Saturday 25 January 2020

ಸಿರಿಭೂವಲಯದಲ್ಲಿ ಭೋಗಜೀವನದ ವಿವರ

ಈ ಕಾವ್ಯದಲ್ಲಿರುವುದು ಕೇವಲ ಶುಷ್ಕವಾದ ಯೋಗವಷ್ಟೇ ಅಲ್ಲ!
ಅನೂಹ್ಯವಾದ ಭೋಗವೂ ಸಿರಿಭೂವಲಯದಲ್ಲಿ ತುಂಬಿದೆ!!

ಋಷಿ, ಮುನಿಗಳೆಂದಮೇಲೆ, ಅವರು ಸರ್ವಸಂಗ ಪರಿತ್ಯಾಗಿಗಳು. ಯಾವಾಗಲೂ ಯಜ್ಞ ಯಾಗಗಳು, ತಪಸ್ಸು, ಧ್ಯಾನ, ಯೋಗಸಾಧನೆಯಲ್ಲಿ ನಿರತರಾಗಿರುವವರು ಎಂಬ ಕಲ್ಪನೆಯು ಜನಸಾಮನ್ಯರಲ್ಲಿರುವುದು ಸಹಜ.  ಕುಮುದೇಂದುವೂ ಸರ್ವಸಂಗಪರಿತ್ಯಾಗಿಯಾದ ದಿಗಂಬರ ಮುನಿಯಾಗಿದ್ದಕಾರಣದಿಂದ ಸಿರಿಭೂವಲಯಕಾವ್ಯದಲ್ಲಿ ಅಡಕವಾಗಿರುವುದೆಲ್ಲವೂ ಕೇವಲ ’ಯೋಗಕ್ಕೆ’ ಸಂಬಂಧಿಸಿದ್ದೆಂದು ಯಾರಾದರೂ ನಿರ್ಧರಿಸಿದರೆ, ಅದು ತಪ್ಪಾಗುತ್ತದೆ.
 ವ್ಯಕ್ತಿ ಜೀವನದಲ್ಲಿ ಯೋಗ ಹಾಗೂ ’ಭೋಗ’ದ ಸಮನ್ವಯವಿರಬೇಕೆಂಬುದನ್ನರಿತಿದ್ದ ಕವಿಯು ತನ್ನ ಕಾವ್ಯದಲ್ಲಿ ’ಭೋಗಜೀವನಕ್ಕೆ’ ಸಂಬಂಧಿಸಿದ ಹಲವಾರು ಮಹಿತಿಗಳನ್ನು ಸರಳವಾಗಿ ಸೂಚಿಸಿರುವುದೂ  ಇದೆ!!
ಸರ್ವಸಂಗ ಪರಿತ್ಯಾಗಿಯು ಭೂಗಜೀವನವನ್ನು ಕುರಿತು ಬರೆಯಲು ಹೇಗೆ ಸಾಧ್ಯ!? ಅದು ಅಶ್ಲೀಲವೆನಿಸುವುದಿಲ್ಲವೇ? ಎಂಬ ಪ್ರಶ್ನೆ ಕೆಲವರಲ್ಲಿ ತಲೆಯೆತ್ತಬಹುದು!! ಇಲ್ಲಿ ಶೀಲ; ಅಶ್ಲೀಲ ಎಂಬುದೇನೂ ಇಲ್ಲ!
ವ್ಯಕ್ತಿಜೀವನದಲ್ಲಿ ಸಮಗ್ರತೆ ಇರಬೇಕಾದಲ್ಲಿ ಯೋಗ-ಭೋಗಗಳನ್ನು ಸಮನ್ವಯಗೊಳಿಸಿಕೊಳ್ಳಲೇ ಬೇಕಾದುದು ಅನಿವಾರ್ಯ!! ಈರೀತಿಯಲ್ಲಿ ಈ ಅನಿವಾರ್ಯತೆಯನ್ನು ಮನಗೊಂಡು ಕವಿಯು ’ಭೋಗಜೀವನದ’ ವಿಚಾರವಾಗಿ ಬರೆದಿರುವ ಮಾಹಿತಿಯನ್ನಷ್ಟು ಇಲ್ಲಿ ಗಮನಿಸೋಣ.
ಪ್ರಿಯ ಓದುಗರೇ, ಗಗನದಲ್ಲಿ ನಿರ್ಮಾಣವಾಗಿರುವ ಭವ್ಯವಾದ ’ಇಂದ್ರಭವನ’ ಗಳ ಸೊಬಗನ್ನು ಕುರಿತು ನೀವಾಗಲೇ ತಿಳಿದಿರುವಿರಿ. ಇನ್ನು ಅಲ್ಲಿ ವಾಸಿಸುವರ ’ಭೋಗಜೀವನದ’ ಪರಿ ಹೇಗಿರಬಹುದೆಂಬುದನ್ನು ಕುರಿತು  ಈಗ ನೋಡೋಣ:
 ಶ್ರೀಭವ್ಯ ಜನರು ತಮ್ಮ ತಪಸ್ಸಿನಿಂದ ಜ್ಞಾನದ ಲಾಭವಾಗಿ ಪಡೆದ ಸಂಪತ್ತಿನಿಂದ ಭವ್ಯವಾದ ಭವನದಲ್ಲಿ ವಾಸಿಸುತ್ತ ಸುಖವನ್ನನುಭವಿಸುತ್ತಿದ್ದಾರೆ.  ಇಂಥಜೀವರು ನಿರ್ಮಲವಾದ ತಪಸ್ಸಿನಿಂದ ಹಿಂದಕ್ಕೆ ಸರಿದು, ಹೆಮ್ಮೆಯ ಸಂಸಾರಸುಖವು ಒಂದೇಕಾಲದಲ್ಲಿ ಬರಬೇಕೆಂದು ನಿಧಾನವಾಗಿ ಈ ಭವನ ನಿಲಯಗಳನ್ನು ನಂಬಿಕೊಂಡಿದ್ದಾರೆ.  ನೋಡಿ:
”ಭವ್ಯಭವನವಾಸಿಗಳಾಗಿಸುಖಿ|ಸುವಶ್ರೀಭವ್ಯಜನರಸಂಪ|ದವಲಾಭದಜ್ಞಾನದ ತಪದಿಂದಪಡೆದಿ|ಹಭವವಿಹಭೂವಲಯ|| ಹಿಮ್ಮೆಟ್ಟಿನಿರ್ಮಲತಪದಿಂದಜೀವರು|ಹೆಮ್ಮೆಯಸಂಸಾರಸುಖವುಒಮ್ಮೆಗೇಬರಬೇಕೆಂದು ನಿಧಾನದಿ| ನೆಮ್ಮಿದರೀಭವನನಿಲಯ|| ”
ಇಂಥ ಭವ್ಯ ಭವನಗಳ ನಿವಾಸಿಗಳು ಬಯಸಿರುವುದಾದರೂ ಏನು?
ಮನುಮಥನ ಆಟವು (ಕಾಮದಾಟವು) ನಮಗೆ ಬೇಕುಎಂದು ನಿರ್ಧರಿಸಿ, ಜಿನನನ್ನು ಕುರಿತ ತಪಸ್ಸನ್ನೂ ಮರೆತು ಕೊನೆಗೆ ಈ ಭವ್ಯ ಭವನಗಳಲ್ಲಿ ತಮ್ಮ ದೇವಿಯರೊಂದಿಗೆ ಸುಖವಾಗಿ ನೆಲೆಸುತ್ತಾರೆ, ಈ ರೀತಿಯ ಜಿನಭಕ್ತನ ಕಾವ್ಯ ಈ ಭೂವಲಯ. ನೋಡಿ:
”ಮನಸಿಜನಾಟವುಬೇಕೆಮಗೆನ್ನುತ|ಜಿನತಪವನುಮಾರಿಬಿಟ್ಟು|ಕೊನೆಗೆಬಂದಿಲ್ಲಿದೇವಿಯರಸೌಖ್ಯದೊಳಿದ್ದನ|ಜಿನಭಕ್ತಕಾವ್ಯಭೂವಲಯ||”
ಮನಸ್ಸನ್ನಾವರಿಸಿದ ಮೋಹವು ಬಿಡದಂತಿರುವಾಗ ಈ ದೇವರು ತಮ್ಮ ಮಡದಿಯ ಸುಂದರವಾದ ವೃತ್ತಾಕಾರದ ಕೆಂದುಟಿಯ ಸೊಬಗನ್ನು ಕುಡಿಯುತ್ತ ಅವರ ರೋಪ ಲಾವಣ್ಯವನ್ನು ನೋಡುತ್ತ ಅವರ ಕುಚಗಳಸ್ಪರ್ಶದ ಸುಖವನ್ನು ಬಿಡಲಾರದೇ ಇದ್ದರಂತೆ! ನೋಡಿ:  ”ಪಿಡಿದಮೋಹಂಬಿಡದಿರುತಲೀದೇವರು|ಮಡದಿಯಬಿಂಬಾಧರವಂ| ಕುಡಿಯುತರೂಪಲಾವಣ್ಯವನೋಡುತ| ಬಿಡದೆಕುಚಗಳಸ್ಪರ್ಶಸುಖ||”
ವನಿತೆಯರ ವೃತ್ತಾಕಾರದ ಸುಂದರ ತುಟಿಗಳರಸವನ್ನು ಹೀರಿ,  ಆ ರಸದ ರುಚಿಯಿಂದ ಉತ್ತೇಜಿತರಾಗಿ, ಅವರ ಶರೀರದ ಸೊಬಗಿನ ದರ್ಶನದಿಂದ ಲಾವಣ್ಯದ ಆನಂದಪರವಶರಾಗಿದ್ದರಂತೆ ಆ ಭವನಗಳ ಅಮರರು!! ನೋಡಿ:
”ವನಿತಾಬಿಂಬಾದರದರಸಪೀರ್|ದನದರರಸದರುಚಿಯಿಂತೇರಿದರ್|ಶನದಪರವಶರಾನಂದಲಾವಣ್ಯದ|ಯದುರಿನಭವನಾಮರರ್||”
ಇಂಥ ಸುಂದರವಾದ ಹೆಣ್ಣುಗಳೊಂದಿಗೆ ಸೇರಿ ಇವರು ಮಾಡುತ್ತಿದ್ದುದಾದರೂ ಏನು!?  ಎದೆಯನ್ನು ಎದೆಯಿಂದ ಒತ್ತುತ್ತಿದ್ದ ಭವನವಾಸಿಗಳು ಸಂಭೋಗಕ್ಕೆ ಸೇರುತ್ತಾರೆ.  ಇವರ ಸಂಭೋಗದ ವೈವಿಧ್ಯತೆಗೆ ಲೆಕ್ಕವಿಲ್ಲ. ಇದು ಅವರ ಕಾಮದ ವಿಸ್ತಾರ  ಈ ಸಿರಿಭೂವಲಯದ ಪುರುಷರಲ್ಲಿ ಪತ್ನಿಯಿಲ್ಲದವರಾರೂ ಇಲ್ಲ ಎಂದಿದೆ ! ನೋಡಿ: 
”ಎದೆಯಿಂದೆದೆಯನ್ನೊತ್ತುತ|ಸಂದಭನಾಮರರಮಿಥುನರ್  |ಮಿಥುನರದರವೈವಿದ್ಯಾಂಕವಿರುವಾಗಣನೆ| ಕಾಮದವಿಸ್ತಾರವಿದುರರಿಲ್ಲದಭೂವಲಯರ್||”
ಈ ಭವನಗಳಲ್ಲಿ ವಾಸಿಸುವವರಿಗೆ ೨ಸಾವಿರ ಹೆಂಡತಿಯರು. ಅವರೊಂದಿಗೆ ಆಡುವ ಕ್ರೀಡೆಗಳು ವಿಚಿತ್ರವಾದವು! ಎಚ್ಚರಿಕೆಯ ಪ್ರೀತಿಯಿಂದಾಡುವ ಜಲಕ್ರೀಡೆ. ಹೌದು! ಜಲಕ್ರೀಡೆಯು ಪ್ರೀತಿಯಿಂದ ಆಡುವ ಆಟ ನಿಜ. ಆದರೆ ಎಚ್ಚರಿಕೆಯಿಲ್ಲದಿದ್ದರೆ, ಅಪಾಯತಪ್ಪಿದ್ದಲ್ಲ!!
ಸುಗಂಧದ ಸ್ಪರ್ಶ, ನದಿ ಅಥವಾ ಸಮುದ್ರದ ದಂಡೆಯಲ್ಲಿರುವ ಮರಳ ಹಾಸಿನಮೇಲೆ ಪ್ರೇಮೋದ್ರೇಕದಿಂದ ಆಡುವ ’ನೆಲಕ್ರೀಡೆ’  ಈ ವನಿತೆಯರು ಆಡುವ ಅಸಾಧಾರಣವಾದ ಆಟವು ಕ್ರೀಡಾಗೃಹಗಳ ವಿಶೇಷವಾಗಿರುತ್ತದೆ.
 ಕಾಮಕಲೆಯ ವಿವಿಧ ಬಂಧಗಳ ಚಿತ್ರಗಳು, ಹಂಸದ ನುಣುಪಾದ ಪುಕ್ಕಗಳಿಂದ ಸಿದ್ಧಪಡಿಸಿದ ಹಾಸಿಗೆಯಲ್ಲಿ ಹಣದಆಶೆಯು ಕಳೆದುಹೋಗಿರುವ ಹೊಂಗಸರ ಕ್ರೀಡೆಯ ಆನಂದದ ದನಿ ತುಂಬಿರುತ್ತದೆ. 
ಈ ಕ್ರೀಡಾಗೃಹದಲ್ಲಿರುವ ಹೆಂಗಸರು ಯಾರೂ ಕೋಪದಿಂದ ಕೊಸರಾಡುವವರಲ್ಲ! ಇವರ ಕಾಮದ ದಾಹವನ್ನು ತಿರಿಸುವುದು ಸಾಧ್ಯವೇ ಇಲ್ಲ!!  ಹೌದು. ’ಕಾಮತುರಾಣಾಂ ನ ಭಯಂ ನ ಲಜ್ಜಾ’  ಎನ್ನುತ್ತಾರೆ ಪ್ರಾಚೀನರು. ಕಾಮದ ಸೆಳೆತಕ್ಕೆ ಸಿಕ್ಕಿದವರು ಗಂಡಸಾಗಿರಲೀ, ಹೆಂಗಸಾಗಿರಲೀ, ಅವರಿಗೆ ಭಯವಾಗಲೀ, ನಾಚಿಕೆಯಾಗಲೀ ಇರುವುದೇ ಇಲ್ಲ!! ಹಣದಾಶೆಯಹೆಣ್ಣಿಗೆ ಹಣದಲ್ಲಿಯೇ ಗಮನವಿರುತ್ತದೆ. ಅಂಥವರು ಜೊತೆಗಾರನೊಂದಿಗೆ ಕೊಸರಾಡುವುದಿರುತ್ತದೆ. ಆದರೆ, ಇಲ್ಲಿ ಈ ಇಂದ್ರಭನದಲ್ಲಿರುವ ನಿವಾಸಿಗಳೆಲ್ಲರೂ ಹಣದಾಶೆ ಕಳೆದಿರುವವರು. ಅವರ ಗಮನವೆಲ್ಲವೂ ಕೇವಲ ಸುರತದಲ್ಲೇ ನೆಲೆಯಾಗಿರುವಕಾರಣದಿಂದ ಅವರ ಕಾಮದ ದಾಹವನ್ನು ತೀರಿಸುವುದು ಸಾಧ್ಯವೇ ಇಲ್ಲ!!
ಹೊಸಕಾಲದ ಈ ಸುರಸುಂದರಿಯರ ಜೊತೆಯಲ್ಲಿದ್ದಾಗ ಅಮೃತದ ಸ್ಪರ್ಶವಾದಂತಿರುತ್ತದೆ. ಮರಗಳ ತುದಿಯಲ್ಲಿ ಕುಳಿತು ನಾಟ್ಯವಾಡುವುದು , ಹಾಡುಹೇಳುವುದು, ಪಗಡೆಯಾಡುವುದು ಬಹಳ ಮೋಜಿನ ಕ್ರೀಡೆಯಾಗಿರುತ್ತದೆಯಂತೆ!! ನೋಡಿ: 
”ವಲ್ಲಭೆಯರೆರಳ್ ಸಹಸ್ರವಿಚಿತ್ರಕ್ರಿಯೆ| ಜತನದಪ್ರೀತಿಯೊಳಿಹಜಲಕ್ರೀಡೆ|ಸುರಭಿಸುಸ್ಪರ್ಷಂಪುಳಿನಸ್ಥಳದನೆಲದೊಳ್| ಕ್ರೀಡಿಪಪ್ರೇಮೋದ್ರೇಕನೆಲಕ್ರೀಡೆಯ||”
”ಕ್ರೀಡಾಗೃಹಗಳ ಅತಿಶಯವಿದುವನಿತೆಯರಾಟ|ಕಾಮಕಲಾಬಂಧಭಿತ್ತಿಚಿತ್ರ|ಹಂಸತೂಲದಹಾಸಿಗೆಯಧನದಾಶೆಯಳಿದ|
ಕ್ರೀಡೆಯವನಿತೆಯರಾನಂದದನಿಯೊಳ್|| ಸಿಣಸಿಣವೆನುವರಿಲ್ಲತಿಣಿಸಲಶಕ್ಯವಾ| ಸುರತಮ್ ನವತರದಕಾಲದವರವರ|ಸನಿಹದೊಳಮೃತಸ್ಪರ್ಶನವೃಕ್ಷಶಾಖೆಯಗ್ರದ| ನಾಟ್ಯಗೀತದಪಗಡೆಯಾಟವದ||”
ಈ ರೀತಿಯಾದ ವಿವಿಧರೀತಿಯ ಮಹಿಳೆಯರೊಂದಿಗಿನ ಒಡನಾಟವನ್ನು ಕಲ್ಪಿಸಿಕೊಂಡಾಗ ಇಂದಿನ ಜನರಿಗೆ ಈ ಕಾವ್ಯಾಂತರ್ಗತವಾದ ಯೋಗ- ಭೂಗಗಳ ಸಮನ್ವಯವು ಎಷ್ಟು ಸೊಗಸಿನದೆಂಬುದು ವೇದ್ಯವಾಗುತ್ತದೆ.  ಪ್ರಿಯ ಓದುಗರೇ, ಈ ವಿವರಗಳೂ ಕೂಡ ಸಿರಿಭೂವಲಯದ ನೇರ ಮಾಹಿತಿಗಳೇ ವಿನಃ ಇದರಲ್ಲಿ ಕಾವ್ಯದ ಸರಳಪರಿಚಯಕಾರ ಸುಧಾರ್ಥಿಯ ಸ್ವಕಪೋಲಕಲ್ಪಿತವಾದುದು ಏನು ಇಲ್ಲ!!!
   -ಸಿರಿಭೂವಲಯದಸುಧಾರ್ಥಿ.  

No comments:

Post a Comment