Tuesday 26 May 2020

ಸಿರಿಭೂವಲಯದ ಒಂದು ಮಿಂಚುನೋಟ

**ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ   
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆ**** ಭಾಗ.೪

೩)**ಸಿರಿಭೂವಲಯದ ಒಂದು ಮಿಂಚುನೋಟ**       
                                                                                           
   ’ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯವು  ಕನ್ನಡದ ಒಂದು ಅಂಕಕಾವ್ಯ.  ಪ್ರಪಂಚದ ಹತ್ತನೇ ಆಚ್ಚರಿ  ಎನಿಸಿರುವ ಈ ಕಾವ್ಯವು ಜಗತ್ತಿನ ಮೊಟ್ಟಮದಲನೆಯ ವಿಶ್ವಕೋಶ. ಜ್ಞಾನಕ್ಕೆ ಸಂಬಂಧಿಸಿದಂತೆ  ಈಕಾವ್ಯದಲ್ಲಿ ಅಡಕವಾಗದೇ ಇರುವ ವಿಚಾರವು ಯಾವುದೂ ಇಲ್ಲ ಎಂಬುದು  ಕವಿಯ ಘೋಷಣೆ! ಕಾವ್ಯವು ರಚನೆಯಾದ ಕಾಲದಲ್ಲಿ (ಕ್ರಿ.ಶ. ೮೦೦) ಭಾರತದಲ್ಲಿ ಪ್ರಚಲಿತವಿದ್ದ ಸಮಗ್ರ ಸಾಹಿತ್ಯ ಕೃತಿಗಳ  ಸಾರವನ್ನೂ ನೂರುಸಾವಿರಲಕ್ಷಕೋಟಿ ಶ್ಲೋಕಗಳ ವ್ಯಾಪ್ತಿಯಲ್ಲಿ, ಕನ್ನಡ ಭಾಷೆಯಲ್ಲಿ, ಕನ್ನಡದ ಅಂಕಿಗಳ ರೂಪದಲ್ಲಿ  ಈ ಕಾವ್ಯದಲ್ಲಿ ಕಟ್ಟಿರಿಸಲಾಗಿದೆ!!
ಸಾವಿರದಿನ್ನೂರು ವರ್ಷಗಳಷ್ಟು ಹಿಂದೆ ಆತ್ಮಜ್ಞಾನ; ಗಣಕಯಂತ್ರಕ್ರಮ; ಗಣಿತ; ವಸ್ತುವಿಜ್ಞಾನ; ಸಾಹಿತ್ಯ; ಕಲೆ ಇತ್ಯಾದಿ ವಿಚಾರಗಳಲ್ಲಿ ಭಾರತೀಯರು ಅದರಲ್ಲೂ ಕನ್ನಡಿಗರು ಹೊಂದಿದ್ದ ಮಹೋನ್ನತಿಯು  ಯಾವಮಟ್ಟದ್ದೆಂಬುದನ್ನು ಖಚಿತವಾಗಿ ತಿಳಿಯಲು  ಇದೊಂದು ಜೀವಂತಸಾಕ್ಷಿಯಾಗಿ  ಉಳಿದಿದೆ.  ಇದನ್ನು ಉಳಿಸಿಕೊಟ್ಟ  ಕುಮುದೇಂದುಮುನಿಗೆ  ಭಾರತೀಯರು; ವಿಶೇಷವಾಗಿ ಕನ್ನಡಿಗರು  ಎಷ್ಟು ಕೃತಜ್ಞತೆಯನ್ನರ್ಪಿಸಿದರೂ  ಸಾಲದೆನಿಸುತ್ತದೆ.
 ಇಂಥ ಮಹತ್ತರವಾದ ಪ್ರಾಚೀನಕಾವ್ಯವನ್ನು ಇಂದಿನ ಓದುಗರಿಗೆ ಮನವರಿಕೆಯಾಗುವಂತೆ ಸರಳವಾಗಿ ಪರಿಚಯಿಸುವುದು ನಿಜಕ್ಕೂ ಬಹಳ ಕಠಿಣವಾದ ಕಾರ್ಯ.  ಇಂಥ ದುಸ್ಸಾಹಸಕ್ಕೆ ಕೈ ಹಾಕಿದ ಹಾಸನದ ಸುಧಾರ್ಥಿಯು  ’ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯದ  ಒಂದು ಮಿಂಚುನೋಟ’ ಎಂಬ ಕಿರುಹೊತ್ತಿಗೆಯನ್ನು  ರೂಪಿಸಿದ್ದು ಅದನ್ನೂ ಶ್ರೀಮತಿ ಗಿರಿಜಾ ಅವರೇ ೨೦೧೨ರಲ್ಲಿ ಪ್ರಕಟಿಸಿದ್ದಾರೆ.  ಈ ಕಿರುಹೊತ್ತಿಗೆಯು ಡೆಮಿ ೧/೪ ಅಳತೆಯ   ೯೫ ಪುಟಗಳ ವ್ಯಾಪ್ತಿಯಲ್ಲಿದೆ.
ಓದುಗರೊಂದಿಗೆ, ಮೊದಲಮಾತು,  ಪೀಠಿಕೆ; ಸಿರಿಭೂವಲಯದ ಮಿಂಚುನೋಟ,  ಸಿರಿಭೂವಲಯಕ್ಕೆ ಸಂಬಂಧಿಸಿದ ಕೆಲವು ಸತ್ಯ-ಮಿಥ್ಯಗಳು,  ಸಿರಿಭೂವಲಯಸಾರ ಕುರಿತು ಒಂದೆರಡು ಅನಿಸಿಕೆಗಳು, ಕೆಲವೊಂದು ದೂ(ರು)ರವಾಣಿಯ ಅನಿಸಿಕೆಗಳು,  ಸಿರಿಭೂವಲಯದ ಕೆಲವು ಸಾಂಗತ್ಯಪದ್ಯಗಳು ಎಂಬುದಾಗಿ ಬರಹವನ್ನು ವಿಂಗಡಿಸಲಾಗಿದೆ.  ಮೂಲಕೃತಿಗೆ ಸಂಬಂಧಿಸಿದ ಕೆಲವೊಂದು ವಿಚಾರಗಳನ್ನು ’ಮಂಜೂಷ ಮಾಹಿತಿಗಳ’ ರೂಪದಲ್ಲಿ ಕೊಟ್ಟಿರುವುದು ಹೆಚ್ಚು ಗಮನಸೆಳೆಯುತ್ತವೆ ಹಾಗೂ ಉಪಯುಕ್ತವಾದುವಾಗಿವೆ.
ಪೀಠಿಕೆಯಲ್ಲಿ ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳಿಗೆ ಸಂಬಂಧಿಸಿದ ಸಂಕ್ಷಿಪ್ತವಿವರಣೆ, ಗಾಯತ್ರೀಮಂತ್ರದ ವಿಚಾರ,  ಜೈನ ಸಂಪ್ರದಾಯದ ಉಗಮ, ಸ್ಯಾದ್ವಾದದ ಸ್ವರೂಪ, ಈ ಸಂಪ್ರದಾಯದ ಮೂಲಪುರುಷ ಆಧಿತೀರ್ಥಂಕರ ಋಷಭದೇವನು ಉಪದೇಶಿಸಿದ  ’ದಿವ್ಯಧ್ವನಿ’ಯು ೨೪ನೇ ತೀರ್ಥಂಕ ಮಹಾವೀರನ ವರೆವಿಗೂ ಹರಿದುಬಂದಿರುವ ವಿಚಾರ ಇತ್ಯಾದಿಗಳಿಗೆ   ಸಂಬಂಧಿಸಿದಂತೆ ವಿವರಣೆಯನ್ನು ಇಲ್ಲಿ ನೀಡಲಾಗಿದೆ.  ಇತ್ತೀಚಿನ ಕೆಲವರು ಮಹಾವೀರನೇ ಜೈನ ಸಂಪ್ರದಾಯದ ಮೂಲಪುಋಷ ಎಂದು  ಸೂಚಿಸುವುದಿದೆ. ಆದರೆ ಇದು ಸರಿಯಲ್ಲ. ಕೋಟ್ಯಾಂತರ ವರ್ಷಗಳಷ್ಟು ಪ್ರಾಚೀನನಾದ ಋಷಭದೇವನಿಂದ ಪ್ರಾರಂಭವಾಗಿ ಮಹಾವೀರನವರೆಗೆ ೨೪ ಜನ ತೀರ್ಥಂಕರರು ಜೈನಸಂಪ್ರದಾಯದ ಧರ್ಮೋಪದೇಶ ಮಾಡಿರುವರೆಂಬುದಕ್ಕೆ ಪುರಾಣಕೃತಿಗಳ ಆಧಾರ ಉಳಿದುಬಂದಿದೆ. ಇದನ್ನು ಅಲ್ಲಗಳೆಯಲಾಗದು.
ಆದಿನಾಥ ಋಷಭದೇವನಿಂದ ರೂಪಿಸಲ್ಪಟ್ಟ  ’ಧರ್ಮಚಕ್ರ’ ದಲ್ಲಿ ಒಂದು ಕೋಟಿ ಹತ್ತುಲಕ್ಷದ ಮುವ್ವತ್ತುಸವಿರ ಅರೆಗಳಿರುವ ಮಾಹಿತಿ, ೧ ರಿಂದ  ೬೪ ಅಂಕಿಗಳಿಗೆ ಅನ್ವಯವಾಗುವ ೬೪ ಅಕ್ಷರಗಳ ಕನ್ನಡ ವರ್ಣಮಾಲೆ. ಈ ಅಕ್ಷರಗಳ ಸಂಯೋಗ ಭಂಗದಿಂದ ಜಗತ್ತಿನ ಸಕಲ ಶಬ್ದಾಗಮವೂ ಹುಟ್ಟಿಬರುವ ಅಚ್ಚರಿಯಮಾಹಿತಿಯನ್ನು ಕವಿ ಕುಮುದೇಂದುಮುನಿಯು ನಿರೂಪಿಸಿರುವ ವಿಚಾರ ಮುಂತಾದುವುಗಳು ಈ ಕಿರುಹೊತ್ತಿಗೆಯಲ್ಲಿ ಅಡಕವಾಗಿವೆ.
ಸಿರಿಭೂವಲಯದ ಮಿಂಚುನೋಟದಲ್ಲಿ  ಈ ಮಹಾನ್ ಕಾವ್ಯದ  ಪ್ರಾಕ್ಚರಿತ್ರೆ ಹಾಗೂ ಪ್ರಾಚೀನ ಮತ್ತು ಆಧುನಿಕ ಇತಿಹಾಸಕ್ಕೆ ಸಂಬಂಧಿಸಿದ ಮಾಹಿತಿಗಳ ಗೋಜಲನ್ನು ಸೂಕ್ತವಾಗಿ ಬಿಡಿಸಿ, ಖಚಿತವಾದ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ಸಮರ್ಪಕವಾಗಿ ಸೂಚಿಸಲಾಗಿದೆ.
ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ ಕೆಲವಾರು ವಿಚಾರಗಳನ್ನು ಕುರಿತ ಸಂಕ್ಷಿಪ್ತವಿವರಣೆಯೂ  ಇಲ್ಲಿ ದಾಖಲಾಗಿದೆ. ಸಿರಿಭೂವಲಯದಲ್ಲಿ ಅಡಕವಾಗಿರುವ ಮಾಹಿತಿಗಳ ನೆಲೆಯಲ್ಲಿ ನಮ್ಮ ದೇಶ, ಭಾಷೆ, ಸಾಹಿತ್ಯ ಹಾಗೂ ಧರ್ಮಕ್ಕೆ  ಸಂಬಂಧಿಸಿದ ಹಲವಾರು ತಪ್ಪುಗ್ರಹಿಕೆಗಳು, ಬುಡಮೇಲಾಗಿರುವ ಸಂಗತಿಯನ್ನು ಸೂಚಿಸಲಾಗಿದೆ.
ಸಿರಿಭೂವಲಯಕಾವ್ಯವು ಅಂಕರೂಪಕ್ಕೆ ಪರಿರ್ತಿತವಾಗಿರುವ ಕ್ರಮವನ್ನು ಕುರಿತ ಸಂಕ್ಷಿಪ್ತಮಾಹಿತಿಯೂ ಇಲ್ಲಿ ಸೇರಿದೆ.  ಕಾವ್ಯರಚನೆಯ ಕಾಲವನ್ನು ಕುರಿತು ಆಧುನಿಕವಿದ್ವಾಂಸರು ತೆಗೆದಿದ್ದ ತಕರಾರುಗಳಿಗೆ  ಸಮಂಜಸವಾದ ಉತ್ತರಗಳನ್ನು ಸೂಚಿಸಲಾಗಿದೆ.
ಜೈನಸಂಪ್ರದಾಯದ ದ್ವಾದಶಾಂಗಸೂತ್ರಗಳು, ಛಕ್ಖಂಡಾಗಮ,  ಧವಳಗಳು, ಪೂರ್ವೇಕಾವ್ಯ, ಮಂಗಳಪಾಹುಡ, ಭೂತಬಲಿಯ ಭೂವಲಯ,  ಇತ್ಯಾದಿ ವಿಚಾರಗಳ ಪರಸ್ಪರ ಸಂಬಂಧವನ್ನು  ಕುರಿತು ಸೂಚಿಸಲಾಗಿದೆ.
ಮಲ್ಲಿಕಬ್ಬೆ ಎಂಬ ಸಾಧ್ವಿಯು ಪ್ರತಿಲಿಪಿಮಾಡಿಸಿದ ಅಂಕಭೂವಲಯದ ಪ್ರತಿಯ ಮಾಹಿತಿ, ದೊಡ್ಡಬೆಲೆ ಧರಣೇಂದ್ರಪಂಡಿತರಲ್ಲಿ ಅದು ವಂಶಪಾರಂಪರ್ಯವಾಗಿ ಉಳಿದುಬಂದಿದ್ದಮಾಹಿತಿ, ಇವರ ದೂರದ ಸಂಬಂಧಿ ಯಲ್ಲಶಾಸ್ತ್ರಿಯವರಿಗೆ ಈ ಪ್ರತಿಯು ಪ್ರಾಪ್ತವಾದ ಮಾಹಿತಿ,  ಕೆ. ಶ್ರೀಕಂಠಯ್ಯನವರು ಹಾಗೂ ಕೆ. ಅನಂತಸುಬ್ಬರಾಯರು  ಈ ಅಂಕಚಕ್ರಗಳ ಸಂಪರ್ಕಕ್ಕೆ ಬಂದದ್ದು,  ಮಹರ್ಷಿ ದೇವರಾತರ ಆಸಕ್ತಿಯಿಂದಾಗಿ ಡಾ|| ರಾಜೇಂದ್ರಪ್ರಸಾದರು ಈ ಅಚ್ಚರಿಯ ಕಾವ್ಯದ ಕೆಲವು ಭಾಗಗಳನ್ನು ರಾಷ್ಟ್ರೀಯ ಪ್ರಾಚ್ಯಪತ್ರಾಗಾರ  ಇಲಾಖೆಯಲ್ಲಿ ಸಂರಕ್ಷಿಸಿದ್ದು, ಮುಂದೆ ೧೯೫೩ರಲ್ಲಿ ಆಧುನಿಕ ಮುದ್ರಣದಲ್ಲಿ ಸಿರಿಭೂವಲಯದ ಅಕ್ಷರ ಅವತರಣಿಕೆಯು ಪ್ರಕಟವಾದುದು,  ಇದಕ್ಕೆ ಸಂಬಂಧಿಸಿದಂತೆ ಅಂದಿನ ವಿದ್ವಾಂಸರು ಸೃಷ್ಟಿಸಿದವಿವಾದ, ಇಂದಿಗೂ ಕನ್ನಡದ ವಿದ್ವಾಂಸರು ಸಿರಿಭೂವಲಯದ ವಿಚಾರವಾಗಿ ಹೊಂದಿರುವ ತಪ್ಪು ಕಲ್ಪನೆ ಮುಂತಾದ ವಿಚಾರಗಳ ಸರಳ ಪರಿಚಯವು ಇಲ್ಲಿ ದಾಖಲಾಗಿವೆ. ಸಂಶೋಧಕ ಕರ್ಲಮಂಗಲಂ ಶ್ರೀಕಂಠಯ್ಯನವರು ಸಿರಿಭೂವಲಯದ ಸಂಶೋಧನೆಯಹಾದಿಯಲ್ಲಿ  ಪ್ರಕಟಿಸಿರುವ  ಸೂಕ್ಷ್ಮ ಪ್ರತಿಭೆಯನ್ನೂ ಇಲ್ಲಿ ದಾಖಲಿಸಲಾಗಿದೆ.
೧೯೫೩ರ ಅಕ್ಷರ ಅವತರಣಿಕೆಯು  ಅಂಕಭೂವಲಯದಿಂದ ರೂಪುಗೊಂಡದ್ದಲ್ಲ ಎಂಬ ಮಾಹಿತಿಯನ್ನು ಕುರಿತು ಈ ಕಿರುಹೊತ್ತಿಗೆಯಲ್ಲಿ ಖಚಿತವಾಗಿ ಸೂಚಿಸಲಾಗಿದೆ. ೧೯೫೩ರರ ಅಕ್ಷರಭೂವಲಯಕ್ಕೆ ಸಂಬಂಧಿಸಿದ ಸತ್ಯಸಂಗತಿಯನ್ನು ಕೆ. ಶ್ರೀಕಂಠಯ್ಯನವರು ಗುಪ್ತವಾಗಿರಿಸಿರುವುದು  ಯಾವಕಾರಣದಿಂದಲೇ ಆಗಿರಲೀ,  ಇದೊಂದು  ’ರಹಸ್ಯಕಾರ್ಯಾಚರಣೆಯ ಸಂಶೋಧನೆ’  ಎಂಬ ಕಲಂಕಕ್ಕೆ ಪಾತ್ರವಾದದ್ದಂತೂ ತಪ್ಪಲಿಲ್ಲ’  ಎಂದು ನಿಷ್ಪಕ್ಷಪಾತವಾಗಿ ಸೂಚಿಸಲಾಗಿದೆ.
ಅಕ್ಷರ ಭೂವಲಯದ ಪ್ರತಿಗಳು ಬೇರೆಡೆಯಲ್ಲಿ ದೊರೆಯುವುದೆಂಬ ವಿಚಾರವಾಗಿ ಇಲ್ಲದ  ಅಸಕ್ತಿ ಹುಟ್ಟಿಸಿ, ಎಲ್ಲೆಲ್ಲಿಗೂ ನಿರುಪಯುಕ್ತವಾಗಿ ಅಲೆದಾಡುವಂತೆಮಾಡಿದ ಕೆಲವಾರು ಗಣ್ಯರ ವಿಚಾರವಾಗಿಯೂ ಈ ಕಿರುಹೊತ್ತಿಗೆಯಲ್ಲಿ ಮಹಿತಿಯು ಅಡಕವಾಗಿದೆ!  ಸಿರಿಭೂವಲಯದ ವಿಚಾರವಾಗಿ ಕನ್ನಡಿಗರ ಸರ್ಕಾರವು ಪ್ರಕಟಿಸಿರುವ ನಿರ್ಲಕ್ಷ್ಯದ ಮಾಹಿತಿಯೂ ಇಲ್ಲಿದೆ! ಕೆಲವು ವಿದ್ವಾಂಸರು ತಮಗೆ ಅರ್ಥವಾಗದ ಈ ಮಹಾಕಾವ್ಯದಲ್ಲಿ ’ಏನೂ ಇಲ್ಲ’   (ಸಿರಿಭೂವಲಯದಲ್ಲಿ ಏನಿದೆ ಮಣ್ಣು!?) ಎಂದು ನೀಡಿರುವ ಹೋಣೆಗೇಡಿ ಹೇಳಿಕೆಗಳ ಮಾಹಿತಿಯೂ ಇಲ್ಲಿ ದಾಖಲಾಗಿವೆ.
ಸಿರಿಭೂವಲಸಾರದಲ್ಲಿ ವಿಸ್ತಾರವಾಗಿ ಚರ್ಚಿಸಿರುವ  ಪ್ರಮುಖ ವಿಚಾರಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಸೂಚಿಸಲಾಗಿದೆ.  ಸಿರಿಭೂವಲಯವನ್ನು ಕುರಿತ ಸಮರ್ಪಕವಾದ ಸರಳ ಪರಿಚಯಕೃತಿಯು ಪ್ರಕಟವಾಗಿ ವರ್ಷಗಳು ಉರುಳಿದರೂ ಕನ್ನಡವಿದ್ವಾಂಸರು ಹಾಗೂ ಕರ್ನಾಟಕದ ಸರ್ಕಾರವು ಈ ಪ್ರಾಚೀನ ಕನ್ನಡ ಕಾವ್ಯದ ವಿಚಾರದಲ್ಲಿ ಮೌನವಾಗಿರುವುದನ್ನು ಕುರಿತು ಇಲ್ಲಿ ವಿವರಿಸಲಾಗಿದೆ.
ಸಿರಿಭೂವಲಯವನ್ನು ಕುರಿತ ಸರಳ ಪರಿಚಯಕೃತಿಗಳ ವಿಚಾರವಾಗಿ ಆಸಕ್ತಿವಹಿಸಿದವರನ್ನು ಕುರಿತೂ ಇಲ್ಲಿ ದಾಖಲಿಸಲಾಗಿದೆ.
ಜೈನಯತಿಗಳಲ್ಲಿ ಪ್ರಚಲಿತವಿದ್ದ ’ಸಹಸ್ರಾವಧಾನ’ ಕುರಿತ ಸರಳ ವಿವರಣೆಯು ಅಚ್ಚರಿಯ ಸಂಗತಿಯಾಗಿದೆ. ಕೋಷ್ಟಬುದ್ಧಿ, ಬೀಜಬುದ್ಧಿ, ಪದಾನುಸಾರಿಣೀಬುದ್ಧಿ, ಸಂಛಿನ್ನಶ್ರೋತೃಬುದ್ಧಿ ಎಂಬ ನಾಲುರೀತಿಯ ವಿಶೇಷ ಬುದ್ಧಿಶಕ್ತಿಯನ್ನು ಕುರಿತ ವಿವರವು ನಮ್ಮ ಪ್ರಾಚೀನರ ಬುದ್ಧಿಶಕ್ತಿಯನ್ನು ಕುರಿತ ಅಚ್ಚರಿಯ ಮಾಹಿತಿಯಾಗಿದೆ.
 ಅಂಕಿಗಳು ಹಾಗೂ ಅಕ್ಷರಗಳ ನಡುವೆ ಅಡಗಿರುವ ಅಚ್ಚರಿಯ ಸಂಬಂಧ, ಅಂಕಿಗಳ ರೂಪದಲ್ಲಿ ಅಗಾಧವಾದ ಸಾಹಿತ್ಯ ರಾಶಿಯನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳುವ ಮೇಧಾವಿತನ, ಅಪಾರವಾದ ವ್ಯಾಪ್ತಿಹೊಂದಿದ ಅಂಕಿಗಳ ಸಮೂಹವನ್ನು ಗಣಿತ ಶಾಸ್ತ್ರದ ಸಕಲ ಪರ್ಯಾಯಗಳನ್ನೂ ತಿಳಿಯುವ ಅತ್ಯಂತ ಕ್ಲಿಷ್ಟವಾದ  ವಿಚಾರಗಳು ಈ ನಾಲ್ಕುಕ್ರಮದ ಬುದ್ಧಿಶಕ್ತಿಯಲ್ಲಿ ಅಡಕವಾಗಿರುವುದನ್ನ ಸೂಕ್ಷ್ಮವಾಗಿ ಸೂಚಿಸಲಾಗಿದೆ.
ಸರಳವಾದ ಕನ್ನಡ ವಿವರಣೆಗಳೊಂದಿಗೆ ಕೆಲವಾರು ಸಾಂಗತ್ಯ ಪದ್ಯಗಳನ್ನೂ ಇಲ್ಲಿ ಅಳವಡಿಸಲಾಗಿದೆ. ಸಿರಿಭೂವಲಯದ ಸರಳಪರಿಚಯಕೃತಿಗಳ ಸಂಕ್ಷಿಪ್ತ ಮಾಹಿತಿಯೊಂದಿಗೆ, ಕನ್ನಡ ಅಂಕಿಗಳ ಉಗಮ ಮತ್ತು ವಿಕಾಸವನ್ನು ಕುರಿತ ಚಿತ್ರ,  ಸಿರಿಭೂವಲಯದ ೬೪ ಅಕ್ಷರಗಳ ವರ್ಣಮಾಲೆ, ಸಿರಿಭೂವಲಯದ ಅಂಕಚಕ್ರದ ಚಿತ್ರ ಹಾಗೂ ಅಕ್ಷರ ಚಕ್ರದ ಚಿತ್ರಗಳನ್ನು ನೀಡಲಾಗಿದೆ. ಕೇವಲ ೯೫ ಪುಟಗಳ ವ್ಯಾಪ್ತಿಯಲ್ಲಿ ಸಿರಿಭೂವಲಯಕಾವ್ಯಕ್ಕೆ ಸಂಬಂಧಿಸಿದ ಅಗಾಧವಾದ ಮಾಹಿತಿಗಳನ್ನು ಕುರಿತು ವಿವರ ಒದಗಿಸಿರುವುದು  ಓದುಗರಿಗೆ ಉಪಯುಕ್ತವಾಗಿರುವುದರಲ್ಲಿ ಸಂಶಯವಿಲ್ಲ. (ಮುಂದುವರೆಯುವುದು) 
                                                                 -ಜಮದಗ್ನಿಸುತ.

No comments:

Post a Comment