Friday, 6 November 2020

ಕನ್ನಡದ ಜೈನ ಮುನಿ ಕುಮುದೇಂದುವಿನ ಮಹತ್ವ

 ಜಗತ್ತಿನ ಸಾಹಿತ್ಯೇತಿಹಾಸದಲ್ಲಿ ಕುಮುದೇಂದುಮುನಿಯ ಸ್ಥಾನವು ಅನನ್ಯವಾದುದೆಂಬುದರಲ್ಲಿ ಎರಡುಮಾತಿಲ್ಲ.  ವೇದಗಳು  ಜಗತ್ತಿನಲ್ಲಿ ಅಪೌರುಷೇಯವಾದುವು  ಅದರಮುಂದೆ ಇದಾವುದು ಹಿರಿಮೆಯ ಕಾವ್ಯ!? ಎಂದು ಪ್ರಶ್ನಿಸುವವರಿಸುವುದು ಸಹಜ.  ಆದರೆ,  ಇಲ್ಲಿ ಚರ್ಚಿಸುತ್ತಿರುವ ಅಚ್ಚರಿಯ ಕನ್ನಡಕಾವ್ಯವು  ’ಕನ್ನಡದವೇದ’ವೇ ಆಗಿರುವುದರಿಂದ , ಅದನ್ನು ಅಲ್ಲಗಳೆಯಲು ಯಾರಿಗೂ ಸಾಧ್ಯವಿಲ್ಲ!! 

ಆಧುನಿಕ ವಿಜ್ಞಾನದ ಪಾದಸೇವಕರಾಗಿರುವ  ಇಂದಿನ ಜನತೆಗೆ ಪ್ರಾಚೀನಭಾರತದ ಜೀವನಮೌಲ್ಯಗಳೆಂದರೆ,  ಇನ್ನಿಲ್ಲದ ಅಸಡ್ಡೆ. ಇಂಥ ಅನುಚಿತ ಭಾವನೆಗೆ ಸವಾಲಾಗಿರುವ ೧೨೦೦ ವರ್ಷಗಳ  ಹಿಂದಿನವನಾದ  ಸಾರ್ವಕಾಲಿಕ  ಕನ್ನಡದ  ಆದಿ ಕವಿ ದಿಗಂಬರ ಜೈನ ಸಂಪ್ರದಾಯದ ಯತಿ ಕುಮುದೇಂದುಮುನಿಯು ತನ್ನ ಕಾವ್ಯದಲ್ಲಿ ’ಅಡಗಿಸಿಟ್ಟಿರುವ’  ಅನರ್ಘ್ಯ ಜ್ಞಾನ ಭಂಡಾರದಿಂದಾಗಿ,  ಲೋಕವಿಖ್ಯಾತನಾಗಿದ್ದಾನೆ. 

ಈ ಕವಿಯ ’ಸಿರಿಭೂವಲಯ’ ಕಾವ್ಯದ ಮೂಲವು ಎಂಟರ ಆದಿ. ಎಂಟರ ವರ್ಗವಾದ ೬೪ ಅಂಕಿಗಳು. ಈ ೬೪ ಅಂಕಿಗಳಿಗೆ  ಅನ್ವಯವಾಗುವ  ಸರ್ವಭಾಷಾಮಯಿಭಾಷೆಯಾದ ಕನ್ನಡದ ೬೪ ಅಕ್ಷರಗಳಲ್ಲಿ ಜಗತ್ತಿನ ಎಲ್ಲಭಾಷೆಗಗಳ ಎಲ್ಲ ಜ್ಞಾನದ ಬರಹವನ್ನೂ  ಒಂದೆಡೆ. ಕನ್ನಡ ಲಿಪಿರೂಪದಲ್ಲಿ ಕಟ್ಟಿರಿಸಿರುವ  ಜಗತ್ತಿನ ಏಕೈಕ ಕವಿ  ಕುಮುದೇಂದುಮುನಿ. ಈತನ ಜ್ಞಾನದ ಪರಿಧಿ ’ಸರ್ವಜ್ಞತ್ವ’ ಇದನ್ನು ಕುರಿತಾದರೂ ಇಂದಿನ ಕನ್ನಡಿಗರು; ವಿಶೇಷವಾಗಿ ಜೈನಸಮುದಾಯದವರು ಈ ಕವಿಯನ್ನು ನಮ್ಮವನೆಂದು ಹೆಮ್ಮೆ ಪಡಬೇಕಾದುದು ಅನಿವಾರ್ಯ. 

ಸಿರಿಭೂವಲಯಕಾವ್ಯವು ’ಸರ್ವಭಾಷಾಮಯಿ’  ’ಸರ್ವಶಾಸ್ತ್ರಮಯಿ’  ’ಸರ್ವಜ್ಞಾನಮಯಿ’ ಎಂದು ಸೂಚಿತವಾಗಿದೆ.  ವ್ಯಕ್ತಿಜೀವನಕ್ಕೆ ಸಂಬಂಧಿಸಿದಂತೆ ಲೌಕಿಕ ಹಾಗೂ ಪಾರಮಾರ್ಥಿಕವಿಚಾರಗಳೂ ಈ ಕಾವ್ಯದಲ್ಲಿ ತುಂಬಿವೆ! ಇದರಲ್ಲಿ ಅಡಕವಾಗದಿರುವ ಯಾವ ವಿಚಾರವೂ ಉಳಿದಿಲ್ಲ!  ಅಂಕಕಾವ್ಯವಾಗಿ ಪರಿವರ್ತಿತವಾಗಿರುವ ಈ ಕಾವ್ಯದಲ್ಲಿ ಅಂಕಿಗಳು, ಅಣುವಿಜ್ಞಾನ, ಆಕಾಶಗಮನ, ಗಣಕಯಂತ್ರಕ್ರಮ, ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಮಾಹಿತಿಗಳನ್ನು ವಿವರಿಸಿದ್ದಾಗಿದೆ. 

ಜೀವನದಲ್ಲಿ ಕೆಲವು ನಂಬಿಕೆಗಳಿಗೆ ಸಂಬಂಧಿಸಿದಂತೆ, ’ಮೂಢನಂಬಿಕೆಗಳು’ ಎಂದು ಅಪಪ್ರಚಾರ ಹೊಂದಿರುವ ಕೆಲವೊಂದು ವಿಚಾರಗಳಿಗೆ ಸಂಬಂಧಿಸಿದಂತೆ ಈಗ  ವಾಸ್ತವವಾದ ಕೆಲವೊಂದು ಮಾಹಿತಿಯನ್ನು ಗಮನಿಸೋಣ. 

ಇಂದಿನ ದಿನಗಳಲ್ಲಿ ಜೋತಿಷಿಗಳುಹಾಗೂ ಜೋತಿಶ್ಶಾಸ್ತ್ರದ ವಿಚಾರವಾಗಿ ಹೆಚ್ಚಿನ ಅವಹೇಳನೆ ಇರುವುದು ಸರ್ವವೇದ್ಯ.  ಇದೊಂದು ಅವೈಜ್ಞಾನಿಕಶಾಸ್ತ್ರವೆಂದು ಬಹಳಷ್ಟುಜನ  ನಿರ್ಧರಿಸಿದ್ದಾಗಿದೆ. ಫಲಜೋತಿಷ್ಯಕ್ಕೆ ಸಂಬಂಧಿಸಿದಂತೆ ಕುಮುದೇಂದು ಮುನಿಯು ರೂಪಿಸಿರುವ ಒಂದು ಚಕ್ರವನ್ನು ಕುರಿತು ಈಗಾಗಲೇ ವಿವರಿಸಿದ್ದಾಗಿದೆ.  ಉದ್ದಗಲಗಳಲ್ಲಿ ೨೭x೨೭ ರಂತೆ ವಿಸ್ತಾರವಾದ ಚೌಕಾಕೃತಿಯನ್ನು  ೭೨೯ ಚೌಕಗಳಾಗಿ ವಿಂಗಡಿಸಿ, ಅವನ್ನು ನವಮಾಂಕ ಕ್ರಮದಲ್ಲಿ ೯ ಭಾಗಗಳಾಗಿ ವಿಂಗಡಿಸಿ, ಅದರಲ್ಲಿ ಎಡಬದಿ ಹಾಗೂ ಮೇಲಿನ ಬದಿಯಲ್ಲಿ ದಿನದ ನಕ್ಷತ್ರಗಳು  ಮತ್ತು  ವ್ಯಕ್ತಿಯ ಜನ್ಮನಕ್ಷತ್ರಗಳನ್ನು ಕ್ರಮವಾಗಿ ನಮೂದಿಸಿ, ೭೨೯ ಚೌಕಗಳಲ್ಲೂ  ೧ ರಿಂದ ೯ ರವರೆಗಿನ ಅಂಕಿಗಳನ್ನು ’ಸೂತ್ರಾಂಕ’ ಗಳಾಗಿ ಸರ್ವ ಸಮಾನವಾಗಿರುವಂತೆ ಸೂತ್ರಬದ್ಧವಾಗಿ ತುಂಬಿರುವಂತೆ ಚಕ್ರವನ್ನು ರೂಪಿಸಲಾಗಿದೆ.  ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಸಿರಿಭೂವಲಯದ ಸರಳ ಪರಿಚಯಕೃತಿಯಲ್ಲಿ ವಿವರಿಸಲಾಗಿದೆ. ಈಗ ಇಲ್ಲಿ ಈ ಫಲಜೋತಿಷ್ಯದ ವಿಚಾರವಾಗಿ ಕವಿಯು ಸೂಚಿಸಿರುವ ಖಚಿತವಾದ ವಿವರಕುರಿತು ತಿಳಿದುಕೊಳ್ಳೋಣ. 

ಸೂರ್ಯ, ಚಂದ್ರ, ತಾರೆಗಳ ಉದಯಾಸ್ತವನ್ನು ತಿಳಿದುಕೊಂಡು, ವ್ಯಕ್ತಿಜೀವನದಲ್ಲಿ ತ್ರಿಕಾಲಗಳಿಗೆ ಸಂಬಂಧಿದ ( ಭೂತ, ವರ್ತಮಾನ. ಭವಿಷ್ಯತ್ ಕಾಲ)  ಸುಖ ದುಃಖದ ವಿವರಗಳನ್ನು ಖಚಿತವಾಗಿ ಅರಿಯಬಹುದೆಂದು ಕಾವ್ಯದಲ್ಲಿ ಸೂಚಿಸಲಾಗಿದೆ.   ಇದನ್ನೂ ಮೀರಿ,  ವ್ಯಕ್ತಿಯ ಮರಣಕಾಲವನ್ನೂ ಸದರವಾಗಿ  ಅರಿಯಬಹುದೆಂದು ಕವಿಯು ಸೂಚಿಸಿರುವುದಿದೆ.!  ಇದಕ್ಕೆ ಸಂಬಂಧಿಸಿದಂತೆ ಇಲ್ಲಿ ಒಂದು ಸ್ಪಷ್ಟನೆ ಅತ್ಯಗತ್ಯ. ಈ ಕಾವ್ಯದ ವ್ಯಾಪ್ತಿ ೯ ಖಂಡಗಳು. ಅದರಲ್ಲಿ ಮಂಗಳಪ್ರಾಭೃತವೆಂಬ ಮೊದಲನೇ ಖಂಡವು ಪೀಠಿಕಾರೂಪದ್ದಾಗಿದ್ದು, ಇದರಲ್ಲಿ ಸಮಗ್ರಕಾವ್ಯದ ವಿಷಯವ್ಯಾಪ್ತಿಯನ್ನು ಪರಿವಿಡಿಯರೂಪದಲ್ಲಿ ನೀಡಲಾಗಿದೆ. ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿಗಳ ವಿವರವನ್ನು ಮುಂದಿನ ಖಂಡದಲ್ಲಿ ಸೂಚಿಸಲಾಗಿರುತ್ತದೆ. ಈ ಅಂಶವನ್ನು ಗಮದಲ್ಲಿರಿಸಿಕೊಳ್ಳಬೇಕಾದುದು ಓದುಗರ ಕರ್ತವ್ಯ. 

 ಈ ರೀತಿಯ ’ಭವಿಷ್ಯ’ ಹೇಳುವುದು ಕೆಲವರ ಹೊಟ್ಟೆಪಾಡಿನ ಉದ್ಯೋಗವಾಗಿದೆ.  ಅಮಾಯಕಜನರನ್ನು ವಂಚಿಸಿ, ಶೋಷಿಸುವುದಕ್ಕೆ ಇದೊಂದು ತಂತ್ರ ಎಂದು ಕೆಲವರು ವಾದಿಸುವುದಿದೆ. ಆದರೆ,, ಸರ್ವಸಂಗಪರಿತ್ಯಾಗಿಯಾಗಿದ್ದ ಈ ದಿಗಂಬರ ಮುನಿಯು  ಇಂದಿನವರು ಭಾವಿಸುವಂತೆ ಹೊಟ್ಟೆಯಪಾಡಿಗಾಗಿ ಈ ಅಮೂಲ್ಯಮಾಹಿತಿಯನ್ನು ತನ್ನ ಶಾಶ್ವತಕಾವ್ಯದಲ್ಲಿ ಅಡಗಿಸುವ ಅಗತ್ಯವಿರಲಿಲ್ಲವೆಂಬುದು ಗಮನಾರ್ಹವಾದುದು. 

ಸ್ತ್ರೀಪುರುಷರ ಸಮಾಗಮದಿಂದ ನೂತನ ಶಿಶುವು ಉಗಮವಾಗುವುದಕ್ಕೆ ಸಂಬಂಧಿಸಿದ  ವೈಜ್ಞಾನಿಕ ಮಾಹಿತಿಯ ವಿವರಗಳನ್ನು ಕುರಿತು ಈಗಾಗಲೇ ವಿವರಿಸಿದ್ದಾಗಿದೆ.  ಈಗ ವ್ಯಕ್ತಿಯ ಶರೀರದಲ್ಲಿ  ಭೌತಿಕದೇಹದ ಇರುವಿಕೆಗೆ ಅಗತ್ಯವಾದ ’ಸಪ್ತಧಾತು’ ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸ್ವಲ್ಪ ಗಮನಿಸೋಣ. ವ್ಯಕ್ತಿಯ ತಲೆಯೊಳಗಿರುವ ’ಮಿದುಳು’ ; ಶರೀರಾದ್ಯಂತವಿರುವ  ರಸ,  ದೇಹದೆಲ್ಲೆಡೆಯೂ ಇರುವ ಯುಕ್ತಪ್ರಮಾಣದ  ಮಾಂಸ,  ಅತಿಸೂಕ್ಷ್ಮವಾದ ನಳಿಕೆಯಾಗಿರುವ ನರಮಂಡಲ, ಅವುಗಳಲ್ಲಿ ಪ್ರವಹಿಸುವ ರಕ್ತ, ಶರೀರಕ್ಕೆ ಆಸರೆಯಾಗಿರುವ  ಮೂಳೆಗಳು (ಅಸ್ತಿ)  ಮುಂದಿನಸಂತತಿಯ ನಿರ್ಮಾಣಕ್ಕೆ ಅತ್ಯಗತ್ಯವಾದ  ಶುಕ್ಲ (ವೀರ್ಯ); ಇತ್ಯಾದಿಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ನಾವು ಸಿರಿಭೂವಲಯಕಾವ್ಯದಲ್ಲಿ ಕಾಣಬಹುದು! 

ಭೌಮವೆಂದರೆ, ಭೂಮಿಗೆ ಸಂಬಂಧಿಸಿದ್ದೆಂದು ಅರ್ಥ.  ಆಕಾಶ, ಮಂಗಳ, ನೀರು ಎಂಬ ಅರ್ಥವ್ಯಾಪ್ತಿಯೂ ಈ ಪದಕ್ಕಿದೆ.  ಈ ಭೌಮದ ಸಾಂದ್ರತೆಯನ್ನವಲಂಬಿಸಿ ಭೂಮಿಯಲ್ಲಿ  ಚಿನ್ನ, ತಾಮ್ರ, ಕಬ್ಬಿಣ ಮುಂತಾದ ಲೋಹಗಳ ನಿಕ್ಷೇಪವಿರುವುದರ ವಿವರವು ಸಿರಿಭೂವಲಯದಲ್ಲಿ ಅಡಕವಾಗಿದೆ!  ಮಣ್ಣಿನ ಗಡಸುತನ ಹಾಗೂ ಮೃದುತ್ವ ವನ್ನವಲಂಬಿಸಿ  ಈ ನಿಕ್ಷೇಪವಿರುವುದರ ಮಾಹಿತಿ ಇದೆ.   ಪ್ರಾಚೀನ ಭಾರತೀಯರು ಮಂಕುದಿಣ್ಣೆಗಳು. ಬ್ರಿಟಿಷರು ಮಹಾನ್ ಮೇಧಾವಿಗಳು. ಅವರು ತಮ್ಮ ಪ್ರತಿಭೆಯಿಂದ ಕೋಲಾರದ ಚಿನ್ನದಗಣಿಯನ್ನೆ ಪತ್ತೆಮಾಡಿ, ಭಾರತದ ಸಂಪತ್ತನ್ನು ಹೆಚ್ಚಿಸಿದರು ಎಂಬ ಭ್ರಮೆ ಕೆಲವರಲ್ಲಿದೆ! ಪ್ರಾಚೀನಭಾರತೀಯರಲ್ಲಿ ಪ್ರಾಕೃತಿಕವಾದ ನಿಧಿ ನಿಕ್ಷೇಪಗಳನ್ನು ಸಂರಕ್ಷಿಸುವ ಸಂಪ್ರದಾಯವಿತ್ತೇ ವಿನಃ, ಅದನ್ನು ಬಗೆದು ಬಳಸಿಕೊಳ್ಳುವ ಮೂರ್ಖತನವಿರಲಿಲ್ಲ!! ಶ್ರಮವಹಿಸಿ, ದುಡಿದು ತಿನ್ನುವ ಕ್ರಮವಿತ್ತೇ ವಿನಃ, ಯಾವುದೇ ’ಪುಕ್ಕಟೆ’ ಭಾಗ್ಯಗಳ ಕೊಡುಗೆ ಇರಲಿಲ್ಲ!!  ಬೆಟ್ಟಗಳನ್ನೇ ಪುಡಿಮಾಡಿ, ಮಾರಾಟಕ್ಕಿಟ್ಟು, ನುಂಗಿನೀರುಕುಡಿಯುವವರು ನಿಧಿ ನಿಕ್ಷೇಪ್ಪಗಳನ್ನು ರಕ್ಷಿಸುವುದುಂಟೇ!!?? 

ವ್ಯಕ್ತಿಯು ನಿದ್ರೆಯಲ್ಲಿದ್ದಾಗ ಕಾಣುವ ಕನಸು, ಈ ಕನಸುಗಳು ವ್ಯಕ್ತಿಯ ಭವಿಷ್ಯಜೀವನದ ಸೂಕ್ಷ್ಮಮುನ್ಸೂಚನೆಯಾಗಿರುವುದೆಂಬ ಹೇಳಿಕೆಯು  ಕೆಲವರಿಗೆ  ಅಪಹಾಸ್ಯದ ಸಂಗತಿಯಾಗಿರುತ್ತದೆ!  ಪ್ರಾಚೀನ ಭಾರತೀಯರು ಪ್ರತಿಪಾದಿಸಿರುವ ಜಾಗ್ರತ್, ಸ್ವಪ್ನ, ಸುಷುಪ್ತಿ  ಎಂಬ ಅವಸ್ಥಾತ್ರಯಗಳನ್ನು ಕುರಿತು ಆಧುನಿಕ ವಿಜ್ಞಾನಿಗಳಲ್ಲಿ ಒಮ್ಮತವಿಲ್ಲ. ಕೆಲವರು ನಂಬುತ್ತಾರೆ, ಕೆಲವರು ತಟಸ್ಥರಾಗುತ್ತಾರೆ. ಈ ಅವಸ್ಥಾತ್ರಯಗಳು ಅರ್ಥಹೀನವಾದ ಹೇಳಿಕೆಗಳಲ್ಲ ಎಂಬುದಕ್ಕೆ ಸಿರಿಭೂವಲಯದಲ್ಲಿ ವಿವರವಿದೆ!

 ಸ್ವಪ್ನವನ್ನು ಕುರಿತ ಹೇಳಿಕೆಗಳಿಗೆ ಕಾವ್ಯದಲ್ಲಿ ಯಾವುದೇ ರೀತಿಯ ವಂಚನೆಯ ಲೇಪವೂ ಇಲ್ಲ!!  ವ್ಯಕ್ತಿಯು ಕನಸಿನಲ್ಲಿ ಕಾಣುವ  ಫಲಗಳು (ಹಣ್ಣುಗಳು) ಪುಷ್ಪಗಳು, ಪ್ರಾಣಿಗಳು, ಸನ್ನಿವೇಶಗಳು ಇತ್ಯಾದಿಗಳಿಗೆ ಬೇರೆ ಬೇರೆಯ ಸೂಕ್ಷ್ಮತೆಗಳಿರುತ್ತವೆ.  ಇವುಗಳನ್ನಾಧರಿಸಿ, ಮುಂದೆ ಎದುರಾಗುವ ಸುಖ ದುಃಖಗಳನ್ನು ತಿಳಿಯಬಹುದೆಂಬ  ಸೂಚನೆಯಿದೆ. ಕತ್ತೆ, ಒಂಟೆ ಇತ್ಯಾದಿ ಪ್ರಾಣಿಗಳು ಕನಸಿನಲ್ಲಿ ಬಂದಾಗ; ಪರದೇಶಕ್ಕೆ ಪ್ರಯಾಣವೆಂಬ ಸೂಕ್ಷ್ಮವನ್ನು ತಿಳಿಸಲಾಗಿದೆ.  ಇಲ್ಲಿ ಓದುಗರು ಗಮನಿಸಬೇಕಾದ ಒಂದು ಮಹತ್ವವಿದೆ. ಈ ರೀತಿಯ ಕನಿಸಿನ ಫಲವನ್ನು ತಿಳಿಯುವಲ್ಲಿ, ಕನಸುಕಂಡ ವ್ಯಕ್ತಿಯ ಆರೋಗ್ಯವು  ವಾತ, ಪಿತ್ಥಾದಿಗಳ ಆಧಿಕ್ಯದಿಂದ ಕೂಡಿರಬಾರದು! 

ಪ್ರಾಣಿಗಳು ಹಾಗೂ ಮಾನವರು ಚಿತ್ರ ವಿಚಿತ್ರವಾಗಿ ಅರಚುವುದನ್ನು (ಕಿರುಚಿಕೊಳ್ಳುವುದು) ಅದಕ್ಕೆ ಸಂಬಂಧಿಸಿದ ಸುಖ ದುಃಖವನ್ನು ಅರಿತುಕೊಳ್ಳುವ ಬಗೆಯನ್ನು ಕಾವ್ಯದಲ್ಲಿ ತಿಳಿಸಲಾಗಿದೆ. 

ಈರೀತಿಯ ಮಾಹಿತಿಗಳೆಲ್ಲವೂ ಪ್ರಾಚೀನಭಾರತದ ಶಕುನಶಾಸ್ತ್ರ ಹಾಗೂ ಇನ್ನಿತರ ಶಾಸ್ತ್ರಗಳಿಗೆ ಸಂಬಂಧಿಸಿದ ಮಾಹಿತಿಗಳಾಗಿರುತ್ತವೆ. ಇವುಗಳನ್ನು ’ಮೂಢನಂಬಿಕೆಗಳು’ಎಂದು ನಿರಾಕರಿಸುವುದು ಅಥವಾ ’ಶಾಸ್ತ್ರವಚನ’ಗಳೆಂದು ಗೌರವಿಸುವುದು ವ್ಯಕ್ತಿಯ ಇಚ್ಛೆಗೆ ಸೇರಿದ್ದಾಗಿದೆ. ಯಾವುದನ್ನೇ ಆಗಲೀ, ಒತ್ತಾಯಪೂರ್ವಕವಾಗಿ ಅನುಸರಿಸಬೇಕೆಂಬ ಒತ್ತಡವನ್ನೆಲ್ಲಿಯೂ ನಮ್ಮ ಶಾಸ್ತ್ರಗ್ರಂಥಗಳು ಹೇರಿಲ್ಲವೆಂಬುದು ಗಮನಾರ್ಹ.  

ಸಿರಿಭೂವಲಯದಸುಧಾರ್ಥಿ. 


Friday, 16 October 2020

 ಡಾ|| ಎಸ್. ಶ್ರೀಕಂಠಶಾಸ್ತ್ರಿ

ಯವರ ಹೇಳಿಕೆಯಂತೆ ೧೯೫೩ರಲ್ಲಿ
ಸಿರಿಭೂವಲಯದ ಕಾರ್ಯವು
ಜಗತ್ತಿನಲ್ಲಿ ೭-೮ ಜನಗಳಿಗೆ
ಮಾತ್ರ ಆಸಕ್ತಿ ಇರುವುದೆನಿಸಿತ್ತು!
ಈಗ Fb ಒಂದರಲ್ಲೇ ಸುಮಾರು
೨೦ಕ್ಕೂ ಹೆಚ್ಚುಜನ ಈ ಕಾವ್ಯದಲ್ಲಿ
ಅಭಿಮಾನ ಹೊಂದಿದ್ದಾರೆ!
೩೦ ವರ್ಷದಲ್ಲಿ ಸುಧಾರ್ಥಿಯು
ಸಾಧಿಸಿದ್ದು ಇದಿಷ್ಟನ್ನೇ!!
ಇಂದಿನ ವೈಜ್ಞಾನಿಕಯುಗದಲ್ಲಿ
ಲಕಾಂತರ ಜನಗಳಿಗೆ ಒಮ್ಮೆಗೇ
ಈಕಾವ್ಯದಪರಿಚಯಒದಗಿದರೂ
ದೊರೆತಫಲವಿದು ಗುಡ್ಡವನು
ಬಗೆದು ಇಲಿಯನ್ನುಹಿಡಿದಂತೆ!!
ಕನ್ನಡದ ಕುಲದವರ
ಕಾವ್ಯದಾಸಕ್ತಿಯೂ
ಇದಕಿಂತ ಬೇರಲ್ಲ
ಭೂವಲಯದೊಳಗೆ!!
ಕುದುರೆಯನು ಕರೆದೊಯ್ದು
ಕೆರೆಯೊಳಗೆ ನಿಲಿಸಿದರು,
ನೀರಕುಡಿಯುವುದದುವೆ
ಕುದುರೆಯಾ ಮನದಿಚ್ಛೆ!!
ಕೆರೆಯ ಅಂಗಳಕಂತು
ಕರೆದೊಯ್ದುದಾಗಿಹುದು
ಕುಡಿಯದಲೆ ಬಿಡುತಿರಲು
ನನಗೇಕೆ ಚಿಂತೆ!?
ಸಿರಿಭೂವಲಯದ
ಸುಧೆಯನು ಸವಿಯುತ
ವೃದ್ಧಿಸಲಿನಿಮ್ಮಗಳ
ಸಂಸ್ಕಾರಶರಧಿಯದು
ಜಗದಪರಿಧಿಯವರೆಗೆ.
ಅಧಿಕಮಾಸವಿದು
ಅಧಿಕವಾಗುತಲಿರಲಿ
ಅಧಿಕಜನಗಳಿಗದುವೆ
ಅಧಿಕಫಲತರುತಿರಲಿ
ಹೌದು ಪೂರ್ವಸಿದ್ಧತೆಗಾಗಿ
ಈಕಾವ್ಯದ ಸರಳಪರಿಚಯದಲ್ಲಿ
ಅಲ್ಪ ವಿರಾಮವಿದ್ದದ್ದುನಿಜ.
ಈಗ ಮತ್ತೆ ಹರಿಯಲಿದೆ ಈ
ಕಾವ್ಯರಸದಾ ಪ್ರವಾಹ.
ಸಧ್ಯದಲ್ಲಿಯೇ!!!
-ಸಿರಿಭೂವಲಯದಸುಧಾರ್ಥಿ.

Sunday, 4 October 2020

ಕುಮುದೇಂದು/ಪಂಪರೊಳು ಮಿಗಿಲಾರು ಜಗದೊಳಗೆ ಈ ಈರ್ವರೊಳಗೆ?

ಕುಣಿದುಕುಪ್ಪಳಿಸುತಿವೆ ಕೂಪಮಂಡೂಕಗಳು

ಪಂಪನೆಂಬುವನವನೆ ಹಳಗನ್ನಡದ ಮೊದಲ ಕವಿಯೆಂದು! 

ತನ್ನೊಡೆಯನ ಬೆಡಗಂ ಪಿಡಿದು  ’ಪಂಪಭಾರತ’ಮೆಂಬ ’ವಿಕ್ರಮಾರ್ಜುನವಿಜಯ’

ವನು ರಚಿಸಿದೊಡೆ  ಪಂಪನೆಂದು ನೆಗಳ್ತೆವೆತ್ತವನ ಪೊಗಳ್ವುದು ಆಪದಮಲ್ತೆ!?

ಪಂಪನುಸುರಿದವಾಣಿಯ ಕಂಪಿನೊಡಗೂಡಿ ’ಅರ್ಥ’ಪಡೆದವರೆಷ್ಟು ಪೊಡವಿಯೊಳಗೆ!? ಪಂಪನಾಡಿದನುಡಿಯ ಬಿಡಿಸಿಪೇಳ್ದವನೆಂದು  ಖ್ಯಾತಿವೆತ್ತವನೋರ್ವನೇ ಧಾರಿಣಿಯೊಳುತಾ ಮುಳಿಯತಿಮ್ಮನಲಾ! ತಿಮ್ಮಪಯ್ಯನು ಬಿಡಿಸಿದ ನುಡಿಯಬಲದಲಿ ಮುಂದೆ ಮೆರೆದರು  ಅತುಲ ಭುಜಬಲ ಪರಾಕ್ರಮಿಗಳುತಾವ್ ಪೊಡವಿಯೊಳ್ ಪಂಪನ ಪೆಸರ ಮುಗಿಲಿಗೇರಿಸಿದೆವೆಂದು!!

ಈ ಮುದಲ್  ’ಅಭಿನವಪಂಪ’ನೆಂಬಗ್ಗಳಿಕೆ ಪೊಂದಿರ್ದ ಹದಿನಾಲ್ಕುಶತಕಗಳ ಹಿದಿನವ ನಾಗಚಂದ್ರನೂ ತಾನ್  ’ಪಸರಿಪ ಕನ್ನಡಕ್ಕೊಡೆಯನೋರ್ವನೇ ಸತ್ಕವಿ ಪಂಪನಾವಗಂ’  ಎಂದು ಪರಾಕುಹೇಳಿದವ! ಮುಂದಡಿಯಿಡಲ್  ’ಕುವೆಂಪು’ ಪೂರ್ವದ ಬಿ.ಎಂ.ಶ್ರೀ. ಟಿ.ಎಸ್. ವೆಂಕಣಾರ್ಯರೂಂ  ಅನಂತರದ, ತ.ಸು.ಶಾಮರಾಯ, ತುಸು ಮುಂದಿನ  ಹಂಪನಾ ಇತ್ಯಾದಿಗಳ್ ’ಪಂಪ ನಭೂತೋ ನಭವಿಷ್ಯತಿ’  ಎಂದಂದು ಪಂಪನಹೊಗಳುಭಟರೇ ಆಗಿರ್ಪರ್. 

ತನಗೆ ಅಶ್ರಯವಿತ್ತ ಅರಿಕೇಸರಿಯಂ ಪೊಗಳಿ, ಭಾರತದ ಕಥೆಯ ಹಸಗೆಡಿಸಿದ ಪಂಪನ ಗುರಿಯದುತಾನ್ ತನ್ನಯ ಧಣಿಯಕೀರ್ತಿಯು ಶಾಶ್ವತಮಾಗಿರಲೆಂಬುದೊಂದೆವಲಾ. 

 ಆದೊಡಮಿದು ಅಲ್ಪಾಕಾಂಕ್ಷೆ ನಿಚ್ಚಂಮಿದು.

ಪಂಪಪೂರ್ವದ ಶತಕದಿ ಅವತರಿಸಿರ್ದ, ಕುಮುದೇಂದುಮುನಿತಾಂ ಆವ ಅರಸನ ಊಳಿಗದ ಕೂಳಿಗೂ ಕೈಯೊಡ್ಡದವ ತಾನ್. ಸರ್ವಜ್ಞತಾನ್ ದಿಟದಿ. ಜಗದೆಲ್ಲ ಜ್ಞಾನವಂ ವೇದಮಾರ್ಗದಲರಿದವಂ, ಜಗದೊಳಿರುವೆಲ್ಲ ಭಾಷೆಗಳ ಕೃತಿಗಳಂ ಪಿಡಿದೌಂಕಿಸಿತನ್ನ ಕಾವ್ಯದಲಿ ಗಿಡಿದುತುಂಬಿದ ಜಗದೇಕೈಕ ಕವಿ ಪುಂಗವನೀತಂ ಕುಮುದೇಂದು. ಜಗದ ಜ್ಞಾನ,  ಸುಜ್ಞಾನ, ವಿಜ್ಞಾನವಾವುದೇ ಇರಲಿ, ಅವುಗಳಂ ತನ್ನ ಅಂಗುಲಿಯಮೂಲದಲಿ ಕುಣಿಸಿಬಿಸುಟವನೀತಂ   ತಾನಂದು ಹಿಂದಿಂದು, ಮುಂದಿನರೆಲ್ಲರ ಭಾಷಾಶೈಲಿಯಂ  ತಂದು ತುಂಬಿದನು ತನ್ನ ಕಾವ್ಯದುದರದಲಿ. 

ತನ್ನಕಾವ್ಯದ ಹಿರಿಮೆ ಗರಿಮೆಯಕುರಿತು ಬಾರಿಬಾರಿಗೂ ಒರೆದಿರುವನೀತಂ. ತನ್ನನುಂ ಕುರುತಿಲ್ಲಿ ಬರೆದಿರುವುದತಿಅಲ್ಪಂ! 

ಕನ್ನಡದ ಜನುಮವದು ಜಗದಾದಿಯಿಂದೆಂದು ಉಸುರಿ, ತ್ರಿಕಾಲಂಗಳಲಿ ನವರೂಪ ಧರಿಸಿರ್ಪ  ಕನ್ನಡದ ಸೊಗಡು ಸುಭಗತೆ ಸರಳತೆಯ ಶಿಖರಗಳ ನೌಕಿಸಿತನ್ನ ಕಾವ್ಯದಲಿ ಚಿರಸ್ಥಾಯಿಗೊಳಿಸಿದವಂ ಕುಮುದೇಂದು ಮುನಿತಾನ್!!   ಪಂಪರನ್ನರೇ ಇರಲಿ, ಜನ್ನಪೊನ್ನರೆ ಇರಲಿ, ಕುಮರವ್ಯಾಸನ ಕಾವ್ಯಮೆಚ್ಚಿದ ಕುವೆಂಪು  ಪೂರ್ವೋತ್ತರದ ಕನ್ನಡದ ದಿಗ್ಗಜಗಳೇ ಇರಲಿ; ಇಂತಿವರಾರ ಕಣ್ಗಳೂ ಒಮ್ಮೆಯಾದರೂ ಕಾಣದಾಗಿಹ ಕನ್ನಡದ ಆದಿಕಾವ್ಯವಿದು ಸಿರಿಭೂವಲಯ ತಾನ್ ! ಜಗದಕಾವ್ಯವಿದರ ಸನಿಹವೂಂ ಸುಳಿಯದವರೆಂತು ಇದರ ಸೊಬಗನರಿಯಲಕ್ಕುಂ. ಇಂತಿರ್ಪಕಾವ್ಯವಿದು  ಕನ್ನಡದ ಹಾದಿ ಬೀದಿಗಳ ಜನಮೆಚ್ಚುವ ಜನಪದಕಾವ್ಯಮಾಗಲೆಂಬುದೆ ಎನ್ನ ಮನದಿಂಗಿತಮಾಗಿರ್ಪುದಲಾ. 

ದಶಕಗಳ ಹಿಂದಿನಿಂ ಹೃದಯದಲಿ ಹುಗಿದಿದ್ದ ಭಾವಗಳನಿಂದು ಪರಿಯಬಿಟ್ಟಿಹೆನಿಲ್ಲಿ ಕನ್ನಡದ ಕುವರರಿಗೆ ಅರಿವಾಗುವ ಪರಿಯಲಿ ಒರೆದೊರೆ   ಸಿರಿಭೂವಲಯದ ಸುಧೆಯನರ್ಥಿಸುವನಲಾ. 

                             _()_


Sunday, 12 July 2020

ಸಿರಿಭೂವಲಯಕಾವ್ಯದ ಪ್ರಥಮಖಂಡದ ಐದನೇ ಅಧ್ಯಾಯಾಂತರ್ಗತ ಸಂಸ್ಕೃತ ಸಾಹಿತ್ಯ:


ಐದನೇ ಅಧ್ಯಾಯದ ಪ್ರರ್ಣಪದ್ಯ ಸಂಖ್ಯೆ ೯೫ ರಿಂದ ೧೪೫ರ ವರೆಗೆ ಅಂತರಶ್ರೇಣಿಯಲ್ಲಿ (ಅಶ್ವಗತಿ) ಸಾಗಿದಾಗ ದೊರೆಯುವ ಸಂಸ್ಕೃತಸಾಹಿತ್ಯವು ಪ್ರಾಚೀನವಾದ ೧೮ಭಾಷೆಗಳ ಲಿಪಿಯ ಸಿದ್ಧಮಾತೃಕಾವರ್ಣಮಾಲೆಯನ್ನು ವಿವರಿಸುವುದಾಗಿದೆ.
'ಅಥವಾ ಪ್ರಾಕೃತ ಸಂಸ್ಕೃತ ಮಾಗಧ ಪಿಶಾಚಭಾಷಾಶ್ಚ ಶೂರಸೇನೀಚ ಷಷ್ಟೋತ್ರಭೇದೋ ದೇಶ ವಿಶೇಷಾದಪಭ್ರಂಶಹ ಕರ್ನಾಟ ಮಾಗಧ ಮಾಲವ ಲಾಟ ಗೌಡ ಗುರ್ಜರ ಪ್ರತ್ಯೇಕತ್ರಯ ಮಿತ್ಯಷ್ಟಾದಶ ಮಹಾಭಾಷಾ ಸರ್ವಭಾಷಾಮಯೀಭಾಷಾ ವಿಶ್ವ ವಿದ್ಯಾವಭಾಸಿನೇ ತ್ರಿಷಷ್ಟಿಹಿ ಚತುಃಷಷ್ಟಿರ್ವಾ ವರ್ಣಾಾಹ ಶುಭಮತೇಮತಾಃ ಪ್ರಾಕೃತೇ ಸಂಸ್ಕೃತೇಚಾಪಿ ಸ್ವಯಂಪ್ರೋಕ್ತಾಹ ಸ್ವಯಂಭುವಾ ಅಕಾರಾದಿ ಹಕಾರಾಂತಂ ಶುದ್ಧಾ ಮುಕ್ತಾವಲೀಮಿವ ಸ್ವರ ವ್ಯಂಜನ ಭೇದೇನ ದ್ವಿದಾಭೇದಮುಪಯ್ಯುಷೀಂ ಅಯೋಗವಾಹಪರ್ಯುಂತಾಂ ಸರ್ವ ವಿದ್ಯಾಸುಸಂಗತಾಂ ಅಯೋಗಾಕ್ಷರಸಂಭುತಿಂ ನೈಕಬೀಜಾಕ್ಷರೈಶ್ಚಿತಾಂ ಸಮವಾದಿಃ ದಧತ್ಬ್ರಾಹ್ಮೀ ಮೇಧವಿನ್ಯತಿಸುಂದರೀ ಸುಂದರೀ ಗಣಿತಂ ಸ್ಥಾನಂ ಕ್ರಮೈಹಿ ಸಂಯುಗಧಾಸ್ಯತ್ ತತೋಭಗವತೋ ವಕ್ತ್ರಾನಿಹಿ ಸ್ರುತಾಕ್ಷರಾವಲೀಂ ನಮ ಇತಿವ್ಯಕ್ತ ಸುಮಂಗಲಾಂ ಸಿದ್ಧಮಾತೃಕಾಂ' ಎಂಬ ಸಾಹಿತ್ಯವು ದೊರೆಯುತ್ತದೆ. ಭಟ್ಟಾಕಳಂಕನ ಶಬ್ದಾನುಶಾಸನದಲ್ಲಿ ಹಾಗೂ ಪಾಣಿಯ ವ್ಯಾಕರಣದಲ್ಲಿ ಅಂದಿನ ಕನ್ನಡ ವರ್ಣಮಾಲೆಯನ್ನು ಕುರಿತು ದೊರೆಯುವ ವಿವರಣೆಯೂಕೂಡ ಕೆಲವೊಂದು ವ್ಯತ್ಯಾಸಗಳೊಂದಿಗೆ ಇದೇ ಆಗಿವೆ ಎಂಬುದನ್ನು ಕರ್ಲಮಂಗಲಂ ಶ್ರೀಕಂಠಯ್ಯನವರು ವಿವರಿಸಿದ್ದಾರೆ. ಈ ಕಾರಣದಿಂದಾಗಿ ಪಾಣಿನಿಯ ಕಾಲದಲ್ಲೇ ೬೪ ಧ್ವನಿಸಂಕೇತಗಳ ವರ್ಣಮಾಲೆಯು ಕನ್ನಡಭಾಷೆಯದೆಂಬ ವಿಚಾರ ಖಚಿತವಾಗಿದೆ! ಆದರೂ ಈ ೬೪ ಧ್ವನಿಸಂಕೇತಗಳ ವರ್ಣಮಾಲೆಯು ಸಂಸ್ಕೃತದ್ದೆಂದು ನಿರ್ಧರಿಸುವ ಆಧುನಿಕ ವಿದ್ವಾಂಸರ ವಿತಂಡವಾದದಿಂದಾಗಿ ಸಂಸ್ಕೃತಭಾಷೆಯ ಪೇಟೆಂಟ್ ಪಡೆದಿರುವ ಜರ್ಮನರು ಇದು ತಮ್ಮ್ಮ ಸ್ವಾಮ್ಯಕ್ಕೆ ಸೇರಿದ್ದೆಂದು ಸ್ವಾತಂತ್ರ್ಯವಹಿಸಲು ಹಾದಿ ಸುಗಮವಾಯಿತು!! ಇದು ಕನ್ನಡದ ಪ್ರಾಚೀನ ಆಸ್ಥಿ ಎಂಬುದನ್ನು ಕನ್ನಡ ವಿದ್ವಾಂಸರು ಆಗಲೇ ಪ್ರತಿಪಾದಿಸಿದ್ದಲ್ಲಿ ಸೂಪರ್ ಕಂಪ್ಯೂಟರಿಗೆ  ಸಾಫ್ಟ್ವೇರ್ ರೂಪಿಸುವಲ್ಲಿ ಸನ್ ಮೈಕ್ರೋಸಿಸ್ಟಮ್ ನವರು  ಕನ್ನಡಭಾಷೆಗೆ ರಾಜಧನ (ರಾಯಲ್ಟಿ) ಕೊಡಬೇಕಾದುದು ಅನಿವಾರ್ಯವಾಗುತ್ತಿತ್ತು.

Sunday, 14 June 2020

ಸಿರಿಭೂವಲಯ ಕುರಿತ ನನ್ನ ವಿಶ್ಲೇಷಣೆ ಪಕ್ಷಪಾತದಿಂದ ಕೂಡಿದ್ದಲ್ಲ.

ಸಿರಿಭೂವಲಯ ಕುರಿತ ನನ್ನ ವಿಶ್ಲೇಷಣೆ ಪಕ್ಷಪಾತದಿಂದ ಕೂಡಿದ್ದಲ್ಲ.

ಸಂದೇಶ್ ಜೈನ್ ಅವರೇ,  ಸಿರಿಭೂವಲಯ ಕುರಿತ ನನ್ನ ವಿಶ್ಲೇಷಣೆ ಪಕ್ಷಪಾತದಿಂದ ಕೂಡಿದ್ದು;  ಎಂಬುದನ್ನು ನಾನು ಪ್ರಜ್ಞಾಪೂರ್ವಕವಾಗಿ ನಿರಾಕರಿಸುತ್ತೇನೆ.  ಸಾಮಾಜಿಕವಾಗಿ ಮನೆಬಿಟ್ಟುಹೋಗುವವರು  ಪೂರ್ವಿಕರ ಆಸ್ಥಿಯಲ್ಲಿ ಪಾಲುಪಡೆಯದೇ ಹೋಗುವುದಿಲ್ಲವೆಂಬುದು ಖಚಿತ. ಇದೇ ಅನಿಸಿಕೆ ಹಿಂದೂಧರ್ಮದಿಂದ ಬೇರ್ಪಟ್ಟ ಜೈನಸಂಪ್ರದಾಯಕ್ಕೂ ಅನ್ವಯಿಸುತ್ತದೆ! 
ಇದನ್ನು  ನೀವು ಒಪ್ಪುವಿರೋ ಬಿಡುವಿರೋ ಅದು ನಿಮಗೆ ಸೇರಿದ್ದು! ನಾನು ಈ ಮಾತು ಹೇಳಿದಮಾತ್ರಕ್ಕೆ, ಈ ಆಧಾರದಲ್ಲಿ ನಾನು ಸಿರಿಭೂವಲಯದ ಪರಿಚಯ ಮಾಡಿದ್ದೇನೆಂದು ನಿರ್ಧರಿಸಬಾರದು!  ವೇದಗಳು ಅಪೌರುಷೇಯವೋ ಅಲ್ಲವೋ ಎಂಬುದು ನಂಬಿಕೆಯ ವಿಚಾರ. ನಂಬುವವರು ಇರುವಂತೆಯೇ ನಿರಾಕರಿಸಿವವರೂ ಇದ್ದಾರೆ. ಮುಂದೆಯೂ ಇರುತ್ತಾರೆ. ಇದೊಂದು ನಿರಂತರ ಪ್ರವಾಹ. 
ಷಟ್ಖಂಡಾಗಮದ ಮೂಲ ವೇದವೆಂದು ಸೂಚಿಸಿರುವುದು ನನ್ನ ಅನಿಸಿಕೆಯೆಂದು ಭಾವಿಸಿ ನಿರ್ಧರಿಸಿದ್ದರೆ, ಅದು ಸರಿಯಲ್ಲ.  ತನ್ನ ಆರಾಧ್ಯದೈವ ಅಷ್ಟಮತೀರ್ಥಂಕರ ಚಂದ್ರಪ್ರಭದೇವನ  ವಾಣಿಯಲ್ಲಿ  ಸಂಪೂರ್ಣ ಶ್ರದ್ಧೆ ಹೊಂದಿದ್ದ ಕುಮುದೇಂದುಮುನಿಯ ಸಿರಿಭೂವಲಯದ ಮಾಹಿತಿಯನ್ನು  ನಾನು ವಿವರಿಸಿದ್ದೇನಷ್ಟೇ!  ಇದು ನನ್ನ ಸ್ವಕಪೋಲಕಲ್ಪಿತಮಾಹಿತಿಯಲ್ಲ!!
೨೦೦-೩೦೦ ವರ್ಷಗಳಿಂದೀಚಿನ ಮೇಧಾವಿಗಳು ತಮ್ಮ ಬರಹದಮೂಲಕ ಜೈನಸಂಪ್ರದಾಯವು ವೇದಗಳಿಗಿಂತ ಪ್ರಾಚೀನವೆಂಬ ತಪ್ಪು ಗ್ರಹಿಕೆಯ ಭ್ರಮೆಯನ್ನು ರೂಪಿಸಿದ್ದಾರೆಂದು ನಾನು ಹಲವಾರು ಸಲ ಸೂಚಿಸಿದ್ದೇನೆ.  ಪ್ರಥಮಖಂಡ ೫೯ ಅಧ್ಯಾಯಗಳಲ್ಲೇ ’ಋಗ್’  ’ಋಗ್ವೇದ’  ’ಋಗ್ ಭೂವಲಯ’ ಎಂಬ ಪದಗಳು ಸಾವಿರಾರುಸಲ ಬರುತ್ತವೆ! ಇದು ನಾನು ಪರಿಚಯಿಸಿದ್ದಲ್ಲ!!  ಜೈನ ಸಂಪ್ರದಾಯದವರು ಸಿರಿಭೂವಲಯವನ್ನು ಕತ್ತಲಲ್ಲಿರಿಸಲು ಇದು ಮುಖ್ಯಕಾರಣ! ಆದರೆ ಅವರ ದುರಾದೃಷ್ಟ! ಈ ಮಾಹಿತಿಯು  ಪ್ರಥಮಖಂಡದಲ್ಲೇ  ಪ್ರತ್ಯಕ್ಷವಾಗಿದೆ. ಅಲ್ಲಿಗೆ ಯೋಜನೆ ವಿಫಲವಾಯಿತೆಂದು ನಾನು ವಿಶ್ಲೇಷಿಸಿರುವುದು ನಿಜ.
 ಮುಂದಿನ  ೮ ಖಂಡಗಳಲ್ಲಿ ಪ್ರಾಚೀನ ಶಾಸ್ತ್ರಗ್ರಂಥಗಳಿಗೆ ಸಂಬಂಧಿದ ಮಾಹಿತಿಗಳೇ ಹೆಚ್ಚಿರುತ್ತವೆಂದು ನನ್ನ ಅನಿಸಿಕೆ.  ಅವುಗಳ ಸರಳಪರಿಚದಿಂದ  ದೊರೆಯುವ ಮಾಹಿತಿಗಳನ್ನು”ನಮ್ಮ ಖಾತೆಗೆ ಸೇರಿಸಿವ ಪ್ರಯತ್ನ’  ಎಂದು ನಿರ್ಧರಿಸಬೇಡಿ!!  ಈಗ ಕಾಲ ಬದಲಾಗಿದೆ. ಯಾರೂ ಯಾರನ್ನೂ ಸುಲಭವಾಗಿ ವಂಚಿಸಲಾಗದು.
ನೇಮಿ ತೀರ್ಥಂಕರರಿಂದ ದ್ವಾರಕೆಯ ಶ್ರೀಕೃಷನಿಗೆ ಉಪದೇಶವಾದ ನೇಮಿ ಗೀತೆಯು ಜೈನಸಂಪ್ರದಾಯದ ಕೊಡುಗೆ ಎಂದು ನಾನು ಪರಿಚಯಿಸಿರುವುದು ನಿಮ್ಮಲ್ಲಿ ಯಾರಿಗೂ ತಿಳಿಯದು! ಕೃಷನು ಯುದ್ಧಕ್ಕೆ ಪ್ರೇರಣೆ ಮಾಡಿರುವುದರಿಂದ ಅದು ’ಅಹಿಂಸಾಧರ್ಮಕ್ಕೆ’ ವಿರೋಧವೆಂದು ಲೆಕ್ಕಾಚಾರ ಮಾಡಿ ಅದನ್ನು ಜೈನರ ಕೊಡುಗೆ ಎಂಬುದನ್ನು  ನಿರಾಕರಿಸಿದ್ದವರು, ಇನ್ನೂ ನಿರಾಕರಿಸುವವರು ಜೈನಸಂಪ್ರದಾಯದವರೇ. 
ಈ ಮಾಹಿತಿಯನ್ನು ನಾನು ವಿಸ್ತಾರವಾಗಿ ಚರ್ಚಿಸಿದ್ದೇನೆ.  ಇಲ್ಲಿ ಅದು  ಸೇರಲಾಗದು. ಷಟ್ಖಂಡಾಗಮಗಳ ವಿಚಾರವೂ ಅಷ್ಟೇ! ಸಿರಿಭೂವಲಯದಲ್ಲಿರುವ ಮಾಹಿತಿಯನ್ನು ಪರಿಚಯಿಸಿದ್ದೇನೆ.   ಇದು ಪರಿಚಯಕಾರನ ’ತಿರುಚುವ’ ಪ್ರಯತ್ನವೆಂದು ಯಾರಾದರೂ ಭಾವಿಸಿದರೆ ಅದಕ್ಕೆ ನನ್ನ ಆಕ್ಷೇಪವಿಲ್ಲ. ಅವರಿಗೆ ಆ ಸ್ವಾತಂತ್ರವಿವೆ.  ಆದರೆ, ಇದು ಪಾರಿಚಯಕಾರನ ತಪ್ಪು ಎಂಬುದನ್ನು ಮಾತ್ರ ನಾನು ಜೀವಿಸಿರುವ ವರೆವಿಗೂ ನಿರಾಕರಿಸುತ್ತೇನೆ.  ಇಂದಿನ ಪರಿಸರದಲ್ಲಿ  ಸಂಸ್ಕೃತಭಾಷೆಯ ’ವೇದ’ ಸಾಹಿತ್ಯವು ಹೆಚ್ಚು ಜನಗಳಿಗೆ ಹತ್ತಿರವಾಗಲಾರದೆಂಬುದು ಸರ್ವವಿದಿತ.  ಆದರೆ ಸರ್ವಜ್ಞ ಸ್ವರೂಪಿಯಾದ ಕುಮುದೇಂದು ಮುನಿಯು  ವೇದೋಪನಿಷತ್ತುಗಳ ಸಮಗ್ರ ಮಾಹಿತಿಯನ್ನೂ ಆದಿನಾಥನ ಕೇವಜ್ಞಾನದ ಮಾಹಿತಿಗಳನ್ನೂ ಅಲ್ಲಿಂದ ತನ್ನವರೆಗೆ ಹರಿದುಬಂದಿರುವ ಜ್ಞಾನಗಂಗೆಯನ್ನು ಸಮಾವೇಶಗೊಳಿಸಿ, ಅತ್ಯಂತ ಪುರಾತನವಾದ ಕನ್ನಡಭಾಷೆಯಲ್ಲಿ ಸಿರಿಭೂವಲಯದ ನಿರೂಪಣೆಮಾಡಿರುವುದರಿಂದ ಇದನ್ನು ’ಕನ್ನಡದವೇದ’ ಎಂಬು ನಾನು ನಿರ್ಧರಿಸಿದ್ದೇನೆ. ಅಂದಮಾತ್ರಕ್ಕೇ ಇದನ್ನೂ ’ನಮ್ಮ ಖಾತೆಗೆ ಸೇರಿಸಿಕೊಂಡುಬಿಟ್ಟ’ ಎಂದು ಗಾಭರಿಯಾಗಬೇಡಿ!
 ಇದು ವೇದ ಹಾಗೂ ಜೈನ ಸಂಪ್ರದಾಯದ  ಜಂಟಿಖಾತೆ! ಇದನ್ನು ಯಾರೂ ಅಪಹರಿಸಲಾಗದು!!  ಕನ್ನಡದ ಇಂದಿನ ಶ್ರೇಷ್ಠತೆಗೆ, ಜಗದ್ವಿಖ್ಯಾತಿಗೆ  ಸಿರಿಭೂವಲಕಾರಣ. ಸಿರಿಭೂವಲಯದ ಕರ್ತೃ ಜೈನಸಂಪ್ರದಾಯದವನು.  ಈ ಶ್ರೇಯಸ್ಸಿನಲ್ಲಿ ಹೆಚ್ಚಿನಪಾಲು ಉಳಿದೆಲ್ಲ ಸಂಪ್ರದಾಯದವರಿಗಿಂತಲೂ ಜೈನಸಂಪ್ರದಾಯದವರಿಗೆ  ಸೇರುತ್ತದೆ ಎಂಬ ನನ್ನ ವಿಶ್ಲೇಷಣೆಯು ಬೆಳಗಾವಿಯ ಜೈನ ಸಮುದಾಯಕ್ಕೆ ಮನವರಿಕೆಯಾಗಿದೆ. ಸುಮಾರು ಒಂದು ಗಂಟೆಯ  ’ಪವರ್ ಪಾಯಿಂಟ್ ಪ್ರೆಸೆಂಟೇಷನ್’ ನಲ್ಲಿ  ಇದನ್ನು ಸೂಚಿಸಿದ್ದೇನೆ.  ಇಷ್ಟಾದರೂ ನಾನು ವೇದ ಸಮೂಹದ ಪಕ್ಷಪಾತಿ ಎಂದು ದೋಷಿಸುವುದಾದಲ್ಲಿ ನನಗೆ ತೊಂದರೆ ಏನಿಲ್ಲ!!
 ಸಿರಿಭೂವಲಯದ ಪರಿಚಯಕ್ಕಾಗಿ ಬ್ರಾಹ್ಮಣಸಮುದಾಯದ ಕೆಲವರು ಸುಧಾರ್ಥಿಯನ್ನು ದೂರವಿರಿಸಿರುವುದಿದೆ! ’ಸತ್ಯವನ್ನು ತಿರುಚಿ ತನ್ನ ಖಾತೆಗೆ ಸೇರಿಸಿಕೊಳ್ಳುತ್ತಾನೆ’  ಎಂಬುದು ಜೈನಸಂಪ್ರದಾಯದಲ್ಲಿ ಹಲವರ ಆಪಾದನೆ!!  (ಅಲ್ಲಿಯೂ ಸಲ್ಲದವ; ಇಲ್ಲಿಯೂ ಸೇರದವ; ಎಲ್ಲೂಸಲ್ಲದವನೇನೋ!?) ಇದಾವುದರಿಂದಲೂ ನನಗೆ ಆಗಬೇಕಾದ್ದೇನಿಲ್ಲ!! ಯಾರಹಂಗಿನಲ್ಲೂ ನಾನು ನನ್ನ ಜೀವನವನ್ನು ಸಾಗಿಸಬೇಕಿಲ್ಲ.  ಕನ್ನಡದ ಮಹಾನ್ ಅಭಿಮಾನಿ ಕೆ. ಅನಂತಸುಬ್ಬರಾಯರ ಕಾರಣದಿಂದ (ಅವರೂ ಹಲವಾರು ವೈದಿಕರಿಂದ, ಸ್ವಜಾತಿಯ ಬಂಧುಗಳಿಂದ ದೂರಸರಿಸಲ್ಪಟ್ಟವರು!) ನನಗೆ ಗಂಟುಬಿದ್ದ  ಅಮೂಲ್ಯಕೃತಿಯ ಸರಳಪರಿಚಯ ಮಾಡಿಕೊಡುವುದು ನನ್ನ ಪಾಲಿನ ಕರ್ತವ್ಯವಾಗಿತ್ತು  ಸಾಧ್ಯವಿರುವಷ್ಟನ್ನು ಸಮರ್ಪಕವಾಗಿ ಮಾಡಿ ಮುಗಿಸಿದೆ. ಇದನ್ನು ಯರು ಹೇಗೆಬೇಕಾದರೂ ಸ್ವೀಕರಿಸಬಹುದು/ ನಿರಾಕರಿಸಬಹುದು!  ಜೈನಧರ್ಮಕ್ಕೆ  ಇವನೊಬ್ಬ  ಉಗ್ರವಾದಿಯೆಂದುಬೇಕಾದರೂ ನಿರ್ಧರಿಸಬಹುದು. ಅದಕ್ಕೆ ನನ್ನ ವಿರೋಧವೇನಿಲ್ಲ. ಅದು ಅವರ ನಿಲುವಿನ ’ಸತ್ಯಾನ್ವೇಷಣೆ’ !! ಅಷ್ಟೇ!!
                        -ಸಿರಿಭೂವಲಯದಸುಧಾರ್ಥಿ. ೭೬೭೬೪೭೪೮೭೨.

ಸಿರಿಭೂವಲಯದ ಸರಳ ಪರಿಚಯಗಳನ್ನು ಕುರಿತು ಕನ್ನಡಿಗರ ಆಸಕ್ತಿ ಎಂಥದು!!!

ಸಿರಿಭೂವಲಯದ ಸರಳ ಪರಿಚಯಗಳನ್ನು ಕುರಿತು ಕನ್ನಡಿಗರ ಆಸಕ್ತಿ ಎಂಥದು!!!

ಸಿರಿಭೂವಲಯದ ಒಳಹೊಕ್ಕು, ಅಲ್ಲಿನ ಮಾಹಿತಿಗಳನ್ನು ಸರಳವಾಗಿ ಪರಿಚಿಯಿಸುವಕಾರ್ಯದಲ್ಲಿ ಶ್ರಮವಹಿಸಿ ಯಶಸ್ವಿಯದ ಹಾಸನದ ಸುಧಾರ್ಥಿಯು ,  ಕಳೆದ  ಒಂದು ದಶಕದ ಅವಧಿಯಲ್ಲಿ ಸುಮಾರು ೩೦೦೦ ಪುಟಗಳ ವ್ಯಾಪ್ತಿಯಲ್ಲಿ ೧೧ ಕೃತಿಗಳನ್ನು ಪ್ರಕಟಿಸಿದ್ದಾಯಿತು. ಅವುಗಳನ್ನು ಕೆಲವರು ಮಾತ್ರ ಗಮನಿಸಿ,  ಒಂದು ರೀತಿಯಲ್ಲಿ ಈ ಕೃತಿಗಳನ್ನು ಮೂಲೆಗುಂಪುಮಾಡಿದ್ದಾಯಿತು.  ಕಳೆದೊಂದು ವರ್ಷದಿಂದ ನಾನು fbನಲ್ಲಿ ಬರೆಯತೊಡಗಿದಮೇಲೂ ಕೇವಲ ಕೆಲವರಿಂದಮಾತ್ರ ಅದಕ್ಕೆ ಪ್ರತಿಕ್ರಿಯೆ ದೊರೆಯುತ್ತಿತ್ತು.  ಪ್ರಾಸಂಗಿಕವಾಗಿ ನಾನು ಸಿರಿಭೂವಲಯದಲ್ಲಿ ಅಂತರ್ಗತವಾಗಿರುವ ’ಋಗ್ವೇದವೇ ಜಗತ್ತಿನ ಎಲ್ಲ ಜ್ಞಾನಕ್ಕೂ ಮೂಲ’ ಎಂಬ ಮಾಹಿತಿಯನ್ನು ಸೂಚಿಸುವಲ್ಲಿ ಪ್ರಕಟಿಸಿದ ಕೆಲವು ಸಾಲಿನ ಲೇಖನಕ್ಕೆ ಜೈನಸಮುದಾಯದ ಕೆಲವು ಮಿತ್ರರು ಅದನ್ನು ಪ್ರಶ್ನಿಸಿ ತಮ್ಮ ಅನಿಸಿಕೆಗಳನ್ನು ಸೂಚಿಸಿದರು. ಅವುಗಳಿಗೆ ಸೂಕ್ತ ಉತ್ತರ ನೀಡಿದರೂ ಅವರಿಗೆ ಅದು ಸಮಂಜಸವೆನಿಸಲಿಲ್ಲ.  ಉತ್ತರ; ಪ್ರತ್ಯುತ್ತರಗಳಸರಣಿಯು ಬೆಳೆದು ಅನಪೇಕ್ಷಿತವಾದ ಚರ್ಚೆಯಾಯುತು ಈ ಕಾರಣದಿಂದಾಗಿ ನಾನು ಆ ಚರ್ಚೆಯಿಂದ ಹೊರಬಂದು ಈ ಸಂಬಂಧದ ಚರ್ಚೆಯನ್ನು ಮುಕ್ತಾಯಗೊಳಿಸುವ ನಿರ್ಧಾರಮಾಡುವುದು ಅನಿವಾರ್ಯವಾಯಿತು.  ನನ್ನಲ್ಲಿ ಉಳಿದಿರುವ ಸಿರಿಭೂವಲಯದ ಸರಳ ಪರಿಚಯಕೃತಿಗಳ ದೊಡ್ಡ ರಾಶಿಯನ್ನು  ಮುಂದೆ ಹಣಕ್ಕೆ ಮಾರಾಟಮಾಡದೇ, ’ದಾನ’ವಾಗಿ ನೀಡುವ ನಿರ್ಧಾರಮಾಡಿದೆ.  ಆಸಕ್ತಿ ಇರುವವರು ಖುದ್ಧಾಗಿ ಬಂದು ಅದನ್ನು ಪಡೆಯಬಹುದು.  ಯಾಪನೀಯ ಜೈನಸಂಪ್ರದಾಯದ ಮುನಿ ಕುಮುದೇಂದುವಿನ ಮೂಲಕ ಬೆಳಕುಕಂಡಿರುವ ಜಗತ್ತಿನ ಈ ಅತ್ಯಂತ ಅಚ್ಚರಿಯ ಕಾವ್ಯದಲ್ಲಿ ನಿರೂಪಿತವಾಗಿರುವ ಕನ್ನಡದ  ಪ್ರಾಚೀನತೆ ಹಾಗೂ ಪ್ರಾಧಾನ್ಯತೆಯನ್ನು ಪರಿಚಯಿಸುವ ಏಕೈಕ ಉದ್ದೇಶದಿಂದ ಈ ಸರಳಪರಿಚಯಕಾರ್ಯಕ್ಕೆ ನಾನು ಕೈಹಾಕಿದ್ದೇ ವಿನಃ, ವೇದಸಂಪ್ರದಾಯ ಹಾಗೂ ಶ್ರವಣ ಸಂಪ್ರದಾಯದ ತಿಕ್ಕಾಟವನ್ನು ನೋಡುವುದು ಇದರ ಉದ್ದೇಶವಲ್ಲ,  ಎಂಬುದನ್ನು ಈ ಮೂಲಕ ನನ್ನ ಅಭಿಮಾನಗಳ ಗಮನಕ್ಕೆ ತರಲು ಇಚ್ಛಿಸಿದ್ದೇನೆ. ವಂದನೆಗಳು.
                 - ಸಿರಿಭೂವಲಯದ ಸುಧಾರ್ಥಿ

Friday, 29 May 2020

ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆಭಾಗ: ೧.


ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆಭಾಗ: ೧.

೧)** ಕೃತಿಕರ್ತೃವನ್ನು ಕುರಿತು**

ಕ್ರಿ. ಶ. ೮೦೦ ರ ಸುಮಾರಿನಲ್ಲಿ ಕುಮುದೇಂದುಮುನಿಯು ರಚಿಸಿರುವ ಕನ್ನಡ ಅಂಕಕಾವ್ಯ ಸಿರಿಭೂವಲಯದ ಅಕ್ಷರ ಅವತರಣಿಕೆಯನ್ನು  ಬೆಂಗಳೂರಿನ ಸರ್ವಾರ್ಥಸಿದ್ಧಿ ಸಂಘದವರು ೧೯೫೩ ಹಾಗೂ ೧೯೫೫ ರಲ್ಲಿ ಪ್ರಕಟಿಸಿದ್ದರೂ ಈ ಕಾವ್ಯದ ರಚನೆಯು ಸಾಮಾನ್ಯ ಓದುಗರಿರಲೀ, ವಿದ್ವಾಂಸರಿಗೂ ಓದಲು ಸಾಧ್ಯವಾಗದ ಜಟಿಲವಾದ ರಚಾನಾಕ್ರಮವನ್ನು ಹೊಂದಿದ್ದ ಕಾರಣದಿಂದಾಗಿ ಅದೊಂದು ’ಕಬ್ಬಿಣದ ಕಡಲೆ’ ಎಂಬ ಅಪಖ್ಯಾತಿಗೆ ತುತ್ತಾಗಿ, ಕತ್ತಲಕೋಣೆಯನ್ನು ಸೇರಿತ್ತು. 
ಈ ಸಿರಿಭೂವಲಯಕಾವ್ಯವನ್ನು ಸಾಮಾನ್ಯ ಓದುಗರ ಆಲೋಚನೆಗೆ ನಿಲುಕುವಂತೆ  ಸರಳವಾಗಿ ಪರಿಚಯಿಸುವ ದಿಸೆಯಲ್ಲಿ ಹಾಸನದ ಸುಧಾರ್ಥಿಯು ಬೇರೆ ಬೇರೆ ಸ್ತರದಲ್ಲಿ ೧೧ ಪರಿಚಯ ಕೃತಿಗಳನ್ನು ರೂಪಿಸಿದ್ದಾಗಿದೆ.  ಸುಮಾರು ೩೦೦೦ ಪುಟಗಳಿಗೂ ಹೆಚ್ಚಿನ ವ್ಯಾಪ್ತಿಹೊಂದಿರುವ ಅವುಗಳನ್ನು ಓದುವುದೂ ಇಂದಿನ ಸಾಹಿತ್ಯಾಭ್ಯಾಸಿಗಳಿಗೆ  ಶ್ರಮದ ಕಾರ್ಯ. ಈ ಕಾರಣದಿಂದಾಗಿ ಅವುಗಳ ಸಂಕ್ಷಿಪ್ತ ಪರಿಚಯವನ್ನು ಈ ಲೇಖನಮಾಲೆಯ ರೂಪದಲ್ಲಿ ಇಲ್ಲಿನ ಓದುಗರಿಗೆ ಒದಗಿಸುವ ಕಾರ್ಯಕ್ಕೆ ಕೈಹಾಕಿದ್ದೇನೆ. ಆಸಕ್ತಿ ಇರುವ ಕೆಲವರಿಗಾದರೂ ಈ ಪ್ರಯತ್ನವು ಉಪಯುಕ್ತವಾದೀತೆಂಬ ನಂಬಿಕೆ ನನಗಿದೆ.
ಸುಧಾರ್ಥಿಯು ಪ್ರಾರಂಭಿಸಿದ ಸಿರಿಭೂವಲಯದ ಸರಳ ಪರಿಚಯಕೃತಿಗಳಪೈಕಿ ಮೊದಲನೆಯದಾದ  ’ಸರ್ವಭಾಷಾಮಯೀಭಾಷಾ ಸಿರಿಭೂವಲಯಸಾರ’  ಎಂಬ ಕೃತಿಯು ೨೦೧೦ರಲ್ಲಿ ಹುಬ್ಬಳ್ಳಿಯಲ್ಲಿ ಪ್ರಕಟವಾಯಿತು.
ಈ ಸರಳಪರಿಚಯಕೃತಿಯ ಲೇಖಕ ಸುಧಾರ್ಥಿಯವರು ’ಅನಂತ ಕೀಬೋರ್ಡಿನ ’  ನಿರೂಪಕ ಸ್ವರ್ಗೀಯ ಕೆ. ಅನಂತಸುಬ್ಬರಾಯರ ಅಭಿಮಾನಿ. ಸಿರಿಭೂವಲಯಕಾವ್ಯದ ಆಳವಾದ ಪರಿಚಯ ಹೊಂದಿದ್ದ ಕೆ. ಅನಂತಸುಬ್ಬರಾಯರು  ಅದರ ರಚನೆಯ ಸ್ವರೂಪವನ್ನು ಕುರಿತು ಸುಧಾರ್ಥಿಗೆ ಸಾಕಷ್ಟು ಮಾಹಿತಿಗಳನ್ನು ವಿವರಿಸಿ, ಈ ಕಾವ್ಯವನ್ನು ಸರಳವಾಗಿ ಪರಿಚಯಿಸುವ ಕಾರ್ಯಕ್ಕೆ ಪ್ರೇರೇಪಿಸಿದವರು.
ಈ ಮಹನೀಯರು ನೀಡಿದ ಸಮರ್ಥ ಮಾರ್ಗದರ್ಶನವನ್ನು  ಮನನ ಮಾಡಿಕೊಂಡು ಸುಮಾರು ೨೭ ವರ್ಷಗಳಕಾಲ ಏಕಾಂಗಿಯಾಗಿ ಈ ವಿಸ್ಮಯಕಾರಿ ಕಾವ್ಯದ ಅಧ್ಯಯನನಡೆಸಿ,  ಸಿರಿಭೂವಲಯಕಾವ್ಯಕ್ಕೆ ಸಂಬಂಧಿಸಿದಂತೆ  ಕಳೆದ ೬೫ ವರ್ಷಗಳಿಂದ ನಡೆದಿರುವ, ನಡೆಯಿತೆಂದು ದಾಖಲಾಗಿರುವ, ನಡೆಯಬೇಕಾಗಿದ್ದ ಹಾಗೂ ಮುಂದೆ ನಡೆಯಬೇಕಿರುವ ಚಟುವಟಿಕೆಗಳನ್ನು ಕುರಿತು ಡೆಮಿ ೧/೪ ಅಳತೆಯ ಸುಮಾರು ೪೫೦ ಪುಟಗಳ ವ್ಯಾಪ್ತಿಯಲ್ಲಿ ಬಹಳ ವಿಸ್ತಾರವಾದ  ಸರಳ ಪರಿಚಯವನ್ನು ರೂಪಿಸಲಾಗಿದೆ.   ಈ ಬರಹಗಳಲ್ಲಿ ತುಂಬಾ ಕಠಿಣವಾದ ಪದಗಳನ್ನು ಬಳಸಿ ಈ ಪರಿಚಯಕಾರನು  ವಿವರಣೆಗಳನ್ನು ನೀಡಿರುವುದಿದೆ.  ಅವುಗಳ ಪೈಕಿ ಕೆಲವೊಂದು ಪ್ರಮುಖ ಮಾಹಿತಿಗಳನ್ನು ಕುರಿತು ನೀವು ಇಲ್ಲಿ ಸಂಕ್ಷಿಪ್ತವಾದ ಮಾಹಿತಿಯನ್ನು ನೋಡಲಿರುವಿರಿ.
 ಮೂಲತಃ ತುಮಕೂರುಜಿಲ್ಲೆಯ ಹೊನ್ನವಳ್ಳಿ ಎಂಬ ಗ್ರಾಮದವರು ಕಂದಚಾರ್   ರಾಮಸ್ವಾಮಯ್ಯನವರು.   ಅರಸೀಕೆರೆಯ ’ದಾಸಪ್ಪಾ ದಿ ಗ್ರೇಟ್’ ಅವರ ಮಗಳು ವೆಂಕಟಲಕ್ಷಮ್ಮ ಹಾಗೂ  ಶ್ರೀಕಂಠಯ್ಯ ದಂಪತಿಗಳ  ಮಗಳು ಶ್ರೀಮತಿ ನರಸಮ್ಮನವರು ಈ ರಾಮಸ್ವಾಮಯ್ಯನವರ ಧರ್ಮಪತ್ನಿ.  ಈ ದಂಪತಿಗಳ ಮಗನಾಗಿ ಹಾಸನ ನಗರದಲ್ಲಿ ಜನಿಸಿದ ಕೆ.ಆರ್. ಶಂಕರನಾರಾಯಣನಿಗೆ ಚಿಕ್ಕಂದಿನಿಂದಲೂ ಕನ್ನಡಸಾಹಿತ್ಯದಲ್ಲಿ ಆಸಕ್ತಿ.  ಹಾಸನದಲ್ಲಿ ಪುರಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಸಮಯದಲ್ಲೇ ಕನ್ನಡ ಬೆರಳಚ್ಚುಯಂತ್ರ ಶಿಲ್ಪಿ ಕೆ. ಅನಂತಸುಬ್ಬರಾಯರ ಪರಿಚಯ. 
ಶಾಲಾಶಿಕ್ಷಣ ಪೂರೈಸಿದನಂತರ, ಹಾಸನದಲ್ಲೇ ನೂತನವಾಗಿ ಪ್ರಾರಂಭವಾದ ’ಕೈಗಾರಿಕಾ ತರಬೇತಿ ಕೇಂದ್ರ’ದಲ್ಲಿ (ಐ. ಟಿ.ಸಿ) ತರಬೇತಿ.  ೧೯೬೫ರಲ್ಲಿ ಬೆಂಗಳೂರಿಗೆ ವಲಸೆ. ಬೆಂಗಳೂರಿನ ಭಾರತೀಯ ದೂರವಾಣಿ ಕಾರ್ಖಾನೆಯಲ್ಲಿ (ಐ.ಟಿ.ಐ)  ಉದ್ಯೋಗ.  ಬೆಂಗಳೂರು ಸೇರಿದಮೇಲೆ ಸಾಹಿತ್ಯ ಕ್ಷೇತ್ರದ ಹಿರಿಯ ಚೇತನಗಳಾದ ತಿ. ತಾ ಶರ್ಮರು, ಡಾ|| ಅ.ನ. ಕೃ, ಎಸ್. ಕೆ. ಕರೀಖಾನ್, ಟಿ. ಕೇಶವಭಟ್ಟ, ಡಾ|| ಎಸ್. ಎಲ್. ಭೈರಪ್ಪ,  ನಾಡಿಗೇರ್ ಕೃಷ್ಣರಾಯರು,  ಎಂ.ಕೆ. ಇಂದಿರಾ, ಚಿ.ನ, ಮಂಗಳ ಮುಂತಾದವರೊಂದಿಗೆ  ಹೆಚ್ಚಿನ ಪರಿಚಯ. ಇದರಿಂದಾಗಿ ವ್ಯಕ್ತಿಜೀವನದಲ್ಲಿ ಸಾಕಷ್ಟು ಪರಿಷ್ಕಾರ.  ಈ ದಿಸೆಯಲ್ಲಿ ಶ್ರೀ. ಪರಮಾನಂದಭಾರತೀ ಸ್ವಾಮಿಗಳ ಯುಕ್ತ ಮಾರ್ಗದರ್ಶನ.
ಈ ಹಿಂದೆಯೇ ಕೆಲವಾರು  ನಿಯತಕಾಲಿಕಗಳಿಗೆ ಲೇಖನಗಳ ರಚನೆಗಾಗಿ ’ಸುಧಾರ್ಥಿ’ ಎಂಬ ಕಾವ್ಯನಾಮದ  ಆಯ್ಕೆಯಾಗಿತ್ತು.  ಕವನ, ನಾಟಕ, ವಿಮರ್ಶೆ, ಕಾದಂಬರಿ, ಜೀವನಚರಿತ್ರೆ, ಸಂದರ್ಶನಗಳು, ಧಾರ್ಮಿಕ ವಿಚಾರಗಳು, ಗಾದೆಗಳು  ಇತ್ಯಾದಿ ವಿವಿಧ ಪ್ರಾಕಾರಗಳಿಗೆ ಸೇರಿದ ೧೧ ಕೃತಿಗಳ ರಚನೆ, ಹಾಗೂ ಪ್ರಕಟಣೆ.
 ಅನಂತಸುಬ್ಬರಾಯರ ಪರಿಚಯದಿಂದ  ಸಿರಿಭೂವಲಯ ಕಾವ್ಯದ ಸಂಪರ್ಕ.  ಸಿರಿಭೂವಲಯಕುರಿತು ಅಧ್ಯಯನ ಹಾಗೂ ಅರಳಪರಿಚಯಕ್ಕಾಗಿ ಅವರಿಂದ ಒತ್ತಾಯ.  ಆ ವೇಳೆಗಾಗಲೇ ಕಾಲವಶರಾಗಿದ್ದ  ಕರ್ಲಮಂಗಲಂ ಶ್ರೀಕಂಠಯ್ಯನವರ ಪರೋಕ್ಷ ಪರಿಚಯ.  ಅನಂತಸುಬ್ಬರಾಯರ ಕಾಲಾನಂತರ ಅವರ ಸ್ಮಾರಕಸಂಸ್ಥೆಯಾಗಿ  ಬೆಂಗಳೂರಿನಲ್ಲಿ ’ಅನಂತಪ್ರಕಾಶನ’  ಸ್ಥಾಪಿಸಿ, ಒಂದು ದಶಕದಕಾಲ ಅದರ ಯಶಸ್ವೀ ನಿರ್ವಹಣೆ. ಈತ ರೂಪಿಸಿದ ’ಸಂಜೆಗತ್ತಲು’ ಎಂಬ ಐತಿಹಾಸಿಕ  ನಾಟಕವು ಬೆಂಗಳೂರಿನ ಆಕಾಶವಾಣಿ ನಿಲಯದಿಂದ ಪ್ರಸಾರವಾಗಿದೆ.
ಕೆ. ಅನತಸುಬ್ಬರಾಯರು, ಕೋಟವಾಸುದೇವಕಾರಂತರು, ಸುಪ್ರಸಿದ್ಧ ಆಯುರ್ವೇದ ವೈದ್ಯ ಡಾ|| ಮಳಿಯೆ ಗೋಪಾಲಕೃಷ್ಣರಾಯರು ಇವರುಗಳ ಜೀವನ ಸಾಧನೆ ಕುರಿತು ಮುಂದಿನ ತಲೆಮಾರಿಗೆ ಅಧಿಕೃತ ಆಧಾರಗ್ರಂಥಗಳ ರೂಪದಲ್ಲಿ  ’ಅನಂತ’  ’ವಾಸುದೇವ’  ’ ಧನ್ವಂತರಿ’ ಎಂಬ  ಪ್ರಮುಖ ಜೀವನಚರಿತ್ರೆಗಳ  ರಚನೆ ಹಾಗೂ ಪ್ರಕಟಣೆ. ಇವುಗಳ ಸಂಕ್ಷಿಪ್ತ ಮಾಹಿತಿಯು ಬೆಂಗಳೂರಿನ ಆಕಾಶವಾಣಿಯಿಂದ  ’ಬಾಳಬೆಳಕು’ ಕಾರ್ಯಕ್ರಮದಲ್ಲಿ ಪ್ರಸಾರವಾಗಿವೆ.
ಅಂತಸುಬ್ಬರಾಯರ ಒತ್ತಾಯದಿಂದಾಗಿ ಸಿರಿಭೂವಲಯ ಕಾವ್ಯದ ಅಭ್ಯಾಸಕ್ಕೆ ಪ್ರಯತ್ನ.  ೨೭ ವರ್ಷಗಳ ಅಧ್ಯಯನದ ಫಲವಾಗಿ ’ಸಿರಿಭೂವಲಸಾರ’ ಎಂಬ ಸರಳ ಪರಿಚಯ ಕೃತಿಯ ರಚನೆಮಾಡುವಷ್ಟರ ಮಟ್ಟಿಗೆ ಅದರಲ್ಲಿ ತಲ್ಲೀನತೆ.  ೧೯೯೮ರಲ್ಲಿ  ಐ.ಟಿ.ಐ. ನಿಂದ ಸ್ವಯಂ ನಿವೃತ್ತಿ ಪಡೆದು, ೨೦೦೦ ದಲ್ಲಿ ಹಾಸನದ ಸಮೀಪ ಹಾಲುವಾಗಿಲು ಎಂಬ  ಗ್ರಾಮಕ್ಕೆ ವಲಸೆ.
 ಫಲಭರಿತವಾದ  ಗಿಡಮರಗಳಿಂದ ಕೂಡಿದ, ಮನಸಿಗೆ ಮುದನೀಡುವ  ಚಿಕ್ಕದಾದ ಚೊಕ್ಕ ತೋಟವೊಂದರ ಅಭಿವೃದ್ಧಿಕಾರ್ಯದ ಪ್ರಾರಂಭ. ,  ೨೦೧೦ರಲ್ಲಿ  ಜೀವನದ ಮಹತ್ಸಾಧನೆಯಾಗಿ  ಸಿರಿಭೂವಲಯವನ್ನು ಸರಳವಾಗಿ, ಸಮರ್ಪಕವಾಗಿ ಪರಿಚಯಿಸುವ  ’ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಸಾರ’  ಎಂಬ ಕೃತಿಯ ಪ್ರಕಟಣೆ.
ಮುಂದೆ ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ೮ ಪರಿಚಯಕೃತಿಗಳ ರಚನೆ ಹಾಗೂ ಪ್ರಕಟಣೆ. ಇವುಗಳ ಸಂಕ್ಷಿಪ್ತ ಭಾವಾನುವಾದವು ಹಿಂದಿ ಹಾಗೂ ಇಂಗ್ಲಿಷ್  ಭಾಷೆಯಲ್ಲೂ ಪ್ರಕಟವಾಗಿವೆ. ತನ್ನ ಜೀವನದ ಸಂಗಾತಿ ಶ್ರೀಮತಿ ಗಿರಿಜೆಯು  ತನ್ನ ಕೈಹಿಡಿದಂದಿನಿಂದ  ಇಂದಿನವರೆವಿಗೂ ನೀಡಿರುವ ಸಹಕಾರವನ್ನು ಪ್ರಾಮಾಣಿಕವಾಗಿ ಸ್ಮರಿಸುವುದನ್ನೂ ಈ ವ್ಯಕ್ತಿ ಮರೆಯುವುದಿಲ್ಲ. ಸಿರಿಭೂವಲಯಕಾವ್ಯದಲ್ಲಿ ಕನ್ನಡ ಭಾಷಾ ಸ್ತಂಬಕಾವ್ಯವನ್ನು ಪ್ರತ್ಯೇಕಿಸುವಲ್ಲಿ ಶ್ರೀಮತಿ ಗಿರಿಜಾ ಅವರೂ ನೆರವುನೀಡಿ ಈ ಕಾರ್ಯದ ವೇಗವು ವೃದ್ಧಿಯಾಗುವಲ್ಲಿ ಸಹಕರಿಸಿರುವುದು ಗಮನಾರ್ಹ ಸಗತಿ.
ನಾಡಿನ ಹಿರಿಯ ವಿದ್ವಾಂಸರಾದ ಪ್ರೊ. ಜಿ. ವೆಂಕಟಸುಬ್ಬಯ್ಯನವರು ’ಸಿರಿಭೂವಲಯ ಸಾಗರ ರತ್ನ ಮಂಜೂಷ’ ಎಂಬ ಸರಳಪರಿಚಯಕೃತಿಗೆ ಮುನ್ನುಡಿ ಬರೆಯುವಲ್ಲಿ ಹಾಸನದ ಸುಧಾರ್ಥಿಯನ್ನು ’ಸಿರಿಭೂವಲಯದ ಸುಧಾರ್ಥಿ’  ಎಂದು ಸೂಚಿಸಿರುವುದು;  ಪ್ರೊ. ಜಿ. ಬ್ರಹ್ಮಪ್ಪನವರು  ’ಗೌತಮಗಣಧರರ ಸಂತತಿಗೆ ಸೇರಿದ ಸುಧಾರ್ಥಿ’ ಎಂದು  ಸೂಚಿಸಿರುವುದು ಇವರು ಜೀವನದಲ್ಲಿ ಸಾಧಿಸಿರುವ ಅಮೂಲ್ಯವಾದ ಗೌರವ ಹಾಗೂ ಪಾರಮಾರ್ಥಿಕವಾದ ಸಂಪತ್ತಾಗಿದೆ. ಸಾಹಿತ್ಯಕ್ಷೇತ್ರದಲ್ಲಿ ಅಪರಿಚಿತನಾಗಿಯೇ ಇರುವ ತನಗೆ ಇದನ್ನೂ ಮೀರಿದ ರಾಷ್ಟ್ರೀಯ/ ಅಂತರ್ ರಾಷ್ಟ್ರೀಯ ಪ್ರಶಸ್ತಿಯಗಲೀ ಪುರಸ್ಕಾರವಾಗಲೀ ಯಾವುದೂ ಇಲ್ಲವೆಂಬುದು ಈ ಪರಿಚಯಕಾರನ ನಿಲುವು.
ಕನ್ನಡದಲ್ಲಿ ಸಿರಿಭೂವಲದಂಥ ಮಹತ್ತರವಾದ ಕಾವ್ಯವಿದೆ ಎಂಬ ಮಾಹಿತಿಯು ಮುಂದಿನ ತಲೆಮಾರಿಗೆ  ಸಮರ್ಪಕವಾಗಿ ದೊರೆತರೆ,  ಮುಂದೆ ಇನ್ನೊಬ್ಬ ಸಿರಿಭೂವಲಯದ ಶ್ರೀಕಂಠಯ್ಯನವರ  ಅವತಾರವಾಗಿ, ಮುಂದಿನ ಕನ್ನಡಿಗರಿಗೆ ಸಿರಿಭೂವಲಯದ ಸಮಗ್ರ  ವಿಶ್ವರೂಪದರ್ಶನವಾಗಲು  ಅವಕಾಶವಾದೀತೆಂಬುದು  ಸುಧಾರ್ಥಿಯ  ಹಂಬಲ.   ಸಿರಿಭೂವಲಯಕಾವ್ಯದಲ್ಲಿ ಅಡಗಿರುವ ಹಲವಾರು ಅಚ್ಚರಿಯ ಮಾಹಿತಿಗಳ ಕಾರಣದಿಂದಾಗಿ,  ಸುಧಾರ್ಥಿಯನ್ನೂ, ಆತ ರೂಪಿಸಿರುವ ಸರಳಪರಿಚಯಕೃತಿಗಳನ್ನು ಬಹಳ ಜಾಣ್ಮೆಯಿಂದ ಉಪೇಕ್ಷಿಸುತ್ತ, ಪ್ರಬಲವಾಗಿ ವಿರೋಧಿಸುವವರೂ ಸಾಕಷ್ಟುಜನಗಳಿರುವುದುಂಟು.
ಇದಾವುದನ್ನೂ ಲೆಕ್ಕಿಸದೇ  ಈ ವ್ಯಕ್ತಿಯು ತನ್ನ ಹಾದಿಯಲ್ಲಿ ತಾನು,  ಶ್ರಮಿಸುವುದಾಗಿದೆ.   ಸಾಮಾಜಿಕವಾಗಿ ಯಾವುದೇ ಉನ್ನತಶಿಕ್ಷಣ ಹಾಗೂ ಸ್ಥಾನಮಾನಗಳನ್ನೂ ಹೊಂದಂದೇ  ಎಲೆಮರೆಯ ಕಾಯಿಯಂತೆ ಈ ಕ್ಷೇತ್ರದಲ್ಲಿ  ಇನ್ನೂ ಉಸಿರಾಡುತ್ತಿರುವ ಈ ಸಾಹಿತ್ಯ ಕೃಷಿಕನು ಪ್ರಕೃತ ತನ್ನ ಅಧ್ಯಯನದ ಫಲದ ಸಾರಾಂಶವನ್ನು    ಇಲ್ಲಿನ ಓದುಗರಿಗೆ ಈ ಲೇಖನಮಾಲೆಯ ಮೂಲಕ ಪರಿಚಯಿಸುವುದು ನನ್ನ ಉದ್ದೇಶವಾಗಿದೆ. ಇಲ್ಲಿನ ಓದುಗರ ಪೈಕಿ ಕೆಲವರಿಗಾದರೂ  ಇದರಲ್ಲಿ ಆಸಕ್ತಿ ಇರಬಹುದೆಂದು ಭಾವಿಸಿದ್ದೇನೆ. (ಇನ್ನೂಇದೆ)
                                               -ಜಮದಗ್ನಿಸುತ.