Tuesday, 26 May 2020

ಸಿರಿಭೂವಲಯಸಾಗರರತ್ನಮಂಜೂಷ

***ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆ***
ಭಾಗ: ೮.

** ಸಿರಿಭೂವಲಯಸಾಗರರತ್ನಮಂಜೂಷ**

ಪ್ರಿಯ ಓದುಗರೇ,
ಈಗ ನೀವು ಓದಲಿರುವ ಪರಿಚಯಕೃತಿಯ ರಚನೆಯು ಒಂದು ಮಹತ್ವಪೂರ್ಣವಾದುದು. ಈಕಾರಣದಿಂದಾಗಿ ನೇರವಾಗಿ ಕೃತಿಯವಿಚಾರ ವಿವರಿಸದೇ ಇದರ ರಚನೆಗೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ಮೊದಲಿಗೆ ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ.
೧೯೫೩ರಲ್ಲಿ ಬೆಂಗಳೂರಿನ ಸರ್ವಾರ್ಥಸಿದ್ಧಿಸಂಘದವರು ’ಸಿರಿಭೂವಲಯ’ ಎಂಬ ಪ್ರಾಚೀನ ಅಂಕಕಾವ್ಯದ ಅಕ್ಷರ ಅವತರಣೆಕೆಯನ್ನು ಪ್ರಕಟಿಸಿ, ಅದನ್ನು ನಾಡಿನ ವಿದ್ವನ್ಮಣಿಗಳು ಮಾನ್ಯಮಾಡದೇ ನಿರಾಕರಿಸಿದನಂತರ, ಸುಮಾರು ಅರ್ಧ ಶತಮಾನದಮೇಲೆ  ಬೆಂಗಳೂರಿನ ಪುಸ್ತಕಶಕ್ತಿ ಪ್ರಕಾಶನದವರು ಸಾಕಷ್ಟು ಪೂರ್ವ ಸಿದ್ಧತೆಯ ಮೂಲಕ ಸಿರಿಭೂವಲಯದ ಮರುಮುದ್ರಣಕಾರ್ಯವನ್ನು ಪ್ರಾರಂಭಿಸಿ ಇಲ್ಲದ ಇತಿಹಾಸವನ್ನು ನಿರ್ಮಾಣಮಾಡುವ ಸನ್ನಾಹದಲ್ಲಿರುವ ವೇಳೆಗೆ ಈ ಸಿರಿಭೂವಲಯವೆಂಬ ಕಾವ್ಯವು ಒಂದು ನಿಗೂಢಗಳ ಮಡುವಾಗಿತ್ತು.
ಸ್ವಲ್ಪ ಆಸಕ್ತಿವಹಿಸಿದರೂ ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾಗಿದ್ದ ಈ ಕಾವ್ಯದ ಅಂತರಂಗವನ್ನರಿಯಲು ಯಾರೂ ಮುಂದಾಗಿರಲಿಲ್ಲ.  ನಾಡಿನ ಹೆಸರಾಂತ ವಿದ್ವಾಂಸರ ಸಮೂಹವೇ ಪುಸ್ತಕಶಕ್ತಿಯವರ ಬೆಂಬಲಕ್ಕೆ ನಿಂತಾಗ,  ಈ ಕಾವ್ಯದ ನಿಗೂಢ ರಹಸ್ಯಗಳೆಲ್ಲವೂ ಬಯಲಾಗುವುದೆಂಬ ಭ್ರಮೆಯನ್ನು ಉಂಟುಮಾಡಲಾಯಿತು.
೧೯೫೩ ರ ಪ್ರಥಮಮುದ್ರಣದಲ್ಲಿ ಸಮಾವೇಶವಾಗಿದ್ದ   ಪ್ರಥಮ ಖಂಡದ ೩೩ ಅಥಾಯಗಳಪೈಕಿ ೨೦ ಅಧ್ಯಾಯಗಳನ್ನು ಸಾಕಷ್ಟು ಅಧ್ವಾನವಾಗಿ ಮರುಮುದ್ರಣಮಾಡುವುದರೊಳಗಾಗಿಯೇ ಅವರ ಇಲ್ಲದ ಇತಿಹಾಸ ಸೃಷ್ಟಿಸುವ ಸಾಹಸಕ್ಕೆ ಪಾರ್ಶ್ವವಾಯು ಹೊಡೆದಂತಾಯಿತು.  ಹಾಸನದ ಸುಧಾರ್ಥಿಯು ಈ ೩೩ ಅಧ್ಯಾಯಗಳಿಗೆ ಸಂಬಂಧಿಸಿದ ಅಂತರ್ಸಾಹಿತ್ಯವನ್ನು ಹುಡುಕಿ ಪ್ರತ್ಯೇಕವಾಗಿ ಪ್ರಕಟಿಸಿದನಂತರ ಸಾಮಾನ್ಯವಾಗಿ ಎಲ್ಲರಿಗೂ ಈ ಸಿರಿಭೂವಲಯವೆಂಬ ಅಚ್ಚರಿಯಕಾವ್ಯದ ಅಂತರಂಗವು ಬಹಿರಂಗವಾಯಿತು!  ಇಷ್ಟೆಲ್ಲ ಚಟುವಟಿಕೆಗಳು ನಡೆದರೂ ಅವೆಲ್ಲವೂ ಕೇವಲ ಪ್ರಥಮಖಂಡದ ೩೩ ಅಧ್ಯಾಯಗಳಿಗೆ ಸೀಮಿತವಾಗಿಯೇ ಸುತ್ತಾಡುತ್ತಿತ್ತು!
ಸಾಹಿತ್ಯಾಸಕ್ತಿಯಿರುವ ಯಾವೊಬ್ಬ ಸಾಮಾನ್ಯ ಬರಹಗರನಕೈಗೂ ಸಿಗದಂತೆ ರಹಸ್ಯವಾಗಿ ಮುಚ್ಚಿರಿಸಲಾಗಿದ್ದ  ೩೪ರಿಂದ ೫೯ನೇ ಅಧ್ಯಾಯದವರೆಗಿನ ಅಕ್ಷರ ರೂಪದ ಮೂಲಸಾಹಿತ್ಯವು ತೀರ ಅನಿರೀಕ್ಷಿತವಾಗಿ ಸುಧಾರ್ಥಿಯ ಕೈಗೆ ಸಿಕ್ಕಿದ ಕೂಡಲೇ ಅದನ್ನು ಸೂಕ್ತವಾಗಿ ವಿಶ್ಲೇಷಿಸುವ ಕಾರ್ಯವು ಪ್ರಾರಂಭವಾಯಿತು.
 ಮೈಮೇಲೆ ದೆವ್ವ ಹಿಡಿದವನಂತೆ ಈ ಸುಧಾರ್ಥಿಯು ಹಗಲಿರುಳೆನ್ನದೇ ಈ ಸಿರಿಭೂವಲಯ ಸಾಗರದಲ್ಲೇ ಮುಳುಗಿದ ಫಲವಾಗಿ ಅತ್ಯಲ್ಪಕಾಲವಧಿಯಲ್ಲೇ  ೩೪ ರಿಂದ ೫೦ ನೇ ಅಧ್ಯಾಯದ ವರೆಗಿನ ಮೂಲಸಾಹಿತ್ಯವನ್ನು ಕಲ್ಲಿನಗಾಣಕ್ಕೆ ಹಾಕಿ ಅದರಲ್ಲಿರುವ ರಸವನ್ನು ಹೊರತೆಗೆಯುವ ಕಾರ್ಯವು ಮುಂದುವರೆಯಿತು. ಇದರಿಂದಾಗಿ   ಸುಧಾರ್ಥಿ ದಂಪತಿಗಳಿಗೆ ಜಗತ್ತನ್ನೇ ಜಯಿಸಿ ತಮ್ಮ ಸ್ವಾಧೀನಕ್ಕೆ ಪಡೆದಷ್ಟು ಆನಂದವುಂಟಾಯಿತು. ಈ ಆನಂದದ ಮನಸ್ಥಿತಿಯಲ್ಲೇ ಪ್ರೊ|| ಜಿ . ವೆಂಕಟಸುಬ್ಬಯ್ಯನವರನ್ನು ಕಂಡು ಈಗ ಹೊಸದಾಗಿ ಬೆಳಕುಕಂಡ ಮಾಹಿತಿಗಳ ವಿವರವನ್ನು ಅವರಿಗೆ ವಿವರಿಸಿದ್ದಾಯಿತು.
ನಿಜಕ್ಕೂ ಆ ಹಿರಿಯಜೀವಕ್ಕೆ ಆದ ಆನಂದವು ಸುಧಾರ್ಥಿದಂಪತಿಗಳ ಆನಂದದ ಪರಿಧಿಯನ್ನೂ ಮೀರಿತ್ತು! ನೂತನವಾಗಿ ಬೆಳಕಿಗೆಬಂದ ಮಾಹಿತಿಗಳನ್ನೆಲ್ಲ ಸೂಕ್ತವಾಗಿ ಅಳವಡಿಸಿ ಪ್ರಕಟಣೆಗೆ ಸಿದ್ಧಪಡಿಸಲು ಸುಮಾರು ೪-೫ ತಿಂಗಳ ಅವಧಿಯಾದರೂ ಬೇಕಿತ್ತು. ಆದರೆ ಪ್ರೊ. ಜಿ.ವಿ ಯವರು ಈ ಪುಸ್ತಕವು ಪ್ರಕಟವಾಗುವುದನ್ನು ತಾವು ನೋಡಬೇಕೆಂದು ಅಪೇಕ್ಷಿಸಿದ ಕಾರಣ ಅಧ್ಯಾಯ ೩೪ ರಿಂದ ೫೦ನೇ ಅಧ್ಯಾಯಕ್ಕೆ ಸಿಮಿತಗೊಳಿಸಿ, ಅಲ್ಲಿನ ಪ್ರಮುಖ ಮಾಹಿತಿಗಳನ್ನು ಪ್ರತ್ಯೇಕವಾಗಿ  ಸಂಗ್ರಹಿಸಿಕೊಟ್ಟು, ಈ ಅಪರೂಪದ ಕೃತಿಗೆ ಮುನ್ನುಡಿ ಬರೆಯಲು  ಅವರನ್ನು ಪ್ರಾರ್ಥಿಸಲಾಯಿತು.
 ಸುಧಾರ್ಥಿದಂಪತಿಗಳು ನಿರೀಕ್ಷಿಸದೇ ಇರುವಷ್ಟು ಶೀಘ್ರವಾಗಿ,  ವ್ಯಾಪಕವಾಗಿ ಈ ಹಿರಿಯಜೀವವು ಅಂಕಿತವಿರಿಸಿದ ’ಮುನ್ನುಡಿ’ಯೊಂದಿಗೆ ಹಸ್ತ ಪ್ರತಿಯು ಮುದ್ರಣಾಲಯಕ್ಕೆ ಸೇರಿತು. ಶ್ರೀಮತಿ ಗಿರಿಜಾಶಂಕರ ಅವರು ಕೃತಿಗೆ ’ಸಿರಿಭೂವಲಯಸಾಗರರತ್ನಮಂಜೂಷ’  ಎಂದು ನಾಮಕರಣಮಾಡಿದರು. ಕ್ಲುಪ್ತಕಾಲಾವಧಿಯೊಳಗಾಗಿಯೇ ಕೃತಿಯ ಮುದ್ರಣಕಾರ್ಯವು ಮುಕ್ತಾಯವಾಯಿತು.
ಬೆಂಗಳೂರಿನ ಚಾಮರಾಜಪೇಟಿಯ  ಶ್ರೀ ಕೃಷ್ಣರಾಜೇಂದ್ರ ಪರಿಷನ್ಮಂದಿರದಲ್ಲಿ ದಿನಾಂಕ: ೧೩-೦೫-೨೦೧೩ ರಂದು ಸೋಮವಾರ ಬೆಳೆಗ್ಗೆ ೧೦-೩೦ಕ್ಕೆ ’ಸಿರಿಭೂವಲಯಸಾಗರರತ್ನಮಂಜೂಷ’ ದ ಲೋಕಾರ್ಪಣೆಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು.  ಕ.ಸಾ.ಪದ  ಅಂದಿನ ಅಧ್ಯಕ್ಷರಾಗಿದ್ದ ಪುಂಡಲೀಕ ಹಾಲಂಬಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿತ್ತು.  ಸಮಾರಂಭದ ಆಹ್ವಾನ ಪತ್ರದ ಮುದ್ರಣಕ್ಕೆ ಮೊದಲೇ ಈ ಕಾರ್ಯಕ್ರಮಕ್ಕೆ ಮೊದಲನೆಯ ಆಘಾತ ಎರಗಿತು. !
ಸಮಗ್ರಕರ್ನಾಟಕದ ಮಹಾಜನತೆಗೆ ಭವಿಷ್ಯದಲ್ಲಿ ಮಹೋನ್ನತವಾದ ಹಲವಾರು ’ಭಾಗ್ಯ’ ಗಳನ್ನು ಕರುಣಿಸಲಿದ್ದ ಶ್ರೀ ಸಿದ್ಧರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ತೆಗೆದು ಕೊಳ್ಳುವ ಕಾರ್ಯಕ್ರಮವು ಅದೇ ದಿನಕ್ಕೆ ಏರ್ಪಾಡಾಗಿತ್ತು!   ಈ ಕಾರ್ಯಕ್ರಮವನ್ನು ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು.  ಈ ಅದ್ದೂರಿಯ ಸಮಾರಂಭಕ್ಕೆ   ಬೆಂಗಳೂರಿನಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕ್ಷೇತ್ರಗಳಲ್ಲಿ ಪ್ರಸಿದ್ಧರಾಗಿದ್ದ ವ್ಯಕ್ತಿಗಳನ್ನು   ಆಗ್ರಹಪೂರ್ವಕವಾಗಿ ಆಹ್ವಾನಿಸಲಾಗಿತ್ತು! ಅಂಥವರ ಪೈಕಿ ಈ ಸಿರಿಭೂವಲಯಸಾಗರರತ್ನಮಂಜೂಷದ ಲೋಕಾರ್ಪಣೆಮಾಡಬೇಕಿದ್ದ ಪ್ರೊ. ಜಿ ವೆಂಕಟಸುಬ್ಬಯ್ಯನವರೂ ಒಬ್ಬರು!!
ಅದುವರೆವಿಗೂ ಸಂತೋಷದಿಂದ ಶ್ರಮವಹಿಸಿ ಮಾಡಿದ್ದ ವ್ಯವಸ್ಥೆಗಳೆಲ್ಲವೂ ಅವ್ಯವಸ್ಥೆ ಗೊಂಡಂತಾಯಿತು. ಕೂಡಲೇ ವೆಂಕಟಸುಬ್ಬಯ್ಯನವರು ದೂರವಣಿಯಮೂಲಕ ಸಂಪರ್ಕಿಸಿ, ’ಸರ್ಕಾರದ ಕಾರ್ಯಕ್ರಮ ೧೧-೩೦ಕ್ಕೆ ನಿಗಧಿಯಾಗಿದೆ. ನೀವು ನಿಮ್ಮ ಕಾರ್ಯಕ್ರಮವನ್ನು  ೯-೩೦ಕ್ಕೆ ಪ್ರಾರಂಭಿಸಿ,  ಅಷ್ಟರೊಳಗೆ ಮುಕ್ತಾಯಮಾಡಿಬಿಡಿ.  ನಾನು ಅಲ್ಲಿಂದಲೇ ಮುಖ್ಯಮಂತ್ರಿಯವರ ಪ್ರಮಾಣವಚನಸಮಾರಂಭಕ್ಕೆ ಹೋಗಲು ಅನುಕೂಲವಾಗುತ್ತದೆ ಎಂದು ಮಾರ್ಗದರ್ಶನ ಮಾಡಿದರು. ಅದರಂತೆಯೇ ಆಹ್ವಾನ ಪತ್ರವನ್ನು ಮುದ್ರಿಸಿ, ಅಭಿಮಾನಿಗಳನ್ನು ಸಮಯಕ್ಕೆ ಸರಿಯಗಿ ಆಗಮಿಸಿ ಸಹಕರಿಸಲು ಕೋರಲಾಯಿತು.
ಅನಾರೋಗ್ಯದ ನಿಮಿತ್ತ  ಶ್ರೀ ಪುಂಡಲೀಕ ಹಾಲಂಬಿಯವರು ಸಮಾರಂಭಕ್ಕೆ ಬಾರದಿರುವ ಮಾಹಿತಿ ಬಂದಿತು!  ೯-೩೦ಕ್ಕೆ ಸರಿಯಾಗಿ ಪ್ರೊ|| ಜಿ. ವಿ ಯವರು ಸಭಾಗಣಕ್ಕೆ ಆಗಮಿಸಿದರು.  ನಮ್ಮ ಕಳಕಳಿಯ ಮನವಿ ಏನೇಇದ್ದರೂ, ಸಮಾರಂಭದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಿದ್ದವರೇ ಹಲವರು ಬಂದಿರಲಿಲ್ಲ! ಇನ್ನು ಸಭಿಕರನ್ನು ಅಷ್ಟು ಶೀಘ್ರವಾಗಿ ನಿರೀಕ್ಷಿಸುವುದು ಹೇಗೆ!?
ಅಂತೂ ೧೦ ಗಂಟೆಯವೇಳೆಗೆ  ಹತ್ತಾರು ಜನಗಳು ಸೇರಿದ್ದಾಯಿತು! ಈ ವೇಳೆಗೆ ಕಂಠೀರವ ಕ್ರೀಡಾಂಗಣದ ಸಮಾರಂಭಕ್ಕೆ ಪ್ರೊ|| ಜಿ,ವಿ ಅವರನ್ನು ಕರೆದೊಯ್ಯಲು ಪೊಲೀಸರ ದಂಡೇ ಆಗಮಿಸಿಬಿಟ್ಟಿತು. ತರಾತುರಿಯಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಮೊದಲಿಗೆ ಪ್ರೊ. ಜಿ.ವಿ ಅವರು ಸುಧಾರ್ಥಿಯನ್ನು ಅಭಿನಂದಿಸಿ, ಶಾಲುಹೊದಿಸಿ ಆಶೀರ್ವದಿಸಿದ್ದಾಯಿತು!
ಸಂಕ್ಷಿಪ್ತವಾಗಿ ಸಮಾರಂಭವು ಮುಗಿಯಿತೆಂದು ನಿರ್ಧರಿಸಿದ ಪೊಲೀಸರು ಹೊರಡುವ ಆತುರ ಪ್ರಕಟಿಸಿದರು. ಕೆಲವು ನಿಮಿಷಗಳ ಕಾಲಾವಕಾಶ ಕೇಳಿದ ನಮ್ಮ ಮನವಿಗೆ ಪೊಲೀಸರು ಸಹಕರಿಸುವ ಲಕ್ಷಣ ಇರಲಿಲ್ಲ! ಕೂಡಲೇ ಪ್ರೊ. ಜಿ.ವಿ ಯವರೇ ’ಐದು ನಿಮಿಷ ಸಹಕರಿಸಿ, ಪುಸ್ತಕ ಬಿಡುಗಡೆ ಮಾಡಿಬಿಡುತ್ತೇನೆ’ ಎಂದು ಸೂಚಿಸಬೇಕಾಯಿತು.
ಕೂಡಲೇ ವೇದಿಕೆಯಮೇಲೆ ಪೂರ್ಣ ಸಿದ್ಧತೆ ಇಲ್ಲದೆಯೇ, ಪುಸ್ತಕದಕಟ್ಟನ್ನು ಅನಾವರಣಗೊಳಿಸಿ ಕೃತಿಬಿಡುಗಡೆಮಾಡಿಸಿ, ಫೋಟೋ ತೆಗೆಸಿಕೊಂಡದ್ದಾಯಿತು! ಸಿರಿಭೂವಲಯದ ಅಭಿಮಾನಿಯೊಬ್ಬರು ಷಿಲಾಂಗ್ ನಿಂದ ತಂದಿದ್ದ ಕರಕುಶಲಕಲೆಯ ವಿಶಿಷ್ಟ ರೀತಿಯ ಟೋಪಿಯನ್ನು ತೊಡಿಸಿ,  ಪ್ರೊ|| ಜಿ.ವಿ. ಯವರನ್ನು ಸನ್ಮಾನಿಸಲಾಯಿತು.
 ಅಪರಾಧಿಯನ್ನು ಸುತ್ತುವರಿದು ಹೊರಗೆ ಸಾಗಿಸಿಕೊಂಡು ಹೋಗುವ  ಶೈಲಿಯಲ್ಲೇ ಈ ಸಮಾರಂಭದ ಗಣ್ಯ ಅತಿಥಿ ಶತಾಯುಷಿ ಶ್ರೀ ಜಿ.ವಿ ಯವರನ್ನು ಪೊಲೀಸ್ ವಾಹನದತ್ತ ಕರೆದೊಯ್ಯಲಾಯಿತು.  ಕನ್ನಡದ ಸಾಂಸ್ಕೃತಿಕ ಪರಿಸರವು ಹಿಡಿದ ಅವನತಿಯ ಹಾದಿಯನ್ನು ನೆನೆದು ಈ ಕಾವ್ಯದ ಸರಳಪರಿಚಯಮಾಡಿದ ಸುಧಾರ್ಥಿಯ ಕಣ್ಣಂಚಿನಲ್ಲಿ  ಹನಿಯಾಡಿತು.
 ಪ್ರೊ. ಜಿ.ವಿ ಯವರ ಘನೆತೆಗಾಗಿಯಾದರೂ ಈ ಕಾರ್ಯಕ್ರಮದ ಮಾಹಿತಿಯನ್ನು ಪ್ರಕಟಿಸಬೇಕಾದ ಅನಿವಾರ್ಯತೆಗೆ ಸಿಕ್ಕಿದ್ದ ಮಾಧ್ಯಮದವರೂ ಉತ್ಸಾಹದಿಂದ ಪೊಲೀಸ್ ವಾಹನವನ್ನು ಹಿಂಬಾಲಿಸಿ ಹೊರಟರು!,  ನಿಧಾನವಾಗಿ ಸುಮಾರು ನೂರಕ್ಕೂ ಹೆಚ್ಚಿನ ಸಭಿಕರ ಆಗಮನವಾದನಂತರ ಔಪಚಾರಿಕವಾಗಿ ಕಾರ್ಯಕ್ರಮನಡೆಸಿ,  ಬಂದಿದ್ದವರನ್ನು ಸೂಕ್ತವಾಗಿ ಸತ್ಕರಿಸುವ ಕಾರ್ಯವು ಯಾಂತ್ರಿಕವಾಗಿ ಮುಕ್ತಾಯವಾಯಿತು.
 ಆಕ್ಷಣಲ್ಲೇ ಸುಧಾರ್ಥಿಯು ಇನ್ನು ಯಾವಕಾರಣಕ್ಕೂ ಮುಂದೆ ಈ ಪರಿಚಯಕೃತಿಯ ಲೋಕಾರ್ಪಣೆಗೆ ಕಾರ್ಯಕ್ರಮವನ್ನು ನಡೆಸಬಾರದೆಂಬ ನಿರ್ಧಾರ ಮಾಡಿಕೊಂಡದ್ದಾಯಿತು!!  ಎಂಥವರ ಮನಸಿಗೂ ಕ್ಲೇಶ ಉಂಟುಮಾಡುವ ಇಂಥ ಅವ್ಯವಸ್ಥೆಯಲ್ಲಿ  ’ಸಿರಿಭೂವಲಸಾಗರರತ್ನಮಂಜೂಷ’ ದ ಲೋಕರ್ಪಣೆ ಮುಕ್ತಾಯವಾಯಿತು.  ಇಂಥ ಸರಳ ಪರಿಚಯಕೃತಿಯಲ್ಲಿ ಅಡಕವಾಗಿರುವ ಮಾಹಿತಿಗಳ ಸಮೀಕ್ಷೆಯನ್ನು  ಈಗ ಗಮನಿಸೋಣ.
’ಸಿರಿಭೂವಲಯಸಾಗರರತ್ನಮಂಜೂಷ’ವು ಹೆಸರಿಗೆ ತಕ್ಕಂತೆ ಸಾಹಿತ್ಯಸಾಗರದ ರತ್ನಗಳ ಸಂದೂಕವೇ ಆಗಿದೆ,  ಇದರಲ್ಲಿ ಏನೇನು ಅಡಗಿದೆ ಎಂಬುದನ್ನು ನೋಡುವ ಮೊದಲಿಗೆ ಈ ಸರಳಪರಿಚಯಕೃತಿಯ ಹೊರನೋಟವನ್ನು ಕುರಿತು ಸ್ವಲ್ಪ ಪರಿಚಯ ಪಡೆಯೋಣ.  ಡೆಮಿ ೧/೪ ಅಳತೆಯ ಸುಮಾರು ೪೧೫ ಪುಟಗಳ ವ್ಯಾಪ್ತಿಯ ಈ ಕೃತಿಯ ಮುಖಪುಟವು ಈ ಕಾವ್ಯಾಂತರ್ಗತವಾಗಿರುವ ಸೃಷ್ಟಿಸ್ಥಿತಿಲಯಗಳಿಗೆ ಸಂಬಂಧಿಸಿದ ಮಹತ್ತರವಾದ ಮಹಿತಿಗಳನ್ನು ಒಳಗೊಂಡಿದೆ ಎಂಬುದನ್ನು ಸಂಕೇತರೂಪದಲ್ಲಿ ಸೂಚಿಸುವಂತೆ ವಿಶ್ವತರಂಗಗಳೊಂದಿಗೆ ಪಸರಿಸುವ  ಓಂ ಕಾರವು ಅಕಾರ ಉಕಾರ ಮಕಾರಗಳ ಸಂಯೋಗವಾಗಿ ರೂಪುಗೊಂಡಿರುವುದನ್ನು ಪ್ರತಿನಿಧಿಸುವ ಅರ್ಥವತ್ತಾದ ಚಿತ್ರವನ್ನು ಮುಖಪುಟಕ್ಕೆ ರೂಪಿಸಲಾಗಿದೆ.
 ಸಿರಿಭೂವಲಯದ ವರ್ಣಮಾಲೆಯ ಕ್ರಮ ಹಾಗೂ ಅದಕ್ಕೆ ಅನ್ವಯವಾಗುವ ಅಂಕಿಗಳ ಪ್ರಸ್ತುತಿಯೊಂದಿಗೆ  ’ಅರ್ಪಣೆ’ ಎಂಬುದನ್ನು ರೂಪಿಸಿ ( ೧ ೫೪ ೪೮ ೧ ೪೨ ೧೬= ಅ ರ್ ಪ್ ಅ ಣ್ ಎ) ಸಿರಿಭೂವಲಯಕಾವ್ಯವು ಉಗಮವಾಗುವ ಕ್ರಮವನ್ನು ತೋರಿಸಲಾಗಿದೆ!
ಮುನ್ನುಡಿ,  ಓದುಗರೊಂದಿಗೆ, ೩೪ ನೇ ಅಧ್ಯಾಯದಿಂದ ೫೦ ನೇ ಅಧ್ಯಾಯದವರೆಗೆ ಪೂರ್ಣ ಪದ್ಯದ ಅಂತರ್ಸಾಹಿತ್ಯ, ಪಾದ ಪದ್ಯದ ಅಂತರ್ಸಾಹಿತ್ಯ,  ಅಶ್ವಗತಿಯ ಅಂತರ್ಸಾಹಿತ್ಯ, ಸ್ತಂಬಕಾವ್ಯ, ಸರ್ಪಗತಿ, ಜೋಡಿನಾಗರಬಂದ  ಎಂಬ ಕ್ರಮದಲ್ಲಿ ೧೭ ಅಧ್ಯಾಯಗಳಲ್ಲಿ ಉಗಮವಾಗುವ ಅಂತರ್ಸಾಹಿತ್ಯವನ್ನು ವಿಂಗಡಿಸಿ ಮುದ್ರಿಸಲಾಗಿದೆ.  ಈ ೧೭ ಅಧ್ಯಾಯಗಳ ಮೂಲಸಾಹಿತ್ಯದ ಅಕ್ಷರ ಅವತರಣೆಕೆಯು ಮೊಟ್ಟಮೊದಲಬಾರಿಗೆ ಮುದ್ರಣಕ್ರಮದಲ್ಲಿ ಬೆಳಕು ಕಂಡಿರುವುದು ಈ ಪರಿಚಯಕೃತಿಯ ವಿಶೇಷವಾಗಿದೆ.
ಕುಮುದೇಂದುಮುನಿಯು ಪ್ರಶಂಸಿಸಿರುವ ಅದ್ವೈತದ ಸಂಕ್ಷಿಪ್ತರೂಪ. ಕುಮುದೇಂದುಮುನಿಯು  ಸೂಚಿಸಿರುವ ಸಾಯುಜ್ಯಮೋಕ್ಷ ಹಾಗೂ ಇಂದಿನ ಜಗತ್ತು ಸಾಗಿರುವ ಹಾದಿ,  ಪಗಡೆಯಾಟದ ಪ್ರಚೀನತೆ ಹಾಗೂ ಪ್ರಾಮುಖ್ಯತೆ ಮತ್ತು ಶ್ರೀ ಶಂಕರ ಭಗವತ್ಪಾದರ ಮಹತ್ವ, ಫಲಜ್ಯೋತಿಷ್ಯ ಚಕ್ರದ ವಿಚಾರ.  ಸನ್ಯಾಸಾಶ್ರಮ ಜೀವನ ಬಹಳಕಷ್ಟಕರ, ಜೈನಸಂಪ್ರದಾಯದ ಮುನಿಜೀವನ ಬಹಳ ಕಠಿಣ.  ಆಕಾಶದ ವಿಸ್ತಾರ ಹಾಗೂ ಗ್ರಹಗಳ ಚಲನೆಗೆ ಸಂಬಂಧಿಸಿದಂತೆ ಒಂದು ಮಾತು.  ಕನ್ನಡಿಗರೆಲ್ಲರೂ ಗಮನಿಸಲೇ ಬೇಕಾದ ಸಂಗತಿ. ಸಿರಿಭೂವಲಯ ಕುರಿತು ಇತ್ತೀಚಿನ ಬೆಳವಣಿಗೆ,
ಅಭಿಮಾನಿಯೊಬ್ಬರ ಆಸಕ್ತಿಯ ಫಲ.  ಕೃತಿಯ ಮಾಹಿತಿಯನ್ನು ಬೆಳೆಕಿಗೆತಂದುದಕ್ಕೆ  ಕರ್ತೃವಿಗೆ ಕತ್ತಲ ಕೋಣೆಯಲ್ಲಿ ಸನ್ಮಾನ!  ಒಲ್ಲದ ಉಪನ್ಯಾಸಕ್ಕೆ ಸಲ್ಲದ ಸನ್ಮಾನ!! ಧರಣೇಂದ್ರಕುಮಾರರ ಇನ್ನೊಂದು ಸಾರ್ಥಕ ಪ್ರಯತ್ನ. ಕನ್ನಡದ ಪ್ರಾಚೀನತೆ ಹಾಗೂ ಸಿರಿಭೂವಲಯ ಕುರಿತು ಒಂದು ಮಾಹಿತಿ.  ಕುಮುದೇಂದುವಿನ ಸಿರಿಭೂವಲಯವು ಒಂದು  ಶಾಪಗ್ರಸ್ತ ಗ್ರಂಥವೇ?  ಸಿರಿಭೂವಲಯದ ಪರಿಚಯಕೃತಿಗಳ ಚರಿತ್ರೆ.  ಕೊನೆಗೂ ’ಸಿರಿಭೂವಲಯದ ಒಳನೋಟ’ ಪ್ರಕಟವಾಯಿತು!
ಪ್ರೊ. ಹಂಪ ನಾಗರಾಜಯ್ಯನವರು ಮತ್ತು ಸಿರಿಭೂವಲಯ. ಮತಧರ್ಮಗಳಲ್ಲಿ ಮೇಲಾವುದು? ಕೀಳಾವುದು? ಕನ್ನಡದ ಆದಿಕವಿ ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯವನ್ನು ಕುರಿತು ಒಂದು ಖಚಿತವಾದ  ಸಂಕ್ಷಿಪ್ತ ಇತಿಹಾಸ..  ಕುಮುದೇಂದುಮುನಿಯ ಸಿರಿಭೂವಲಯ ಒಂದು ಶಾಪಗ್ರಸ್ತ ಗ್ರಂಥವೇ?  ಸಿರಿಭೂವಲಯದ ಸ್ವರೂಪಹಾಗೂ ಉಳಿಸುಬಂದ ಹಾದಿ. ಸಿರಿಭೂವಲಯದ ಮೂಲಚಕ್ರಗಳನ್ನು ಓದುವ ಕ್ರಮ.  ಸಿರಿಭೂವಲಯದಲ್ಲಿ  ಅಡಕವಾಗಿರುವ ಮಾಹಿತಿಗಳಿಂದಾಗಿ ನಮ್ಮ ಧರ್ಮ ಹಾಗೂ ಸಹಿತ್ಯಕ್ಷೇತ್ರದಲಿ ಬುಡಮೇಲಾಗಿ ಬಿದ್ದುಹೋಗಿರುವ ಕೆಲವು ವಿಚಾರಗಳು.  ಕಾಡಿನಲ್ಲಿ ಅರಸುತ್ತಿದ್ದ ಬಳ್ಳಿಯು ಕಾಲಿಗೇ ತೊಡರಿದಾಗ!  ಸಿರಿಭೂವಲಯದ ಸಂಶೋಧನೆಯ ಕನಸು ಅದೆಷ್ಟು ಸುಂದರ!  ಸಿರಿಭೂವಲಯದ ಪರಿಚಯವನ್ನು ಯಾರುಬೇಕಾದರೂ  ಮಾಡಬಹುದಿತ್ತು!
ಜಗತ್ತಿನ ಎಲ್ಲವೂ ಉಗಮವಗಿರುವುದು ಶೂನ್ಯದಿಂದ (ಪೂರ್ಣದಿಂದ); ವಿಲಿನವಾಗುವುದೂ ಶೂನ್ಯದಲ್ಲಿ. ಕೆಲವೊಂದು ಮುಖ್ಯ ವಿಚಾರಗಳು.   ಸಿರಿಭೂವಲಯದ ವಿಶ್ವರೂಪ ಕಲ್ಪನೆ. ಕನ್ನಡದ ಪೂಜಾರಪ್ಪನ ಸಿರಿಭೂವಲಯದ ಮೆಚ್ಚುಗೆ.  ಅಂತರ್ಜಾಲತಾಣದಲ್ಲಿ ಸಿರಿಭೂವಲಯ. ಹಿನ್ನುಡಿ ಮುನ್ನುಡಿಗಳ ಮಡಿಲಲ್ಲಿ.
  ಸಿರಿಭೂವಲಯದ ಮೂಲಪ್ರತಿಯ ನಕಲುಗಳನ್ನು ಕುರಿತ ವಿಚಾರ. ಮುದ್ರಣಕ್ಕೆ ಅಕ್ಷರ ಜೋಡಣೆಯ ವಿಚಾರ. ಸಿರಿಭೂವಲಯದ ಕವಿಕಾವ್ಯಸಾರ. (ಒಂದು ಕಿರು ಕಥನಕಾವ್ಯ) ಸುಧಾರ್ಥಿಯವರ  ಸಾಹಿತ್ಯಕೃತಿಗಳನ್ನು ಕುರಿತು ಕೆಲವು ಅನಿಸಿಕೆಗಳು. ಸಿರಿಭೂವಲಯಸಾರ ಕುರಿತು ಕೆಲವೊಂದು ದೂರವಾಣಿ ಅನಿಸಿಕೆಗಳು. ಮರೆತಮಾತು ಎಂಬುದಾಗಿ ಕೆಲವಾರು ಶೀರ್ಷಿಕೆಗಳಲ್ಲಿ ಸಿರಿಭೂವಲಯದ ಹಾಗೂ ಅದಕ್ಕೆ ಸಂಬಂಧಿಸಿದ ಹಲವಾರು ಆನುಷಂಗಿಕ ವಿಚಾರಗಳನ್ನು ಕುರಿತು ವಿವರಣೆ ನೀಡಲಾಗಿದೆ.
ಪ್ರೊ. ಜಿ. ವಿ ಯವರ ವಿಶೇಷವಾದ, ವಿಸ್ತರವಾದ ಮೌಲಿಕ ಮುನ್ನುಡಿಯು ಈ ಪರಿಚಯಕೃತಿಯ ಮಹತ್ವವನ್ನು ಓದುಗರಿಗೆ ಸುಮರು ೫ ಪುಟಗಳ ವ್ಯಾಪ್ತಿಯಲ್ಲಿ ವಿವರಿಸುವುದಾಗಿದೆ.  ”ಸಿರಿಭೂವಲಯದ ಅಕ್ಷರ ಅವತರಣಿಕೆಯು೧೯೫೩ರಲ್ಲಿ ಪ್ರಕಟವಾದ ಪ್ರಾರಂಭದಲ್ಲಿ ಅದರ ವಿಚಾರವಾಗಿ ಸಾಕಷ್ಟು ಆಳವಾಗಿ ಅಧ್ಯಯನ ನಡೆಸಿ, ತಮ್ಮ ಖಚಿತವಾದ  ಅನಿಸಿಕೆಗಳನ್ನು ವ್ಯಕ್ತಪಡಿಸಿರುವವರಲ್ಲಿ ಡಾ|| ಎಸ್. ಶ್ರೀಕಂಠಶಾಸ್ತ್ರಿಯವರು  ಮೊದಲಿಗರು. ಇವರ ಅಲೋಚನೆಯ ಜಾಡನ್ನು ಅನುಸರಿಸಿ, ಕೆ. ಅನಂತಸುಬ್ಬರಾಯರು ನೀಡಿದ ಮಾರ್ಗದರ್ಶನದಲ್ಲಿ  ಮುನ್ನಡೆದು, ಕಾವ್ಯದಲ್ಲಿ ಅಡಗಿರುವ ಅಂತರ್ಸಾಹಿತ್ಯವನ್ನು ಹೊರತೆಗೆದು, ಸಿರಿಭೂವಲಯದ ನಿಜವಾದ  ಅಂತರಂಗವನ್ನು ಪರಿಚಯಿಸುವ ಕಾರ್ಯದಲ್ಲಿ  ಸುಧಾರ್ಥಿಯು ಮೊದಲಿಗನೆಂಬುದು ನಿಜಕ್ಕೂ ಹೆಮ್ಮೆಯಸಂಗತಿಯಾಗಿದೆ.
ಸಿರಿಭೂವಲಯದ ವಿಚಾರವಾಗಿ ಸುಧಾರ್ಥಿಯು ಹೊಂದಿರುವ ಆಸಕ್ತಿಯ ಫಲವಾಗಿ ಈಗ ಸಿರಿಭೂವಲಯದ ಅಭಿಮಾನಿಗಳ ಸಂಖ್ಯೆ ಸಾಕಷ್ಟು ಬೆಳೆದಿದೆ.  ಬೆಳಗಾವಿಯ ಅಭಿಮನಿಯೊಬ್ಬರು ಅಲ್ಲಿನ ಭರತೇಶ ಶಿಕ್ಷಣಸಂಸ್ಥೆಗಳ ಸಮೂಹದ ವತಿಯಿಂದ ಸಿರಿಭೂವಲಯವನ್ನು ಓದುವ ಕ್ರಮ ಕುರಿತು ಆರು ದಿನಗಳ ಅವಧಿಯ ಒಂದು ಕಾರ್ಯಾಗಾರವನ್ನು ಯಶಸ್ವಿಯಗಿ ನಡೆಸಿದ್ದು ಒಂದು ಪ್ರಮುಖಸಂಗತಿ” ಎಂಬುದಾಗಿ ನಮೂದಿಸಿರುವ ಪ್ರೊ|| ಜಿ. ವಿ. ಅವರು  ಪ್ರತಿಯೊಂದು ವಿಚಾರವನ್ನೂ ಬಹಳ ಅಸಕ್ತಿಯಿಂದ ಗಮನಿಸಿ, ಅವುಗಳನ್ನೆಲ್ಲ ತಮ್ಮ ಮುನ್ನುಡಿಯಲ್ಲಿ  ಸಾಕಷ್ಟು ವಿವರವಾಗಿ ನಮೂದಿಸಿರುವುದು  ಗಮನಾರ್ಹವಾದ ಸಂಗತಿಯಾಗಿದೆ. ಆಸಕ್ತಿ ಇರುವವರು ಇದಕ್ಕೆ ಸಂಬಂಧಿಸಿದ ವಿವರಗಳನ್ನು siribhoovalayasaara.blogspot.in ನಲ್ಲಿ ವೀಕ್ಷಿಸಬಹುದು. ಅಥವಾ ಉಪಲಬ್ದವಿರುವ ಪರಿಚಯಕೃತಿಗಳನ್ನು  ದೂರವಾಣಿ ಸಂಖ್ಯೆ ೯೪೪೯೯೪೬೨೮೦ ಮೂಲಕ ಸಂಪರ್ಕಿಸಿ, ಸುಧಾರ್ಥಿಯಿಂದ ಮುಖತಃ ಉಚಿತವಾಗಿ ಪಡೆಯಬಹುದು.
೨೦೧೦ರಲ್ಲಿ ’ಸಿರಿಭೂವಲಯಸಾರ’ವು ಪ್ರಕಟವಾದಂದಿನಿಂದಲೂ ಸುಧಾರ್ಥಿಯು ಸಿರಿಭೂವಲಯದ ಸಂಶೋಧನೆಯಲ್ಲಿ ವಾಸ್ತವವಾಗಿರುವ ಕೆ. ಶ್ರೀಕಂಠಯ್ಯನವರ ಪ್ರಾಮುಖ್ಯತೆಯನ್ನು ಪ್ರತಿಪಾದಿಸುತ್ತ ಬಂದಿರುವುದಾಗಿದೆ. ಈ ಕಾರ್ಯಕ್ಕಾಗಿ ಅವರ ವಂಶದ ಉತ್ತರಾಧಿಕಾರಿಗಳು ಕೃತಜ್ಞರಲ್ಲವಾದರೂ ಸೌಹರ್ಧಮನೋಭಾವ ಹೊಂದಿರಬೇಕಾದುದು ಸಹಜ. ಆದರೆ, ಈ ಕುಟುಂಬದ ಇಂದಿನ ಹಿರಿಯರಾದ ಶ್ರೀ ಕೆ. ನಾಗೇಂದ್ರಕುಮಾರ್ ಎಂಬುವವರು ’ಸಿರಿಭೂವಲಯಸಗರರತ್ನಮಂಜೂಷವು’  ಲೋಕಾರ್ಪಣೆಗೊಂದ ತರುಣದಲ್ಲೇ  ’ಇದೊಂದು ಕೃತಿಚೌರ್ಯ’ ಎಂಬ ಒಂದು ಚುಟುಕು ಬರಹವನ್ನು ದಿನಪತ್ರಿಕೆಯೊಂದರಲ್ಲಿ ಪ್ರಕಟಿಸಿ, ತಮ್ಮ ಬುದ್ಧಿಯನ್ನು ತೋರಿಸಿಕೊಂಡರು!!  ೧೯೯೯ಕ್ಕೆ ಮೊದಲಿನಿಂದಲೂ ಪುಸ್ತಕಶಕ್ತಿಪ್ರಕಾಶನದವರು ಸಿರಿಭೂವಲಯದ ಸಂಶೋಧನೆಗೆ ಸಂಬಂಧಿಸಿದಂತೆ ಇಲ್ಲದ ಇತಿಹಾಸ ನಿರ್ಮಿಸಿ, ಶ್ರೀಕಂಠಯ್ಯನವರ ವಿದ್ವತ್ತಿಗೆ, ಅಪಚರಮಾಡುತ್ತಿದ್ದರೂ ತುಟಿಬಿಚ್ಚದಿದ್ದ ಈ ವಾರಸುದಾರರು ಇದ್ದಕ್ಕಿದ್ದಂತೆಯೇ ಸುಧಾರ್ಥಿಯವಿರುದ್ಧ ಪ್ರಚಾರಕ್ಕೆ ಕೈಹಾಕಿದ್ದು ಗಮನಾರ್ಹ ಸಂಗತಿಯಾಗಿದೆ.  ಕೆ.ಶ್ರೀಕಂಠಯ್ಯನವರು ಸಿದ್ಧಪಡಿಸಿರುವ, ಈ ವರಸುದರರಲ್ಲಿ ಸುರಕ್ಷಿತವಾಗಿರುವ ಸಿರಿಭೂವಲಯದ ಜನತಾಸಂಸ್ಕರಣವು  ರಾಷ್ಟ್ರಕವಿ ಎಂದು ಮನ್ನಣೆಪಡೆದ ಕುವೆಂಪು ಅವರಿಂದ ’ಇದು ವಿಶ್ವವಿದ್ಯಾಲಯದಿಂದ ಪ್ರಕಟವಾಗುವ ಅರ್ಹತೆ ಪಡೆದಿಲ್ಲ’ ಎಂದು ತಿರಸ್ಕೃತವಾಗಿ, ೬೦ ವರ್ಷಗಳಿಗೂ ಸಮಯದಿಂದ ಮುದ್ರಣವಾಗದೇ ಮೂಲೆಗುಂಪಾಗಿದೆ! ಇದರ ಪ್ರಕಟಣೆಗಾಗಿ ಸುಧಾರ್ಥಿಯು ಈ ’ವಾರಸುದಾರ’ ರಲ್ಲಿ ೨೦೧೦ರಿಂದಲೂ ಸತತವಾಗಿ ಮನವಿಸಲ್ಲಿಸಿದ್ದಗಿದೆ. ಆದರೂ ಅದು ಅವರ ಕಿವಿಕೆ ತಲುಪಿಲ್ಲ!! ಕೆ. ಶ್ರೀಕಠಯ್ಯನವರು ರೂಪಿಸಿರುವ ಈ ಜನತಾ ಸಂಸ್ಕರಣದಲ್ಲಿ ಸುಮರು ೨೫೦ ಕ್ಕಿಂತ  ಹೆಚ್ಚಿನ  ಅಧ್ಯಯಸಂಖ್ಯೆ ಇರುವ ಮಹಿತಿಯನ್ನು ಸುಧಾರ್ಥಿಯು  ಅವರ ಕರ್ಲಮಂಗಲದ ಮನೆಯಲ್ಲೇ ಪ್ರತ್ಯಕ್ಷವಾಗಿ ನೋಡಿದ್ದಿದೆ. ಪ್ರಥಮಖಂಡದಲ್ಲಿ ಇರುವುದು ೫೯ ಅಧ್ಯಾಯಗಳುಮಾತ್ರ. ಅಂದಮೇಲೆ ಈ ಜನತಾಸಂಸ್ಕರಣದಲ್ಲಿ ಎರಡನೇ ಖಂಡ ಹಾಗೂ ಅದಕ್ಕೂ ಮುಂದಿನ ಖಂಡಗಳ ಮೂಲಸಹಿತ್ಯವನ್ನು ಕುರಿತು ಕೆ. ಶ್ರೀಕಂಠಯ್ಯನವರು ಸಿರಿಭೂವಲಯದ ಮೂಲಪ್ರತಿಯಿಂದಲೇ ಸಂಗ್ರಹಿಸಿರುವುದಾಗಿದೆ.  ಅದನ್ನು ಯಾರೂ ’ಕೃತಿಚೌರ್ಯ’ ಎಂದು ಆರೋಪಿಸುವಂತಿಲ್ಲ. ಆದರೆ ಈ ವಿಧ್ವಾಂಸರ ವಾರಸುದಾರರುಮಾತ್ರ ಸುಧಾರ್ಥಿಯನ್ನು ಕೃತಿಚೌರ್ಯಮಾಡಿದ್ದಾನೆಂದು ಪ್ರಚಾರಮಾಡಬಹುದು!! ಇಂಥ ಅವಿವೇಕದ ಕಾರಣದಿಂದಾಗಿಯೇ ಸಿರಿಭೂವಲಯವು ಒಂದು ರೀತಿಯ ಶಾಪಕ್ಕೊಳಗಾಗಿದೆಯೆಂದು ಭಾವಿಸುವಂತಾಗಿದೆ.
 ಪರಿಚಯಕೃತಿಯ ಪರಿವಿಡಿಯನ್ನು ಗಮನಿಸಿದಾಗ ’ಕುಮುದೇಂದುಮುನಿಯ ಸಿರಿಭೂವಲಯ ಒಂದು ಶಾಪಗ್ರಸ್ತ ಗ್ರಂಥವೇ? ’ ಎಂಬ ಬರಹವು ಎರಡು ಸಲ ಸೇರಿದಂತೆ ಕಾಣುತ್ತದೆ. ಬರಹಗಳನ್ನು ಮುದ್ರಣಕ್ಕೆ ಸಂಗ್ರಹಿಸುವಲ್ಲಿ  ಸೂಕ್ತವಾಗಿ ಗಮನಿಸದೇ, ಈ ದೋಷವು ತಲೆಯೆತ್ತಿದಂತೆ ಕಾಣುತ್ತದೆ.
’ಭಗವಾನ್  ಶ್ರೀ ವೀರಸೇನಾಚಾರ್ಯೋಪದಿಷ್ಟ  ಸಿರಿ ಕುಮುದೇಂದುಮುನಿ ವಿರಚಿತ  ಸರ್ವಭಾಷಾಮಯೀಭಾಷಾ ಸಿರಿಭೂವಲಯ ಗ್ರಂಥದ ಪ್ರಥಮಖಂದ ೩೪ನೇ  ೨೨ ಓ ಅಧ್ಯಾಯ’ ದ ಮೂಲ ಅಕ್ಷರ ಅವತರಣಿಕೆಯೊಂದಿಗೆ  ಈ ಸರಳ ಪರಿಚಯವು ಪ್ರಾರಂಭವಾಗುತ್ತದೆ.  ಸಿರಿಭೂವಲಯ ಕಾವ್ಯದ ಮೂಲರೂಪವನ್ನು ಸುಂದರವಾಗಿ  ಮುದ್ರಿಸಿರುವುದರೊಂದಿಗೆ ಅದಕ್ಕೆ ಸಂಬಂಧಿಸಿದ ಅಂತರ್ಸಾಹಿತ್ಯವನ್ನು ಈಗಾಗಲೇ ಸೂಚಿಸಿರುವಂತೆ  ’ಅಶ್ವಗತಿ,  ಸ್ತಂಬಕಾವ್ಯ,  ಸರ್ಪಗತಿ ಹಾಗೂ ಜೋಡಿನಾಗರ ಬಂಧ ಕ್ರಮದಲ್ಲಿ ಉಗಮವಾಗುವುದನ್ನು ಪ್ರತ್ಯಕ್ಷವಾಗಿ ತೋರಿಸಲಾಗಿದೆ.  ಸಿರಿಭೂವಲಯಕಾವ್ಯಕ್ಕೆ ನೇರ ಸಂಬಂಧವಿಲ್ಲವಾದರೂ ಆನುಷಂಗಿಕವಾದ ಹಲವಾರು ವಿಚಾರಗಳನ್ನು  ಅಳವಡಿಸಿರುವುದು ಓದುಗರಿಗೆ ಹೆಚ್ಚಿನ ಉಪಯುಕ್ತವೆನಿಸುತ್ತದೆ.
ಸಾಕಷ್ಟು ದೊಡ್ಡದಾದ ಈ ಪರಿಚಯಕೃತಿಯ ಸಮಗ್ರಮಾಹಿತಿಯನ್ನೂ ಇಲ್ಲಿ ಪ್ರತ್ಯೇಕವಾಗಿ ವಿವರಿಸುವುದು ಕಾರ್ಯಸಾಧ್ಯವಿಲ್ಲದ್ದು. ಈ ಕಾರಣದಿಂದಾಗಿ ಅತಿ ಪ್ರಮುಖವೆನಿಸುವಂಥ ಒಂದು ಪ್ರಸಂಗವನ್ನು ಮಾತ್ರ ಇಲ್ಲಿ ಸೂಚಿಸುತ್ತಿದ್ದೇನೆ.
ಸಿರಿಭೂವಲಯಕಾವ್ಯದ ೩೭ ಹಾಗೂ ೩೮ನೇ  ಅಧ್ಯಾಯಗಳಲ್ಲಿ  ಪೂರ್ಣಪದ್ಯಗಳ ಎರಡನೇ ಪಾದದ ಮೊದಲನೇ ಅಕ್ಷರಗಳನ್ನು ಮೇಲಿನಿಂದ ಕೆಳಕ್ಕೆ ಸಾಗುತ್ತಾ ಜೋಡಿಸಿಕೊಂಡಾಗ:
”ಸವೆಸಿಣರಕ್ಷಣೇಯಿಂಅಹವವಾಗಲುಬಿಡದೆದುರ್ವರ್ಣದೆತಾಗುವಕ್ಋಷ್ಣನೀಲಗಳವಶಗೊಂಡುದ್ರವ್ಯಲೇಶ್ಯೆಗಳನುಭಾವದವಿಷಯಕೆಅಳವಡದಂತೆಕಸವನುರಸಮಾಡಿಕಸವರಲೋಹವೆಂಬಸಮಾನಋಕ್ಕುಭೂವಲಯವೇದಘೋಷಣೆಆದಿಸಿದ್ಧಾನ್ತವಓದುವಾ”(೩೮ನೇ ಅಧ್ಯಾಯದ ಇದೇ ಸ್ಥಾನದಲ್ಲಿ ಮುಂದುವರೆದಿದೆ)ಚಾರ್ಯನ ಪಾಠಕಾದಿನ ಬರುವಾಗ ಮಾಂಸ ಮೀನುಪ್ಪುಗಾಯಾದಿ ವ್ಯಾಪಾರವು ಸಲ್ಲ ಗರುವಗೊಟ್ಟಿಗನೂರು ಕೇರಿಯೊಳಿಲ್ಲದ ಸರುವಬಾಡನು ಬಿಟ್ಟಜಿನರು ಅರಹಂತ ರೂಪನಿಲ್ಲಿಯೆ ತೋರುವಗುರುವಿಂದು ಇರಬೇಕಾದವರ್ಗೆಲ್ಲ ಪತಮದಿಢವ್ರತದೊಳು ರಾಜದಂಡವನೆನೆಯ ” ಎಂಬ ಅಕ್ಷರಗಳ ಸರಪಣಿಯು ದೊರೆಯುತ್ತದೆ. ಇದನ್ನು ಕ್ರಮಬದ್ಧವಾಗಿ ಜೋಡಿಸಿಕೊಂಡಾಗ: ಸವೆಸಿಣ ರಕ್ಷಣೆಯಿಂ ಅಹವವಾಗಲುಬಿಡದೆ   ದುರ್ವರ್ಣದೆ ತಾಗುವ ಕೃಷ್ಣನೀಲಗಳ  ವಶಗೊಂಡು ದ್ರವ್ಯಲೇಶ್ಯೆಗಳನು  ಭಾವದ ವಿಷಯಕ್ಕೆ ಅಳವಡದಂತೆ ಕಸವನು ರಸಮಾಡಿ ಕಸವರಲೋಹವೆಂಬ ಅಸಮಾನಋಕ್ಕು ಭೂವಲಯ  ವೇದಘೋಷಣೆ ಆದಿ ಸಿದ್ಧಾಂತ ಓದುವಾಚಾರ್ಯನ ಪಾಠಕ್ಕೆಆದಿನ  ಬರುವಾಗ ಮಾಂಸ ಮೀನಿನುಪ್ಪುಗಾಯಿ ಇತ್ಯಾದಿ ವ್ಯಾಪಾರವು ಸಲ್ಲದು. ಗರುವ ಗೊಟ್ಟಿಗನೂರು  ಕೇರಿಯೊಳಿಲ್ಲದ ಸರುವಬಾಡನು ಬಿಟ್ಟ ಜಿನರು ಅರಹಂತರೂಪಮಿಲ್ಲಿಯೆ ತೋರುವಗುರುವಿಂದು ಇರಬೇಕಾದವರ್ಗೆಲ್ಲ  ಪ್ರತಮ ದೃಢವ್ರತದೊಳು ರಾಜದಂಡವ ನೆನೆಯ’ ಎಂಬುದಾಗಿ ಓದಬೇಕಾಗುತ್ತದೆ. ಈ ಎರಡೂ ಸಾಂಗತ್ಯ ಪದ್ಯಗಳನ್ನು ಅವುಗಳ ಸಮೀಪಕ್ಕೆ ಸೇರಿದಂತೆ ಅರ್ಥೈಸಿಕೊಂಡಾಗ :
ಸ್ಪಷ್ಟವಾದ ಮಾತುಗಳಲ್ಲಿ ವೇದವಾಕ್ಯಗಳು ಹಾಗೂ ಭೂವಲಯದ ದಿವ್ಯವಾಣಿ ಎರಡೂ ಒಂದೇ ಆಗಿರುದೆಂದೂ ಸೂಚಿಸಿ; ವೇದಜ್ಞಾನದ ಪ್ರಾಚೀನತೆಯನ್ನು ಕವಿಯು ಖಚಿತಪಡಿಸಿರುವುದನ್ನೂ,  ವೇದದ ಘೊಷಣೆಯಾಗಿರುವ ಅದಿಸಿದ್ಧಾಂತವನ್ನು ಓದುವ ಆಚಾರ್ಯನ  ಪಾಠಕ್ಕೆ ಆ ದಿನ ಬರುವಾಗ ಮಾಂಸ, ಮೀನಿನ ಉಪ್ಪುಗಾಯಿ ಇತ್ಯಾದಿ ವ್ಯಾಪಾರಗಳು ಸಲ್ಲವು.  ಗರುವಗೊಟ್ಟಿಗನೂರು ಕೇರಿಯಲ್ಲಿ ಇಲ್ಲದ ಎಲ್ಲರೀತಿಯ ಮಾಂಸಾಹಾರವನ್ನು ಬಿಟ್ಟ ಜೈನರು ಮೊದಲಿಗೆ ದೃಢವ್ರತವನ್ನಾಚರಿಸುವಲ್ಲಿ ರಾಜದಂಡನೆಯನ್ನು ನೆನಪುಮಾಡಿಕೊಳ್ಳಬೇಕು’  ಎಂದಿರುವುದನ್ನೂ ತಿಳಿಯಬೇಕಾಗುತ್ತದೆ.
ಗರುವ ಗೊಟ್ಟಿಗನೆಂದು ಖ್ಯಾತನಾಗಿದ್ದ ಸೈಗೊಟ್ಟ ಸಿವಮಾರನ ರಾಜ್ಯವು ಇಂದಿನ ತಲೆಕಾಡು; ಕೊಳ್ಳೆಗಾಲದ ಸುತ್ತಮುತ್ತಲಿನ ಪ್ರದೇಶ.  ಈ ರಾಜ್ಯದಲ್ಲಿ ಮಾಂಸಾಹಾರವು ನಿಷಿದ್ಧವಾಗಿತ್ತೆಂಬ ಒಂದು ಸಾಮಾಜಿಕ ಪರಿಸರದ ಚಿತ್ರಣವು ಇಲ್ಲಿ ಕಾಣಬರುತ್ತದೆ.  (ಮುಂದುವರೆಯುವುದು)
                                                             -ಜಮದಗ್ನಿಸುತ

No comments:

Post a Comment