ನಂದಿಬೆಟ್ಟದ ಸಮೀಪದ ಇಂದಿನ ಯಲವಳ್ಳಿಗೆ ಯಲವ ಯಲವಳಾ ಎಂಬ ಹೆಸರಿದ್ದದ್ದು, ಹಾಗೂ ಅಲ್ಲಿನ ಒಂದು ವಿಸ್ತರಣಕ್ಕೆ ನಂದಗಿರಿಪುರ ಎಂಬ ಹೆಸರಿದ್ದ ವಿಚಾರವು ಸಷ್ಟವಾಗುತ್ತದೆ. ಅಂದರೆ ಕುಮುದೇಂದುವಿನ ೧೫೦೦ ಶಿಷ್ಯರ ಸಮೂಹದ ಅಂದಿನ ವಿಶ್ವವಿದ್ಯಾಲಯದ ಈ ನಗರವು ಬಹಳ ವಿಸ್ತಾರವಾಗಿದ್ದುದು ಸ್ವಾಭಾವಿಕ. ಅಲ್ಲಿನ ಮಂದರತೀರ್ಥ ಚೈತ್ಯಾಲಯದಲ್ಲಿ ಋಷಭದೇವನಾದಿಯಾಗಿ ಕೃಷ್ಣನಪರ್ಯಂತ ತೀರ್ಥಂಕರರು ಹರಿಪೀಠಸ್ಥಿತರಾಗಿದ್ದ ಸಂಗತಿಯು ಸೂಚಿತವಾಗಿದೆ. ಶಕರಾಯನೃಪಪಾಲಿತ ಪ್ರದೇಶವೆಂಬ ಮಾಹಿತಿಯೂ ಇಲ್ಲಿ ಉಕ್ತವಾಗಿದ್ದು ಇದೊಂದು ಚಾರಿತ್ರಿಕ ಮಹತ್ವದ ಮಾಹಿತಿಯಾಗಿದೆ. ಇತಿಹಾಸಕಾರರು ಈವಿಚಾರವಾಗಿ ಪರಿಶೀಲನೆ ಮಾಡಬಹುದಾದ ಅವಕಾಶವಿದೆ. ಯಲವಳ್ಳಿಯ ಸಮೀಪದಲ್ಲಿ ಹಾದುಹೋಗಿರುವ ಹೆದ್ದಾರಿಯ ಪಕ್ಕದ ಜಮೀನಿನಲ್ಲಿ ಕುಮುದೇಂದುವಿನಬಾವಿ ಎಂಬ ಪ್ರಾಚೀನವಾದ ಬಾವಿಯೊಂದು ಕೆಲದಿನಗಳ ಹಿಂದಿನ ವರೆವಿಗೂ ಅಸ್ಥಿತ್ವದಲ್ಲಿ ವಿಚಾರವನ್ನು ಅಲ್ಲಿನ ಸ್ಥಳೀಯರು ತಿಳಿಸುತ್ತಾರೆ. ಹಂಪೆಯ ಮಾದರಿಯಲ್ಲಿ ಇಲ್ಲಿಯೂ ಸಮರ್ಪಕವಾದ ಉತ್ಕನನವು ನಡೆದಲ್ಲಿ ಕುಮುದೇಂದು ಮುನಿಗೆ ಸಂಬಂಧಿಸಿದ ಚಾರಿತ್ರಿಕ ಮಹತ್ವದ ಅವಶೇಷಗಗಳು ದೊರೆಯುವುದು ಖಚಿತ. ಈವಿಚಾರದತ್ತ ಪ್ರಾಚ್ಯವಸ್ತು ಇಲಾಖೆಯವರು ಗಮನಹರಿಸಬೇಕಾದ ಅಗತ್ಯವಿದೆ. ಆದರೆ ಕುಮುದೇಂದುವೇ ಅಜ್ಞಾತ ವ್ಯಕ್ತಿಯಾಗಿರುವ ಕಾರಣ, ಈಮಾಹಿತಿಗಳಿಗೆ ನಮ್ಮ ವಿಶ್ವವಿದ್ಯಾಲಯದ ವಿದ್ವಾಂಸರಲ್ಲಿ ಮಾನ್ಯತೆ ದೊರೆಯುವುದಾರೂ ಹೇಗೆ?!
No comments:
Post a Comment