Friday 9 April 2021

ವೇದ, ವೇದ. ಏನಿದನ್ನು ಕುರಿತ ವಾದ ಪ್ರತಿವಾದ; ವಿವಾದ!? (ಭಾಗ: ೫)

 

ಪೂರ್ವಜನ್ಮದ ಸ್ಮರಣೆ ಏಕಿಲ್ಲ!?

ನಮ್ಮ ಕಣ್ಣೆದುರಿಗೇ ಕಾಣಿಸುವ ಹಲವಾರು  ಉದಾಹರಣೆಗಳಿಂದಾಗಿ ನಮಗೆ ಪೂರ್ವಜನ್ಮವಿದ್ದುದು ನಿಜ ಎಂದು ಒಪ್ಪಬಹುದಾದರೂ, ನಮಗೆಲ್ಲರಿಗೂ ಸಾಮಾನ್ಯವಾಗಿ ನಮ್ಮ ಪೂರ್ವಜನ್ಮದ ಸ್ಮರಣೆ  ಏಕಿಲ್ಲ? ಎಂಬ ಸಮಸ್ಯೆ ಇಲ್ಲಿ ತಲೆಹಾಕುತ್ತದೆ.  ಮನುಷ್ಯನ ಜೀವನದಲ್ಲಿ  ಸ್ವಾಭಾವಿಕವಾದ ಅಥವಾ  ಅಸ್ವಾಭಾವಿಕವಾದ ನೆನಪಿನಶಕ್ತಿ ಅಥವಾ ಮರೆವಿನ ಪ್ರಭಾವದಿಂದಾಗಿ ಉಂಟಾಗುವ ಸಾವಿರಾರು ಸಮಸ್ಯೆಗಳನ್ನು  ನಾವು ಕಾಣುತ್ತಿದ್ದೇವೆ.

ಕೆಲವು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದರಿಂದ  ಒಳ್ಳೆಯದಾದರೆ; ಕೆಲವು ವಿಚಾರಗಳನ್ನು  ನೆನಪಿನಲ್ಲಿಟ್ಟು ಕೊಳ್ಳುವುದು ನಮಗೆ ಕೇಡನ್ನೇ ಉಂಟುಮಾಡಿ ದುಃಖವನ್ನು ಹೆಚ್ಚಿಸುತ್ತದೆ.  ಕೆಲವು ವಿಚಾರಗಳನ್ನು ಮರೆಯುವುದರಿಂದ ನಮಗೆ ನಷ್ಟವಾದರೆ; ಕೆಲವು ವಿಚಾರಗಳನ್ನು  ಮರೆಯುವುದರಿಂದ ನಮಗೆ ಒಳೆಯದೇ ಆಗುತ್ತದೆ! ನಮ್ಮ ಪರಿಸರದಲ್ಲಿರುವ ಹಲವಾರು ವ್ಯಕ್ತಿಗಳಲ್ಲಿ ಯಾರ್ಯಾರು ನಮ್ಮ ಹಿಂದಿನ ಜನ್ಮದಲ್ಲಿ ನಮಗೆ ಯಾವರೀತಿಯ ಸಂಬಂಧಿಗಳಾಗಿದ್ದರು ಎಂಬುದು ನಮ್ಮ ನೆನಪಿನಲ್ಲಿ ಉಳಿದಿದ್ದರೆ, ನಮ್ಮ ಇಂದಿನ ಪರಿಸ್ಥಿತಿ ಏನಾಗುತ್ತಿತ್ತೆಂಬುದನ್ನು ಊಹಿಸಿಕೊಳ್ಳಿ! ಹಿಂದಿನ ಜನ್ಮದಲ್ಲಿ ತಾಯಿಯಾಗಿದ್ದವಳು ಈಗ ಹೆಂಡತಿಯೋ,  ಮಗಳೋ ಆಗಿರಬಹುದು!  ಅಥವಾ ನಮಗೆ ಇಷ್ಟವಿಲ್ಲದ ಯಾರೋ ಕೆಟ್ಟ ವರ್ತನೆಯ ಹೆಣ್ಣಾಗಿರಬಹುದು! ಅಥವಾ ಹಿಂದಿನ ಜನ್ಮದ  ಇಂಥ  ಕೆಟ್ಟವರ್ತನೆಯ ಹೆಣ್ಣು ನಮ್ಮ ಇಂದಿನ ಜನ್ಮದ ಆಪ್ತರಾಗಿರಬಹುದು! ಇದನ್ನು ಸಹಿಸಿಕೊಳ್ಳಲು ಹೇಗೆ ಸಾಧ್ಯ!? ನೆನಪಿನಶಕ್ತಿ ಹಾಗೂ  ಮರವೆಯು  ಜೀವಜಗತ್ತಿಗೆ ನಿಸರ್ಗದತ್ತವಾದಒಂದು ವಿಶೇಷ ಶಕ್ತಿ. ಈ ಶಕ್ತಿಯೂ ಆತ್ಮದೊಂದಿಗೆ ಸಂಸ್ಕಾರರೂಪದಲ್ಲೇ  ಮುಂದು ವರೆಯುವಂಥದು.  ಕೆಲವೊಂದು ವಿಶಿಷ್ಟ ಸನ್ನಿವೇಶಗಳಲ್ಲಿ , ಅಪಾಯದ ಸಮಯದಲ್ಲಿ , ಭಯದಲ್ಲಿ ಗಲಿಬಿಲಿಗೊಳ್ಳುವ ಆತ್ಮವು ತನ್ನ ನೆನಪಿನ ಸಾಮರ್ಥ್ಯವನ್ನು ಕಳೆದುಕೊಳ್ಳುವ ವಿಚಾರ ನೈಸರ್ಗಿಕವಾದುದು.  ಈ ರೀತಿಯ ಮರವೆಯು ಮನುಷ್ಯ ಮಾತ್ರದವರಿಗಲ್ಲ; ಸಕಲ ಜೀವರಾಶಿಗಳಿಗೂ ಒಂದು ಮಹತ್ತರವಾದ ವರವಿದ್ದಂತೆ.  ಅವುಗಳ ಸ್ವಾಭಾವಿಕ  ಕಷ್ಟನಷ್ಟಗಳು; ಮಾನಸಿಕದುಗುಡ;   ಗೊಂದಲ; ಅಸಮಾಧಾನಗಳು  ಒಂದಕ್ಕೆ ಹತ್ತು, ನೂರು, ಸಾವಿರ, ಲಕ್ಷಪಾಲುಗಳಂತೆ ವೃದ್ಧಿಗೊಂಡು ಅವುಗಳ ಜೀವನವು ಅತ್ಯಂತ ದಾರುಣವಾಗುವುದು ನಿಸ್ಸಂಶಯ.  ಈ ಅಪಾಯವನ್ನು  ಸುಲಭವಾಗಿ ತಪ್ಪಿಸುವುದಕ್ಕಾಗಿಯೇ ನಿಸರ್ಗವು  ಜೀವತ್ಮನಿಗೆ  ತನ್ನ  ಪೂರ್ವಜನ್ಮದ ನೆನಪುಗಳು ಈಗಿನ ಜನ್ಮದಲ್ಲಿ  ಉಳಿಯದರೀತಿಯಲ್ಲಿ  ವ್ಯವಸ್ಥೆ ಮಾಡಿದೆ.  ಹೀಗಿದ್ದರೂ ಕೆಲವೊಂದು ವಿಶೇಷಸನ್ನಿವೇಶಗಳಲ್ಲಿ ಕೆಲವರಿಗೆ ಪೂರ್ವಜನ್ಮದ ಸ್ಮರಣೆ ಇರುವ ಉದಾಹರಣೆಗಳು  ಸಾಕಷ್ಟಿವೆ.  ಪ್ರಾಚೀನ ಋಷಿಗಳಲ್ಲೊಬ್ಬರಾದ ಜಡಭರತ, ದ್ವಾಪರಯುಗದ ಶ್ರೀಕೃಷ್ಣ,  ಕಲಿಯುಗದ ಬುದ್ಧ,  ಇತ್ತೀಚಿನ ದಿನಗಳಲ್ಲಿ  ಹೊಳೆನರಸೀಪುರದ  ಅಧ್ಯಾತ್ಮಪ್ರಕಾಶಾಲಯದ ಸ್ವಾಮಿಗಳಾಗಿದ್ದ ಶ್ರೀ ಯಡತೊರೆ ಸುಬ್ಬರಾಯ ಶರ್ಮರು ಮುಂತಾದವರ ಪೂರ್ವಜನ್ಮದ ಸ್ಮರಣೆಗಳ ವಿಚಾರ  ಸರ್ವವಿದಿತ.  ಸಾಮಾನ್ಯ ಜನತೆಯಲ್ಲಿ ತಮ್ಮ ಪೂರ್ವಜನ್ಮದ ಸ್ಮರಣೆ ಇದ್ದವರನ್ನು  ಜಾತಸ್ಮರರೆಂದು ಕರೆಯಲಾಗುತ್ತದೆ.  ಆದರೆ, ಮಹಾತ್ಮರ ವಿಚಾರ ಈರೀತಿಯದಲ್ಲ. ಅವರು ಕೇವಲ ಪೂರ್ವಜನ್ಮ ಮಾತ್ರವಲ್ಲ;  ಈಗಿನಜನ್ಮ ಹಾಗೂ ಮುಂದಿನಜನ್ಮದ ವಿಚಾರಗಳನ್ನೂ ಸ್ಪಷ್ಟವಾಗಿ ತಿಳಿದ ತ್ರಿಕಾಲಜ್ಞಾನಿಗಳು. ಅಂಥ ತಿಳುವಳಿಕೆಯನ್ನು  ನಿರ್ವಿಕಾರ ಮನೋಭಾವದಿಂದ ಧರಿಸುವ ಆತ್ಮಶಕ್ತಿ ಅವರದಾಗಿರುತ್ತದೆ.  ಶೃಂಗೇರಿಯ ಶಾರದಾಪೀಠಾಧೀಶರಾಗಿದ್ದ  ಶ್ರೀಚಂದ್ರಶೇಖರ ಭಾರತೀಸ್ವಾಮಿಗಳವರು  ಈ ಸಾಲಿನಲ್ಲಿ ಅಗ್ರಗಣ್ಯರು. ಸಾಮಾನ್ಯರಿಗೆ ಅಂಥ ಶಕ್ತಿ ಇರುವುದು ಅಸಂಭವ.

ನಮ್ಮ ಕೆಟ್ಟಕೆಲಸಗಳಿಗೆ ಪಾಪವೂ; ಒಳ್ಳೆಯಕೆಲಸಗಳಿಗೆ  ಪುಣ್ಯವೂ ಬರುತ್ತದೆಂಬ ಶಾಸ್ತ್ರದ ಹೇಳಿಕೆಯನ್ನು ಗಮನಿಸಿದಾಗ, ಈ ಪಾಪಪುಣ್ಯಗಳ ತೊಳಲಾಟ ಕೇವಲ ಮನುಷ್ಯರಿಗೆಮಾತ್ರ ಸೀಮಿತವೋ? ಅಥವಾ ಉಳಿದೆಲ್ಲ ಜೀವರಾಶಿಗಳೂ ಇದರ ಸುಳಿಯಲ್ಲಿ ಸಿಕ್ಕಿ ತೊಳಲಾಡುತ್ತವೆಯೋ? ಎಂಬ ಪ್ರಶ್ನೆ ಏಳುತ್ತದೆ.  ಈ ಸಂದೇಹವನ್ನು ಕುರಿತು ಶಾಸ್ತ್ರಗಳ ಹೇಳಿಕೆ ಬಹಳ ಸ್ಪಷ್ಟವಾಗಿದೆ. ಮಾನವಜನ್ಮದಲ್ಲಿ ಸ್ವತಂತ್ರನೆನಿಸುವ  ಆತ್ಮವುಗಳಿಸಿದ ಪಾಪಪುಣ್ಯಗಳಿಗನುಗುಣವಾಗಿ ಅದಕ್ಕೆ ಶಿಕ್ಷೆಯ ರೂಪದಲ್ಲಿ  ಪ್ರಾಣಿಜನ್ಮವಾಗಲೀ; ರೋಗ, ದುಃಖ, ದಾರಿದ್ರ್ಯಗಳಿಂದ ಕೂಡಿದ ಹೀನ ಮಾನವಜನ್ಮವಾಗಲೀ ದೊರೆಯುತ್ತದೆ. ಅಥವಾ ಸಕಲ ಸುಖ ಸೌಲಭ್ಯಗಳುಳ್ಳ  ಉತ್ತಮ ಕುಲದಲ್ಲಿ ಮಾನವನಾಗಿಯೇ ಪುನರ್ಜನ್ಮವಾಗಲೀ, ದೈವತ್ವವಾಗಲೀ, ಸಾಯುಜ್ಯಮುಕ್ತಿಯಾಗಲೀ ದೊರೆಯಬಹುದು. ಆದರೆ, ಪ್ರಾಣಿಗಳ ದೇಹವನ್ನಾಶ್ರಯಿಸಿದ  ಆತ್ಮನಿಗೆ ಆದೇಹದಲ್ಲಿ ಆಚರಿಸುವ ವರ್ತನೆಗಳಿಂದ ಪಾಪವಾಗಲೀ;  ಪುಣ್ಯವಗಲೀ ಸಿಗುವುದಿಲ್ಲ. ಉದಾಹರಣೆಗೆ ಹುಲಿಯು ಬೇರೆ ಪ್ರಾಣಿಗಳನ್ನಾಗಲೀ, ಮನುಷ್ಯರನ್ನಾಗಲೀ ಕೊಂದುತಿಂದರೆ,  ಅದಕ್ಕೆ ಪಾಪವಿಲ್ಲ. ಕಪಿಯು ಕೇವಲ ಹಣ್ಣು ಹಂಪಲುಗಳನ್ನೇ ತಿಂದರೂ ಅದಕ್ಕೆ ಪುಣ್ಯವೆಂಬುದೇನಿಲ್ಲ. ಆದರೆ, ಅದೇ ಮಾನವನು ಪರಪೀಡನೆಮಾಡಿದರೆ  ಪಾಪವೂ; ಸಾತ್ವಿಕ ಆಹಾರಸೇವಿಸಿ ಪರೋಪಕಾರಿಯಾಗಿ ಬಾಳಿದರೆ ಪುಣ್ಯವೂ ಲಭಿಸಿತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತವೆ.

ಪಾಪಪುಣ್ಯಗಳನ್ನು ಅನುಭವಿಸಲು ಸ್ವರ್ಗ ನರಕಾದಿಗಳನ್ನು  ಶಾಸ್ತ್ರಗ್ರಂಥಗಳು  ಸೂಚಿಸುತ್ತವೆ.  ಆದರೆ, ನಾವು ಅನುಭವಿಸುವ ಕಷ್ಟ ಸುಖಗಳರೂಪದಲ್ಲಿಯೇ ಇಂಥ ಪಾಪ ಪುಣ್ಯಗಳ  ವಿತರಣೆಯಾಗುತ್ತದೆ. ಆದ್ದರಿಂದ ಸ್ವರ್ಗ ನರಕಗಳೆಂಬ  ಪ್ರತ್ಯೇಕ ಲೋಕಗಳೇನೂ ಇಲ್ಲ ಎಂದು ಕೆಲವರು ವಾದಿಸುವುದುಂಟು. ನಮ್ಮ ಕಲ್ಪನೆಗೆ ನಿಲುಕದ  ವಿಚಾರವೆಂಬ ಕಾರಣದಿಂದ ಈ ರೀತಿ ವಾದಿಸುವುದನ್ನು ಶಾಸ್ತ್ರಗಳು ಒಪ್ಪುವುದಿಲ್ಲ.  ಏಕೆಂದರೆ, ಯಾವುದೇ ವಿಚಾರದಲ್ಲಿ  ಎಂಥದೇ ಆಗಲೀ ಸುಳ್ಳನ್ನು ಹೇಳಿ ಜನಗಳನ್ನು ನಂಬಿಸುವುದರಿಂದ ಶಾಸ್ತ್ರಗಳಿಗೆ ಯಾವುದೇ ಲಾಭವೂ ಇಲ್ಲ!  ಕೇವಲ ಜನಗಳನ್ನು  ಹೆದರಿಸುವ ಉದ್ದೇಶದಿಂದ ಇಂಥ ಪಾಪ ಪುಣ್ಯ; ಸ್ವರ್ಗ ನರಕಗಳ ಸೃಷ್ಟಿಯಾಗಿದೆ ಎಂಬ ವಿಚಾರ ಅರ್ಥಹೀನವಾದುದು.  ಈ ವಿಚಾರವನ್ನು ನಾವು ಕಾಣುವ ಸ್ವಪ್ನಗಳಿಗೆ ಸಂಬಂಧಿಸಿದ  ವಿಶ್ಲೇಷಣೆಯಿಂದ ತಿಳಿಯಬಹುದು.

ಪ್ರತಿಯೊಬ್ಬರೂ ತಮ್ಮ ಮನೋಭಾವಕ್ಕೆ ಅನುಗುಣವಾದ ಕನಸನ್ನೇ ಕಾಣುವರೆಂಬ ವಿಚಾರವು  ವೈಜ್ಞಾನಿಕ ಸತ್ಯ.  ಎಚ್ಚರವಾಗಿದ್ದಾಗ ಸಾತ್ವಿಕವಾಗಿರುವ ವ್ಯಕ್ತಿಯು ಸ್ವಪ್ನದಲ್ಲೂ ಉತ್ತಮವಾದ ಅನುಭವಗಳನ್ನೇ ಪಡೆಯುತ್ತಾನೆ.  ಕ್ರೂರಿ; ಕಪಟಿ; ವಂಚಕರಾಗಿದ್ದವರು ಎಚ್ಚರವಾಗಿರುವಾಗ ತಾವು ವ್ಯವಹರಿಸುವುದಕ್ಕೆ ಅನುಗುಣವಾಗಿಯೇ ಸ್ವಪ್ನದಲ್ಲೂ ಅಹಿತಕರವಾದ ಅನುಭವಗಳನ್ನೇ ಪಡೆಯುತ್ತಾರೆ. ಯಾರೊಬ್ಬರ ಕನಸನ್ನೂ ಬೇರೊಬ್ಬರು ಸುಳ್ಳೆಂದು ಅಲ್ಲಗಳೆಯಲಾಗದು. ಸ್ವಪ್ನದ ಸ್ಥಿತಿಯನ್ನು ದಾಟಿ ಸುಷುಪ್ತಿಯ ಸ್ಥಿತಿಗೆ ಇಳಿದಾಗ ಪ್ರತಿಯೊಂದು ಆತ್ಮವೂ ಒಂದೇ ರೀತಿಯ ಅನುಭವವನ್ನೇ ಪಡೆಯುತ್ತಿರುವುದು ನಮಗೆಲ್ಲರಿಗೂ ಅನುಭವ ವೇದ್ಯವಾಗಿದೆ.  ಈ ಹಿನ್ನೆಲೆಯಲ್ಲಿ ವಿವೇಚಿಸಿದಾಗ ಸ್ವರ್ಗ; ನರಕಗಳು ಸುಳ್ಳೆಂದು  ವಾದಿಸುವುದು ಅರ್ಥಹೀನ ನಿಸುವುದು ಸ್ವಾಭಾವಿಕ. ಸಂಗತಿ.

ಆತ್ಮವು ಪಡೆಯು ಪುನರ್ಜನ್ಮಗಳ ಪರಂಪರೆಯು ಇದೇ ರೀತಿ ಮುಂದುವರೆಯುತ್ತಿದ್ದರೆ ಇದು ನಿಲುಗಡೆಗೆ ಬರುವುದು ಎಂದು? ಎಂಬ ಪ್ರಶ್ನೆಯು ಉಂಟಾಗುವುದು ಸ್ವಾಭಾವಿಕ. ಈ ವಿಚಾರವನ್ನುಕುರಿತೂ ನಮ್ಮ ಶಾಸ್ತ್ರಗಳು  ವಿವರಿಸುತ್ತವೆ.

***

ಜನನ ಮರಣದ ಸರಪಣಿಯಿಂದ ಪಾರಾಗುವ ಬಗೆ:

ಸೃಷ್ಟಿಯ ಆಟದಲ್ಲಿ ತೊಡಗಿದ ಆತ್ಮವು ತಾನು ಮೊದಲಿದ್ದ ಸ್ಥಿತಿಯಲ್ಲೇ ಪರಮಾತ್ಮತತ್ವದೊಂದಿಗೆ ವಿಲಿನ ವಾಗುವುದರೊಂದಿಗೆ ಈ ಜನನ ಮರಗಳ ತೊಳಲಾಟವು ನಿಲುಗಡೆಗೆ ಬರುತ್ತದೆ.  ಮಾನವಜನ್ಮಬಂದಾಗ, ಶಾಸ್ತ್ರೋಕ್ತ ವಿಧಿ ವಿಧಾನಗಳನ್ನರಿತು  ನಿಷ್ಕಾಮಕರ್ಮದಿಂದ ಸರ್ವ ಪಾಪಗಳನ್ನೂ ಪರಿಹರಿಸಿಕೊಂಡು ಸಮ್ಯಜ್ಞಾನವನ್ನು  ಪಡೆಯುವ ಆತ್ಮಗಳು ಮಾತ್ರ ಪರಮಾತ್ಮತತ್ವದಲ್ಲಿ  ವಿಲಿನಹೊಂದಿ, ಸಾಯುಜ್ಯಮುಕ್ತಿಹೊಂದಲು ಸಾಧ್ಯ.  ಉಳಿದ ಆತ್ಮಗಳು ತಮ್ಮ ಪಾಪ ಪುಣ್ಯಗಳಿಗನುಗುಣವಾಗಿ ಜನ್ಮಾಂತರದ  ಜನನ ಮರಣದ ಸರಪಣಿಯಲ್ಲಿ ಸಿಕ್ಕಿ ತೊಳಲಾಡುವುದು ತಪ್ಪಿದ್ದಲ್ಲ ಎಂಬುದು ಶಾಸ್ತ್ರಗಳು ಸೂಚಿಸುವ ಸ್ಪಷ್ಟವಾದ ಅಭಿಪ್ರಾಯ.  ಜ್ಞಾನಿಯದವನಿಗೆ ಮರಣವೆಂಬುದೇ ಇಲ್ಲವೆಂದೂ  ಅವುಗಳ  ಅಭಿಪ್ರಾಯ.  ಇಂಥ ಜ್ಞಾನಸಂಪಾದನೆಯು ಎಲ್ಲ ಅತ್ಮಗಳ ಮೂಲಭೂತ ಹಕ್ಕು.  ಇದರ ಸಂಪಾದನೆಗೆ ಯಾವುದೇ ಅಡೆತಡೆಗಳಿಲ್ಲ.  ಇಂಥ ಜ್ಞಾನ ಪಡೆಯಲು ನಮಗೆ ನಮ್ಮ ಜನ್ಮ, ಜನ್ಮಾಂತರದ ಹಾಗೂ ಪುನರ್ಜನ್ಮಗಳ ವಿಚಾರದಲ್ಲಿ ನಂಬಿಕೆಯು ಇರಲೇ ಬೇಕಾದುದು ಅತ್ಯವಶ್ಯಕ.  ಪುನರ್ಜನ್ಮಗಳ ವಿಚಾರದಲ್ಲಿ ನಮಗೆ ನಂಬಿಕೆ ಬರುವಂಥ ಕೆಲವಾರು ಘಟನೆಗಳನ್ನು ನಾವು ತಿಳಿಯಬೇಕು. ಇಲ್ಲವಾದರೆ, ಅದರಬಗ್ಗೆ ನಂಬಿಕೆಹೊಂದಲು ಸಾಧ್ಯವಾಗುವುದಿಲ್ಲ.  ಈ ಕಾರಣದಿಂದಾಗಿ ವ್ಯಕ್ತಿಯ ಮರಣಾನಂತರದ ಸ್ಥಿತಿಗತಿಯನ್ನುಕುರಿತು ಕೆಲವೊಂದು ಘಟನೆಗಳನ್ನು ಇಲ್ಲಿ ಗಮನಿಸೋಣ.

***

ಭೂತ; ಪ್ರೇತ, ಪಿಶಾಚಿಗಳ ವಿಚಾರ:

ವ್ಯಕ್ತಿಯ ಮರಣಾನಂತರ ಅವನಿಗೆ ಪ್ರೇತತ್ವ ಬರುವುದೆಂಬ ಸನಾತನಧರ್ಮದ ಹೇಳಿಕೆಯನ್ನು ಸಾಮಾನ್ಯವಾಗಿ ಬಹಳಷ್ಟುಜನ  ನಂಬುವುದಿಲ್ಲ. ಆದರೆ, ಪಾಶ್ಚಾತ್ಯರು  ಇದನ್ನು ಆಸಕ್ತಿಯಿಂದ ಪರೀಕ್ಷಿಸಿ, ರುಜುವಾತು ಪಡಿಸಿದನಂತರ, ಸಾಮಾನ್ಯವಾಗಿ ಎಲ್ಲರೂ ಇದನ್ನು ನಂಬುವುದು ಅನಿವಾರ್ಯವಾಗಿದೆ.  ಸುಮಾರು ನೂರೈವತ್ತು ವರ್ಷಗಳಿಂದೀಚೆಗೆ  ಪಾಶ್ಚಾತ್ಯರಲ್ಲಿ  ಈ ವಿಚಾರವಾಗಿ ಬಹಳಷ್ಟು ಸಂಶೋಧನೆಗಳು ನಡೆದು, ವೈಜ್ಞಾನಿಕವಾಗಿ  ಇವು ಸತ್ಯ ಸಂಗತಿಯೆಂದು ಪ್ರಮಾಣೀಕರಿಸಲ್ಪಟ್ಟಿದೆ. ಹೀಗಿದ್ದರೂ ನಾಸ್ತಿಕರಾದ ಕಮ್ಯುನಿಸ್ಟರು ಇದನ್ನೆಲ್ಲ  ನಂಬುವುದಿಲ್ಲ! ಅದರೆ, ರಷ್ಯಾದೇಶವೊಂದರಲ್ಲೇ ಹತ್ತುಸಾವಿರಕ್ಕೂ ಹೆಚ್ಚು ಸಾಮಾನ್ಯ ಪ್ರೇತಗಳ ಪ್ರಕರಣಗಳು ಜನರ ಗಮನಸೆಳೆದಿರುವುದು ಮತ್ರವಲ್ಲ; ಅಲ್ಲಿನ ರಾಜಕಾರಣದಲ್ಲಿ ಪ್ರಖ್ಯಾತ ಮುಖಂಡರಾಗಿದ್ದ ಲೆನಿನ್ ಹಾಗೂ ಸ್ಟಾಲಿನ್ನರು ಪ್ರೇತಗಳಾಗಿ ಕಷ್ಟಪಡುತ್ತಿದ್ದುದು  ಜಗತ್ಪ್ರಸಿದ್ಧವಾದ ಸಂಗತಿಯಾಗಿದೆ.

ರಷ್ಯಾದೇಶದಲ್ಲಿ  ಚಕ್ರವರ್ತಿಗಳ ಆಡಳಿತವನ್ನು ನಾಶಮಾಡಿ, ಕಮ್ಯುನಿಸ್ಟ್ ರಾಜ್ಯಭಾರಕ್ರಮವನ್ನು ಸ್ಥಾಪಿಸಿದ ಲೆನಿನ್ನನನ್ನು ಆದೇಶದ ಜನ  ಇನ್ನೂ ಗೌರವಿಸುತ್ತಾರೆ. ೧೯೨೪ರಲ್ಲಿ ಕಾಲವಾದ ಈತನ ಜಡದೇಹವು ಕೆಡದಂತೆ  ರಾಸಾಯನಿಕಗಳನ್ನು ಬಳಸಿ  ಮಾಸ್ಕೋನಗರದ ಕೆಂಪುಚೌಕದಲ್ಲಿ ಅತ್ಯಂತ ವೈಭವವಾದ ಗೋರಿಯೊಂದರಲ್ಲಿ ರಕ್ಷಿಸಿಡಲಾಗಿದೆ.  ಲೆನಿನ್ನನನಂತರ ಅಧಿಕಾರಕ್ಕೆ ಬಂದವನು ಸ್ಟಾಲಿನ್. ಈತ ಮಹಾಕ್ರೂರಿ. ತನಗೆ ವಿರೋಧಿಗಳೆಂದು ಕಂಡುಬಂದ ಹಿರಿಯ ಅಧಿಕಾರಿಗಳನ್ನೆಲ್ಲ ಉಪಾಯವಾಗಿ ಸೈಬಿರಿಯಾ ಪ್ರದೇಶಕ್ಕೆ ಸಾಗಹಾಕಿ ಅಲ್ಲಿನ ಭಯಂಕರ ಚಳಿಗೆಸಿಕ್ಕಿ ಅವರು ಮುಕ್ತಾಯವಾಗುವಂತೆ ಮಾಡಿದವನು.  ತನ್ನ ಸರ್ಕಾರಿ ಕೃಷಿಯೋಜನೆಗೆ ಅಡ್ಡಬಂದ ಸುಮಾರು ಒಂದೂವರೆ ಕೋಟಿ ರಷ್ಯನ್  ಪ್ರಜೆಗಳನ್ನು ನಿರ್ದಯವಾಗಿ ಕೊಲ್ಲಿಸಿ, ರಶ್ಯಾವೆಂದರೆ, ಸ್ಟಾಲಿನ್; ಸ್ಟಾಲಿನ್ ಎಂದರೆ ರಷ್ಯಾ ಎಂಬಮಟ್ಟಕ್ಕೇರಿದವನು.  (ನಮ್ಮಲ್ಲಿಯೂ ಕೆಲವು ಮೂರ್ಖರು ಇಂಡಿಯಾ ಅಂದರೆ; ಇಂದಿರಾ; ಇಂದಿರಾ ಅಂದರೆ ಇಂಡಿಯಾಎಂದು ಮೆರೆದಾಡಿದ್ದುಂಟು! ಆದರೆ ಆಕೆಯ ಗತಿ ಏನಾಯಿತೆಂಬುದು  ಜಗತ್ತಿಗೆ ತಿಳಿದಸಂಗತಿ) ಸ್ಟಾಲಿನ್ ಸತ್ತನಂತರ ಲೆಲಿನ್ನನ ಗೋರಿಯ ಸಮೀಪದಲ್ಲೇ ಇವನಿಗೂ ಗೋರಿಕಟ್ಟಲಾಯಿತು. ಲೆನಿನ್ನನ ಪ್ರೇತಾತ್ಮಕ್ಕೆ  ಇಂಥ ಹೊಲಸು ಆತ್ಮದೊಂದಿಗೆ ಜೀವಿಸುವುದು ಅಸಹ್ಯವೆನಿಸಿ, ತನ್ನ ಆಪ್ತಳಾಗಿದ್ದ ಕಮ್ಯುನಿಸ್ಟ್ ಅಧಿಕಾರಿಣಿಯೊಬ್ಬಳಿಗೆ  ಪ್ರತ್ಯಕ್ಷವಾಗಿ ಕಾಣಿಸಿಕೊಂಡು, ಸ್ಟಾಲಿನ್ನನ ಶವವನ್ನು  ದೂರಸಾಗಿಸುವಂತೆ ಪ್ರಾರ್ಥಿಸಿತು. ಸ್ಟಾಲಿನ್ನನ ಮರಣಾನಂತರ ಅವನ ಕ್ರೂರಕೃತ್ಯಗಳು ಬಯಲಾಗಿ, ಅವನ ಜನಪ್ರಿಯತೆ ಕಡಿಮೆಯಾಯಿತು.  ದಿನಾಂಕ ೩೧-೧೦-೧೯೬೧ ರಂದು  ಮಧ್ಯರಾತ್ರಿಯಲ್ಲಿ  ಸ್ಟಾಲಿನ್ನನ ಗೋರಿಯನ್ನು ಒಡೆದು  ಶವಪೆಟ್ಟಿಗೆಯನ್ನು ದೂರಸಾಗಿಸಿ, ಅಲ್ಲೊಂದು ಸಾಮಾನ್ಯಗೋರಿ ಕಟ್ಟಲಾಯಿತು!

ತಮಗೆ ಬೇಕೆನಿಸಿದವರ ಪ್ರೇತಾತ್ಮಗಳನ್ನು ಆಹ್ವಾನಿಸಿ, ಅವರಿಂದ ತಮಗೆ ಅಗತ್ಯವಾದ ವಿಚಾರಗಳ ಮಾಹಿತಿಯನ್ನು  ಸಂಗ್ರಹಿಸುವ ಕ್ರಮ ಪಾಶ್ಚಾತ್ಯರಲ್ಲಿ ರೂಢಿಯಲ್ಲಿದೆ.  ಇದಕ್ಕೆ ಪ್ರೇತಕೂಟಎಂದು ಹೆಸರು. ಇಂಥ ಕೂಟಗಳಲ್ಲಿ ಸಂಗ್ರಹಿಸಿದ ಮಾಹಿತಿಗಳ ಸರಾಂಶ ಈರೀತಿ ಇದೆ:  ಮರಣವೆಂಬುದು ಕಷ್ಟವಲ್ಲ. ಅದೊಂದು ಮೊಬ್ಬು ಸ್ಥಿತಿಬಂದು ಎಚ್ಚರವಾದಂತೆಮಾತ್ರ.  ಯಮದೂತರ, ಯಮಲೋಕದ ಭಯ ಇಲ್ಲ.  ಪರಲೋಕದಲ್ಲಿರುವ ಬಂಧುಗಳು, ಸ್ನೇಹಿತರು ಸ್ವಾಗತಿಸುತ್ತಾರೆ.  ಪ್ರೇತಲೋಕವು ಈ ಲೋಕಕ್ಕಿಂತ ಬೇರೆಯಲ್ಲ.  ಇಲ್ಲಿಗಿಂತಲೂ ಸುಂದರವಾದ ಭವನಗಳು, ಪ್ರಾಕೃತಿಕಸಂಪತ್ತು ಎಲ್ಲವೂ ಇವೆ.  ಹಗಲು ರಾತ್ರಿ ಎಂಬುದಿಲ್ಲ.  ಆದರೆ, ಬೆಳಕಿನ ಭೇದವಿದೆ. ನಿದ್ರೆಬೇಡ. ವಿಶ್ರಾಂತಿಬೇಕು. ಆಹಾರವೇ ಬೇಕಿಲ್ಲ. ಅಥವಾ ಅತಿಕಡಿಮೆ ಆಹಾರ ಸಾಕು.  ಪ್ರತಿತಂಡಕ್ಕೂ ಒಬ್ಬ ಮುಖ್ಯಸ್ಥನಿದ್ದಾನೆ.  ದೇವರ ಪ್ರಾರ್ಥನೆ, ಪೂಜೆ, ಪಾಠಕಲಿಯಬೇಕು. ಆಮೇಲೆ ಅಲೆದಾಟ. ತಮ್ಮ ತಮ್ಮ ಅಭಿರುಚಿಯ ಕೆಲಸಕಾರ್ಯ ಮಾಡಬಹುದು.  ಇತ್ಯಾದಿಗಳೇ ಈ ಸಾರಾಂಶ.

ಹಲವಾರು ಪ್ರಸಿದ್ಧ ವ್ಯಕ್ತಿಗಳು; ರಾಜಕಾರಣಿಗಳು; ವಿಜ್ಞಾನಿಗಳು ಮುಂತಾದವರ ಪ್ರೇತಾತ್ಮಗಳನ್ನು ಸಂಪರ್ಕಿಸಿ ಸಂದರ್ಶನ ನಡೆಸಲಾಗಿದೆ. ಪ್ರೇತಗಳ ಚಿತ್ರ ತೆಗೆದು ಪ್ರಕಟಿಸಲಾಗಿದೆ.  ಇವುಗಳಿಗೆ ಸಂಬಂಧಿಸಿದ  ಹಲವಾರು ಮಾಹಿತಿಗಳನ್ನು ಸನಾತನ ಧರ್ಮವು ಹಿಂದಿನಿಂದ ಪ್ರತಿಪಾದಿಸಿ; ಅನುಸರಿಸಿಕೊಂಡು ಬಂದಿದೆ!

ಪ್ರೇತಗಳ ವಿಚಾರ ಈರೀತಿಯದಾದರೆ;  ಭೂತ- ಪಿಶಾಚಿಗಳ ವಿಚಾರ ಇನ್ನೂ ರೋಮಾಂಚನಕಾರಿಯಾದುದು. ತೀರಾ ಹೀನಾಯಕಾರಿ ಯಾಗಿರುವುದೂ ಉಂಟು.  ಸಹಜವಾದ ಸಾವಿನಿಂದ ದೇಹತ್ಯಾಗಮಾಡಿದ ಆತ್ಮಗಳೆಲ್ಲವಕ್ಕೂ ಪ್ರೇತತ್ವವು ಪ್ರಾಪ್ತವಾದರೆ, ಆತ್ಮಹತ್ಯೆ; ಕೊಲೆ; ಅಪಘಾತ ಮುಂತಾದ ದುರ್ಮರಣಗಳ ಮೂಲಕ ದೇಹತ್ಯಾಗಮಾಡಿದ ಆತ್ಮಗಳಿಗೆ ಭೂತ ಮತ್ತು ಪಿಶಾಚತ್ವ ಬರುತ್ತದೆ. ಇವುಗಳ ಸ್ಥಿತಿ ಪ್ರೇತಗಳಿಗಿಂತ ಬಹಳ ಕಷ್ಟಕರವಾದುದು.

ಮಾನವಜನ್ಮದಲ್ಲಿ ಹುಟ್ಟಿ ಬೆಳೆದು, ಅತ್ಯಂತ ಮೇಲ್ಮಟ್ಟದ ಧಾರ್ಮಿಕ ಶಿಸ್ತಿಗೆ ಒಳಪಟ್ಟ ಜೀವನಸಾಧನೆ ನಡೆಸದಿರುವ ಸಾಮಾನ್ಯ ಜೀವಾತ್ಮರಿಗೆ ಪ್ರೇತತ್ವ, ಭೂತ, ಪಿಶಾಚತ್ವಗಳಲ್ಲಿ ಹೆಚ್ಚಿನ ತೊಂದರೆಯೇನೂ ಕಾಣಬರುವುದಿಲ್ಲ. ಆದರೆ, ಮೇಲ್ಮಟ್ಟದ ಧಾರ್ಮಿಕಜೀವನ ನಡೆಸಿದವರಿಗೆ ಇಂಥ ಹೀನಸ್ಥಿತಿಯು ಸಹಿಸಲಸಾಧ್ಯ ವಾದುದು. ಅದ್ದರಿಂದ ಆದಷ್ಟುಬೇಗ ಅದರಿಂದ ಮುಕ್ತರಾಗಲು ಅಗತ್ಯ ಕ್ರಮಗಳನ್ನರಿತು, ತಮ್ಮ ಬಂಧು ಬಳಗದವರಿಗೆ ಅಥವಾ ಸಿಕ್ಕಿದವರಿಗೆ ಗೋಚರಿಸಿಕೊಂಡು, ಕಾಡಿ, ಬೇಡಿ, ತಮ್ಮ ಕಷ್ಟ ಪರಿಹರಿಸಿಕೊಳ್ಳುವ ಯತ್ನ ನಡೆಸುತ್ತವೆ. ಇಂಥ ಘಟನೆಗಳು ಖಂಡಿತವಾಗಿಯೂ ನಿಜವಾದುವುಗಳು. ಮರಣದಾಚೆಯ ನೆಮ್ಮದಿಗಾಗಿ ನಾವು ಬದುಕಿರುವಾಗಲೇ ಸಾಧನೆ ನಡೆಸಲೇಬೇಕೆಂಬುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ.  ಅವುಗಳನ್ನು ಶ್ರದ್ಧೆಯಿಂದನಂಬಿ, ಜೀವನದಲ್ಲಿ ಧರ್ಮಬದ್ಧವಾಗಿ ವ್ಯವಹರಿಸಬೇಕಾದುದು ಪ್ರತಿಯೊಬ್ಬರ ಕರ್ತವ್ಯ.ವಾಗಿರುತ್ತದೆ.

ಸನಾತನಧರ್ಮವುಪ್ರತಿಪಾದಿಸುವ ಯಜ್ಞ; ಯಾಗಾದಿಗಳಲ್ಲಿ ನಡೆಯುವ ಹವನ, ಹೋಮ,  ಮುಂತಾದ ಕ್ರಮಗಳನ್ನು ಮಾನವೀಯಭಾವನೆ, ವ್ಯವಹಾರಪ್ರಜ್ಞೆ,  ಪ್ರಾಣಿದಯೆ ಮುಂತಾದ ದೃಷ್ಟಿಕೋನಗಳಿಂದ ವಿವೇಚಿಸಿ, ಅವೆಲ್ಲವೂ ತಪ್ಪುಕ್ರಮಗಳೆಂದು ವಾದಿಸುವವರು ಇಂದು ಸಾಕಷ್ಟು ಜನಗಳಿದ್ದಾರೆ.  ಆದರೆ, ಈ ಕ್ರಮಗಳಲ್ಲಿರುವ ಹಿನ್ನೆಲೆಯ ಧರ್ಮಸೂಕ್ಷ್ಮಗಳನ್ನು ತಿಳಿದವರಿಗೆ ಮಾತ್ರ ಅವುಗಳ ಮಹತ್ವ ಅರಿವಾಗುತ್ತದೆ.

ಮಾನವಶರೀರ ಪ್ರವೇಶಿಸಿದ ಆತ್ಮದ ಸಾಧನೆಗೆ ತಕ್ಕಂತೆ ಪುನರ್ಜನ್ಮ ಎಂದು ತೀರ್ಮಾನವಾದನಂತರ, ಆತ್ಮನಿಗೆ ಪುನಃ ಪಶು; ಪಕ್ಷಿ;ಪ್ರಾಣಿಗಳ ಜೀವನ ಉಂಟಾಗುತ್ತದೆ. ಆಯಾಯಾಜನ್ಮಗಳಲ್ಲಿ ಅನುಭವಿಸಬೇಕಾದ ಕರ್ಮಫಲವು ಕ್ಲುಪ್ತಕಾಲಾವಧಿಯಲ್ಲಿ ಮುಕ್ತಾಯವಾದಕೂಡಲೇ ಅವುಗಳ ಜೀವನ ಮುಗಿಯಲೇ ಬೇಕು. ಇದನ್ನು ಸಮರ್ಪಕವಾಗಿ ನಡೆಸಲು ಭಗವಂತನು ಯೋಜಿಸಿರುವ ಕ್ರಮಗಳೇ ಈ ಯಜ್ಞ ಯಾಗಾದಿಗಳು. ಪ್ರಾಣಿಬಲಿ, ಮಾಂಸಾಹಾರ  ಮುಂತಾದುವು. ಶಿಕ್ಷೆಯರೂಪದಲ್ಲಿ  ಪ್ರಾಣಿಜನ್ಮಕ್ಕೆ ಬಂದ ಆತ್ಮನಿಗೆ ಅದೇ ಜನ್ಮದಲ್ಲಿ ಹೆಚ್ಚುಕಾಲ ಮುಂದುವರೆಯುವ ಅಗತ್ಯವಿರುವುದಿಲ್ಲ.  (ಲೌಕಿಕವಾಗಿ ನ್ಯಾಯಾಲಯವು ಅಪರಾಧಿಯೊಬ್ಬನಿಗೆ ಇಂತಿಷ್ಟು ತಿಂಗಳು ಅಥವಾ ವರ್ಷಗಳು ಕಾರಾಗೃಹದ ಶಿಕ್ಷೆ ವಿಧಿಸಿದಾಗ ಆ ಅವಧಿಯು ತೀರಿದ ಬಳಿಗ ಅವನಿಗೆ ಬಿಡುಗಡೆಯಾಗುವಂತೆ)

ಮಾನವದೇಹದಲ್ಲಿ ಆತ್ಮವು ಧರ್ಮವಿರುದ್ಧವಾಗಿ ಜೀವಿಸಿ; ಅಪಾರವಾದ ಪಾಪರಾಶಿಯನ್ನು ಸಂಗ್ರಹಿಸಿದಾಗ, ಅದನ್ನು ಪರಿಹರಿಸಿಕೊಳ್ಳಲು  ಆ ಆತ್ಮವು ಪ್ರೇತಜೀವನದನಂತರ ಪಿಶಾಚಿಯಾಗಿ ಹಲವಾರು ವರ್ಷಗಳಕಾಲ ಹಸಿವು ಬಾಯಾರಿಕೆಗಳಿಂದ ಬಳಲಿ, ಅನಂತರ ಹುಲಿ, ಸರ್ಪ, ತೋಳ, ಹಂದಿ, ಕೋತಿ, ಗಿಣಿ, ನರಿ, ಹುಲ್ಲೆ, ಹದ್ದು, ಮುಂಗುಸಿ, ಕಾಗೆ, ಕರಡಿ, ಕಾಡುಕೋಳಿ, ಕತ್ತೆ, ಕಪ್ಪೆ,. ಬೆಕ್ಕು, ಆಮೆ, ಮೀನು, ಗೂಬೆ, ಕಾಡಾನೆ, ಬ್ರಹ್ಮರಾಕ್ಷಸ ಮುಂತಾದ ಹಲವಾರು ಹೀನ ಜನ್ಮಗಳನ್ನು ಅನುಭವಿಸಬೇಕಾಗುವುದೆಂದು ನಮ್ಮ ಪುರಾಣಗ್ರಂಥಗಳು  ಸೂಚಿಸುತ್ತವೆ.  ಇಂಥ ಪುನರ್ಜನ್ಮಗಳಿಗೆ ಮೊದಲು ಯಾತನಾ ಶರೀರವನ್ನು ಹೊಂದಿದ ಆತ್ಮವು  ಬಹಳ ದೀರ್ಘಕಾಲಾವಧಿಯವರೆವಿಗೆ  ವಿವಿಧರೀತಿಯ ಹಿಂಸೆಯನ್ನು ಅನುಬವಿಸಬೇಕಾದ ನರಕವಾಸದಲ್ಲಿ  ಇರಬೇಕಾಗುವುದೆಂದೂ ಶಾಸ್ತ್ರಗಳು ಸೂಚಿಸುತ್ತವೆ.

ಇದುವರೆವಿಗೂ ನಾವು  ಸಾವಿನಾಚೆಯ ವಿಚಾರಗಳನ್ನು ಕುರಿತಂತೆ ನಮ್ಮ  ಶಾಸ್ತ್ರಗ್ರಂಥಗಳು ಸೂಚಿಸುವ ಮಾಹಿತಿಗಳ ಸಾರಾಂಶವನ್ನು  ಅರಿತದ್ದಾಯಿತು.  ಇನ್ನು ಮುಂದೆ ಪುನರ್ಜನ್ಮಕ್ಕೆ ಸಂಬಂಧಿಸಿದಂತೆ ಸ್ವರ್ಗೀಯ ಕೋಟ ವಾಸುದೇವಕಾರಂತರ ಪುನರ್ಜನ್ಮಎಂಬ ಮಹತ್ತರವಾದ ಕೃತಿಯಲ್ಲಿ ಕಾಣಬರುವ ಕೆಲವೊಂದು ನಿರ್ಧಿಷ್ಟ ಪ್ರಸಂಗಗಳ ವಿವರವನ್ನು ತಿಳಿಯೋಣ.

***

 ಕೋ.ವಾ ಕಾರಂತರ ಸಾಹಿತ್ಯದ ಸೊಬಗು:

ಕೋಟ ವಾಸುದೇವ ಕಾರಂತರ   ಪುನರ್ಜನ್ಮ  ಎಂಬ ಕೃತಿಯಲ್ಲಿರುವ ಹಲವಾರು ಲೇಖನಗಳ ಪೈಕಿ; ’ಸರ್ಪದ ಆತ್ಮದೊಂದಿಗೆ  ಸಂಭಾಷಣೆಎಂಬ ಬರಹವು  ಒಬ್ಬ ರೈಲ್ವೇ ನೌಕರ ಶಿವದಾಸಶರ್ಮ ಪುಷ್ಟೀಕರ್ ಎಂಬುವವರು ನೀಡಿರುವ ಮಾಹಿತಿಯಾಗಿದೆ. ರಜಪುತಾನದ ಮರಕಣ ರೈಲ್ವೇ ನಿಲ್ಧಾಣದಲ್ಲಿ  ೧೯೩೦ರಲ್ಲಿ ನಡೆದ ಒಂದು ಅಚ್ಚರಿಯ ಪ್ರಸಂಗದ ವಿವರವು ಇಲ್ಲಿ ಚಿತ್ರಿತವಾಗಿದೆ.

ದಕ್ಷಿಣ ಅಮೆರಿಕದ ಎಮೆಸನ್ ಪ್ರಾಂತ್ಯದ ಅನಾಗರಿಕ ಜನಾಂಗದ ಬಾಲಕನೊಬ್ಬನು   ನೀಡಿದ ವಿವರವನ್ನು ಒಳಗೊಂಡ ಬರಹದಲ್ಲಿ ಬನಾರಸಿನ ಬ್ರಾಹ್ಮಣ ಕುಟುಂಬದ ಬಾಲಕನು ಮರಣಾನಂತರದಲ್ಲಿ ದೂರದ ಎಮೆಸನ್ ಪ್ರಾಂತ್ಯದಲ್ಲಿ ಪುನರ್ಜನ್ಮ ಪಡೆದ ಘಟನೆಯವಿವರಗಳು ನಿರೂಪಿತವಾಗಿವೆ. ಇದು ೧೯೪೯ ರಲ್ಲಿ ನಡೆದ ಘಟನೆ.

ತುರ್ಕಿಸ್ಥಾನದ ವಿದುಕ್ ಜಿಲ್ಲೆಯ ಕಿರಾಣಿವ್ಯಾಪಾರಿಯ ಮಗ ಇಸ್ಮಾಯಿಲ್ ನು  ತನ್ನ ಹದಿನೆಂಟನೇ  ತಿಂಗಳಿನಲ್ಲಿ ಮಾತನಾಡಲು ಪ್ರಾರಂಭಿಸಿದೊಡನೆಯೇ  ತಾನು ಅಬಿತ್ ಸುಜಲ್ಮಸ್ ಎಂದು ಹಿಂದಿನ ಜನ್ಮದ  ವೃತ್ತಾಂತ ತಿಳಿಸಿದ ಘಟನೆಯ ವಿವರಗಳು ತುಂಬಿರುವ ಬರಹವು ೧೯೬೨ರಲ್ಲಿ ನಡೆದ ಸಂಗತಿಗೆ ಸೇರಿದ್ದು.

ಇಟಲಿಯ ನೇಪಲ್ಸ್ ನಗರದ  ಪ್ರಾಣಿಸಂಗ್ರಹಾಲಯದ ಮೊಸಳೆಯೊಂದರ ವೃತ್ತಾಂತವು ೧೯೬೩ರಲ್ಲಿ ನಡೆದ ಘಟನೆಯ ವಿವರವಾಗಿದೆ. ೧-೧-೧೯೬೩ರಂದು  ಅಲ್ಲಿನ ಪ್ರಾಣಿಸಂಗ್ರಹಾಲಯದ ಮೊಸಳೆಯೊಂದು ಹಲವಾರು ದಿನಗಳಿಂದ ಆಹಾರಸೇವಿಸದೇ, ವೈದ್ಯಕೀಯ ತಪಾಸಣೆಗೂ  ಸಹಕರಿಸದೇ ಯಾತನೆಯನ್ನು ನುಭವಿಸುವುದನ್ನು ನೋಡಲಾಗದೇ ಅಧಿಕಾರಿಗಳು ಅದನ್ನು ಗುಂಡಿಕ್ಕಿ ಕೊಲ್ಲುವ ನಿರ್ಧಾರಕ್ಕೆ ಬಂದಿರುತ್ತಾರೆ. ಇದಕ್ಕೆ ಪೂರ್ವದಲ್ಲಿ  ಉತ್ತರ ಭಾರತದ ಸುರೇಖ ಹಾಗೂ ಶಂಕರನೆಂಬ ಯುವ ಪ್ರೇಮಿಗಳು ವಿವಾಹವಾಗಲು ನಿರ್ಧರಿಸಿಕೊಂಡಿರುತ್ತಾರೆ. ಕಾರಣಾಂತರದಿಂದ ವಿವಾಹ ನಡೆಯುವುದಿಲ್ಲ. ಸುರೇಖ ಆತ್ಮಹತ್ಯೆಮಾಡಿಕೊಳ್ಳುತ್ತಾಳೆ. ಪ್ರಿಯತಮೆಯ ಸಾವಿನಿಂದ  ವ್ಯಸನಗೊಂಡ ಶಂಕರನು ಸನ್ಯಾಸಿಯಾಗುತ್ತಾನೆ.  ದೈವ ಪ್ರೇರಣೆಯಿಂದ ಇಟಲಿ ಪತ್ರಿಕೆಯ ವರದಿಗಾರನ ಆಸಕ್ತಿಯಿಂದ  ಮೊಸಳೆಗೆ ಗುಂಡಿಟ್ಟು ಸಾಯಿಸುವ ವಿಚಾರವು ಜಗಜ್ಜಾಹಿರಾಗಿರುತ್ತದೆ. ತನ್ನ ಅಂತರಿಂದ್ರಿಯಜ್ಞಾನದಿಂದ ಸೆಳೆಯಲ್ಪಟ್ಟ ಶಂಕರನು ಅಯಾಚಿತವಾಗಿ ಒದಗಿಬಂದ ವಾಹನಗಳ ನೆರವಿನಿಂದ ಸಕಾಲದಲ್ಲಿ ನೇಪಲ್ಸ್ ನಗರದ ಪ್ರಾಣಿಸಂಗ್ರಹಾಲಯವನ್ನು ಸೇರುತ್ತಾನೆ.   ಗುಂಡಿಕ್ಕಲು ಸಿದ್ಧತೆ ನಡೆದಿದ್ದ ಮೊಸಳೆಯನ್ನಿರಿಸಿದ್ದ ಜಲಾಶಯದ ದಡದಲ್ಲಿ ನಿಂತ ಭಾರತದ ಸನ್ಯಾಸಿಯು  ಏರುದ್ವನಿಯಲ್ಲಿ ಸುರೇಖಾ. ನಾನು ಶಂಕರ ಬಂದಿದ್ದೇನೆ. ನೀನು ಈ ಹಿಂದೆ ದುಡುಕುನಿರ್ಧಾರಮಾಡಿ ಆತ್ಮಹತ್ಯೆ ಮಾಡಿಕೊಂಡೆ. ಆ ಪಾಪದ ಫಲವಾಗಿ ಈ ಮೊಸಳೆಯಜನ್ಮ ಪಡೆದೆ, ಈ ಆತ್ಮಹತ್ಯೆಯು ಹಲವಾರು ಜನ್ಮಗಳವರೆವಿಗೆ  ವ್ಯಾಪಿಸುವ  ಕ್ರಿಯೆ. ಈಗಲೂ ಆಹಾರಸೇವಿಸದೇ ಆತ್ಮಹತ್ಯೆ ಮಾಡಿಕೊಳ್ಳುವ ಕೆಟ್ಟ ನಿರ್ಧಾರ ಮಾಡಿಕೊಂಡಿದ್ದಿಯೆ. ಈಗ ನಿನಗೆ ಗುಂಡಿಟ್ಟುಕೊಂದರೂ ನಿನ್ನ ಪಾಪಕರ್ಮದ ಫಲ ತೀರುವುದಿಲ್ಲ. ಮುಂದಿನ ಜನ್ಮದಲ್ಲೂ ಇದೇ ರೀತಿಯ ಅಕಾಲಿಕಸಾವು ತಪ್ಪಿದ್ದಲ್ಲ. ಇದನ್ನು ತಪ್ಪಿಸಲು ಇರುವ ಮಾರ್ಗ ಒಂದೇ. ವೈದ್ಯರ ಚಿಕಿತ್ಸೆಗೆ ಸಹಕರಿಸಿ ರೋಗಮುಕ್ತಳಾಗಿ ಸಹಜಸಾವಿನ ವರೆಗೆ ಈ ಜನ್ಮವನ್ನು ಅನುಭವಿಸು. ಮುಂದೆ ನಿನಗೆ ಸದ್ಗತಿ ದೊರೆಯುತ್ತದೆ ಎಂದು ಆತ್ಮೀಯವಾಗಿ ಮೊಸಳೆಗೆ ಉಪದೇಶಮಾಡಿದ.  ಈ ಸನ್ಯಾಸಿಯ ಉಪದೇಶಕ್ಕೆ ಕೃತಜ್ಞತೆಯ ಕಣ್ಣೀರು ಸುರಿಸಿದ ಮೊಸಳೆಯು ಯಾವುದೇ ಉಗ್ರ ಪ್ರತಿಭಟನೆಯೂ ಇಲ್ಲದೇ  ಚಿಕಿತ್ಸೆಗೆ  ಸಹಕರಿಸಿತು!! ಪವಾಡಸದೃಷವಾದ ಈ ಘಟನೆಯಿಂದ ಅಚ್ಚರಿಗೊಂಡ ವೈದ್ಯರು ಮೊಸಳೆಗೆ ಅರಿವಳಿಕೆನೀಡಿ ಶಸ್ತ್ರಚಿಕಿತ್ಸೆಮಾಡಿ ಅದರ ಜೀವ ಉಳಿಸಿದರು. ಈ ಘನೆಯ ವಿವರಗಳು ಜಗತ್ತಿನಾದ್ಯಂತವೂ ಅಚ್ಚರಿಯ ವಿಚಾರವಾಗಿ ಪ್ರಚಾರವಾದುದನ್ನು ಕುರಿತು ಕೋಟ ವಾಸುದೇವಕಾರಂತರು ತಮ್ಮ ಬರಹದಲ್ಲಿ ಮನೋಜ್ಞವಾಗಿ ನಿರೂಪಿಸಿರುವುದನ್ನು ಕಾಣಬಹುದು.

ಸ್ವರ್ಗ- ನರಕ; ಪಾಪ; ಪುಣ್ಯ ಎಂಬುದೆಲ್ಲವೂ ಸುಳ್ಳು. ಸಾವಿನಾಚೆಗೆ ಏನೂ ಇಲ್ಲ.  ಎಂದು ವಾದಿಸುವುದು ಸಾರಿಯಲ್ಲ ಎಂದು ಈಗಾಗಲೇ  ತಿಳಿಸಿದ್ದಾಗಿದೆ. ಈ ಅಂಶ ವನ್ನು ಸಮರ್ಥಿಸುವುದಕ್ಕೆ ಸಾಕಷ್ಟು ಪುರಾವೆಗಳೂ ಇವೆ.

ಯಮಧೂತರು ಕೆಲವು ಸನ್ನಿವೇಶಗಳಲ್ಲಿ  ತಪ್ಪು ಆತ್ಮಗಳನ್ನು    ಸೆಳೆದೊಯ್ಯುವುದುಂಟು.  ಯಮಲೋಕ ಸೇರಿದನಂತರ ವಿವರಗಳನ್ನು ಪರಿಶೀಲಿಸಿದಾಗ, ಇದು ಗಮನಕ್ಕೆ ಬರುತ್ತದೆ. ಅಂಥ ಸನ್ನಿವೇಶಗಳಲ್ಲಿ ಕೂಡಲೇ ಆ ಅತ್ಮವನ್ನು ಹಿಂತಿರುಗಿಸಲಾಗುತ್ತದೆ. ಅದನ್ನು ಅದರ ಹಿಂದಿನದೇಹಕ್ಕೇ ಬಿಡಲಾಗುತ್ತದೆ.  ಅಂಥವರು ಪುನಃ ಬದುಕಿ ಉಳಿಯುತ್ತಾರೆ.  ಹೀಗೆ ತಪ್ಪು ಆತ್ಮಗಳನ್ನು ಹಿಂತಿರುಗಿಸುವ ವೇಳೆಗೆ ಶವಸಂಸ್ಕಾರ ನಡೆದುಹೋಗಿದ್ದು ಅಶರೀರಿಯಾಗುವ ಆತ್ಮವು ತನ್ನ ಆಯುಷ್ಯವು ಮುಗಿಯುವವರೆವಿಗೂ  ತನ್ನ ಕುಟುಂಬದ ಸದಸ್ಯರಿಗೆ ಅಲೌಕಿಕವಾಗಿ ಸಹಾಯ ಮಾಡುವುದು, ಮುಂತಾದ ಘಟನೆಗಳೂ ನಡೆದಿವೆ!

 ಸತ್ತು ಬದುಕಿದವರು ನೀಡಿದ ಯಮಲೋಕದ ವರ್ಣನೆ, ಅವುಗಳನ್ನು ಸಮರ್ಥಿಸುವ ಹಲವಾರು ಸ್ಪಷ್ಟಗುರುತುಗಳು ಪರೀಕ್ಷಿಸಲ್ಪಟ್ಟಿವೆ.  ಇವುಗಳಿಗೂ ಗರುಡಪುರಾಣದಲ್ಲಿ ಸೂಚಿಸಿರುವ ಹಲವಾರು ವಿವರಗಳಿಗೂ ಸಾಮ್ಯತೆ ಇರುವುದು ಗಮನಾರ್ಹವಾದ ಸಂಗತಿ.

ನಮ್ಮ ಅಗಾಧವಾದ ಕಷ್ಟ ಪರಂಪರೆಗಳಿಗೆ, ರೋಗರುಜಿನಗಳಿಗೆ ನಮ್ಮ  ಜನ್ಮ ಜನ್ಮಾಂತರಗಳ ಸಂಚಿತ ಪಾಪಕರ್ಮಗಳ ಪ್ರಭಾವವೇ ಕಾರಣವೆಂದು  ಶಾಸ್ತ್ರಗ್ರಂಥಗಳು ಹೇಳುವುದರೊಂದಿಗೆ ಇಂಥ ಅಗಾಧವಾದ ಪಾಪರಾಶಿಯನ್ನು ಎಲ್ಲರೂ ಅನುಭವಿಸಿಯೇ ತೀರಿಸಲು  ಹೆಚ್ಚು ಕಾಲಾವಧಿಯ ಅಗತ್ಯವಿರುವುದರಿಂದ ಕೆಲವೊಂದು ಪ್ರಾಯಶ್ಚಿತ್ತ ಕ್ರಿಯೆಗಳು; ದಾನ- ಧರ್ಮ; ಸದ್ವರ್ತನೆ; ಮುಂತಾದ ಪುರುಷಪ್ರಯತ್ನಗಳ ಮೂಲಕ ಪ್ರಾರಬ್ಧಕರ್ಮಗಳ ತೀವ್ರತೆಯನ್ನು ಕಡಿಮೆಮಾಡಿಕೊಳ್ಳುವ  ಸುಲಭವಾದ ಮಾರ್ಗವನ್ನೂ  ನಮ್ಮಶಾಸ್ತ್ರಗ್ರಂಥಗಳು ಸೂಚಿಸಿವೆ. ಇವುಗಳನ್ನು ಅಲ್ಲಗಳೆದು ನಾವು ವೈದ್ಯರ ನೆರವಿನಿಂದ ರೋಗವನ್ನು ಗುಣಪಡಿಸುವುದು, ಯಾರದೋ ನೆರವಿನಿಂದ ಅಥವಾ ಕಳ್ಳಮಾರ್ಗದಿಂದ ನಮ್ಮ ದಾರಿದ್ರ್ಯವನ್ನು ನಿವಾರಿಸಿಕೊಳ್ಳಲು ಪ್ರತ್ನಿಸುವುದು ಸರಿಯಾದ ಮಾರ್ಗವಲ್ಲ. ಹಾಗೊಮ್ಮೆ ರೋಗವು ನಿವಾರಣೆಯಾದರೂ; ಬಡತನ ನಿವರಣೆಯಾದರೂ, ಚಿಕಿತ್ಸೆಗಾಗಿ ಅಪಾರ ಹಣ ವ್ಯಯವಾಗುವುದು ತಪ್ಪಿದ್ದಲ್ಲ!!  ಅಕ್ರಮವಾಗಿ ಹಣಸಂಪಾದಿಸುವುದರಿಂದ ಅದಕ್ಕೆ ಸಂಬಂಧಿಸಿದ ಪಾಪಕರ್ಮದ ಫಲವು ನಮ್ಮ ಬೆನ್ನೇರುವುದೆಂಬುದು ಖಚಿತ!!!

-ಸಿರಿಭೂವಲಯದಸುಧಾರ್ಥಿ

***

No comments:

Post a Comment