Tuesday, 26 May 2020

ಸಿರಿಭೂವಲಯದ ಸರಳಪರಿಚಯಕೃತಿಗಳ ಸಮೀಕ್ಷೆ

***ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆ*** ಭಾಗ:೧೧

** ಜಗತ್ತಿನ ಹತ್ತನೇ ಅಚ್ಚರಿ**

ಸಿರಿಭೂವಲಯವನ್ನು ಕುರಿತಂತೆ ಸುಧಾರ್ಥಿಯು ರೂಪಿಸಿರುವ ಸರಳಪರಿಚಯಕೃತಿಗಳೆಲ್ಲವೂ ಒಂದೇ ವಿಚಾರಕ್ಕೆ ಸಂಬಂಧಿಸಿದವುಗಳು. ಅವುಗಳಲ್ಲಿರುವ ’ಪರಿವಿಡಿ’ಗಳನ್ನು ಗಮನಿಸಿದಾಗ, ಎಲ್ಲ ಕೃತಿಗಳಲ್ಲೂ ಒಂದೇ ಮಾಹಿತಿಯ ಚರ್ವಿತಚರ್ವಣವಾಗಿದೆ ಎಂದು ಭಾಸವಾಗಬಹುದು!  ಆದರೆ ವಾಸ್ತವಾವಾದ ಸಂಗತಿ ಹಾಗಿಲ್ಲ. ಈತ ರೂಪಿಸಿರುವ ೯ ಕೃತಿಗಳು ಹಾಗೂ ಅವುಗಳ ಹಿಂದೀ ಹಾಗೂ ಆಂಗ್ಲಾ ಭಾವಾನುವಾದವು ಸೇರಿದಂತೆ ಒಟ್ಟು ೧೧ ಪರಿಚಯಕೃತಿಗಳಲ್ಲಿ ಅಡಕವಾಗಿರುವ ಮಾಹಿತಿಗಳು ಮೇಲುನೋಟಕ್ಕೆ ವಿಚಾರಗಳ ಪುನರಾವರ್ತನೆಯಂತೆ ಕಾಣಿಸಿದರೂ, ಅವುಗಳನ್ನು ಆಸಕ್ತಿಯಿಂದ ಓದಿದರೆ, ಅಲ್ಲಿನ ಸ್ವಾರಸ್ಯವು ಅರ್ಥವಾದೀತು.
ಪ್ರತಿಯೊಂದು ಕೃತಿಯಲ್ಲೂ  ಅಲ್ಲಿನ ಪರಿಸರಕ್ಕೆ ಅಗತ್ಯವಾದಷ್ಟು ಮಾಹಿತಿಗಳನ್ನು ಮಾತ್ರ ಸೂಚಿಸಲಾಗಿರುತ್ತದೆ! ಈ ಕಾರಣದಿಂದ ಯಾವುದಾದರೊಂದು ವಿಚಾರದ ಬಗ್ಗೆ ಹೆಚ್ಚಿನ ವಿವರಗಳನ್ನು ಇಚ್ಛಿಸುವವರು ಅದನ್ನು ಬೇರೊಂದು ಕೃತಿಯಲ್ಲಿ ಗಮನಿಸಬೇಕಾಗುತ್ತದೆ.   ಪ್ರಕೃತ ಸಮೀಕ್ಷೆಗೆ ಬಂದಿರುವ ಈ ಜಗತ್ತಿನ ಹತ್ತನೇ ಅಚ್ಚರಿ ಎಂಬ ಕೃತಿಯು ಮೂಲತಃ ಆಂಗ್ಲಾ ಭಾವಾನುವಾದಕ್ಕಾಗಿ ಪ್ರತ್ಯೇಕವಾಗಿ ಸಿದ್ಧಪಡಿಸಿದ್ದು. ಆದರೂ ಇದು ಪ್ರತ್ಯೇಕವಾದ ಪುಸ್ತಕದ ರೂಪಪಡೆಯುವಲ್ಲಿ ಸಾಕಷ್ಟುಬದಲಾವಣೆಗಳಿಗೆ  ಒಳಗಾಗಿದೆ.
 ಈ ಕೃತಿಯ ’ಪರಿವಿಡಿ’ ಯನ್ನು ನೋಡಿದಾಗ, ಹಿಂದಿನ ಕೃತಿಗಳ ಪುನರಾವರ್ತನೆ ಎನಿಸುವುದು ಸಹಜ.  ಆದರೆ, ಕೆಲವೊಂದು ಮಾಹಿತಿಗಳ ವಿವರಗಳನ್ನು ಇಲ್ಲಿ ವಿಶಿಷ್ಟವಾದ ಕ್ರಮದಲ್ಲಿ ಅಳವಡಿಸಿರುವುದು ಗಮನಾರ್ಹ. ಎಲ್ಲದಕ್ಕಿಂತಲೂ ಮುಖ್ಯವಾದ ಮಾಹಿತಿಯೆಂದರೆ, ಸಿರಿಭೂವಲಯದ ’ಮಂಗಲಪ್ರಾಭೃತ’  ಎಂಬಹೆಸರಿನ ಪ್ರಥಮಖಂಡದ ೫೯ ಅಧ್ಯಾಯಗಳಿಗೆ ಸೇರಿದ ಸಂಕ್ಷಿಪ್ತ ಮಾಹಿತಿಯೂ ಒಂದೆಡೆಯಲ್ಲೇ  ಒದಗಿಬಂದಿರುವುದು ಕಾವ್ಯದ ವಸ್ತುವನ್ನು ಸ್ಥೂಲವಾಗಿ ತಿಳಿಯಬಯಸುವವರಿಗೆ ಉಪಯುಕ್ತವಾಗುತ್ತದೆ. ಇದೇ ರೀತಿಯಲ್ಲಿ  ಈ ಕಾವ್ಯಕ್ಕೆ ಸಂಬಂಧಿಸಿದ ಎಲ್ಲ ಪರಿಚಯಕೃತಿಗಳ ಪ್ರಮುಖ ವಿಚಾರಗಳೂ ಇಲ್ಲಿ  ಸಮಾವೇಶವಾಗಿವೆ. ಹೆಚ್ಚಿನ ಮಾಹಿತಿಗಳನ್ನು ಅಪೇಕ್ಷಿಸುವವರು ಉಳಿದ ಪರಿಚಯಕೃತಿಗಳನ್ನು ಅಧ್ಯನಮಾಡಬೇಕಾದುದು ಅನಿವಾರ್ಯ.
ಕೆಲವು ಗೆಳೆಯರ ಒತ್ತಾಯಕ್ಕೆ ಮಣಿದು ಈ ಕೃತಿಯನ್ನು ಪ್ರಕಟಿಸಲಾಯಿತೆಂಬುದು ಪರಿಚಯಕಾರನೆ ಹೇಳಿಕೆ.  ಸಿರಿಭೂವಲಯಕಾವ್ಯದ ವ್ಯಾಪಕವಾದ ಅಧ್ಯಯನ ಹಾಗೂ ಪ್ರಸಾರಕ್ಕೆ ಹೆಚ್ಚಿನ ಅವಕಾಶ ದೊರೆಯುವುದೆಂಬ ಭರವಸೆಯ ಕಾರಣದಿಂದ ರೂಪಿತವಾದ ಈ ಕೃತಿಯು ಧರ್ಮಸ್ಥಳದ ಕ್ಷೇತ್ರಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರಿಂದ ೨೦೧೫ ರಲ್ಲಿ ಕಾರ್ಕಳದಲ್ಲಿ ನಡೆದ  ಬಾಹುಬಲಿ ಸ್ವಾಮಿಯ ಮಹಾಮಜ್ಜನದ ಸಮಾರಂಭದಲ್ಲಿ  ಲೋಕಾರ್ಪಣೆಗೊಂಡಿತು.   ವ್ಯಾಪಕವಾದ ಪ್ರಚಾರದ ದೃಷ್ಟಿಯಿಂದ ಹಾಗೂ ಆರ್ಥಿಕ ದೃಷ್ಟಿಯಿಂದ ಈ ಕೃತಿಯ ಪ್ರಕಟಣೆಯು ಸಿರಿಭೂವಲಯಕಾವ್ಯದ ಮುಂದಿನ ಬೆಳವಣಿಗೆಗೆ ಮಹತ್ತರವಾದ ಮೆಟ್ಟಿಲಾಗುವುದೆಂಬ  ನಿರೀಕ್ಷೆಯಿಂದ  ಈ  ಪರಿಚಯಕೃತಿಯ ಪ್ರಕಟಣೆಗೆ ಶ್ರಮವಹಿಸಲಾಯಿತು.
 ಆದರೆ. ಕಾಣದ ಕೈಗಳ ಕೈಚಳಕದಿಂದ ಈ ಉದ್ದೇಶವು ಸಂಪೂರ್ಣವಾಗಿ ವಿಫಲವಾಯಿತು!! ಧರ್ಮಸ್ಥಳದವರ ಸೂಚನೆಯಂತೆ ರೂಪುಗೊಂಡಿದ್ದ ಈ ಕಾವ್ಯದ ವ್ಯಾಪಕ ಪ್ರಸಾರಕ್ಕೆ ಯೋಜಿತವಾಗಿದ್ದ ಯೋಜನೆಗಳೆಲ್ಲವೂ ಕೇವಲ ಬಾಯಿಮಾತಿನ ಚರ್ಚೆಯಲ್ಲೇ ಮುಕ್ತಾಯವಾದುವು! ಯಾವುದೇ ಕಾರ್ಯಕ್ರಮವೂ ನಡೆಯದೇ ಕಾವ್ಯವು ಮತ್ತೆ ಕತ್ತಲ ಕೋಣೆ ಸೇರುವಲ್ಲಿ ಯಶಸ್ವಿಯಾಯು!! ನಿರೀಕ್ಷಿಸಿದ ಆರ್ಥಿಕನೆರವು ದೊರೆಯದ ಕಾರಣ. ಸಿರಿಭೂವಲಯದ ಪ್ರಚಾರದ ಪ್ರಯತ್ನವು ನಿಲುಗಡೆಗೆ ಬಂದಿತೆಂದು ಕೆಲವರು  ಸಂಭ್ರಮಿಸಿದ್ದಾಯಿತು.  ಈ ಪ್ರಯತ್ನದಲ್ಲಿ ಸುಧಾರ್ಥಿಯು ಆರ್ಥಿಕವಾಗಿ ಯಾರನ್ನಾದರೂ ಆಶ್ರಯಿಸುವುದಾಗಿದ್ದರೆ, ಅವರ ಸಂಭ್ರಮಕ್ಕೆ ಅರ್ಥವಿರುತ್ತಿದ್ದುದು ನಿಶ್ಚಯ. ಆದರೆ, ಈ ಕಾರ್ಯಕ್ಕೆ ಕೈಹಾಕುವ ಮೊದಲೇ ಈತ ಇದು ತನ್ನ ಜೀವಿತದ ಮಹಾನ್ ಗುರಿ ಎಂದು ನಿರ್ಧರಿಸಿ ಕಾರ್ಯಾರಂಭ ಮಾಡಿದ್ದಕಾರಣ, ಈ ರೀತಿಯ ಆರ್ಥಿಕನೆರವಿನ ವಿಚಾರದಲ್ಲಿ ನಿರಾಶನಾಗುವ ಪ್ರಶ್ನೆಯೇ ಉದ್ಭವಿಸುವಂತಿಲ್ಲ!
ಇಲ್ಲಿನ ಮೂಲ ಗುರಿಯೆಂದರೆ, ಸಮಾಜದಲ್ಲಿ ಗಣ್ಯಸ್ಥಾನಮಾನ ಹೊಂದಿರುವವರ ಪ್ರಭಾವದಿಂದಾಗಿ ಈ ವಿಶ್ವಕಾವ್ಯದ ಮುಂದಿನ ೮ ಖಂಡಗಳ ಮಹಾನ್ ಸಾಹಿತ್ಯ ರಾಶಿಯು ಸುಮಾರು ೧೨೦೦ ವರ್ಷಗಳ ಅಜ್ಞಾತವಾಸದಿಂದ ಹೊರಬಂದು ಅದರಲ್ಲಿ ಅಡಗಿ ಕುಳಿತಿರುವ ಮಹೋನ್ನತವಾದ ಪ್ರಾಚೀನ ಸಾಹಿತ್ಯದ ಪ್ರಯೋಜನವು ಇಂದಿನ ಲೋಕಕ್ಕೆ ಸರಳವಾಗಿ ದೊರೆತು, ಈ ಕಾವ್ಯದ ಪ್ರಭೆಯು ಜಗತ್ತಿನದ್ಯಂತ ಪಸರಿಸಿ, ಕನ್ನಡದ ಹಿರಿಮೆಯು ಲೋಕವಿದಿತವಾಗಬೇಕೆಂಬ ಕನ್ನಡಾಭಿಮನವೊಂದೇ ಈ ಪ್ರಯತ್ನದ ಪ್ರಮುಖ ಗುರಿಯೇ ವಿನಃ. ಯಾರದೋ ಹಣವನ್ನು ತಂದು ಇಲ್ಲಿ ಸುರಿದು, ಅದರಿಂದ ಲಾಭ ಪಡೆದು ’ಕೃತಾರ್ಥ’ ನಾಗುವ ದುರುದ್ದೇಶವು ಈ ಪರಿಚಯಕಾರಿನಿಗೆ ಎಂದಿಗೂ ಇಲ್ಲದ್ದು. ಇದರ ಪರಿಚಯ ಬೇರೆಯವರಿಗಿಲ್ಲದಿರಬಹುದು. ಅದಕ್ಕಾಗಿ ಸಾಕಷ್ಟುಬರೆದು ತಿಳಿಸಿದ್ದಾಗಿದೆ.
ಘಟ್ಟದ ಕೆಳಗಿನ ’ದೇವರು’ ಈ ವಿಚಾರದಲ್ಲಿ ನಿಜವಾದ ಆಸಕ್ತಿ ಹೊಂದಿದ್ದರೆ, ಈ ಕಾವ್ಯದ ಪ್ರಸಿದ್ಧಿಯು ಈ ವೇಳೆಗೆ ಯಾವ ಪರಿಧಿಯಲ್ಲಿರುತ್ತಿತ್ತೆಂಬುದು ಊಹಾತೀತವಾದುದು. ಅಂದಮಾತ್ರಕ್ಕೇ ಈವ್ಯಕ್ತಿಯು ’ಪ್ರಸಿದ್ಧಿಗಾಗಿ’ ಈ ಪ್ರಯತ್ನದಲ್ಲಿ ಲೀನವಾಗಿದ್ದಾನೆಂದು ಭಾವಿಸಬೇಡಿ. ಜಗತ್ತಿನಲ್ಲಿ ಇದುವರೆವಿಗೆ ತಮ್ಮದೇ ಆದ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಸಾಧನೆಮಾಡಿ, ಸಿದ್ಧಿಪಡೆದವರು ಸಾವಿರಾರು ಜನಗಳಿದ್ದಾರೆ! ಅವರಾರು ಈ ರೀತಿಯ ಪ್ರಸಿದ್ಧಿಗಾಗಿ ಹಂಬಲಿಸಿದವರಲ್ಲ!! ಅಂಥವರಿಗೆ ಈಗ ಯಾವುದೇ ಪ್ರಸಿದ್ಧಿಯೂ ಉಳಿದುಬಂದಿಲ್ಲ!! ಹಾಗಿರುವಲ್ಲಿ  ಸಾಮಾನ್ಯ ಸ್ತರದ ಈ ಪರಿಚಯಕಾರನು ಹೊಂದಬಹುದಾದ ಸಂಪತ್ತು, ಪ್ರಸಿದ್ಧಿ ಯಾವಮಟ್ಟದಿರಲು ಸಾಧ್ಯ!?  ಅದಕ್ಕಾಗಿ ಈತ ಹಂಬಲಿಸಿಯೂ ಇಲ್ಲ.
ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ೨೦೧೫ರಲ್ಲಿ ಪ್ರಕಟವಾಗಿರುವ ’ಜಗತ್ತಿನ ಹತ್ತನೇ ಅಚ್ಚರಿ’ ಎಂಬ  ಈ ಪರಿಚಯಕೃತಿಯು ಡೆಮಿ ೧/೮ ಅಳತೆಯ ಸುಮಾರು ೫೩೮ ಪುಟಗಳ ವ್ಯಾಪ್ತಿಯಲ್ಲಿದೆ. ಇದರಲ್ಲಿನ ’ಪರಿವಿಡಿಯ’ ಪ್ರಮಾಣವೇ ಸುಮಾರು ಮೂರೂವರೆ ಪುಟಗಳ ವ್ಯಾಪ್ತಿಯಲ್ಲಿದೆ! ಈ ಕಾರಣದಿಂದಾಗಿ ಈ ಸಮೀಕ್ಷೆಯಲ್ಲಿ ಅವುಗಳ ಶಿರೋನಾಮೆಯನ್ನು ಸೂಚಿಸುವುದೂ ಸಾಧ್ಯವಿಲ್ಲ.  ಸಿರಿಭೂವಲಯ ಕಾವ್ಯ ಹಾಗೂ ಅದರ ಸರಳಪರಿಚಯಕೃತಿಗಳಿಗೆ ಸಂಬಂಧಿಸಿದ ಒಂದೆರಡು ಪ್ರಮುಖ ಮಾಹಿತಿಗಳನ್ನು ಮಾತ್ರ ಇಲ್ಲಿ ಸೂಚಿಸಬಯಸುತ್ತೇನೆ.
 ಷಟ್ಖಂಡಾಗಮವೆಂದು  ಪ್ರಚಲಿತವಿರುವ  ಜೀವಟ್ಠಾಣ, ಖುದ್ಧಾಬಂದ,  ಬಂಧಸಮಿತ್ತವಿಚಯ, ವೇದಣ; ವಗ್ಗಣ, ಮಹಾಬಂಧ ಎಂಬ ಪ್ರಾಚೀನ ಗ್ರಂಥಗಳು  ಜೈನಸಂಪ್ರದಾಯದ ಅಡಿಗಲ್ಲುಗಳು. ಇವು ಪ್ರಾಕೃತಭಾಷೆಯಲ್ಲಿವೆ.  ಇವುಗಳಿಗೆ  ’ಧವಲ, ಜಯಧವಲ, ಮಹಾಧವಲ, ಜಯಶೀಲಧವಲ, ಅತಿಶಯಧವಲ, ವಿಜಯಧವಲ ಎಂಬ ವ್ಯಾಖ್ಯಾನಗಳನ್ನು ವೀರಸೇನಾಚಾರ್ಯನು ರಚಿಸಿರುವನೆಂದು ಕುಮುದೇಂದುವಿನ ಅಭಿಪ್ರಾಯವಿರಬಹುದು’ ಎಂಬುದಾಗಿ ಡಾ|| ಎಸ್. ಶ್ರೀಕಂಠಶಾಸ್ತ್ರಿಯವರು  ಸೂಚಿಸಿರುವುದುಂಟು.  ಆದರೆ, ಭೂತಬಲಿಯು ಮಹಾಧವಲವನ್ನೂ, ವೀರಸೇನನು ಧವಳಗದ್ಯಟೀಕೆಯನ್ನೂ,  ಜಿನಸೇನನು ಜಯಧವಲವನ್ನೂ ರಚಿಸಿರುವರೆಂಬ  ವಿಚಾರ ಪ್ರಚಲಿತವಿದೆ.
ಸಮಂತಭದ್ರ,  ಗುಣಭದ್ರ, ಉಗ್ರಾದಿತ್ಯ, ವೀರಸೇನ, ಪೂಜ್ಯಪಾದ, ಇಂದ್ರನಂದಿ, ಜಿನಸೇನ ಮುಂತಾದ ಪೂರ್ವಕವಿಗಳ ಹೆಸರನ್ನೂ;   ಬೃಹತ್ಸ್ವಯಂಭೂಸ್ತೋತ್ರ, ಪಾತ್ರಕೇಸರೀಸ್ತೋತ್ರ,  ಉತ್ತರಪುರಾಣ, ಕಲ್ಯಾಣಕಾರಕ, ಜಯಧವಲಟೀಕೆ, ತಿಲೋಯಪಣ್ಣತ್ತಿ, ಇಷ್ಟೋಪದೇಶ,  ಸಮಯಭೂಷಣ,  ನೀತಿಸಾರ, ಆದಿಪುರಾಣ, ಸಹಸ್ರನಾಮ ಸ್ತೋತ್ರ, ಇಂದ್ರಾಕ್ಷೀಸ್ತೋತ್ರ, ವಡ್ಡಾರಾಧನೆ,  ಕಮ್ಮಡ ಸಕ್ಕದ ಪಾಹುಡಗೀತಾ, ಜಯಾಖ್ಯಾನಾಂತರ್ಗತ ಭಗವದ್ಗೀತಾ, ಗಂಧಹಸ್ತಿಮಹಾಭಾಷ್ಯ, ಪಂಚಭಾಷೆಗಳ ಭಗವದ್ಗೀತಾ ವ್ಯಾಖ್ಯಾನ, ಋಗ್ ಮಹಾಬಂಧ  ಮುಂತಾದ ಹಲವಾರು  ಪ್ರಾಕೃತ ಸಂಸ್ಕೃತ ಹಾಗೂ ಕನ್ನಡದ ಪ್ರಾಚೀನ ಕೃತಿಗಳನ್ನು ಸಿರಿಭೂವಲಯದ ಪ್ರಥಮಖಂಡದಲ್ಲಿಯೇ  ಹೆಸರಿಸಿರುವುದಿದೆ! ಅಷ್ಟೇ ಅಲ್ಲ, ಅವುಗಳಲ್ಲಿ ಕೆಲವು ಸಾಹಿತ್ಯ ಪಾಠಗಳೂ ಈಗಾಗಲೇ ಲಭ್ಯವಾಗಿರುವುದನ್ನೂ ಪ್ರತ್ಯಕ್ಷವಾಗಿ ಕಾಣಬಹುದು. ಆದರೂ ನಮ್ಮ ಮೇಧಾವಿ ವಿದ್ವಾಂಸರು  ’ಸಿರಿಭೂವಲಯದಲ್ಲಿ ಏನೂ ಇಲ್ಲ, ಎಲ್ಲವೂ ವೈಭವೀಕೃತವಾದ  ಮಾಹಿತಿಗಳು’ ಎಂದು ಅನುಚಿತವಾಗಿ ವಾದಿಸುವುದು ಮುಂದುವರೆದಿದೆ!!!                ಪುಸ್ತಕಶಕ್ತಿ ಪ್ರಕಾಶನದ ಸಿರಿಭೂವಲಯದ ಪರಿಷ್ಕೃತ ಮರುಮುದ್ರಣದಲ್ಲಿ ಮುನ್ನುಡಿ ಬರೆದಿರುವ  ಪ್ರೊ. ಜಿ ವೆಂಕಟಸುಬ್ಬಯ್ಯನವರು  ಸಿರಿಭೂವಲಯವನ್ನು ಒಂದು  ಚಿತ್ರಕಾವ್ಯ ಎಂದಿದ್ದಾರೆ!  ಈ ಚಿತ್ರಕಾವ್ಯವನ್ನು ಅಲಂಕಾರಿಕರು ಸಾಮಾನ್ಯವಾಗಿ ಕ್ಷುದ್ರವೆಂದೇ ಭಾವಿಸಿದ್ದರು ಎಂದೂ ಇವರು ಸೂಚಿಸಿದ್ದಾರೆ. ಅಂಕಿಗಳನ್ನೊಳಗೊಂಡ ಚೌಕಾಕೃತಿಯನ್ನು  ಚಿತ್ರವೆಂದು ಪರಿಗಣಿಸಿ, ಚಿತ್ರಕಾವ್ಯ ಎಂದು ಸೂಚಿಸಿದ್ದಲ್ಲಿ ಸರಿಯೆಂದು ಒಪ್ಪಬಹುದಿತ್ತು.ಆದರೆ ಯಾವ ಕಾರಣಕ್ಕೂ ಸಿರಿಭೂವಲಯವು ಕ್ಷುದ್ರಕಾವ್ಯವಾಗಲಾರದು. ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ಇದೊಂದು ಅನುಚಿತವಾದ ಹೇಳಿಕೆಯೆಂದೇ ಭಾವಿಸಬೇಕಾದೀತು. ಪ್ರೊ. ಜಿ.ವಿ ಅವರು ಮುಂದುವರೆದು .. ಒಂದು ಕಾಲದಲ್ಲಿ ಚಿತ್ರಕಾವ್ಯಗಳೇ ಪ್ರಧಾನವಾಗಿ  ರಸವತ್ಕಾವ್ಯಗಳಿಗೆ  ಗೌರವ ಕಡಿಮೆಯಾದದ್ದೂ ಉಂಟು ಎಂದು ಚಿತ್ರಕಾವ್ಯದ ಮಹತ್ವವನ್ನು ಸೂಚಿಸಿದ್ದಾರೆ.
ತೆಲುಗುಭಾಷೆಯಲ್ಲಿ  ಚಿತ್ರಕಾವ್ಯದ ಬೆಳೆ ಹೆಚ್ಚು. ಕನ್ನಡಚಿತ್ರಕಾವ್ಯಗಳು ಬರುವುದಕ್ಕೆ ಸಂಸ್ಕೃತಕ್ಕಿಂತಲೂ ತೆಲುಗು ಪ್ರಭಾವವೇ ಹೆಚ್ಚಾಗಿದ್ದಿತು ಎನ್ನಬೇಕು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಈ ಪ್ರಭಾವ ಕನ್ನಡಮೇಲೆ  ಹೆಚ್ಚಾಗಿ ಆಗಿರಬೇಕು. ಎಂದೂ ಸೂಚಿಸಿದ್ದಾರೆ. ಇವರು ಯಾವುದೇ ಮೂಲ ಉದ್ದೇಶದಿಂದ ಈ ಚಿತ್ರಕಾವ್ಯದ ವಿಚಾರವನ್ನು  ಇಲ್ಲಿ ಸೂಚಿಸಿರಬಹುದು. ಆದರೆ, ಸಾಮಾನ್ಯ ಸಾಹಿತ್ಯಸಕ್ತರಿಗೆ  ಈ ವಾಕ್ಯವನ್ನು ಓದಿದಾಗ, ಸಿರಿಭೂವಲಯವು ಒಂದು ಚಿತ್ರಕಾವ್ಯ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ತೆಲುಗಿನ ಪ್ರಭಾವದಿಂದ ಇದು ರಚನೆಯಾಗಿದೆ ಎಂಬ ತಪ್ಪು ಕಲ್ಪನೆಯನ್ನೇ ಉಂಟುಮಾಡುವುದು ಖಚಿತ.
 ಇದೇ ವಿಚಾರವನ್ನೇ ಮುಂದುವರೆಸಿ, ಮುನ್ನುಡಿಕಾರರು ಕನ್ನಡದಲ್ಲಿಯೂ ರಚಿತವಾದ ಚಿತ್ರ ಕಾವ್ಯಗಳು ಬೇಕಾದಷ್ಟಿವೆ. ತೆಲುಗಿನಷ್ಟಿಲ್ಲ. ವೇಶ್ಯಾವಾಟಿಕೆಗಳ ವರ್ಣನೆಯಲ್ಲಿ ಮುಖ್ಯವಾಗಿ ಎದ್ದುಕಾಣುವ ಪದಿರುನುಡಿ ಚದುರುನುಡಿ (ಪದಿರ್ ನುಡಿ, ಚದುರ್ನುಡಿ) ಗಳಲ್ಲದೇ ಇತರಕಾವ್ಯಗಳೂ ಉಂಟು. ಈಬಗ್ಗೆ  ಆಳವಾಗಿ ಅಭ್ಯಾಸಮಾಡಿದ ಉದಹರಣೆಗಳಿಲ್ಲ. ಡಾ|| ಟಿ.ವಿ.ವಿ ಅವರ ಕನ್ನಡಚಿತ್ರಕಾವ್ಯವು ಅಪೂರ್ವವಾದ  ಮಾಹಿತಿಗಳಿಂದ ಕೂಡಿದ ಗ್ರಂಥ. ಅದರಲ್ಲಿ ಕನ್ನಡಚಿತ್ರಕಾವ್ಯಗಳ ಚಕ್ರಬಂಧಗಳ ದೀರ್ಘವಾದ ಪರಿಶೀಲನೆ ನಡೆದಿದೆ. ಹಾಗೆ ನೋಡಿದರೆ ಅದೊಂದೇ ಎದ್ದುಕಾಣುವ ಗ್ರಂಥ ಕನ್ನಡದಲ್ಲಿ  ಎಂದು ಸೂಚಿಸಿದ್ದಾರೆ. ಇದು ನಿಜವೂ ಇರಬಹುದು.
 ಸಿರಿಭೂವಲಯದಲ್ಲಿ ಬಂಧ, ಚಕ್ರಬಂಧ, ಎಂಬ ಶಬ್ದಗಳು ಬರುತ್ತವೆ ನಿಜ. ಆದರೆ, ಟಿವಿವಿ ಯವರ ಕನ್ನಡ ಚಿತ್ರಕಾವ್ಯಕ್ಕೂ ಸಿರಿಭೂವಲಯಕ್ಕೂ  ಯಾವುದೇ ಸಂಬಂಧವಿಲ್ಲ!! ಆದರೂ  ಈ ಗ್ರಂಥದ ಪುನರುತ್ಥಾನಕ್ಕೆ ಸಂಬಂಧ ಪಟ್ಟವರೆಲ್ಲರೂ ತಮ್ಮ ಅನಿಸಿಕೆಗೆ ಅನುಗುಣವಾಗಿ ಇಲ್ಲದ ಬಾದರಾಯಣ ಸಂಬಂಧಗಳನ್ನು ಕಲ್ಪಿಸಲು ಪ್ರಯತ್ನಿಸಿದ್ದಾರೆಂದು ಮಾತ್ರ ಇಲ್ಲಿ ಸೂಚಿಸಬಹುದು.  ಎಂದು ಪರಿಚಯಕಾರನು ಬಹಳ ನಿಷ್ಠೂರವಾಗಿ ವಿಶ್ಲೇಷಿಸಿರುವುದನ್ನು ಓದುಗರು ಗಮನಿಸಬಹುದು.  ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ಪುಸ್ತಕಶಕ್ತಿ ಪ್ರಕಾಶನಕ್ಕೆ ನೆರವಾಗಿರುವ ವಿದ್ವಾಂಸರೆಲ್ಲರ ಅಸಂಬದ್ಧವಾದ ಅನಿಸಿಕೆಗಳಿಗೂ ಈ ಸರಳಪರಿಚಯಕಾರನು ಇಷ್ಟು ಮಾತ್ರವೇಅಲ್ಲ; ಇದಕ್ಕಿಂತ ಹೆಚ್ಚು ತೀವ್ರವಾದ ಅನಿಸಿಕೆಗಳನ್ನು ಸೂಚಿಸಿರುವುದಿದೆ.
ಪ್ರಿಯ ಓದುಗರೇ, ’ಸಿರಿಭೂವಲಯಸಾಗರರತ್ನಮಂಜೂಷ’ಕ್ಕೆ ಪ್ರೊ. ಜಿ.ವಿ ಯವರು ಬರೆದಿರುವ ವಿಸ್ತಾರವಾದ, ಮಾಹಿತಿಗಳ ವಿಶ್ಲೇಷಣಾತ್ಮಕವಾದ ಮುನ್ನುಡಿಯನ್ನು ನೀವು ಈಗಾಗಲೇ ನೋಡಿರುವಿರಿ.  ತಮ್ಮ ವಿರುದ್ಧವಾಗಿ ಇಷ್ಟು ನಿಷ್ಠುರವಾದ ಅನಿಸಿಕೆಗಳನ್ನು ವ್ಯಕ್ತಪಡಿಸಿರುವ ಈ ಸಿರಿಭೂವಲಯದ ಸರಳಪರಿಚಯಕಾರನ ವಿಚಾರವಾಗಿ; ಸಿರಿಭೂವಲಯ ಕಾವ್ಯದಲ್ಲಿ ಅಂತರ್ಗತವಾಗಿರುವ ಮಹತ್ತರವಾದ ಮಾಹಿತಿಗಳ ವಿಚಾರವಾಗಿ,  ಅವುಗಳನ್ನು ಕ್ರಮಬದ್ಧವಾಗಿ, ವ್ಯವಸ್ಥಿತವಾಗಿ ಶ್ರಮವಹಿಸಿ ನೀಡಿರುವ ಸರಳ ಪರಿಚಯ ಕುರಿತು ಫ್ರೊ. ಜಿ.ವಿ ಯವರು ಹೊಂದಿರುವ ವಿಶಾಲ ಹೃದಯವಂತಿಕೆಯನ್ನು ಗಮನಿಸಲು ಅವಕಾಶವಾಗಲೆಂಬ ಕಾರಣಕ್ಕಾಗಿ ಈ ಭಾಗವನ್ನು ಇಲ್ಲಿ  ಅಳವಡಿಸಿದ್ದೇನೆ.
*  *  *
ಮೂಲತಃ ಸುಧಾರ್ಥಿಯು ಅದ್ವೈತಸಂಪ್ರದಾಯದ ಕುಟುಂಬದಲ್ಲಿ ಹುಟ್ಟಿದವನು. ಅದ್ವೈತಿಗಳಿಗೆ  ಜಗತ್ತೆಲ್ಲವೂ ಒಂದೇ. ಅದರಲ್ಲಿ ಎರಡನೆಯದೆಂಬುದೆನಿಲ್ಲ. ಅಂದಮೇಲೆ ಸುಧಾರ್ಥಿಗೂಕೂಡ  ಈ ಅಚ್ಚರಿಯ ಕಾವ್ಯಕ್ಕೆ ಸಂಬಂಧಿಸಿದವರೆಲ್ಲರೂ ನನ್ನವರೇ; ನಾನೇ ಆಗಿದೆ! ಸರ್ವಶಕ್ತನಾದ ಭಗವಂತನಾಗಲೀ; ಸರ್ವಜ್ಞಸ್ವರೂಪಿಯಾದ ಕುಮುದೇಂದು ಮುನಿಯಾಗಲೀ, ಸಿರಿಭೂವಲಯವನ್ನು ಅಧುನಿಕ ಕನ್ನಡಕ್ಕೆ ಪರಿಚಯಿಸಿದ ಕೆ. ಶ್ರೀಕಂಠಯ್ಯನವರಾಗಲೀ, ಇವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ ಡಾ|| ಎಸ್. ಶ್ರೀಕಂಠಶಾಸ್ತ್ರಿಯವರಾಗಲೀ, ಈ ಕಾರ್ಯವನ್ನು ನಾನುಮಾಡಿದೆನು ಎಂದು ಹೇಳಿಕೊಂಡು ಪ್ರಚಾರಮಾಡಿಕೊಂಡಿದ್ದ ಯಲ್ಲಪ್ಪಶಾಸ್ತ್ರಿಯವರಾಗಲೀ, ಅವರಪುತ್ರ ಧರ್ಮಪಾಲರಾಗಲೀ, ಇವರ ಸಹಯೋಗಿಗಳಾದ ಪುಸ್ತಕಶಕ್ತಿಯ  ಪ್ರಕಾಶಕರಾಗಲೀ , ಇವರ ಸಂಯುಕ್ತ ಪ್ರಯತ್ನಕ್ಕೆ ಬೆಂಬಲವಾಗಿ ನಿಂತ ವಿದ್ವಾಂಸರ ತಂಡವಾಗಲೀ ನನ್ನಿಂದ ಬೇರೆಯಾದುದಲ್ಲ ಎಂಬ ಪಾರಮಾರ್ಥಿಕ ವಿವೇಕ ಸುಧಾರ್ಥಿಗಿರುವುದನ್ನು ಅವರ ಬರಹದಲ್ಲಿ ಕಾಣಬಹುದು.  ಆದರೆ, ಲೌಕಿಕವಾಗಿ ಆಗಿರುವ ಒಪ್ಪು- ತಪ್ಪುಗಳನ್ನು, ಪ್ರಮಾದಗಳನ್ನೂ ಗುರುತಿಸಿ ತೋರಿಸುವುದು  ತನ್ನ ಕರ್ತವ್ಯವೆಂದು ಈತ ಭಾವಿಸಿದ್ದಾನೆ. ಯಾರಮನಸ್ಸನ್ನೂ ನೋಯಿಸುವ  ಅಥವಾ ಅವಹೇಳನ ಮಾಡುವ ಉದ್ದೇಶ ತನ್ನದಲ್ಲವೆಂದೂ ಈತ ಸ್ಪಷ್ಟಪಡಿಸಿರುವುದಿದೆ.
*  *  *
ಕನ್ನಡನಾಡಿಗೆ ಕರ್ನಾಟಕ ಎಂಬ ಹೆಸರು ಬರಲು ಮೂಲಕಾರಣವನ್ನು ಕುರಿತು  ಕನ್ನಡ ವಿದ್ವಾಂಸರು  ಹಿಂದಿನಿಂದಲೂ ತಲೆ ಕೆಡಿಸಿಕೊಂಡು ಹಲವಾರು ಊಹಾಪೋಹಗಳನ್ನು  ನಿರೂಪಿಸಿರುವುದಿದೆ! ಆದರೆ, ಇಂಥ  ವಿದ್ವಾಂಸರುಗಳು ಯಾರೂ ಒಪ್ಪದಿರುವ ಖಚಿತವಾದ ಮಾಹಿತಿಯನ್ನು  ಕುಮುದೇಂದು ಮುನಿಯು ಸೂಚಿಸಿರುವುದಿದೆ!! ಕರ್ಮವೆಂದರೆ, ಈ ಜನ್ಮದಲ್ಲಿ ನಡೆಸುವ ಕ್ರಿಯೆ ಎಂದು ಮಾತ್ರ  ಅರ್ಥವಲ್ಲ.  ನಮ್ಮ ಪ್ರಕೃತ ಜೀವನದ  ಸುಖ ದುಃಖಗಳಿಗೆ ಕಾರಣವಾಗುವ ಪೂರ್ವಜನ್ಮದ ಕೃತ್ಯ ಎಂದೂ ಅರ್ಥವಿದೆ.  ಇದನ್ನು ಪ್ರಾಚೀನಕರ್ಮ ಎಂದು ಸೂಚಿಸಲಾಗುತ್ತದೆ.
 ಜೈನ ಸಂಪ್ರದಾಯದಲ್ಲಿ  ಕರ್ಮಾಷ್ಟಕವೆಂದರೆ, ಮೋಕ್ಷಸಂಪಾದನೆಯ ದಿಸೆಯಲ್ಲಿ  ಅಡ್ಡಿಪಡೆಸುವ ಎಂಟು ರೀತಿಯ ಕರ್ಮಗಳೆಂದು ಅರ್ಥ.  ಜ್ಞಾನಾವರಣೀಯ, ದರ್ಶನಾವರಣೀಯ, ವೇದನೀಯ, ಮೋಹನೀಯ, ಅಂತರಾಯ, ಆಯು, ನಾಮ, ಗೋತ್ರ ಎಂಬುವೇ ಈ ಎಂಟು ಕರ್ಮಗಳು.  ಈ ರೀತಿಯ ಅಷ್ಟಕರ್ಮಗಳನ್ನು  ನಷ್ಟಮಾಡುವ ಕ್ರಿಯೆಯನ್ನು ನಡೆಸಿದ ಕೃಷ್ಣನು  ಕನ್ನಡದ ಅಂಕಾಕ್ಷರಗಳ ಮಹತ್ವವನ್ನು ಅರ್ಜುನನಿಗೆ ಸೂಚಿಸಿದ್ದಿದೆ. ಈ ರೀತಿಯ ಅಷ್ಟಕರ್ಮಗಳನ್ನು  ಸತತವಾಗಿ ನಷ್ಟಮಾಡುವಕ್ರಿಯೆಯು ನಡೆಯುವ ಪ್ರದೇಶವು ಕರ್ಮಾಟಕವೆನಿಸುತ್ತದೆ. ಇದೇ ಕರ್ಮಾಟಕವಾಗಿ, ಕರ್ನಾಟಕವಾಗಿ, ಕರ್ಣಾಟಕವಾಗಿರುವುದು ಸಹಜವಾಗಿದೆ. ಕರ್ಮವರ್ಗಣೆಯಾಟ ಕರ್ಮಾಟ. ಜನ್ಮ ಜನ್ಮಾಂತರಗಳಿಂದ ಆತ್ಮಕ್ಕೆ ಅಂಟಿಬಂದ ಕರ್ಮವನ್ನು ಕಳೆದುಕೊಂಡು,  ಆತ್ಮವನ್ನು ಪರಿಶುದ್ಧಗೊಳಿಸಿ ಕೊಂಡು, ಸಾಯುಜ್ಯಮೋಕ್ಷವನ್ನು ಪಡೆಯಲು ನೆರವಾಗುವ ಪ್ರದೇಶವೇ ಕರ್ಮಾಷ್ಟಕವಾಗಿ, ಕರ್ನಾಟಕವಾಗಿ, ಕರ್ಣಾಟಕವಾಗಿ ಬೆಳೆದು ಬಂದಿದೆ!!
*  *  *
ಜ್ಞಾನಪೀಠಪ್ರಶಸ್ತಿಯು ಭಾರತೀಯ ಸಾಹಿತ್ಯ ಪರಿಸರದಲ್ಲಿ ಪ್ರತಿಷ್ಠಿತ ಪುರಸ್ಕಾರವಾಗಿದೆ.  ಇದನ್ನು ಪಡೆದವರಲ್ಲಿ ಕನ್ನಡಿಗರದೇ  ಸಿಂಹಪಾಲು ಎಂಬ ಸಂಗತಿಯು ಸರ್ವವೇದ್ಯ. ಆದರೆ, ಈ ಪ್ರಶಸ್ತಿಯು ಸ್ಥಾಪನೆಯಾಗುವುದಕ್ಕೆ ಮೊದಲೇ, ಇದರ ಸಂಸ್ಥಾಪಕ ಕಲ್ಕತ್ತೆಯ ಕೋಟ್ಯಾಧಿಪತಿ ಶಾಂತಿಪ್ರಸಾದ್ ಜೈನ್ ಅವರಿಂದ ಈ ಪ್ರಶಸ್ತಿಯನ್ನೂ ಮೀರಿದ ಪುರಸ್ಕಾರವು ಸಿರಿಭೂವಲಯದ ಶ್ರೀಕಂಠಯ್ಯನವರಿಗೆ  ಸಂದಿತ್ತು! ಅದನ್ನವರು ನಿರಪೇಕ್ಷ  ಮನೋಭಾವದಿಂದ ನಿರಕರಿಸಿದ್ದರು ಎಂಬ ಸಂಗತಿಯುಮಾತ್ರ ಹೆಚ್ಚು ಪ್ರಚಾರಕ್ಕೆ  ಬರಲೇ ಇಲ್ಲ!!  ಸಿರಿಭೂವಲಯದ ವಿಚಾರವಾಗಿ  ಮಹಾನ್ ಜ್ಞಾನಿಯಾಗಿದ್ದ ಶ್ರೀಕಂಠಯ್ಯನವರು ತಮ್ಮಿಂದ ಯಾವುದೇ ಪುರಸ್ಕಾರವನ್ನೂ ಪಡೆಯಲು ಸಮ್ಮತಿಸದಿದ್ದಾಗ, ’ಭಾರತದಲ್ಲಿರುವ  ಇಂಥ ಮಹಾನ್ ಜ್ಞಾನಿಗಳಿಗೆ ಮುಂದಾದರೂ ಸೂಕ್ತವಾದ ಪುರಸ್ಕಾರ ದೊರೆಯುವಂತಾಗಲೀ ಎಂಬ ಮಹತ್ವಾಕಾಂಕ್ಷೆಯು  ಶಾಂತಿಪ್ರಸಾದ್ ಜೈನ್ ಅವರ ಆಂತರ್ಯದಲ್ಲಿ ಅಂಕುರಿಸಿದ ಫಲವೇ ಇಂದಿನ ಭಾರತೀಯ ಜ್ಞಾನಪೀಠ ಪ್ರಶಸ್ತಿಯ ಮೂಲಕಾರಣವೆಂಬ ಅಚ್ಚರಿಯ ಸಂಗತಿಯನ್ನು ’ಸಿರಿಭೂವಲಯಸಾರ’ದಲ್ಲಿ ಓದುಗರು ವಿವರವಾಗಿ ಕಾಣಬಹುದು. ಪ್ರಶಸ್ತಿ, ಪುರಸ್ಕಾರಗಳು ತಾವಾಗಿಯೇ ಬರುವಂತಿರಬೇಕೆ ವಿನಃ ; ತಾನೇ ಅಥವಾ ತನ್ನವರು ಅರ್ಜಿಹಾಕಿ ಪಡೆಯುವುದಾಗಬಾರದು.
*  *  *
ಅಷ್ಟಮಜಿನನಾದ ಚಂದ್ರಪ್ರಭ ತೀರ್ಥಂಕರನು ಎಷ್ತೆಲ್ಲ ವಿವರಗಳನ್ನು ಸ್ಪಷ್ಟವಾಗಿ ಅರಿತು, ಮುಂದಿನವರಿಗೆ ವಿವರಿಸಿದ ಪರಿಯನ್ನು ಕುಮುದೇಂದುಮುನಿಯು ಸಿರಿಭೂವಲಯದಲ್ಲಿ ಸೂಚಿಸಿರುವುದಿದೆ. ಅಂದಮೇಲೆ  ಈ ಅಂಕಾಕ್ಷರಗಳ ವಿಚಾರ, ಜಗತ್ತಿನ ಸಕಲ ಜ್ಞಾನಕ್ಕೂ ಋಗ್ವೇದವೇ  ಮೂಲವೆಂಬುದು; ಜೈನಸಂಪ್ರದಾಯದ ಮೂಲ ಬೇರಿರುವುದು ಇಲ್ಲಿಯೇ ಎಂಬ ಸಂಗತಿಯನ್ನು ಮೊದಲಿಗೆ ಪ್ರತಿಪಾದಿಸಿದವನು ಚಂದ್ರಪ್ರಭ ತೀರ್ಥಂಕರ ಎಂಬುದು ಸ್ಪಷ್ಟವಿದೆ.  ಇಷ್ಟು ಅಗಾಧ ಕಾಲಾವಧಿಯ ಹಿಂದೆ ಪ್ರಚಲಿತವಿದ್ದ ಈ ಮಹಿತಿಯನ್ನು ಕುರಿತು ಉಳಿದ ಯಾರೊಬ್ಬರೂ ತಮ್ಮ ಕೃತಿಯಲ್ಲಿ ಸೂಚಿಸದಿರುವುದು ಅಚ್ಚರಿಯೆನಿಸಿದರೂ, ಅದರ ಕಾರಣವೇನೆಂಬುದು  ವಿಚಾರಶಾಲಿಗಳಿಗೆ ಅರ್ಥವಾಗುತ್ತದೆ! ಆದರೇನು? ಕುಮುದೇಂದುವಿನ ಈ ಅಚ್ಚರಿಯಕಾವ್ಯವು ಇದನ್ನೆಲ್ಲ ಬಿಚ್ಚಿರಿಸಿದೆ!!
*  *  *
 ಇತ್ತೀಚೆಗೆ ಇಂದೂರಿನವರೊಬ್ಬರು ಮಾಡಿರುವ ನೂತನ ಸಂಶೋಧನೆ ಎಂಬುದಾಗಿ  ಪ್ರಕಟಿಸಿ, , ಸುಧಾರ್ಥಿಗಿಂತಲೂ ಮೇಧಾವಿಗಳಿರುವುದನ್ನು ಲೋಕಕ್ಕೆ ತಿಳಿಯಪಡಿಸುವ ಪ್ರಯತ್ನ ನಡೆದಿದೆ! ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ಪ್ರಾಮಾಣಿಕವಾಗಿ ಯಾರಾದರೂ ಹೊಸದಾದ ಯಾವುದಾದರೂ ಮಾಹಿತಿಯನ್ನು ಬೆಳೆಕಿಗೆ ತಂದರೆ, ಎಲ್ಲಾರಿಗಿಂತಲೂ ಹೆಚ್ಚು ಸಂತಸಪಡುವ ವ್ಯಕ್ತಿ ಈ  ಸುಧಾರ್ಥಿ!
ಇದರ ಅರಿವಿಲ್ಲದೇ ’ ೫೮ ನೇ ಅಧ್ಯಾಯದಲ್ಲಿ  ಹಿಂದಿ ಹಾಗೂ ಕನ್ನಡ ಅಕ್ಷರ ಆವೃತ್ತಿ ರೂಪಿಸಿದೆ . ಅದರಲ್ಲಿ”ಗಂಧಹಸ್ತಿ ಮಹಾಭಾಷ್ಯ ’ ಎಂಬುದು  ದೊರಕಿದೆ. ಕೂಡಲೇ ಇದರವಿಚಾರವಾಗಿ ವಿದ್ವಾಂಸರ ಗಮನ ಸೆಳೆಯಬೇಕಿದೆ’ ಎಂಬ ಮಾಹಿತಿಯು ಇತ್ತೀಚೆಗೆ ’ವಾಟ್ಸಪ್ ’ ನಲ್ಲಿ  ಹರಿದಾಡಿತು!
 ಸುಧಾರ್ಥಿಯ ಕೆಲವು ಪರಿಚಯದ ಮಿತ್ರರೂ ಈ ಸಂಶೋಧನೆಯ ಸಾಹಸದಲ್ಲಿ  ಪಾಲುದಾರರು! ಆದರೆ, ಇಂಥ ಸಂಶೋಧನೆಯಲೇಖನದಲ್ಲಿ ತಮ್ಮ ಹೆಸರು ಪ್ರಕಟವಾಗುವುದು ಅವರಿಗೆ ಇಷ್ಟವಿಲ್ಲ!! ಹೆಸರು ತೆಗೆಯಲು ಸೂಚಿಸಿದ್ದಾರೆ!!   ’ಕನ್ನಡೇತರರ   ಈಸಾಧನೆ  ಅದ್ಭುತ ಎಂದಿದ್ದಾರೆ!  ಈ ಮಾಹಿತಿಯನ್ನು  ಸುಧಾರ್ಥಿಯು  ಸಿರಿಭೂವಲಯಸಾಗರರತ್ನ ಮಂಜೂಷ ೨. ರಲ್ಲಿ ೨೦೧೩ರಲ್ಲೇ ತೆರೆದಿಟ್ಟಿರುವುದಿದೆ! ಪ್ರಥಮಖಂಡದ ೫೮ನೇ ಅಧ್ಯಾಯದ ಮೂಲಪದ್ಯಸಂಖ್ಯೆ  ೨೩೫ ರ ಅಶ್ವಗತಿಯಸಾಹಿತ್ಯದಲ್ಲಿ ನ ವಿವರ ಹೀಗಿದೆ.. ”ಕೇಧಸ್ ಋಕಾಃ (ಅಂ)ಳುಪಂರಕ್  ಯಶ್ ಕಲ್ ಪೂ ಆದಪಯಯ ಛೇಪಂಈರಸ್ ಮಾನಯ  ’ಗಂಧಹಸ್ ತಿ ’ ಕಂತಿಯರ್ ಇಹೊಸಿತಿಯ ’ಭಾಷ್ಯ’ ಕತ ....ಇತ್ಯಾದಿ”. ಪದ್ಯಸಂಖ್ಯೆ: ೨೦. -
ಈ ಭಾಗದಲ್ಲಿ ಎರಡುಮೂರು ಭಾಷೆಯ ಸಾಹಿತ್ಯದ ಭಾಗಗಳು ಪ್ರವಹಿಸಿವೆ. ಪ್ರತ್ಯೇಕವಾದ ಪದ್ಯಸಂಖ್ಯೆ ನೀಡಲಾಗಿದೆ. ಇದನ್ನು ಸಮರ್ಪವಾಗಿ ವಿಂಗಡಿಸಿಕೊಳ್ಳುವುದು ಬಹಳ  ಶ್ರಮದ ಕಾರ್ಯ. ಸಾಮಾನ್ಯರಿಗಂತೂ ಸಾಧ್ಯವೇ ಇಲ್ಲ!! ಇದು ಕನ್ನಡಬಾರದ ಇಂದೂರಿನ ಮಿತ್ರರ ಸಂಶೋಧನೆಯಾಗಿ ಬಿಂಬಿತವಾಗಿದೆ!
ಇದೇ ಅಧ್ಯಾಯದ ಮೂಲಸಾಹಿತ್ಯದ ೨೩೪ ನೇ ಪದ್ಯದಲ್ಲಿ  ’ಋಗ್ ಮಹಾಬಂಧದ’ ವಿಚಾರ ಬಂದಿದೆ. ಇದು ಈ ನೂತನ ಸಂಶೋಧಕರ ಕಣ್ಣಿಗೆ ಬೀಳದುರುವುದು ಅಚ್ಚರಿಯಸಂಗತಿ!!  ಕೇವಲ ೭ ವರ್ಷಗಳ ಅವಧಿಯಲ್ಲಿ ಇದು ನೂತನ ಸಂಶೋಧನೆಯಾಗಿ ಪ್ರಚಾರ ಪಡೆದದ್ದು ವಿಚಿತ್ರವಾಗಿದೆ!! ಈ ಹಾದಿಯಲ್ಲಿ ಇನ್ನೂ ಯಾವ್ಯಾವ ಸಂಶೋಧನೆಗಳು   ಹೊರಬರಲಿವೆಯೋ ಆ ಕುಮುದೇಂದುವಿಗೇ ತಿಳಿದಿರಬೇಕು!!
ಕನ್ನಡ ವಿದ್ವಾಂಸರಿಗೇ ಕಬ್ಬಿಣದ ಕಡಲೆಯಾಗಿದ್ದ ಈ ಸಾಹಿತ್ಯಭಾಗದ ಆಂತರ್ಯವು ದೂರದ ಇಂದೂರಿನ ಕನ್ನಡೇತರರೊಬ್ಬರಿಗೆ ಇಷ್ಟು ಸುಲಭವಾಗಿ ಗೋಚರವಾದದ್ದು ನಿಜಕ್ಕೂ ವಿಸ್ಮಯದ ಸಂಗತಿ!  ಇಲ್ಲಿನ ಸಿರಿಭೂವಲಯದ ಅಭಿಮಾನಿಯೊಬ್ಬರು ಈ ಭಾಗದ  ಮೂಲ ಹಾಗೂ, ಅಂತರ್ಸಾಹಿತ್ಯಭಾಗವನ್ನು ದೇವನಾಗರಿ ಲಿಪಿಯಲ್ಲಿ ಕಳಿಸಿ, ಈ ನೂತನ ’ಸಂಶೋಧನೆಯ’ ಸಾಹಸಕ್ಕೆ ಉತ್ತೇಜಿಸಿದ್ದಾರೆ!! ಈಗಾಗಲೇ ಸೂಚಿಸಿರುವಂತೆ ಪುಸ್ತಕಶಕ್ತಿ ಪ್ರಕಾಶನದವರು ಈ ’ಅಶ್ವಗತಿ’ ಹಾಗೂ ಸ್ತಂಬಕಾವ್ಯಕುರಿತ ಸಂಶೋಧನೆಗಾಗಿ ದಿವಂಗತರಾಗಿದ್ದ ಹೊಸ ಸಂಶೋಧಕರನ್ನೇ ಸೃಷ್ಟಿಸಿದ್ದಾಗಿದೆ! ಅವರ ಪರಿಚಯದವರೇ ಆದ ಈ ಅಭಿಮಾನಿಯು ಈಗ ಸಕ್ರಿಯವಾಗಿ ಈ ಕ್ಷೇತ್ರಕ್ಕೆ ಕಾಲಿರಿಸಿದಂತಾಗಿದೆ.  ಅವರ ಆಸಕ್ತಿ ನಿಜಕ್ಕೂ ಶ್ಲಾಘನೀಯವಾದುದು!! ಹೆಚ್ಚಿನ ಯಶಸ್ಸು ಸಿಗಲೆಂದು ಆಶಿಸುತ್ತೇನೆ.
*  *  *
ತನ್ನ ಜೀವನಸಂಗಾತಿ ಶ್ರೀಮತಿ ಗಿರಿಜೆಯ ಸಹಕಾರದಿಂದ  ಸರಳ ಪರಿಚಯಕಾರನು  ಯಾರೊಬ್ಬರ ಹಂಗಿಗೂ ಸಿಗದಂತೆ ಸರಳಪರಿಚಯಕೃತಿಗಳನ್ನು  ಸ್ವತಂತ್ರವಾಗಿ  ಮುದ್ರಿಸಿ, ಪ್ರಕಟಿಸಲು ಅವಕಾಶವಾಗಿದೆ. ಈ ಕಾರ್ಯವನ್ನು ಕೆ. ಶ್ರೀಕಂಠಯ್ಯನವರೇ  ಮಾಡಿಮುಗಿಸಬಹುದಿತ್ತು. ಅವರು ಅವಿವಾಹಿತರಾಗಿ, ಸುಧಾರ್ಥಿಗಿಂತಲೂ ಹೆಚ್ಚು ಶಕ್ತರಾಗಿದ್ದವರು.  ಆದರೂ ಅವರು ತಮ್ಮ ಅಸಾಧಾರಣವಾದ ಸಾಧನೆಯ ಫಲವನ್ನು ತಮ್ಮ ಜೀವಿತಾವಧಿಯಲ್ಲೇ  ಮುದ್ರಿಸಿ, ಪ್ರಕಟಿಸಲು ಅವಕಾಶವಾಗಲಿಲ್ಲ. ಗ್ರಂಥ ಸಂಶೋಧನೆಗೆ ಸಂಬಂಧಿಸಿದಂತೆ  ತಮ್ಮ ವಿರೋಧಿಗಳ  ಬಾಯಿಮುಚ್ಚಿಸುವ ಕಾರ್ಯದಲ್ಲೇ  ಅವರು ತಮ್ಮ ಜೀವಿತದ ಹೆಚ್ಚು ಸಮಯವನ್ನು ವ್ಯಯಿಸಬೇಕಾಗಿತ್ತು.  ಅವರು ರೂಪಿಸಿರುವ ’ಜನತಾಸಂಸ್ಕರಣ’ವು ಅವರ ಜೀವಿತಾವಧಿಯಲ್ಲೇ ಮುದ್ರಣವಾಗಿ, ಪ್ರಕಟವಾಗಿದ್ದರೆ, ಸುಧಾರ್ಥಿಯ ಸರಳಪರಿಚಯ ಕೃತಿಗಳ ಸಂಪತ್ತು ಇನ್ನಷ್ಟು ಶ್ರೀಮಂತವಾಗುತ್ತಿದ್ದುದು ಖಚಿತ.   ಅದರಿಂದಾಗಿ ಕನ್ನಡಾಭಿಮಾನಿಗಳಿಗೆ ಸಿರಿಭೂವಲಯ ಕಾವ್ಯಾಂತರ್ಗತವಾದ ಅಮೂಲ್ಯವಾದ ಮಾಹಿತಿಗಳು ಇನ್ನಷ್ಟು ವ್ಯಾಪಕವಾಗಿ ದೊರೆಯುವಂತಾಗುತ್ತಿತ್ತು.
*  *  *
ಸಿರಿಭೂವಲಯಕಾವ್ಯದವಿಚಾರವಾಗಿ  ೧೯೫೩ರರ ಪರಿಸರದಲ್ಲಿ, ಹಾಗೂ ೨೦೦೦ ದ ಸುಮಾರಿನನಂತರದಲ್ಲಿ ಕನ್ನಡಸಾರಸ್ವತಲೋಕದ ದಿಗ್ಗಜಗಳು ಕನ್ನಡಕ್ಕೆ ಸಂಬಂಧಿಸಿದ ಯಾವುದಾದರೊಂದು ವಿಚಾರವಾಗಿ ತಾವುಗಳು ನಿರ್ಧರಿಸಿ,  ಶಾಲಾ ಶಿಕ್ಷಣಕ್ರಮದಲ್ಲಿ,  ವಿಶ್ವವಿದ್ಯಾಲಯದಮಟ್ಟದಲ್ಲಿ  ಪಠ್ಯವಾಗಿ ಸೇರಿಸಿರುವ ಮಹಿತಿಗಳೇ ಚಿರಸ್ಥಾಯಿಯಗಿರಬೇಕೆಂಬ ಕೆಟ್ಟ ಹಟಕ್ಕೆ ಬದ್ಧರಾಗಿದ್ದಾರೆ!
ಸಿರಿಭೂವಲಯದ ಪ್ರಖರವಾದ ಬೆಳಕಿನಲ್ಲಿ ಇಂಥ ವಿಚಾರಗಳು ಎಷ್ಟೇ ಅಸಮಂಜಸವೆನಿಸಿದರೂ ಅದನ್ನು ಬದಲಿಸಲು ಇವರು ಒಪ್ಪುವ ಸಂಭವವಿರುವುದಿಲ್ಲ. ಅವರೇ ಕಂಡುಕೊಂಡ ಬದಲಾವಣೆಗಳನ್ನು ಮಾತ್ರ ಅವರು ಅಂಗೀಕರಿಸುತ್ತಾರೆ! ಉದಹರಣೆ: ’ಕವಿರಾಜಮರ್ಗ’ದ ರಚನೆಮಾಡಿದವನು ನೃಪತುಂಗನಲ್ಲ ಎಂಬ ವಿಚಾರ. ಆದರೆ, ಕನ್ನಡ ಭಾಷೆಗೆ ಸಂಬಂಧಿಸಿದಂತೆ, ಶಾಸನಕ್ಕೆ ಸಂಬಂಧಿಸಿದಂತೆ ಬೇರೆಯವರು ಸೂಚಿಸುವ ಯಾವ ಮಹಿತಿಗಳಿಗೂ ಅವರು ಸಮ್ಮತಿಸುವುದಿಲ್ಲ!! ಉದಾಹರಣೆ:  ಬೇಲೂರು ತಾಲೋಕು ಹಲ್ಮಿಡಿಯ ಶಾಸನದಲ್ಲಿ ನಿರ್ದಿಷ್ಟವಾಗಿ ಯಾವುದೇ ಕಾಲಮಾನವನ್ನೂ ಸೂಚಿಸಿಲ್ಲ!! ಆದರೂ ಕೇವಲ ಕದಂಬಕುಲದ ಮೃಗೇಶವರ್ಮನ ಹೆಸರಿನ ಆಧಾರದಲ್ಲಿ ಇದು ಕ್ರಿ.ಶ. ೪೬೬ರ ಶಾಸನವೆಂದು ನಮ್ಮ ವಿದ್ವಾಂಸರು ನಿರ್ಧರಿಸಿ, ಇಂದಿಗೂ ಇದೇ ಆಧಾರರಹಿತ  ಮಹಿತಿಯನ್ನೇ ವಿಧ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ!!
ಚಾಲುಕ್ಯ ವಂಶದ  ವಿಜಯಾದಿತ್ಯನ ಸೂಳೆ  ವಿನಾಪೋಟಿಯ ಮಹಾಕೂಟದ ಶಾಸನದ (ಕ್ರಿ.ಶ. ೪೭೫)  ವಿವರಗಳನ್ನು ಕೆ. ಶ್ರೀಕಂಠಯ್ಯನವರು ನೀಡಿದ್ದಾರೆ. ಹಲ್ಮಿಡಿ ಶಾಸನಕ್ಕಿಂತಲೂ  ಹಳೆಯದಾದ ಗಂಗರಾಜ  ೧ನೇ ಮಾಧವನ (ತಡಂಗಲಮಾಧವ) ಶಾಸನ (ನಂಜನಗೂಡು ಶಾಸನ ಸಂಖ್ಯೆ: ೧೧೧ಕಾಲ ಶಾ. ಶ, ೮೦) ಹಾಗೂ ಇನ್ನೂ ಕೆಲವರು ಶಾಸನಗಳ ದಾಖಲೆಯನ್ನು ೧೯೫೩ಕ್ಕೇ ಮೊದಲೇ ಕೆ. ಶ್ರೀಕಂಠಯ್ಯನವರು ಶ್ರಮಪಟ್ಟು ಗುರುತಿಸಿ ಕನ್ನಡ ಸಾಹಿತ್ಯಲೋಕದ ದಿಗ್ಗಜಗಳ ದಿಕ್ಕುಕೆಡಿಸಿರುವುದುಂಟು!!  ಆದರೂ ಅವರುಗಳಾರೂ ಇವರ  ಒಂಟಿಹೋರಟಕ್ಕೆ ಸೊಪ್ಪುಹಾಕಲೇ ಇಲ್ಲ  ಎಂಬುದು ಚಾರಿತ್ರಿಕ ಸತ್ಯವಾಗಿದೆ!!!
ಸಿರಿಭೂವಲದಲ್ಲಿ ಅಕ್ಷರಕ್ಕೆ ಲಕ್ಷಶ್ಲೋಕದಂತೆ ಬೆಳೆಯುತ್ತ ಹೋಗಿ,  ’ನೂರುಸಾವಿರಲಕ್ಷಕೋಟಿ’ - ಇದುಕೇವಲ ಒಂದು ಕೋಟಿಯವ್ಯಾಪ್ತಿಯಲ್ಲ!! ನೂರುಸಾವಿರಲಕ್ಷಸಲ ಕೋಟಿಯೆಂಬುದನ್ನು ರಾಶಿಹಾಕಿದಷ್ಟು ವಿಶಾಲವ್ಯಪ್ತಿ!!  - ಶ್ಲೋಕಗಳಸಾರವಾಗಿ ರೂಪುಗೊಂಡಿರುವ ಈ ಮಹಾನ್ ಸಾಹಿತ್ಯಸಾಗರದ  ಸಾಂಗತ್ಯ ಪದ್ಯಗಳಿಗೆ ಸಾಧ್ಯವಾಷ್ಟು ಈ ರೀತಿಯ ಸಾರಾಂಶವನ್ನು ತಿಳಿಯುತ್ತಹೋದರೆ ಅವನ್ನು ಬರೆಯಲು ಹಾಗೂ ಓದಿ ಅರ್ಥೈಸಿಕೊಳ್ಳಲು ಎಷ್ಟು ಸಮಯ ಬೇಕಾದೀತೆಂಬುದನ್ನು ಓದುಗರು ಯೋಚಿಸಬೇಕು.
ವೇದಸಾಹಿತ್ಯದ ಪರಿಧಿ ಎಷ್ಟಿರುವುದೆಂಬುದನ್ನು ಬ್ರಹ್ಮಚಾರಿಯಾಗಿ ಓದಿ ತಿಳಿಯಲು ಶಿವನಲ್ಲಿ ವರಬೇಡಿದ ಭರದ್ವಾಜನು ಮೂರುಸಾವಿರ ವರ್ಷಗಳು ಕಠಿಣವಾಗಿ ಶ್ರಮಿಸಿದರೂ ಆರೀತಿ ಓದಿ ತಿಳಿಯಲು ಸಾಧ್ಯವಾಗಲಿಲ್ಲ ಎಂಬ ವಿಚಾರವಿದೆ.  ವೇದದ ವ್ಯಾಪ್ತಿ ಅಷ್ಟು ಅಗಾಧವಾದುದು. ಇಲ್ಲಿ ಸಿರಿಭೂವಲಯವೂ ಅದೇ ವಿಸ್ತಾರಕ್ಕೆ  ಸೇರಿರುವುದನ್ನು ಕಾಣಬಹುದು!  ಈ ಕಾರಣದಿಂದಾಗಿಯೇ  ಸಿರಿಭೂವಲಯವನ್ನು     ’ಕನ್ನಡದ ವೇದ’ ಎಂದು ಸೂಚಿಸುವುದು ಸಮರ್ಪಕವಾಗಿದೆಯೆಂದು ಸಿರಿಭೂವಲಯದ ಸುಧಾರ್ಥಿಯ ನಿಲುವು.
 ಇಂದಿನ ಆಧುನಿಕ ವಿಜ್ಞಾನದ ಹೆಸರಿನಲ್ಲಿ ಪ್ರಚಾರಕ್ಕೆ ಬಂದಿರುವ ಆಕಾಶವಾಣಿ; ದೂರದರ್ಶನ;  ವಿಮಾನಯಾನ; ಬಾಹ್ಯಾಕಾಶಯಾನದ ಉಪಗ್ರಹ ತಂತ್ರಜ್ಞಾನ, ಗಣಕಯಂತ್ರಕ್ರಮ; ಕಟ್ಟಡಗಳ ನಿರ್ಮಾಣಕ್ಕೆ ಸಬಂಧಿಸಿದ ತಂತ್ರಜ್ಞಾನ;  ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧಿಸಿದ ಹಲವಾರು ವಿಚಾರಗಳು ಮುಂತಾದುವೆಲ್ಲವೂ ಸರ್ವಜ್ಞಸ್ವರೂಪಿಯಾಗಿದ್ದ ಕುಮುದೇಂದುವಿಗೆ ಅಂಗೈಮೇಲಿನ ನೆಲ್ಲಿಕಾಯಿಯಂತೆ ಸುಪರಿಚಿತವಾಗಿದ್ದುವೆಂಬ ಮಾಹಿತಿನ್ನು  ಖಚಿತವಾಗಿ ಪ್ರಕಟಪಡಿಸಿದರೂ,  ಬೇರೆಯವರಿರಲಿ, ಕನ್ನಡಿಗರಿಗೇ ಅದನ್ನು ಕುರಿತು ನಂಬಿಕೆ ಇಲ್ಲವಾಗಿದೆ!!!
ಸಿರಿಭೂವಲಯವನ್ನು ಕುರಿತು ಕೆ. ಶ್ರೀಕಂಠಯ್ಯನವರು ೬೫ ವರ್ಷಗಳ ಹಿಂದೆಯೇ ಪ್ರಕಟಿಸಿದ ಮಾಹಿತಿಗಳನ್ನು ಅಂದಿನ ವಿದ್ವಾಂಸರು ಮಾನ್ಯಮಾಡದೇ ಮೂಲೆಗುಂಪಾಗಿಸಿದರು. ಈಗ ಹಾಸದ ಸುಧಾರ್ಥಿಯು ಈ ಮಾಹಿತಿಗಳಿಗೆ ಸಂಬಂಧಿಸಿದ ವಿವರಗಳನ್ನು ಕಾವ್ಯಾಂತರ್ಗತವಾದ  ಪ್ರತ್ಯಕ್ಷ ಮಾಹಿತಿಗಳ ಆಧಾರದಲ್ಲಿ ವಿವರಿಸಿದರೂ, ಅದನ್ನು ಮಾನ್ಯಮಾಡುವ ಮನೋಭಾವ ನಮ್ಮ ಕನ್ನಡಿಗರಿಗಿಲ್ಲವಾಗಿದೆ!!!
ಈಗ ಕತ್ತಲಕೋಣೆಯಲ್ಲಿ ಅಜ್ಞಾತವಾಗಿದ್ದ ಈ ಕಬ್ಬಿಣದ ಕಡಲೆಯನ್ನು ಹದವಾಗಿ ಬೇಯಿಸಿ,  ಜನಸಾಮನ್ಯರೂ ಓದಿ ತಿಳಿಯುವಂಥ ಸರಳಪರಿಚಯನೀಡಿರುವ ಸುಧಾರ್ಥಿಯು ವಿಶ್ವವಿದ್ಯಾಲಯದ ಶಿಕ್ಷಣ ಪಡೆದವನಲ್ಲ ಎಂಬ ಕಾರಣದಿಂದ, ಈತನು ಈ ಅಚ್ಚರಿಯ ಕಾವ್ಯದ ವಿಚಾರವಾಗಿ ಪ್ರಕಟಿಸಿರುವ  ಊಹಾತೀತವಾದ  ಮಾಹಿತಿಗಳಿಗೆ  ಇಂದಿನ ಸಾರಸ್ವತಲೋಕದಲ್ಲಿ ಕಾಸಿನ ಕಿಮ್ಮತ್ತೂ ಇಲ್ಲದ ಪರಿಸರ ಮುಂದುವರೆದಿದೆ!!!
ರಾಷ್ಟ್ರಕೂಟರಕಾಲದಲ್ಲೇ ಕವಿ ಕುಮುದೇಂದುವು ತನಗೆ ಆಕಾಶವಾಣಿ, ದೂರದರ್ಶನ, ವಿಮಾನಶಾಸ್ತ್ರ, ಬಾಹ್ಯಂತರಿಕ್ಷಯಾನ, ಗಣಕಯಂತ್ರಕ್ರಮ ಇತ್ಯಾದಿ ತಂತ್ರಜ್ಞಾನದ ಪ್ರಾವೀಣ್ಯತೆಯು  ಇದೆಯೆಂಬ ಮಾಹಿತಿಯು  ಸೈಗೊಟ್ಟ ಸಿವಮಾರನಿಗೂ, ರಾಷ್ಟ್ರಕೂಟ ಅಮೋಘವರ್ಷನಿಗೂ ತಿಳಿದಿತ್ತು.  ಪಾರಮಾರ್ಥಿಕವಾಗಿ ನಿರುಪಯೋಗಿಯಾದ ಈ ಲೌಕಿಕ ಜ್ಞಾನವನ್ನು ಕಾಲಿನಿಂದ ಒದ್ದು ಎದ್ದುಬಂದ ಮುನಿವಂಶದವರ ಕಾವ್ಯ ಭೂವಲಯ ಎಂಬುದಾಗಿ  ಸ್ಪಷ್ಟವಾಗಿ ಸೂಚಿಸಿರುವುದನ್ನು ಖಚಿತವಾಗಿ ಸರಳಪರಿಚಯಕೃತಿಯಲ್ಲಿ  ನಿರೂಪಿಸಿದ್ದರೂ ನಮ್ಮ ಅತಿಬುದ್ಧಿವಂತ ಕನ್ನಡಿಗರ ತಲೆಗೆ  ಅದು ಹೋಗಲಾಗದ ಸಂಗತಿಯಾಗಿರುವುದು ನಿಜಕ್ಕೂ ಸಿರಿಭೂವಲದ ಅಚ್ಚರಿಯನ್ನೂ ಮೀರಿಸಿದ ಸಂಗತಿಯಾಗಿದೆ!!!
ಇಲ್ಲಿ ಪ್ರಾಚೀನ ಭಾರತೀಯ  ಶಾಸ್ತ್ರಗ್ರಂಥಗಳ ಮಾಹಿತಿಗಳನ್ನು ಉಲ್ಲೇಖಿಸುವ ಮೂಲಕ,   ಪಾಶ್ಚಾತ್ಯರ ಆಧುನಿಕ ವಿಜ್ಞಾನದ ಆವಿಷ್ಕಾರಗಳನ್ನು  ಅಲ್ಲಗಳೆಯಲಾಗುತ್ತಿದೆ ಎಂದು ಯಾರೂ ತಪ್ಪಾಗಿ ಗ್ರಹಿಸಬಾರದು.  ನಮ್ಮ ಪ್ರಾಚೀನರ ವೈಜ್ಞಾನಿಕ ಸಾಧನೆಗಳಿಗೆ ನಿಲುಕದ ಯಾವ ತಂತ್ರಜ್ಞಾನವೂ ಇರಲಿಲ್ಲ. ಅದನ್ನೆಲ್ಲ ಅವರು ಶಾಸ್ತ್ರಗ್ರಂಥಗಳ ರೂಪದಲ್ಲಿ ದಾಖಲಿಸಿಟ್ಟಿದ್ದರು. ಅವುಗಳ ರಹಸ್ಯವನ್ನರಿತ ಪಾಶ್ಚಾತ್ಯರು ಅಂಥ ಮಹತ್ವಪೂರ್ಣವಾದ ಸಾಹಿತ್ಯ ಕೃತಿಗಳನ್ನು ಅಪಹರಿಸಿ, ಶ್ರಮವಹಿಸಿ ಸಂಸ್ಕೃತಭಾಷೆಯನ್ನು ಅಧ್ಯಯನವಾಡಿ, ಅದರಲ್ಲಿ ಅಡಕವಾಗಿದ್ದ ವಿವರಗಳನ್ನು ಅರ್ಥೈಸಿಕೊಂಡು, ಪ್ರಯೋಗದಮೂಲಕ  ನೂತನವಾದ ಸೂಕ್ಷ್ಮಾತಿ ಸೂಕ್ಷ್ಮ ಯಂತ್ರೋಪಕರಣಗಳನ್ನು, ಸಾಧನ  ಸಲಕರಣೆಗಳನ್ನು ರೂಪಿಸಿದ್ದಾರೆಂಬುದು ವಾಸ್ತವವಾದ ಸಂಗತಿ. ಇದನ್ನರಿಯದೇ ಪಾಶ್ಚಾತ್ಯರು ಮಹಾನ್ ಮೇಧಾವಿಗಳು; ಪ್ರಾಚೀನಭಾರತೀಯರು ಅಪ್ರಯೋಜಕರು ಎಂದು ವಾದಿಸುವುದು ನಿಜಕ್ಕೂ ಮೂರ್ಖತನದ ಪರಮಾವಧಿಯಾಗಿದೆ.
  ಯಾವುದೇ ವಸ್ತು, ಸಾಹಿತ್ಯ, ಮಾಹಿತಿ ಮುಂತಾಗುವುಗಳ ’ಅಪಹರಣ’ ಮಾಡುವುದರಲ್ಲಿ ಕನ್ನಡಿಗರೂ ಸೇರಿದಂತೆ ಜಗತ್ತಿನಲ್ಲಿ ಎಲ್ಲರೂ ನಿಷ್ಣಾತರೆಂಬುದು ಸರ್ವವೇದ್ಯ!! ಹಾಗಿರುವಲ್ಲಿ ಪ್ರಾಚೀನಭಾರತೀಯರ ವೈಜ್ಞಾನಿಕತೆಯ ತಂತ್ರಜ್ಞಾನದ ಶಾಸ್ತ್ರಗ್ರಂಥಗಳನ್ನು ಪಾಶ್ಚಾತ್ಯರು ಅಪಹರಿಸಿ ಅದರಲ್ಲಿನ ಜ್ಞಾನವನ್ನು ತಮ್ಮ ಲೌಕಿಕ ಲಾಭಕ್ಕೆ ಬಳಸಿಕೊಂಡಿರುವರೆಂಬ ಅನಿಸಿಕೆಯು ಸ್ವಾಭಾವಿಕವಾಗಿದೆ. ಜಗತ್ತಿನ ಕೆಲವು ವಿಜ್ಞಾನಿಗಳು ಪ್ರಾಚೀನಭಾರತೀಯರ ಅನೂಹ್ಯವಾದ ಜ್ಞಾನಸಂಪತ್ತನ್ನು ಮುಕ್ತಮನಸ್ಸಿನಿಂದ ಹಾಡಿ ಹೊಗಳಿದ್ದರೂ, ಇಂದಿನ ಭಾರತೀಯ ’ಮೇಧಾವಿ’ ಗಳಿಗೇ ಇದರತ್ತ ಗಮನವಿಲ್ಲ!!
ಪುಷ್ಪಾಯುರ್ವೇದಕ್ಕೆ ಸಂಬಂಧಿಸಿದ ಮಾಹಿತಿಗಳು, ಮಾನವನ ಸೃಷ್ಟಿಯಾಗುವ ಕ್ರಿಯೆಯಲ್ಲಿ ಅಂಡಾಣು, ಡಿಂಬಾಣುಗಳ ಪಯಣದಪರಿ, ಅಲ್ಲಿನ ಸಂಯೋಗಕ್ರಿಯೆಯಲ್ಲಿ ಸಾವಿಗೀಡಾಗುವ ಅಣುಗಳು, ಹುಟ್ಟುವ ಮೊದಲೇ ಸಾಯುವ ಭ್ರೂಣಗಳು, ಹುಟ್ಟಿಸಾಯುವ ಹಸುಗೂಸುಗಳು, ಇತ್ಯಾದಿಗಳ ಲೆಕ್ಕಹಾಕಿದಲ್ಲಿ ಜಗತ್ತಿನಲ್ಲಿ ಜನಗಳು ನಿಲ್ಲಲೂ ಸಾಧ್ಯವಾಗದ ಸ್ಥಿತಿಯೊದಗುತ್ತಿತ್ತು ಎಂಬ ಮಾಹಿತಿ,  ದೇಹಾಂತರ್ಗತವಾದ ’ಜೀವ’ದ ಸ್ವರೂಪಕ್ಕೆ ಸಂಬಂಧಿಸಿದ ವಿವರ ಇತ್ಯಾದಿ ಮಾಹಿತಿಗಳನ್ನು ಉಪನಿಷತ್ತುಗಳ ಆಧಾರ ಹಿಡಿದು ಕವಿಯು ಕನ್ನಡ ಭಾಷೆಯಲ್ಲಿ ಅವುಗಳ ವಿವರನೀಡಿರುವುದನ್ನು ನೋಡಿದಾಗ, ಕನ್ನಡಭಾಷೆಯ ಸಾಮರ್ಥ್ಯದ ಅನಾವರಣವಾಗುತ್ತದೆ.
ಇದುವರೆವಿಗೂ ಸಿರಿಭೂವಲಯದಲ್ಲಿ ಪೀಠಿಕೆಯರೂಪದಲ್ಲಿದ್ದ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ಸೂಚಿಸಲಾಗಿದೆ. ಮುಂದಿನ ಖಂಡಗಳ ಅಧ್ಯಾಯಗಳಲ್ಲಿ  ಬೇರೆ ಬೇರೆ ವಿಷಗಳಿಗೆ ಸಂಬಂಧಿಸಿದಂತೆ ಹಲವರು ಭಾಷೆಗಳ ಮೂಲಸಾಹಿತ್ಯಕೃತಿಗಳು ಅವುಗಳ ಮೂಲಭಾಷೆಯಲ್ಲೇ ಈ ಕಾವ್ಯದಲ್ಲಿ ಉಗಮವಾಗುತ್ತವೆ ಅವುಗಳನ್ನು ವಿಶ್ಲೇಷಿಸಲು ಸಂಬಂಧಿಸಿದ ಭಾಷಾತಜ್ಞರೇ ಈ ಕಾವ್ಯದ ಮುಂದಿನ ಸಂಶೋಧನೆಗೆ  ಪ್ರವೇಶಿಸಬೇಕೆಂಬ ನಿಲುವನ್ನು ಸುಧಾರ್ಥಿಯೂ ಬೆಂಬಲಿಸಿದ್ದುಂಟು.
ಆದರೆ, ಈ ಸರಳಪರಿಚಯಕೃತಿಗಳ ಸಮೀಕ್ಷೆಗಾಗಿ ಅವುಗಳನ್ನು ಸೂಕ್ಷ್ಮವಾಗಿ ಪುನರಾವಲೋಕನ ಮಾಡಿದಾಗ ಆತನನಿಲುವು ಬದಲಾಯಿತು.  ಪ್ರಥಮಖಂಡದ ೫೯ ಅಧ್ಯಾಯಗಳಲ್ಲಿ ಇದುವರೆವಿಗೂ ವಿವರಿಸಿರುವ ಹಲವಾರು ವೈಜ್ಞಾನಿಕ ಮಾಹಿತಿಗಳನ್ನು  ಬಹಳ ಸಮರ್ಪಕವಾದ ಕನ್ನಡ ಭಾಷೆಯಲ್ಲೇ ಸರಳವಾಗಿ ನಿರೂಪಿಸಿರುವ ಕುಮುದೇಂದು ಮುನಿಯು ಮುಂದೆಯೂ ಯಾವುದೇ ಗ್ರಂಥದ ಯಾವುದೇ ಮಾಹಿತಿಯನ್ನೂ ಕನ್ನಡಭಾಷೆಯಲ್ಲೇ ವಿವರಿಸಿರಬಹುದೆಂಬ ಆಲೋಚನೆ ಈತನ ತಲೆಗೆ ಹೊಕ್ಕಿದೆ.
ಆದರೆ. ಈತನ ದೌರ್ಭಾಗ್ಯವೆಂದರೆ, ಮುಂದಿನ ಮೂಲಸಾಹಿತ್ಯಭಾಗವನ್ನು ಯಾರಿಗೂ ಸಿಗದಂತೆ ಮುಚ್ಚಿರಿಸಿಕೊಂಡಿರುವವರ ಮೂರ್ಖತನದಿಂದಾಗಿ ಅವುಗಳು ಸಧ್ಯದಲ್ಲೇ ಸಾಮನ್ಯ ಓದುಗರಿಗೆ ಲಭ್ಯವಾಗುವಂತಿಲ್ಲ.  ಈಗಾಗಲೇ ತನ್ನ ಜೀವಿತದ ಸಂಧ್ಯಾಸಮಯಕ್ಕೆ ಕಾಲಿರಿಸಿರುವ ಈ ಪರಿಚಯಕಾರನಿಗೆ ನೆರವಾಗಿ, ಈ ಮಹಾನ್ ಕಾವ್ಯದ ಮುಂದಿನ ಮೂಲಪ್ರತಿಯನ್ನು ಒದಗಿಸಿ ಕೊಡಬಹುದಾದವರು ವಿನಾ ಕಾರಣ ಈತನ ವಿಚಾರದಲ್ಲಿ ವಿರುದ್ಧ ಭಾವನೆ ಹೊಂದಿ , ಮುಂದಿನ ಕಾರ್ಯವನ್ನು ತಡೆಗಟ್ಟಿರುವುದು ನಿಜಕ್ಕೂ ಕನ್ನಡಿಗರ ದೌರ್ಭಾಗ್ಯ.  ಇದಕ್ಕಾಗಿ ಸುಧಾರ್ಥಿಯು ಕಳೆದುಕೊಳ್ಳುವುದು ಏನೂಯಿಲ್ಲ!! ಈ ಮಹಾನ್ ಕಾವ್ಯದ ಸರಳಪರಿಚಯದಿಂದ ಹಣಸಂಪಾದಿಸುವ ಆಶೆ  ಈ ಪರಿಚಯಕಾರನಿಗೆ ಇದ್ದಿದ್ದಲ್ಲಿ ಈವ್ಯಕ್ತಿಯು ಅದಕ್ಕಾಗಿ ಪರಿತಪಿಸಬೇಕಿತ್ತು!  ವಾಸ್ತವವಾಗಿ ಅಂಥದೇನಿಲ್ಲವೆಂಬುದು ಎಂಥವರಿಗೂ ಅರ್ಥವಾಗಬೇಕಿತ್ತು! ಆದರೆ, ಪ್ರಾಯಶಃ ಈತನ ಅವಸಾನದವರೆವಿಗೂ ಅಂಥವರಿಗೆ ಇಂಥ ವಿವೇಕ ಉದಯವಾಗಲಾರದೇನೋ  ಎಂಬುದು ಈ ಸುಧಾರ್ಥಿಯ ಇಂದಿನ ನಿಲುವು.
ಈ ಸನ್ನಿವೇಶದಲ್ಲಿ ಇನ್ನೂ ಒಂದು ಮಾತನ್ನು ಹೇಳುವ ಅಗತ್ಯವಿದೆ. ಈ ಹಿಂದೆ ಸಿರಿಭೂವಲಯದ ಸಂಶೋಧನೆಯ ಹೆಸರಿನಲ್ಲಿ ಯಾರ್ಯಾರು ಯಾರ್ಯಾರಿಂದ ಎಷೇಷ್ಟು ಹಣಸಂಗ್ರಹಿಸಿ ’ಸಂಶೋಧನೆ’ ಕಾರ್ಯ ನಡೆಸಿರುವರೋ ಖಚಿತವಾಗಿ ತಿಳಿಯದು!  ಆದರೆ, ಈ ಪರಿಚಯಕರನೂ ಇದೇ ರೀತಿಯಲ್ಲಿ  ಸಿರಿಭೂವಲಯದ ಹೆಸರು ಹೇಳಿಕೊಂಡು  ಹಣ ಸಂಪಾದಿಸುತ್ತಿರುವನೆಂಬ ಗುಮಾನಿ ಅಥವಾ ಸಂಶಯವು ಯಾರಲ್ಲಿಯೂ ಬರುವಂತಿಲ್ಲ!  ಕಾರಣ ಅರೀತಿ ಹಣಸಂಗ್ರಹಿಸುವ ಅಗತ್ಯ ಈ ಪರಿಚಯಕಾರನಿಗಿಲ್ಲವೆಂಬುದನ್ನು ಹಲವಾರು ಸನ್ನಿವೇಶಗಳಲ್ಲಿ ಸ್ಪಷ್ಟಪಡಿಸಿದ್ದಾಗಿದೆ.
ಸಿರಿಭೂವಲಯದ ಪರಿಚಯಕಾರ್ಯ ಆರಂಭಿಸುವಮೊದಲೇ ಕೆಲವು ಪರಿಚಿತರು ಈ ಕಾರ್ಯಕ್ಕೆ  ಅಂತರ್ಜಾಲತಾಣದಲ್ಲಿ ಆರ್ಥಿಕನೆರವಿನ ಅಗತ್ಯವಿದೆ ಎಂದು ಮನವಿಸಲ್ಲಿಸಿದರೆ,  ಅಗತ್ಯವಾದಷ್ಟು ಹಣವನ್ನು ಸಂಗ್ರಹಿಸಬಹುದೆಂಬ ಸಲಹೆ ನೀಡಿದ್ದುಂಟು!
  ಆದರೆ, ಈ ಸಲಹೆಯನ್ನು ಅಂಗೀಕರಿಸಲಿಲ್ಲ.  ತಾನು ಪ್ರಕಟಿಸುವ ಸರಳ ಪರಿಚಯ ಕೃತಿಗಳ ಮಾರಾಟದಿಂದ ಬರುವ ಹಣದಲ್ಲಿ ಮುಂದಿನ ಕೃತಿಯನ್ನು ಪ್ರಕಟಿಸಬಹುದೆಂಬ ಅಲೋಚನೆ ಈ ಪರಿಚಯಕಾರನದು.  ಆದರೆ, ಅದು ಕಾರ್ಯಗತವಾಗಲಿಲ್ಲ.  ಈ ಕೃತಿಗಳ ಪ್ರಕಟಣೆಗಾಗಿ ಈ ದಂಪತಿಗಳು ತೊಡಗಿಸಿದ ಹಣ ಸುಮಾರು ಹತ್ತು ಲಕ್ಷ ರುಪಾಯಿಗಳಿಗೂ ಹೆಚ್ಚು.
 ಪುಸ್ತಕಗಳ ಮಾರಾಟದಿಂದ ಬಂದ ಹಣ, ಒಂದು ಕೃತಿಗೆ ಸರ್ಕಾರದಿಂದ ಸಗಟು ಖರೀದಿ ಯೋಜನೆಯಲ್ಲಿ  ಬಂದ ಹಣ ತೊಂಬತ್ತು ಸಾವಿರ ರುಪಾಯಿಗಳು,  ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥೇಶ್ವರಸಂಸ್ಕೃತಿ ಸಂಶೋಧನಾ ಸಂಸ್ಥೆಯ ವತಿಯಿಂದ ಪ್ರಕಟಿಸಲಾಗಿದ್ದ ರು-\೧೨೦೦೦೦    ( ಒಂದುಲಕ್ಷದ ಇಪ್ಪತ್ತು ಸಾವಿರರುಪಾಯಿಗಳು) ರುಪಾಯಿಗಳ ನೆರವಿನ ಹಣದ ಪೈಕಿ , ನನ್ನ ಖಾತೆಗೆ ಜಮೆಯಾದ ಒಂದು ಲಕ್ಷರುಪಾಯಿಗಳೂ ಸೇರಿದಂತೆ ಈ ಪರಿಚಯಕಾರನಿಗೆ ಸೇರಿರುವ ಹಣ ಸುಮಾರು ಮೂರರಿಂದ ನಾಲ್ಕು ಲಕ್ಷರುಪಾಯಿಗಳು!
ಧರ್ಮಸ್ಥಳದವರು ಕೊಟ್ಟ ಹಣಕ್ಕೆ ಸುಮಾರು ನೂರು ಕಾಲೇಜುಗಳಿಗೆ ಶ್ರೀಕ್ಷೇತ್ರದ  ಕೊಡುಗೆಯಾಗಿ ಪರಿಚಯಕೃತಿಗಳನ್ನು ನೀಡಲಾಗಿದೆ.  ವಾಸ್ತವವಾದ ಪರಿಸರ ಹೀಗಿದ್ದರೂ  ಕೆಲವರು ಹಿರಿಯವ್ಯಕ್ತಿಗಳು ಹಾಗೂ ಬೇರೆ ಕೆಲವರು  ’ ಸಿರಿಭೂವಲಯದ ಹೆಸರಿನಲ್ಲಿ ಈತ ಸಾಕಷ್ಟು ಹಣ ಸಂಪಾದಿಸಿದ್ದಾನೆ’ ಎಂದು ಅನುಚಿತವಾದ ಆರೋಪ ಹೊರಿಸಿರುವುದುಂಟು! ಪ್ರಕಟಿತ ಕೃತಿಗಳ ಮಾರಾಟಕ್ಕೆ ಅಡಚಣೆಯುಂಟಮಾಡಿ, ಅಂಚೆಯಮೂಲಕ ತರಿಸಿಕೊಂಡ ಪ್ರತಿಗಳಿಗೆ ಹಣಸಂದಾಯಮಾಡದಿರುವವರೂ ಸಾಕಷ್ಟಿದ್ದಾರೆ!!
ಕೆಲವರು   ’ಜೈನಸಮುದಾಯದ ಕ್ಷೇತ್ರಗಳಿಗೆ ಈತ ಜೋಳಿಗೆ ಹಾಕಿಕೊಂಡು ನೆರವಿಗೆ ಅಲೆದಿದ್ದಾನೆ’ ಎಂದು  ಅವಹೇಳನಮಾಡಿರುವುದೂ ಉಂಟು. ಆದರೆ ಇಲ್ಲಿನ ವಾಸ್ತವವಾದ ವಿಚಾರವೆಂದರೆ, ಈತ ಈ ರೀತಿಯಲ್ಲಿ ಅಂಥವರಿಂದ  ಆರ್ಥಿಕ ನೆರವು  ಬೇಡಿದ್ದಿಲ್ಲ! ಬದಲಿಗೆ ಅವರಿಗೇ ಪ್ರಕಟಿತ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾನೆ!!
ಇದೆಲ್ಲವೂ ಸಾಮನ್ಯವಾಗಿ ಲೋಕಾರೂಢಿಯ ಸಂಗತಿಗಳು ಈ ಪರಿಚಯಕಾರ ಇದಕ್ಕೆಲ್ಲ ತಲೆ ಕೆಡಿಸಿಕೊಂಡವನಲ್ಲ.  ಆದರೂ ಈಚೆಗೆ ಒಮ್ಮೆ ತಾಳ್ಮೆಗೆಟ್ಟು  ಮಾರಾಟವಾಗದೇ ಒಂದು ದೊಡ್ಡ ಕೊಠಡಿಯತುಂಬ ಪೇರಿಸಿ ಇರಿಸಿದ್ದ ಕೃತಿಗಳನ್ನು ಯಾರುಬೇಕಾದರೂ ಉಚಿತವಾಗಿ ಪಡೆಯಬಹುದೆಂದು ಪ್ರಕಟಿಸಲಾಯಿತು. ಅದಕ್ಕೂ ಸಾರ್ವಜನಿಕರಿಂದ ಪ್ರತಿಕ್ರಿಯೆ ಸಿಗಲಿಲ್ಲ!!
ಕೊನೆಗೆ ಈ ಪ್ರತಿಗಳಿಗೆ  ಅಗ್ನಿಸ್ಪರ್ಶ ಮಾಡುವ ಸಂಕಲ್ಪಮಾಡಿದ್ದೂ ಆಯಿತು.  ಕೆಲವರು ಇದು ಸೂಕ್ತವಲ್ಲವೆಂದು ತಿಳಿಸಿದರು. ಗೆಳೆಯರೊಬ್ಬರು  ’ತಮ್ಮ ಪರಿಚಯದ ಆಶ್ರಮವೊಂದರಲ್ಲಿ ಗೋಶಾಲೆಯಿದೆ.  ಅದಕ್ಕೆ ಆರ್ಥಿಕನೆರವಿನ ಅಗತ್ಯವಿರುತ್ತದೆ. ಈ ಕೃತಿಗಳನ್ನು ಅವರಿಗೆ ದಾನವಾಗಿ ನೀಡಿದರೆ, ಸದುಪಯೋಗವಾಗುತ್ತದೆ ’ ಎಂಬ ಸಲಹೆನೀಡಿ,  ಮಾರಾಟವಾಗದೇ ಮನೆಯಲ್ಲಿ ಉಳಿದು, ಧೂಳು ಹಿಡಿಯಲಿದ್ದ ದೊಡ್ಡರಾಶಿಯ ಹೊರೆಯಿಂದ ಈ ಪರಿಚಯಕಾರನನ್ನು ಬಿಡುಗಡೆ ಮಾಡಿದರು!!!
ಇದಾವುದನ್ನೂ ಈ ಪರಿಚಯಕಾರನು ’ಆರ್ಥಿಕ ನಷ್ಟ’ ಎಂದು ಪರಿಗಣಿಸಿಯೇ ಇಲ್ಲ!! ಉತ್ಸಾಹದಿಂದ ಮುದ್ರಣಮಾಡಿಸಿದ ಸಾವಿರಾರು ಪರಿಚಯಕೃತಿಗಳು ಹೇಗಾದರೂ ಸರಿ, ಓದುಗರ ಕೈಸೇರಿದುವಲ್ಲ ಎಂಬ ಸಂತಸ ಈತನದು.  ಮೂರುದಶಕಗಳಿಗೂ ಮೀರಿದ ಈ ಪ್ರಯತ್ನದಿಂದ ಈ ಪರಿಚಯಕಾರನಿಗೆ ಚೆನ್ನಾಗಿ ಮನವರಿಕೆಯಾದ ಮಾಹಿತಿಯೆಂದರೆ :
 ’’ಯಾವಕಾರಣಕ್ಕೂ ಮಲಗಿ ನಿದ್ರಿಸುತ್ತಿರುವ ಕನ್ನಡಗರನ್ನು ಎಚ್ಚರಗೊಳಿಸುವ ಪಾಪ ಕಾರ್ಯಕ್ಕೆ ಕೈಹಾಕಬಾರದು! ಕನ್ನಡಿಗರು ಬಯಸುವುದನ್ನು ಮಾತ್ರ ಉತ್ಪಾದಿಸಬೇಕು!!  ಇಲ್ಲವಾದಲ್ಲಿ ನೀವು ಪುಕ್ಕಟೆ ಕೊಟ್ಟರೂ ಅವರು ಅದನ್ನು ಪಡೆಯಲಿಚ್ಚಿಸುವುದಿಲ್ಲ!!! ”
ಸಿರಿಭೂವಲಯಕಾವ್ಯದ ಸರಳಪರಿಚಯಕೃತಿಗಳ ಪ್ರಸಾರದಿಂದಾಗಿ ಜಗತ್ತಿನೆಲ್ಲೆಡೆಯೂ ಜನರು ಪ್ರಭಾವಿತರಾಗಿ ಬದಲಾವಣೆ ಹೊಂದಿಬಿಡುವರೆಂಬ ಭ್ರಮೆಯನ್ನೇನೂ ಈ ಪರಿಚಯಕಾರ ಹೊಂದಿಲ್ಲ!
ಪ್ರತಿಯೊಬ್ಬರ ಜೀವನವೂ ಅವರ ಪ್ರಾಚೀನ ಕರ್ಮಕ್ಕೆ ಅನುಸಾರವಾಗಿಯೇ ನಡೆಯುತ್ತದೆ. ಯಾರು ಎಷ್ಟೇ ಮಾರ್ಗದರ್ಶನ ಮಾಡಿದರೂ ಇಂದಿನ ಬಹುಪಾಲು ಯುವಜನತೆಯು ಅದನ್ನು ಗ್ರಹಿಸುವ ಮನಸ್ಥಿತಿಯಲ್ಲಿರುವುದಿಲ್ಲ!!
ಅವರ ಆಶೆ ಆಕಾಂಕ್ಷೆಗಳೇ ಬೇರೆ, ಒಲವೇ ಬೇರೆ. ಇಂಥವರನ್ನು ಈ ಸಿರಿಭೂವಲಯಕ್ಕೆ ಕಟ್ಟಿಹಾಕಲು ಸಾಧ್ಯವಿಲ್ಲವೆಂಬ ಅರಿವು ಈ ಪರಿಚಯಕಾರನಿಗಿದೆ.  ಆದರೂ ಮುಂದಿನ ಶತಮಾದಷ್ಟು ಕಾಲಾವಧಿಯನಂತರದ ಪೀಳಿಗೆಯಲ್ಲಿ ಈ ಮಹಾನ್ ಕಾವ್ಯದಲ್ಲಿ ಆಸಕ್ತಿವಹಿಸಬಹುದಾದವರ ಉಪಯೋಗಕ್ಕಾಗಿ ತಾನು ಈ ತಪಸ್ಸಿನಲ್ಲಿ ತೊಳಲಾಡುತ್ತಿರುವುದಾಗಿ  ಪರಿಚಯಕಾರನು ಸೂಚಿಸಿರುವುದಿದೆ.
*  *  *
ಸಿರಿಭೂವಲಯವನ್ನು ಕುರಿತು ಯಾರು ಏನೇ ಹೇಳಲಿ,ಇದೊಂದು ಜಗತ್ತಿನ ಅತ್ಯಂತ ಅಚ್ಚರಿಯ ಕಾವ್ಯವೆಂಬುದರಲ್ಲಿ  ಸಂದೇಹವಿಲ್ಲ. ಈ ಕಾವ್ಯದಲ್ಲಿ  ಅಡಕವಾಗಿರುವ ಮಾಹಿತಿಗಳನ್ನು ಓದಿ ತಿಳಿದುಕೊಳ್ಳುವುದು ಓದುಗರ ಸಾಮರ್ತ್ಯಕ್ಕೆ ಸೇರಿದ ಸಂಗತಿ. ಅಂತರ್ಜಾಲತಾಣದಲ್ಲಿ  ಸುತ್ತಾಡುವುದಕ್ಕಿಂತಲೂ ಹೆಚ್ಚಿನ ಖುಷಿಯನ್ನು  ಕೊಡುವ ಕಾರ್ಯ ಈ ಕಾವ್ಯದ ಅಧ್ಯಯನ.
ಬಾಲಕ ಬಾಲಕಿಯರಿಗೆ, ಯುವಕ ಯುವತಿಯರಿಗೆ, ನಡುಪ್ರಯದ ಸ್ತ್ರೀ-ಪುರುಷರಿಗೆ, ವೃದ್ಧಾಪ್ಯದಲ್ಲಿರುವವರಿಗೆ, ಹೀಗೆ ಎಲ್ಲ ವಯೋಮಾನದವರಿಗೂ ಈ ಕಾವ್ಯದ ಅಧ್ಯಯನದಿಂದ ಮಹತ್ತರವಾದ ಉಪಯೋಗವಿದೆ.  ಆದರೆ, ಈ ಕಾವ್ಯವನ್ನು ಓದುವುದು ಬೇರೆ ಕಾವ್ಯಗಳನ್ನು ಓದಿದಂತೆ ಸರಳವಲ್ಲ!  ಇಲ್ಲಿನ ಓದಿಗೆ ಅದರದೇ ಆದ ಕ್ರಮವಿದೆ. ಆಸಕ್ತಿ ಇರುವವರು ಅಪೇಕ್ಷಿಸಿದಲ್ಲಿ, ಈ ಕಾವ್ಯವನ್ನು ಸೂಕ್ತವಾಗಿ ಓದಿತಿಳಿಯುವ ಕ್ರಮವನ್ನು ಕಲಿಸಿಕೊಡಲಾಗುತ್ತದೆ.  ಈ ರೀತಿಯಲ್ಲಿ ಕ್ರಮಬದ್ಧವಾಗಿ  ಓದುವುದನ್ನು ಕಲಿಯುವುದರಿಂದ ಆಸಕ್ತಿ ಇರುವವರು ಮುಂದಿನ ಸಂಶೋಧನೆಮಾಡುವುದಕ್ಕೂ ಸಹಾಯಕವಾಗುತ್ತದೆ. ವಿವರಗಳಿಗೆ ಸಂಪರ್ಕಿಸಿ: ೯೪೪೯೯೪೬೨೮೦.
(ಮುಂದುವರೆಯುವುದು)
                      -ಜಮದಗ್ನಿಸುತ

No comments:

Post a Comment