Friday, 29 May 2020

ಸಿರಿಭೂವಲಯದ ಆಯ್ದ ಸಾಂಗತ್ಯ ಪದ್ಯಗಳ ಸಂಗ್ರಹ **


**ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆ**** ಭಾಗ: ೩.

 ೨.  **ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ
        ಸಿರಿಭೂವಲಯದ ಆಯ್ದ ಸಾಂಗತ್ಯ ಪದ್ಯಗಳ ಸಂಗ್ರಹ **

ಸಿರಿಭೂವಲಯದ ಅಕ್ಷರ ಅವತರಣಿಕೆಯಲ್ಲಿ ಮೂಲಸಾಹಿತ್ಯದ ಸ್ವರೂವು
”ಅಷ್ ಟ ಮಹಾಪ್ ರಾತಿಹಾರ್ ಯ ವಯ್ ಬವದಿನ್ ದ|ಅಷ್ ಟಗುಣನ್ ಗಳೊಳ್ ಓಮ್ ದಮ್ ||
ಸೃಷ್ ಟಿಗೆ ಮನ್ ಗಲ ಪರ್ ಯಾಯದಿನಿತ್ ತ|ಅಷ್ ಟಮಜಿನಗೆರಗುವೆನು|| ”   ಎಂದಿರುತ್ತದೆ.  ಇದರಲ್ಲಿ ಮೂಲಾಕ್ಷರ ಹಾಗೂ ಸಂಯುಕ್ತಾಕ್ಷರ ಎರಡೂ ಬೆರೆತಿರುತ್ತದೆ!  ಇದನ್ನು ಸುಲಭವಾಗಿ ಓದಲು ಸಾಧ್ಯವಿಲ್ಲ.!  ಇದನ್ನೇ ಇಂದಿನ ಒತ್ತಕ್ಷರ ಕ್ರಮದಲ್ಲಿ ಬರೆದಾಗ:
”ಅಷ್ಟಮಹಾಪ್ರಾತಿಹಾರ್ಯವೈಭವದಿಂದ|
ಅಷ್ಟಗುಣಂಗಳೊಳೊಂದಮ್||
ಸೃಷ್ಟಿಗೆ ಮಂಗಲ ಪರ್ಯಾಯದಿನಿತ್ತ|
ಅಷ್ಟಮ ಜಿನಗೆರಗುವೆನು”||  ಎಂದಾಗುತ್ತದೆ!! ಮೂಲಸಾಹಿತ್ಯವನ್ನು ಈ ಕ್ರಮದಲ್ಲಿ ಬದಲಿಸಿಕೊಂಡನಂತರ ಅದನ್ನು ಪದವಿಭಾಗಮಾಡಿಕೊಂಡು, ತಾತ್ಪರ್ಯವನ್ನು ರೂಪಿಸಿಕೊಂಡು ಅರ್ಥೈಸಿಕೊಳ್ಳಬೇಕು!   ಈ ಕಾವ್ಯದ ೯ ಖಂಡಗಳಲ್ಲಿ ಈ ರೀತಿಯ  ಆರು ಲಕ್ಷ ಸಾಂಗತ್ಯ ಪದ್ಯಗಳು ದೊರೆಯುತ್ತವೆ  ಇವುಗಳಲ್ಲಿ  ಅಶ್ವಗತಿಯೊಂದಿಗೆ  ಸ್ತಂಬಕಾವ್ಯರೂಪದ ಅಂತರ್ಸಾಹಿತ್ಯವು ಹಲವಾರು ಶ್ರೇಣಿಗಳಲ್ಲಿ ಉಗಮವಾಗುತ್ತವೆ!!  ಈಗ ಪ್ರಥಮ ಖಂಡದ ೫೯ ಅಧ್ಯಾಯಗಳ ಮೂಲಸಾಹಿತ್ಯ ಹಾಗೂ ಅದರಿಂದ ಉಗಮವಾಗುವ ಅಂತರ್ಸಾಹಿತ್ಯವನ್ನು ತೆಗೆದು  ಸುಮರು ೨೦೦೦೦ ಸಾವಿರಕ್ಕೂ ಹೆಚ್ಚಿನ ಸಾಂಗತ್ಯಪದ್ಯಗಳನ್ನು ಮುದ್ರಿಸಲಾಗಿದೆ. ಇವುಗಳಪೈಕಿ  ಕೆಲವು ಸಾಂಗತ್ಯ ಪದ್ಯಗಳನ್ನು ಸಾಧ್ಯವಿರುವ ಮಟ್ಟಿಗೆ ವಿಶ್ಲೇಷಿಸಲಾಗಿದೆ.
 ಕಾವ್ಯರಚನೆಯಲ್ಲಿ ಕವಿಯು ಆರುಸಾವಿರ ಗಣಿತಸೂತ್ರಗಳನ್ನು ಬಳಸಿರುವುದಾಗಿ ಸೂಚಿಸಿರುವುದಿದೆ. ಈ ಕಾವ್ಯಾದಲ್ಲಿ ಆರುಸಾವಿರ ಪ್ರಶ್ನೆಗಳಿಗೆ ಉತ್ತರಗಳಿವೆಯೆಂದೂ, ಜಗತ್ತಿ ೭೧೮ ಭಾಷೆಗಳ ಸಾಹಿತ್ಯವು ಇದರಲ್ಲಿ  ಅಡಗಿದೆಯೆಂದೂ, ಜಗತ್ತಿ ಎಲ್ಲಭಾಷೆಯ, ಎಲ್ಲವಿಷಯಗಳಿಗೆ ಸೇರಿದ ೬೪ ಕಲೆಗಳ ಮಾಹಿತಿಯೂ ಇದರಲ್ಲಿ ಅಡಕವಾಗಿದೆಯೆಂದೂ ಕವಿಯ ಹೇಳಿಕೆಯಿದೆ!  ಈ ಕಾವ್ಯವನ್ನು ಓದಲು ಸುಮಾರು ೪೦ ಬಂದಗಳಿರುವುದಾಗಿಯೂ ಕವಿಯು ಸೂಚಿಸಿದ್ದಾನೆ.
’ಜಗತ್ತಿನಲ್ಲಿ ಎಲ್ಲವೂ ಗಣಿತಾತ್ಮಕವಾಗಿಯೇ ನಡೆಯುತ್ತವೆ. ಯಾವುದೂ ಆಕಸ್ಮಿಕವಾಗಿ ನಡೆಯುವುದಿಲ್ಲ, ಜಗತ್ತಿನ ಮಾನವರೆಲ್ಲರಿಗೂ ಒಂದೇ ಧರ್ಮ, ಅದು ’ಮಾನವಧರ್ಮ’ ಜಗತ್ತಿನಲ್ಲಿರುವುದೆಲ್ಲವೂ ಅರೆಸತ್ಯ; ಅರೆಮಿಥ್ಯ  ಎಂಬುದಾಗಿ ಮೂರು ಮಹತ್ವದ ಮಾಹಿತಿಯನ್ನು ಕವಿಯು ಘೋಷಿಸಿರುವುದಿದೆ! ಇದರೊಂದಿಗೆ ’ಜಗತ್ತಿನ ಎಲ್ಲ ಜ್ಞಾನಕ್ಕೂ ಋಗ್ವೇದವೇ ಮೂಲ ಆಕರ’ ಎಂಬ ಸಾರ್ವಕಾಲಿಕ ಸತ್ಯವನ್ನೂ ಕವಿಯು ಘೋಷಿಸಿರುವುದಿದೆ!!
ಕವಿಯು ಜೈನಸಂಪ್ರದಾಯದವನೇ ಆಗಿದ್ದರೂ, ಸರ್ವಧರ್ಮ ಸಮನ್ವಯಿಯಾಗಿ ಈ ಘೋಷಣೆ ಮಾಡಿದ್ದಾನೆ!!  ಜೈನಸಂಪ್ರದಾಯದವರಿಗೆ ವೇದಗಳು ಪ್ರಮಾಣವಲ್ಲ!! ಈ ಕಾರಣದಿಂದಾಗಿ ಆ ಸಮುದಾಯದ ಕೆಲವು ವಿದ್ವಾಂಸರು ಇದನ್ನು ತೀವ್ರವಾಗಿ ವಿರೋಧಿಸುತ್ತಾರೆ!! ಈ ವಿರೋಧದ ತೀವ್ರತೆ ಎಷ್ಟಿರುವುದೆಂದರೆ ಈ ಕಾವ್ಯದ ಸರಳ ಪರಿಚಯಕಾರನನ್ನು ’ಜೈನಸಮುದಯಕ್ಕೆ ವಿಷಹಾಕುವ ಕೊಲೆಗಾರ’ ಎಂದು ಸೂಚಿಸುವಷ್ಟು ಪ್ರಖರತೆ ಅದರಲ್ಲಿ ತುಂಬಿರುತ್ತದೆ!! ಇನ್ನು ಕೆಲವು ಮೇಧಾವಿಗಳು ’ಸಿರಿಭೂವಲಯವು ಜೈನಸಂಪ್ರದಾಯದ ಕಾವ್ಯ. ಇದನ್ನು  ಸರಳಪರಿಚಯದ ಹೆಸರಿನಲ್ಲಿ  ಈ ಬ್ರಾಹ್ಮಣನು ವೇದಸಾಹಿತ್ಯಕ್ಕೆ ’ಹೈಜಕ್ ’ ಮಾಡಿ,  ವಂಚನೆ ಮಾಡುತ್ತಿದ್ದಾನೆ. ಎಂದು ಪ್ರಲಾಪಿಸಿರುವುದಿದೆ!
 ಮತ್ತೆ ಕೆಲವರು ’ಇನ್ನುಮುಂದೆ ಜೈನಸಮುದಾಯದವರೇ ಈ ಕಾವ್ಯದ ಸಂಶೋಧನೆ ಮಾಡಬೇಕು.  ಅಂಥ ಸಂಶೋಧನೆಯ ತಂಡದಲ್ಲಿ ಜೈನೇತರರಿಗೆ ಅವಕಾಶನೀಡಬಾರದು’ ಎಂದು  ಠರಾವು ಮಾಡಿಕೊಂಡಿರುವುದೂ ಉಂಟು!!! ’ಜೈನ ಸಂಪ್ರದಾಯವು ಜಗತ್ತಿನಲ್ಲಿ ವೇದಸಂಪ್ರದಾಯಕ್ಕಿಂತಲೂ ಪ್ರಚೀನವಾದುದು! ಜಗತ್ತಿನ ಉಳಿದೆಲ್ಲ ಧರ್ಮಗಳಿಂದಲೂ ಸ್ವಲ್ಪ ಸ್ವಲ್ಪ ವಿಚಾರಗಳನ್ನು ತೆಗೆದುಕೊಂಡು ವೇದಗಳನ್ನು ರಚಿಸಲಾಗಿದೆ’ ಎಂಬ ಮಹಾನ್ ಸಂಶೋಧಕರೂ ಈ ಗುಂಪಿನಲ್ಲಿದ್ದಾರೆ!!
 ಇಂಥ ಉದಾರಹೃದಯಿಗಳಿಗೆ ಶತೃವಾಗಿರುವ ಈ ಸುಧಾರ್ಥಿಯು ಮಾಡಿರುವ ಮಹಾಪರಾಧವೆಂದರೆ,  ಈ ಸಿರಿಭೂವಲಯಸಾಗರದ ಆಳದಲ್ಲಿದ್ದ ಬಂಡೆಗಳನ್ನು ಸೀಳಿ, ಪುಡಿಮಾಡಿ, ಅಲ್ಲಿದೊರೆತ ಅಮೂಲ್ಯ ರತ್ನಗಳನ್ನು ಹೊರತಂದು, ಜಗತ್ತಿನೆದುರು ಪ್ರದರ್ಶಿಸಿದ್ದು! ನಿಜಕ್ಕೂ ಇದೊಂದು  ಆತ್ಮಪ್ರಶಂಸೆಯ ಮಾತಲ್ಲ. ಈ ಬಡಪಾಯಿ ಪರಿಚಯಕಾರನು ಸುಮಾರು ೩೦ ವರ್ಷಗಳಕಾಲ ಅವಿವೇಕಿಯಂತೆ ಈ ಕಾವ್ಯದಲ್ಲಿ ಮುಳುಗಿದ್ದಕ್ಕೆ ಇದಕ್ಕಿಂತ ವಿಶೇಷ ಕೊಡುಗೆ ಇನ್ನೇನಿದೆ!!??
ಸಿರಿಭೂವಲಯ ಕಾವ್ಯವನ್ನು ಸಾಮಾನ್ಯ ಓದುಗರಿಗೂ ಇಂದಿನ ಓದುವ ಕ್ರಮದಲ್ಲಿ ಸುಲಭವಾಗಿ ಓದಲು ಸಹಕಾರಿಯಾಗಲೆಂಬ  ಉದ್ದೇಶದಿಂದ ರೂಪಿಸಿದ ಈ ಕೃತಿಯನ್ನು ಸುಧಾರ್ಥಿಯ  ಕೈಹಿಡಿದಾಕೆ ಶ್ರೀಮತಿ  ಗಿರಿಜಾ ಅವರು  ಪ್ರಕಟಿಸಿದ್ದಾರೆ. ಡೆಮಿ ೧/೪ ಅಳತೆಯ ಸುಮಾರು ೨೧೦ ಪುಟಗಳ ವ್ಯಾಪ್ತಿಯ ಈ ಸಾಂಗತ್ಯಪದ್ಯಗಳ ಸಂಕಲನವು ೨೦೧೧ರಲ್ಲಿ  ಪ್ರಕಟವಾಗಿದೆ.   ಹೆಸರು  ಸೂಚಿಸ ಬಯಸದ ಸಿರಿಭೂವಲಯದ ಅಭಿಮಾನಿಯೊಬ್ಬರು ಈ ಕೃತಿಯ ಮುದ್ರಣ ಹಾಗೂ ಕಾಗದಕ್ಕೆ ಸಂಬಂಧಿಸಿದ ವೆಚ್ಚಕ್ಕಾಗಿ ೩೪ ಸಾವಿರ ರುಪಾಯಿಗಳನ್ನು ಕೊಡುಗೆಯಾಗಿ ನೀಡಿದ್ದರು,   ಕಾಲಕ್ರಮದಲ್ಲಿ ಈ ಮೊತ್ತವನ್ನು ಅವರಿಗೆ ಬೇರೊಂದು ರೂಪದಲ್ಲಿ ಪೂರ್ಣವಾಗಿ ಹಿದಿರುಗಿಸಲಾಗಿದೆ.
ಕೇವಲ ಹನ್ನೆರಡು ಪುಟಗಳ ಸಂಕ್ಷಿಪ್ತ ವಿವರಣೆಯಲ್ಲಿ ಸಿರಿಭೂವಲಯದ ಸಮಗ್ರ ವಿವರಗಳನ್ನು ಸಂಗ್ರಹರೂಪದಲ್ಲಿ ನೀಡಿರುವ ಸುಧಾರ್ಥಿಯು ಸಿರಿಭೂವಲಯದ ಮೂಲಸಾಹಿತ್ಯ ಹಾಗೂ ಅಂತರ್ಸಾಹಿತ್ಯದ ಸಾಂಗತ್ಯಪದ್ಯಗಳಲ್ಲಿ ಪ್ರಮುಖವಾದ ೬೪೮ ಪದ್ಯಗಳನ್ನು ಸಂಗ್ರಹಿಸಿ, ಇಂದಿನ ಓದುವ ಲಿಪಿಕ್ರಮದಲ್ಲಿಯೇ  ಮುದ್ರಿಸಿ ಪ್ರಕಟಿಸಿದ್ದಾಗಿದೆ.
ಸಾಂಗತ್ಯ ಪದ್ಯಗಳನ್ನು ವಿಷಯಾನುಸಾರವಾಗಿ  ಹನ್ನೊಂದು ಗುಂಪುಗಳಾಗಿ ವಿಂಗಡಿಸಿರುವ ಸಂಗ್ರಹಕಾರನು  ಅಂಕವಿಜ್ಞಾನ; ಅಣುವಿಜ್ಞಾನ; ಆಕಾಶಗಮನ ಹಾಗೂ ಗಣಕಯಂತ್ರಕ್ರಮ; ಮೋಜಿಣಿ ಹಾಗೂ ಕಟ್ಟಡವಿಜ್ಞಾನ;  ದಾಂಪತ್ಯವಿಜ್ಞಾನ;  ಭವಿಷ್ಯವಾಣಿ; ಲಲಿತಾಯುರ್ವೇದ;  ಭಾಷೆ ಮತ್ತು ಲಿಪಿ;  ಕನ್ನಡಭಗವದ್ಗೀತೆ; ಕಾವ್ಯ ಹಾಗೂ ಕವಿ;  ಧಾರ್ಮಿಕ ವಿಷಯಗಳು  ಎಂಬುದಾಗಿ ಈ ಗುಂಪುಗಳಿಗೆ ಸೂಕ್ತವಾದ ಶೀರ್ಷಿಕೆಗಳನ್ನು ನೀಡಲಾಗಿದೆ. 
ಕವಿ; ಕಾವ್ಯ,  ಕಾಲ,  ಸಂಶೋಧನೆ ಮುಂತಾದ ವಿಚಾರಗಳಿಗೆ ಸೇರಿದಂತೆ  ಸೂಕ್ತವಾದ ಮಾಹಿತಿಗಳನ್ನು ಹಿನ್ನುಡಿಯ ರೂಪದಲ್ಲಿ ಸೂಚಿಸಲಾಗಿದೆ. ವರರುಚಿಯ ’ಕಟಪಯಾದಿಸೂತ್ರ’ ಕುರಿತು ಸಂಕ್ಷಿಪ್ತವಾದ  ವಿವರಣೆಯನ್ನೂ ನೀಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸಿರಿಭೂವಲಯದ ಸಾಂಗತ್ಯಪದ್ಯಗಳನ್ನು ಕುರಿತ ಪರಿಚಯವು ಸಾಕಷ್ಟು ಜನಪ್ರಿಯವಾಗುತ್ತಿದೆ. ಆದರೆ ೨೦೧೧ರಲ್ಲಿ ಈ ಪರಿಚಯ ಕೃತಿಯು ಪ್ರಕಟವಾದ ಸನ್ನಿವೇಶದಲ್ಲಿ ಅದರ ಪರಿಚಯ ಹೊಂದಿದ್ದವರು ಬಹಳ ವಿರಳವಾಗಿದ್ದುದು ಖಚಿತ.  ಅಂಥಪರಿಸರದಲ್ಲೂ  ಈ ಸಿರಿಭೂವಲಯ ಕಾವ್ಯದ ಕೆಲವಾರು ಸಾಂಗತ್ಯ ಪದ್ಯಗಳು ಜನಸಾಮಾನ್ಯರ ನಾಲಿಗೆಯಮೇಲೆ ನಲಿದಾಡುವಂತಾದುದು  ಈ ಸಂಕಲನದ ಯಶಸ್ಸಿಗೆ ಸಾಕ್ಷಿಯಾಗಿದೆ.
’ಅಂಕವೆಂದರದೇನು ಅಂಕದಂಕಿಗಳೆಷ್ಟು|
ಅಂಕವದೆಲ್ಲಿ ಹುಟ್ಟಿಬಹುದು|
ಅಂಕವಿರುವುದೆಲ್ಲಿ ಅಂಕದ ಕಾಲದ|
 ಅಂಕಿಯಕಾಣುವುದೆಂತು||

ಅಣುವುನೀರೊಳಗೆಷ್ಟುಅನಲವಾಯುಗಳೆಷ್ಟು|
ನೆನೆದುಸುಡದಣುವೆಷ್ಟು|
ತನಿವರ್ಣನಾಲ್ಕರಿಂಪೂರಣಗನಲದೆ|
ಮಿನುಗುವ ಪರಮಾಣುವೆಷ್ಟು||

ತನುವನು ಆಕಾಶಕೆ ಹಾರಿಸಿನಿಲಿಸುವ|
ಘನವೈಮಾನಿಕದಿವ್ಯಕಾವ್ಯ|
ಪನಸಪುಷ್ಪದಕಾವ್ಯವಿಶ್ವಂಬರಕಾವ್ಯ|
ಜಿನರೂಪಿನಭದ್ರಕಾವ್ಯ||

ಹಾಡಲುಸುಲಭವಾದಂಗ|
ನೋಡಲುಮೆಚ್ಚುವಗಣಿತ|
ಜೋಡಿಯಂಕದಕೂಟದಂಗ|
ಕೂಡುವಪುಣ್ಯಾಂಗಭಂಗ||

ಯವೆಯಕಾಳಿನಕ್ಷೇತ್ರದಳತೆಯೊಳಡಗಿಸಿ|
ಅವರೊಳನಂತವಸಕಲಾನ್|
ಕವನವದೊಳ್ ಸವಿಯಾಗಿಸಿಪೇಳುವ|
ನವಸಿರಿಇರುವಭೂವಲಯ||
 ಮುಂತಾದ ಸಾಂಗತ್ಯಗಳ ಒಳಗೆ ಇಣುಕಿನೋಡಿದಾಗ ಅಲ್ಲಿ ಇಂದಿನ ಆಧುನಿಕ ಪರಿಸರದ  ಅಂಕವಿಜ್ಞಾನ, ಅಣುವಿಜ್ಞಾನ, ಆಕಾಶಗಮನ, ಗಣಕಯಂತ್ರ ವಿಜ್ಞಾನ ಮುಂತಾದುವಕ್ಕೆ ನೇರವಾಗಿ ಸಂಬಂಧಿಸಿದ ವಿಚಾರಗಳು ಅಡಕವಾಗಿರುವುದನ್ನು ಓದುಗರು ಕಾಣಬಹುದಾಗಿದೆ.
ಕಾವ್ಯದಲ್ಲಿ ಕಾಣಬರುವ ಒಂದು ಸಾಂಗತ್ಯ..
’ಕರುಣೆಯಧವಲವರ್ಣದಪಾದಗಳಿಹ|
ಪರಮಾತ್ಮಪಾದದ್ವಯದೆ|
ಸಿರವಿಹನಾಲ್ಕಂಕವೆರಸಿಸಿಂಹದಮುಖ|
ಭರತಖಂಡದಶುಭಚಿಹ್ನೆ||
ಇದನ್ನು ವಿವರಿಸುವಲ್ಲಿ ಕವಿಯು ಸುಮಾರು ೧೨೦೦ವರ್ಷಗಳ ಹಿಂದೆಯೇ ಸ್ವತಂತ್ರಭಾರತದ ರಾಷ್ಟ್ರಧ್ವಜದ ಚಿಹ್ನೆಯನ್ನು ಕುರಿತು ಸೂಚಿಸಿದ್ದಾನೆಂದು ಪರಿಚಯಿಸಿರುವುದನ್ನು, ಇಂದಿನವಿದ್ವಾಂಸರು ಇದೆಲ್ಲವೂ ಸಮರ್ಪಕವಲ್ಲವೆಂದೇ ವಾದಿಸುವರೆಂದರೆ,  ಈ ಸರಳ ಪರಿಚಯಕಾರನು ಅಂಥವರನ್ನು ಕುರಿತು ಬಳಸಿರುವ ಪದಗಳು ಉಚಿತವೋ; ಅನುಚಿತವೋ ಎಂಬುದನ್ನು ಓದುಗರೇ ನಿರ್ಧರಿಸಬೇಕಾಗುತ್ತದೆ.
’ಸಿರಿಭೂವಲಯದ  ಸಾಂಗತ್ಯಪದ್ಯಗಳು ಅಕ್ಷರಗಣ ಅಥವಾ ಮಾತ್ರಾಗಣಕ್ಕೆ ಹೊಂದಿಕೆಯಾಗುವುದಿಲ್ಲ. ಕುಮುದೇಂದುವು ಇದನ್ನು ’’ಶಬ್ದಗಣ’’ ಎಂದು ಹೆಸರಿಸಿದ್ದಾನೆ.  ಇದನ್ನು ಕನ್ನಡದ  ಪ್ರಥಮ ಶಬ್ದಗಣದ ಸಾಂಗತ್ಯವೆನ್ನಬಹುದು. ಇದು ರೂಪುಗೊಂಡದ್ದು ೯ನೇ ಶತಮಾನದಲ್ಲಿ ೧೫ ನೇ ಶತಮಾನದಲ್ಲಲ್ಲಾ ಎಂಬ ಮಾಹಿತಿಯನ್ನು  ವ್ಯಾಕರಣ ಶಾಸ್ತ್ರಜ್ಞರು  ಗಮನಿಸಬೇಕು’ ಎಂದು ಸೂಚಿಸಿರುವ ಪರಿಚಯಕಾರನು  ಈ ಕಾವ್ಯದ ಛಂದಸ್ಸಿನ ವಿಚಾರವಾಗಿ ಶುಷ್ಕವಾದ ವಾದ- ಪ್ರತಿವಾದದಲ್ಲಿ ತೊಡಗಿ ವಿವಾದ ಸೃಷ್ಟಿಸಿರುವವರಿಗೆ ಸೂಕ್ತವಾದ ಮಾಹಿತಿಯನ್ನು ಒದಗಿಸಿರುವುದಿದೆ. 
ಅಂಕಭೂವಲಯವನ್ನು ಆಧರಿಸಿದ  ಸಂಶೋಧನೆ ಎಂಬುದನ್ನೇ ಪ್ರಧಾನವಾಗಿ   ಬಿಂಬಿಸಿ, ೧೯೫೩ ರರ ಅಕ್ಷರ ಭೂವಲಯದ ಪ್ರಚಾರವಾಗಿತ್ತು.    ಅಲ್ಲಿ ಪ್ರಕಟವಾಗಿದ್ದ  ’ಮಲ್ಲಿಕಬ್ಬೆ ಎಂಬ ಸಾಧ್ವಿಯು ಕೋರಿಕಾಗದದಲ್ಲಿ ಪ್ರತಿಲಿಪಿಮಾಡಿಸಿ, ತನ್ನ ಗುರು ಮಾಘಣನಂದಿಗೆ ಶಾಸ್ತ್ರದಾನಮಾಡಿದ್ದ ಪ್ರತಿಗಳಪೈಕಿ (ಸುಮಾರು ನಾನೂರುವರ್ಷಗಳಹಿಂದೆ) ಒಂದು ಪ್ರತಿಯು ದೊಡ್ಡಬೆಲೆ ಧರಣೇಂದ್ರಪಂಡಿತರಲ್ಲಿ ಉಳಿದುಬಂದಿತ್ತು, ಅದನ್ನು ಬಳಸಿಕೊಂಡು, ಶ್ರಮವಹಿಸಿ  ಅಂಕಿಗಳಿಗೆ ಅಕ್ಷರಗಳನ್ನು ಅಳವಡಿಸಿ, ಅಕ್ಷರಗಳ ಸರಪಣಿಯಿಂದ ಸಾಂಗತ್ಯ ಪದ್ಯಗಳನ್ನು ರೂಪಿಸಿ ಮುದ್ರಿಸಲಾಗಿದೆ  ಎಂಬ ಮಾಹಿತಿಗೆ ಹೆಚ್ಚಿನ ಒತ್ತುಕೊಟ್ಟು ೧೯೫೩ರ ಅಕ್ಷರ ಅವತರಣಿಕೆಯನ್ನು ಪ್ರಕಟಿಸಲಾಗಿದೆ  ಎಂಬ ವಿಚಾರವಿತ್ತು.
ಅಂಕಭೂವಲಯದ ಒಂದು ಪುಟದ ನಕಲು ಪ್ರತಿಯನ್ನೂ ಅಳವಡಿಸಲಾಗಿತ್ತು.  ಆ ಅಂಕಚಕ್ರವನ್ನು ಶ್ರೇಢಿಬಂದದಲ್ಲಿ ಓದುವ ಕ್ರಮವನ್ನು ಸುಧಾರ್ಥಿಗೆ ಕೆ. ಅನಂತಸುಬ್ಬರಾಯರು  ವಿವರಿಸಿದ್ದರು . ಅದೇ ಕ್ರಮವನ್ನನುಸರಿ, ಆ ಅಂಕಚಕ್ರವನ್ನು ಅಕ್ಷರಕ್ಕೆ ಪರಿವರ್ತಿಸಿ, ಮೂಲಸಾಹಿತ್ಯವನ್ನು ಪಡೆಯಲು ಪ್ರಯತ್ನಿಸಿದಾಗ, ಅದರಲ್ಲಿ ಕೆಲವಾರು ನ್ಯೂನತೆಗಳು ಕಂಡುಬಂದುದನ್ನು ದಾಖಲಿಸಲಾಯಿತು.  ಆದರೂ, ಸಿರಿಭೂವಲಯಸಾರವನ್ನು ನಿರೂಪಿಸುವಾಗ ಸುಧಾರ್ಥಿಯೂ ಇಂಥಮಾಹಿತಿಗಳಿಗೆ ಹೆಚ್ಚಿನ ಮಹತ್ವ ನೀಡುವುದು ಅನಿವಾರ್ಯವಾಗಿತ್ತು.
 ೧೯೫೩ರ ಅಕ್ಷರ ಅವತರಣಿಕೆಯಲ್ಲಿ ಅಂತರ್ಗತವಾಗಿರುವ ಅಂತರ್ಸಾಹಿತ್ಯವನ್ನು ಮೊದಲಿಗೆ ಪ್ರತ್ಯೇಕಿಸಿ ಪರಿಚಯಿಸುವ ಉತ್ಸಾಹದಲ್ಲಿ  ಅಂಕಭೂವಲಯ ಹಾಗೂ ಅಕ್ಷರಭೂವಲಯದ ವಿಚಾರವಾಗಿ ಸುಧಾರ್ಥಿಯು ಹೆಚ್ಚಿನ ಗಮನಹರಿಸಿರಲಿಲ್ಲ. ಆದರೆ ಆಯ್ದಸಾಂಗತ್ಯಪದ್ಯಗಳ  ಸಂಗ್ರಹವನ್ನು ರೂಪಿಸುವೇಳೆಗೆ ಮೂಲಸಾಹಿತ್ಯದಲ್ಲೇ ಈ ಅಕ್ಷರಸಾಹಿತ್ಯದ ವಿಚಾರವಾಗಿ ಕಾಣಬರುವ ಸುಳುಹುಗಳು ಗಮನಸೆಳೆದು.  ಸಾಂಗತ್ಯ ಪದ್ಯಗಳ ಸಂಗ್ರಹದಲ್ಲೇ ಇದಕ್ಕೆ ಸಂಬಂಧಿಸಿದ ಮಾಹಿತಿಯ ಅಂಕುರಾರ್ಪಣವಾಯಿತು.
ಮುಂದೆ ಈ ವಿಚಾರವಾಗಿ ಹೆಚ್ಚಿನ ಮಹಿತಿಗಳನ್ನು ಸಂಗ್ರಹಿಸಿ, ೧೯೫೩ರ ಅಕ್ಷರ ಭೂವಲಯದ ಸಿದ್ಧತೆಗೆ ಪ್ರಾಚೀನ ತಾಳೆಯೋಲೆಯ ಅಕ್ಷರಭೂವಲಯವು ಆಧಾರವೇ ವಿನಃ ಅಂಕಭೂವಲಯವನ್ನು ಅಕ್ಷರಕ್ಕೆ ಬದಲಿಸಿ, ಅದರಿಂದ ಶ್ರೇಢಿಬಂಧದಲ್ಲಿ ಸಾಗಿ ೧೯೫೩ರ ಅಕ್ಷಭೂವಲಯವನ್ನು ರೂಪಿಸಿರುವ  ಮಾಹಿತಿಯು ತಪ್ಪೆಂದು ಸೂಕ್ತವಾಗಿ ಸಮರ್ಥಿಸಲಾಯಿತು.  ಎಂಬುದನ್ನು ಸರಳಪರಿಚಯಕಾರನು ನಮೂದಿಸಿರುವುದಿದೆ.
ಕಂಪ್ಯೂಟರನ್ನು ಬಳಸಿಕೊಂಡರೆ, ಸಿರಿಭೂವಲಯದ ಸಂಶೋಧನೆಯು ಕ್ಷಣಮಾತ್ರದಲ್ಲಿ ನಡೆಯುತ್ತದೆ  ಎಂಬುದು ಈಚಿನದಿನಗಳಲ್ಲಿ ಕೆಲವರ ಉಡಾಫೆಯ ವಾದವಾಗಿತ್ತು! ಕಂಪ್ಯೂಟರಿನ ಬಳಕೆಯಿಂದ ಎಷ್ಟು ಚಕ್ರಗಳನ್ನಾದರೂ ಕ್ಷಣಮಾತ್ರದಲ್ಲಿ ಅಕ್ಷರಕ್ಕೆ ಬದಲಿಸಬಹುದು ನಿಜ. ಅದನ್ನು ಹಲವಾರು ಕಿ. ಮೀ. ಗಳಷ್ಟು ದೂರದ ಅಕ್ಷರಗಳ ಸರಪಣಿಯನ್ನಾಗಿಯೂ ಅದು ಪರಿವರ್ತಿಸಿಕೊಡುತ್ತದೆ ಸರಿ.
ಆದರೆ, ಅವುಗಳಲ್ಲಿರುವ ಸ್ವರಾಕ್ಷರಗಳು ಹಾಗೂ ವ್ಯಂಜನಾಕ್ಷರಗಳನ್ನು ಜೋಡಿಸುವ ಕ್ರಮವನ್ನು ಹೇಳಿಕೊಡುವವರುಯಾರು!? ಅಲ್ಲದೇ ಸಾಂಗತ್ಯ ಪದ್ಯಗಳ ನಾಲ್ಕು ಪಾದಗಳನ್ನು ಸೂಕ್ತವಾಗಿ ವಿಂಗಡಿಸುವುದು ಹೇಗೆ!? ಪಾದಪದ್ಯಗಳನ್ನು ಯಾವ ಆಧಾರದಲ್ಲಿ ಬೇರ್ಪಡಿಸುತ್ತೀರಿ!?
 ಈಗ ಮುದ್ರಿತವಾಗಿರುವ ಶಬ್ದಗಣದ ಸಾಂಗತ್ಯ ಪದ್ಯಗಳ ರೂಪಕ್ಕೆ ಸಿದ್ಧಪಡಿಸಬಲ್ಲ ’ಸಾಫ್ಟ್ ವೇರನ್ನು’ ಬರೆಯುವ ಮೇಧಾವಿ ಯಾರಿದ್ದಾರೆ!! ಯಾರಿಗಾದರೂ ಈ ಸಾಂಗತ್ಯಪದ್ಯಗಳ ಸ್ವರೂಪ ಅರ್ಥವಾಗಿದ್ದರೆ ತಾನೇ ಅದನ್ನು ರೂಪಿಸಲು ಕಂಪ್ಯೂಟರನ್ನು ಬಳಸುವ ಪ್ರಸಂಗ ಬರುವುದು!!
ಸಾಂಗತ್ಯ ಛಂದಸ್ಸಿನಲ್ಲಿ  ಅಕ್ಷರಗಣ, ಮಾತ್ರಾಗಣದ ಲೆಕ್ಕಾಚಾರವಿರುತ್ತದೆ. ಅದರೆ ಕುಮುದೇಂದುಮುನಿಯು ಬಳಸಿರುವ ’ಶಬ್ದಗಳದ ಸಾಂಗತ್ಯದಲ್ಲಿ’ ಯಾವ ಲೆಕ್ಕಾಚಾರವೂ ನಿಲ್ಲುವುದಿಲ್ಲ!!  ಎಲ್ಲೆಡೆಯೂ ೪ ಪಾದಗಳಿರುವುದು ನಿಶ್ಚಯ. ಆದರೆ ಪ್ರತಿಯೊಂದು ಪಾದದ ಅಕ್ಷರಗಳ ಸಂಖ್ಯೆಯೂ ಅನಿಯಮಿತವಾಗಿದೆ! ಕೇವಲ ೮-೧೦  ಅಕ್ಷರಗಳಿಂದ ನೂರಕ್ಕೂ ಹೆಚ್ಚಿನ ಅಕ್ಷರಗಳು ಕೆಲವು ಸಾಂಗತ್ಯಗಳಲ್ಲಿರುತ್ತವೆ! ಹಾಗಿರುವಲ್ಲಿ ಯಾವ ಲೆಕ್ಕಾಚಾರದಲ್ಲಿ ಸಾಫ್ಟ್ ವೇರ್ ನಲ್ಲಿ ಸೂಕ್ತವಾದ ನಿರ್ದೇಶನ ನೀಡಲು ಸಾಧ್ಯವಿದೆ!!?
ಈ ಕಾರಣದಿಂದಾಗಿ ಪರಿಚಯಕಾರನು ಯಾವಕಾರಣಕ್ಕೂ ಕಂಪ್ಯೂಟರನ್ನು ಬಳಸಿಕೊಂಡು ಅಕ್ಷರಗಳಸರಪಣಿಯನ್ನು ಸಾಂಗತ್ಯಪದ್ಯಗಳರೂಪಕ್ಕೆ ಸಿದ್ಧಪಡಿಸಲು ಸಾಧ್ಯವೇ ಇಲ್ಲವೆಂದು ಪ್ರಾರಂಭದಿಂದಲೂ ವಾದಿಸಿದ್ದಾಗಿದೆ.
  ಕಂಪ್ಯೂಟರ್ ವಿಜ್ಞಾನದಲ್ಲಿ ಹೆಚ್ಚಿನ ಜ್ಞಾನ ಪಡೆದ ವಿದ್ಯಾವಂತರು ಇದನ್ನು ಬಲವಾಗಿ ಖಂಡಿಸುತ್ತಿದ್ದರು. ಈಗ ಅವರಿಗೂ ಈ ಸಮಸ್ಯೆಯ ಮೂಲವು ’ಕೊರೋನ’ ವೈರಸ್ಸಿನಂತೆ ಕಣ್ಣಿಗೆ ಕಾಣಿಸದ ಸತ್ಯದರ್ಶನಮಾಡಿಸುತ್ತಿದೆ!!  ಈ ಕಾರಣದಿಂದಾಗಿ. ಅಂಕಭೂವಲಯದ ವಿಚಾರವನ್ನು ಬದಿಗಿರಿಸಿ, ಹಲವರು ಯಾರಿಗೂ ಸಿಗದಂತೆ ರಹಸ್ಯವಾಗಿ ಮುಚ್ಚಿರಿಸಿರುವ ’ಅಕ್ಷರಭೂವಲಯದ’  ನಕಲು ಪ್ರತಿಯನ್ನಾದರೂ ಆಸಕ್ತರಿಗೆ ದೊರಕಿಸಿದರೆ, ಮುಂದಿನ ವಿಶ್ಲೇಷಣೆಗೆ ಅನುಕೂಲವಾದೀತು. ಆದರೆ ಈ ಕಾರ್ಯಕ್ಕೆ ಸಂಬಂಧಿಸಿದಂತೆ ನಮ್ಮ ಕನ್ನಡಿಗರಲ್ಲಿ ಈರೀತಿಯ ಉದಾರತೆಯನ್ನು ಈ ಪರಿಚಯಕಾರನು ಕಳೆದೊಂದು ದಶಕದಿಂದಲೂ ಕಾಣಲು ಸಾಧ್ಯವಾಗಿಲ್ಲ!! ಮುಂದೆಯೂ ಸಾಧ್ಯವಾಗಲಾರದು!!!
ಈಗ,  ೧೯೫೩ರ ಅಕ್ಷರಭೂವಲಯ ಹಾಗೂ ಪುಸ್ತಕಶಕ್ತಿಪ್ರಕಾಶನದ ವಿದ್ವಾಂಸಮಂಡಳಿಯು ರೂಪಿಸಿರುವ ನೂತನ ಅಕ್ಷರ ಸಂಸ್ಕರಣದಲ್ಲಿ ಕಾಣಬರುವ ಹಲವಾರು ನ್ಯೂನತೆಗಳನ್ನೂ  ಪಟ್ಟಮಾಡಿ ವಿವರಿಸಲಾಗಿದೆ. ಸಿರಿಭೂವಲಯದ್ದೇ ಆದ ಒಂದು ವಿಶಿಷ್ಟ ಲಿಪಿಕ್ರಮದಲ್ಲಿ ಉಗಮವಾಗುವ ಸಾಂಗತ್ಯ ಪದ್ಯಗಳನ್ನು ಅವು ಮೂಲದಲ್ಲಿ ದೊರೆಯುವಕ್ರಮದಲ್ಲೇ ಓದುವುದು ಬಹಳ ಶ್ರಮದ ಕಾರ್ಯ! ಈ ಕಾರಣದಿಂದಾಗಿಯೇ ಈ ಕಾವ್ಯವನ್ನು ಕನ್ನಡಸಾಹಿತ್ಯ ಕ್ಷೇತ್ರದ ದಿಗ್ಗಜಗಳು ’ಕಬ್ಬಿಣದಕಡಲೆ’ ಎಂಬ ಹಣೆಪಟ್ಟಿ ಕಟ್ಟಿ ಮೂಲೆಗೆಸೇರಿಸಿದ್ದರು!
೨೦೧೧ರಲ್ಲಿ ರೂಪಿತವಾಗಿ ಪ್ರಕಟಗೊಂಡ ಈ ಆಯ್ದ ಸಾಂಗತ್ಯಪದ್ಯಗಳ ಸಂಗ್ರಹವು ಈ ಕೊರತೆಯನ್ನು ಪರಿಹರಿಸಿ, ಇಂದಿನ ಸುಲಭವಾಗಿ ಓದುವ ಒತ್ತಕ್ಷರ ಕ್ರಮದಲ್ಲೇ  ಸಾಂಗತ್ಯ ಪದ್ಯಗಳನ್ನು ರೂಪಿಸಿರುವುದು ಒಂದು ಉತ್ತಮ ಸೌಲಭ್ಯವಾಗಿದೆ. ಈ ಕಾರಣದಿಂದಾಗಿ ಕನ್ನಡಭಾಷೆಬಲ್ಲ ಯಾರುಬೇಕಾದರೂ ಈ ಸಾಂಗತ್ಯ ಪದ್ಯಗಳನ್ನು ಸುಲಭವಾಗಿ ಓದಿ ತಿಳಿಯಬಹುದಾಗಿದೆ.
ಈ ಅಮೂಲ್ಯವಾದ ಪರಿಚಯಕೃತಿಯನ್ನು  ಸೂಕ್ತರಾದವರಿಗೇ ’ಅರ್ಪಣೆ’ ಮಾಡಬೇಕೆಂಬ ಉದ್ದೇಶದಿಂದ ಇದನ್ನು ”ಸಿರಿಭೂವಲಯವು ರಚನೆಯಾದಂದಿನಿಂದ  ಇಂದಿನವರೆವಿಗೂ  ಇದರ ಸರಳ ಪರಿಚಯನೀಡದೇ  ಕಾವ್ಯವನ್ನು ಕತ್ತಲೆಯ ಕೋಣೆಯೊಳಗಿರಿಸಿ ಸಾಮಾನ್ಯ ಜನರಿಗೆ  ಇದೊಂದು ಕಬ್ಬಿಣದ ಕಡಲೆ  ಎನಿಸುವಲ್ಲಿ ಯಾಶಸ್ಸು ಸಾಧಿಸಿರುವ ಕನ್ನಡಸಾಹಿತ್ಯಕ್ಷೇತ್ರದ  ದಿಗ್ಗಜಗಳೆಲ್ಲರಿಗೂ ಕೃತಜ್ಞತಾಪೂರ್ವಕವಾಗಿ  ಅರ್ಪಣೆ” ಎಂದು ಸೂಚಿಸಿರುವುದು ಮೇಲುನೋಟಕ್ಕೆ ಗಮನಸೆಳೆಯದಿದ್ದರೂ, ಈ ಕಾವ್ಯವನ್ನು   ಸಕಾರಣವಾಗಿಯೋ ಅಕಾರಣವಾಗಿಯೋ ಉಪೇಕ್ಷಿಸಿದವರಿಗೆ ಗಾಯದಮೇಲೆ ಬರೆ ಹಾಕಿದಂತಾಗಿರುವುದು ಖಚಿತ.
 ಕನ್ನಡ ಲಿಪಿಯನ್ನು ಓದಬಲ್ಲ ಯಾರುಬೇಕಾದರೂ ಕುಮುದೇಂದುವಿನ ಸಿರಿಭೂವಲಯವನ್ನು ಈ ಸಂಗ್ರಹದಲ್ಲಿ ಸುಲಭವಾಗಿ ಓದಿ  ತಿಳಿಯುವ ಸೌಲಭ್ಯ ದೊರೆತಿರುವುದು ಈ ಕೃತಿಯ ಪ್ರಮುಖವಾದ ಸಂಗತಿಯಾಗಿದೆ.
ಸಿರಿಭೂವಲಯಸಾರವನ್ನು ಕುರಿತು ಓದುಗರು ವ್ಯಕ್ತಪಡಿಸಿರುವ  ವಿಭಿನ್ನ ರೀತಿಯ ಅನಿಸಿಕೆಗಳೂ ಇಲ್ಲಿ ದಾಖಲಾಗಿರುವುದು  ವಿಶೇಷ ಸಂಗತಿಯಾಗಿದೆ.  ಇವುಗಳಪೈಕಿ ಹಿರಿಯವಿದ್ವಾಂಸರಾದ ಜಿ. ಬ್ರಹ್ಮಪ್ಪನವರ ಅನಿಸಿಕೆ ಒಂದು ಪ್ರಮುಖವಾದುದು. ಸಿರಿಭೂವಲಯಸಾರದಲ್ಲಿ ಸುಧಾರ್ಥಿಯು ಬಾಹುಬಲಿಯನ್ನು ಎರಡನೇ ತೀರ್ಥಂಕರ  ಅಜಿತ ಎಂದು ತಪ್ಪಾಗಿ  ನಮೂದಿಸಿರುವುದಕ್ಕೆ ಈ ವಿದ್ವಾಂಸರು ತಿದ್ದುಪಡಿ ಸೂಚಿಸಿ, ವಿವರಣೆ ನೀಡಿದ್ದಾರೆ.  ಅದನ್ನು ಇಲ್ಲಿ ಸೂಚಿಸಲಾಗಿದೆ. ಇದೊಂದು ತಪ್ಪನ್ನೇ ಕೆಲವರು ವಿದ್ವಾಂಸರು ಅಕ್ಷಮ್ಯ ಅಪರಾಧವೆಂಬಂತೆ ಅಪಪ್ರಚಾರಮಾಡಿರುವುದಿದೆ!   (ಇನ್ನೂಇದೆ)
                                                                -ಜಮದಗ್ನಿಸುತ

No comments:

Post a Comment