Friday, 21 February 2020

ಸಿರಿಭೂವಲಯದಲ್ಲಿ ಭವಿಷ್ಯ !!


ಜಗತ್ತಿನಲ್ಲಿ ಪ್ರತಿಯೊಂದು ಜೀವದ ಜೀವನದ ಮುಂದಿನ ಘಟನೆಗಳು ಅವುಗಳ ಪೂರ್ವಾರ್ಜಿತದ ಕರ್ಮಫಲಕ್ಕನುಗುಣವಾಗಿಯೇ ನಡೆಯುವುದೆಂಬ ಖಚಿತವಾದ ಮಾಹಿತಿಯನ್ನು ನಮ್ಮ ಶಾಸ್ತ್ರಗ್ರಂಥಗಳು ಸ್ಪಷ್ಟವಾಗಿ ಸೂಚಿಸಿರುವುದಿದೆ! ಆದರೂ ಕೆಲವರಿಗೆ ತಮ್ಮ ಜೀವಿತದ ಮುಂದಿನ ದಿನಗಳಲ್ಲಿ ಏನಾಗುವುದೆಂಬುದನ್ನು ಮುಂದಾಗಿಯೇ ತಿಳಿಯುವ ತವಕವಿರುತ್ತದೆ!!  ಇದಕ್ಕಾಗಿ ಅವರು ಜೋತಿಷಿಗಳ  ಮೊರೆಹೋಗುತ್ತಾರೆ.
ಕೆಲವು ಪ್ರಾಮಾಣಿಕ ಜೋತಿಷಿಗಳು ತಾವು ಅಭ್ಯಸಿಸಿದ ಜೋತಿಷ್ಯಾಸ್ತ್ರದ ಆಧಾರದಲ್ಲಿ ಲೆಕ್ಕಹಾಕಿ ಅಣ್ಥವರ ಜೀವನದ ಮುಂದಿನ ಆಗು ಹೋಗುಗಳವಿಚಾರವಾಗಿ ಮುನ್ಸೂಚನೆ ನೀಡುವುದಿರುತ್ತದೆ. ಇನ್ನು ಕೆಲವರು ಈ ರೀತಿಯ ಭವಿಷ್ಯ ಕೇಳುವವರನ್ನೇ ತಮ್ಮ ಜೀವನದ ಆದಾಯದ ಮೂಲವಾಗಿ ಬಳಸುಕೊಳ್ಳುವುದೂ ಉಂಟು!!
ನಿಮ್ಮ ಗ್ರಹಗತಿಗಳು ಸರಿಯಿಲ್ಲ. ನಿಮಗೆ ಮುಂದೆ ಅತಿಭಯಂಕರವಾದ ಕಂಟಕವಿದೆ. ಅದರ ನಿವಾರಣೆಗಾಗಿ ಹಲವಾರು ಪರಿಹಾರ ಕ್ರಮಗಳನ್ನು ಮಾಡಬೇಕು ಎಂದು ಭೀತಿಯ ಬಿಜ ಬಿತ್ತುತ್ತರೆ!! ಇಂಥವರ ಬುದ್ಧಿವಂತಿಕೆಯ ಬಲೆಯಲ್ಲಿ ಸಿಕ್ಕಿಬಿದ್ದ ಹಲವರು ಕೇವಲ ತಮ್ಮ ಮನಸಿನ ನೆಮ್ಮದಿಗಾಗಿ ಅಪಾರ ಹಣವನ್ನು ವೆಚ್ಚಮಾಡುತ್ತಾರೆ!!
ಭವಿಷ್ಯವನ್ನು ಬಗೆದು ಮುಂದಾಗುವುದನ್ನು ತಿಳಿಯುವುದೆಂದರೆ; ಒಂದು ರೀತಿಯಲ್ಲಿ ಪ್ರಕೃತಿಗೆ ವಿರುದ್ಧವಾಗಿ ನಡೆಯುವುದೆಂದೇ ತಿಳಿಯಬೇಕು. ಪ್ರಕೃತಿಯ ವಿರುದ್ಧವಾಗಿ ನಾವು ನಡೆದರೆ, ಅದರಿಂದ ಅಪಾಯವಾಗುವುದು ಕಟ್ಟಿಟ್ಟ ಬುತ್ತಿ!  ಈ ಕಾರಣದಿಂದಾಗಿ ’ಭವಿಷ್ಯ’ ಕೇಳುವುದರಲ್ಲಿ ಆಸಕ್ತಿ ವಹಿಸಿರುವವರು ಹೆಚ್ಚು ಎಚ್ಚರಿಕೆಯಿಂದ ವರ್ತಿಸಬೇಕಾಗುತ್ತದೆ.
ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇಮಾಹಿತಿಯನ್ನು ಕುರಿತು ಪಾಶ್ಚಾತ್ಯರಿರಲೀ, ಭಾರತೀಯರಿರಲೀ, ತಮ್ಮ ಬರಹದಲ್ಲಿ ಸೂಚಿಸಿದ್ದಾರೆಂದರೆ, ಅದು ಕೇವಲ ಸಾಂಕೇತಿಕವಾಗಿ, ಒಗಟಿನರೂಪದಲ್ಲಿರುವುದು ಸಾಮಾನ್ಯಸಂಗತಿ. ಅದನ್ನು ಯಾರಾದರೊಬ್ಬರು ಸರಳವಾಗಿ ಬಿಡಿಸಿ, ವಿವರಿಸುವ ವರೆವಿಗೆ ಅದರ ಮಾಹಿತಿ ಏನೆಂಬುದು ಜನಸಾಮಾನ್ಯರಿಗೆ ತಿಳಿಯುವುದಿಲ್ಲ!!
 ನಾಸ್ಟರ್ಡಾಮಸ್, ಸರ್ವಜ್ಞ, ಬಸವೇಶ್ವರ, ಕೈವಾರತಾತಯ್ಯ, ನಾಡಿಶಾಸ್ತ್ರ, ಫಲಜೋತಿಷ್ಯ ಮುಂತಾದುವುಗಳೆಲ್ಲವೂ  ಇದೇ ಗುಂಪಿಗೆ  ಸೇರಿದವುಗಳಾಗಿವೆ. ಕುಮುದೇಂದುವಿನ ಸಿರಿಭೂವಲಯದಲ್ಲಿಯೂ ಭವಿಷ್ಯದ ಘಟನೆಗಳಿಗೆ ಸಂಬಂಧಿಸಿದಂತೆ ಕೆಲವು ಖಚಿತವಾದ ಸೂಚನೆಗಳು ಜನಸಾಮಾನ್ಯರಿಗೂ ಅರ್ಥವಾಗುವಂತೆ ಸೂಚಿತವಾಗಿರುವುದಿದೆ!!  ಇದಕ್ಕೆ ಸಂಬಧಿಸಿದ ಒಂದೆರಡು ಘಟನೆಗಳನ್ನು ಇಲ್ಲಿ ಗಮನಿಸೋಣ:
ಎರಡು ತಲೆಗಳುಳ್ಳಪಕ್ಷಿ ಗಂಡಭೇರುಂಡವನ್ನು ಇಂದಿನವರು ಕಲ್ಪನಿಕಪಕ್ಷಿ ಎಂದು ನಿರ್ಧರಿಸಬಹುದು. ಅದರೆ, ಈ ಪಕ್ಷಿಯು ವಿಜಯನಗರ ಸಾಮ್ರಾಜ್ಯದ ಪತನಾನಂತರ  ದಕ್ಷಿಣಭಾರತದಲ್ಲಿ ತಲೆಯೆತ್ತಿದ ಮೈಸೂರುಸಂಸ್ಥಾನದ ರಾಜಲಾಂಛನವೆಂಬ ಮಾಹಿತಿಯನ್ನು ಸಿರಿಭೂವಲಯವು ಸೂಚಿಸಿರುವುದಿದೆ!!   ನೋಡಿ: ಸ್ ವಣನುಂಡುಶ್ರೀಚರ್ಯೆಯೊಳಾತ್ಮನು|ವಿವರದವನುಆಚಿಂದು| ಸವಿದುಣ್ಣುವಮುನಿಗಂಡಭೇರುಂಡಈ|ನವಚಿಹ್ನಸ್ಯಾದ್ವಾದವಪ್ಪ|| ವಶವಲ್ಲದಮನಕೋಣನಂತಿರ್ದಾಗ|ವಶಗೊಳಿಸಿದಜಿನಮುದ್ರೆ|ಹೊಸಭೂವಲಯದಿ ಲಾಂಛನವಾಗಲು| ವಶವಾಯ್ತೆಮ್ಮಯಸೊಮ್ಮು||
 ಯದುವಂಶದರಸರ ಆಡಳಿತದಲ್ಲಿ ಗಂಡಭೇರುಂಡ ಪಕ್ಷಿಯ ಚಿಹ್ನೆಯು ರಾಜ್ಯಲಾಂಛನವಾಗಿದ್ದ ಮಾಹಿತಿಯನ್ನು ಕುರಿತು ಯಾರಿಗೂ ವಿವರಿಸಬೇಕಾದ ಅಗತ್ಯವಿಲ್ಲ.
ಕ್ರಿ.ಶ. ೧೯೪೭ರಲ್ಲಿ ಸ್ವಾತಂತ್ರ್ಯ ಪಡೆದ ಭಾರತದ ಪ್ರಜಾಸರ್ಕಾರವು ಅಶೋಕಸ್ಥಂಭವನ್ನು ರಾಷ್ಟ್ರಲಾಂಛನವಾಗಿ ಆಯ್ಕೆಮಾಡಿಕೊಂಡದ್ದು ಸರಿಯಷ್ಟೇ. ಈ ಸಂಗತಿಯನ್ನು ಸಿರಿಭೂವಲಯದ ಕವಿಯು ೧೨೦೦ ವರ್ಷಗಳಹಿಂದೆಯೇ ಖಚಿತವಾಗಿ ವಿವರಣೆಯಸಹಿತ  ಭವಿಷ್ಯ ನುಡಿದಿರುವುದಿದೆ!!
 ಇದಕ್ಕಿಂತಲೂ ಖಚಿತವಾಗಿ ಸಾವಿರಾರು ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿರುವ ಉದಾಹರಣೆಯು ಇನ್ನಾವುದಿದೆ!!?? ನೋಡಿ: ”ಕರುಣೆಯಧವಳವರ್ಣದಪಾದಗಳಿಹ|ಪರಮಾತ್ಮಪಾದದ್ವಯದೆ|ಸಿರವಿಹನಾಲ್ಕಂಕವೆರಸಿದಸಿಂಹದಮುಖ| ಭರತಖಂಡದಶುಭಚಿಹ್ನೆ||”  ಭಗವಂತನ ಎರಡು ಪಾದಗಳುಳ್ಳ ನಾಲ್ಮೊಗದ ಸಿಂಹವು  ಭರತಖಂಡದ ಶುಭ ಚಿಹ್ನೆ ಎಂಬುದು ಎಲ್ಲರಿಗೂ ಸುಲಭವಾಗಿಯೇ ಅರ್ಥವಾಗುವಂತಿದೆಯಲ್ಲವೇ?
ಇಲ್ಲಿನ ವಿಶೇಷವೆಂದರೆ ನಾಲ್ಮೊಗದ ಸಿಂಹಕ್ಕೆ ಇರುವುದು ಎರಡೇಕಾಲುಗಳು!! ಸಾಮಾನ್ಯವಾಗಿ  ಸಿಂಹಕ್ಕೆ ಒಂದು ತಲೆ ಹಾಗೂ ನಾಲ್ಕು ಕಾಲುಗಳಿರುತ್ತವೆ.  ಈ ಲೆಕ್ಕದಲ್ಲಿ ನಾಲ್ಕುಮೊಗದ ಸಿಂಹಕ್ಕೆ ೧೬ ಕಾಲುಗಳಿರಬೇಕು!! ಆದರೆ ಈ ಸಿಂಹಲಾಂಚನದಲ್ಲಿ ಎರಡು ಪಾದಗಳು ಹಾಗೂ ನಾಲ್ಕುಮೊಗಗಳೆಂದು ವರ್ಣಿಸಲಾಗಿದೆ.
                                                                                                                        -ಸಿರಿಭೂವಲಯದಸುಧಾರ್ಥಿ,   

No comments:

Post a Comment