್ಷರ ಅವತರಣಿಕೆಯ ಸಿರಿಭೂವಲಯವು ಪ್ರಕಟವಾದ ತರುಣದಲ್ಲಿ ’ಸತ್ಯ’ ಎಂಬ ಪತ್ರಿಕೆಯು  ಸಿರಿಭೂವಲಯಕಾವ್ಯದಲ್ಲಿ ಋಗ್ಮಂತ್ರಗಳು ಅಡಕವಾಗಿರುವ ವಿಚಾರ ಸೂಚಿಸುವಲ್ಲಿ ’ಋಗ್ವೇದದ ಪ್ರಾಚೀನತ್ವದಲ್ಲಿ ಶಂಕೆ ಉಳಿದಿಲ್ಲ. ಈಗಿರುವ ಶಾಕಲ ಸಂಪಾದಿತ ಋಗ್ವೇದವು ’ಅಗ್ನಿಮೀಳೇ’ ಎಂಬ ಮಂತ್ರದಿಂದ ಪ್ರಾರಂಭವಾಗುತ್ತದೆ.  ಸಿರಿಭೂವಲಯದಲ್ಲಿ ಮೂಲ ಋಗ್ವೇದವನ್ನು ಕೊಡುವೆನೆಂದು ಕವಿ ತಿಳಿಸಿದ್ದಾನೆ. ಅವನ ಪ್ರಕಾರ ಋಗ್ವೇದ ’ಓಂ ತತ್ಸವಿತುಃವರೇಣ್ಯಂ’ ಎಂಬ ಗಾಯತ್ರೀಮಂತ್ರದಿಂದ ಪ್ರಾರಂಭವಗುತ್ತದೆ ಎಂದು ಹೇಳಲಾಗಿದೆ. ಹೆಚ್ಚಿನ ವಿವರಗಳು ದೊರೆಯಬೇಕಿದೆ.
 ಋಗ್ವೇದದ ಮೊದಲಮಂತ್ರ ಅಗ್ನಿಮೀಳೆ ಅಲ್ಲ;  ’ಓಂತತ್ಸವಿತುಃವರೇಣ್ಯಂ’  ಎಂಬ ಗಾಯತ್ರೀ ಮಂತ್ರ ಎಂದಮಾತ್ರಕ್ಕೆ ಪ್ರಮಾದವೇನೂ ಇಲ್ಲ.... ಹಿಂದಿದ್ದುವೆಂದು ಹೇಳಲಾಗುವ ಅನೇಕ ಪುಸ್ತಕಗಳು ಈಗ ದೊರೆಯುವುದೇ ಇಲ್ಲ! ಅವುಗಳಲ್ಲಿ ಕೆಲವಾದರೂ ಸಿರಿಭೂವಲಯದಲ್ಲಿ ಅಡಗಿ ಕೊಂಡಿದ್ದು ಸಿರಿಭೂವಲಯದ ಮೂಲಕ ಬೆಳಕು ಕಾಣುವುದಾದರೆ ಯಾರಿಗೆ ಬೇಡ? ..... ಹಾಗಲ್ಲದೇ  ”ಬೋದ್ಧಾರೋಮತ್ಸರಗ್ರಸ್ತಾಃಪ್ರಭವಃಸ್ಮಯದೂಷಿತಾಃ| ಅಬೋಧೋಪಹತಾಶ್ಚನ್ಯೇ ಜೀರ್ಣಮಂಗೇ ಸುಭಾಷಿತಂ|” ಎಂಬ ಭರ್ತೃಹರಿಯ ವ್ಯಂಗ್ಯೋಕ್ತಿ ಸಿರಿಭೂವಲಯದ ಬಗ್ಗೆಯದರೂ ಚರಿತಾರ್ಥವಾಗದಿರಲೆಂದು ನಾವು ಆಶಿಸುತ್ತೇವೆ” ಎಂದು ಸಿರಿಭೂವಲಯಕುರಿತು ಅಂದಿನ ಪರಿಸರವನ್ನು ಚಿತ್ರಿಸಿರುವುದಿದೆ. ಇದೇ ಪರಿಸರವು ಇಂದಿಗೂ ಮುಂದುವರೆದಿದೆ! ಪ್ರಾಯಶಃ ಮುದೆಯೂ ಇದೇ ಮುಂದುವರೆಯುವುದು ಖಚಿತವೇನೋ!?
ಸಿರಿಭೂವಲಯಕ್ಕೆ ಸಂಬಂಧಿಸಿದ ಮಾಹಿತಿಗಳು, ಈ ಕಾವ್ಯಾವಲೋಕನಕ್ಕೆ ಅಗತ್ಯವಾದ ಪೂರ್ವಸಿದ್ಧತೆ,  ಕಾವ್ಯದ ಓದಿಗೆ ಅಗತ್ಯವಾದ ಮಾರ್ಗದರ್ಶನ ಮುಂತಾದುವುಗಳನ್ನು ಅಳವಡಿಸಿ, ಆಸಕ್ತರು ತಾವೇ ಸ್ವತಂತ್ರವಾಗಿ ಕಾವ್ಯಾಧ್ಯಯನಕ್ಕೆ ಪ್ರಯತ್ನಿಸಬಹುದಾದ ಸ್ತರದಲ್ಲಿ ಈ ಪರಿಚಯಕೃತಿಯನ್ನು ರೂಪಿಸಲಾಗಿದೆ.  ಈ ಪರಿಚಯಕೃತಿಯನ್ನೇ ಓದಿ ತಿಳಿಯಲಾಗದವರು ಇನ್ನು ಸಿರಿಭುವಲಯದ  ಅಧ್ಯಯನ ಹಾಗೂ ಸಂಶೋಧನೆಯತ್ತ ಗಮನಹರಿಸುವುದು ಕನಸಿನಮಾತೆನಿಸುತ್ತದೆ! 
ಈ ಸರಳ ಪರಿಚಯವು ಪ್ರಕಟವಾಗಿ ಸುಮಾರು ೮ ವರ್ಷಗಳು ಕಳೆದರೂ ಕನ್ನಡನಾಡಿನ ಯಾವುದೇ ಸಮುದಾಯದವರೂ ಇವುಗಳ ವಿಚಾರವಾಗಿ ಯೋಚಿಸುವ ಗೋಜಿಗೇ ಹೋಗದಿರುವುದು ಕನ್ನಡ ಸಾರಸ್ವತಲೋಕದ ಹಿರಿಮೆಯಾಗಿದೆ!!!
ಸಿರಿಭೂವಲಯದ ಸರಳಪರಿಚಯದ ಸರಣಿಯಲ್ಲಿ ಆರನೇ ಕೃತಿಯಾಗಿ ಬೆಳಕುಕಂಡ ಈ ಕಿರುಹೊತ್ತಿಗೆಯ ರಚನೆಯು ಪರಿಚಯಕಾರನ ಆತಂರ್ಯಕ್ಕೆ ಅತಿ ಹೆಚ್ಚಿನ ನೋವುತಂದದ್ದಾಗಿದೆ. ಇದನ್ನುಕುರಿತು ಸುಧಾರ್ಥಿಯು ಮುಂದಿನ ಸರಳಪರಿಚಯಕೃತಿಗಳಲ್ಲಿ ಸಾಕಷ್ಟು ವಿವರವಾಗಿ ಸೂಚಿಸಿರುವುದಿದೆ.   ಸಿರಿಭೂವಲಯದ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ ಬೆಳಗಾವಿಜಿಲ್ಲೆಯ  ಚಿಕ್ಕೋಡಿಯನಿವಾಸಿ ಶ್ರೀ ಧರಣೇಂದ್ರಕುಮರ್ ಅವರಿಗೆ  ಏಷ್ಟೇ ಶ್ರಮವಾದರೂ, ಸಿರಿಭೂವಲಯದಂಥ ಜಗದ್ವಿಖ್ಯಾತ ಕಾವ್ಯವನ್ನು ಜೈನಸಮುದಯದಲ್ಲಾದರೂ ಹೆಚ್ಚು ಪ್ರಚುರಪಡಿಸಬೇಕೆಂಬ ಹಂಬಲ.
ಅವರ ಪರಿಚಯದ ದತ್ತಿ ಸಂಸ್ಥೆಯೊಂದರ ಮೂಲಕ ಸಿರಿಭೂವಲಯವು ಪ್ರಕಟವಾದರೆ. ’ಹಲವು ಸಾವಿರ ಸದಸ್ಯರಿಗೆ’ ಉಚಿತವಾಗಿ ಅವುಗಳ  ವಿತರಣೆಯಾಗಿ, ಹೆಚ್ಚು ಪ್ರಚಾರವಾಗುವುದೆಂಬುದು ಹಾಗೂ ಸುಧಾರ್ಥಿಯ ನೇರ ಮಾರ್ಗದರ್ಶನವಿಲ್ಲದೆಯೂ ಯಾರುಬೇಕಾದರೂ  ಈ ಕಾವ್ಯದ ಅಧ್ಯಯನಮಾಡಲು ಹಾಗೂ ಮುಂದಿನ ಸಂಶೋಧನೆ ನಡೆಸಲು ಸಾಧ್ಯವಾಗುವುದೆಂಬುದು  ಅವರ ಭ್ರಮೆಯಾಗಿತ್ತು!
ಬೆಂಗಳೂರಿನ ಪಂಡಿತರತ್ನ  ಎ. ಶಾಂತರಾಜಶಾಸ್ತ್ರಿ ಟ್ರಸ್ಟ್ ನವರೊಂದಿಗೆ ಮಾತನಾಡುವ ಸಲಹೆ ನೀಡಿದರು.
 ಈ ಕಾವ್ಯದ ವಿಚಾರದಲ್ಲಿ ಇಂಥ ಪ್ರಯತ್ನಗಳಾವುವೂ ಫಲಕಾರಿಯಲ್ಲವೆಂಬುದು ಸುಧಾರ್ಥಿಯ ನಿಲುವು. ಆದರೂ ಗೆಳೆತನದ ಒತ್ತಾಯಕ್ಕೆ ಕಟ್ಟುಬಿದ್ದು.   ಬೆಂಗಳೂರಿಗೆಹೋಗಲು ಸಮ್ಮತಿಸಿದ್ದಾಯಿತು. ಮಾತುಕತೆಯ ಸಮಯದಲ್ಲಿ ಸ್ವಾಭಾವಿಕವಾಗಿಯೇ ಅವರು ಹಾಕಿದ ನಿಬಂಧನೆಗಳು ಸುಧಾರ್ಥಿಗೆ ಸಮ್ಮತವಾಗಲಿಲ್ಲ.  ಕೃತಿಪ್ರಕಟಣೆಗಾಗಿ ಸುಧಾರ್ಥಿಯು ಯಾವುದೇ ಸಂಭಾವನೆಗೂ ಒತ್ತಯಿಸಿರಲಿಲ್ಲ. ಆದರೆ, ಪರಿಚಯಕೃತಿಯಲ್ಲಿ  ಯಾವುದೇ ವಿದ್ವಾಂಸರನ್ನು ಕುರಿತು ಯಾವುದೇ ಆಕ್ಷೇಪಾರ್ಹ ಮಹಿತಿಯೂ ಇರಬಾರದೆಂಬುದು , ಕೃತಿಯನ್ನು ಸೂಕ್ತವಾಗಿ ಪರಿಷ್ಕರಿಸುವ ಹಕ್ಕು ಪ್ರಕಾಶಕರಿಗಿರಬೇಕೆಂಬುದು ಟ್ರಸ್ಟ್ ನವರ ಅಪೇಕ್ಷೆ!
ಇದರಿಂದ ಬರಹದಲ್ಲಿ ಬಿಗಿತಪ್ಪುವುದೆಂಬುದು ಸುಧಾರ್ಥಿಯ ನಿಲುವು. ಈ ವಿಚಾರವಾಗಿ ಬರಹಗಾರ ಹಾಗೂ ಪ್ರಕಾಶಕರನ್ನು ಒಪ್ಪಿಸುವ ವಿಚಾರದಲ್ಲಿ ಧರಣೇಂದ್ರಕುಮರರ ಪ್ರಯತ್ನ ಸಫಲವಾಗಲಿಲ್ಲ.   ಮಾತುಕತೆ ವಿಫಲವಾಯಿತು.
ಹಾಸನಕ್ಕೆ ಹಿಂದಿರುಗಿದಮೇಲೆ ವಿಚಾರತಿಳಿದ ಶ್ರೀಮತಿ ಗಿರಿಜಾ ಅವರು  ’ಸಿರಿಭೂವಲಯದ ಸಂಶೋಧನೆಯ ವಿಚಾರಕ್ಕೆ ಸಂಬಂಧಿಸಿ ಯಾವುದೇ ಮಾಹಿತಿಯನ್ನೂ ಸೂಚಿಸದೇ,  ಕೇವಲ ಕಾವ್ಯದ ವಿಚಾರಮಾತ್ರ ಪರಿಚಯಿಸಿ ಕೃತಿರಚನೆ ಮಾಡಿದಲ್ಲಿ ಅದನ್ನು ಪರಿಷ್ಕರಿಸುವ ಸಂಭವವೇ ಇರದೆಂದು  ಸೂಕ್ತವಾದ ಸಲಹೆನೀಡಿದರು.  ಹೊಸದಾಗಿ ಮತ್ತೆ ಬರೆಯುವ ವಿಚಾರದಲ್ಲಿ ಸುಧಾರ್ಥಿಗೆ ಆಸಕ್ತಿ ಇರಲಿಲ್ಲವಾದರೂ, ಇದೂ ಒಂದು ಹೊಸಪ್ರಯೋಗ. ಏಕಮಾಡಬಾರದೆಂಬ ವಿಚಾರ ಎದುರಾಯಿತು.  ಇದನ್ನು ಧರಣೇಂದ್ರಕುಮಾರರ ಗಮನಕ್ಕೆ ತಂದಾಗ, ಅವರಿಗೆ ಸಂತಸವಾಯಿತು. ಆದಷ್ಟು ಬೇಗ ಬರೆದು ಮುಗಿಸಿ, ಎಂದು ಸಲಹೆನೀಡಿದರು.
ಟ್ರಸ್ಟಿನವರ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಅತ್ಯಲ್ಪ ಕಾಲಾವಧಿಯೊಳಗೇ ’ ಸಿರಿಭೂವಲಯದ ಒಳನೋಟ’  ಸಿದ್ಧವಾಗಿ,  ಪ್ರಕಾಶಕರ ಕೈಸೇರಿತು.
ಸಿರಿಭೂವಲಯಕುರಿತು ಸಿದ್ಧವಾಗಿದ್ದ ಮೂರು ಪರಿಚಯಕೃತಿಗಳು ಮುದ್ರಣವಾಗಿ, ದಿನಾಂಕ ೨೦-೦೧-೨೦೧೨ ರಂದು ಅವು ಹಾಸನದ ವೇದಸುಧೆಯ ಈಶಾವಾಸ್ಯದಲ್ಲಿ  ಲೋಕರ್ಪಣೆಗೊಂಡದ್ದೂ ಅಯಿತು.  ಐದಾರು ತಿಂಗಳು ಕಳೆದರೂ,  ಬೆಂಗಳೂರಿನ ಪ್ರಕಾಶಕರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ!  ಅವರಿಗೆ ಈ ಕೃತಿಯನ್ನು ಪ್ರಕಟಿಸಲು ತೊಂದರೆ ಇದ್ದಲ್ಲಿ  ತಿಳಿಸಲಿ, ನಾನೇ ಅದನ್ನೂ ಪ್ರಕಟಿಸುವೆ ಎಂದು ತನ್ನ  ಮಿತ್ರರಿಗೆ ಸುಧಾರ್ಥಿ ಸೂಚಿಸಿದ್ದೂ ಆಯಿತು!
ಸುಮಾರು ಒಂದು ವರ್ಷದ ಅವಧಿಯನಂತರ ’ಸಿರಿಭೂವಲಯದ ಒಳನೋಟ’ ಪ್ರಕಟವಾಗುವ  ಸೂಚನೆ ಕಾಣಿಸಿತು! ದಿನಾಂಕ ೧೪-೧೦-೨೦೧೨ರಂದು  ಬೆಂಗಳೂರಿನಲ್ಲಿ ಒಂದು ’ಸ್ಮರಣೀಯ’ ಸಮಾರಂಭದಲ್ಲಿ ಈ ಪರಿಚಯ ಕೃತಿಯು ಬೆಳಕು ಕಾಣಲಿರುವ   ಆಹ್ವಾನಪತ್ರ ಹಾಗೂ ’ನಿಮಗೆ ಸನ್ಮಾನವನ್ನೂ ಏರ್ಪಡಿಸಲಾಗಿದೆ ಬನ್ನಿ’ ಎಂಬ ಪ್ರತ್ಯೇಕ ಚೀಟಿಯು ತಲುಪಿತು!
೧೦೮ ಮುನಿಶ್ರೀ ಪುಣ್ಯಸಾಗರ ಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅದ್ದೂರಿಯ ಆಹ್ವಾನಪತ್ರಿಕೆಯಲ್ಲಿ ಸಾಧ್ಯವಿರುವಷ್ಟೂ ಅತಿಸಣ್ಣ ಅಕ್ಷರದಲ್ಲಿ ಶ್ರೀ ಸುಧಾರ್ಥಿ ಹಾಸನ ಅವರ ’ಸಿರಿಭೂವಲಯದ ಒಳನೋಟ’  ಕೃತಿ ಬಿಡುಗಡೆ ಎಂಬ ಮಾಹಿತಿಯನ್ನು ಹುಡುಕಿ ನೋಡಬೇಕಿತ್ತು!!
 ಆಹ್ವಾನ ಪತ್ರಿಕೆಯಲ್ಲಿ ಈ ಮಹಿತಿಯ ವಿಚಾರ ಎಲ್ಲಾದರೂ ಹೋಗಲೀ, ಜಗದ್ವಿಖ್ಯಾತ ಕವಿ ಕುಮುದೇಂದುವಿನ ಹೆಸರಿಗೂ  ಅಲ್ಲಿ ಪ್ರವೇಶವಿರಲಿಲ್ಲ!! ಬರಹಗಾರನನ್ನು ಸನ್ಮಾನಿಸುವ ಮಾಹಿತಿಯೂ ಇಲ್ಲ!! ಸಮಾರಂಭಕ್ಕೆ ಹೋಗುವುದೋ ಬೇಡವೋ ಎಂಬ ಸಮಸ್ಯೆ ಎದುರಾಯಿತು.
೨೦೧೦ರಲ್ಲಿ ’ಸಿರಿಭೂವಲಸಾರ’ ಪ್ರಕಟವಾದಾಗ ಆ ಟ್ರಸ್ಟ್  ನವರಿಂದ ಆಹ್ವಾನ ಪತ್ರಿಕೆಯೂ ಇರಲಿಲ್ಲ!! ಕಾರ್ಯಕ್ರಮದ ಸ್ಥಳ, ಸಮಯ ಕೇಳಿದಾಗ, ’ಅಂತರ್ಜಾಲತಾಣದಲ್ಲಿದೆ ನೋಡಿ’  ಎಂದು ಅವರು ಉತ್ತರಿಸಿದ್ದರು!  ಈ ಟ್ರಸ್ಟ್ ನವರು ನಿಮಗಾಗಿಯಲ್ಲವಾದರೂ  ಗಣ್ಯರ ಸಲುವಾಗಿ ಅದ್ಧೂರಿಯ ಆಹ್ವಾನಪತ್ರಿಕೆ ಮಾಡಿಸಿದ್ದಾರೆ!   ಯಾವುದೋ ನಿಗೂಢ ಉದ್ದೇಶದಿಂದ ಈ ರೀತಿವ್ಯವಸ್ಥಿತವಾಗಿ ನಡೆದಿದೆ.  ಏನಾದರಾಗಲೀ ಕಾರ್ಯಕ್ರಮಕ್ಕೆ ಹೋಗಿ ಬರುವುದು ಸೂಕ್ತ ಎಂದು ಹಿತೈಷಿಗಳು ಸೂಚಿಸಿದರು.
ಅಂದಿನ ಕಾರ್ಯಕ್ರಮದ ಪ್ರಾರಂಭಕ್ಕೆ ಸ್ವಲ್ಪ ಮುಂಚಿತವಾಗಿಯೇ ಸುಧಾರ್ಥಿಯು ಸಭಾಂಗಣಕ್ಕೆ ಪ್ರವೇಶಿಸಿದ್ದಾಯಿತು. ಪರಿಚಯದ ಮಿತ್ರರೊಬ್ಬರು ಈತನನ್ನು ಸಭಾಂಗಣದ  ಪಕ್ಕಕ್ಕೆ ಕರೆದೊಯ್ದು,  ’ನಿಮಗೆ ವೇದಿಕೆಯಮೇಲೆ ಆಸನವಿಲ್ಲ. ಸಭಿಕರೊಂದಿಗೇ ಕುಳಿತಿರಬೇಕು. ಸನ್ಮಾನಕ್ಕೆ ಹೆಸರು ಸೂಚಿಸಿದಾಗಲಷ್ಟೇ ವೇದಿಕೆಯಮೇಲಕ್ಕೆ ಹೋಗಬೇಕು. ಇಬ್ಬರು ಪೊಲೀಸ್ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿರುತ್ತಾರೆ.  ಹಲವಾರು ಜನ ಪೊಲೀಸರು ಮಫ್ತಿಯಲ್ಲಿ ಸಭಿಕರಾಗಿದ್ದಾರೆ. ಹಂ.ಪ. ನಾಗರಾಜಯ್ಯನವರು ನಿಮ್ಮ ಪುಸ್ತಕದ ವಿಚಾರವಾಗಿ ಮಾತನಾಡುತ್ತಾರೆ.  ಅವರು ಏನೇ ಮಾತನಾಡಿದರೂ ನೀವು ಯಾವುದೇ ಪ್ರತಿಕ್ರಿಯೆ ತೋರಿಸಬೇಡಿ. ನಿಮ್ಮ ಪಕ್ಕದಲ್ಲಿ ಕುಳಿತವರು ಅದನ್ನು ಗಮನಿಸುತ್ತಾರೆ. ದಯವಿಟ್ಟು ಯಾವುದೇ ಅಸಮಧಾನವನ್ನೂ ವ್ಯಕ್ತ ಪಡಿಸಬೇಡಿ’ ಎಂದು ಕಿವಿಮಾತು ಹೇಳಿ ಮುನ್ನೆಚ್ಚರಿಕೆ ನೀಡಿದರು!!
ಅಲ್ಲಿಗೆ ಅಗಮಿಸಿದ ಟ್ರಸ್ಟ್ ನವರು ಸುಧಾರ್ಥಿಯನ್ನು ಗುರುತಿಸಿ, ಸಭಾಂಗಣಕ್ಕೆ ಕರೆದೊಯು, ಪ್ರೇಕ್ಷರ ಸಾಲಿನಲ್ಲಿ ಕುಳ್ಳಿರಿಸಿದರು. ನಾಲ್ಕು ಕೃತಿಗಳ ಬಿಡುಗಡೆ ಹಾಗೂ ೯೦ ಜನ ಪ್ರತಿಭಾವಂತ ವಿಧ್ಯಾರ್ಥಿಗಳನು ಪುರಸ್ಕರಿಸುವಕಾರ್ಯಕ್ರಮವಿದ್ದ ಕಾರಣದಿಂದ ಸಾವಿರಾರು ಪ್ರೇಕ್ಷಕರಿಂದ ಸಭಾಂಗಣವು  ತುಂಬಿ ತುಳುಕುತ್ತಿತ್ತು.  ಕಾರ್ಯಕ್ರಮದ ನಿಯೋಜಿತ  ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
ಅಂದಿನ ವೇದಿಕೆಯಲ್ಲಿ ಸಿರಿಭೂವಲಯಕ್ಕೆ ಸಂಬಂಧಿಸಿದ ಕೃತಿಯಲ್ಲದೇ, ಬೇರೆ ಮೂರು ಮರುಮುದ್ರಿತ ಕೃತಿಗಳ ಬಿಡುಗಡೆಯಾಗಲಿದ್ದುವು.  ನಾಲ್ಕು ಕೃತಿಗಳನ್ನು ಕುರಿತು ಮಾತನಾಡಿದ ಶ್ರೀ ಹಂಪನಾ ಅವರು ಮೂರು ಕೃತಿಗಳ ವಿಚಾರವಾಗಿ ನಾಲ್ಕು ನಾಲ್ಕು ಮಾತುಗಳನ್ನಾಡಿ, ’ಸಿರಿಭೂವಲಯದ ಒಳನೋಟದ’ ವಿಚಾರಕ್ಕೆ ಪ್ರವೇಶಿಸಿದರು.   
’ ಎಷ್ಟೇ ಒತ್ತಾಯವಿದ್ದರೂ ನಾನು ಸಿರಿಭೂವಲಯದ ವಿಚಾರವಾಗಿ ಬಾಯಿಮುಚ್ಚಿಕೊಂಡಿದ್ದೆ.  ಇಂದು ಪ್ರಥಮಬಾರಿಗೆ ವೇದಿಕೆಯಿಂದ ಮಾತನಾಡುತ್ತಿದ್ದೇನೆ. ಇದಕ್ಕೆ ಕಾರಣ: ಶ್ರೀ . ಎಂ. ಜಯಚಂದ್ರ ಅವರು.  ’ಕಳೆದ ೫೦  ವರ್ಷಗಳಿಂದ ನೀವು ಸಿರಿಭೂವಲಯದ ವಿಚಾರವಾಗಿ  ಮೌನವಾಗಿದ್ದೀರಿ. ಹೀಗೇ ಸುಮ್ಮನಿದ್ದರಾಗುವುದಿಲ್ಲ. ವಾಸ್ತವ ಸಂಗತಿ ತಿಳಿಸಿ, ಈಗಲಾದರೂ ಏನಾದರೂ ಹೇಳಿ’ ಎಂದು ಒತ್ತಾಯಿಸಿದ ಕಾರಣದಿಂದ  ಮೊದಲಬರಿಗೆ ವೇದಿಕೆಯಿಂದ ಸಿರಿಭೂವಲಯ ಕುರಿತು ಮಾತನಾಡಲಿದ್ದೇನೆ’ ಎಂದು ಸೂಚಿಸಿ,  ’೧೯೫೦ ರಿಂದ ಸಿರಿಭೂವಲಯದ ವಿಚಾರ ಪ್ರಚಾರದಲ್ಲಿದೆ. ಈ ವಿಚಾರವಾಗಿ  ಹಾಸನದ ಸುಧಾರ್ಥಿಯವರು .  ವಿಸ್ತಾರವಾಗಿ ಬರೆದಿದ್ದಾರೆ.
ಕಲ್ಪನೆಯಿಂದ ಭಾವನಾತ್ಮಕವಾಗಿ ವಿಹರಿಸುವವರಿಗೆ ಇದು ಇಷ್ಟವಾಗುತ್ತದೆ. ಅದರೆ, ಸ್ಪಷ್ಟವಾದ ಇತಿಹಾಸದ ವಿವರಗಳು ದೊರೆತಿಲ್ಲ.  ಎಲ್ಲವೂ ಕಲ್ಪನೆಯಿಂದ ಕೂಡಿದ್ದು.  ಈ ಸಿರಿಭೂವಲಯಗ್ರಂಥಕ್ಕೆ ಮುಖ್ಯವಾದ ಚೌಕಟ್ಟು ನೀಡಿದವರು ಯಲ್ಲಪ್ಪಶಾಸ್ತ್ರಿಯವರು.  ಈ ವಿಚಾರವಾಗಿ ಸುಧಾರ್ಥಿಯವರು ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳನ್ನು ನಾನು ಓದಿದ್ದೇನೆ. ....... ಸಿರಿಭೂವಲಯದಲ್ಲಿ ಏನಿದೆ ಎಂಬುದನ್ನು ಎಲ್ಲರೂ ಒಪ್ಪುವಂತೆ ಸಾಧಿಸಿ ತೋರಿಸಬೇಕು. ಅದಿನ್ನೂ ಅಗಿಲ್ಲ! 
ಏನೇ ಇರಲೀ, ಸುಧಾರ್ಥಿಯವರು ಕಳೆದ ೨೫ ವರ್ಷಗಳಿಂದ ವ್ರತವಾಗಿ- ನೋಂಪಿಯಗಿ ಆಚರಿಸಿ ಈ ಪರಿಚಯಕೃತಿಗಳನ್ನು ಬರೆದಿದ್ದಾರೆ. ಅದಕ್ಕಾಗಿ ಸುಧಾರ್ಥಿಯವರನ್ನು ಜೈನ ಸಂಪ್ರದಾಯದವರುಮಾತ್ರವಲ್ಲ, ಎಲ್ಲರೂ ಅಭಿನಂದಿಸಿ, ಬೆನ್ನು ತಟ್ಟಬೇಕು’ ಎಂಬುದು ಹಂಪನಾ ಅವರ ಅಂದಿನ ಭಾಷಣದ ಸಾರಾಂಶ.            ( ಇದನ್ನು ಕುರಿತು ಸಮಗ್ರವಾದ ಮಹಿತಿಗಳನ್ನು ಸೂಚಿಸಿ, ಅಂತರ್ಜಾಲತಾಣದಲ್ಲೂ,  ಮುಂದೆ  ೨೦೧೩ರಲ್ಲಿ ಪ್ರಕಟವಾದ  ’ಸಿರಿಭೂವಲಯಸಗರರತ್ನಮಂಜೂಷ’ ದಲ್ಲಿಯೂ ವಿವರವಾದ ಮಾಹಿತಿಯನ್ನು ನೀಡಲಾಗಿದೆ.  ಇಲ್ಲಿಗೆ ಅಗತ್ಯವಾದಷ್ಟು ಮಾಹಿತಿಗಳನ್ನು ಮಾತ್ರ ಇಲ್ಲಿ ಸೂಚಿಸಲಾಗಿದೆ. ವಿವರಗಳನ್ನು ನೋಡಬಯಸುವವರು  ಮೇಲೆ ಸೂಚಿಸಿರುವೆಡೆಯಲ್ಲಿ ಇವುಗಳನ್ನು ಗಮನಿಸಬಹುದಾಗಿದೆ)
ಅಂದಿನ ಸಮಾರಂಭದಲ್ಲಿ ಹಂಪನಾ ಅವರ ಭಾಷಣವು ಮುಕ್ತಾಯವಾದನಂತರ ಲೇಖಕನನ್ನು ಸನ್ಮಾನಿಸಲು ವೇದಿಕೆಗೆ ಆಹ್ವಾನಿಸಲಾಯಿತು.  ಲೇಖಕನು ವೇದಿಕೆಗೆ ಆಗಮಿಸಿದ ಕೂಡಲೇ  ಹಂಪನಾ ಅವರು ಆತನ ಕೈ ಕುಲುಕಿ ಅಭಿನಂದಿಸಿ, ’ಬಹಳ ಒಳ್ಳೆಯ ಕೆಲಸಮಾಡಿದ್ದೀರಿ.  ಸಿರಿಭೂವಲಯ ಕುರಿತ ನಿಮ್ಮ ಪರಿಚಯಗ್ರಂಥಗಳ ರಚನೆ ತುಂಬ ಶ್ಲಾಘನೀಯ. ಈ ಪ್ರಯತ್ನ ನಿಲ್ಲಿಸಬೇಡಿ. ಮುಂದುವರೆಸಿ’ ಎಂದು ಸಾಂಪ್ರದಾಯಿಕವಾಗಿ  ಅಭಿನಂದಿಸಿದ್ದಾಯಿತು. ಆದರೆ, ಈ ಅಭಿನಂದನೆಯ ಮಾತುಗಳು ಸಭಿಕರನ್ನು ತಲುಪಲು  ಅವಕಾಶವಿರಲಿಲ್ಲ ಮೈಕಾಸುರನ ಕುತ್ತಿಗೆಯನ್ನು ಹಿಸುಕಿ ನಿಷ್ಕ್ರಿಯಗೊಳಿಸಲಾಗಿತ್ತು!!
ಲೇಖಕನಿಗೆ ಸನ್ಮಾನವಾದನಂತರ ಅದಕ್ಕೆ ಕೃತಜ್ಞತೆ ಸೂಚಿಸಿ ಎರಡುಮಾತನಾಡಲೂ ಅವಕಾಶವಿರಲಿಲ್ಲ! ಹಂಪನಾ ಅವರ ಭಾಷಣದ ಅನಿಸಿಕೆಗೆ ಪ್ರತ್ಯುತ್ತರ ಕೊಡಲೂ ಲೇಖಕನಿಗೆ ಅವಕಾಶವಿರಲಿಲ್ಲ!!  ಒಂದು ರೀತಿಯಲ್ಲಿ ಎದುರಾಳಿಯ ಕೈಕಾಲುಗಳನ್ನು ಕಟ್ಟಿಹಾಕಿ, ಎಲ್ಲರೆದುರಿಗೆ ಅವನ ಕೆನ್ನೆಗೆ ಚೆನ್ನಾಗಿಬಾರಿಸಿ, ಬುದ್ಧಿವಾದ ಹೇಳಿದಂಥ ಅನುಭವ ಸುಧಾರ್ಥಿಗಾಯಿತು!
ಕುಮುದೇಂದುಮುನಿಯು ಬಳಸಿರುವ ’ಸಾಂಗತ್ಯ ಛಂದಸ್ಸಿನ’ ಸ್ವರೂಪವನ್ನು ಎಷ್ಟೇ ಸಾವಿರ ಸಲ ಹೇಳಿದರೂ ಕನ್ನಡ ವಿದ್ವಾಂಸರು  ’ಸಾಂಗತ್ಯ ಛಂದಸ್ಸು ೧೫ನೇ ಶತಮನದಿಂದ ಈಚೆಗೆ ಪ್ರಚಾರಕ್ಕೆ ಬಂದದ್ದು. ಆದ್ದರಿಂದ  ಸಾಂಗತ್ಯಛಂದಸ್ಸಿನ ಸಿರಿಭೂವಲಯವು  ೯ ನೇ ಶತಮಾನದ್ದಲ್ಲ’ ಎಂಬ ತುತ್ತೂರಿಯನ್ನು ಊದುತ್ತಲೇ ಇದ್ದಾರೆ. ಹಂಪನಾ ಅವರೂ  ಅಂದಿನ ವೇದಿಕೆಯಲ್ಲಿ ಇದನ್ನೇ ಮರುಪ್ರಸಾರಮಾಡಿದರು!
ಕೃತಿರಚನೆಯ ಕಾಲದವಿಚಾರವಾಗಿ ಸಾಂಗತ್ಯ ಛಂದಸ್ಸಿನ ಸ್ವರೂಪದ ವಿಚಾರವಾಗಿ ಸ್ವತಃ ಕವಿಯೇ  ನೀಡಿರುವ ಖಚಿತಮಾಹಿತಿಗಳಿಗಿಂತಲೂ, ಇಂದಿನ ವಿಶ್ವ ವಿದ್ಯಾಲಯದ ಮೇಧಾವಿ ಪ್ರಾಧ್ಯಾಪಕರುಗಳ ಊಹಾತ್ಮಕವಾದ ಹೇಳಿಕೆಗಳಿಗೇ ಹೆಚ್ಚು ಮಹತ್ವ ನೀಡುವುದಾದಲ್ಲಿ, ಅವರು ತಮ್ಮ ಜೀವಿತದ ಪೂರ್ತಿ ಅದನ್ನೇ ಭಜನೆಮಾಡುತ್ತ ಇರಲಿ!  ಅದರಿಂದ ಸುಧಾರ್ಥಿಗೆ ಅಗುವ ನಷ್ಟ ಯಾವುದೂ ಇಲ್ಲ!! ವಿವೇಕವಿದ್ದವರು ಕವಿಯ ಮಾತಿಗೆ ಕಿವಿಗೊಟ್ಟು ಮಾನ್ಯತೆ ನೀಡಲೀ, ಇಲ್ಲವಾದಲಿ ಇನ್ನೂ ಒಂದೆರಡು ಶತಮಾನಗಳ ಕಾಲ ಈ ಕಾವ್ಯವು ’ಕಬ್ಬಿಣದ ಕಡಲೆ’ಯಾಗಿಯೇ ಉಳಿಯಲಿ!!! ಎಂಬುದು ಈ ಸರಳ ಪರಿಚಯಕಾರನ ನಿಷ್ಠುರದ ನಿಲುವು!!
 ಈ ಕೃತಿಯಲ್ಲಿ ಮುದ್ರಿತ ಪ್ರತಿಗಳಸಂಖ್ಯೆಯನ್ನು ೧೦೦೦ ಎಂದು ನಮೂದಿಸಲಾಗಿದೆ. ಅದನ್ನು ಹಲವು ಸಾವಿರ ಸದಸ್ಯರಿಗೆ ಹಂಚುವುದಾರೂ ಹೇಗೆ!?  ಸಂಸ್ಥೆಯ ಆಜೀವ ಸದಸ್ಯತ್ವ ಪಡೆದ ಹಲವರು ಸುಧಾರ್ಥಿಯೊಂದಿಗೆ  ಇದರ ಪ್ರತಿಗಾಗಿ ಸಂಪರ್ಕಿಸಿದ್ದಿದೆ! ಪ್ರಕಾಶಕರನ್ನು ಸಂಪರ್ಕಿಸಲು ಹೇಳಿದ್ದಾಯಿತು!! 
ಕಳೆದ ೬೫ ವರ್ಷಗಳಿಂದಲೂ ಸಿರಿಭೂವಲಯದ ವಿಚಾರದಲ್ಲಿ ಅಸಮರ್ಪಕವಾಗಿ ವ್ಯವಹರಿಸಿರುವ ವಿದ್ವಾಸರೆಲ್ಲರ ಅನಿಸಿಕೆಗಳಿಗೂ ’ಸಿರಿಭೂವಲಯಸಾರ’ ದಲ್ಲಿ ಸೂಕ್ತವಾಗಿ ಪ್ರತಿಕ್ರಿಯಿಸಿದ್ದಾಗಿತ್ತು.  ಇದುವರೆವಿಗೆ ಹಂಪನಾ ಅವರು ಈ ವಿಚಾರವಾಗಿ ಬಾಯಿಬಿಚ್ಚಿರಲಿಲ್ಲ! ಈಗ ಬಿಚ್ಚಿದರು, ಈಮೂಲಕ ಅದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸಿದ್ದಾಯಿತು.  ಇನ್ನು ಮುಂದೆ ಈ ಕಾವ್ಯದ ವಿಚಾರವಾಗಿ ಯಾರು ಏನುಬೇಕಾದರೂ ಹೇಳಿಕೊಳ್ಳಲಿ, ಅನಗತ್ಯವಾಗಿದ್ದಲ್ಲಿ ಅದಕ್ಕೆ ತಾನು ಪ್ರತಿಕ್ರಿಯಿಸುವುದು ಬೇಕಿಲ್ಲ ಎಂಬುದು ಸುಧಾರ್ಥಿಯ ಈಚಿನ ನಿಲುವಾಗಿದೆ! (ಮುಂದುವರೆಯುವುದು) 
                                     -ಜಮದಗ್ನಿಸುತ.

No comments:

Post a Comment