ಕುಣಿದುಕುಪ್ಪಳಿಸುತಿವೆ ಕೂಪಮಂಡೂಕಗಳು
ಪಂಪನೆಂಬುವನವನೆ ಹಳಗನ್ನಡದ ಮೊದಲ ಕವಿಯೆಂದು!
ತನ್ನೊಡೆಯನ ಬೆಡಗಂ ಪಿಡಿದು ’ಪಂಪಭಾರತ’ಮೆಂಬ ’ವಿಕ್ರಮಾರ್ಜುನವಿಜಯ’
ವನು ರಚಿಸಿದೊಡೆ ಪಂಪನೆಂದು ನೆಗಳ್ತೆವೆತ್ತವನ ಪೊಗಳ್ವುದು ಆಪದಮಲ್ತೆ!?
ಪಂಪನುಸುರಿದವಾಣಿಯ ಕಂಪಿನೊಡಗೂಡಿ ’ಅರ್ಥ’ಪಡೆದವರೆಷ್ಟು ಪೊಡವಿಯೊಳಗೆ!? ಪಂಪನಾಡಿದನುಡಿಯ ಬಿಡಿಸಿಪೇಳ್ದವನೆಂದು ಖ್ಯಾತಿವೆತ್ತವನೋರ್ವನೇ ಧಾರಿಣಿಯೊಳುತಾ ಮುಳಿಯತಿಮ್ಮನಲಾ! ತಿಮ್ಮಪಯ್ಯನು ಬಿಡಿಸಿದ ನುಡಿಯಬಲದಲಿ ಮುಂದೆ ಮೆರೆದರು ಅತುಲ ಭುಜಬಲ ಪರಾಕ್ರಮಿಗಳುತಾವ್ ಪೊಡವಿಯೊಳ್ ಪಂಪನ ಪೆಸರ ಮುಗಿಲಿಗೇರಿಸಿದೆವೆಂದು!!
ಈ ಮುದಲ್ ’ಅಭಿನವಪಂಪ’ನೆಂಬಗ್ಗಳಿಕೆ ಪೊಂದಿರ್ದ ಹದಿನಾಲ್ಕುಶತಕಗಳ ಹಿದಿನವ ನಾಗಚಂದ್ರನೂ ತಾನ್ ’ಪಸರಿಪ ಕನ್ನಡಕ್ಕೊಡೆಯನೋರ್ವನೇ ಸತ್ಕವಿ ಪಂಪನಾವಗಂ’ ಎಂದು ಪರಾಕುಹೇಳಿದವ! ಮುಂದಡಿಯಿಡಲ್ ’ಕುವೆಂಪು’ ಪೂರ್ವದ ಬಿ.ಎಂ.ಶ್ರೀ. ಟಿ.ಎಸ್. ವೆಂಕಣಾರ್ಯರೂಂ ಅನಂತರದ, ತ.ಸು.ಶಾಮರಾಯ, ತುಸು ಮುಂದಿನ ಹಂಪನಾ ಇತ್ಯಾದಿಗಳ್ ’ಪಂಪ ನಭೂತೋ ನಭವಿಷ್ಯತಿ’ ಎಂದಂದು ಪಂಪನಹೊಗಳುಭಟರೇ ಆಗಿರ್ಪರ್.
ತನಗೆ ಅಶ್ರಯವಿತ್ತ ಅರಿಕೇಸರಿಯಂ ಪೊಗಳಿ, ಭಾರತದ ಕಥೆಯ ಹಸಗೆಡಿಸಿದ ಪಂಪನ ಗುರಿಯದುತಾನ್ ತನ್ನಯ ಧಣಿಯಕೀರ್ತಿಯು ಶಾಶ್ವತಮಾಗಿರಲೆಂಬುದೊಂದೆವಲಾ.
ಆದೊಡಮಿದು ಅಲ್ಪಾಕಾಂಕ್ಷೆ ನಿಚ್ಚಂಮಿದು.
ಪಂಪಪೂರ್ವದ ಶತಕದಿ ಅವತರಿಸಿರ್ದ, ಕುಮುದೇಂದುಮುನಿತಾಂ ಆವ ಅರಸನ ಊಳಿಗದ ಕೂಳಿಗೂ ಕೈಯೊಡ್ಡದವ ತಾನ್. ಸರ್ವಜ್ಞತಾನ್ ದಿಟದಿ. ಜಗದೆಲ್ಲ ಜ್ಞಾನವಂ ವೇದಮಾರ್ಗದಲರಿದವಂ, ಜಗದೊಳಿರುವೆಲ್ಲ ಭಾಷೆಗಳ ಕೃತಿಗಳಂ ಪಿಡಿದೌಂಕಿಸಿತನ್ನ ಕಾವ್ಯದಲಿ ಗಿಡಿದುತುಂಬಿದ ಜಗದೇಕೈಕ ಕವಿ ಪುಂಗವನೀತಂ ಕುಮುದೇಂದು. ಜಗದ ಜ್ಞಾನ, ಸುಜ್ಞಾನ, ವಿಜ್ಞಾನವಾವುದೇ ಇರಲಿ, ಅವುಗಳಂ ತನ್ನ ಅಂಗುಲಿಯಮೂಲದಲಿ ಕುಣಿಸಿಬಿಸುಟವನೀತಂ ತಾನಂದು ಹಿಂದಿಂದು, ಮುಂದಿನರೆಲ್ಲರ ಭಾಷಾಶೈಲಿಯಂ ತಂದು ತುಂಬಿದನು ತನ್ನ ಕಾವ್ಯದುದರದಲಿ.
ತನ್ನಕಾವ್ಯದ ಹಿರಿಮೆ ಗರಿಮೆಯಕುರಿತು ಬಾರಿಬಾರಿಗೂ ಒರೆದಿರುವನೀತಂ. ತನ್ನನುಂ ಕುರುತಿಲ್ಲಿ ಬರೆದಿರುವುದತಿಅಲ್ಪಂ!
ಕನ್ನಡದ ಜನುಮವದು ಜಗದಾದಿಯಿಂದೆಂದು ಉಸುರಿ, ತ್ರಿಕಾಲಂಗಳಲಿ ನವರೂಪ ಧರಿಸಿರ್ಪ ಕನ್ನಡದ ಸೊಗಡು ಸುಭಗತೆ ಸರಳತೆಯ ಶಿಖರಗಳ ನೌಕಿಸಿತನ್ನ ಕಾವ್ಯದಲಿ ಚಿರಸ್ಥಾಯಿಗೊಳಿಸಿದವಂ ಕುಮುದೇಂದು ಮುನಿತಾನ್!! ಪಂಪರನ್ನರೇ ಇರಲಿ, ಜನ್ನಪೊನ್ನರೆ ಇರಲಿ, ಕುಮರವ್ಯಾಸನ ಕಾವ್ಯಮೆಚ್ಚಿದ ಕುವೆಂಪು ಪೂರ್ವೋತ್ತರದ ಕನ್ನಡದ ದಿಗ್ಗಜಗಳೇ ಇರಲಿ; ಇಂತಿವರಾರ ಕಣ್ಗಳೂ ಒಮ್ಮೆಯಾದರೂ ಕಾಣದಾಗಿಹ ಕನ್ನಡದ ಆದಿಕಾವ್ಯವಿದು ಸಿರಿಭೂವಲಯ ತಾನ್ ! ಜಗದಕಾವ್ಯವಿದರ ಸನಿಹವೂಂ ಸುಳಿಯದವರೆಂತು ಇದರ ಸೊಬಗನರಿಯಲಕ್ಕುಂ. ಇಂತಿರ್ಪಕಾವ್ಯವಿದು ಕನ್ನಡದ ಹಾದಿ ಬೀದಿಗಳ ಜನಮೆಚ್ಚುವ ಜನಪದಕಾವ್ಯಮಾಗಲೆಂಬುದೆ ಎನ್ನ ಮನದಿಂಗಿತಮಾಗಿರ್ಪುದಲಾ.
ದಶಕಗಳ ಹಿಂದಿನಿಂ ಹೃದಯದಲಿ ಹುಗಿದಿದ್ದ ಭಾವಗಳನಿಂದು ಪರಿಯಬಿಟ್ಟಿಹೆನಿಲ್ಲಿ ಕನ್ನಡದ ಕುವರರಿಗೆ ಅರಿವಾಗುವ ಪರಿಯಲಿ ಒರೆದೊರೆ ಸಿರಿಭೂವಲಯದ ಸುಧೆಯನರ್ಥಿಸುವನಲಾ.
_()_
No comments:
Post a Comment