ಪ್ರಿಯ ಓದುಗರೇ, ಈ ಲೇಖನವನ್ನು ಓದುವುದಕ್ಕೆ ಮೊದಲು ನಿಮಗೆ ಪ್ರಾಸ್ತಾವಿಕವಾಗಿ ಸಿರಿಭೂವಲಯವನ್ನು ಕುರಿತು ಒಂದೆರಡು ಮಾಹಿತಿಗಳನ್ನು ತಿಳಿಸುವ ಅವಶ್ಯಕತೆ ಇದೆ.
ಸಿರಿಭೂವಲಯಕಾವ್ಯದ ಕೆಲವೊಂದು ಭಾಗ ಹಾಗೂ ಅದರ ಸಂಶೋಧನೆಗೆ ಸಂಬಂಧಿಸಿದ ಸಂಶೋಧನೆಯ ದಾಖಲೆಗಳನ್ನು ಭಾರತಸರ್ಕಾರದ ಪ್ರಾಚ್ಯಪತ್ರಾಗಾರ ಇಲಾಖೆಯವರು ಮೈಕ್ರೋಫಿಲಂ ರೂಪದಲ್ಲಿ ಸಂರಕ್ಷಿಸದೇ ಹೋಗಿದ್ದಲ್ಲಿ; ಇಂದಿನ ವಿಜ್ಞಾನಯುಗದ ವಿದ್ಯಾವಂತ ವಿದ್ವಾಂಸರು ’ಇಂಥದೊಂದು ಅಚ್ಚರಿಯ ಕಾವ್ಯ ಇರುವುದೇ ಸುಳ್ಳು. ಇದೊಂದು ಕಟ್ಟುಕಥೆ’ ಎಂದೇ ನಿಶ್ಚಯಿಸುತ್ತಿದ್ದರು!! ಹಾಗೆ ಪ್ರಚಾರಮಾಡಿದ್ದೂ ಉಂಟು!!
ಈ ಅಚ್ಚರಿಯಕಾವ್ಯವನ್ನುಕುರಿತ ಸರಳಪರಿಚಯಕೃತಿ ’ಸರ್ವಭಾಷಾಮಯೀಭಾಷಾ ಸಿರಿಭೂವಲಯಸಾರ’ ೨೦೧೦ರಲ್ಲಿ ಪ್ರಕಟವಾದನಂತರವೂ ಇಂಥ ಪ್ರಸಿದ್ಧ ವಿದ್ವಾಂಸರು ’ಇದೆಲ್ಲವೂ ಸ್ವಕಪೋಲಕಲ್ಪಿತ ಮಾಹಿತಿಗಳು. ಕುಮುದೇಂದುಮುನಿಯಾರು? ಸಿರಿಭೂವಲಯ ಎಲ್ಲಿದೆ!? ಎಂದು ಉಡಾಫೆಯ ಮಾತುಗಳನ್ನಾಡಿದ್ದುಂಟು!!
ಈಗ ಅಂಥವರ ಬಾಯಿಯನ್ನು ಭದ್ರವಾಗಿ ಮುಚ್ಚುವಂತ ಸಾವಿರಾರು ಪುಟಗಳ ಮಾಹಿತಿಗಳು ಪ್ರಕಟವಾಗಿವೆ!!!
ಸಿರಿಭೂವಲಯದಲ್ಲಿ ಇದುವರೆವಿಗೆ ಬೆಳೆಕಿಗೆಬಂದಿರುವ ಅಂತರ್ಸಾಹಿತ್ಯಗಳಪೈಕಿ ’ಭಗವದ್ಗೀತೆ’ಯು ಹೆಚ್ಚಿನ ಗಮನ ಸೆಳೆಯುವಂಥದು.
ಇದಕ್ಕೆ ಸಂಬಂಧಿಸಿದ ಹಲವಾರು ವಿಸ್ಮಯಕಾರಿಯಾದ ಮಾಹಿತಿಗಳನ್ನು ಸಂಗ್ರಹಿಸಿ, ಒಂದು ಕಿರುಹೊತ್ತಿಗೆಯನ್ನೇ ೨೦೧೨ರಲ್ಲಿ ಪ್ರಕಟಿಸಲಾಗಿದೆ. ಆ ಕಿರುಹೊತ್ತಿಗೆ ಪ್ರತಿಗಳು ಈಗ ಉಪಲಬ್ಧವಿಲ್ಲ. ಇಂದಿನ ಓದುಗರಿಗೂ ಅದರಲ್ಲಿನ ಮಾಹಿತಿಗಳು ದೊರೆಯುವಂತಾಗಲೆಂಬ ಉದ್ದೇಶದಿಂದ ಈ ಲೇಖನವನ್ನು ಸಿದ್ಧಪಡಿಸಲಾಗಿದೆ.
೧೯೫೩ರ ಸುಮಾರಿನಲ್ಲಿ ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯದ ಪ್ರಥಮ ಅಕ್ಷರ ಅವತರಣಿಕೆಯು ಪ್ರಕಟವಾದಾಗ. ನಾಡಿನ ವಿದ್ವಾಂಸರೆಲ್ಲರೂ ಅದರ ವಿರುದ್ಧ ವಾಗ್ಯುದ್ಧಸಾರಿದ್ದರು!
ಮೈಸೂರುವಿಶ್ವವಿದ್ಯಾಲಯದ ಸುಪ್ರಸಿದ್ಧ ಇತಿಹಾಸ ಪ್ರಧ್ಯಾಪಕರಾಗಿದ್ದ ಡಾ|| ಎಸ್. ಶ್ರೀಕಂಠಶಾಸ್ತ್ರಿಗಳವರುಮಾತ್ರ. ಅತ್ಯಂತ ಕ್ಲಿಷ್ಟ ಶೈಲಿಯ ಈ ಕಾವ್ಯದ ಪ್ರಕಟಿತಭಾಗವನ್ನು ಓದಿ, ಅದನ್ನು ಕುರಿತು ಪ್ರಾಮಾಣಿಕವಾಗಿ ಮೆಚ್ಚುಗೆ ಸೂಚಿಸಿದ ಏಕೈಕ ವಿದ್ವಾಂಸರಾಗಿದ್ದಾರೆ!! ಸಿರಿಭೂವಲಯದ ಜಯಾಖ್ಯಾನಾಂತರ್ಗತ ಭಗವದ್ಗೀತೆಯನ್ನು ಕುರಿತು ಈ ಮಹನೀಯರು ಸಾಕಷ್ಟು ವಿಸ್ತಾರವಾದ ಅನಿಸಿಕೆಗಳನ್ನು ಸೂಚಿಸಿರುವುದಿದೆ.
ಸಿರಿಭೂವಲಯಕಾವ್ಯದ ಸಂಶೋಧನೆಗೆ ಸಂಬಂಧಿಸಿದಂತೆ ಇಲ್ಲದ ಇತಿಹಾಸ ಸೃಷ್ಟಿಸುವ ಕಾರ್ಯವು ೧೯೫೩ಕ್ಕೆ ಮೊದಲೇ ಒಂದುರೀತಿಯಲ್ಲಿ ವ್ಯವಸ್ಥಿತವಾಗಿ ನಡೆದಿತ್ತು! ಇದರ ಮುಂದುವರೆದಭಾಗವಾಗಿ ಬೆಂಗಳೂರಿನ ಪುಸ್ತಕಶಕ್ತಿ ಪ್ರಕಾಶನವು ನಾಡಿನ ಹಲವಾರು ಪ್ರಸಿದ್ಧ ವಿದ್ವಾಂಸರ ಪ್ರತ್ಯಕ್ಷ, ಪರೋಕ್ಷ ಬೆಂಬಲದಿಂದ ಮತ್ತೆ ಇಲ್ಲದ ಇತಿಹಾಸವನ್ನು ಪುನರ್ ರೂಪಿಸುವ ಸಾಹಸಕ್ಕೆ ಕೈಹಾಕಿ ಮುಂದುವರೆದರೂ, ’ಸಿರಿಭೂವಲಸಾರ’ದ ಖಚಿತಮಾಹಿತಿಗಳ ಕಾರಣದಿಂದಾಗಿ ಆ ಪ್ರಯತ್ನವು ವಿಫಲವಾಯಿತು. ಇದಕ್ಕೆ ಸಂಬಂಧಿಸಿದ ವಿವರಗಳನ್ನು ಒದುಗರು ’ಸಿರಿಭೂವಲಸಾರ’ದಲ್ಲಿ ನೋಡಬಹುದು.
ಇವೆಲ್ಲ ಪ್ರಸಂಗಗಳ ವಿವರಗಳನ್ನೂ ಬದಿಗಿರಿಸಿ, ಈ ಲೇಖನದಲ್ಲಿ ’ಭಗವದ್ಗೀತೆ’ ಗೆ ಸಂಬಂಧಿಸಿದಂತೆ ಗಮನವನ್ನು ಕೇಂದ್ರೀಕರಿಸಲಾಗಿದೆ.
ಈ ಭಗವದ್ಗೀತೆಗೆ ಸಂಬಂಧಿಸಿದ ಮಹಿತಿಯನ್ನು ಸರಳವಾಗಿ, ಸ್ಪಷ್ಟವಾಗಿ, ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಸ್ವಾರಸ್ಯಕರವಾಗಿ ವಿವರಿಸುವಮೂಲಕ ಸಿರಿಭೂವಲಯದ ಸಾಮರ್ಥ್ಯವನ್ನು ಓದುಗರಿಗೆ ಮನವರಿಕೆ ಮಾಡಿಕೊಡಬೇಕೆಂಬುದು ಇಲ್ಲಿನ ಪ್ರಮುಖ ಉದ್ದೇಶ.
ಸಿರಿಭೂವಲಯದಲ್ಲಿ ಜಯಾಖ್ಯಾನಾಂತರ್ಗತವಾದ ಸಂಸ್ಕೃತಭಾಷೆಯ ಭಗವದ್ಗೀತೆಯಲ್ಲಿರುವುದು ೧೬೨ ಶ್ಲೋಕಗಳು. ಕುಮುದೇಂದುವು ಸಿರಿಭೂವಲಯದಲ್ಲಿ ನೀಡಿರುವ ಪಂಚಭಾಷೆಯ ವ್ಯಾಖ್ಯಾನದಲ್ಲಿ ಕನ್ನಡಭಾಷೆಯಲ್ಲೇ ಹಲವಾರು ಸಾಂಗತ್ಯಪದ್ಯಗಳು ಉಗಮವಾಗಿವೆ! ಅವುಗಳ ಪೈಕಿ ಕೆಲವೊಂದು ಸಾಂಗತ್ಯಪದ್ಯಗಳ ಸರಳ ಪರಿಚಯವನ್ನು ಮಾತ್ರ ಇಲ್ಲಿ ನೀಡಲಾಗಿದೆ.
ಸಿರಿಭೂವಲಯದ ಈ ಭಾಗದಲ್ಲಿ ಕಾಣಬರುವ ಭಾಷಾಸೊಬಗು, ಬರಹದ ಶೈಲಿ, ನಿರೂಪಣೆಯ ಸೊಬಗು, ಸಂದರ್ಭ ಸಹಜವಾದ ಪದಗಳ ಬಳಕೆಯು ಓದುಗನ್ನು ಸೆರೆಹಿಡಿಯುವುದು ನಿಶ್ಚಯ. ಇದೆಲ್ಲವನ್ನೂ ಗಮನಿಸಿದಮೇಲಾದರೂ ಓದುಗರ ಆಂತರ್ಯದಲ್ಲಿಇಂಥ ಸರಳಸುಂದರವಾದ ಕಾವ್ಯವು ’ಕಬ್ಬಿಣದಕಡಲೆ’ ಎನಿಸಿಕೊಂಡದ್ದು ಹೇಗೆ!? ಎಂಬ ಭಾವನೆಯು ಉಗಮವಾದರೆ, ಈ ಸರಳಪರಿಚಯದ ಕಾರ್ಯ ಯಶಸ್ವಿಯಾದಂತೆ. (ಮುಂದುವರೆಯುವುದು)
-ಸಿರಿಭೂವಲಯದಸುಧಾರ್ಥಿ.
No comments:
Post a Comment