ಸಿರಿಭೂವಲಯಸಾಗರರತ್ನಮಂಜೂಷವು ಕವಿಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯವನ್ನು ಕುರಿತಂತೆ ಹಾಸನದ ಸುಧಾರ್ಥಿಯು ರಚಿಸಿರುವ ಏಳನೇ ಪರಿಚಯಕೃತಿಯಾಗಿದೆ. ಒಬ್ಬ ಪ್ರಾಚೀನ ಕನ್ನಡ ಕವಿಯನ್ನು, ಅವನ ಕಾವ್ಯವನ್ನು ಕುರಿತು ಇಷ್ಟು ದೀರ್ಘಕಾಲಾವಧಿಯನಂತರ, ಇಷ್ಟು ಅಲ್ಪಕಾಲಾವಧಿಯಲ್ಲಿ ಒಬ್ಬನೇ ಲೇಖಕನ ಪ್ರಯತ್ನದಿಂದ ಈರೀತಿಯ ಏಳು ಪರಿಚಯಕೃತಿಗಳು ಪ್ರಕಟವಾಗಿರುವುದು ಒಂದು ಸಂತೋಷದ ಸಂಗತಿ. ೨೦೧೦ರ ಅನಂತರ ಹಾಸನದ ಸುಧಾರ್ಥಿಯು ನಿರೂಪಿಸಿ ಪ್ರಕಟಿಸಿರುವ ಆರು ಪರಿಚಯಕೃತಿಗಳನ್ನೂ ನಾನು ಗಮನಿಸಿದ್ದೇನೆ. ಸಿರಿಭೂವಲಯದ ವಿಚಾರವಾಗಿ ಇದುವರೆವಿಗೂ ಅಜ್ಞಾತವಾಗಿದ್ದ ಹಲವಾರು ಅಚ್ಚರಿಯ ಮಾಹಿತಿಗಳನ್ನು ಪರಿಚಯಕಾರನು ಈ ಬೃಹತ್ ಕೃತಿಯಲ್ಲಿ ಅಳವಡಿಸಿರುವ ಅತಿಪ್ರಮುಖವಾದ ವಿಚಾರಗಳ ಸಾರಾಂಶವನ್ನು ನನ್ನ ಓದಿಗೆ ಪ್ರತ್ಯೇಕವಾಗಿ ಒದಗಿಸಿದ್ದು, ಅಲ್ಲಿ ಕಾಣಬರುವ ಹಲವಾರು ಹೊಸವಿಚಾರಗಳು ನನ್ನ ಗಮನ ಸೆಳೆದಿವೆ. ಈ ಕಾರಣದಿಂದಾಗಿ ಈ ಪರಿಚಯಕೃತಿಗೆ ಒಂದೆರಡು ಮಾತುಗಳನ್ನು ಮುನ್ನುಡಿಯಾಗಿ ಬರೆಯಲು ಸಂತೋಷವಾಗಿದೆ.
೧೯೪೫ರಲ್ಲಿ ನಾನು ಬೆಂಗಳೂರಿಗೆ ಬಂದು ಖಾಸಗೀ ಕಾಲೇಜೊಂದನ್ನು ಪ್ರಾರಂಭಿಸುವ ಕಾರ್ಯದಲ್ಲಿ ತೊಡಗಿದ್ದಾಗಲೇ ಈ ಸಿರಿಭೂವಲಯಗ್ರಂಥವು ಅಂದಿನ ಹಿರಿಯ, ಕಿರಿಯ ಸಾಹಿತಿಗಳ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದ ಸಂಗತಿ; ಸಿರಿಭೂವಲಯದ ಸಂಶೋಧನೆಯಲ್ಲಿ ಕರ್ಲಮಂಗಲಂ ಶ್ರೀಕಂಠಯ್ಯನವರೂ, ಕನ್ನಡ ಬೆರಳಚ್ಚುಯಂತ್ರಶಿಲ್ಪಿ ಕೆ. ಅನಂತಸುಬ್ಬರಾಯರೂ ತುಂಬಾ ಶ್ರಮವಹಿಸಿ ಗ್ರಂಥದ ಅಂತರಂಗ ಶೋಧನೆಯಲ್ಲಿ ತೊಡಗಿದ್ದ ವಿಚಾರ ಮುಂತಾದುವನ್ನು ಕುರಿತು ನಾನು ಈಗಾಗಲೇ ಒಮ್ಮೆ ಬರೆದದ್ದಾಗಿದೆ. ೧೯೫೩ರ ಸುಮಾರಿನಲ್ಲಿ ಅಕ್ಷರರೂಪದಲ್ಲಿ ಪ್ರಕಟವಾದ ಈ ಗ್ರಂಥದ ಸ್ವಲ್ಪಭಾಗವು ಅಂದಿನ ದಿನಗಳಲ್ಲಿ ಸಾಕಷ್ಟು ಚರ್ಚೆಯ ವಿಷಯವಾಗಿತ್ತು. ಕನ್ನಡ ಅಂಕಲಿಪಿಯಲ್ಲಿ ರಚನೆಯಾಗಿರುವುದೆಂದು ಪ್ರಚಾರವಾಗಿದ್ದ ಈ ಗ್ರಂಥದ ವಿಚಾರಗಳು ಸಾಕಷ್ಟು ನಿಗೂಢವೆನಿಸಿಕೊಂಡು ಓದಲು ಸುಲಭವಾಗಿರಲಿಲ್ಲ. ಈ ಕಾರಣದಿಂದ ಇದು ಹೆಚ್ಚು ಪ್ರಚಾರಕ್ಕೆ ಬಾರದೇ ಕತ್ತಲೆಯಕೋಣೆ ಸೇರಿತ್ತು. ೨೦೦೩ರಲ್ಲಿ ಬೆಂಗಳೂರಿನ ಪುಸ್ತಕಶಕ್ತಿ ಪ್ರಕಾಶನದ ಶ್ರೀ ವೈ.ಕೆ.ಮೋಹನ್ ಅವರು ಈ ಗ್ರಂಥವನ್ನು ಪರಿಷ್ಕರಿಸಿ ಪ್ರಕಟಿಸುವ ಆಲೋಚನೆ ಕೈಗೊಂಡಾಗ, ಗ್ರಂಥದ ಚಮತ್ಕಾರರೂಪವನ್ನು ತಿಳಿದಿದ್ದ ನಾನು ಅವರಿಗೆ ಡಾ| ಟಿ.ವಿ. ವೆಂಕಟಾಚಲಶಾಸ್ತ್ರಿಗಳ ಸಹಾಯಪಡೆಯುವಂತೆ ಸೂಚಿಸಿದ್ದೆ. ಅದರಂತೆ ಡಾ| ವೆಂಕಟಾಚಲಶಾಸ್ತ್ರಿಗಳೂ, ಡಾ| ಮರುಳಯ್ಯನವರೂ, ಡಾ|ಗಣೇಶ್ ಅವರೂ ಸೇರಿ ತಮ್ಮ ಅರಿವಿಗೆ ದೊರೆತ ಅಂಶಗಳನ್ನು ಸೇರಿಸಿ ಲೇಖನಗಳನ್ನು ಬರೆದರು. ಪುಸ್ತಕಶಕ್ತಿಪ್ರಕಾಶನದವರು ಅವುಗಳನ್ನು ಸೇರಿಸಿ ಕೆಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.
ಈಚೆಗೆ ಹಾಸನದ ಸುಧಾರ್ಥಿಯು ರೂಪಿಸಿ ಪ್ರಕಟಿಸಿರುವ ಸಿರಿಭೂವಲಯಸಾರ ಸಿರಿಭೂವಲಯದ ಸಾಂಗತ್ಯಪದ್ಯಗಳ ಸಂಗ್ರಹ ಸಿರಿಭೂವಲಯ ಒಂದು ಮಿಂಚುನೋಟ ಸಿರಿಭೂವಲಯದ ಜಯಾಖ್ಯಾನಾಂತರ್ಗತ ಭಗವದ್ಗೀತಾ ಸಿರಿಭೂವಲಯಕೀ ಏಕ್ ಝಾಂಕಿ ಸಿರಿಭೂವಲಯದ ಒಳನೋಟ ಎಂಬ ಪರಿಚಯ ಕೃತಿಗಳು ಈ ನಿಗೂಢಗ್ರಂಥದ ವಿಚಾರವಾಗಿ ಸಾಕಷ್ಟು ವಿವರವಾದ, ಸರಳವಾದ ಪರಿಚಯ ನೀಡುವ ಮೂಲಕ ಗ್ರಂಥದ ಅಂತರಂಗವನ್ನು ಸಾಮಾನ್ಯ ಓದುಗರಿಗೆ ತಿಳಿಸುವ ಕಾರ್ಯದಲ್ಲಿ ಸಾರ್ಥಕತೆ ಪಡೆದಿವೆ. ಸಾಮಾನ್ಯ ಓದುಗರಿಗೂ ಈಗ ಕುಮುದೇಂದು ಮುನಿ ಹಾಗೂ ಅವನ ಸಿರಿಭೂವಲಯವು ಸಾಕಷ್ಟು ಸಮೀಪವಾಗಿರುವುದು ಖಚಿತ. ಅಂಕ ಚಕ್ರಗಳ ಭೂವಲಯ, ಅಕ್ಷರಭೂವಲಯ, ಇವುಗಳ ಮೂಲಸಂಶೋಧನೆ, ಅವುಗಳ ಕೆಲವೊಂದು ಭಾಗವು ರಾಷ್ರೀಯ ಪ್ರಾಚ್ಯಪತ್ರಾಗಾರದಲ್ಲಿ ಸಂರಕ್ಷಿತವಾಗಿರುವ ವಿಚಾರ, ಸಂಶೋಧನೆಯ ವಿಚಾರದಲ್ಲಿ ಕಾಣಬರುವ ಗೊಂದಲಗಳು, ಇತ್ಯಾದಿ ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ಸುಧಾರ್ಥಿಯು ತರ್ಕಬದ್ಧವಾಗಿ ನಿರೂಪಿಸಿರುವ ಮಾಹಿತಿಗಳು ಆಸಕ್ತಿದಾಯಕವಾಗಿವೆ., ನಿಗೂಢವಾಗಿವೆ. ಈ ಮಾಹಿತಿಗಳಿಗೆ ಸಮ್ಮತಿಸುವುದೂ; ಸಮ್ಮತಿಸದಿರುವುದೂ ಓದುಗರ ವಿವೇಚನೆಗೆ ಬಿಟ್ಟದ್ದು.
೧೯೫೩ರಲ್ಲಿ ಪ್ರಕಟವಾದ ಸಿರಿಭೂವಲಯದ ಅಕ್ಷರಮುದ್ರಣವನ್ನು ಸರಳವಾಗಿ ಓದಿತಿಳಿಯುವುದು ಕಠಿಣವಾದ, ಹಾಗೂ ಹೆಚ್ಚಿನ ಸಮಯನಿರೀಕ್ಷಿಸುವ ಕಾರ್ಯವಾಗಿದ್ದ ಕಾರಣದಿಂದ ಅದರಲ್ಲಿನ ವಿವರಗಳು ಕತ್ತಲಕೋಣೆಸೇರುವಂತಾಗಿತ್ತು. ಈಚೆಗೆ ಪುಸ್ತಕಶಕ್ತಿಪ್ರಕಾಶನದವರು ಪರಿಷ್ಕರಿಸಿ ಮಾಡಿದ ಮರುಮುದ್ರಣದ ಪ್ರಯತ್ನದಿಂದಲೂ ಪರಿಸ್ಥಿಯು ಬದಲಾಗಲಿಲ್ಲ. ಈ ಗ್ರಂಥದಲ್ಲಿ ಅಡಕವಾಗಿರುವ ಕೆಲವೊಂದು ಪ್ರಮುಖ ವಿಚಾರಗಳನ್ನಾದರೂ ಓದಿ ತಿಳಿಯದೇ, ಕುಮುದೆಂದುವಿನ ಸಿರಿಭೂವಲಯ ಗ್ರಂಥವು ಸರ್ವಭಾಷಾಮಯಿ, ಸರ್ವಜ್ಞಾನಮಯಿ, ಸರ್ವಶಾಸ್ತ್ರಮಯಿ ಎಂಬ ಹೇಳಿಕೆಗೆ ಸಮ್ಮತಿಸುವುದು ಸಾಧ್ಯವಿರದ ಸಂಗತಿಯಾಗಿತ್ತು. ಈಗ ಸುಧಾರ್ಥಿಯು ನಿರೂಪಿಸಿರುವ ಸಿರಿಭೂವಲಯ ಸಂಬಂಧವಾದ ಪರಿಚಯ ಕೃತಿಗಳ ಅವಲೋಕನದಿಂದ ಈ ಹೇಳಿಕೆಯನ್ನು ಏಕಾಏಕಿ ನಿರಾಕರಿಸಲು ಸಾಧ್ಯವಾಗದೆಂಬ ಪರಿಸರ ನಿರ್ಮಾಣವಾಗಿರುವುದು ನಿಶ್ಚಯ. ಮೇಲಿನ ಎರಡು ಪ್ರಯತ್ನಗಳಲ್ಲಿ ಪ್ರಕಟವಾಗಿದ್ದ ಕೆಲವಾರು ಮಾಹಿತಿಗಳಗಿಂತಲೂ ಹೊಸದಾದ, ಖಚಿತವಾದ, ಹಲವಾರು ಮೌಲಿಕ ಮಾಹಿತಿಗಳನ್ನು ಸುಧಾರ್ಥಿಯ ಕೃತಿಗಳಲ್ಲಿ ಓದುಗರು ಕಾಣಬಹುದಾಗಿದೆ.
ಕಾವ್ಯದಲ್ಲಿ ಬಳಕೆಯಾಗಿರುವ ಛಂದಸ್ಸು ಹಾಗೂ ಭಾಷೆಯ ಸ್ವರೂಪದ ಆಧಾರದಲ್ಲಿ, ಕವಿ ಮತ್ತು ಕಾವ್ಯದ ಕಾಲವನ್ನು ಕುರಿತು ಇನ್ನೂ ಖಚಿತವಾದ ನಿರ್ಧಾರವಾಗಿಲ್ಲ. ಕಾವ್ಯದಲ್ಲಿ ಪದೇಪದೇ ಕಾಣಬರುವ ಗಂಗರಸ ಸೈಗೊಟ್ಟ ಸಿವಮಾರ ಹಾಗೂ ಮಾನ್ಯಖೇಟದ ಅಮೋಘವರ್ಷ, ಧವಳಗ್ರಂಥಗಳ ಕರ್ತೃ ವೀರಸೇನಾಚಾರ್ಯ, ಮಹಾಪುರಾಣದ ಕರ್ತೃ ಜಿನಸೇನಾಚಾರ್ಯ ಮುಂತಾದವರ ವಿಚಾರದಲ್ಲಿ ಚಾರಿತ್ರಿಕವಾಗಿ ನಿರ್ಧಾರವಾಗಿರುವ ಕಾಲಮಾನದ ಆಧಾರದಲ್ಲಿ ಕವಿ ಹಾಗೂ ಕಾವ್ಯವು ಒಂಬತ್ತನೇ ಶತಮಾನದಿಂದ ಈಚಿನದಲ್ಲ ಎಂಬ ಡಾ| ಎಸ್. ಶ್ರೀಕಂಠಶಾಸ್ತ್ರಿಯವರ ಖಚಿತ ಹೇಳಿಕೆಯು ಗಮನಾರ್ಹವಾದುದು. ಸ್ವತಃ ಕವಿಯೇ ತಾನು ಮಹಾವೀರನ ನಿರ್ವಾಣಾನಂತರ ಸಾವಿರದ ಒಂದೂವರೆ ವರ್ಷಕ್ಕೆ ಸರಿಯಾಗಿ ಸಿರಿಭೂವಲಯದ ರಚನೆಮಾಡಿರುವೆನೆಂದು ಸೂಚಿಸಿರುವ ಮಾಹಿತಿಯ ಆಧಾರದಲ್ಲಿ ಮಹಾವೀರನ ಕಾಲನಿರ್ಣಯದಲ್ಲಿ ಕಾಣಬರುವ ಗೊಂದಲವನ್ನು ಸೂಚಿಸಿ, ಸುಧಾರ್ಥಿಯು ವಿವರವಾಗಿ ಚರ್ಚಿಸಿ, ಕವಿ ಹಾಗೂ ಕಾವ್ಯದ ಕಾಲವು ಕ್ರಿ.ಶ. ೮೦೦ ರ ಸುಮಾರಿನದೆಂಬ ಅಂಶವನ್ನು ಬಲವಾಗಿ ಸಮರ್ಥಿಸಿರುವುದನ್ನು ಸಂಬಂಧಿಸಿದವರು ಸೂಕ್ತವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ.
ಸಿರಿಭೂವಲಯದಲ್ಲಿ ೭೧೮ ಭಾಷೆಗಳ ಸಾಹಿತ್ಯವು ಅಡಕವಾಗಿರುವುದೆಂಬ ಕಾರಣದಿಂದ ಪ್ರಚಾರಕ್ಕೆ ಬಂದಿರುವ ಸರ್ವಭಾಷಾಮಯೀ ಎಂಬುದನ್ನು ಒಪ್ಪುವುದೂಕೂಡ ಅವರವರ ನಿರ್ಧಾರಕ್ಕೆ ಬಿಟ್ಟವಿಚಾರ. ಆದರೆ, ಅಂತರ್ಸಾಹಿತ್ಯರೂಪದಲ್ಲಿ ಈಗಾಗಲೇ ಸಂಸ್ಕೃತ, ಪ್ರಾಕೃತ, ಮಾಗಧಿ, ಅರ್ಧಮಾಗಧಿ, ಶೂರಸೇನಿ, ಪಾಳಿ ಮುಂತಾದ ಹಲವಾರು ಭಾಷಾ ಸಾಹಿತ್ಯದ ತುಣುಕುಗಳನ್ನು ಉದಾಹರಣೆಗಾಗಿ ತೋರಿಸಿರುವ ಹಿನ್ನೆಲೆಯಲ್ಲಿ, ಕಾವ್ಯದಲ್ಲಿ ಬೇರೆ ಬೇರೆ ಭಾಷೆಯ ಅಂತರ್ಸಾಹಿತ್ಯವು ಉಗಮವಾಗುವ ಕ್ರಮವನ್ನು ಗಮನಿಸಿದಾಗ ಉಳಿದ ಭಾಷೆಗಳ ಸಾಹಿತ್ಯವೂ ಉಗಮವಾಗುವ ಸಂಗತಿಯನ್ನು ನಿರಾಕರಿಸಲು ಸಾಧ್ಯವೆ? ಒಟ್ಟು ಗ್ರಂಥದ ವ್ಯಾಪ್ತಿಯು ಆರುಲಕ್ಷ ಮೂಲ ಕನ್ನಡ ಶ್ಲೋಕಗಳು ಎಂಬ ಮಾಹಿತಿನ್ನು ಒಪ್ಪಿ, ಅವುಗಳ ಪೈಕಿ ಈಗ ಸುಲಭವಾಗಿ ಓದಲು ಸಾಧ್ಯವಾಗುವ ಕ್ರಮದಲ್ಲಿ ಪ್ರಕಟವಾಗಿರುವುದು ಸುಮಾರು ೨೧೦೦೦ ಪದ್ಯಗಳು ಮಾತ್ರ ಎಂಬ ಮಾಹಿತಿಯ ಆಧಾರದಲ್ಲಿ ಗಮನಿಸಿದಾಗ, ಇಲ್ಲಿ ಉಗಮವಾಗಿರುವ ಅಂತರ್ಸಾಹಿತ್ಯದ ವ್ಯಾಪ್ತಿಯನ್ನು ನೋಡಿದಾಗ, ಗ್ರಂಥವು ಸಮಗ್ರವಾಗಿ ಪ್ರಕಟವಾದಲ್ಲಿ ಕವಿಯ ಹೇಳಿಕೆಯಂತೆ ಸಾವಿರದಂಟು ಭಾಷೆಗಳಿದ್ದರೂ ಅವುಗಳ ಸಾಹಿತ್ಯವನ್ನು ಸಿರಿಭೂವಲಯವು ಕಟ್ಟರಿಸಿದೆ ಎಂಬುದನ್ನು ನಿರಾಕರಿಸುವುದು ಸುಲಭವಲ್ಲ.
ಕುಮುದೇಂದುಮುನಿಯು ತನ್ನ ಸಿರಿಭೂವಲಯದಲ್ಲಿ ಅಣುವಿಜ್ಞಾನದ ಮಾಹಿತಿಯನ್ನು ಕನ್ನಡದಲ್ಲಿ ಬಹಳ ಸರಳವಾಗಿ ವಿವರಿಸಿದ್ದಾನೆ. (ಊ೨o) ಎಂಬ ಆಧುನಿಕ ವಿಜ್ಞಾನ ಸೂತ್ರದ ಕನ್ನಡ ಅವತರಣಿಕೆಯನ್ನು ನಾವು ಸಿರಿಭೂವಲಯದಲ್ಲಿ ಸ್ಪಷ್ಟವಾಗಿ ಕಾಣಬಹುದು! ಅಣುವು ನೀರೊಳಗೆಷ್ಟು|ಅನಲವಾಯುಗಳೆಷ್ಟು| ನೆನೆದು ಸುಡದ ಅಣುವೆಷ್ಟು| ಮುಂತಾಗಿ ವಿವರಿಸಿದ್ದಾನೆ. ತನುವನು ಆಕಾಶಕೆ ಹಾರಿಸಿ ನಿಲಿಸುವ ಘನವೈಮಾನಿಕ ಕಾವ್ಯ ಎಂಬಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ವಿಚಾರವನ್ನು ಸೂಚಿಸಿದ್ದಾನೆ. ಇಂದಿನ ಜಗತ್ತಿನ ಅತ್ಯಾಧುನಿಕವಾದ ಗಣಕಯಂತ್ರ ಕ್ರಮ ಹಾಗೂ ಮೊಬೈಲ್ ತಂತ್ರಜ್ಞಾನವೂ ಕುಮುದೇಂದುವಿಗೆ ಕರತಲಾಮಲಕವಾಗಿದ್ದ ವಿಚಾರ. ಯವೆಯಕಾಳಿನ ಕ್ಷೇತ್ರದಳತೆಯೊಳಡಗಿಸಿ.. ; ಜೋಡಿಯಂಕದ ಕೂಟದಂಗ ಎಂಬಲ್ಲಿ ಈ ವಿಚಾರವು ನಿರೂಪಿತವಾಗಿದೆ. ಕಟ್ಟಡ ನಿರ್ಮಾಣ ತಂತ್ರಜ್ಞಾನ ಹಾಗೂ ಭೂಮಾಪನ ವಿಜ್ಞಾನಕ್ಕೆ (ಸರ್ವೆ) ಸಂಬಂಧಿಸಿದ ವಿವರಗಳು ಗ್ರಂಥದಲ್ಲಿ ಅಡಗಿವೆಎಂದು ಸಿರಿಭೂವಲಯಸಾರದಲ್ಲಿ ಸುಧಾರ್ಥಿ ಪರಿಚಯಿಸಿರುವುದಿದೆ.
ಪ್ರಕೃತ ಸಿರಿಭೂವಲಯ ಸಾಗರರತ್ನಮಂಜೂಷದಲ್ಲಿ ಇನ್ನೂ ಮುಂದುವರೆದು ದೂರವಾಣಿ, ಆಕಾಶವಾಣಿ, ದೂರದರ್ಶನ, ಮುಂತಾದ ಸಮೂಹಮಾಧ್ಯಮಗಳು ಆಧುನಿಕ ವಿಜ್ಞಾನದ ಸಾಧನೆಗಳು ಎಂಬ ತಪ್ಪುಗ್ರಹಿಕೆಯು ಜಗತ್ತಿನಲ್ಲಿ ತುಂಬಿದೆ! ಆದರೆ ಈ ತಂತ್ರಜ್ಞಾನದ ನೈಪುಣ್ಯವನ್ನು ಹೊಂದಿದ್ದ ಕುಮುದಚಂದ್ರನ (ಕುಮುದೆಂದುವಿನ) ಪ್ರತಿಭೆಗೆ ತಲಕಾಡಿನ ಗಂಗರಸ ಸೈಗೊಟ್ಟ ಸಿವಮಾರನೂ, ರಾಷ್ಟ್ರಕೂಟ ಅಮೋಘವರ್ಷ ನೃಪತುಂಗನೂ ಮೆಚ್ಚುಗೆ ಸೂಚಿಸಿದ್ದ ಸಂಗತಿ, ಈರೀತಿಯ ಯಶಸ್ಸು ಹಾಗೂ ಕೀರ್ತಿಯಿಂದ ಪಡೆಯಬಹುದಾದ ಅಪಾರ ಸಂಪತ್ತನ್ನು ಕಾಲಿನಿಂದ ಒದೆಯುವ ಮುನಿವಂಶದವರ ಭೂವಲಯ ಎಂಬುದಾಗಿ ಸಿರಿಭೂವಲಯವು ಸೂಚಿಸಿದೆ! ನೋಡಿ: ೩೬ನೇ ಅಧ್ಯಾಯದ ಪೂರ್ಣಪದ್ಯಗಳ ಅಶ್ವಗತಿಯ ಅಂತರ್ಸಾಹಿತ್ಯ ಪದ್ಯಸಂಖ್ಯೆ ೫೨-೫೪. ಪಾರಮಾರ್ಥಿಕವಾಗಿ ನಿರುಪಯೋಗಿಯಾದ ಇಂಥ ಲೌಕಿಕ ಸಂಪತ್ತನ್ನು ಕುಮುದೆಂದುಮುನಿಯು ಕಾಲಿನಿಂದ ಒದ್ದು, ಪರಮಾರ್ಥದೆಡೆಗೆ ಸಾಗಿದ್ದಾನೆ. ಎಂಬ ವಿಚಾರವನ್ನೂ, ಆಧುನಿಕ ವೈದ್ಯಕೀಯ ವಿಜ್ಞಾನವು ವ್ಯಾಸೆಕ್ಟಮಿ ಟ್ಯೂಬೆಕ್ಟಮಿ ಎಂಬ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ನೂತನವಾಗಿ ರೂಪಿಸಿದೆ ಎಂಬ ವಿಚಾರವು ಲೋಕಪ್ರಸಿದ್ಧಿ ಪಡೆದಿದೆ. ಆದರೆ ನಮ್ಮ ಪೂರ್ವಿಕರಿಗೆ ಪ್ರಾಚೀನಕಾಲದಲ್ಲೇ ಈ ತಂತ್ರಜ್ಞಾನವು ತಿಳಿದಿದ್ದ ಸಂಗತಿಯಾಗಿತ್ತೆಂದರೆ ಅಚ್ಚರಿಯ ವಿಚಾರವಾಗಬಹುದು. ಅದನ್ನು ಯಾರೂ ನಂಬಲಾರರು! ಆದರೆ ಕುಮುದೇಂದುಮುನಿಯು ಕಟ್ಟಿರಿಸಿರುವ ಪ್ರಾಚೀನ ಗ್ರಂಥಮಾಹಿತಿಯಂತೆ ಇದು ಸತ್ಯ ಸಂಗತಿಯಾಗಿದೆ. ಈ ತಂತ್ರಜ್ಞಾನವನ್ನು ಲಿಂಗಛೇಧನವಿಜ್ಞಾನ ಎಂದು ಸೂಚಿಸಲಾಗಿದೆ. ನೋಡಿ: ೪೫ನೇ ಅಧ್ಯಾಯದ ಅಶ್ವಗತಿಯ ಅಂತರ್ಸಾಹಿತ್ಯ ಪದ್ಯ ಸಂಖ್ಯೆ ೫೪. ಎಂಬ ಮಾಹಿತಿಯನ್ನು ಸುಧಾರ್ಥಿಯು ನೀಡಿರುವುದಿದೆ. ಇಂಥ ಹೊಸ ಹೊಸ ಮಾಹಿತಿಗಳನ್ನು ಗ್ರಂಥದಲ್ಲಿ ಪ್ರತ್ಯಕ್ಷವಾಗಿ ಗಮನಿಸಿದಾಗ, ಸರ್ವಶಾಸ್ತ್ರಮಯಿ ಎಂಬ ಹೇಳಿಕೆಯನ್ನು ಹೇಗೆ ನಿರಾಕರಿಸಲಾದೀತು?
ಸಿರಿಭೂವಲಯವು ಪ್ರಾಚೀನ ಕಾಲದಿಂದ ಮಾತ್ರವಲ್ಲ: ಇಂದಿಗೂ ಅಪರಿಚಿತವಾದ ಕೃತಿಯಾಗಿಯೇ ಉಳಿದಿರುವುದನ್ನು ಕುರಿತು ಸುಧಾರ್ಥಿಯು ಮಾಡಿರುವ ವಿಶ್ಲೇಷಣೆಯೂ ಸ್ವಾರಸ್ಯವಾಗಿದೆ! ಮಾನವಕುಲದ ಜೀವನಪ್ರವಾಹದಲ್ಲಿ ಋಗ್ವೇದವು ಅತ್ಯಂತ ಪ್ರಾಚೀನವಾದ ಜ್ಞಾನಮೂಲವೆಂಬ ಸಂಗತಿಯನ್ನು ಸಂಶಯಾತೀತವಾಗಿ ನಿರೂಪಿಸುವಲ್ಲಿ ಕುಮುದೇಂದುಮುನಿಯ ಸಿರಿಭೂವಲಯವು ಪ್ರತ್ಯಕ್ಷ ಸಾಕ್ಷಿಯಾಗಿದೆ. ಜೈನಸಂಪ್ರದಾಯವು ಎಷ್ಟೇ ಕೋಟ್ಯಾಂತರ ವರ್ಷಗಳ ಪ್ರಾಚೀನ ಪರಂಪರೆಯನ್ನು ಹೊಂದಿದ್ದರೂ ಈ ಸಂಪ್ರದಾಯದ ಮೂಲ ಬೇರಿರುವುದು ವೇದೋಪನಿಷತ್ತುಗಳಲ್ಲಿಯೇ. ಈ ವೇದೋಪನಿಷತ್ತುಗಳೆಲ್ಲವೂ ಪಾವನ ತೀರ್ಥಗಳೆಂದೇ ಕುಮುದೆಂದು ಮುನಿಯು ಖಚಿತವಾಗಿ ನಿರೂಪಿಸಿರುವುದನ್ನು ಕಾಣಬಹುದು. ಸಿರಿಭೂವಲಯದ ಪ್ರಥಮಕಾಂಡದಲ್ಲಿ ಋಗ್‌ವೇದಕ್ಕೆ ಸಂಬಂಧಿಸಿದಂತೆ ಋಗ್ವೇದ, ಋಗ್‌ಭೂವಲಯ ಋಗ್, ಮುಂತಾದ ಶಬ್ದಗಳು ಸಾವಿರಾರುಸಲ ಪ್ರಯೋಗವಾಗಿರುವುದನ್ನು ಗಮನಿಸಬೇಕು. ಕುಮುದೇಂದುಮುನಿಯು ಋಗ್ವೇದದ ಮಹತ್ವವನ್ನು ಸಮರ್ಪಕವಾಗಿ ಅರಿತವನು. ಮಹಾಬಂಧ ವು ಸಿರಿಭೂವಲಯದ ಪ್ರಾಚೀನ ಹೆಸರೆಂಬುದು ಸ್ಪಷ್ಟವಿದೆ. ಕುಮುದೇಂದುಮುನಿಯು ಈ ಮಹಾಬಂಧ ಯಾವುದೆಂಬುದನ್ನು ಖಚಿತವಾಗಿ ನಿರೂಪಿಸಿದ್ದಾನೆ. ನೋಡಿ: ೫೮ನೇ ಅಧ್ಯಾಯದ ೧೩೪ನೇ ಪದ್ಯ. ಋಗ್‌ಮಹಾಬಂಧ ಎಂಬ ಇಲ್ಲಿನ ವಿವರಣೆಯ ಮೂಲಕ ಜೈನ ಸಂಪ್ರದಾಯದ ಸಕಲ ಶಾಸ್ತ್ರ ಗ್ರಂಥಗಳಿಗೂ ಋಗ್‌ವೇದವೇ ಮೂಲ ಆಕರ ಎಂಬ ಮೂಲ ಸತ್ಯವನ್ನು ಖಚಿತ ಗೊಳಿಸಿದ್ದಾನೆ. ಇಂಥ ಮಾಹಿತಿಗಳ ಪರಿಚಯದಿಂದಾಗಿಯೇ ಡಾ| ಎಸ್. ಶ್ರೀಕಂಠಶಾಸ್ತ್ರಿಯವರು ಹಾಗೂ ಸತ್ಯ ಪತ್ರಿಕೆಯವರು ೬೦ ವರ್ಷಗಳಿಗೆ ಹಿಂದೆಯೇ ಈ ವಿಚಾರವಾಗಿ ತಮ್ಮ ಖಚಿತ ಅಭೀಪ್ರಾಯ ಸೂಚಿಸಲು ಅವಕಾಶವಾಗಿದೆ. ಆದರೆ ಕಳೆದ ೬೦ ವರ್ಷಗಳಿದಲೂ ಜೈನ ಸಂಪ್ರದಾಯದವರಾಗಲೀ; ವೈದಿಕಸಂಪ್ರದಾಯದವರಾಗಲೀ ಈವಿಚಾರವಾಗಿ ಚಕಾರವೆತ್ತಿಲ್ಲವೆಂಬುದು ಗಮನಾರ್ಹ ಸಂಗತಿಯಾಗಿದೆ! ಈ ಎರಡೂ ಸಂಪ್ರದಾಯಗಳವರೂ ತಾವು ಹಾಗೂ ತಮ್ಮ ತತ್ವಸಿಂದ್ಧಾಂತಗಳೇ ಸರ್ವಶ್ರೇಷ್ಠ ಎಂಬ ಮೇಲರಿಮೆಯ ಹುಚ್ಚು ಹೊಳೆಯ ಸೆಳತಕ್ಕೆ ಸಿಲುಕಿ, ಜಗತ್ತಿನ ಈ ಪ್ರಾಚೀನ ಅಮೂಲ್ಯ ಜ್ಞಾನರತ್ನವು ಆಸಕ್ತರ ಅವಗಾಹನೆಗೂ ಸುಲಭಾಗಿ ಸಿಗದಂತಾಗಿದ್ದಿತು. ಈಗ ಪ್ರಥಮ ಖಂಡವಾದರೂ ಪೂರ್ಣವಾಗಿ ಲಭಿಸಿರುವುದು ಸಂತಸದ ಸಂಗತಿ. ಎಂಬ ವಿಶ್ಲೇಷಣೆಯು ಕೆಲವರಿಗೆ ರುಚಿಸದಿರಬಹುದು.
ಜಾಮದಗ್ನ್ಯಾವತ್ಸಸಗೋತ್ರದ ಸುಧಾರ್ಥಿಯು ಬಹಳವಾಗಿ ಗೌರವಿಸುವ ಕೋಟ ವಾಸುದೇವ ಕಾರಂತರು, ಡಾ| ಮಳಿಯೆ ಗೋಪಾಲಕೃಷ್ಣರಾಯರು, ಕರ್ಲಮಂಗಲಂ ಶ್ರೀಕಂಠಯ್ಯನವರು, ಕೆ. ಅನಂತಸುಬ್ಬರಾಯರು ಮುಂತಾದ ಹಿಂದಿನ ತಲೆಮಾರಿನ ಹಿರಿಯರು ತಾವು ಹಿಡಿದಕಾರ್ಯವನ್ನು ಬಿಡದೇ ಪಟ್ಟುಹಿಡಿದು ಸಾಧಿಸುವ ಛಲಗಾರರು. ಇಂಥವರ ಜೀವನಾದರ್ಶವನ್ನು ಅನುಸರಿಸುವ ಸುಧಾರ್ಥಿಯಲ್ಲೂ ಈ ಹಟದಗುಣ ಮೈಗೂಡಿರುವುದು ಸಹಜ. ಕುಮುದೇಂದುವೂ ಕೂಡ ಸಿರಿಭೂವಲಯವನ್ನು ಛಲಗಾರನಿಗೆ ಒಲಿಯುವ ಕಾವ್ಯ ಎಂದು ಸೂಚಿಸಿರುವುದರಿಂದ ಈ ಪರಿಚಯ ಗ್ರಂಥಗಳ ನಿರೂಪಣೆಯಲ್ಲಿ ಈ ವ್ಯಕ್ತಿಯು ಪಡೆದಿರುವ ಸಾರ್ಥಕತೆ ಸಹಜವಾಗಿದೆ.
ನಾನು ಕೈಗೊಂಡಿರುವ ಈ ಕಾರ್ಯವು ಕೇವಲ ಸಿರಿಭೂವಲಯದ ಪರಿಚಯಮಾತ್ರ. ಇದು ಸಂಶೋಧನೆಯಲ್ಲ. ಸಮಗ್ರವಾದ, ಸಮರ್ಪಕವಾದ ಸಂಶೋಧನೆಯು ನಡೆಯಲು ಬಹುಭಾಷಾವಿಶಾರದರಾದ ಹಲವಾರು ವಿದಾಂಸರ ಸಮೂಹವೇ ಕಾರ್ಯನಿರ್ವಹಿಸಬೇಕು. ಇದು ವಿಶ್ವವಿದ್ಯಾಲಯಗಳು ಆಸಕ್ತಿವಹಿಸಿ ಮಾಡಬೇಕಾದ ಮಹತ್ಕಾರ್ಯ. ಒಬ್ಬ ವ್ಯಕ್ತಿಯು ಮಾಡಬಹುದಾದ ಪರಿಚಯದ ಕಾರ್ಯವನ್ನು ನನಗೆ ಸಾಧ್ಯವಿರುವ ಮಟ್ಟಿಗೆ ನಿರ್ವಹಿಸದ್ದೇನೆ ಎಂದು ಸೂಚಿಸುವ ಸುಧಾರ್ಥಿಗೆ ಈ ಮಹನ್ ಗ್ರಂಥದಲ್ಲಿ ಅತಂರ್ಗತವಾಗಿರುವ ಅಮೂಲ್ಯ ಮಾಹಿತಿಗಳು ಬೆಳಕುಕಾಣಬೇಕೆಂಬ ಆಕಾಂಕ್ಷೆ ತೀವ್ರವಾಗಿದೆ. ಸಮಕಾಲೀನ ಸಾಹಿತ್ಯ ಸಮೂಹವು ಈದಿಸೆಯಲ್ಲಿ ಸೂಕ್ತ ಗಮನಹರಿಸದಿರುವುದನ್ನು ಕುರಿತು ತೀವ್ರವಾಧ ಅಸಮಾಧಾನವೂ ತುಂಬಿದೆ. ಈಕಾರಣದಿಂದಾಗಿ ಇಲ್ಲಿನ ಬರಹದಲ್ಲಿ ಸಾಕಷ್ಟು ಕಾಠಿನ್ಯ ತುಂಬಿರುವುದೂ ಇದೆ. ಉದಾಹರಣೆಗೆ ಈ ವಾಕ್ಯಗಳನ್ನು ಗಮನಿಸಬಹುದು: ಈ ಮೊದಲೇ ಒಮ್ಮೆ ಸೂಚಿಸಿರುವಂತೆ ಪೂರ್ಣಪದ್ಯ ಹಾಗೂ ಪಾದ ಪದ್ಯಗಳ ಅಶ್ವಗತಿಯ ಅಂತರ್ಸಾಹಿತ್ಯವನ್ನು ಗುರುತಿಸುವಾಗ ಎರಡು ಅಥವಾ ಅದಕ್ಕೂ ಹೆಚ್ಚಿನ ಬೇರೆ ಬೇರೆ ಕಾವ್ಯಭಾಗಗಳು ಒಟ್ಟೊಟ್ಟಿಗೇ ಪ್ರವಹಿಸಿರುವಂತೆ ಕಾಣುತ್ತದೆ. ಪ್ರಾಚೀನ ಕನ್ನಡ, ಸಂಸ್ಕೃತ, ಪ್ರಾಕೃತ ಸಾಹಿತ್ಯಗಳ ಪರಿಚಯವಿರುವವರು ಮಾತ್ರ ಇಲ್ಲಿನ ಅಂತರ್ಸಾಹಿತ್ಯವನ್ನು ಕ್ರಮಬದ್ಧವಾಗಿ ಬಿಡಿಸಲು ಸಾಧ್ಯವಾಗುತ್ತದೆ. ನಮ್ಮ ಸಮಕಾಲೀನ ವಿದ್ವಾಂಸರು ಈ ವಿಚಾರವಾಗಿ ಆಸಕ್ತಿವಹಿಸಿ, ಹೊಸವಿಚಾರಗಳನ್ನು ಹೊರತೆಗೆಯುವ ಕಾರ್ಯಕ್ಕೆ ಕೈಹಾಕುವರೆಂಬ ನಂಬಿಕೆ ನನಗಿಲ್ಲ. ಕನ್ನಡದ ಹೆಮ್ಮೆಯನ್ನು ಜಗದ್ವಿಖ್ಯಾತಗೊಳಿಸುವ ಆಕಾಂಕ್ಷೆಹೊಂದಿ, ಮುಂದೆ ಹುಟ್ಟಿಬರುವ ಯಾರಾದರೂ ಪ್ರತಿಭಾಶಾಲಿಯು ಈ ಕಠಿಣವಾದ ಕಾರ್ಯಕ್ಕೆ ಪ್ರಯತ್ನಿಸಬಹುದೇನೋ ಎಂಬ ಆಶೆಯಿಂದ ನಾನು ಈ ಕಾಯಕ ನಡೆಸಿದ್ದೇನೆ. ಸರಳವಾಗಿ ಇಂದಿನ ಲಿಪಿಕ್ರಮದಲ್ಲೇ ಓದಿತಿಳಿಯಬಹುದಾದ ಆವೃತಿಯು ಸಿರಿಭೂವಲಯಸಾರ ಎಂಬುದಾಗಿ ೨೦೧೦ರಲ್ಲೇ ಪ್ರಕಟವಾಗಿದ್ದರೂ ಇದುವರೆವಿಗೆ ಯಾರೊಬ್ಬ ಸಂಸ್ಕೃತ ಅಥವಾ ಪ್ರಾಕೃತಭಾಷಾ ವಿದ್ವಾಂಸರೂ ಇಲ್ಲಿನ ಮಾಹಿತಿಯ ತಪ್ಪು ಒಪ್ಪುಗಳನ್ನು ಕುರಿತು ತಮ್ಮ ತುಟಿಬಿಚ್ಚದಿರುವುದರಿಂದ ನಾನು ಈ ಅನಿಸಿಕೆಯನ್ನು ವ್ಯಕ್ತಗೊಳಿಸುವುದು ಅನಿವಾರ್ಯವಾಗಿದೆ. ವೈದಿಕ ಸಂಪ್ರದಾಯದವರಿಗೆ ಪ್ರಾಕೃತಭಾಷೆಯ ವಿಚಾರವಾಗಿ ಹೆಚ್ಚಿನ ಒಲವಿಲ್ಲದಿರುವುದು ಸಹಜಸಂಗತಿ. ಆದರೆ, ತಮ್ಮ ಸಂಪ್ರದಾಯದ ಧಾರ್ಮಿಕ ವಿಚಾರಗಳಗಣಿ ಎಂಬ ಕಾರಣದಿಂದಾಗಿ ಜೈನಸಂಪ್ರದಾಯದವರು ಇಂದಿಗೂ ಪ್ರಾಕೃತಭಾಷೆಯ ಪೋಷಕರಾಗಿರುವುದು ಸರ್ವವೇದ್ಯ. ಆದರೆ ಸಿರಿಭೂವಲಯವು ಸರ್ವಧರ್ಮ ಸಮನ್ವಯ ಸಾರಿರುವುದರಿಂದ, ಸರ್ವ ಜ್ಞಾನದ ಮೂಲವೂ ಋಗ್ವೇದವೇಂದೇ ಘಂಟಾಘೋಷವಾಗಿ ಸಾರಿರುವುದಿದೆ.. ಇಲ್ಲಿ ವೈದಿಕ ಅಥವಾ ಜೈನ ಸಂಪ್ರದಾಯದ ನಡುವೆ ಯಾವುದು ಹೆಚ್ಚು ಶ್ರೇಷ್ಠ ಎಂಬ ಅನುಚಿತ ವಿಚಾರಕ್ಕಿಂತಲೂ ಈ ಅಚ್ಚರಿಯ ಪ್ರಾಚೀನ ಕನ್ನಡ ಅಂಕಕಾವ್ಯದಲ್ಲಿ ಅಡಗಿರುವ ಮಹತ್ತರವಾದ ಮಾಹಿತಗಳತ್ತ ವಿದಾಂಸರು ಹೆಚ್ಚಿನ ಗಮನ ಹರಿಸಬೇಕೆಂಬುದು ನನ್ನ ಕಳಕಳಿಯ ಮನವಿಯಾಗಿದೆ. ಈ ಕಾರಣದಿಂದಾದರೂ ಇಂದಿನ ವಿದ್ವಾಂಸರು ಇತ್ತ ಗಮನ ಹರಿಸಿದರೆ, ಕುಮುದೆಂದು ಮುನಿಯ ಅಭಿಮಾನಿಗಳೆಲ್ಲರೂ ಹೆಚ್ಚು ಸಂಭ್ರಮ ಪಡಬಹುದಾದ ಪ್ರಾಚೀನ ಮಹತ್ವಗಳು ಬೆಳಕು ಕಾಣಲು ಅವಕಾಶವಾದೀತೆಂದು ನಾನು ಕನಸು ಕಾಣುತ್ತಿದ್ದೇನೆ! ಕುಮುದೇಂದುಮುನಿ, ಕರ್ಲಮಂಗಲಂ ಶ್ರೀಕಂಠಯ್ಯನವರು, ಕೆ ಅಂತಸುಬ್ಬರಾಯರು ಇವರುಗಳ ಅನನ್ಯವಾದ ಕನ್ನಡಾಭಿಮಾನದಿಂದ ಪ್ರೇರಿತನಾಗಿ ನಾನು ಈ ಕಠಣವಾದ ಕಾರ್ಯಕ್ಕೆ ಕೈಹಾಕಿರುವೆನೆಂದು ಸೂಚಿಸುವ ಈ ಪರಿಚಯಕಾರನ ಸಾತ್ವಿಕ ಕೋಪಕ್ಕೆ ಯಾರೊಬ್ಬರೂ ಬೇಸರಿಸುವ ಅಗತ್ಯವಿಲ್ಲ. ಇದು ಕ್ಷಮಾರ್ಹವಾದುದು.
ಸಿರಿಭೂವಲಯದ ಅಕ್ಷರ ಅವತರಣಿಕೆಯು ಪ್ರಕಟವಾದ ಪ್ರಾರಂಭದಲ್ಲಿ ಅದರ ವಿಚಾರವಾಗಿ ಸಾಕಷ್ಟು ಆಳವಾಗಿ ಅಧ್ಯಯನ ನಡೆಸಿ, ತಮ್ಮ ಖಚಿತವಾದ ಅನಿಸಿಕೆಗಳನ್ನು ವ್ಯಕ್ತಪಡಿಸಿದವರಲ್ಲಿ ಡಾ| ಎಸ್. ಶ್ರೀಕಂಠಶಾಸ್ತ್ರಿಯವರು ಮೊದಲಿಗರು. ಇವರ ಆಲೋಚನೆಯ ಜಾಡನ್ನು ಅನುಸರಿಸಿ, ಕೆ. ಅನಂತಸುಬ್ಬರಾಯರು ನೀಡಿದ ಮಾರ್ಗದರ್ಶನದಲ್ಲಿ ಮುನ್ನಡೆದು, ಅಂತರ್ಸಾಹಿತ್ಯವನ್ನು ಹೊರತೆಗೆದು ಸಿರಿಭೂವಲಯದ ನಿಜವಾದ ಅಂತರಂಗವನ್ನು ಪರಿಚಯಿಸುವ ಕಾರ್ಯದಲ್ಲಿ ಸುಧಾರ್ಥಿಯು ಮೊದಲಿಗನೆಂಬುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಸಿರಿಭೂವಲಯದ ವಿಚಾರವಾಗಿ ಸುಧಾರ್ಥಿಯು ಹೊಂದಿರುವ ಆಸಕ್ತಿಯಫಲವಾಗಿ ಈಗ ಸಿರಿಭೂವಲಯದ ಅಭಿಮಾನಿಗಳ ಸಂಖ್ಯೆ ಸಾಕಷ್ಟು ಬೆಳೆದಿದೆ. ಬೆಳಗಾವಿಯ ಅಭಿಮಾನಿಯೊಬರು ಅಲ್ಲಿನ ಭರತೇಶ ಶಿಕ್ಷಣಸಂಸ್ಥೆಗಳ ಸಮೂಹದ ವತಿಯಿಂದ ಸಿರಿಭೂವಲಯವನ್ನು ಓದುವ ಕ್ರಮಕುರಿತು ಆರುದಿಗಳ ಅವಧಿಯ ಒಂದು ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿದ್ದು ಒಂದು ಪ್ರಮುಖ ಸಂಗತಿ.
ತಾನು ಕೈಗೊಂಡ ಈ ಪರಿಚಯಕಾರ್ಯದಲ್ಲಿ ತನ್ನಂತೆಯೇ ಆಸಕ್ತಿ ಹೊಂದಿರುವ ಮುಂದಿನ ಪೀಳಿಗೆಯ ನಿರ್ಮಾಣದಲ್ಲಿಯೂ ಸುಧಾರ್ಥಿಯು ಆಸಕ್ತಿವಹಿಸಿರುವುದು ಸಂತೋಷದ ಸಂಗತಿಯಾಗಿದೆ. ಪವರ್ ಗ್ರಿಡ್ ಕಾರ್ಪೋರೇಷನೆ ಆಫ್ ಇಂಡಿಯಾ ಸಂಸ್ಥೆಯಲ್ಲಿ ಅಧಿಕಾರಿಯಾಗಿ ದೂರದ ಮಿಜೋರಾಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಹೆಚ್. ಎಂ. ಸದಾನಂದ ಅವರು ಸಿರಿಭೂವಲಯ ಕುರಿತು ಹಂಪೆಯ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಲು ನಿರೂಪಿಸುತ್ತಿರುವ ಮಹಾಪ್ರಬಂಧದ ವಿಚಾರವಾಗಿ ಅವರೊಂದಿಗೆ ಪ್ರತಿದಿನವೂ ದೂರವಾಣಿಯ ಮೂಲಕ ವಿಚಾರವಿನಿಮಯಮಾಡಿ, ಅವರಲ್ಲಿ ಸಾಕಷ್ಟು ಆಸಕ್ತಿ ಹಾಗೂ ವಿಚಾರಗಳನ್ನು ತುಂಬಿ ಒಬ್ಬ ಸಮರ್ಥ ವ್ಯಕ್ತಿಯನ್ನು ಮುಂದಿನ ಕಾರ್ಯಕ್ಕೆ ಇವರು ಸಿದ್ಧಗೊಳಿಸುತ್ತಿರುವುದು ಅನುಕರಣೀಯ.
ಸಾಹಿತ್ಯಕೃತಿಗಳ ಅಧ್ಯಯನವು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕ್ಷೀಣಿಸಿದೆ. ಅದರಲ್ಲೂ ಸಿರಿಭೂವಲಯವನ್ನು ಸುಲಭವಾಗಿ ಓದಿ ಅರಗಿಸಿಕೊಳ್ಳುವುದು ಬಹಳ ಶ್ರಮದಕಾರ್ಯ. ತಮಗೆ ಆಸಕ್ತಿಯಿರುವ ವಿಚಾರಗಳ ಅಧ್ಯಯನಕ್ಕೆ ಇಂದಿನ ವಿದ್ಯಾವಂತರು ತಮಗೆ ಅನುಕೂಲಕರವಾದ ಅಂತರ್ಜಾಲತಾಣಗಳನ್ನು ವೀಕ್ಷಿಸುವುದು ಸಾಮಾನ್ಯ ಸಂಗತಿಯಾಗಿದೆ. ಸಿರಿಭೂವಲಯವನ್ನು ಕುರಿತಂತೆಯೂ ಈ ಅಂತರ್ಜಾಲತಾಣಗಳಲ್ಲಿ ಸಾಕಷ್ಟುಮಾಹಿತಿಗಳು ಲಭ್ಯವಿವೆ. ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ತನಗೆ ಗೋಚರವಾದ ಹೊಸಹೊಸ ಖಚಿತಮಾಹಿತಿಗಳನ್ನು ಅಂತರ್ಜಾಲತಾಣದಲ್ಲಿಯೂ ಪ್ರಚುರಪಡಿಸುತ್ತಿರುವುದು ಸುಧಾರ್ಥಿಯ ಇನ್ನೊಂದು ವಿಶೇಷತೆಯಾಗಿದೆ. ಇದಕ್ಕೆ ನೆರವಾಗುತ್ತಿರುವ ಅಭಿಮಾನಿಗಳೂ ಅಭಿನಂದನಾರ್ಹರು.
ಸುಧಾರ್ಥಿಯು ರಚಿಸಿರುವ ಸರಳ ಪರಿಚಯಕೃತಿಗಳ ಅಧ್ಯಯನದಿಂದಾಗಿ, ವೈದಯಕೀಯ, ಗಣಿತ, ಗಣಕಯಂತ್ರಕ್ರಮ, ಧರ್ಮ ಮುಂತಾದ ಬೇರೆ ಬೇರೆ ಕ್ಷೇತ್ರಗಳ ಕೆಲವರು ಆಸಕ್ತಿವಹಿಸಿ, ಕುಮುದೇಂದುವಿನ ಕಾವ್ಯದ ವಿಚಾರ ತಿಳಿಯುವ ಉತ್ಸಾಹ ಹೊಂದುವಂತಾಗಿರುವುದು ಸ್ವಾಗತಾರ್ಹವಾದ ಸಂಗತಿ. ಇದೆ ಕ್ರಮದಲ್ಲಿ ಸಂಗೀತ, ನೃತ್ಯ, ವೇದೋಪನಿಷತ್ತುಗಳಿಗೆ ಸಂಬಂಧಿಸಿದ ಬೇರೆ ಬೇರೆ ಭಾಷೆಯ ತಜ್ಞರೂ ಇದರತ್ತ ಗಮನಹರಿಸಿ, ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈ ಅಚ್ಚರಿಯ ಕಾವ್ಯದಲ್ಲಿ ಅಡಕವಾಗಿರುವ ಮಾಹಿತಿಗಳನ್ನು ಸಮರ್ಪಕವಾಗಿ ಹೊರಗೆಡಹಿ, ಸಿರಿಭೂವಲಯದ ಮಹತ್ವವನ್ನು ಹೆಚ್ಚಿಸಲು ಸಹಕಾರಿಯಾಗಲೀ ಎಂದು ಆಶಿಸುತ್ತೇನೆ. ಈ ರೀತಿ ಆದಲ್ಲಿ ಸುಧಾರ್ಥಿಯ ಶ್ರಮ ಸಾರ್ಥಕವಾದಂತೆ.
ತಾನು ರೂಪಿಸಿ ಪ್ರಕಟಿಸಿರುವ ಪರಿಚಯಕೃತಿಗಳಿಗಿಂತಲೂ; ಕರ್ಲಮಂಗಲಂ ಶ್ರೀಕಂಠಯ್ಯನವರು ರೂಪಿಸಿರುವ ಸಿರಿಭೂವಲಯದ ಜನತಾಸಂಸ್ಕರಣ ದಲ್ಲಿ ಇನ್ನೂ ಹೆಚ್ಚು ವ್ಯಾಪಕವಾದ ಮಾಹಿತಿಗಳು ಅಡಕವಾಗಿವೆ. ಪ್ರಾಯಶಃ ಅದರಲ್ಲಿ ಸಿರಿಭೂವಲಯದ ನಾಲ್ಕನೇ ಖಂಡದವರೆಗಿನ ಮಾಹಿತಿಗಳು ಲಭ್ಯವಿರಬಹುದು. ಅವುಗಳನ್ನು ನಾನು ಒಮ್ಮೆ ಮಾತ್ರ ನೋಡಿದ್ದೇನೆ. ಶ್ರೀಕಂಠಯ್ಯನವರ ಉತ್ತರಾಧಿಕಾರಿಗಳಲ್ಲಿ ಸುರಕ್ಷಿತವಾಗಿರುವ ಈ ಪ್ರತಿಯನ್ನು ಅವರುಗಳೇ ಆಗಲೀ, ಸರ್ಕಾರವಾಗಲೀ ಆಸಕ್ತಿವಹಿಸಿ ಮುದ್ರಣಮಾಡಿಸುವ ಕಾರ್ಯ ನಿರ್ವಹಿಸಿದರೆ ಅದರಿಂದ ಶ್ರೀಕಂಠಯ್ಯನವರ ಆತ್ಮಕ್ಕೆ ಶಾಂತಿ ಸಿಗುವುದು ಮಾತ್ರವಲ್ಲ; ಜಗತ್ತಿನ ಸಾಹಿತ್ಯಾಸಕ್ತರೆಲ್ಲರಿಗೂ ಮಹತ್ತರವಾದ ಉಪಯೋಗವಾಗುತ್ತದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಾನೇ ಬೇಕಾದರೂ ಈ ಕಾರ್ಯ ನಿರ್ವಹಿಸುವೆ ಎಂದು ಸುಧಾರ್ಥಿಯು ನನ್ನಲ್ಲಿ ಅನೇಕಸಲ ಸೂಚಿಸಿರುವುದಿದೆ. ಸಂಬಂಧಿಸಿದವರು-ಶ್ರೀಕಂಠಯ್ಯನವರ ವಂಶಸ್ತರು ಅಥವಾ ಸರ್ಕಾರದ ಸಂಬಂಧಿಸಿದ ಸಂಸ್ಥೆಗಳು ಈ ಕಾರ್ಯ ಕೈಗೊಳ್ಳುವುದು ಸೂಕ್ತವೆಂದು ನನಗನಿಸುತ್ತದೆ. ಅಥವಾ ಈ ವಿಚಾರದಲ್ಲಿ ಹೆಚ್ಚಿನ ಆಸಕ್ತಿ-ಅನುಭವ ಹೊಂದಿರುವ ಸುಧಾರ್ಥಿಯಾದರೂ ಈ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕಾದುದು ಅಗತ್ಯ.
ಕೇವಲ ಸಾಹಿತ್ಯ ಕೃಷಿಮಾತ್ರವಲ್ಲದೇ, ಭೂಮಿಯ ಕೃಷಿಯಲ್ಲೂ ಹೆಚ್ಚಿನ ಆಸಕ್ತಿವಹಿಸಿರುವ ಸುಧಾರ್ಥಿಯ ಶ್ರಮದ ಫಲವನ್ನು ನಾನು ಪ್ರತ್ಯಕ್ಷವಾಗಿ ನೋಡಿದ್ದೇನೆ. ೩೫ ವರ್ಷಗಳ ಬೆಂಗಳೂರಿನ ಜೀವನವನ್ನು ತೊರೆದು, ಗ್ರಾಮೀಣ ಪರಿಸರದಲ್ಲಿ ನೆಲೆಸುವ ನಿರ್ಧಾರಕ್ಕೆ ಸಮ್ಮತಿಸುವುದು ಬಹಳ ಕಠಿಣ. ಆದರೆ, ಕಠಿಣವಾದ ನಿರ್ಧಾರವಿಲ್ಲದೇ ಇಂಥ ಕಠಿಣವಾದ ಕಾರ್ಯಸಾಧನೆ ಸಾಧ್ಯವಿಲ್ಲ. ಈ ದಿಸೆಯಲ್ಲಿ ಸುಧಾರ್ಥಿಯ ಅರ್ಧಾಂಗಿಯ ಕೊಡುಗೆ ಅಮೂಲ್ಯವಾದುದು. ಸುಧಾರ್ಥಿಯು ರಚಿಸಿದ ಪರಿಚಯಕೃತಿಗಳನ್ನು ಪ್ರಕಟಿಸಲು ಯಾರಾದರೂ ಮುಂದೆ ಬರದಿದ್ದರೆ, ಅದರ ಉಪಯೋಗ ಹೆಚ್ಚುಜನಗಳಿಗೆ ಸಿಗುವ ಅವಕಾಶವಿರಲಿಲ್ಲ! ಸುಧಾರ್ಥಿಯ ಸಹಧರ್ಮಿಣಿ ಚಿ.ಸೌ. ಗಿರಿಜೆಯು ನಿಜವಾದ ಅರ್ಥದಲ್ಲಿ ಆತನಿಗೆ ಅರ್ಧಾಂಗಿಯಾಗಿ, ಈ ಕೃತಿಗಳ ಪ್ರಕಟಣೆಯ ಹೊಣೆಹೊತ್ತಿರುವುದು ಆತನ ಪೂರ್ವಾರ್ಜಿತ ಸುಕೃತ. ಕೆ. ಅನಂತಸುಬ್ಬರಾಯರ ಸ್ಮಾರಕಸಂಸ್ಥೆಯಾಗಿ ಸುಮಾರು ಒಂದು ದಶಕದಕಾಲ ಅನಂತಪ್ರಕಾಶನ ವನ್ನು ಯಶಸ್ವಿಯಾಗಿ ನೆಡಸುತ್ತಿದ್ದಾಗಿನಿಂದಲೂ ನನಗೆ ಈ ದಂಪತಿಗಳು ಪರಿಚಿತರು. ಸುಧಾರ್ಥಿಯ ಶ್ರೀಮತಿ ಚಿ.ಸೌ ಗಿರಿಜೆಯು ಕೇವಲ ಪ್ರಕಾಶಕಿಯಾಗಿ ಮಾತ್ರವಲ್ಲ; ಈಗ ಒಂದೊಂದೇ ಅಕ್ಷರಗಳನ್ನು ಹುಡುಕಿಕೊಂಡು ಸಿರಿಭೂವಲಯದ ಅಂತರ್ಸಾಹಿತ್ಯವನ್ನು ಸಂಗ್ರಹಿಸುವ ಕಾರ್ಯದಲ್ಲಿಯೂ ನೆರವುನೀಡುತ್ತಿರುವ ಸಂಗತಿಯನ್ನು ಸುಧಾರ್ಥಿಯು ನನ್ನ ಗಮನಕ್ಕೆ ತಂದಿರುವುದರಿಂದ ಪ್ರಕಾಶಕಿಯ ಔದಾರ್ಯವನ್ನು ಮೆಚ್ಚಿದ್ದೇನೆ. ಅರ್ಥ ಸಂಪಾದನೆಯ ಅಪೇಕ್ಷೆಯಿಲ್ಲದ ಈ ಅರ್ಥಪೂರ್ಣ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿರುವ ಈ ದಂಫತಿಗಳ ಪ್ರಯತ್ನವು ಸಾರ್ಥಕವಾಗಲೆಂದು ಆಶೀರ್ವದಿಸಿದ್ದೇನೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ, ಕೇವಲ ಕನ್ನಡಾಭಿಮಾನದಿಂದ ಸಿರಿಭೂವಲಯ ಕುರಿತು ಇಷ್ಟೆಲ್ಲ ಕಾರ್ಯನಿರ್ವಹಿಸಿರುವ ಹಾಸನದ ಸುಧಾರ್ಥಿಯನ್ನು ಸಿರಿಭೂವಲಯದ ಸುಧಾರ್ಥಿ ಎಂದು ಸೂಚಿಸುವುದು ಹೆಚ್ಚುಸೂಕ್ತವಾದೀತು. ಈ ಪರಿಚಯಗ್ರಂಥದ ಮುಖಬೆಲೆಯನ್ನು ಗಮನಿಸಿದಾಗ ನಿಜಕ್ಕೂ ಇದೊಂದು ಜ್ಞಾನದಾನಯಜ್ಞವೆನಿಸುತ್ತದೆ. ಕನ್ನಡದಮೇಲಿನ ಅಭಿಮಾನದಿಂದ ನಡೆದಿರುವ ಈ ಮಹಾನ್ ಜ್ಞಾನದಾನದ ಪೂರ್ಣಫಲವನ್ನು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ಥಕವಾಗಿ ಬಳಸಿಕೊಳ್ಳಲೆಂದು ಆಶಿಸುತ್ತೇನೆ. ಶ್ರೀ ಸುಧಾರ್ಥಿಯವರ ಶ್ರಮಕ್ಕೆ ನನ್ನ ಅಭಿನಂದನೆಗಳು.
- ಜಿ.ವೆಂಕಟಸುಬ್ಬಯ್ಯ
ಬೆಂಗಳೂರು ೧೮-೦೨-೨೦೧೩
No comments:
Post a Comment