Saturday 22 April 2017

ಸಿರಿಭೂವಲಯದ ಸ‍‍ಂಶೋಧಕರಿಗೆ ಒಂದು ಮಾರ್ಗದರ್ಶನ‌


ಸಿರಿಭೂವಲಯವನ್ನು ಕುರಿತು ಮೊದಲಿನಿಂದಲೂ ಹಲವಾರು ಗೊಂದಲದ ಮಾಹಿತಿಗಳು ಪ್ರಚಲಿತವಿವೆ. ಕುಮುದೇಂದುವಿನ ಕಾಲಕ್ಕೆ ಬಹಳ ಹಿಂದಿನಿಂದಲೂ ಕಾವ್ಯವು ಕನ್ನಡನಾಡಿನಲ್ಲಿ ಪ್ರಚಲಿತವಿದ್ದ ವಿಚಾರವಾಗಿ ಸಿರಿಭೂವಲಯದಲ್ಲೇ ಖಚಿತವಾದ ಮಾಹಿತಿ ಇದೆ!

ಭೂತಬಲಿಯ 'ಭೂವಲಯ' ಅನಂತರ 'ಕುಮುಲಬ್ಬೆ'ಯು ರಚಿಸಿ ರಕ್ಷಿಸಿದ್ದ ಸಿರಿಭೂವಲಯವು ಕುಮುದೇಂದುವಿನ ಅಂಕಕಾವ್ಯ 'ಸರ್ವಭಾಷಾಮಯೀಭಾಷಾ ಸಿರಿಭೂವಲಯ' ರಚನೆಗೆ ಮೂಲ ಆಕರವಾಗಿದೆ. ಪ್ರಾಕೃತ, ಕನ್ನಡ ಹಾಗೂ ಸಂಸ್ಕೃತಭಾಷಾ ಮಿಶ್ರಣದ 'ಪದ್ಧತಿಗ್ರಂಥ' ರೂಪದಲ್ಲಿದ್ದ ಸಿರಿಭೂವಲಯದ ಮಹತ್ತರವಾದ ಮಾಹಿತಿಗಳೊಂದಿಗೆ ಅಂದಿನ ಜಗತ್ತಿನಲ್ಲಿ ಪ್ರಚಲಿತವಿದ್ದ ಎಲ್ಲಭಾಷೆಗಳ, ಎಲ್ಲವಿಚಾರಗಳ ಎಲ್ಲಕೃತಿಗಳ ಮಾಹಿತಿಗಳನ್ನೂ ಮುಂದಿನವರ 'ಪ್ರಕ್ಷಿಪ್ತಭಾಗಗಳಿಗೆ' ಅವಕಾಶವಾಗದಂತೆ ಸಂಕೇತರೂಪದಲ್ಲಿ ರಕ್ಷಿಸುವು ಕುಮುದೇಂದುಮುನಿಯ ಮುಖ್ಯ ಉದ್ದೇಶ.

ಸರ್ವಶಾಸ್ತ್ರಮಯೀ; ಸರ್ವಜ್ಞಾನಮಯೀ ಹಾಗೂ ಸರ್ವಭಾಷಾಮಯಿಯಾದ 'ಸುವಿಶಾಲಪತ್ರ ದಕ್ಷರಭೂವಲಯ'ವು ಕುಮುದೇಂದುವಿನಿಂದಲೇ ರಚಿತವಾಗಿದ್ದು, ಕೆಲವು ಮೇಧಾವಿಗಳು ಅಕ್ಷರಲಿಪಿಯ ಸಿರಿಭೂವಲಯದ ಅವತರಣಿಕೆಯಲ್ಲಿ 'ಪ್ರಕ್ಷಿಪ್ತಭಾಗ'ಗಳನ್ನು ಸೇರಿಸುವ ಸಾಧ್ಯತೆಯನ್ನು ಗ್ರಹಿಸಿದ ಕುಮುದೇಂದುಮುನಿಯು 'ಸುವಿಶಾಲಪತ್ರದಕ್ಷರಭೂವಲಯವನ್ನು' ತನ್ನದೇ ಆದ ನವಮಾಂಕ ಪದ್ಧತಿಯ ಕನ್ನಡ ಅಂಕಿಗಳಲ್ಲಿ ಅಳವಡಿಸಿ, 16000 ಚಕ್ರಗಳ ಅಂಕಭೂವಲಯವನ್ನು ರೂಪಿಸಿರುತ್ತಾನೆ. ಅದರ ಮೂಲಪ್ರತಿಯು ಏನಾಯಿತೋ ತಿಳಿದವರಿಲ್ಲ.

ಮುಂದೆ ಮಲ್ಲಿಕಬ್ಬೆ ಎಂಬ ಸಾಧ್ವಿಯು ಇದನ್ನು ಕೋರಿಕಾಗದದಲ್ಲಿ ಪ್ರತಿಲಿಪಿಮಾಡಿಸಿ   ತನ್ನ ಗುರು ಮಾಘಣನಂದಿಗೆ ಶಾಸ್ತ್ರದಾನಮಾಡಿದ್ದಳೆಂಬ ಮಾಹಿತಿ ಪ್ರಚಲಿತವಿದೆ. ಕೋರಿಕಾಗದದ ಅಂಕಲಿಪಿಯ ಸಿರಿಭೂವಲಯವೂ ಒಂದಕ್ಕಿಂತ ಹೆಚ್ಚು ಪ್ರತಿಗಳು ತಯಾರಾಗಿದ್ದ ಬಗ್ಗೆ ಸುಳಿವಿದೆ.
ಸುವಿಶಾಲಪತ್ರದಕ್ಷರಭೂವಲಯ ಹಾಗೂ ಕುಮುದೇಂದುವು ತನ್ನ ಸಾವಿರಾರು ಶಿಷ್ಯರಿಂದ ಗಣಿತಸೂತ್ರದ ಆಧಾರದಲ್ಲಿ ನಿರೂಪಿಸಿದ 'ಅಂಕಭೂವಲಯವು' ಬಹುಪಾಲು ಒಂದೇ ಆಗಿದ್ದರೂ ಅದರಲ್ಲಿ  ಕೆಲವೆಡೆ ವ್ಯತ್ಯಾಸವಿರುವು ಸ್ಪಷ್ಟವಿದೆ.

ಇದಕ್ಕೆ ಸಂಬಂಧಿಸಿದಂತೆ ಕೆಲವು ಉದಾಹರಣೆಗಳನ್ನು ಗಮನಿಸೋಣ:  ಅಂಕಭೂವಲಯದ ಮೊದಲನೇ ಚಕ್ರವನ್ನು ಅಕ್ಷರಗಳಿಗೆ ಪರಿವರ್ತಿಸಿ ಅದನ್ನು 'ಶ್ರೇಢೀಬಂಧ'ದಲ್ಲಿ ಓದುವ ಪ್ರಯತ್ನ ನಡೆಸಿದಾಗ, ಅಲ್ಲಿ ದೊರೆಯುವ ಅಕ್ಷರಗಳ ಸರಪಣಿಗೂ; 1953ರಲ್ಲಿ ಮುದ್ರಿತವಾಗಿರುವ 'ಅಕ್ಷರ ಅವತರಣಿಕೆ'ಗೂ ಕೆಲವೊಂದು ವ್ಯತ್ಯಾಸಗಳು ಕಾಣಬರುತ್ತವೆ. ಅಂಕಚಕ್ರದ ಅಂಕಿಗಳನ್ನು ಅಕ್ಷರಕ್ಕೆ ಪರಿವರ್ತಿಸಿ, ಅದನ್ನು ಶ್ರೇಢಿಬಂಧದಲ್ಲಿ ಜೋಡಿಸಿಕೊಂಡು ಓದಿದಾಗ, 'ಅಷ್ಟಮಹಾಪ್ರಾತೀಹಾರ್ಯ' ಎಂಬ ಮೊದಲನೇ ಪದ್ಯವು ಸರಿಯಾಗಿ ದೊರೆಯುತ್ತದೆ. ಆದರೆ ಇದೇಕ್ರಮದಲ್ಲಿ ಮುಂದುವರೆದಾಗ 'ಟವಣೆಯಕೋಲು ಪುಸ್ತಕ ಪಿಂಛಪಾತ್ರೆ..' ಎಂಬ ಎರಡನೇ ಪದ್ಯವೇ ಸರಿಯಾಗಿ ಉಗಮವಾಗುವುದಿಲ್ಲ! ಸಾಗುವ ಹಾದಿಯಲ್ಲಿ ವ್ಯಾತ್ಯಾಸವಿದೆ.

ಮೊದಲನೇ ಅಂಕಚಕ್ರದಲ್ಲಿ ಕಾವ್ಯಾರಂಭದ ಏಳು ಪದ್ಯಗಳು ಉಗಮವಾಗುತ್ತವೆ. ಏಳನೇ ಪದ್ಯದಲ್ಲಿ ಇರುವ ಅಕ್ಷರಗಳಿಗೂ 1953ರಲ್ಲಿ ಮುದ್ರಿವಾಗಿರುವ ಅಕ್ಷರ ಅವತರಣಿಕೆಗೂ ವ್ಯತ್ಯಾಸವಿದೆ. 1953 ಮುದ್ರಿತಪ್ರತಿಯಲ್ಲಿ ಏಳನೇ ಪದ್ಯದಲ್ಲಿ 'ವಿಮಲಾಂಕ ಕಾವ್ಯ ಭೂವಲಯ' ಎಂದು ಮುದ್ರಣವಾಗಿದೆ. ಆದರೆ ಅಕ್ಷರಚಕ್ರದಲ್ಲಿ 'ವಿಮಲಾಂಕ' ಸಿಗುವುದಿಲ್ಲ! 'ಸಿರಿಭೂವಲಯ ಸಿದ್ದಾಂತ ಕ್ರಮವಿಹ ಭೂವಲಯ' ಎಂದು ಸಿಗುತ್ತದೆ.  ಕೊನೆಯಲ್ಲಿ ' ಸಿರಿಭೂವಲಯ ಸಿದ್ಧಾಂತದ ಮಂಗಲ ಪಾಹುಡವು'  ಎಂಬ ಅಕ್ಷರಗಳ ಸರಪಣಿಯು ಉಳಿಯುತ್ತದೆ. ಇದು ಎಲ್ಲಿ ಸೇರಬೇಕೆಂಬುದಕ್ಕೆ ಯಾವುದೇ ವಿವರಣೆಯೂ ಇಲ್ಲ!!  ಇಂಥ ವ್ಯತ್ಯಾಸಗಳನ್ನು ಇಂದಿನ ವಿಜ್ಞಾನದ ವಿದ್ಯಾರ್ಥಿಗಳು ಒಪ್ಪುವುದಿಲ್ಲ! ಕಾರಣದಿಂದ ಅವರು ಕಾವ್ಯದ ಮಹತ್ವವನ್ನೇ ಕಡೆಗಣಿಸಿ ಸಿರಿಭೂವಲಯದ ವಿಚಾರದಲ್ಲಿ ನಿರಾಸಕ್ತರಾಗುತ್ತಾರೆ.

1953 ಅಕ್ಷರ ಅವತರಣಿಕೆಯನ್ನು ರೂಪಿಸಿದ ಕೆ. ಶ್ರೀಕಂಠಯ್ಯನವರಾಗಲೀ ಅದನ್ನು ತಾವೇ ಸಂಶೋಧಿಸಿದ್ದೆಂದು ಪ್ರಚಾರಮಾಡಿ; ಪ್ರಕಟಿಸಿದ ಯಲ್ಲಪ್ಪಶಾಸ್ತ್ರಿಯವರಾಗಲೀ ತಾವು ಅಕ್ಷರ ಅವತರಣಿಕೆಯನ್ನು 'ಸುವಿಶಾಲಪತ್ರದಕ್ಷರದ ಭೂವಲಯ ವನ್ನಾಧರಿಸಿ ನಕಲು ಮಾಡಿದ್ದೆಂಬ ಅಸಲು ಮಾಹಿತಿಯನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ! ಹೀಗಾಗಿ ಮಹೋನ್ನತ ಕಾವ್ಯದ ವಿಚಾರದಲ್ಲಿ ಹಲವಾರು ಸಂದೇಹಗಳು ತಲೆದೋರಲು ಕಾರಣವಾಯಿತು.

ಸಿರಿಭೂವಲಯದ ಸುಧಾರ್ಥಿಯು ಈಅಚ್ಚರಿಯ ಕಾವ್ಯವನ್ನು  ಕುರಿತು 2010 ರಿಂದ ಪ್ರಕಟಿಸಿರುವ ಹನ್ನೊಂದು ಸರಳ ಪರಿಚಯ ಕೃತಿಗಳು ಇವೆಲ್ಲ ಗೊಂದಲಗಳನ್ನೂ ಕ್ರಮಬದ್ಧವಾಗಿ ತಾರ್ಕಿಕವಾಗಿ ವಿಶ್ಲೇಷಿಸಿ ಖಚಿತವಾದ ಮಾಹಿತಿಗಳನ್ನು ಒದಗಿಸಿರುವುದಿದೆ. ಸಿರಿಭೂವಲಯ ಕುರಿತು ಅಂತರ್ಜಾಲ ತಾಣಗಳಲ್ಲಿ ಈಗ ಲೆಕ್ಕವಿಲ್ಲದಷ್ಟು ಮಾಹಿತಿಗಳು ಪ್ರಕಟವಾಗಿ ಅಚ್ಚರಿಯ ಕೃತಿಯನ್ನು ಕುರಿತಂತೆ ಹೊಸ ನಿಗೂಢತೆ ಪ್ರಾರಂಭವಾಗಿದೆ!

ಅಚ್ಚರಿಯಕೃತಿಯ ಪರಿಚಯ ಕೃತಿಗಳ ಅಂತರ್ಸಾಹಿತ್ಯದಲ್ಲಿ ಅಡಕವಾಗಿರುವ ಇನ್ನೂ ಹೆಚ್ಚಿನ ವಿಶೇಷ ಮಾಹಿತಿಗಳನ್ನು ಕ್ರಮಬದ್ಧವಾಗಿ ವಿಂಗಡಿಸಿ ವಿಶ್ಲೇಷಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿ; ಕಾವ್ಯದ ಮಹತ್ವವನ್ನು ಜಗತ್ತಿಗೆ ಪ್ರಸ್ತುತಪಡಿಸುವ ಹಂಬಲವು  ಕೆಲವರಲ್ಲಿದೆ.

'ಅಂಕಚಕ್ರಗಳನ್ನು ಕಂಪ್ಯೂಟರಿಗೆ ಅಳವಡಿಸಿ, ಅದರಿಂದ ಜಗತ್ತಿಗೆ ಕಾವ್ಯದ ವಿಶ್ವರೂಪದರ್ಶನ ಮಾಡಿಸುವೆವು' ಎಂಬ ಅಪ್ರಾಮಾಣಿಕ ಯೋಜನೆಯು ಹಲವರದು ಕುಮುದೇಂದುವಿನ ಕಾಲದಿಂದಲೂ ಅಕ್ಷರಭೂವಲಯ ಹಾಗೂ ಅಂಕಭೂವಲಯ ಪ್ರಚಲಿತವಿದ್ದುದು ಕಾವ್ಯದಲ್ಲೇ ಖಚಿತವಾಗಿದೆ! ಕಾರಣದಿಂದಾಗಿ ಈಗ ಅಂಕಚಕ್ರವನ್ನು ಕಂಪ್ಯೂಟರಿಗೆ ಅಳವಡಿಸಿ; ಅವನ್ನು ಅಕ್ಷರಕ್ಕೆ ಪರಿವತರ್ಿಸಿ; ಅದರಿಂದ ಕ್ರಮಬದ್ಧವಾದ ಸಾಂಗತ್ಯಪದ್ಯಗಳನ್ನು ರೂಪಿಸಿ; ಅಂತಸರ್ಾಹಿತ್ಯವನ್ನು ತೆಗೆಯುವೆವೆಂಬುದು ಕನಸಿಮಾತು!!

1953ಕ್ಕೆ ಮೊದಲು ಕಾವ್ಯವನ್ನು ಕುರಿತು ನಡೆದ ಸಂಶೋಧನೆಯೇ 'ಅರೆಸತ್ಯ' ಎಂಬುದು ಸಾಬೀತಾಗಿದೆ! ಈಗ ಆಗುವುದೂ ಅದೇ!!! 1953ರಲ್ಲಿಪ್ರಕಟವಾದ ಈ ಕಾವ್ಯದ 'ಅಕ್ಷರಸಂಸ್ಕರಣ'ವು  ಸಂಪೂರ್ಣವಾಗಿ 'ಸುವಿಶಾಲಪತ್ರದಕ್ಷರದಭೂವಲಯ' ಪ್ರತಿಯನ್ನು ಆಧರಿಸಿದ್ದು ಎಂಬುದು ಈಗ ಖಚಿತವಾಗಿದೆ!

ಅಕ್ಷರಭೂವಲಯದ ತಾಳೆಯೋಲೆಗಳ ಮೂಲಪ್ರತಿ ನಿಶ್ಚಿತವಾಗಿಯೂ ಇಂದಿಗೂ ಕೆಲವರಲ್ಲಿ ಸುರಕ್ಷಿತವಿರುವ ಸಂಗತಿಯನ್ನು ಸಂಶಯಾತೀತವಾಗಿ ವಿವರಿಸಲಾಗಿದೆ. ಕಾರಣದಿಂದಾಗಿ ಸಿರಿಭೂವಲಯವನ್ನು ಕಂಪ್ಯೂಟರ್ಗೆ ಅಳವಡಿಸಿ, ಅಂಕರೂಪದಿಂದ ಅಕ್ಷರರೂಪಕ್ಕೆ ಪರಿವರ್ತಿಸುವೆವೆಂದು ಯಾರೇ ಹೇಳಿದರೂ ಅದೊಂದು ಸುಳ್ಳಿನ ಕಥೆಯಾಗುತ್ತದೆ!

ಡಾಕ್ಟರೇಟ್ ಪಡೆದ ಹಲವಾರು ಮೇಧಾವಿಗಳು ಈಗ ಪ್ರಕಟವಾಗಿರುವ ಸಿರಿಭೂವಲಯದ ಪರಿಚಯಕೃತಿಗಳ ನೆರಳಿನಲ್ಲಿ ತಮ್ಮ 'ನೂತನ ಸಂಶೋಧನೆಯನ್ನು' ಅಭಿವೃದ್ಧಿ ಪಡಿಸುವ ಯೋಜನೆಗೆ ಚಾಲನೆ ನೀಡಿರುವುದಿದೆ! ಕಳೆದ 65 ವರ್ಷಗಳಿಂದ ಕತ್ತಲಕೋಣೆ ಸೇರಿದ್ದ  ಕೃತಿಯ ಸರಳ ಹಾಗೂ ಸಮರ್ಪಕವಾದ ಪರಿಚಯ ನೀಡಿ; ಕಾವ್ಯಾಂತರ್ಗತವಾದ ಹಲವಾರು ಅಮೂಲ್ಯ ಮಾಹಿತಿಗಳನ್ನು ಮೊದಲಿಗೆ  ಬೆಳಕಿಗೆತಂದ ಪರಿಚಯ ಕಾರನ ಸಾಧನೆಯನ್ನು ಸೂಕ್ತವಾಗಿ ಸ್ಮರಿಸುವ ಸೌಜನ್ಯವೂ ಹಲವರಲ್ಲಿ ಇಲ್ಲವಾಗಿರುವುದು ತೀರ ಅನುಚಿತವಾದ ವರ್ತನೆಯಾಗಿದೆ. ಗ್ರಂಥದ ಸಂಶೋಧನೆಗೆ ಸಂಬಂಧಿಸಿದಂತೆ 1953ರಲ್ಲಿ ಇಲ್ಲದ ಇತಿಹಾಸ ನಿರ್ಮಿಸುವ ಕಾರ್ಯ ಪ್ರಾರಂಭವಾಯಿತು! 2000ನೇ ಇಸವಿಯಲ್ಲಿ 'ಪುಸ್ತಕಶಕ್ತಿಯವರ' ಪ್ರವೇಶದಿಂದ ಹಿಂದಿನ ಪ್ರಯತ್ನಕ್ಕೆ ಮರುಚಾಲನೆ ದೊರೆಯಿತು! 2010ರಿಂದ ಪ್ರಕಟವಾಗಿರುವ ಸರಳ ಪರಿಚಯಕೃತಿಗಳ ಕಾರಣದಿಂದ ಅನುಚಿತ ಪ್ರಯತ್ನಕ್ಕೆ ಹಿನ್ನೆಡೆಯುಂಟಾಗಿತ್ತು!! ಈಗ ಇನ್ನೂ ಹೆಚ್ಚಿನ ವಿದ್ಯಾವಂತರು ಸಂಘಟಿತ ಪ್ರಯತ್ನ ನಡೆಸಿ, ಸಿರಿಭೂವಲಯದ ಸರಳ ಪರಿಚಯಕೃತಿಗಳನ್ನು ಮೂಲೆಗುಂಪಾಗಿಸಿ, ಪುನಃ ಇಲ್ಲದ ಇತಿಹಾಸ ನಿರೂಪಿಸುವ ಸಾಹಸಕ್ಕೆ ಕೈಹಾಕಿರುವುದು ಕನ್ನಡದ ವಿಶೇಷತೆಯಾಗಿದೆ! ಸಂಬಂಧಿಸಿದವರು ಮಹತ್ತರವಾದ ಸಾಧನೆಗಾಗಿ ನಿಜಕ್ಕೂ ಹೆಮ್ಮೆ ಪಡಬೇಕಿದೆ!!! ಅವರನ್ನು ಅಭಿನಂದಿಸೋಣ!!!

ಸುವಿಶಾಲಪ್ರದಕ್ಷರದ ಭೂವಲಯದ ಪ್ರತಿಯನ್ನು ಕೆಲವರು ತಮ್ಮ ಸಂಕುಚಿತ         ಮನೋಭಾವದ ಕಾರಣದಿಂದ ರಹಸ್ಯವಾಗಿ ಮುಚ್ಚಿರಿಸಿರುವ ವಿಚಾರದಲ್ಲಿ ಸದೇಹವಿಲ್ಲ. ಈಗ ಅದರ ನಕಲು ಪ್ರತಿಯನ್ನಾದರೂ ಹೊರತಂದು ಮುಂದಿನ ಸಂಶೋಧನೆನಡೆಸಿ, ಅಲ್ಲಿನ ಅಂತರ್ಸಾಹಿತ್ಯವನ್ನು ಸಂಗ್ರಹಿಸುವ ಮೂಲಕ ಅವುಗಳ ಸರಳ ಪರಿಚಯ ಮಾಡಿಕೊಡಬೇಕಿದೆ.

ಅದೃಷ್ಟವಶದಿಂದ 'ಸುವಿಶಾಲಪತ್ರದಕ್ಷರದ ಭೂವಲಯ'ವೇ ಸಮಗ್ರವಾಗಿ ದೊರೆತರೂ, ಅದು ಚಕ್ರಬಂಧರೂಪದಲ್ಲಿ ಸಂಕೇತವಾಗಿಯೇ ಇರುತ್ತದೆ! ಅದರೊಳಗೆ ನಮಗೆ ಅರ್ಥವಾಗುವ ಸಾಹಿತ್ಯವನ್ನು ಗುರುತಿಸಬೇಕಾದರೆ; ಮೊದಲನೇ ಹಂತವಾಗಿ ಸ್ತಂಬಕಾವ್ಯ ಹಾಗೂ ಅಶ್ವಗತಿಯ ಅಂತರ್ಸಾಹಿತ್ಯವನ್ನು ಪ್ರತ್ಯೇಕಿಸಬೇಕು. ಪ್ರಥಮಖಂಡದ 59 ಅಧ್ಯಾಯಗಳಿಗೆ ಸಂಬಂಧಿಸಿದಂತೆ ಕಾರ್ಯವನ್ನು ಸಿರಿಭೂವಲಯದಸುಧಾಥರ್ಿಯು ತನ್ನ ಇತಿಮಿತಿಯಲ್ಲಿ ಸಾಧ್ಯವಿರುವ ಮಟ್ಟಿಗೆ ಮಾಡಿದ್ದಾಗಿದೆ. ಹಂತದಲ್ಲಿ ಸಾಕಷ್ಟು ಅಂತರ್ಸಾಹಿತ್ಯವು ಪ್ರಕಟವಾಗಿವೆ.

ಅಶ್ವಗತಿಯಲ್ಲಿ ಅಂತರ್ಸಾಹಿತ್ಯವನ್ನು ಪ್ರತ್ಯೇಕಿಸಿ ಸಂಗ್ರಹಿಸುವಾಗ, ಪೂರ್ಣಪದ್ಯಗಳು ಹಾಗೂ ಪಾದಪದ್ಯಗಳ ಅಂತರ್ಸಾಹಿತ್ಯವು ಬೇರೆ ಬೇರೆಯಾಗಿರುವುದನ್ನು ಗಮನಿಸಿ, ಅವುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಶ್ಲೇಷಿಸಬೇಕು.  

ಪಾದಪದ್ಯಗಳ ಮೊದಲನೇ ಅಕ್ಷರದಲ್ಲಿ ಮೇಲಿನಿಂದ ಕೆಳಕ್ಕೆ ಅಥವಾ ಕೆಳಗಿನಿಂದ ಮೇಲಕ್ಕೆ ಸರ್ಪಗತಿಯಲ್ಲಿ  ಸಾಗಿದಾಗ ದೊರೆಯುವ ಅಂತರ್ಸಾಹಿತ್ಯವನ್ನು ಕ್ರಮಬದ್ಧವಾಗಿ ವಿಂಗಡಿಸಿ, ಪ್ರತೇಕವಾಗಿ ಬರೆದುಕೊಂಡು ವಿಶ್ಲೇಷಿಸಬೇಕು.

ಮೂಲಕೃತಿಯ ಪಾದಪದ್ಯದಲ್ಲಿ ಸ್ತಂಬಕಾವ್ಯ ದೊರೆಯುವ ವಿಚಾರವಾಗಿ ಪರೀಕ್ಷಿಸಿ ಪ್ರಯತ್ನಿಸಬೇಕು.  ಅಂತರ್ಸಾಹಿತ್ಯವನ್ನು ಪ್ರತ್ಯೇಕಿಸಿದಾಗ, ಅದು ಚತ್ತಾಣವೋ   (ನಾಲ್ಕುಸಾಲಿನ ಪದ್ಯರೂಪ) ಅಥವಾ ಬೆದಂಡೆಯೋ (ಗದ್ಯರೂಪ) ಎಂಬುದನ್ನು ಗಮನಿಸಬೇಕು.

ಇವುಗಳ ಆಧಾರದಲ್ಲಿ -

1) ಮೊದಲಿಗೆ ಅಶ್ವಗತಿಯ ಅಂತರ್ಸಾಹಿತ್ಯವನ್ನು ಕ್ರಮಬದ್ಧವಾಗಿ ನಾಲ್ಕು ಪಾದಗಳಾಗಿ ವಿಂಗಡಿಸಿಕೊಳ್ಳಬೇಕು. ಅನಂತರ ಅದರಲ್ಲಿ ಪುನಃ ಅಶ್ವಗತಿ ಹಾಗೂ ಸ್ತಂಬಕಾವ್ಯರೂಪದಲ್ಲಿ ಬೇರೊಂದು ಅಂತರ್ಸಾಹಿತ್ಯ ದೊರೆಯುವುದನ್ನು ಪರೀಕ್ಷಿಸಬೇಕು. ಅರ್ಥಪೂರ್ಣವಾಗಿ ಅಂತರ್ಸಾಹಿತ್ಯ ದೊರೆತಲ್ಲಿ ಅವನ್ನು ಅಧ್ಯಾಯ; ಪಾದಸಂಖ್ಯೆ; ಅಕ್ಷರಸಂಖ್ಯೆ ಇತ್ಯಾದಿ ವಿಳಾಸ ಸಹಿತವಾಗಿ ಪ್ರತ್ಯೇಕವಾಗಿ ಸಂಗ್ರಹಿಸಿ ವಿಶ್ಲೇಷಿಸಿ ಪರಿಚಯಿಸಬೇಕು. ( ರೀತಿಯಲ್ಲಿ ಪರೀಕ್ಷಿಸಿ,   ಸಮರ್ಪಕವಾದ ಫಲಿತಾಂಶ ದೊರೆಯುವ ಉದಾಹರಣೆಯನ್ನು ಪ್ರತ್ಯಕ್ಷವಾಗಿ ಪ್ರಮಾಣೀಕರಿಸಿದ್ದಾಗಿದೆ)

2)
() 1ನೇ ಅಧ್ಯಾಯದಿಂದ 59ನೇ ಅಧ್ಯಾಯದವರೆವಿಗೆ ಪ್ರವಹಿಸಿರುವ ಸ್ತಂಬಕಾವ್ಯವನ್ನು ಅವುಗಳಭಾಷಾನುಸಾರವಾಗಿ ಪ್ರತ್ಯೇಕವಾಗಿ ಒಂದೆಡೆ ಸಂಗ್ರಹಿಸಬೇಕು. (ಸ್ಥಂಬಕಾವ್ಯ)

() ಒಂದಕ್ಕಿಂತ ಹೆಚ್ಚು ಅಧ್ಯಾಯಗಳಲ್ಲಿ ಒಂದೇ ಪಾದ ಹಾಗೂ ಅಕ್ಷರ ಸ್ಥಾನದಲ್ಲಿ   ಮೇಲಿನಿಂದ ಕೆಳಕ್ಕೆ ಅಥವಾ ಕೆಳಗಿನಿಂದ ಮೇಲಕ್ಕೆ ಪ್ರವಹಿಸಿರುವ ಸ್ತಂಬಕಾವ್ಯದ   ಭಾಗವನ್ನು ಸಮರ್ಪಕವಾಗಿ ಗುರುತಿಸಿ, ವಿಳಾಸ ಸಹಿತವಾಗಿ ಅವುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಶ್ಲೇಷಿಸಿ ಪರಿಚಯಿಸಬೇಕು.

(ಆಾ) ಕೆಲವು ಅಧ್ಯಾಯಗಳಲ್ಲಿ ಜೋಡಿನಾಗರಬಂಧದಲ್ಲಿ ದೊರೆಯುವ ಸ್ತಂಬಕಾವ್ಯಭಾಗವನ್ನು ವಿಳಾಸಸಹಿತ ಗುರುತಿಸಿ ಪ್ರತ್ಯೇಕವಾಗಿ ಸಂಗ್ರಹಿಸಿ ವಿಶ್ಲೇಷಿಸಿ ವಿವರಿಸಬೇಕು. ಅಂದರೆ; ಯಾವುದೇ ಒಂದು ಅಧ್ಯಾಯದ ಯಾವುದೇ ಪಾದದಲ್ಲಿ ಪ್ರಾರಂಭದಲ್ಲಿ ಅಥವಾ ಮಧ್ಯದಲ್ಲಿ ಅಥವಾ   ಕೊನೆಯಲ್ಲಿ ಹಲವಾರು ಅಕ್ಷರಗಳು ಮೇಲಿನಿಂದ ಕೆಳಗಿಳಿದು ಬಲಬದಿಯ ಅಕ್ಷರದಿಂದ ಮೇಲೆಸಾಗಿ, ಪುನಃ ಬಲಬದಿಯ ಅಕ್ಷರದಿಂದ ಕೆಳಗೆಸಾಗುವ ಕ್ರಮವಿರುತ್ತದೆ. ಅವುಗಳನ್ನು ಕ್ರಮಬದ್ಧವಾಗಿ ಪ್ರತ್ಯೇಕಿಸಿ, ವಿಶ್ಲೇಷಿಸಿ ವಿವರಿಸಬೇಕು.

ರೀತಿಯಲ್ಲಿ ದೊರೆಯುವ ಅಂತರ್ಸಾಹಿತ್ಯವನ್ನು ಸಾಧ್ಯವಿರುವ ಮಟ್ಟಿಗೆ ಮೂಲ ಪದ್ಯಗಳಂತೆಯೇ ಒಂದೇ ಸಾಲಿನಲ್ಲಿ ನಾಲ್ಕುಪಾದಗಳಾಗಿ ವಿಂಗಡಿಸಿ, ಅದರಲ್ಲಿ ಪುನಃ   ಅಶ್ವಗತಿ ಹಾಗೂ ಸ್ತಂಬಕಾವ್ಯರೂಪದಲ್ಲಿ ಬೇರೊಂದು ಭಾಷೆಯ (ಕನ್ನಡ; ಪ್ರಾಕೃತ; ಸಂಸ್ಕೃತ ಇತ್ಯಾದಿ) ಅಂತರ್ಸಾಹಿತ್ಯವು ದೊರೆಯುತ್ತದೆಯೇ ಎಂಬುದನ್ನು ಪರೀಕ್ಷಿಸಿ, ಅದನ್ನು ಪ್ರ್ರತ್ಯೇಕಿಸಿ, ವಿಶ್ಲೇಷಿಸಿ, ವಿವರಿಸಬೇಕು.

ಈ ರೀತಿಯ ವಿಶ್ಲೇಷಣೆ ಹಾಗೂ ವಿವರಣೆಯನ್ನು ನೀಡುವ ಕಾರ್ಯ ನಿರ್ವಹಿಸುವವರಿಗೆ       ಕನ್ನಡದೊಂದಿಗೆ ಬೇರೊಂದು ಅಥವಾ ಹಲವಾರು ಭಾಷೆಗಳ ಪರಿಚಯದೊಂದಿಗೆ ಪ್ರಾಚೀನವಾದ ಧರ್ಮಜ್ಞಾನ, ವಿಜ್ಞಾನ,  ಸಾಹಿತ್ಯ, ಸಂಗೀತ, ನೃತ್ಯಾದಿ ನಾನಾರೀತಿಯ ವಿಚಾರಗಳ ಆಳವಾದ    ಜ್ಞಾನ ಅಥವಾ   ಸಮರ್ಪಕವಾದ ಪರಿಚಯವು ಅತ್ಯಗತ್ಯ.

"ಸಿರಿಭೂವಲಯದಲ್ಲಿ ಏನೂ ಇಲ್ಲ; ಈಗ ಸೂಚಿಸಿರುವುದೆಲ್ಲವೂ ಕೇವಲ ಭ್ರಮಾಲೋಕದಲ್ಲಿ ವಿಹರಿಸುವವರ ಸ್ವಕಪೋಲ ಕಲ್ಪಿತ ವಿವರಣೆಗಳು"  ಎಂದು ಅನುಚಿತವಾಗಿ ವಾದಿಸುವವರ ವಾದದ ಬೇಗೆಯನ್ನು ಶಮನ ಮಾಡಲು ಅಗತ್ಯವಾದುದಕ್ಕಿಂತ ಹೆಚ್ಚಿನ ಮಾಹಿತಿಗಳು ಈಗಾಗಲೇ ಬೆಳಕುಕಂಡು ಪ್ರಕಟವಾಗಿ; ಸಾಮಾನ್ಯ ಓದುಗರನ್ನು ತಲುಪಿದ್ದಾಗಿದೆ. ಇನ್ನುಳಿದಿರುವುದು ಸಿರಿಭೂವಲಯದ   ವಿಶ್ವರೂಪದರ್ಶನಮಾತ್ರ.

ಮೇಲೆ ಸೂಚಿಸಿದಂತೆ ಬಹುಮುಖ ಪ್ರತಿಭಾಶಾಲಿಗಳು ಬಹಳ ತಾಳ್ಮೆಯಿಂದ ಶ್ರಮವಹಿಸಿ ಕಾರ್ಯ ನಿರ್ವಹಿಸಿದಲ್ಲಿ ಮಾತ್ರವೇ ಸಾಮಾನ್ಯ ಓದುಗರಿಗೆ ಸರ್ವಜ್ಞಸ್ವರೂಪಿಯಾದ ಪ್ರಾಚೀನ ಕನ್ನಡಕವಿ ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯದ ವಿಶ್ವರೂಪದರ್ಶನವಾಗಲು ಸಾಧ್ಯವಾಗುತ್ತದೆ!

ಇಂಥ ಮಹೋನ್ನತವಾದ, ಅತಿಕಠಿಣವಾದ, ಲೋಕೋಪಕಾರಿಯಾದ, ಆತ್ಮಸಾಕ್ಷಾತ್ಕಾರವನ್ನು ಒದಗಿಸುವ ಕಾರ್ಯವನ್ನು ಸಾಧಿಸುವ ಛಲಹೊಂದಿದ ಮೇಧಾವಿಗಳ ಶ್ರದ್ಧಾವಂತ ಸೇವೆಯು ಈಗ ಅತ್ಯಗತ್ಯವಾಗಿದೆ.

ಇಂದಿನ ದಿನಗಳಲ್ಲಿ ಸಾಹಿತ್ಯದ ಅಧ್ಯಯನವೆಂಬುದು ಯಾರಿಗೂ ಬೇಡದ ವಿಚಾರವಾಗಿದೆ! ಸಿರಿಭೂವಲಯವು ಈಗಾಗಲೇ 'ಕಬ್ಬಿಣದ ಕಡಲೆ' ಎಂಬ ಹಣೆಪಟ್ಟಿಯನ್ನು ಹೊಂದಿರುವ ಕಾರಣದಿಂದ ಜನಸಾಮಾನ್ಯರಿಗೆ ಇದು ಸುಲಭವಾಗಿ ಅರ್ಥವಾಗುವುದಿಲ್ಲ. ವಿಶ್ವವಿದ್ಯಾಲಯದವರಿಗೆ ಇದರ ಗಾಳಿಗಂಧವೂ ತಿಳಿಯದು! ಹೀಗಿರುವಲ್ಲಿ ಜಗತ್ತಿನ ಅಚ್ಚರಿಯ ಕಾವ್ಯವು ಮುಂದಿನ ತಲೆಮಾರಿಗೆ ಉಳಿಯುವ ದಾರಿಯಾವುದು? ಕಾರಣದಿಂದಾಗಿ ಈಗ ಸಿದ್ಧವಾಗಿರುವ ಸರಳಸಾಹಿತ್ಯವನ್ನು ಶಾಲಾ ಮಕ್ಕಳಿಗಾದರೂ ಕಂಠಪಾಠದ ಸ್ಫರ್ಧೆಯ ರೂಪದಲ್ಲಿ ಕಲಿಸುವ ಕಾರ್ಯನಡೆಯಬೇಕಿದೆ.

ವ್ಯಕ್ತಿಜೀವನದ ವಿಕಸನಕ್ಕೆ ಹೆಚ್ಚಿನ ನೆರವು ನೀಡಲಾರದ ದೂರದರ್ಶದ ದಾಸಾನುದಾಸರಾಗಿರುವ ಇಂದಿನ ಮಕ್ಕಳ ಪೋಷಕರು ಮಹತ್ತರವಾದ ಜ್ಞಾನನಿಧಿಯನ್ನು ತಮ್ಮ ಮಕ್ಕಳಿಗೆ ಪರಿಚಯಿಸುವ ಮನಸು ಮಾಡಬೇಕಿದೆ. ಚಿಕ್ಕಮಕ್ಕಳೂ ಕಂಠಪಾಠ ಮಾಡಬಹುದಾದ ಸರಳ ರೂಪದಲ್ಲಿ ಕಾವ್ಯವು ಸಿದ್ಧವಾಗಿದೆ. ಕನ್ನಡ ಭಾಷೆಯ ವಿಚಾರದಲ್ಲಿ ನಿಜವಾದ ಅಭಿಮಾನ ಹೊಂದಿದ ಉದ್ಯಮಿಗಳು ದೂರದರ್ಶನದ ಮೂಲಕವೂ ಮಕ್ಕಳಿಗೆ ಮಹತ್ತರವಾದ ಜ್ಞಾನನಿಧಿಯ ಪ್ರದರ್ಶನಕ್ಕೆ ಅವಕಾಶಕಲ್ಪಿಸಿ ಅಮೂಲ್ಯವಾದ ಜಗತ್ತಿನ ಸಾಹಿತ್ಯದ ವ್ಯಾಪಕ ಪರಿಚಯಕ್ಕೆ ನೆರವಾಗಬಹುದಾಗಿದೆ.

ಇಲ್ಲವಾದಲ್ಲಿ, ಅತ್ಯಮೂಲ್ಯವಾದ ಸಾಹಿತ್ಯರತ್ನವು ಖಾಸಗಿಯವರ ಕೈಸೇರಿ, ಜನಸಾಮಾನ್ಯರ ಪಾಲಿಗೆ ಇದು ಗಗನಕುಸುಮವಾಗುವುದು ಖಚಿತ. ಅಥವಾ ಮುಂದಿನ ಶತಮಾನದವರೆವಿಗೂ ಇದು ಯಾರಿಗೂ ಅರ್ಥವಾಗದ ಕಬ್ಬಿಣದ ಕಡಲೆಯಾಗಿಯೇ ಮುಂದುವರೆಯುವುದು ಅನಿವಾರ್ಯ! ಇದು ಹೇಗಾಗಬೇಕು? ಏನಾಗಬೇಕು? ಎಂಬುದನ್ನು ವಿವೇಕಿಗಳಾದ ನೀವೇ ನಿರ್ಧರಿಸಬೇಕೆಂದು ಮೂಲಕ ನನ್ನ ಕಳಕಳಿಯ ಮನವಿ.

"ಸರ್ವಜ್ಞಸ್ವರೂಪಿಯಾದ ಕುಮುದೇಂದುಮುನಿಯು ಸಕಲರಿಗೂ ಸದ್ಭುದ್ಧಿಯನ್ನು ಕರುಣಿಸಲಿ."

-    ಸಿರಿಭೂವಲಯದ ಸುಧಾರ್ಥಿ.

*   *   *

No comments:

Post a Comment