Friday 2 November 2012

ಸಿರಿಭೂವಲಯ ಗ್ರಂಥದ ಕುರಿತ ಒಂದು ಮಿಂಚುನೋಟ‌



ಕನ್ನಡಕುಲಕೋಟಿಯ ಜನ್ಮಜನ್ಮಾಂತರದ ಜ್ಞಾನಸಂಪತ್ತು ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯ ಶಾಸ್ತ್ರೀಯಭಾಷೆಯ ಸ್ಥಾನಮಾನದ ಸಮಸ್ಯೆಗೆ ಇದೊಂದೇ ಸೂಕ್ತ ಪರಿಹಾರ !
ಸಿರಿಭೂವಲಯ ಎಂಬುದು ಒಂದು ಪ್ರಾಚೀನ ಕನ್ನಡ ಅಂಕಕಾವ್ಯ. ಕನ್ನಡದ ಒಂದರಿಂದ ೬೪ ರವರೆಗಿನ ಅಂಕಿಗಳನ್ನು ಮಾತ್ರ ಬಳಸಿ ಈ ಗ್ರಂಥವನ್ನು ರಚಿಸಲಾಗಿದೆ. ಸರ್ವಭಾಷಾಮಯೀಭಾಷಾ ಕನ್ನಡವರ್ಣಮಾಲೆಯ ೬೪ ಅಕ್ಷರಗಳನ್ನು ಈ ೬೪ ಅಂಕಿಗಳು ಪ್ರತಿನಿಧಿಸುತ್ತವೆ. ಒಂದೊದು ಪುಟದಲ್ಲಿಯೂ ಅಡ್ಡಸಾಲು ೨೭ ಹಾಗೂ ಉದ್ದಸ್ಸಾಲು ೨೭ ರಂತೆ ಒಟ್ಟು ೭೨೯ ಚಿಕ್ಕ ಚೌಕಗಳಿರುವ ಒಂದು ಪುಟವನ್ನು ಚಕ್ರ ಎಂದು ಕರೆಯಲಾಗುತ್ತದೆ.ಇಂಥ ೧೬೦೦೦ ಚಕ್ರಗಳು ಈ ಗ್ರಂಥದ ಒಟ್ಟುವ್ಯಾಪ್ತಿಯಾಗಿತ್ತು. ಅಂಕಿಗಳಿರುವಲ್ಲಿ ಅನ್ವಯವಾಗುವ ಅಕ್ಷರಗಳನ್ನು ಅಳವಡಿಸಿಕೊಂಡು; ಸುಮಾರು ೪೦ ಬೇರೆ ಬೇರೆ ಬಂಧಗಳಲ್ಲಿ ಓದಿದಾಗ, ಅದರಲ್ಲಿ ಆರುಲಕ್ಷ ಮೂಲ ಕನ್ನಡ ಸಾಂಗತ್ಯ ಪದ್ಯಗಳು ಹೊರಹೊಮ್ಮುತ್ತವೆ. ಇವುಗಳನ್ನು ಸೂಚನೆಗನುಗುಣವಾಗಿ ವಿಂಗಡಿಸಿಕೊಂಡು ಓದಿದಾಗ, ಅಕ್ಷರಕ್ಕೆ ಲಕ್ಷದಂತೆ ಜಗತ್ತಿನ ೭೧೮ ಭಾಷೆಗಳಿಗೆ ಸೇರಿದ, ೩೬೩ ಮತಧರ್ಮಗಳ ಸಮನ್ವಯ ಹಾಗೂ ಅಣುವಿಜ್ಞಾನ; ಆಕಾಶಗಮನ; ಆಯುರ್ವೇದ; ಅಂಕಗಣಿತ ಇತ್ಯಾದಿ ಸಕಲ ಜ್ಞಾ-ವಿಜ್ಞಾನಗಳಿಗೆ ಸೇರಿದ ಪ್ರಾಚೀನ ಸಾಹಿತ್ಯದ ಸಾರವು ನಮಗೆ ದೊರೆಯುತ್ತದೆ.೭೧೮ ಭಾಷೆಗಳ ಬೇರೆ ಬೇರೆ ಸಾಹಿತ್ಯವನ್ನು ಒಂದೆಡೆ ಕಟ್ಟಿರಿಸುವ ದಿಸೆಯಲ್ಲಿ ಬಳಸಿರುವ ಇಲ್ಲಿನ ಲಿಪಿಕ್ರಮವು ನಮಗೆ ಸ್ವಲ್ಪ ಅಪರಿಚಿತವೆನಿಸುವುದು ಸಹಜ. ಇಲ್ಲಿನ ಬರವಣಿಗೆಯಲ್ಲಿ ಪ್‌ಊರ್‌ಣ್‌ಆಕ್‌ಷ್‌ಅರ್‌ಅ ಕ್‌ರಮವಿಲ್‌ಲ. ಈ ಕ್ರಮದಲ್ಲಿ ಸಮಗ್ರ ಕಾವ್ಯವನ್ನು ಓದಿತಿಳಿಯುವುದು ಬಹಳ ಕಠಿಣವಾದ ಕಾರ್ಯ. ಕ್ರಿ.ಶ. ೮೦೦ ರರ ಸುಮಾರಿನಲ್ಲಿದ್ದ ಸುಪ್ರಸಿದ್ಧ ವ್ಯಾಖ್ಯಾನಕಾರ ವೀರಸೇನನ ಶಿಷ್ಯನೂ; ರಾಷ್ಟ್ರಕೂಟ ಚಕ್ರವರ್ತಿ ಮಾನ್ಯಖೇಟದ ಅಮೋಘವರ್ಷನಿಗೆ ಗುರುವೂ ಆಗಿದ್ದ ಕುಮುದೇಂದುವೆಂಬ ಜೈನ ಮುನಿಯು ತನ್ನ ಪ್ರಾಚೀನ ಗುರುಪರಂಪರೆಯ ಜ್ಞಾನಧಾರೆಯ ಆಧಾರದಲ್ಲಿ ರಚಿಸಿದ ಜಗತ್ತಿನ ಅತ್ಯದ್ಭುತ ಕನ್ನಡ ಅಂಕಕಾವ್ಯ ಈ ಸಿರಿಭೂವಲಯ.
ಈ ರೀತಿಯಲ್ಲಿ ಊಹಾತೀತವಾದ ಸಂಗತಿಯನ್ನು ಸಾಕ್ಷಾತ್ಕರಿಸಿಕೊಂಡು; ಕನ್ನಡದ ಅಂಕಿಗಳಿಗೆ ಅನ್ವಯವಾಗುವ ಪ್ರಾಚೀನ ಲಿಪಿಕ್ರಮವನ್ನು ರೂಪಿಸಿಕೊಂಡು; ಒಟ್ಟುಗ್ರಂಥದ ೬೦ ರಲ್ಲಿ ನಾಲ್ಕುಭಾUದಷ್ಟನ್ನು ಸಂಶೋಧಿಸಿ; ಅದರಲ್ಲಿ ನಾಲ್ಕನೇ ಒಂದುಭಾಗದಷ್ಟನ್ನು ೧೯೫೩ ರರಷ್ಟು ಹಿಂದೆಯೇ ಆಧುನಿಕ ಮುದ್ರಣ ಕ್ರಮದಲ್ಲಿ ಮುದ್ರಣ ಮಾಡಿಸಿ; ಕನ್ನಡಿಗರಿಗೆ ಓದಲು ಒದಗಿಸಿಕೊಟ್ಟ ಅನುಪಮ ಕನ್ನಡಾಭಿಮಾನಿ ಕರ್ಲಮಂಗಲಂ ಶ್ರೀಕಂಠಯ್ಯನವರೆಂಬ ಬಹುಭಾಷಾ ವಿಶಾರದರ ಶೈಕ್ಷಣಿಕ ಅರ್ಹತೆ ಕೇವಲ ಪ್ರಾಥಮಿಕ ೩ನೇ ತರಗತಿ ಎಂದರೆ, ಓದುಗರು ನಂಬಲಾರರೇನೋ! ಇದೊಂದೇ ಕಾರಣದಿಂದಾಗಿ ಅಂದಿನ ವಿದ್ವಾಂಸರು ಇವರ ಪ್ರತಿಭೆಯ ವಿರುದ್ಧ ಇಲ್ಲ ಸಲ್ಲದ ತಕರಾರು ತೆಗೆದು; ಇವರ ಅನುಪಮ ಸಂಶೋಧನೆಯನ್ನು ಮೂಲೆಗುಂಪು ಮಾಡುವಲ್ಲಿ ಯಶಸ್ವಿಯಾದರು.
ಸರಿಸಾಟಿಯಿಲ್ಲದ ಇವರ ಪ್ರಚಂಡ ಮೇಧಾಶಕಿಯಿಂದಾಗಿ ಬೆಳಕುಕಂಡ ಈ ಸಿರಿಭೂವಲಯz ೧೨೭೦ ಚಕ್ರಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಮೂಲಸಾಹಿತ್ಯವನ್ನು ಭಾರತದ ರಾಷ್ಟ್ರಪತಿ ಡಾ|| ರಾಜೇಂದ್ರ ಪ್ರಸಾದರು ಇದು ಕೇವಲ ಕನ್ನಡಭಾಷೆಯ ಸಾಹಿತ್ಯವಲ್ಲ; ಜಗತ್ತಿನ ಮಾನವಕುಲಕ್ಕೆ ಸೇರಿದ ಜ್ಞಾನದಗಣಿ ಎಂಬ ಅನಿಸಿಕೆಯಿಂದ ಅವುಗಳನ್ನು ಕೇಂದ್ರ ಸರ್ಕಾರದ ಪ್ರಾಚ್ಯಪತ್ರಾಗಾರ ಇಲಾಖೆಯಲ್ಲಿ ಮೈಕ್ರೋಫಿಲಂ ರೂಪದಲ್ಲಿ ಶಾಶ್ವತವಾಗಿ ಸಂರಕ್ಷಿಸುವ ಕಾರ್ಯ ನೆರವೇರಿಸಿದರು. ಕರ್ಲಮಂಗಲಂ ಶ್ರೀಕಂಠಯ್ಯನವರ ವಿದ್ವತ್ತು ಊಹಾತೀತವಾದುದು. ಅವರೊಬ್ಬ ಬಹುಮುಖ ಪ್ರತಿಭಾಶಾಲಿ. ಕ್ರಮಬದ್ಧವಾದ ಶಾಲಾಶಿಕ್ಷಣವಿಲ್ಲದೆಯೇ ಸ್ವಯಂಶಿಕ್ಷಣ ಕ್ರಮದಲ್ಲಿ ದೇಶವಿದೇಶಗಳಿಗೆ ಸೇರಿದ ಸುಮಾರು ೧೪ ಭಾಷೆಗಳಲ್ಲಿ ಅವರಿಗೆ ಸಂಶೋಧನೆಯ ಮಟ್ಟದ ಪಾಂಡಿತ್ಯವಿದ್ದುದನ್ನು ಗಮನಿಸಿದವರಿಗೆ; ಸಹಿಸಿದವರಿಗೆ ಮಾತ್ರವೇ ಅವರ ಮಹತ್ವದ ಅರಿವಾಗುತ್ತಿದ್ದುದು. ಈ ಕಾರಣದಿಂದಾಗಿಯೇ ಸುಪ್ರಸಿದ್ಧ ಭಾರತೀಯ ಇತಿಹಾಸ ಪ್ರಾಧ್ಯಾಪಕ ಡಾ|| ಎಸ್. ಶ್ರೀಕಂಠಶಾಸ್ತ್ರಿಗಳು ಇವರ ಅಗಾಧವಾದ ಪ್ರತಿಭೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
ಕನ್ನಡಭಾಷೆ; ಸಾಹಿತ್ಯ; ಸಂಸ್ಕೃತಿ; ಜನಜೀವನದ ಪರಿಸರ ಮುಂತಾದುವುಗಳ ನೆಲೆ-ಬೆಲೆಯನ್ನು ಕುರಿತು ಚಿಂತಿಸಿ, ಚರ್ಚಿಸುವುದಕ್ಕಾಗಿ ತಾಲ್ಲೂಕು ಮಟ್ಟದಿಂದ ಆರಂಭಿಸಿ; ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ವಿಶಮಟ್ಟದಲ್ಲಿ ಸಮ್ಮೇಳನಗಳು ನಡೆದು, ಇತಿಹಾಸ ನಿರ್ಮಿಸುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಆದರೆ, ಜಗತ್ತಿನ ಹತ್ತನೇ ಅಚ್ಚರಿ ಎಂಬುದಾಗಿ ವಿದೇಶೀ ವಿದ್ವಾಂರುಗಳಿಂದಲೂ ಪ್ರಶಂಸೆ ಪಡೆದಿರುವ ಜಗತ್ತಿನ ಅತ್ಯಂತ ಪ್ರಾಚೀನ ಕನ್ನಡಅಂಕಕಾವ್ಯ ಸರ್ವಭಾಷಾಮಯೀಭಾಷಾ ಸಿರಿಭೂವಲಯದ ವಿಚಾರವನ್ನು ಕುರಿತು ಖಚಿತವಾಗಿ ಯಾವುದೇ ಒಂದು ವಿಸ್ತೃತ ಚರ್ಚೆಯೂ ಕಳೆದ ೬೦ ವರ್ಷಗಳಿಂದ ಇದುವರೆವಿಗೂ ನಡೆದ ದಾಖಲೆ ಇರುವುದು ಅಪರೂಪ.! ಈ ಅಚ್ಚರಿಯ ಅಂಕಕಾವ್ಯವನ್ನು ಕುರಿತು ಬಹಳ ಅಚ್ಚರಿಯ ಕಾವ್ಯ ಅಮೋಘವಾದ ಸಾಹಿತ್ಯ ಎಂಬ ಉದ್ಘಾರವನ್ನು ಹೊರತು ಪಡಿಸಿ; ಈ ಕಾವ್ಯದಲ್ಲಿ ಏನಿದೆ? ಎಂಬುದನ್ನು ಕುರಿತು ಸಾಮಾನ್ಯ ಓದುಗರಿಗೆ ನಿಖರವಾದ ಪರಿಚಯ ಮಾಡಿಕೊಡುವ ಪ್ರಯತ್ನವು ಇದುವರೆವಿಗೂ ನಡೆಯಲೇ ಇಲ್ಲವೆಂದರೆ ತಪ್ಪಾಗಲಾರದು.
ಈಚೆಗೆ ಬೆಂಗಳೂರಿನ ಪುಸ್ತಕಶಕ್ತಿ ಪ್ರಕಾಶನದವರು ನಡೆಸಿದ ಪ್ರಯತ್ನದಿಂದಾಗಿ; ನಾಡಿನ ಸುಪ್ರಸಿದ್ಧ ವಿದ್ವಾಂಸರಾದ ಡಾ|| ಟಿ. ವಿ. ವೆಂಕಟಾಚಲಶಾಸ್ತ್ರಿಯವರ ನೇತೃತ್ವದಲ್ಲಿ ವಿದ್ವಾಂಸರ ತಂಡವೊಂದು ಸುಮಾರು ಒಂದುದಶಕದ ಕಾಲ ಶ್ರಮವಹಿಸಿ ಈ ಗೃಂಥದ ೧೯೫೩ ರರ ಮುದ್ರಣವನ್ನು ತಮ್ಮದೇಆದ ಹಾದಿಯಲ್ಲಿ ಪರಿಷ್ಕರಿಸಿ ಅಪೂರ್ಣವಾಗಿ ಪುನರ್ಮುದ್ರಿಸಿದ್ದಾರೆ. ಆದರೆ ಅಲ್ಲ್ಲಿನ ವಿವರಗಳಿಂದ ಸಿರಿಭೂವಲಯದ ವಿಚಾರವು ಇನ್ನಷ್ಟು ಗೊಂದಲದ ಗೂಡಾಗಿದೆ!
ಮುದ್ರಿತವಾಗಿರುವ ಭಾಗದ ಸಿರಿಭೂವಲಯವನ್ನು ಅಭ್ಯಾಸಮಾಡುವುದಕ್ಕೂ; ಅರ್ಥಮಾಡಿಕೊಳ್ಳುವುದಕ್ಕೂ ಬೇರೆಯವರಿಗೆ ಅದನ್ನು ಪರಿಚಯ ಮಾಡಿಕೊಡುವುದಕ್ಕೂ ಅಪಾರವಾದ ಸಹನೆ; ಶ್ರಮಸಹಿಷ್ಣುತೆ ಹಾಗೂ ಅನ್ಯರಲ್ಲಿರುವ ಅಪಾರ ಮೇಧಾವಿತನವನ್ನು ಮುಕ್ತಮನಸ್ಸಿನಿಂದ ಮೆಚ್ಚುವ ಉದಾರಗುಣ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಮುದ್ರಿತ ಪ್ರತಿಯ ಒಂದೇವೊಂದು ಪುಟವನ್ನೂ ಓದಿತಿಳಿಯಲು ಸಾಧ್ಯವಾಗದು. ಇದರ ವಿಚಾರವಾಗಿ ಕುಮುದೇಂದುಮುನಿಯೇ ಯಾರೆಷ್ಟುಜಪಿಸಿದರಷ್ಟು ಸತ್ಫಲವೀವ ಕಾವ್ಯ ಅವರವರ ಶಕ್ತಿಗೆ ತಕ್ಕ ವರವಾದ ಕಾವ್ಯ ಮುಂತಾಗಿ ಸೂಚನೆ ನೀಡಿದ್ಧಾನೆ! ಈ ಗ್ರಂಥದ ಭಾಷೆಯ ಲಿಪಿಕ್ರಮವು ಇಂದಿನ ಸರಳಭಾಷೆಗೆ ಹೊಂದಿಕೊಂಡಿರುವ ವಿದ್ವಾಂಸರ ಸುಲಭವಾದ ಓದಿಗೆ ತೊಡಕಾಗಿ ಪರಿಣಮಿಸಿದೆ. ಈ ಕಾರಣದಿಂದ ನಮ್ಮ ವಿದ್ವಾಂಸರು ಇದಕ್ಕೆ ಕಬ್ಬಿಣದಕಡಲೆ ಎಂದು ಹೆಸರಿಟ್ಟು ದೂರವಿರಿಸಿದ್ದರು. ಈಗ ಈ ಅಚ್ಚರಿಯ ಅಂಕಕಾವ್ಯವನ್ನು ಸರಳವಾಗಿ ಪರಿಚಯಮಾಡಿಕೊಡುವ ಕೆಲಸವು ಯಶಸ್ವಿಯಾಗಿ ನಡೆದಿದೆ.
ಭಾರತದ ರಾಷ್ತ್ರಪತಿ ಡಾ|| ರಾಜೇಂದ್ರಪ್ರಸಾದರ ಆಣತಿಯಂತೆ ಕೇಂದ್ರಸರ್ಕಾರವು ಭಾರತೀಯ ಪ್ರಾಚ್ಯಪತ್ರಾಗಾರ ಇಲಾಖೆಯಲ್ಲಿ ಮೈಕ್ರೋಫಿಲಂ ರೂಪದಲ್ಲಿ ಸಂರಕ್ಷಿಸುವ ಸಂರಕ್ಷಿಸಿರುವ ಸುಮಾರು ೧೨೭೦ ಚಕ್ರಗಳಷ್ಟು ಭಾಗದ ಸಾಹಿತವು ಆದರೆ ಆಸಕ್ತಿಯಿರುವ ಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತಿಲ್ಲ!. ಆಸಕ್ತಿ ಇರುವ ಅಭಿಮಾನಿಗಳಿಗೆ ಇವುಗಳು ಕನ್ನಡನಾಡಿನಲ್ಲಿಯೇ ಸುಲಭವಾಗಿ ಕೈಗೆಟುಕುವಂತೆ ವ್ಯವಸ್ಥೆಮಾಡಬೇಕಾದುದು ರಾಜ್ಯಸರ್ಕಾರದ ಕರ್ತವ್ಯವಾಗಿದೆ. ಇಂದಿನ ಕಂಪ್ಯೂಟರ್ ಸಾಧನದ ನೆರವಿನಿಂದ ಈ ಗ್ರಂಥದ ಮುಂದಿನ ಸಂಶೋಧನೆಗೆ ನೆರವು ದೊರೆಯುವ ವಿಚಾರದಲ್ಲಿ ಸಾಫ್ಟ್‌ವೇರ್ ವಿಜ್ಞಾನಿಗಳಿಗೆ ಭರವಸೆಯಿದೆ. ಈ ವಿಚಾರದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಬಲ್ಲವರಿಗೆ; ನಿರ್ವಹಿಸಿರುವವರಿಗೆ ಈ ವಿಶ್ವವಿದ್ಯಾಲಯಗಳ ವಿದ್ಯಾವಂತರ ಮನ್ನಣೆಯು ಅದೇಕೋ ದೊರೆಯುತ್ತಿಲ್ಲ! ಕನ್ನಡಭಾಷೆಯಲ್ಲಿರುವ ಅಪರೂಪದ ಜ್ಞಾನನಿಧಿಯು ಇಂಥ ಕ್ಷುಲ್ಲಕ ಕಾರಣದಿಂದಾಗಿ ಜಗತ್ತಿನಲ್ಲಿ ಸೂಕ್ತವಾಗಿ ಬೆಳಕಿಗೆಬಾರದಂತಾಗಿದೆ.
ಕಳೆದ ಅರುವತ್ತು ವರ್ಷಗಳಿಂದ ಈ ಗ್ರಂಥವನ್ನು ಕುರಿತು ನಡೆದಿರುವ ಚಾರಿತ್ರಿಕ ಚಟುವಟಿಕೆಗಳ ಮಾಹಿತಿಗಳು ಹಾಗೂ ಗ್ರಂಥದ ಅಧ್ಯಯನದಿಂದ ದೊರೆಯುವ ಮಹತ್ತರವಾದ ಮಾಹಿತಿಗಳು ಮತ್ತು ಈ ಗ್ರಂಥದಲ್ಲಿ ಅಡಕವಾಗಿರುವ ಬೇರೆ ಬೇರೆ ಸಾಹಿತ್ಯದ ವಿವರವನ್ನು ಸೂಚಿಸಿ; ನಾನು ಈಗಾಗಲೇ ಸಿರಿಭೂವಲಯಸಾರ ಎಂಬ ಪರಿಚಯ ಗ್ರಂಥ ಪ್ರಕಟಿಸಿದ್ದಾಗಿದೆ. ಅದರಲ್ಲಿ ಕಳೆದ ೬೦ ವರ್ಷಗಳಿಂದಲೂ ಸಿರಿಭೂವಲಯದ ವಿಚಾರವಾಗಿ ನಡೆದಿರುವ; ನೆಡಯಬೇಕಾಗಿದ್ದ; ಮುಂದೆನಡೆಬೇಕಿರುವ ಚಟುವಟಿಕೆಗಳನ್ನು ಕುರಿತು ವಿವರವಾದ ಚರ್ಚೆನಡೆದಿದೆ.
ಈ ಗ್ರಂಥದ ಸಾಂಗತ್ಯ ಪದ್ಯಗಳನ್ನು ಇಂದಿನ ಸರಳವಾದ ಕ್ರಮದಲ್ಲಿಯೇ ಓದಲು ಸುಲಭ ಸಾಧ್ಯವಾಗುವಂತೆ ನಿರೂಪಿಸಿ; ಸಿರಿಭೂವಲಯದ ಆಯ್ದ ಸಾಂಗತ್ಯ ಪದ್ಯಗಳ ಸಂಗ್ರಹ ಎಂಬ ಕೃತಿಯನ್ನೂ ಪ್ರಕಟಿಸಲಾಗಿದೆ. ಈ ಕಾರ್ಯಗಳಿಗೆ ಸಕಾರದಿಂದ ಯಾವುದೇ ನೆರವನ್ನೂ ಅಪೇಕಿಸಿಲ್ಲ. ಏಕಾಂಗಿಯಾಗಿ ಒಬ್ಬ ವ್ಯಕಿಯು ಮಾಡಬಹುದಾದುದನ್ನು ನಾನು ಮಾಡಿ ಮುಗಿಸಿದ್ದೇನೆ. ಅದನ್ನು ಈ ಮೂಲಕ ನಿಮ್ಮೆಲ್ಲರ ಗಮನಕ್ಕೆ ತಂದಿದ್ದೇನೆ. ಇಂದಿನ ಕನ್ನಡದ ಬೆಳವಣಿಗೆಗೆ ಮೂಲಕಾರಣವಾಗಿರುವ ಕನ್ನಡ ಬೆರಳಚ್ಚುಯಂತ್ರಕ್ರಮದ ನಿರೂಪಕರಾದ ದಿವಂಗತ ಕೆ. ಅನಂತಸುಬ್ಬರಾಯರು ಈ ಗ್ರಂಥದ ಸಂಶೋಧಕ ಕರ್ಲಮಂಗಲಂ ಶ್ರೀಕಂಠಯ್ಯನವರ ಸಹಚರರಾಗಿದುಡಿದು; ತಮ್ಮ ಜೀವಮಾನಪೂರ್ತ ಸಿರಿಭೂವಲಯದ ಪ್ರಚಾರಮಾಡಿದವರು. ಅವರಿಂದ ಸಂಪೂರ್ಣವಾಗಿ ಖಚಿತ ಮಾಹಿತಿಗಳನ್ನರಿತು; ಕಳೆದ ೨೫ ವರ್ಷಗಳಿಂದ ಶ್ರದ್ಧೆವಹಿಸಿ ಈ ಗ್ರಂಥದ ಅಧ್ಯಯನ ಮಾಡಿರುವುದಷ್ಟೇ ನನ್ನ ಶಿಕ್ಷಣಾರ್ಹತೆ. ನನಗೂ ಯಾವುದೇ ವಿಶ್ವವಿದ್ಯಾಲಯ ಪದವಿಯ ಮುದ್ರೆ ಇಲ್ಲ!
ಈಚೆಗೆ ಬೆಂಗಳೂರು ಹಾಗೂ ಬೆಳಗಾವಿ ನಗರದಲ್ಲಿ ಏರ್ಪಾಡಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ವಿಶ್ವಕನ್ನಡ ಸಮ್ಮೇಳನದ ವೇದಿಕೆಯಲ್ಲಿ ಕಳೆದ ಐವತ್ತು ವರ್ಷಗಳಿಂದ ಕನ್ನಡ ಭಾಷೆಯ ಸಾಹಿತ್ಯ; ಸಂಸ್ಕೃತಿ; ಜನಜೀವನ; ರಾಜಕಾರಣ ಇತ್ಯಾದಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಆಗಿರುವ ಸಾಧನೆಯನ್ನು ಕುರಿತು ಆತ್ಮಾವಲೋಕನ ಮಾಡಿಕೊಳ್ಳಲು ಅವಕಾಶವಾಗುವುದೆಂಬ ನಿರೀಕ್ಷೆಯಿತ್ತು. ಆದರೆ ಸಿರಿಭೂವಲಯದ ವಿಚಾರವಾಗಿ ಅಭಿಮಾನಹೊಂದಿದ್ದ ಮಾನ್ಯಶ್ರೀ ಜಿ. ವೆಂಕಟಸುಬ್ಬಯ್ಯನವರೂ ಕೂಡ ಚಕಾರವೆತ್ತಲಿಲ್ಲ! ಪ್ರಜಾವಾಣಿಯಲ್ಲಿ ಈ ವಿಚಾರವಾಗಿ ಮನವಿಮಾಡಿರೂ ಅದು ಫಲನೀಡಲಿಲ್ಲ. ಕನ್ನಡಕುಲಕೋಟಿಯ ಜನ್ಮಜನ್ಮಾಂತರದ ಜ್ಞಾನಸಂಪತ್ತು ಎನಿಸಿಕೊಂಡಿರುವ ಸರ್ವಭಾಷಾಮಯೀಭಾಷಾ ಸಿರಿಭೂವಲಯ ಎಂಬ ಅಚ್ಚರಿಯ ಪ್ರಾಚೀನ ಕನ್ನಡ ಅಂಕಕಾವ್ಯದ ವಿಚಾರದಲ್ಲಿ ಕಳೆದ ಅರುವತ್ತು ವರ್ಷಗಳಿಂದಲೂ ಕನ್ನಡ ಕನ್ನಡಸಾಹಿತ್ಯದ ದಿಗ್ಗಜರು ಅನುಸರಿಕೊಂಡು ಬಂದಿರುವ ಉದಾಸೀನ ಧೋರಣೆಯಿಂದ ಉಂಟಾಗಿರುವ ತೊಡಕನ್ನು ಕುರಿತು ಇಲ್ಲಿ ಓದುಗರ ಗಮನಸೆಳೆಯಲು ಆಶಿಸುತ್ತೇನೆ.
ಕ್ರಿ.ಶ. ೮೫೦ರ ಸುಮಾರಿನಲ್ಲಿ ಅಮೋಘವರ್ಷ ನೃಪತುಂಗನ ಕಾಲದಲ್ಲಿ ರಚನೆಯಾದ ಕವಿರಾಜಮಾರ್ಗ ಎಂಬ ಲಕ್ಷಣಗ್ರಂಥವೇ ಕನ್ನಡದ ಪ್ರಾಚೀನ ಸಾಹಿತ್ಯ ಎಂದು ಕನ್ನಡ ಸಾರಸ್ವತ ಲೋಕದ ದಿಗ್ಗಜರು ನಿರ್ಧರಿಸಿಬಿಟ್ಟಿದ್ದಾರೆ! ಇದಕ್ಕೂ ಮೊದಲು ರಚನೆಯಾಗಿರುವ ಅಂಕಕಾವ್ಯ ಸಿರಿಭೂವಲಯ. ಈ ಗ್ರಂಥದಲ್ಲಿ ಕನ್ನಡದ ಪ್ರಾಚೀನತೆಯ ಬಗೆಗೆ ಖಚಿತವಾದ ಹೇಳಿಕೆಗಳಿವೆ. ೨೪ನೇ ತೀರ್ಥಂಕರ ಮಹಾವೀರನು ಕನ್ನಡಭಾಷೆಯಲ್ಲಿ ನೀಡಿರುವ ಪರಂಪರಾಗತ ಉಪದೇಶಗಳ ಸಾರವೇ ಈ ಗ್ರಂಥದ ಮೂಲವೆಂದು ಕುಮುದೇಂದುಮುನಿಯು ಸ್ಪಷ್ಟವಾಗಿ ಸೂಚಿಸಿದ್ದಾನೆ. ಅಂದರೆ ಕನ್ನಡವು ೨೩೦೦ ವರ್ಷಗಳ ಇತಿಹಾಸ ಹೊಂದಿರುವುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ. ಇದನ್ನು ಅಲ್ಲಗಳೆಯಲು ಯಾರಿಗೂ ಸಾಧ್ಯವಿಲ್ಲ.
ಕನ್ನಡ ಅಕ್ಷರಗಳು ಹಾಗೂ ಅಂಕಿಗಳು ಕರುನಾಡತಣ್ಪಿನ ನೆಲದೊಳ್ ಹುಟ್ಟಿದ ಕುರು; ಹರಿ; ಪುರುವಂಶವೆರೆದು ಪೊರೆದು ಹೊತಿಸಿದ ಅಂಕಜ್ವಾಲೆಯ ಬೆಳಕಿನ ಪರಿಯ ಚುಜ್ಯೋತಿ ಇದರಿಯಾ ಎಂದು ಶ್ರೀಕೃಷ್ಣನು ಪಾರ್ಥನಿಗೆ ತಿಳಿಯಹೇಳಿದ್ದನ್ನು ಈ ಗ್ರಂಥವು ಸೂಚಿಸಿದೆ. ಅಂದರೆ, ಕನ್ನಡವು ಕ್ರಿ.ಪೂ. ೧೫೬೦ ಕ್ಕೆ ಮೊದಲೇ -ಸುಮಾರು ನಾಲ್ಕುಸಾವಿರ ವರ್ಷಗಳ ಹೆಂದೆಯೇ-ಬಳಕೆಯಲ್ಲಿದ್ದುದಕ್ಕೆ ಇದು ಸಾಕ್ಷಿಯಾಗಿದೆ.
ಆದಿ ತೀರ್ಥಂಕರ ಋಷಭದೇವನು ಕನ್ನಡ ಅಕ್ಷರಗಳ ಹಾಗೂ ಅಂಕಿಗಳ ಉಗಮವನ್ನು ಕುರಿತು ತನ್ನ ಪುತ್ರಿಯರಿಗೆ ತಿಳಿಸಿ ಕೊಟ್ಟದ್ದನ್ನೂ; ಅದೇ ಬ್ರಾಹ್ಮಿ ಹಾಗೂ ಸೌಂದರಿ ಲಿಪಿಗಳೆಂದು ಪ್ರಚಾರಕ್ಕೆ ಬಂದುದನ್ನೂ ಸಿರಿಭೂವಲಯವು ಖಚಿತವಾಗಿ ನಿರೂಪಿಸಿದೆ. ಸಿರಿಭೂವಲಯದ ಒಂದು ಅಂಗವೇಆಗಿದ್ದು ಇಂದಿನ ಜಗತ್ತಿನಾದ್ಯಂತ ಮನ್ನಣೆಗಳಿಸಿರುವ ಭಗವದ್ಗೀತೆಯಲ್ಲಿರುವ ಮಾಹಿತಿಗಳನ್ನಾಧರಿಸಿ ಲೆಕ್ಕಹಾಕಿದಲ್ಲಿ; ಕನ್ನಡ ಲಿಪಿ ಹಾಗೂ ಅಂಕಿಗಳಿಗೆ ಲಕ್ಷಾಂತರ ವರ್ಷಗಳಷ್ಟೇಅಲ್ಲ; ಕೋಟ್ಯಾಂತರ ವರ್ಷಗಳ ಇತಿಹಾಸವಿರುವುದು ಸ್ಪಷ್ಟವಾಗಿದೆ. ಆದರೆ ನಮ್ಮ ಕನ್ನಡ ವಿದ್ವಾಂಸರು ಕ್ರಿ. ಶ. ೬೦೦ ಕ್ಕೆ ಮೊದಲು ಕನ್ನಡವು ಲಿಪಿಬದ್ಧವಾಗಿರಲಿಲ್ಲವೆಂದೇ ನಿರ್ಧರಿಸಿಬಿಟ್ಟಿದ್ದರು! ಈಗ ಸುಮಾರು ಎರಡುಸಾವಿರ ವರ್ಷಗಳ ಶಾಸನದ ಆಧಾರವಿದೆ ಎಂದು ತಿದ್ದುಪಡಿ ಮಾಡಿಕೊಂಡಿದ್ದಾರೆ!! ಇದೆಲ್ಲ ಮಾಹಿತಿಗಳನ್ನು ಕುರಿತು ಸಿರಿಭೂವಲಯದ ಶ್ರೀಕಂಠಯ್ಯನವರು ೧೯೫೦ ಕ್ಕೆ ಮೊದಲೇ ಜಗತ್ತಿನ ಗಮನ ಸೆಳೆದಿದ್ದಾರೆ
ಕನ್ನಡಭಾಷೆಗೆ ಶಾಸ್ತ್ರೀಯಭಾಷೆಯ ಸ್ಥಾನಮಾನ ನೀಡುವ ವಿಚಾರದಲ್ಲಿ ಚೆನ್ನೈನ ಶ್ರೇಷ್ಠನ್ಯಾಯಾಲಯದಲ್ಲಿರುವ ವಿವಾದದ ಸೂಕ್ತ ಪರಿಹಾರಕ್ಕೆ ಈ ಅಪರೂಪದ ಅಪರಿಚಿತ ಕಾವ್ಯದಲ್ಲಿರುವ ಖಚಿತವಾದ ಮಾಹಿತಿಗಳು ಪ್ರಮುಖವಾದ ಸಾಕ್ಷ್ಷಿಯಾಗಿವೆ. ಇದರ ಆಧಾರದಲ್ಲಿ, ಮದ್ರಾಸಿನ ನ್ಯಾಯಾಲಯ ದಲ್ಲಿರುವ ವಿವಾದವನ್ನು ಸುಲಭವಾಗಿ; ಶೀಘ್ರವಾಗಿ ಪರಿಹರಿಸಿಕೊಳ್ಳಬಹುದು. ಅದಕ್ಕೆ ಮೊದಲು ನಮ್ಮ ವಿದ್ವಾಂಸರು ಸಿರಿಭೂವಲಯವನ್ನು ಅದರಲ್ಲಿ ಅಡಕವಾಗಿರುವ ಮಾಹಿತಿಗಳ ಆಧಾರದಲ್ಲಿ ಪ್ರಾಚೀನ ಕನ್ನಡ ಅಂಕಕಾವ್ಯ ಎಂಬುದಕ್ಕೆ ತಮ್ಮ ಸಮ್ಮತಿಯ ಮುದ್ರೆ ದಾಖಲಿಸಿ ನ್ಯಾಯಾಧೀಶರನ್ನು ಒಪ್ಪಿಸಬೇಕಾದ ಅಗತ್ಯವಿದೆ!
ಸಿರಿಭೂವಲಯ ಗ್ರಂಥವು ನನ್ನೊಬ್ಬನ ಆಸಕ್ತಿಯ ವಿಚಾರವಲ್ಲ. ಇಂದಿನ ಆರುಕೋಟಿ ಕನ್ನಡಿಗರು ಮಾತ್ರವಲ್ಲ; ಇಡೀ ಜಗತ್ತಿನ ಜನತೆಗೆ ಮಹತ್ತರವಾದ ಜ್ಞಾನನೀಡುವ ಕೃತಿಯಾಗಿz ಇದು. ಇದರಲ್ಲಿ ೭೧೮ ಭಾಷೆಯ ಸಾಹಿತ್ಯವು ಅಡಕವಾಗಿದೆ! ಜಗತ್ತಿನ ೩೬೩ ಮತಧರ್ಮಗಳೂ ಸಮಾನವೆಂದು ವಿವರಿಸಿ; ಯೋಗ ಹಾಗೂ ಭೋಗವನ್ನು ಸಮನ್ವಯಗೊಳಿಸಿಕೊಂಡಿದ್ದ ಯಾಪನೀಯವೆಂಬ ಅಲ್ಪಸಂಖ್ಯಾತ ಪಂಗಡಕ್ಕೆ ಸೇರಿದವನು ಈ ಅಚ್ಚರಿಯ ಗ್ರಂಥದ ಕರ್ತೃ ಕುಮುದೇಂದು ಮುನಿ!
ಅಣುವಿಜ್ಞಾನ; ಆಕಾಶಗಮನ; ಗಣಕಯಂತ್ರಕ್ರಮ; ಗಣಿತಶಾಸ್ತ್ರ; ಜೀವವಿಜ್ಞಾನ; ಶಿಲ್ಪಶಾಸ್ತ್ರ; ಧರ್ಮಶಾಸ್ತ್ರ; ಪುರಾಣ; ಇತಿಹಾಸ; ಸಂಗೀತ; ನೃತ್ಯ ಇತ್ಯಾದಿ ಸಕಲಜ್ಞಾನಕ್ಕೆ ಸಂಬಂಧಿಸಿದಂತೆ ಜಗತ್ತಿನಲ್ಲಿ ೧೨೦೦ ವರ್ಷಗಳ ಹಿಂದೆ ನಮ್ಮಲ್ಲಿ ಪ್ರಚಾರದಲ್ಲಿದ್ದ ಮಾಹಿತಿಗಳನ್ನು ಈ ಅಚ್ಚರಿಯ ಅಂಕಕಾವ್ಯವು ತೆರೆದಿಟ್ಟಿದೆ.
ಈ ಗ್ರಂಥದ ಭಾಷೆಯ ಲಿಪಿಕ್ರಮವು ಕಠಿಣವಾದುದು. ಇಂದಿನ ಸರಳಭಾಷೆಗೆ ಹೊಂದಿಕೊಂಡಿರುವ ವಿದ್ವಾಂಸರ ಸುಲಭವಾದ ಓದಿಗೆ ಇದು ತೊಡಕಾಗಿ ಪರಿಣಮಿಸಿದೆ. ಈ ಕಾರಣದಿಂದ ನಮ್ಮ ವಿದ್ವಾಂಸರು ಇದಕ್ಕೆ ಕಬ್ಬಿಣದಕಡಲೆ ಎಂದು ಹೆಸರಿಟ್ಟು ದೂರವಿರಿಸಿದ್ದರು. ಈಗ ಈ ಅಚ್ಚರಿಯ ಅಂಕಕಾವ್ಯವನ್ನು ಸರಳವಾಗಿ ಪರಿಚಯಮಾಡಿಕೊಡುವ ಕೆಲಸವು ಯಶಸ್ವಿಯಾಗಿ ನಡೆದಿದೆ. ಆಯುರ್ವೇದ ಹಾಗೂ ಗಣಕಯಂತ್ರ ಕ್ಷೇತ್ರದವರು; ಗಣಿತಜ್ಞರು ಮತ್ತು ಇಂಜಿನಿಯರಿಂಗ್ ಕ್ಷೇತ್ರದವರು ಈ ಗ್ರಂಥದ ವಿಚಾರದಲ್ಲಿ ಆಸಕ್ತಿವಹಿಸುತ್ತಿರುವುದು ತಂಬಾ ಹೆಚ್ಚಿನ ಸಂತೋಷದ ಸಂಗತಿ!
ಭಾರತದ ಸಾಹಿತ್ಯಪರಂಪರೆಯ ಪುರಸ್ಕಾರದ ಸರಣಿಯಲ್ಲಿ ಒಂದು ಮಹೋನ್ನತವಾದ ಕೀರ್ತಿಪತಾಕೆ ಎನಿಸಿರುವ ಜ್ಞಾನಪೀಠ ಪ್ರಶಸ್ತಿಗೂ ಸಿರಿಭೂವಲಯದ ಶ್ರೀಕಂಠಯ್ಯನವರ ವಿದ್ವತ್ತು; ವಿನಯ; ಉದಾರಗುಣ ಹಾಗೂ ನಿರಪೇಕ್ಷಮನೋಭಾವಕ್ಕೂ ಒಂದು ರೀತಿಯ ನೆರವಾದ ಸಂಪರ್ಕವಿದೆ. ಸಿರಿಭೂವಲಯದ ವಿಚಾರದಲ್ಲಿ ಆಸಕ್ತರಾಗಿದ್ದ ಅಂದಿನ ಕಲ್ಕತ್ತೆಯ ಕೋಟ್ಯಾಧಿಪತಿ ಶಾಂತಿಪ್ರಸಾದ್‌ಜೈನ್ ಅವರು ಶ್ರೀಕಂಠಯ್ಯನವರನ್ನು ತಮ್ಮಲ್ಲಿಗೆ ಕರೆಸಿಕೊಂಡು; ಅವರಿಂದ ಸಿರಿಭೂವಲಯದ ಸಮರ್ಪಕವಾದ ಪರಿಚಯ ಪಡೆದು ಕೃತಾರ್ಥರಾದರು. ಈ ಅಗಾಧವಾದ ಜ್ಞಾನನಿಧಿಯನ್ನು ಸೂಕ್ತವಾಗಿ ಗೌರವಿಸುವ ದಿಶೆಯಲ್ಲಿ ನಾನು ನಿಮಗೆನು ಕೊಡಬಲ್ಲೆ ಅಪ್ಪಣೆಯಾಗಲೀ ಎಂದು ವಿನಂತಿಸಿದರು. ಇವರ ಅಪಾರ ವಿದ್ವತ್ತನ್ನು ಬಹಳವಾಗಿ ಮೆಚ್ಚಿಕೊಂಡಿದ್ದ ಜೈನ್ ಅವರು ಈ ಗ್ರಂಥದ ಸಂಶೋಧನೆಯ ವೆಚ್ಚಕ್ಕಾಗಿ ಇವರು ಕೋಟ್ಯಾಂತರ ರೂಪಾಯಿಗಳ ಆರ್ಥಿಕ ನೆರವು ಕೇಳಿದ್ದರೂ ಸಂತೋಷದಿಂದ ಕೊಡುವ ಮನೋಸ್ಥಿತಿಯಲ್ಲಿದ್ದರು. ಬಹಳನಯವಾಗಿ ಇವರ ಈ ಕೊಡುಗೆಯನ್ನು ನಿರಾಕರಿಸಿದ ಶ್ರೀಕಂಠಯ್ಯನವರು ತಮ್ಮ ನಿರಪೇಕ್ಷಾ ಮನೋಭಾವವನ್ನು ಮೆರೆದರು. ಇದು ಶಾಂತಿಪ್ರಸಾದ್ ಜೈನ್ ಅವರ ಅಂತರಂಗದಲ್ಲಿ ಅಳಿಸಲಾಗದ ಪ್ರಭಾವಬೀರಿ; ಇಂಥ ಅಭಿಮಾನಧನರಾದ ಮಹಾನ್ ಜ್ಞಾನಿಗಳನ್ನು ಸೂಕ್ತವಾಗಿ ಗೌರವಿಸುವ ಸಲುವಾಗಿ ಅಪಾರ ಧನರಾಶಿಯನ್ನು ದೇಣಿಗೆನೀಡಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಸ್ಥಾಪನೆಗೆ ನಾಂದಿಹಾಡಿದರು! ಈ ಘಟನೆಯ ಪ್ರತ್ಯಕ್ಷಸಾಕ್ಷಿಯಾಗಿದ್ದವರಿಗೆ ಮಾತ್ರವೇ ಶ್ರೀಕಂಠಯ್ಯನವರ ವ್ಯಕ್ತಿತ್ವದ ಅರಿವಾಗುವುದು ಸಾಧ್ಯ!!
ಈ ಹಿನ್ನೆಲೆಯಲ್ಲಿ ವಿಚಾರಶಾಲಿಗಳಾದ ಓದುಗರು ಸಿರಿಭೂವಲಯ ಗ್ರಂಥದ ಮುಂದಿನ ಸಂಶೋಧನೆಯ ವಿಚಾದಲ್ಲಿ ಸರ್ಕಾರವನ್ನು ಸೂಕ್ತವಾಗಿ ಒತ್ತಾಯಿಸುವಂತಾಗಲೆಂದು ಆಶಿಸುತ್ತೇನೆ. ಸಿರಿಭೂವಲಯದಲ್ಲಿ ಸುಲಭವಾಗಿ ಓದಿ ತಿಳಿಯಬಹುದಾದ ಕೆಲವು ಸಾಂಗತ್ಯ ಪದ್ಯಗಳನ್ನು ಇಲ್ಲಿ ಓದುಗರ ಅವಗಾಹನೆಗೆ ತರಲಿಚ್ಚಿಸುತ್ತೇನೆ:
* * *
ಅಷ್ಟಮಹಾಪ್ರಾತೀಹಾರ್ಯವೈಭವದಿಂದ| ಅಷ್ಟಗುಣಂಗಳೊಳ್‌ಓಂದಮ್|
ಸೃಷ್ಟಿಗೆ ಮಂಗಲಪರ್ಯಾಯದಿನಿತ್ತ| ಅಷ್ಟಮಜಿನಗೆರಗುವೆನು||೧||
ಓದಿಸಿದೆನುಕರ್ಮಾಟದಜನರಿಗೆ| ಶ್ರೀದಿವ್ಯವಾಣಿಯಕ್ರಮದೆ|
ಶ್ರೀದಯಾಧರ್ಮಸಮನ್ವಯಗಣಿತದ| ಮೋದದಕಥೆಯನಾಲಿಪುದು||೨||
ಕನ್ನಡದೊಂದೆರಳ್‌ಮೂರುನಾಲ್ಕೈದುಆರೇ| ಳೆಂಟುಒಂಬತ್ತೆಂಬ|
ಉನ್ನತವಾದಂಕಸೊನ್ನೆಯಿಂಹುಟ್ಟಿತೆಂ| ದೆನುವುದನು ಕಲಿಸಿದನು||೩||
ಅಂಕೆಯಿಂದಿರಿಕೊಳ್ಳುವವಿಜ್ಞಾನದ| ಶಂಕೆಗಳನಿಲ್ಲಿಪೇಳುವೆ|
ಶಂಕೆಗುತ್ತರವನುಮುಂದಕೆಪೇಳ್ವಾಗ| ಅಂಕಿಯಶಂಕೆಗಳೆಷ್ಟು||೪||
ಅಣುವೆಂದುಪರಮಾಣುವೆಂದುಪುದ್ಗಲವನು| ಗಣಿಸುವಾಗಿರುವಂಕವೆಷ್ಟು|
ಅಣುವಿನಗುಣವೇನುಅಣುವಿನಕ್ಷಣವೇನು| ಗಣಿತದಮರ್ಮವದೇನು||೫||
ಅಣುವನೊಡೆದುಪರಮಾಣುವಮಾಡಲು| ಕೊನೆಗೆನಿಲ್ಲುವಶಕ್ತಿಯೇನು|
ಅಣುವಿಂದಣುವಾಗಿನಿಲ್ಲುವದ್ರವ್ಯದ| ಗಣನೆಯಪೇಳುವುದೆಂತು||೬||
ತನುವನಾಕಾಶಕೆಹಾರಿಸಿನಿಲಿಸುವ| ಘನವೈಮಾನಿಕದಿವ್ಯಕಾವ್ಯ|
ಪನಸಪುಷ್ಪದಕಾವ್ಯವಿಶ್ವಂಭರಕಾವ್ಯ| ಜಿನರೂಪಿನಭದ್ರಕಾವ್ಯ||೭||
ಯವೆಯಕಾಳಿನಕ್ಷೇತ್ರದಳತೆಯೊಳಡಗಿಸಿ| ಅವರೊಳನಂತವಸಕಲಾನ್|
ಕವನವದೊಳ್‌ಸವಿಯಾಗಿಸಿಪೇಳುವ| ನವಸಿರಿಇರುವಭೂವಲಯ||೮||
ವನಿತಾಬಿಂಬಾದರದಚುಂಬನದರಸಪೀರ್| ದನದರರಸದರುಚಿಯಿಂತೇರಿದರ್|
ಶನದಪರವಶರಾನಂದಲಾವಣ್ಯz| ಯದುರಿನಭವನಾಮರರ್||೯||
ಕರುಣೆಯಧವಲವರ್ಣದಪಾದಗಳಿಹ| ಪರಮಾತ್ಮಪಾದದ್ವಯದೆ|
ಸಿರವಿಹನಾಲ್ಕಂಕವೆರಸಿಸಿಂಹದಮುಖ| ಭರತಖಂಡದಶುಭಚಿಹ್ನೆ||೧೦||
ಸಿವಪಾರ್ವತೀಶನಗಣಿತದಶ್ರೀಕಂಠ| ದವನಿಯತಾಳೆಯೋಲೆಗಳ|
ಸುವಿಶಾಲಪತ್ರದಕ್ಷರದಭೂವಲಯಕೆ| ಸವಿಸ್ತರಕಾವ್ಯಕೆನ್ನನಮಹವು||೧೧||
ನೀಲಾಂಬರದೊಳುಹೊಳೆವನಕ್ಷತ್ರ| ಮಾಲಿನ್ಯವಾಗದವರೆಗೆ|
ಶೀಲವ್ರತಂಗಳೊಳುಬಾಳ್ದುಜನರೆಲ್ಲ| ಕಾಲನಜಯಿಸಲೆತ್ನಿಸಲಿ||೧೨||
* * *
ಸಿರಿಭೂವಲಯದಲ್ಲಿ ಈ ರೀತಿಯ ಮೂಲ ಕನ್ನಡ ಸಾಂಗತ್ಯ ಪದ್ಯಗಳ ಸಂಖ್ಯೆಯು ಆರುಲಕ್ಷ! ಇವುಗಳಲ್ಲೇ ಅಕ್ಷರಕ್ಕೆ ಲಕ್ಷದಂತೆ ಬೇರೆ ಬೇರೆ ಭಾಷೆಗಳಲ್ಲಿ ಈ ಜಗತ್ತನ್ನೇ ತುಂಬಿರಿಸುವಷ್ಟು ಸಾಹಿತ್ಯದ ರಚನೆಯಾಗುತ್ತದೆ!! ವಿದೇಶಗಳ ವಿದ್ಯಾವಂತರು ಇದನ್ನು ಜಗತ್ತಿನ ಹತ್ತನೇ ಆಶ್ಚರ್ಯ ಎಂದು ಪರಿಗಣಿಸಿದ್ದಾರೆ!!! ಇಂಥ ಮಹೋನ್ನತ ಸಾಹಿತ್ಯ ಕೃತಿಯು ಇಂದಿನ ಆಧುನಿಕ ವಿಜ್ಞಾನಯುಗದಲ್ಲಿ ಪ್ರಜ್ವಲಿಸುವಂತೆ ಮಾಡುವಲ್ಲಿ ನಾಡಿನ ವಿದ್ಯಾವಂvರು ಹಾಗೂ ಆಡಳಿತಗಾgರು ಉತ್ಸಾಹದಿಂದ ಕೈಜೋಡಿಸುವಂತಾಗಲೆಂಬುದು ಈ ಬರಹದ ಉದ್ದೇಶವಾಗಿದೆ. ಓದುಗರು ಈ ದಿಸೆಯಲ್ಲಿ ಸಂಬಂಧಿಸಿದವರೆದುರು ತಮ್ಮ ಹಕ್ಕೊತ್ತಾಯವನ್ನು ಮಂಡಿಸಬೇಕಾಗಿ ವಿನಂತಿ.
ಕನ್ನಡಕುಲಕೋಟಿಯು ಚಿರಾಯುವಾಗಲೀ ಸಿರಿಭೂವಲಯದ ಅಭಿಮಾನಿಗಳ ಪರವಾಗಿ,
ಕನ್ನಡದ ಅಡಿಯಾಳು: ಸುಧಾರ್ಥಿ ಹಾಸನ, ಹಾಲುವಾಗಿಲು ಗ್ರಾಮ, ತಟ್ಟೇಕೆರೆ ಅಂಚೆ. ಹಾಸನ ಕಸಬ, ಹಾಸನ. ೫೭೩೨೦೧. ದೂರವಾಣಿ: ೯೪೪೯೯೪೬೨೮೦./೭೬೭೬೪೭೪೮೭೨.

No comments:

Post a Comment