ಜಗತ್ತಿನ ಸಾಹಿತ್ಯೇತಿಹಾಸದಲ್ಲಿ ಕುಮುದೇಂದುಮುನಿಯ ಸ್ಥಾನವು ಅನನ್ಯವಾದುದೆಂಬುದರಲ್ಲಿ ಎರಡುಮಾತಿಲ್ಲ. ವೇದಗಳು ಜಗತ್ತಿನಲ್ಲಿ ಅಪೌರುಷೇಯವಾದುವು ಅದರಮುಂದೆ ಇದಾವುದು ಹಿರಿಮೆಯ ಕಾವ್ಯ!? ಎಂದು ಪ್ರಶ್ನಿಸುವವರಿಸುವುದು ಸಹಜ. ಆದರೆ, ಇಲ್ಲಿ ಚರ್ಚಿಸುತ್ತಿರುವ ಅಚ್ಚರಿಯ ಕನ್ನಡಕಾವ್ಯವು ’ಕನ್ನಡದವೇದ’ವೇ ಆಗಿರುವುದರಿಂದ , ಅದನ್ನು ಅಲ್ಲಗಳೆಯಲು ಯಾರಿಗೂ ಸಾಧ್ಯವಿಲ್ಲ!!
ಆಧುನಿಕ ವಿಜ್ಞಾನದ ಪಾದಸೇವಕರಾಗಿರುವ ಇಂದಿನ ಜನತೆಗೆ ಪ್ರಾಚೀನಭಾರತದ ಜೀವನಮೌಲ್ಯಗಳೆಂದರೆ, ಇನ್ನಿಲ್ಲದ ಅಸಡ್ಡೆ. ಇಂಥ ಅನುಚಿತ ಭಾವನೆಗೆ ಸವಾಲಾಗಿರುವ ೧೨೦೦ ವರ್ಷಗಳ ಹಿಂದಿನವನಾದ ಸಾರ್ವಕಾಲಿಕ ಕನ್ನಡದ ಆದಿ ಕವಿ ದಿಗಂಬರ ಜೈನ ಸಂಪ್ರದಾಯದ ಯತಿ ಕುಮುದೇಂದುಮುನಿಯು ತನ್ನ ಕಾವ್ಯದಲ್ಲಿ ’ಅಡಗಿಸಿಟ್ಟಿರುವ’ ಅನರ್ಘ್ಯ ಜ್ಞಾನ ಭಂಡಾರದಿಂದಾಗಿ, ಲೋಕವಿಖ್ಯಾತನಾಗಿದ್ದಾನೆ.
ಈ ಕವಿಯ ’ಸಿರಿಭೂವಲಯ’ ಕಾವ್ಯದ ಮೂಲವು ಎಂಟರ ಆದಿ. ಎಂಟರ ವರ್ಗವಾದ ೬೪ ಅಂಕಿಗಳು. ಈ ೬೪ ಅಂಕಿಗಳಿಗೆ ಅನ್ವಯವಾಗುವ ಸರ್ವಭಾಷಾಮಯಿಭಾಷೆಯಾದ ಕನ್ನಡದ ೬೪ ಅಕ್ಷರಗಳಲ್ಲಿ ಜಗತ್ತಿನ ಎಲ್ಲಭಾಷೆಗಗಳ ಎಲ್ಲ ಜ್ಞಾನದ ಬರಹವನ್ನೂ ಒಂದೆಡೆ. ಕನ್ನಡ ಲಿಪಿರೂಪದಲ್ಲಿ ಕಟ್ಟಿರಿಸಿರುವ ಜಗತ್ತಿನ ಏಕೈಕ ಕವಿ ಕುಮುದೇಂದುಮುನಿ. ಈತನ ಜ್ಞಾನದ ಪರಿಧಿ ’ಸರ್ವಜ್ಞತ್ವ’ ಇದನ್ನು ಕುರಿತಾದರೂ ಇಂದಿನ ಕನ್ನಡಿಗರು; ವಿಶೇಷವಾಗಿ ಜೈನಸಮುದಾಯದವರು ಈ ಕವಿಯನ್ನು ನಮ್ಮವನೆಂದು ಹೆಮ್ಮೆ ಪಡಬೇಕಾದುದು ಅನಿವಾರ್ಯ.
ಸಿರಿಭೂವಲಯಕಾವ್ಯವು ’ಸರ್ವಭಾಷಾಮಯಿ’ ’ಸರ್ವಶಾಸ್ತ್ರಮಯಿ’ ’ಸರ್ವಜ್ಞಾನಮಯಿ’ ಎಂದು ಸೂಚಿತವಾಗಿದೆ. ವ್ಯಕ್ತಿಜೀವನಕ್ಕೆ ಸಂಬಂಧಿಸಿದಂತೆ ಲೌಕಿಕ ಹಾಗೂ ಪಾರಮಾರ್ಥಿಕವಿಚಾರಗಳೂ ಈ ಕಾವ್ಯದಲ್ಲಿ ತುಂಬಿವೆ! ಇದರಲ್ಲಿ ಅಡಕವಾಗದಿರುವ ಯಾವ ವಿಚಾರವೂ ಉಳಿದಿಲ್ಲ! ಅಂಕಕಾವ್ಯವಾಗಿ ಪರಿವರ್ತಿತವಾಗಿರುವ ಈ ಕಾವ್ಯದಲ್ಲಿ ಅಂಕಿಗಳು, ಅಣುವಿಜ್ಞಾನ, ಆಕಾಶಗಮನ, ಗಣಕಯಂತ್ರಕ್ರಮ, ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಮಾಹಿತಿಗಳನ್ನು ವಿವರಿಸಿದ್ದಾಗಿದೆ.
ಜೀವನದಲ್ಲಿ ಕೆಲವು ನಂಬಿಕೆಗಳಿಗೆ ಸಂಬಂಧಿಸಿದಂತೆ, ’ಮೂಢನಂಬಿಕೆಗಳು’ ಎಂದು ಅಪಪ್ರಚಾರ ಹೊಂದಿರುವ ಕೆಲವೊಂದು ವಿಚಾರಗಳಿಗೆ ಸಂಬಂಧಿಸಿದಂತೆ ಈಗ ವಾಸ್ತವವಾದ ಕೆಲವೊಂದು ಮಾಹಿತಿಯನ್ನು ಗಮನಿಸೋಣ.
ಇಂದಿನ ದಿನಗಳಲ್ಲಿ ಜೋತಿಷಿಗಳುಹಾಗೂ ಜೋತಿಶ್ಶಾಸ್ತ್ರದ ವಿಚಾರವಾಗಿ ಹೆಚ್ಚಿನ ಅವಹೇಳನೆ ಇರುವುದು ಸರ್ವವೇದ್ಯ. ಇದೊಂದು ಅವೈಜ್ಞಾನಿಕಶಾಸ್ತ್ರವೆಂದು ಬಹಳಷ್ಟುಜನ ನಿರ್ಧರಿಸಿದ್ದಾಗಿದೆ. ಫಲಜೋತಿಷ್ಯಕ್ಕೆ ಸಂಬಂಧಿಸಿದಂತೆ ಕುಮುದೇಂದು ಮುನಿಯು ರೂಪಿಸಿರುವ ಒಂದು ಚಕ್ರವನ್ನು ಕುರಿತು ಈಗಾಗಲೇ ವಿವರಿಸಿದ್ದಾಗಿದೆ. ಉದ್ದಗಲಗಳಲ್ಲಿ ೨೭x೨೭ ರಂತೆ ವಿಸ್ತಾರವಾದ ಚೌಕಾಕೃತಿಯನ್ನು ೭೨೯ ಚೌಕಗಳಾಗಿ ವಿಂಗಡಿಸಿ, ಅವನ್ನು ನವಮಾಂಕ ಕ್ರಮದಲ್ಲಿ ೯ ಭಾಗಗಳಾಗಿ ವಿಂಗಡಿಸಿ, ಅದರಲ್ಲಿ ಎಡಬದಿ ಹಾಗೂ ಮೇಲಿನ ಬದಿಯಲ್ಲಿ ದಿನದ ನಕ್ಷತ್ರಗಳು ಮತ್ತು ವ್ಯಕ್ತಿಯ ಜನ್ಮನಕ್ಷತ್ರಗಳನ್ನು ಕ್ರಮವಾಗಿ ನಮೂದಿಸಿ, ೭೨೯ ಚೌಕಗಳಲ್ಲೂ ೧ ರಿಂದ ೯ ರವರೆಗಿನ ಅಂಕಿಗಳನ್ನು ’ಸೂತ್ರಾಂಕ’ ಗಳಾಗಿ ಸರ್ವ ಸಮಾನವಾಗಿರುವಂತೆ ಸೂತ್ರಬದ್ಧವಾಗಿ ತುಂಬಿರುವಂತೆ ಚಕ್ರವನ್ನು ರೂಪಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಸಿರಿಭೂವಲಯದ ಸರಳ ಪರಿಚಯಕೃತಿಯಲ್ಲಿ ವಿವರಿಸಲಾಗಿದೆ. ಈಗ ಇಲ್ಲಿ ಈ ಫಲಜೋತಿಷ್ಯದ ವಿಚಾರವಾಗಿ ಕವಿಯು ಸೂಚಿಸಿರುವ ಖಚಿತವಾದ ವಿವರಕುರಿತು ತಿಳಿದುಕೊಳ್ಳೋಣ.
ಸೂರ್ಯ, ಚಂದ್ರ, ತಾರೆಗಳ ಉದಯಾಸ್ತವನ್ನು ತಿಳಿದುಕೊಂಡು, ವ್ಯಕ್ತಿಜೀವನದಲ್ಲಿ ತ್ರಿಕಾಲಗಳಿಗೆ ಸಂಬಂಧಿದ ( ಭೂತ, ವರ್ತಮಾನ. ಭವಿಷ್ಯತ್ ಕಾಲ) ಸುಖ ದುಃಖದ ವಿವರಗಳನ್ನು ಖಚಿತವಾಗಿ ಅರಿಯಬಹುದೆಂದು ಕಾವ್ಯದಲ್ಲಿ ಸೂಚಿಸಲಾಗಿದೆ. ಇದನ್ನೂ ಮೀರಿ, ವ್ಯಕ್ತಿಯ ಮರಣಕಾಲವನ್ನೂ ಸದರವಾಗಿ ಅರಿಯಬಹುದೆಂದು ಕವಿಯು ಸೂಚಿಸಿರುವುದಿದೆ.! ಇದಕ್ಕೆ ಸಂಬಂಧಿಸಿದಂತೆ ಇಲ್ಲಿ ಒಂದು ಸ್ಪಷ್ಟನೆ ಅತ್ಯಗತ್ಯ. ಈ ಕಾವ್ಯದ ವ್ಯಾಪ್ತಿ ೯ ಖಂಡಗಳು. ಅದರಲ್ಲಿ ಮಂಗಳಪ್ರಾಭೃತವೆಂಬ ಮೊದಲನೇ ಖಂಡವು ಪೀಠಿಕಾರೂಪದ್ದಾಗಿದ್ದು, ಇದರಲ್ಲಿ ಸಮಗ್ರಕಾವ್ಯದ ವಿಷಯವ್ಯಾಪ್ತಿಯನ್ನು ಪರಿವಿಡಿಯರೂಪದಲ್ಲಿ ನೀಡಲಾಗಿದೆ. ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿಗಳ ವಿವರವನ್ನು ಮುಂದಿನ ಖಂಡದಲ್ಲಿ ಸೂಚಿಸಲಾಗಿರುತ್ತದೆ. ಈ ಅಂಶವನ್ನು ಗಮದಲ್ಲಿರಿಸಿಕೊಳ್ಳಬೇಕಾದುದು ಓದುಗರ ಕರ್ತವ್ಯ.
ಈ ರೀತಿಯ ’ಭವಿಷ್ಯ’ ಹೇಳುವುದು ಕೆಲವರ ಹೊಟ್ಟೆಪಾಡಿನ ಉದ್ಯೋಗವಾಗಿದೆ. ಅಮಾಯಕಜನರನ್ನು ವಂಚಿಸಿ, ಶೋಷಿಸುವುದಕ್ಕೆ ಇದೊಂದು ತಂತ್ರ ಎಂದು ಕೆಲವರು ವಾದಿಸುವುದಿದೆ. ಆದರೆ,, ಸರ್ವಸಂಗಪರಿತ್ಯಾಗಿಯಾಗಿದ್ದ ಈ ದಿಗಂಬರ ಮುನಿಯು ಇಂದಿನವರು ಭಾವಿಸುವಂತೆ ಹೊಟ್ಟೆಯಪಾಡಿಗಾಗಿ ಈ ಅಮೂಲ್ಯಮಾಹಿತಿಯನ್ನು ತನ್ನ ಶಾಶ್ವತಕಾವ್ಯದಲ್ಲಿ ಅಡಗಿಸುವ ಅಗತ್ಯವಿರಲಿಲ್ಲವೆಂಬುದು ಗಮನಾರ್ಹವಾದುದು.
ಸ್ತ್ರೀಪುರುಷರ ಸಮಾಗಮದಿಂದ ನೂತನ ಶಿಶುವು ಉಗಮವಾಗುವುದಕ್ಕೆ ಸಂಬಂಧಿಸಿದ ವೈಜ್ಞಾನಿಕ ಮಾಹಿತಿಯ ವಿವರಗಳನ್ನು ಕುರಿತು ಈಗಾಗಲೇ ವಿವರಿಸಿದ್ದಾಗಿದೆ. ಈಗ ವ್ಯಕ್ತಿಯ ಶರೀರದಲ್ಲಿ ಭೌತಿಕದೇಹದ ಇರುವಿಕೆಗೆ ಅಗತ್ಯವಾದ ’ಸಪ್ತಧಾತು’ ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸ್ವಲ್ಪ ಗಮನಿಸೋಣ. ವ್ಯಕ್ತಿಯ ತಲೆಯೊಳಗಿರುವ ’ಮಿದುಳು’ ; ಶರೀರಾದ್ಯಂತವಿರುವ ರಸ, ದೇಹದೆಲ್ಲೆಡೆಯೂ ಇರುವ ಯುಕ್ತಪ್ರಮಾಣದ ಮಾಂಸ, ಅತಿಸೂಕ್ಷ್ಮವಾದ ನಳಿಕೆಯಾಗಿರುವ ನರಮಂಡಲ, ಅವುಗಳಲ್ಲಿ ಪ್ರವಹಿಸುವ ರಕ್ತ, ಶರೀರಕ್ಕೆ ಆಸರೆಯಾಗಿರುವ ಮೂಳೆಗಳು (ಅಸ್ತಿ) ಮುಂದಿನಸಂತತಿಯ ನಿರ್ಮಾಣಕ್ಕೆ ಅತ್ಯಗತ್ಯವಾದ ಶುಕ್ಲ (ವೀರ್ಯ); ಇತ್ಯಾದಿಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ನಾವು ಸಿರಿಭೂವಲಯಕಾವ್ಯದಲ್ಲಿ ಕಾಣಬಹುದು!
ಭೌಮವೆಂದರೆ, ಭೂಮಿಗೆ ಸಂಬಂಧಿಸಿದ್ದೆಂದು ಅರ್ಥ. ಆಕಾಶ, ಮಂಗಳ, ನೀರು ಎಂಬ ಅರ್ಥವ್ಯಾಪ್ತಿಯೂ ಈ ಪದಕ್ಕಿದೆ. ಈ ಭೌಮದ ಸಾಂದ್ರತೆಯನ್ನವಲಂಬಿಸಿ ಭೂಮಿಯಲ್ಲಿ ಚಿನ್ನ, ತಾಮ್ರ, ಕಬ್ಬಿಣ ಮುಂತಾದ ಲೋಹಗಳ ನಿಕ್ಷೇಪವಿರುವುದರ ವಿವರವು ಸಿರಿಭೂವಲಯದಲ್ಲಿ ಅಡಕವಾಗಿದೆ! ಮಣ್ಣಿನ ಗಡಸುತನ ಹಾಗೂ ಮೃದುತ್ವ ವನ್ನವಲಂಬಿಸಿ ಈ ನಿಕ್ಷೇಪವಿರುವುದರ ಮಾಹಿತಿ ಇದೆ. ಪ್ರಾಚೀನ ಭಾರತೀಯರು ಮಂಕುದಿಣ್ಣೆಗಳು. ಬ್ರಿಟಿಷರು ಮಹಾನ್ ಮೇಧಾವಿಗಳು. ಅವರು ತಮ್ಮ ಪ್ರತಿಭೆಯಿಂದ ಕೋಲಾರದ ಚಿನ್ನದಗಣಿಯನ್ನೆ ಪತ್ತೆಮಾಡಿ, ಭಾರತದ ಸಂಪತ್ತನ್ನು ಹೆಚ್ಚಿಸಿದರು ಎಂಬ ಭ್ರಮೆ ಕೆಲವರಲ್ಲಿದೆ! ಪ್ರಾಚೀನಭಾರತೀಯರಲ್ಲಿ ಪ್ರಾಕೃತಿಕವಾದ ನಿಧಿ ನಿಕ್ಷೇಪಗಳನ್ನು ಸಂರಕ್ಷಿಸುವ ಸಂಪ್ರದಾಯವಿತ್ತೇ ವಿನಃ, ಅದನ್ನು ಬಗೆದು ಬಳಸಿಕೊಳ್ಳುವ ಮೂರ್ಖತನವಿರಲಿಲ್ಲ!! ಶ್ರಮವಹಿಸಿ, ದುಡಿದು ತಿನ್ನುವ ಕ್ರಮವಿತ್ತೇ ವಿನಃ, ಯಾವುದೇ ’ಪುಕ್ಕಟೆ’ ಭಾಗ್ಯಗಳ ಕೊಡುಗೆ ಇರಲಿಲ್ಲ!! ಬೆಟ್ಟಗಳನ್ನೇ ಪುಡಿಮಾಡಿ, ಮಾರಾಟಕ್ಕಿಟ್ಟು, ನುಂಗಿನೀರುಕುಡಿಯುವವರು ನಿಧಿ ನಿಕ್ಷೇಪ್ಪಗಳನ್ನು ರಕ್ಷಿಸುವುದುಂಟೇ!!??
ವ್ಯಕ್ತಿಯು ನಿದ್ರೆಯಲ್ಲಿದ್ದಾಗ ಕಾಣುವ ಕನಸು, ಈ ಕನಸುಗಳು ವ್ಯಕ್ತಿಯ ಭವಿಷ್ಯಜೀವನದ ಸೂಕ್ಷ್ಮಮುನ್ಸೂಚನೆಯಾಗಿರುವುದೆಂಬ ಹೇಳಿಕೆಯು ಕೆಲವರಿಗೆ ಅಪಹಾಸ್ಯದ ಸಂಗತಿಯಾಗಿರುತ್ತದೆ! ಪ್ರಾಚೀನ ಭಾರತೀಯರು ಪ್ರತಿಪಾದಿಸಿರುವ ಜಾಗ್ರತ್, ಸ್ವಪ್ನ, ಸುಷುಪ್ತಿ ಎಂಬ ಅವಸ್ಥಾತ್ರಯಗಳನ್ನು ಕುರಿತು ಆಧುನಿಕ ವಿಜ್ಞಾನಿಗಳಲ್ಲಿ ಒಮ್ಮತವಿಲ್ಲ. ಕೆಲವರು ನಂಬುತ್ತಾರೆ, ಕೆಲವರು ತಟಸ್ಥರಾಗುತ್ತಾರೆ. ಈ ಅವಸ್ಥಾತ್ರಯಗಳು ಅರ್ಥಹೀನವಾದ ಹೇಳಿಕೆಗಳಲ್ಲ ಎಂಬುದಕ್ಕೆ ಸಿರಿಭೂವಲಯದಲ್ಲಿ ವಿವರವಿದೆ!
ಸ್ವಪ್ನವನ್ನು ಕುರಿತ ಹೇಳಿಕೆಗಳಿಗೆ ಕಾವ್ಯದಲ್ಲಿ ಯಾವುದೇ ರೀತಿಯ ವಂಚನೆಯ ಲೇಪವೂ ಇಲ್ಲ!! ವ್ಯಕ್ತಿಯು ಕನಸಿನಲ್ಲಿ ಕಾಣುವ ಫಲಗಳು (ಹಣ್ಣುಗಳು) ಪುಷ್ಪಗಳು, ಪ್ರಾಣಿಗಳು, ಸನ್ನಿವೇಶಗಳು ಇತ್ಯಾದಿಗಳಿಗೆ ಬೇರೆ ಬೇರೆಯ ಸೂಕ್ಷ್ಮತೆಗಳಿರುತ್ತವೆ. ಇವುಗಳನ್ನಾಧರಿಸಿ, ಮುಂದೆ ಎದುರಾಗುವ ಸುಖ ದುಃಖಗಳನ್ನು ತಿಳಿಯಬಹುದೆಂಬ ಸೂಚನೆಯಿದೆ. ಕತ್ತೆ, ಒಂಟೆ ಇತ್ಯಾದಿ ಪ್ರಾಣಿಗಳು ಕನಸಿನಲ್ಲಿ ಬಂದಾಗ; ಪರದೇಶಕ್ಕೆ ಪ್ರಯಾಣವೆಂಬ ಸೂಕ್ಷ್ಮವನ್ನು ತಿಳಿಸಲಾಗಿದೆ. ಇಲ್ಲಿ ಓದುಗರು ಗಮನಿಸಬೇಕಾದ ಒಂದು ಮಹತ್ವವಿದೆ. ಈ ರೀತಿಯ ಕನಿಸಿನ ಫಲವನ್ನು ತಿಳಿಯುವಲ್ಲಿ, ಕನಸುಕಂಡ ವ್ಯಕ್ತಿಯ ಆರೋಗ್ಯವು ವಾತ, ಪಿತ್ಥಾದಿಗಳ ಆಧಿಕ್ಯದಿಂದ ಕೂಡಿರಬಾರದು!
ಪ್ರಾಣಿಗಳು ಹಾಗೂ ಮಾನವರು ಚಿತ್ರ ವಿಚಿತ್ರವಾಗಿ ಅರಚುವುದನ್ನು (ಕಿರುಚಿಕೊಳ್ಳುವುದು) ಅದಕ್ಕೆ ಸಂಬಂಧಿಸಿದ ಸುಖ ದುಃಖವನ್ನು ಅರಿತುಕೊಳ್ಳುವ ಬಗೆಯನ್ನು ಕಾವ್ಯದಲ್ಲಿ ತಿಳಿಸಲಾಗಿದೆ.
ಈರೀತಿಯ ಮಾಹಿತಿಗಳೆಲ್ಲವೂ ಪ್ರಾಚೀನಭಾರತದ ಶಕುನಶಾಸ್ತ್ರ ಹಾಗೂ ಇನ್ನಿತರ ಶಾಸ್ತ್ರಗಳಿಗೆ ಸಂಬಂಧಿಸಿದ ಮಾಹಿತಿಗಳಾಗಿರುತ್ತವೆ. ಇವುಗಳನ್ನು ’ಮೂಢನಂಬಿಕೆಗಳು’ಎಂದು ನಿರಾಕರಿಸುವುದು ಅಥವಾ ’ಶಾಸ್ತ್ರವಚನ’ಗಳೆಂದು ಗೌರವಿಸುವುದು ವ್ಯಕ್ತಿಯ ಇಚ್ಛೆಗೆ ಸೇರಿದ್ದಾಗಿದೆ. ಯಾವುದನ್ನೇ ಆಗಲೀ, ಒತ್ತಾಯಪೂರ್ವಕವಾಗಿ ಅನುಸರಿಸಬೇಕೆಂಬ ಒತ್ತಡವನ್ನೆಲ್ಲಿಯೂ ನಮ್ಮ ಶಾಸ್ತ್ರಗ್ರಂಥಗಳು ಹೇರಿಲ್ಲವೆಂಬುದು ಗಮನಾರ್ಹ.
ಸಿರಿಭೂವಲಯದಸುಧಾರ್ಥಿ.
No comments:
Post a Comment