Monday, 17 February 2020

ಸಿರಿಭೂವಲಯದಲ್ಲಿ ಚಿನ್ನತಯಾರಿಸುವ ’ರಸವಿದ್ಯೆ’ ಇರುವುದು ನಿಜವೇ!!??


ಕುಮುದೇಂದುಮುನಿಯ ಸಿರಿಭೂವಲಯಕಾವ್ಯದಲ್ಲಿ ಪಾದರಸದಂಥ ಕ್ಷುದ್ರ ಲೋಹವನ್ನು ಚಿನ್ನವನ್ನಾಗಿ ಪರಿವರ್ತಿಸುವ ರಸಸಿದ್ಧಾಂತವಿದೆ ಯೆಂಬ ಆಕರ್ಷಣೀಯ ವಿಚಾರವು ೧೯೨೮ರ ಸುಮಾರಿನಿಂದಲೂ ಕನ್ನಡದ ವಿದ್ವತ್ ಲೋಕದಲ್ಲಿ ವ್ಯಾಪಿಸಿರುವ ವ್ಯಾಧಿಯಾಗಿತ್ತು!!
ಕುಮುದೇಂದು ಮುನಿಯು ತನ್ನ ಕಾವ್ಯದಲ್ಲಿ  ರಸಸಿದ್ಧಾಂತದ ವಿವರ ನೀಡಿದ್ದಾನೆ. ಅದನ್ನ ಓದಿ ತಿಳಿದುಕೊಂಡುಬಿಟ್ಟರೆ, ಮನೆಯಲ್ಲೇ ಯಥೇಚ್ಛವಾಗಿ ಚಿನ್ನತಯಾರಿಸಿಕೊಂಡು  ಶ್ರೀಮಂತರಾಗಬಹುದೆಂಬ ಭ್ರಮೆ ಅಕ್ಷರಸ್ತರಲ್ಲಿ ಹಬ್ಬಿದ್ದುಂಟು! 
 ಸಿರಿಭೂವಲಯದ ಅಂಕಚಕ್ರಗಳನ್ನು ಹೊಂದಿದ್ದ ದೊಡ್ಡಬೆಲೆ ಧರಣೇಂದ್ರಪಂಡಿತರು ಕಾಲವಶರಾದನಂತರ,  ಅವರ ಸಮೀಪಬಂಧುವಾದ ಬೆಂಗಳೂರು ನಿವಾಸಿ ಯಲ್ಲಪ್ಪಶಾಸ್ತ್ರಿಯವರ ಸುಪರ್ಧಿಗೆ ಈ ಅಂಕಚಕ್ರಗಳ ರಾಶಿಯು  ಹಸ್ತಾಂತರವಾದ ಹಿನ್ನೆಲೆಯಲ್ಲಿಯೂ ಈ ಚಿನ್ನತಯಾರಿಕೆಯ ತಂತ್ರವು’ ಪ್ರಮುಖಪಾತ್ರವಹಿಸಿತ್ತು!
 ಬೆಂಗಳೂರಿನ ಯಲ್ಲಪ್ಪಶಾಸ್ತ್ರಿಗಳ ಸ್ವಾಧೀನದಲ್ಲಿದ್ದ ಈ ಅಂಕಚಕ್ರಗಳನ್ನು  ೧೯೨೮ರ ಸುಮಾರಿನಲ್ಲಿ  ಆಕಸ್ಮಿಕವಾಗಿ ನೋಡಿ, ಅದರ ಸಂಪರ್ಕಕ್ಕೆ ಬಂದ ಕೆ. ಶ್ರೀಕಂಠಯ್ಯನವರೂ  ಖಾಸಗೀ ಪ್ರಯೋಗದ ಮೂಲಕ ದ್ರವರೂಪದ ಪಾದರಸವನ್ನು ಸಂಸ್ಕರಿಸಿ,  ಅದನ್ನು ಒಂದು ಗೋಲಿಯರೂಪಕ್ಕೆ ಪರಿವರ್ಥಿಸಿದ್ದು ಒಂದು ಚಾರಿತ್ರಿಕ ಸಂಗತಿ. ಮುಂದಿನ ಹಂತದ ಪ್ರಯೋಗವನ್ನು ನಿಲ್ಲಿಸಿ,  ಅವರು ಈ ವಿಚಾರದಲ್ಲಿ ತಟಸ್ಥರಾದುದು ಒಂದು ವಿಚಿತ್ರ ಘಟನೆ.
 ಇಂದಿಗೂ ಕೆಲವರಲ್ಲಿ ಈ ಚಿನ್ನತಯಾರಿಸುವ ಭ್ರಮೆ ಉಳಿದಿರುವುದು ನಿಜ!!  ಪ್ರಥಮ ಖಂಡದ ಮೊದಲನೇ ಅಧ್ಯಾಯದ ಮಧ್ಯಂತರದಲ್ಲೇ ಕವಿಯು ಈವಿಚಾರ ಸೂಚಿಸಿರುವುದನ್ನು ಸುಧಾರ್ಥಿಯು  ಗಮನಿಸಿರುವುದಿದೆ. ಸುಧಾರ್ಥಿಯು ಸಿರಿಭೂವಲಯದ ಅಂತರ್ಸಾಹಿತ್ಯವನ್ನು ಯಶಸ್ವಿಯಾಗಿ  ವಿಂಗಡಿಸಿ, ಕಾವ್ಯಾಂತರ್ಗತವಾದ ವಿಸ್ಮಯಕರವಾದ ಹಲವಾರು ಮಾಹಿತಿಗಳನ್ನು ಪ್ರಕಟಿಸುವಮೊದಲೇ ೨೦೦೫-೨೦೧೦ರ ಸುಮಾರಿನಲ್ಲಿ ಹಲವಾರು ಆಸಕ್ತರು ಈವಿಚಾರಕ್ಕಾಗಿ ಸುಧಾರ್ಥಿಯನ್ನು ಸಂಪರ್ಕಿಸಿ ಪರೋಕ್ಷವಾಗಿ ಈ ಬಗ್ಗೆ ವಿಚಾರಿಸಿದ್ದುಂಟು! 
ಸಿರಿಭೂವಲಯಕಾವ್ಯದ ಪ್ರಥಮಖಂಡದ ಪ್ರಾರಂಭದಲ್ಲೇ ಕುಮುದೇಂದು ಮುನಿಯು ಈ ರಸಸಿದ್ಧಾಂತದವಿಚಾರವಾಗಿ ಮಾಹಿತಿ ನೀಡಿರುವುದುಂಟು!! ಆದರೆ ಅದು  ”ಕ್ಷುದ್ರಲೋಹವನ್ನು ಚಿನ್ನವನ್ನಾಗಿ ಪರಿವರ್ತಿಸುವ ’ರಸಸಿದ್ಧಾಂತ’ವಲ್ಲ,  ಹಲವಾರು ಜನ್ಮಗಳಿಂದ ಕಿಲುಬುಗಟ್ಟಿದ ಆತ್ಮವನ್ನು ಪುಟಕ್ಕಿಟ್ಟು  ಚಿನ್ನದಂತೆ ಪರಿಶುದ್ಧಗೊಳಿಸುವ ಪರಮಪದ  ರಸಸಿದ್ಧಾಂತ ” ಎಂದು ಸುಪ್ರಸಿದ್ಧ ವಿದ್ವಾಂಸ ಸ್ವರ್ಗೀಯ ಎಸ್. ಕೆ. ರಾಮಚಂದ್ರರಾಯರು ಸೂಕ್ತವಾಗಿ ವಿವರಿಸಿರುವುದಿದೆ!!
 ಆದಾಗ್ಯೂ ಸಿರಿಭೂವಲಯದಲ್ಲಿ ಪಾದರಸವನ್ನು ಚಿನ್ನವನ್ನಾಗಿ ಪರಿವರ್ತಿಸುವ ’ರಸವಿದ್ಯೆ’ ಯನ್ನು ವಿವರಿಸಿರುವುದು ನಿಜ!  ನಾಗಾರ್ಜುನನೆಂಬ ಚಾರಿತ್ರಿಕ ವ್ಯಕ್ತಿಯು  ಬಹಳ ಸುಲಭವಾಗಿ ಈ ರಸಸಿದ್ಧಾಂತವನ್ನು ಅರಿತಿದ್ದನೆಂಬ ಮಾಹಿತಿಯನ್ನೂ ಕಾವ್ಯದಲ್ಲಿ  ಸೂಚಿಸಲಾಗಿದೆ.
 ಈ ರಸಸಿದ್ಧಾಂತದಲ್ಲಿ ಬೇಕಾಗುವ ಭೂ ಕಮಲ, ಜಲಕಮಲ, ಬೆಟ್ಟದ ಕಮಲಗಳ ವಿಚಾರ ಸೂಚಿಸಲಾಗಿದೆ. ’ಥಣ ಥಣವೆನ್ನುವ ರಸಮಣಿಯೌಷದ|ಗಣಿತವಮ್ ನಾಗಾರ್ಜುನನು| ಕ್ಷಣದೊಳಗರಿದನು ಗುರುವಿಂದಲಾತನು|ಗುಣಿಸುತಲೆಂಟುಕರ್ಮವನು||’  ಎಂದು ಸೂಚಿಸಿರುವುದಿದೆ.
ನಾಗಾರ್ಜುನನಿಗೆ ಕ್ಷಣಮಾತ್ರದಲ್ಲಿ ಈ  ಗಣಿತಾತ್ಮಕವಾದ ರಸಸಿದ್ಧಾಂತವು ವಶವಾಯಿತೆಂದಮೇಲೆ, ನಾವೂ ಪ್ರಯತ್ನಿಸಿ ಸಿದ್ಧಿಪಡೆಯಬಾರದೇಕೆ? ಎಂಬ ಆಲೋಚನೆ ಕೆಲವು ಮೇಧಾವಿಗಳ ಮನಸಿನಲ್ಲಿ ತಲೆಹಾಕುವುದು ಸಹಜ!!  ಆದರೆ, ಅದು  ಅಷ್ಟು ಸುಲಭದ ವಿದ್ಯೆಯಲ್ಲ!!!
 ದೇಹಾಂತರ್ಗತವಾದ ಆತ್ಮಕ್ಕೆ ಜನ್ಮ ಜನ್ಮಾಂತರಗಳಿಂದ ಅಂಟಿಬಂದಿರುವ ಅಷ್ಟಕರ್ಮಗಳ ಗುಣಾಕಾರವನ್ನರಿಯದೇ ; ಅವುಗಳನ್ನು ಶೂನ್ಯಗೊಳಿಸಿದಲ್ಲದೇ ಈ ರಸಸಿದ್ಧಾಂತವು ಕರಗತವಾಗಲಾರದು!  ಇದನ್ನೂ ಮೀರಿ, ಸೂಕ್ತವಾದ ಪರಿಕರಗಳೊಂದಿಗೆ ಪ್ರಯೋಗವು ಯಶಸ್ವಿಯಾದರೂ ಈ ಸಿದ್ಧಿಯ ಫಲ ದುರುಪಯೋಗವಾದಲ್ಲಿ ಸಾಧಕನು ಸರ್ವನಾಶವಾಗುವುದು ನಿಶ್ಚಯವೆಂಬ ಆಧುನಿಕ ಇತಿಹಾಸವೂ ಈ ಕಾವ್ಯಕ್ಕೆ ಸಂಬಂಧಿಸಿದ ಇದುವರೆಗಿನ ವ್ಯವಹಾರದಲ್ಲಿ ಅಡಕವಾಗಿದೆ!!
                                  - ಸಿರಿಭೂವಲಯದಸುಧಾರ್ಥಿ.

No comments:

Post a Comment