Tuesday, 26 May 2020

ಸಿರಿಭೂವಲಯದ ಸರಳಪರಿಚಯಕೃತಿಗಳ ಸಮೀಕ್ಷೆ.


***ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆ*** ಭಾಗ: ೧೨

** ಸಂಕ್ಷಿಪ್ತ ಸಿರಿಭೂವಲಯ**

ಸಿರಿಭೂವಲಯಕಾವ್ಯವನ್ನು ಕುರಿತು ಸರಳವಾಗಿ ಪರಿಚಯಿಸುವ ದಿಸೆಯಲ್ಲಿ ಹತ್ತು ಪರಿಚಯಕೃತಿಗಳನ್ನು ಪ್ರಕಟಿಸಿದ್ದಾಯಿತು. ಅವುಗಳನ್ನು ಸಾಮಾನ್ಯ ಓದುಗರು ಆಸಕ್ತಿಯಿಂದ ಓದುವರೆಂಬ ನಂಬಿಕೆಯು ಹೆಚ್ಚು ಬಲವಿಲ್ಲದ್ದು! ಹಾಗಿರುವಲ್ಲಿ ಇದನ್ನು ಬರೆದದ್ದಾದರೂ ಏಕೆ!? ಎಂಬ ಪ್ರಶ್ನೆ ಎದುರಾಯಿತು.  ವಾಸ್ತವವಾಗಿ ಈ ಕೃತಿಗಳ ರಚನೆಯ ಹಿಂದಿನ ಮುಖ್ಯ ಉದ್ದೇಶ ’ಮುಂದಿನ ತಲೆಮಾರಿಗೆ’ ಉಪಯೋಗವಾಗಲೆಂಬುದು.  ಅವರಕೈಗೆ ಇಂಥ ಹೆಚ್ಚು ಹೊರೆಯ ಪುಸ್ತಕಗಳನ್ನಿತ್ತರೆ, ಅವರು ಅವನ್ನು ಓದುವ ಸಾಧ್ಯತೆಯಿಲ್ಲ!
ಈ ಕಾರಣದಿಂದಾಗಿ ಆಸಕ್ತಿ ಇದ್ದಲ್ಲಿ, ಇಂದಿನ ಕಾಲೇಜು ವಿಧ್ಯಾರ್ಥಿಗಳೂ ಸುಲಭವಾಗಿ ಓದಿ ಜೀರ್ಣಿಸಿಕೊಳ್ಳಬಹುದಾದ ರೂಪದಲ್ಲಿ ಈ ಮಹಾನ್ ಕಾವ್ಯದ ಮಾಹಿತಿಗಳನ್ನು ಅಡಕಗೊಳಿಸಿ ರೂಪಿಸಿದ ಕಿರುಹೊತ್ತಿಗೆಯೇ ’ಸಂಕ್ಷಿಪ್ತ ಸಿರಿಭೂವಲಯ’  ಡೆಮಿ ೧/೮ ಅಳತೆಯ ಸುಮಾರು ೪೮ ಪುಟಗಳವಾಪ್ತಿಯಲ್ಲಿ ಇಲ್ಲಿನ ಮಾಹಿತಿಗಳನ್ನು ಸಂಕ್ಷಿಪ್ತಗೊಳಿಸಲಾಗಿದೆ.
”ದಿನವೆಲ್ಲ ತಿಂದನ್ನವರಾತ್ರಿಯಕಾಲದಿ|ಮನವಿಟ್ಟುಮೆಲ್ಲುವರೆತ್ತಿನಂತೆ|
ದಿನವೆಲ್ಲ ಗಳಿಸಿದಶ್ರುತದಂಕಾಕ್ಷರಗಳ|ಮನಸಿಟ್ಟುರಾತ್ರಿಯೊಳ್ ಮೆಲುವರ್||”
ಸಿರಿಭೂವಲಯ ಕಾವ್ಯದಲ್ಲಿ ಆರುಸಾವಿರ ಗಣಿತಸೂತ್ರಗಳನ್ನು ಬಳಸಿಕೊಂಡು ೬ ಸಾವಿರ ಪ್ರಶ್ನೆಗಳಿಗೆ ಉತ್ತರ ದೊರೆಯುವ ಕ್ರಮದಲ್ಲಿ  ೬ ಲಕ್ಷ ಮೂಲ ಕನ್ನಡ ಸಾಂಗತ್ಯಪದ್ಯಗಳು ದೊರೆಯುವಂತೆ ೧ ರಿಂದ ೬೪ ರ ವರೆಗಿನ ಅಂಕಿಗಳನ್ನು ಬಳಸಿಕೊಂಡು ೧೬ ಸಾವಿರ ಚಕ್ರಗಳನ್ನು ರಚಿಸಲಾಗಿದೆ!  ಈ ಅಂಕಕಾವ್ಯದ ರಚನೆಯ ಕ್ರಮವು ಬಹಳ  ಕಠಿಣವಾದುದು.
 ಯಲವಭೂರಿಸಿಯೆಂದು  ಪ್ರಖ್ಯಾತನಾಗಿದ್ದ ಕುಮುದೇಂದುಮುನಿಯು ವಾಸವಾಗಿದ್ದ ’ಯಲವ’ ಎಂಬ ಹಳ್ಳಿಯಲ್ಲಿ ಗಣಕಯಂತ್ರಕ್ರಮಕ್ಕೆ ಸಂಬಂಧಿಸಿದಂತೆ ೧೫೦೦ ಜನ ವಿದ್ಯಾರ್ಥಿಗಳಿಗೆ ತಾನು ಶಿಕ್ಷಣ ನೀಡುತ್ತಿದ್ದ ಮಹಾವಿದ್ಯಾಲಯದಲ್ಲಿ ಪ್ರತಿದಿನವೂ ಹಗಲು ವೇಳೆಯಲ್ಲಿ ಗಣಿತಸೂತ್ರಗಳನ್ನು ತಿಳಿಸಿಕೊಟ್ಟು ಅವುಗಳನ್ನು ವಿಸ್ತರಿಸಿ ತರಲು ಸೂಚಿಸುವುದು;  ವಿದ್ಯಾರ್ಥಿಗಳು ರಾತ್ರಿಯ ಸಮಯದಲ್ಲಿ ಈ ಸೂತ್ರಗಳನ್ನು ಬಿಡಿಸಿತಂದು ಗುರುವಿಗೆ ಒಪ್ಪಿಸುವುದು; ಗುರುವು ಅವುಗಳನ್ನು ಸೂಕ್ತವಾಗಿ ಪರಿಷ್ಕರಿಸಿ ಚಕ್ರಗಳಿಗೆ ಅಳವಡಿಸುವುದು- ಈ ಕ್ರಮದಲ್ಲಿ ಕಾವ್ಯವು ರಚನೆಯಾಗಿರುವ ಮಾಹಿತಿ ಇದೆ. ಈ ಮಾಹಿತಿಯನ್ನು ಸೂಚಿಸುವಲ್ಲಿ ಹಗಲುವೇಳೆಯಲ್ಲಿ ಹುಲ್ಲುಗಾವಲಿನಲ್ಲಿ ಮೇದುಬಂದ ದನಗಳು ರಾತ್ರಿಯವೇಳ ಮೆಲುಕುಹಾಕುವ ಮೂಲಕ ತಿಂದ ಆಹರವನ್ನು ಜೀರ್ಣಿಸಿಕೊಳ್ಳುವರೀತಿಯಲ್ಲಿ  ಹಗಲೆಲ್ಲ ಕೇಳಿಸಿಕೊಂಡ  ಅಂಕಾಕ್ಷರಗಳ ವಿವರಗಳನ್ನು  ರಾತ್ರಿಯವೇಳೆ ಮನಸ್ಸಿಟ್ಟು ಅರ್ಥಮಾಡಿಕೊಳ್ಳುತ್ತಿದ್ದರು ಎಂಬುದಾಗಿ ಅಂದಿನ ಮಹಾವಿದ್ಯಾಲಯದ (ಗುರುಕುಲದ)  ಶಿಕ್ಷಣಕ್ರಮವನ್ನು ಸಂಕ್ಷಿಪ್ತವಾಗಿ ಸೂಚಿಸಿದ್ದಾನೆ.
ಜಗತ್ತಿನಲ್ಲಿ ಮಾನವರ ಆರೋಗ್ಯದ ಸಂರಕ್ಷಣೆಗಾಗಿ ವೆಚ್ಚವಾಗುವ ಹಣದ ಪ್ರಮಾಣ ಅಪಾರವಾದುದು. ಹಣಸಂಪಾದನೆಯೇ ಜೀವನದ ಪ್ರಮುಖಗುರಿ ಎಂದು ಭಾವಿಸುವವರು ವೈದ್ಯಕೀಯ ವೃತ್ತಿಗೆ ಪ್ರವೇಶಿಸಿದರೆ ಹಣವಿಲ್ಲದ ರೋಗಿಯ ಗತಿಯು ಅಧೋಗತಿಯೇಸರಿ!!
ಹಣವೂ ಇಲ್ಲದೇ, ಅವಿದ್ಯಾವಂತರೂ ಆಗಿದ್ದರೆ ಅವರ ಪಾಡು ನಾಯಿಪಾಡು!! ಇದು ಇಂದಿನ ದಿನಗಳ ಸಮಸ್ಯೆಮತ್ರವಲ್ಲ; ಸಾವಿರಾರು ವರ್ಷಗಳಿಂದಲೂ ಬದಲಾಗದಿರುವ ಪರಿಸರ!!!  ವ್ಯಕ್ತಿಯ ಆಹಾರ; ವ್ಯವಹಾರಗಳನ್ನು ಅವಲಂಬಿಸಿ ದೇಹದ ಆರೋಗ್ಯದಲ್ಲಿಯೂ ಬಹಳಷ್ಟು ಬದಲಾವಣೆಗಳಾಗುತ್ತವೆ.  ಮಲೆರಿಯಾ; ಕಾಲರಾ; ಪ್ಲೇಗು; ಟೈಫಾಯಿಡ್; ಕ್ಷಯ; ಏಡ್ಸ್; ಲೈಂಗಿಕ ಸಮಸ್ಯೆಗಳು, ಎಬೋಲ, ಈಗ ಹೊಸದಾಗಿ ಪ್ರಸಿದ್ಧಿಗೆ ಬಂದಿರುವ ’ಕೊರೋನ’ ಮುಂತಾದ ರೋಗ ರುಜಿನಗಳು ಜನರನ್ನು ಕಾಡುತ್ತಲೇ ಇವೆ. ಇವುಗಳೊಂದಿಗೆ ಸಾಂಕ್ರಾಮಿಕರೋಗಗಳು, ಮಾನಸಿಕ ಒತ್ತಡದ ವ್ಯಾಧಿಗಳು( ವೈರಸ್ ಇನ್ ಫೆಕ್ಷನ್ ಹಾಗೂ ಸ್ಟ್ರಸ್ ರಿಲೇಟೆಡ್ ಡಿಸೀಸಸ್) ಜನರ ದಿಕ್ಕುಗೆಡಿಸಿ ಕಂಗಾಲುಮಾಡುತ್ತವೆ!  ಇದಕ್ಕೆಲ್ಲ ವೈದ್ಯಕೀಯ ವಿಜ್ಞಾನವೇ ಪರಿಹಾರವೆಂದು ಎಲ್ಲರೂ ವೈದ್ಯರಬಳಿಗೇ ಓಡಿಹೋಗುವುದು ಸಹಜ.
ಆರೋಗ್ಯದ ರಕ್ಷಣೆಯ ವಿಚಾರದಲ್ಲಿ ನಾವು ಏನೆಲ್ಲ ಮುಂಜಾಗ್ರತೆಯ ಕ್ರಮವನ್ನು ಅನುಸರಿಸಿದರೂ ಈ ರೋಗಗಳ ಕಾಟ ತಪ್ಪುವುದಿಲ್ಲ! ವ್ಯಕ್ತಿಯ ಆಯಸ್ಸು ತೀರಿದಬಳಿಕ ಎಷ್ಟೇ ಹಣ ವೆಚ್ಚಮಾಡಿ; ಯಾವುದೇ ವೈದ್ಯರಲ್ಲಿ ಹೋದರೂ ರೋಗಿಯು ಬದುಕುಳಿಯಲು ಸಾಧ್ಯವಿಲ್ಲ!!  ನಮ್ಮ ಪೂರ್ವಾರ್ಜಿತ ಕರ್ಮದ ಫಲವು ರೋಗದರೂಪದಲ್ಲಿ ಕಾಡುವುದು ಎಂದು ಶಾಸ್ತ್ರವಚನ.
ಬೇರೆಯವರಿಗೆ ಹಿಂಸೆಮಾಡದೇ ಜೀವಿಸುವುದು; ಗುರುಹಿರಿಯರನ್ನು ಗೌರವಿಸಿ ಅವರಿಗೆ ಆಹಾರ ನೀಡುವುದು ಇದರಿಂದಲೇ ಎಷ್ಟೋ ರೋಗಗಳು ನಾಶವಾಗುತ್ತವೆ. ಇದನ್ನೆಲ್ಲ ಮೂಢನಂಬಿಕೆಗಳು ಎಂದು ಮೂಗು ಮುರಿಯುವವರಿಗೆ  ಯಾರೂ ತಿಳುವಳಿಕೆ ನೀಡಲಾಗದು! ಪ್ರಾಮಾಣಿಕರಾದ ಕೆಲವು ವೈದ್ಯರು ಪ್ರತಿದಿನವೂ ಕ್ರಮಬದ್ಧವಾಗಿ ಸಮತೂಕದಆಹಾರವನ್ನು ಸೇವಿಸಲು ಸಲಹೆನೀಡುವುದಿದೆ.  ಹಣ್ಣು ತರಕಾರಿಯನ್ನು ತಪ್ಪದೇ ಸೇವಿಸಲು ಸಲಹೆ ನೀಡುತ್ತಾರೆ. ಈ ರೀತಿಯ ಸರಳ ಕ್ರಮಗಳೆಲ್ಲವೂ ಪ್ರಾಚೀನ ಕಾಲದಿಂದಲೇ ನಮ್ಮಲ್ಲಿ ರೂಢಿಯಲ್ಲಿದ್ದುವು!
ಅವುಗಳನ್ನು ಕುರಿತು ಕುಮುದೇಂದು ಮುನಿಯು ಸಾವಿರಾರು ಸಾಂಗತ್ಯ ಪದ್ಯಗಳನ್ನು ರೂಪಿಸಿರುವುದಿದೆ! ಅವುಗಳನ್ನಿಲ್ಲಿ ವಿವರಿಸಹೋದರೆ, ಅದೇ ಸಾವಿರಾರು ಪುಟಗಳ ಮಾಹಿತಿಯಾಗುತ್ತದೆ!! ಉದರನಿಮಿತ್ತಂ ಬಹುಕೃತವೇಶಂ ಎಂಬಂತೆ ಕೆಲವರು ಸುಲಭವಾದ ಜೀವನೋಪಯಕ್ಕಾಗಿ  ಕಾವಿವಸ್ತ್ರವನ್ನು ಧರಿಸಿ; ಜಟಾಧಾರಿಯಾಗಿ ಜನರನ್ನು ವಂಚಿಸುವುದಿದೆ! ಅನುಚಿತವಾದ ವರ್ತನೆಯನ್ನು ಬಿಡದಿರುವವನು ವಂಚನೆಯ ಜೀವನ ನಡೆಸುತ್ತಾನೆ. ಸುಳ್ಳನ್ನೇ ಸತ್ಯವೆನ್ನುತ್ತಾನೆ. ಮೋಸಮಾಡುವ ಜಾರನಂತೆ ಅವನು ಸುಳ್ಳಿನಲ್ಲಿದ್ದರೂ ಜಟೆಯನ್ನು ಧರಿಸಿ ಮೋಕ್ಷವನ್ನು ಚಿಂತಿಸುವ ಮಾಯಾವಿಯಾಗಿರುತ್ತಾನೆ ಎಂಬುದಾಗಿ ಇಂಥ ವಂಚಕರನ್ನು ಸಿರಿಭೂವಲಯದಲ್ಲಿ ವರ್ಣಿಸಿರುವುದಿದೆ!! ಅಂದರೆ, ಜನತೆಯನ್ನು ನಂಬಿಸಿ ಮೋಸಮಾಡುವ ವಂಚಕರು ೧೨೦೦ ವರ್ಷಗಳ ಹಿಂದೆಯೂ ಇದ್ದರೆಂಬ ವಿಚಾರವು ಖಚಿತವಾಗುತ್ತದೆ.
ಜಗತ್ತಿನ ಮಹಾಪ್ರಳಯವಾದಾಗ ನಮ್ಮ ಕಣ್ಣಿಗೆ ಕಾಣಿಸುವ ಪ್ರಕೃತಿಯೆಲ್ಲವೂ ಲಯವಾಗಿ ಹೋಗುತ್ತದೆ. ಮುಂದಿನ  ಹೊಸ ಸೃಷ್ಟಿಗೆ ಅಗತ್ಯವಾದ ಮೂಲವಸ್ತುಗಳೆಲ್ಲವೂ ಅಣುರೂಪವಾಗಿ  ಲೋಕಾಕಾಶದಲ್ಲಿ ರಹಸ್ಯವಾಗಿ ಅಡಗಿರುತ್ತವೆ. ಈ ಮಾಹಿತಿಗೆ ಸಂಬಂಧಿಸಿದಂತೆ ಲಲಿತಾಸಹಸ್ರನಾಮದಲ್ಲಿ ’ಕುಲಸಂಕೇತಪಾಲಿನಿ’ಎಂಬ ಹೆಸರು ಬರುತ್ತದೆ. ಇದರ ಅರ್ಥವ್ಯಾಪ್ತಿ ಬಹಳ ವಿಸ್ತಾರವಾದುದು.  ಇದರ ಶುದ್ಧ ದೇಸೀ ರೂಪಾಂತರವನ್ನು ನಾವು ಕುಮುದೇಂದುವಿನ ”ಛಲದೊಳನಂತ ಜೀವಾದಿ ದ್ರವ್ಯಗಳನು | ಕಳೆಯದೆ ಲೋಕಾಕಾಶವದು| ಬಳಿಯೊಳಸಂಖ್ಯಾತಕ್ಷೇತ್ರತ| ನ್ನೊಳಗಿರ್ದುಸಲಹುವುದೆಲ್ಲವತಾನು|| ಎಂಬ ಸಾಂಗತ್ಯ ಪದ್ಯಲ್ಲಿ ಖಚಿತವಾಗಿ ಸೂಚಿಸಿರುವುದನ್ನು ನೋಡಬಹುದಾಗಿದೆ.
’ನಮ್ಮ ಧಾರ್ಮಿಕ ಹಾಗೂ ಸಾಹಿತ್ಯಿಕ ಕ್ಷೇತ್ರಗಳಲ್ಲಿ ಬಹಳಹಿಂದಿನಿಂದಲೂ ನಂಬಿಕೊಂಡುಬಂದಿರುವ ಹಲವಾರು ವಿಚಾರಗಳನ್ನು ಬುಡಮೇಲುಮಾಡುವಂಥ ಮಾಹಿತಿಗಳು ಸಿರಿಭೂವಲಯದಲ್ಲಿ ಅಡಕವಾಗಿವೆ’ ಎಂಬ ಅಪ್ರಿಯವಾದ ಕಟುಸತ್ಯವನ್ನು ಡಾ. ಎಸ್. ಶ್ರೀಕಂಠಶಾಸ್ತ್ರಿಯವರು  ೧೯೫೬ರ ಸುಮಾರಿನಲ್ಲೇ ಸಾರ್ವತ್ರಿಕವಾಗಿ ಪ್ರಕಟಿಸಿದ್ದರೂ, ಜಿಡ್ಡುಗಟ್ಟಿದ ಹಟಮಾರಿ ಧೋರಣೆಯ ನಮ್ಮ ವಿದ್ವಾಂಸರು ಇದರತ್ತ ಗಮನವನ್ನೇ ಹರಿಸದಿರುವುದು ಒಂದು ಚರಿತ್ರಿಕ ಸತ್ಯ!!  ವಿಶ್ವವಿದ್ಯಾನಿಲಯಗಳ ಮಟ್ಟದ ವಿದ್ವಾಂಸರಂತೂ ’ಓದಲಾಗದ ಕಬ್ಬಿಣದ ಕಡಲೆ’  ಎಂಬ ಅಪಖ್ಯಾತಿಗೆಗೊಳಪಡಿಸಿ, ಸಿರಿಭೂವಲಯವನ್ನು ಸುಮರು ೬೦ ವರುಷಗಳಕಲ ಕತ್ತಲಕೋಣೆಗೆ ಸೇರಿಸಿದ್ದೂ ಒಂದು  ಚಾರಿತ್ರಿಕ ಸತ್ಯವೇಆಗಿದೆ.
ಜಗತ್ತಿನ ಸಾಹಿತ್ಯಕ್ಶೇತ್ರದಲ್ಲಿ ಅತ್ಯಂತ ಅಚ್ಚರಿಯದೆನಿಸುವ ಸಿರಿಭೂವಲಯದ ಕವಿ ಕುಮುದೇಂದುಮುನಿಯ ಅನೂಹ್ಯವಾದ ಪ್ರತಿಭೆಗೆ ಹಿಡಿದಿದ್ದ ಗ್ರಹಣವು ಈಗ ನಿಜಕ್ಕೂ  ಬಿಡುಗಡೆಯಾದಂತಿದೆ. ಸಿರಿಭೂವಲಯದ ಸರಳಪರಿಚಯಕೃತಿಗಳ ವಚನದಿಂದ ಸಾಮಾನ್ಯ ಓದುಗರೂ ಈಗ ಈ ಕವು=ಯವನ್ನು ಕುರಿತು ಆತ್ಮವಿಶ್ವಾಸದಿಂದ ಖಚಿತವಾಗಿ ಮಾತನಾಡಬಲ್ಲವರಾಗಿದ್ದಾರೆ!  ಕುಮುದೇಂದುವಿನ ಅನುಪಮವಾದ ಪ್ರತಿಭೆ ಹಾಗೂ ಅಪಾರವಾದ ಮಾನವೀಯ ಮೌಲ್ಯಗಳನ್ನು ಮೆಚ್ಚುವ  ವಿವೇಕವು  ಇಂದು ಸಾಮಾನ್ಯ ಓದುಗರಲ್ಲೂ ಉದ್ದೀಪನಗೊಂಡಿದೆ.
ತಾವು ನಂಬಿಬಂದಿರುವ ಹಲವಾರು ತತ್ವ ಸಿದ್ಧಾಂತಗಳು  ಹುಸಿಯೆಂದು ತಿಳಿದಿದ್ದರೂ, ಅದನ್ನೇ ಸಾರ್ವಜನಿಕವಾಗಿ, ಶಿಕ್ಷಣಕ್ಷೇತ್ರದಲ್ಲಿ ಸತತವಗಿ ಪ್ರಚರಮಾಡುತ್ತ, ಬೋಧಿಸುತ್ತ ಬಂದಿರುವವರಿಗೆ, ಅವು ಕುಸಿದುಬೀಳುವುದನ್ನು  ನೋಡಿ ಸಹಿಸಲಗದ ಸಂಕಟವಾಗುವುದು ಸಹಜಸಂಗತಿ. ವಿಶ್ವವಿದ್ಯಾಲಯಗಳಲ್ಲಿ  ಪ್ರಾಧ್ಯಾಪಕರು ಏನೇ ಹೇಳಿದರೂ, ಅದು ಅಸಂಬದ್ಧವೆಂದು ವಿಧ್ಯಾರ್ಥಿಗೇ ತಿಳಿದಿದ್ದಾರೂ,  ಪರೀಕ್ಷೆಯಲ್ಲಿ ಪಾಸಾಗಿ , ಪದವಿಪಡೆದು,ತಮ್ಮ ಜೀವನೋಪಾಯಕ್ಕೆ ಮಾರ್ಗ ಹುಡುಕಬೇಕಾದ ಅಸಹಾಯಕ ವಿದ್ಯಾರ್ಥಿಗಳು ಈ ರೀತಿಯ ಹುಸಿಗೋಡೆಯನ್ನು  ಒಡೆಯುವ ಪ್ರಯತ್ನಕ್ಕೆ ಕೈಹಾಕುವುದು ಅಸಂಭವ. ಈ ಕಾರಣದಿಂದಾಗಿಯೇ ಸಿರಿಭೂವಲಯದ ಸತ್ಯಸಂಗತಿಗಳು  ಬೂದಿಮುಚ್ಚಿದಕೆಂಡದಂತೆ ಒಳಗೇ ಹುದುಗಿತ್ತು. ಈಗ ಅವುಗಳ ನಿಜವಾದ ಅನಾವರಣವಾಗಿದೆ.
ಪ್ರಕೃತ ಪರಿಸರದಲ್ಲಿ  ಸಿರಿಭೂವಲಯದ ವಿಚಾರದಲ್ಲಿ ಸುಧಾರ್ಥಿಯಷ್ಟೇ  ಆಸಕ್ತಿ ವಹಿಸಿ, ವಿಚಾರಗಳನ್ನು ತಲೆಗೆ ತುಂಬಿಕೊಂಡಿರುವ ಎರಡನೇ ವ್ಯಕ್ತಿಯೆಂದರೆ, ಶ್ರೀ. ಹೇಮಂತಕುಮಾರ್ ಜಿ. ಅವರು. ಕೇವಲ ೨-೩ ಗಂಟೆಗಳ ಅವಧಿಯಲ್ಲಿ ಈ ನೂತನ ಪ್ರಯತ್ನದ ವಿಚಾರವಾಗಿ ಯೋಚಿಸಿ, ಸೂಕ್ತವಾಗಿ ’ಮೊದಲಮಾತು’ ಮೂಲಕ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದವರು ಇವರು.  ತಮ್ಮಲ್ಲಿ ಸಿರಿಭೂವಲಯದ ಮುಂದಿನ ೮ ಖಂಡಗಳ ಮೂಲಸಾಹಿತ್ಯವು ಸುರಕ್ಷಿತವಾಗಿದೆ ಎಂದು ಸೂಚಿಸುವ ತಮ್ಮ ಗುರುಗಳಾದ ಶ್ರೀ ಕೆ. ಎಸ್. ನಿತ್ಯಾನಂದರ ಸಾರಥ್ಯದಲ್ಲಿ ಸಿರಿಭೂವಲಯದ ಮುಂದಿನ ಬೆಳವಣಿಗೆಗೆ ಅಂಕುರಾರ್ಪಣಮಾಡಿರುವವರು ಇವರು. ಇದಕ್ಕೆ ಸಂಬಂಧಿಸಿದಂತೆ ಸುಧಾರ್ಥಿಯು ತನ್ನ ಅನಿಸಿಕೆಯನ್ನು ಹೊಂದಿರುವುದಿದೆ.   ಅದನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು.
ಮೊದಲಮಾತು, ಓದುಗರೊಂದಿಗೆ, ಸಿರಿಭೂವಲಯ ಗ್ರಂಥದ ಸಂಕ್ಷಿಪ್ತ ಪರಿಚಯ, ಸಿರಿಭೂವಲಯ ಗ್ರಂಥ ಕುರಿತು ಒಂದು ಖಚಿತವಾದ ಸಂಕ್ಷಿಪ್ತ ಮಾಹಿತಿ, ಸಿರಿಭೂವಲಯದ ಸಂಕ್ಷಿಪ್ತರೂಪ ಹಾಗೂ ಭಾವಾನುವಾದ, ಆಕಾಶದ ವಿಸ್ತಾರ ಹಾಗೂ ಗ್ರಹಗಳ ಚಲನೆಗೆ ಸಂಬಂಧಿಸಿದಂತೆ ಒಂದು ಮಾತು, ಸಿರಿಭೂವಲಯದಲ್ಲಿ ಅಡಕವಾಗಿರುವ ಮಾಹಿತಿಗಳಿಂದಾಗಿ ನಮ್ಮ ಧರ್ಮ ಹಾಗೂ ಸಾಹಿತ್ಯಕ್ಷೇತ್ರಗಳಲ್ಲಿ ಬುಡಮೇಲಾಗಿ ಬಿದ್ದುಹೋಗಿರುವ ಕೆಲವು ವಿಚಾರಗಳು,  ಕನ್ನಡಿಗರೆಲ್ಲರೂ ಗಮನಿಸಲೇಬೇಕಾದ ಸಂಗತಿ,  ಸಿರಿಭೂವಲಯಕುರಿತ ಒಂದು ಕಿರು ಕಥನಕಾವ್ಯ ಎಂಬ ಶೀರ್ಷಿಕೆಗಳಲ್ಲಿ ಸಂಬಂಧಿಸಿದ ಮಾಹಿತಿ ನೀಡಲಾಗಿದೆ. ಇವುಗಳ ಪೈಕಿ, ’ಸಿರಿಭೂವಲಯದ ಸಂಕ್ಷಿಪ್ತರೂಪ ಹಾಗೂ ಭಾವಾನುವಾದ’ ಎಂದ ಭಾಗವು ಯಾವುದೇ ಸ್ತರದ ಓದುಗರಿಗೂ ಹೆಚ್ಚು ಉಪಯುಕ್ತವಾಗಿದೆ.
೯ ಖಂಡಗಳ ವ್ಯಾಪ್ತಿಯಲ್ಲಿ  ಇಷ್ಟೊಂದು ವಿಸ್ತಾರವಾದ  ಮಾಹಿತಿಗಳನ್ನೊಳಗೊಂಡ ಸಿರಿಭೂವಲಯವನ್ನು ಕುಮುದೇಂದು ಮುನಿಯು ಅಮೋಘವರ್ಷನಿಗೆ ಒಂದು ಅಂತರ್ಮುಹೂರ್ತದಲ್ಲಿ (೪೭ ನಿಮಿಷಗಳ ಅವಧಿ) ವಿವರಿಸುತ್ತಿದ್ದನಂತೆ ! ಈಗ ಪ್ರಥಮಖಂಡದ ೫೯ ಅಧ್ಯಾಯಗಳಿಗೆ ಸಂಬಂಧಿಸಿದ ಸರಳಪರಿಚಯವು ಸುಮರು ೩೦೦೦ ಪುಟಗಳ ವ್ಯಾಪ್ತಿ ಮೀರಿದೆ! ಅದನ್ನು ಓದಿ ತಿಳಿಯಲು ಸುಮಾರು ೩೬೦ ದಿನಗಳ ಸಮಯವಾದರೂ ಅತ್ಯವಶ್ಯಕ! ನೇರವಾಗಿ ಸಿರಿಭೂವಲಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪರಿಚಯಕಾರನು  ಅರ್ಥಪೂರ್ಣವಾಗಿ ಸಂಗ್ರಹಿಸಿ,  ೩೦ ನಿಮಿಷಗಳ ಅವಧಿಯಲ್ಲಿ ಓದಿತಿಳಿಯುವ ಸೌಲಭ್ಯ ಕಲ್ಪಿಸಿರುವುದನ್ನು ಇಲ್ಲಿ ಕಾಣಬಹುದು.
ಸುಧಾರ್ಥಿಯ ಜೀವನದಲ್ಲಿ  ಪ್ರಮುಖವಾದ ಬದಲಾವಣೆಗೆ ಕಾರಣರಾದ ’ಸಿದ್ಧಪುರುಷ’ ಕೋಟ ವಾಸುದೇವಕಾರಂತರು ತಮ್ಮ ಬಾಲ್ಯದಿಂದಲೂ ತಮ್ಮ ಅಜ್ಜಿಯ ಮಾರ್ಗದರ್ಶನದಲ್ಲಿ ದೈವಭಕ್ತಿಯನ್ನು ಬೆಳೆಸಿಕೊಂಡವರು. ಸಾಹಿತ್ಯದಲ್ಲಿಯೂ ಅಷ್ಟೇ, ಪಾರಮಾರ್ಥಿಕಕ್ಕೆ ಅಡಚಣೆಯನ್ನುಂಟುಮಾಡುವ ಲೌಕಿಕಸಾಹಿತ್ಯವನ್ನು (ಶಿಕ್ಷಣಕ್ಕೆ ಸಂಬಂಧಿಸಿದ್ದನ್ನು ಹೊರತು ಪಡಿಸಿ) ಅವರು ಓದಿದವರೇ ಅಲ್ಲ. ಜ್ಞಾನಪೀಠ ಪ್ರಶಸ್ತಿ ಪಡೆದ ತಮ್ಮ ಕಿರಿಯ ಸಹೋದರ ಡಾ. ಕೋಟ ಶಿವರಾಮಕಾರಂತರ ಯಾವುದೇ ಒಂದು ಬರಹವನ್ನೂ ಅವರು ಓದಿದವರಲ್ಲ!!
ಅಂಥ ನೇಮ ನಿಷ್ಠೆಯ ಈ ಸಿದ್ಧ ಪುರುಷನು ಆಕಸ್ಮಿಕವಾಗಿ ಕುತೂಹಲದಿಂದ ಈ ಸುಧಾರ್ಥಿಯು ರೂಪಿಸಿದ ’ವಿಷವೃತ್ತ’ ಎಂಬ ಐತಿಹಾಸಿಕ ಕಾದಂಬರಿಯನ್ನು ಓದಿ, ತಮ್ಮ ಮೆಚ್ಚುಗೆ ಸೂಚಿಸಿದ್ದು ಒಂದು ವಿಶೇಷ! ’ದೇವರು ನಿಮಗೆ ಅಪಾರವಾದ ಮೇಧಾಶಕ್ತಿ ನೀಡಿದ್ದಾನೆ.  ಅದನ್ನು ಸದುಪಯೋಗಮಾಡಿಕೊಳ್ಳಿ’ ಎಂದು ಅವರು ಸೂಚಿನೆ ನೀಡಿದ್ದು ಈ ಸಿರಿಭೂವಲಯದ ಸರಳಪರಿಚಯಕಾರನ ಜೀವನದ ಸೌಭಾಗ್ಯ. ಅವರ ತುಂಬು ಮನಸಿನ ಆಶೀರ್ವಾದದ ಫಲದಿಂದಲೂ ಸಿರಿಭೂವಲಯಕ್ಕೆ ಸಂಬಂಧಿಸಿದ ಪರಿಚಯಕೃತಿಗಳ ಹಾಗೂ, ಅವುಗಳ ಹಿಂದಿ ಹಾಗೂ ಆಂಗ್ಲಾ ಭಾಷೆಯ ಭಾವಾನುವಾದವು ಆಯಿತು. ಇವೆಲ್ಲವುಗಳನ್ನೂ ಒಳಗೊಂಡಂತೆ  ವ್ಯಾಪಕವಾದ ಒಂದು ವಿಮರ್ಶೆ ಅಥವಾ  ’ಸಂಕ್ಷಿಪ್ತ ಸಮೀಕ್ಷೆ’ಯಾದರೂ ಆಗಬೇಕೆಂಬುದು ಈ ಪರಿಚಯಕಾರನ ಆಕಾಂಕ್ಷೆಯಾಗಿತ್ತು. ಅದು ನೆರವೇರುವ ಸಾಧ್ಯತೆಯೇ ಇರಲಿಲ್ಲ!!
 ಸಿದ್ಧಪುರುಷ ಕೋ.ವಾ. ಕಾರಂತರು ನೀಡಿದ ಆಶೀರ್ವಾದದ ಬಲದಿಂದ ಸುಧಾರ್ಥಿಯು ಈ ಕಾರ್ಯಕ್ಕಾಗಿ ಒಬ್ಬ ’ಮಾನಸಪುತ್ರನನ್ನೇ’ ನಿಯಮಿಸುವ ವರೆವಿಗೆ ಈತನಿಗೆ ದೈವದತ್ತವಾದ ಮೇಧಾಶಕ್ತಿಯು ನೆರವಾಗಿ ’ಜಮದಗ್ನಿಸುತ’ ನಿಂದ ಈ ಕಾರ್ಯವು ಸಮರ್ಪಕವಾಗಿ, ಸಂಪನ್ನವಾಯಿತು.   ಇನ್ನು ಈ ಸಿರಿಭೂವಲಯದ ವಿಚಾರವಾಗಿ ಈತನು ತನ್ನದೇ ಆದ ಯಾವುದೇ ಆಕಾಂಕ್ಷೆಯನ್ನೂ ಹೊಂದಿಲ್ಲ. ಯಾವಕ್ಷಣದಲ್ಲಾದರೂ ಈತ ತನ್ನ ಇಹಜೀವನದ ಸಂಬಂಧದಿಂದ ಬಿಡುಗಡೆಹೊಂದಲು ಸಿದ್ಧವಾಗಿದ್ದಾನೆ.
 ’ಸಾಯುಜ್ಯಮೋಕ್ಷ’ ಎಂಬ ವೈದಿಕರ ನಿಲುವು ಅಥವಾ ’ನಿರ್ಜರೆಮೋಕ್ಷ’ ಎಂಬ ಕುಮುದೇಂದುಮುನಿಯ ಮಾರ್ಗದರ್ಶನ ಈತನಿಗೆ ವೇದ್ಯವಾಗಿದೆ. ’ಮೋಕ್ಷ’ವೆಂಬುದು ಸತ್ತಮೇಲೆ ಅನುಭವಿಸುವ ಸ್ಥಿತಿಯಲ್ಲ,  ಅದು ಬದುಕಿರುವಾಗಲೇ ಪ್ರಯತ್ನ ಪೂರ್ವಕವಾಗಿ ಸಾಧಿಸಿ, ಅನುಭವಿಸಬೇಕಾದ  ಸ್ಥಿತಿ’ ಎಂಬುದನ್ನು ಈತ ಅನುಭವಿಸಿದ್ದಾಗಿದೆ! ಹೃದಯಾಕಾಶ ಹಾಗೂ ಬುದ್ಧಿಸಾಗರದಲ್ಲಿ ಯಾವೂದೇ ರೀತಿಯ ಸಂಚಲನೆಗೂ ಅವಕಾಶವಿರದಂತೆ ಅವನ್ನು ನಿಸ್ತರಂಗಗೊಳಿಸುವಿಕೆಯೇ  ಶಾಶ್ವತವಾದ ’ಮುಕ್ತಿ’ ಎಂಬುದನ್ನು ಈತ ಅರ್ಥಮಾಡಿಕೊಂಡು, ಅದನ್ನು ಸಾಧ್ಯವಿರುವಷ್ಟು ಅನುಭವಿಸುವುದು ಈತನಿಗೆ ಸಾಧವಾಗಿದೆ.
ಇಂಥ ಅಪರೂಪವಾದ ಅನುಭವ ಪಡೆಯಲು ಕಾರಣವಾದದ್ದು ಕುಮುದೇಂದುಮುನಿಯ ಸಿರಿಭೂವಲಯದ ದೀರ್ಘಾವಧಿಯ ಅಧ್ಯಯನದಿಂದಾಗಿ. ಇಂಥವೆಲ್ಲ ಮಾಹಿತಿಗಳನ್ನೂ ಈತ ತನ್ನ ಮಾನಸಪುತ್ರನಿಗೆ ವಿವರಿಸಿದ್ದು, ಅವು ಇಲ್ಲಿ ಸಮರ್ಪಕವಾಗಿ ಸಂಗ್ರಹವಾಗಿರುವುದು ಸಂತಸದ ವಿಚಾರ. ಈ ವ್ಯಕ್ತಿಯ ಈ ರೀತಿಯ ಜೀವನಸಾರ್ಥಕತೆಗೆ ನೆರವಾದವರೆಲ್ಲರಿಗೂ ಈ ಸಿರಿಭೂವಲಯದ ಸರಳಪರಿಚಯಕಾರನು ನನ್ನಮೂಲಕ ಕೃತಜ್ಞತೆಯನ್ನರ್ಪಿಸಿದ್ದಾನೆ.  ಪ್ರಿಯ ಓದುಗರೇ, ತಪಸ್ಸದೃಷವಾದ ತನ್ನ ೨೭ ವರ್ಷಗಳ ಅಧ್ಯಯನದಲ್ಲಿ ಈ ಸರಳಪರಿಚಯಕಾರನು ಸುಮಾರು ಮೂರುಸಾವಿರ ಪುಟಗಳಲ್ಲಿ ಸಂಕ್ಷಿಪ್ತವಾಗಿ ವಿವರಿಸಿರುವ ಮಾಹಿತಿಗಳ ತಿರುಳನ್ನು ಇಲ್ಲಿ ಈ ಸೀಮಿತಪರಿಧಿಯಲ್ಲಿ ನಿಮ್ಮ ಮುಂದಿರಿಸುವ ಅಪಾಯಕಾರಿ ಕಾರ್ಯವನ್ನು ಇಲ್ಲಿಗೆ ಮುಕ್ತಾಯಗೊಳಿಸುತ್ತಿದ್ದೇನೆ.  ಇಲ್ಲಿ ಸಮಾವೇಶವಾಗಿರುವ ಮಾಹಿತಿಗಳನ್ನು ನೀವು ನಿಮ್ಮ ಅಂತರಂಗದಲ್ಲಿ ವಿವರವಾಗಿ ಚಿತ್ರ ರೂಪದಲ್ಲಿ ದಾಖಲಿಸಿಕೊಳ್ಳಲು ಎಷ್ಟು ವಿಸ್ತಾರವಾದ ’ಕ್ಯಾನ್ವಾಸ್’  ಬೇಕಾದೀತೆಂಬುದನ್ನು ಯೋಚಿಸಬೇಕಾಗಿ ವಿನಂತಿ. ಸಿರಿಭೂವಲಯಕಾವ್ಯಕ್ಕೆ ಸಂಬಂಧಿಸಿದಂತೆ ಕುಮುದೇಂದುಮುನಿಯು ರೂಪಿಸಿರುವ ಒಂದೆರಡು ಸಾಂಗತ್ಯ ಪದ್ಯಗಳನ್ನು ಉಲ್ಲೇಖಿಸುವ ಮೂಲಕ ಈ ಸರಳ ಪರಿಚಯಕೃತಿಗಳ ಸಂಕ್ಷಿಪ್ತ ಸಮೀಕ್ಷೇಯನ್ನು ಮುಕ್ತಾಯಗೊಳಿಸಬಯಸುತ್ತೇನೆ:
”ಅಷ್ಟಮಹಾಪ್ರಾತೀಹಾರ್ಯ ವೈಭವದಿಂದ|ಅಷ್ಟಗುಣಂಗಳೋಳ್ ಓಂದಮ್|
ಸೃಷ್ಟಿಗೆ ಮಂಗಳಪರ್ಯಾಯದಿನಿತ್ತ|ಅಷ್ಟಮಜಿನಗೆರಗುವೆನು||

ಓದಿನೊಳಂತರ್ಮುಹೂರ್ತದಿ ಸಿದ್ಧಾಂತ|ದಾದಿ ಅಂತ್ಯವನೆಲ್ಲಚಿತ್ತ|
ಸಾಧಿಪರಾಜ ಅಮೋಘವರ್ಷನಗುರು|ಸಾಧಿತಶ್ರಮಸಿದ್ಧಕಾವ್ಯ||

ಭಾರದೇಶದಮೋಘವರ್ಷನರಾಜ್ಯ|ಸಾರಸ್ವತವೆಂಬಂಗ|
ಸಾರಾತ್ಮಗಣಿತದೊಳಕ್ಷರಸಕ್ಕದ|ನೂರುಸಾವಿರಲಕ್ಷಕೋಟಿ||

ಓದಿಸಿದೆನುಕರ್ಮಾಟದಜನರಿಗೆ|ಶ್ರೀದಿವ್ಯವಾಣಿಯಕ್ರಮದೆ|
ಶ್ರೀದಯಾಧರ್ಮಸಮನ್ವಯಗಣಿತದ|ಮೋದದಕಥೆಯನಾಲಿಪುದು||

ಮೇರುವಬಲಕ್ಕಿಂತಿರುಗುತನೆಲೆಸಿರ್ಪ|ಭೂರಿವೈಭವಯುತರಾದ|
ಸಾರದಬೆಳಕಬೀರುವಚಂದ್ರಸೂರ್ಯರು|ಭಾರುಣಿಯೊಳ್ತೋರ್ಪವರೆಗೆ||

ನೀಲಾಂಬರದೊಳು ಹೊಳೆವನಕ್ಷತ್ರ ಮಾಲಿನ್ಯವಾಗದವರೆಗೆ|
ಶೀಲವ್ರತಂಗಳೊಳ್ ಬಾಳ್ದು ಜನರೆಲ್ಲ ಕಾಲನ ಜಯಿಸಲೆತ್ನಿಸಲಿ||
                                              ಕವಿ: ಕುಮುದೇಂದುಮುನಿ.
*  *  *
”ಮೇರುಪರ್ವತವನ್ನು ತನ್ನ ಬಲಬದಿಯಲ್ಲ್ರಿಸಿಕೊಂಡು ತಿರುಗುತ್ತಿರುವ, ವಿಶೇಷ ವೈಭವಶಾಲಿಗಳಾದ;
ಸತ್ವಪೂರ್ಣವದ ಬೆಳಕನ್ನು ಪಸರಿಸುವ ಸೂರ್ಯ ಚಂದ್ರರು ಭೂಮಿಯಲ್ಲಿ ಕಾಣಿಸುವವರೆಗೆ,
ಈ ಕಾವ್ಯವು  ಉಳಿಯುವುದೆಂಬ ಆಶಯವು ಕವಿಯದು.  ಮೋಲಿಬಣ್ಣದ ಹೊಳೆಯುತ್ತಿರುವ
ನಕ್ಷತ್ರಗಳು ಮಂಕಾಗದೇ ಇರುವವರೆವಿಗೆ, ಶೀಲವ್ರತಗಳನ್ನು ಅನುಸರಿಸುತ್ತ ಜನರು ಸಾವನ್ನು
ಸೋಲಿಸುತ್ತ ಜಯಶೀಲರಾಗಲು ಪ್ರಯತ್ನಿಸಲಿ”  ಎಂಬ ಮಹದಶಯವನ್ನು ಕವಿಯು  ವ್ಯಕ್ತಪಡಿಸಿಸಿದ್ದಾನೆ.
ಇಲ್ಲಿಗೆ ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯದ
ಪ್ರಥಮಖಂಡದ ೫೯ ಅಧ್ಯಾಯಗಳಿಗೆ ಸಂಬಂಧಿಸಿದಂತೆ ಸಿರಿಭೂವಲಯದ ಸುಧಾರ್ಥಿಯು
ರೂಪಿಸಿದ ಸರಳಪರಿಚಯಕೃತಿಗಳ ಸಂಕ್ಷಿಪ್ತ ಸಮೀಕ್ಷೆಯ ಮಹಾಯಜ್ಞವು ಸಮಾಪ್ತವಾದುದು.  (ಮುಕ್ತಾಯವಾಯಿತು)
                            ಜಮದಗ್ನಿಸುತ.         
                                   _()_

No comments:

Post a Comment