ಕುಮುದೇಂದುಮುನಿಯ ಸಿರಿಭೂವಲಯಕಾವ್ಯವನ್ನು ಅಧ್ಯಯನಮಾಡುವಾಗ ಒಂದೆಡೆಯಲ್ಲಿ, ನಂದಿಬೆಟ್ಟದ ತಪ್ಪಲಿನಲ್ಲಿ ಕಮಲಸರೋವರವಿದ್ದ ವಿಚಾರ ಬರುತ್ತದೆ. ೧೨೦೦ ವರ್ಷಗಳ ಹಿಂದಿದ್ದ ಈ ಸುಂದರ ಕಮಲಸರೋವರವನ್ನು ಈಗ ಅಲ್ಲಿಗೆ ಹೋಗಿ ಹುಡಿಕಿದರೆ ಸಿಗುವುದಾದರೂ ಎಲ್ಲಿ!!?? ಕೆಲವೇ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಜೀವಂತವಿದ್ದ ನೂರಾರು ಕೆರೆಗಳು ಇಂದು ಕಣ್ಮರೆಯಾಗಿವೆ!!!ಇನ್ನು ೧೨೦೦ ವರ್ಷಗಳ ಹಿಂದಿನ ಕಮಲಸರೋವರವು ಹೇಗೆ ಉಳಿದೀತು!!
* * *
**ತಿಳಿಕೊಳವನ್ನು ಕದಡಿ ರಾಡಿಮಾಡಿ ಮತ್ತೆ ತಿಳಿಗೊಳಿಸುವ ಕಾರ್ಯ**
’ಘರ್ಮದಬಿಸಿಗೆ ಜಲಜ ನಿರ್ಮಲ ಕೋಳದೊಳು ಕೌಶಲದಿಪ್ಪಂತೆ ಸರ್ವಸೌಖ್ಯವಮೋಘ ರಸವಸ್ತು ತ್ಯಾಗದಿಂ ದೇಹವುಕುಂದದು ದಿಶೆದಿಶೆಯೊಳಗೆಲ್ಲ| ’ ಎಂಬುದಾಗಿ ಸಿರಿಭೂವಲಯದಲ್ಲಿ ಒಂದೆಡೆ ಸೂಚಿಸಲಾಗಿದೆ.
ತಾವರೆಯ ಕೊಳದಲ್ಲಿ ನೀರಿನ ಮೇಲ್ಮೈ ಎಲೆಗಳಿಂದ ಮುಚ್ಚಿರುವ ಕಾರಣ ಆ ಕೊಳದನೀರು ತಣ್ಣಗಿದ್ದು ಕೈ ಕೊರೆಯುವಂತಿರುತ್ತದೆ. ಇಂಥ ಕೊರೆಯುವ ತಂಪಿನ ನೀರಿನಲ್ಲಿರುವ ತಾವರೆಯ ಹೂವು ತನ್ನಲ್ಲಿರುವ ಶಾಖದಿಂದಲೇ ಜಾಣತನದಿಂದ ಸೌಖ್ಯವಾಗಿರುವಂತೆ ನಮ್ಮ ಶರೀರವೂ ರುಚಿಕರವಾದ ಆಹಾರವಿಲ್ಲದೇ ಕ್ಷೇಮದಿಂದಿರಬಲ್ಲುದೆಂದು ಇಲ್ಲಿನ ಭಾವವಾಗಿದೆ.
ಸುಮ್ಮನೆ ಸದಾಕಾಲವೂ ತಿನ್ನುತ್ತಲೇ ಇರುವುದರಿಂದ ಶರೀರವು ಸ್ಥೂಲವಾಗುತ್ತದೆ. ಸ್ಥೂಲಶರೀರದಿಂದಾಗಿ ಚಟುವಟಿಕೆಯು ಕುಂಠಿತವಾಗುತ್ತದೆ. ಸೋಮಾರಿತನ ಮೈಗೂಡುತ್ತದೆ. ನಿಷ್ಕ್ರಿಯತೆಯಿಂದ ನಿರಾಸಕ್ತಿ ಬೆಳೆದು ಜೀವನ ನಾಶವಾಗುತ್ತದೆ.
ಈ ಕಾರಣದಿದಾಗಿಯೇ ನಮ್ಮ ಪೂರ್ವಿಕರು ವ್ರತ ಉಪವಾಸ ಮುಂತಾದುವುಗಳಿಂದ ಶರೀರದ ಚಟುವಟಿಕೆಯು ನಿರಂತರವಾಗಿ ಸುಸ್ಥಿಯಲ್ಲಿರುವಂತೆ ಎಚ್ಚರ ವಹಿಸುತ್ತಿದ್ದರು. ದೀರ್ಘಾಯುಗಳಾಗಿರುತ್ತಿದ್ದರು. ಈಗಿನ ಪರಿಸರ ಇದಕ್ಕೆ ವಿರುದ್ಧವಾಗಿದೆ. ನಾಲಗೆಯ ರುಚಿಯನ್ನು ತೀರಿಸುವ ದಿಸೆಯಲ್ಲಿ ಸಿಕ್ಕಿದ್ದನ್ನು ಮನಸೋಇಚ್ಛೆ ತಿಂದು ರೋಗಪೀಡಿತರಾಗಿ ಜೀವಂತ ಶವದಂತೆ ಜೀವಿಸುವುದು ಇಂದಿನ ಜೀವನಶೈಲಿಯಾಗಿದೆ!!! ಇದರ ದುಷ್ಪರಿಣಾಮವನ್ನು ಸರಿಪಡಿಸುವ ದಿಸೆಯಲ್ಲಿ ’ಡಯಟ್’ ಅನಿಯಮಿತವಾದ ವ್ಯಾಯಾಮಮಾಡುವುದು ಇತ್ಯಾದಿ ಕ್ರಮಗಳಿಗೆ ಹೋಗುವಂತಾಗುವುದು ಅನಿವಾರ್ಯವಾಗುತ್ತದೆ.
No comments:
Post a Comment