Tuesday 28 January 2020

ಸಿರಿಭೂವಲಯದಲ್ಲಿ ದ್ವೈತಾದ್ವೈತ ಹಾಗೂ ಅನೇಕಾಂತವಾದಗಳ ಸ್ಥಾನವೇನು?

ಕುಮುದೇಂದುಮುನಿಯು ಮೂರು  ಸಿದ್ಧಾಂತಗಳನ್ನು ರತ್ನತ್ರಯಗಳೆಂದು ಸೂಚಿಸಿರುವುದುಂಟು. ಅವುಗಳು ಯಾವುವು ಎಂಬುದನ್ನು  ವಿವರಿಸುವಲ್ಲಿ ಮೊದಲನೆಯದು ಅದ್ವೈತ, ಎರಡನೆಯದು  ದ್ವೈತ,  ಮೂರನೆಯದು  ದ್ವೈತಾದ್ವೈತವನ್ನು ಹಿತದಿಂದ ಸಾಧಿಸಿಕೊಂಡ ಅನೇಕಾಂತವೆನ್ನುವ ಜೈನಸಿದ್ಧಾಂಕ ಎಂಬುದಾಗಿ  ಹೇಳಿರುವುದಿದೆ.
  ಅದೈತವು ಆದಿಸಿದ್ಧಾಂತವೆನ್ನುವುದನ್ನು ದ್ವೈತಿಗಳು ವಿರೋಧಿಸುತ್ತಾರೆ! ಇವೆಡು ಸಿದ್ಧಾಂತಗಳನ್ನು ಸಮನ್ವಯಗೊಳಿಸಿಕೊಂಡು ಅನೇಕಾಂತ ಸಿದ್ಧಾಂತವು ರೂಪುಗೊಂಡಿದೆಯೆಂಬ ಮಾಹಿತಿಯನ್ನು ಇಂದಿನ ಜೈನಸಂಪ್ರದಾಯದವರು ನಿಶ್ಚಿತವಾಗಿ ಸಮ್ಮತಿಸುವುದಿಲ್ಲ!!
ಆದರೆ, ಪ್ರಾಜ್ಞರು ಈ ಖಚಿತ ಮಾಹಿತಿಯನ್ನು ಮಾನ್ಯಮಾಡಬೇಕಾದುದು ಅನಿವಾರ್ಯ.  ಮಧ್ವಾಚಾರ್ಯರಿಂದ  ಸಮರ್ಥಿಸಲ್ಪಟ್ಟ  ದ್ವೈತಸಿದ್ಧಾಂತವೇ ಸಮರ್ಪಕವಾದುದೆಂದು ಭಾವಿಸುವವರು,  ಶಂಕರರು  ಅದ್ವೈತಸಿದ್ಧಾಂತವನ್ನು ಪುನರುತ್ಥಾನಮಾಡುವ ಮೊದಲೇ ಲಕುಲೀಶನೆಂಬುವವನು ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದನೆಂಬುದನ್ನು ಗಮನಿಸಬೇಕು.
ಆದರೆ, ಲಕುಲೀಶನು ಪ್ರತಿಪಾದಿಸಿದ ದ್ವೈತಸಿಂದ್ಧಾಂತವು ಶಿವಪಾರಮ್ಯವಾದುದು! ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತವು ವಿಷ್ಣುಪಾರಮ್ಯವಾದುದು!
 ಆದರೆ, ದ್ವೈತಾದ್ವೈತಗಳೆರಡನ್ನೂ ಮಾನ್ಯಮಾಡಿರುವ ಕುಮುದೇಂದುಮುನಿಯು ತನ್ನ ಸ್ವಸಂಪ್ರದಾಯವಾದ ಅನೇಕಾಂತವನ್ನು ಇವುಗಳೊಂದಿಗೆ ತುಲನೆಮಾಡಿ, ಮೂರನೆಯ ಸ್ಥಾನದಲ್ಲಿ ನಿರ್ದೇಶಿಸಿರುವುದು ಕವಿಯ ನಿಷ್ಪಕ್ಷಪಾತವಾದ  ಧಾರ್ಮಿಕ ಮನೋಭಾವಕ್ಕೆ  ನಿದರ್ಶನವಾಗಿದೆ.  ಈ ಮಾಹಿತಿಗೆ ಸಮ್ಮತಿಸುವುದು ಅಥವಾ ವಿರೋಧಿಸುವುದ್ದು ಅವರವರ ಇಚ್ಛೆಗೆ ಬಿಟ್ಟಸಂಗತಿಯಾಗಿದೆ!!
ಈ ತತ್ವಸಿದ್ಧಾಂತಗಳ ಮಂಡನೆ . ಅವುಗಳ ಖಂಡನೆ ಪ್ರಾಚೀನಕಾಲದಿಂದಲೂ ವ್ಯಕ್ತಿಜೀವನದಲ್ಲಿ ಪ್ರವಹಿಸುತ್ತಲೇ ಇರುವುದಕ್ಕೆ ಖಚಿತವಾದ  ನಿದರ್ಶನಗಳಿವೆ.   ಮಧ್ವಾಚಾರ್ಯರು ದ್ವೈತಸಿದ್ಧಾಂತವನ್ನು ಪುನರುತ್ಥಾನಮಾಡುವಮೊದಲು ಶಂಕರರು ಅದ್ವೈತಸಿದ್ಧಾಂತವನ್ನು ಪುನರುತ್ಥಾನಮಾಡಿದವರಾಗಿದ್ದಾರೆ.  (ಗಮನಿಸಿ: ಇವರಿಬ್ಬರೂ  ದ್ವೈತಾದ್ವೈತವನ್ನು ಪುನರುತ್ಥಾನಮಾಡಿದವರೇ ವಿನಃ; ಅದನ್ನು ಸ್ಥಾಪಿಸಿದವರಲ್ಲ!!) ಶಂಕರರಿಗಿಂತಲೂ ಪ್ರಾಚೀನಕಾಲಾವಧಿಯ  ಮಹಾವೀರ ತೀರ್ಥಂಕರರು  ಅದ್ವೈತಸಿದ್ಧಾಂತದ ಪ್ರಸಿದ್ಧ ಘೋಷಣೆಯಾದ ’ತತ್ವಮಸಿ’ ಯನ್ನು ಪ್ರತಿಪಾದಿಸಿದ್ದರೆಂಬುದನ್ನು ಸಿರಿಭೂವಲಯವು ಖಚಿತವಾಗಿ ನಿರೂಪಿಸಿರುವುದಿದೆ! ನೋಡಿ:  ” ಮಹವೀರವಾಣಿಯೆಂಬುದೇ ತತ್ವಮಸಿಯಾಗಿ|ಮಹಿಮೆಯಮಂಗಲವದುಪ್ರಾ|ಭೃಹತ್ವ ಅಣುವಿನೊಳ್ ತೋರುವ ಮಹಿಮೆಯ| ವಹಿಸಿದದಿವ್ಯಪ್ರಾಭೃತದ”  ಇಷ್ಟು ಸರಳವಾದ ಖಚಿತವಾದ, ಸತ್ಯವಾದ ಮಾಹಿತಿಯನ್ನು ಗಮನಿಸದೇ , ವಿದ್ವಾಂಸರು ತಮ್ಮ ತತ್ವ ಸಿದ್ಧಾಂತವೇ ಪ್ರಾಚೀನವಾದುದು, ಸತ್ಯವಾದುದು, ಸತ್ವಶಾಲಿಯಾದುದು ಎಂದು ಹೋರಾಟಮಾಡುವುದು  ಎಷ್ಟು ಸಮಂಜಸ ಎಂಬುದನ್ನು ಹಿಂದಿನವರಂತೂ ಗಮನಿಸಲಿಲ್ಲ! ಇಂದಿನವರಾದರೂ ಇದನ್ನು ಗಮನಿಸುವ ವಿವೇಕ ಪ್ರದರ್ಶಿಸುವರೇ ಎಂಬುದನ್ನು ಕಾದು ನೋಡಬೇಕು.
                                                                        -ಸಿರಿಭೂವಲಯದಸುಧಾರ್ಥಿ. 

No comments:

Post a Comment