ಕುಮುದೇಂದುಮುನಿ, ಕರ್ಲಮಂಗಲಂ ಶ್ರೀಕಂಠಯ್ಯನವರು ಹಾಗೂ ಕೆ. ಅನಂತಸುಬ್ಬರಾಯರಂಥವರ ಅನನ್ಯವಾದ ಕನ್ನಡಾಭಿಮಾನದಿಂದ ಪ್ರೇರಿತನಾಗಿ ನಾನು ಈ ಸಿರಿಭೂವಲಯ ಎಂಬ ಅಚ್ಚರಿಯ ಗ್ರಂಥದ ಪ್ರಭಾವಕ್ಕೆ ಒಳಗಾದಮೇಲೆ, ಕಳೆದ ಅರುವತ್ತು ವರ್ಷಗಳ ಅವಧಿಯಲ್ಲಿ ಕನ್ನಡನಾಡಿನ ಸಾರಸ್ವತಲೋಗದ ದಿಗ್ಗಜಗಳು ಈ ಮಹಾನ್ ಗ್ರಂಥದ ವಿಚಾರವಾಗಿ ತಳೆದಿರುವ ಉದಾಸೀನ ಮನೋಭಾವದಿಂದ ಬಹಳ ಬೇಸಗೊಂಡದ್ದು ಸಹಜ ಸಂಗತಿ. ಕಬ್ಬಿಣದ ಕಡಲೆ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದ ಈ ಅದ್ಭುತ ಗ್ರಂಥವನ್ನು ಕುರಿತು ಸಾಮಾನ್ಯ ಓದುಗರಿಗೆ ಪರಿಚಯಮಾಡಿಕೊಡುವ ನಿರ್ಧಾರಮಾಡಿ, ಗ್ರಂಥದ ಅಧ್ಯಯನಕ್ಕೆ ಪ್ರಾರಂಭಿಸಿದಮೇಲೆ, ಬೆಂಗಳೂರಿನ ಪುಸ್ತಕಶಕ್ತಿ ಪ್ರಕಾಶನದವರು ನಾಡಿನ ಹಿರಿಯ ವಿದ್ವಾಂಸರುಗಳ ಸಮೂಹದೊಂದಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಈ ಪ್ರಾಚೀನ ಕೃತಿಯ ಪುನರುತ್ಥಾನ ಮಾಡುವ ಪ್ರಯತ್ನ ಪ್ರಾರಂಭಿಸಿದ ವಿಚಾರ ತಿಳಿಯಿತು. ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ಅವರ ಕೆಲವು ಕೃತಿಗಳೂ ಪ್ರಕಟವಾದುವು. ಆದರೆ, ೧೯೫೩ ರಲ್ಲಿ ಸಿರಿಭೂವಲಯದ ಅಕ್ಷರ ಅವತರಣಿಕೆಯು ಪ್ರಕಟವಾದ ವಿಚಾರವಾಗಿ ದಿ| ಕೆ. ಅನಂತಸುಬ್ಬರಾಯರಿಂದ ನಾನು ತಿಳಿದಿದ್ದ ಮಾಹಿತಿಗಳಿಗೂ, ಈಗ ಪುಸ್ತಕಶಕ್ತಿ ಪ್ರಕಾಶನದವರು ನಡೆಸಿರುವ ಪುನರುತ್ಥಾನ ಕಾರ್ಯದ ವಿವರಗಳಿಗೂ ಇರುವ ಅಂತರವನ್ನು ಗಮನದಲ್ಲಿರಿಸಿಕೊಂಡು, ಈ ಪುನರುತ್ಥಾನದ ಕಾಯಕಕ್ಕೆ ನೆರವಾದ ವಿದ್ವಾಂಸರ ಪ್ರತಿಯೊಂದು ಮಾತುಗಳನ್ನೂ ನಾನು ಗಮನವಿಟ್ಟು ಅಭ್ಯಸಿಸಿ, ಅಲ್ಲಿನ ನ್ಯೂನತೆಗಳನ್ನು ಗುರುತಿಸತೊಡಗಿದೆ.
ಸಿರಿಭೂವಲಯದ ಸಂಶೋಧನೆಗೆ ಸಂಬಂಧಿಸಿದಂತೆ ಇಲ್ಲದ ಇತಿಹಾಸವನ್ನು ನಿರೂಪಿಸುವ ಅನುಚಿತ ಪ್ರಯತ್ನದ ಯಶಸ್ಸನ್ನು ಗಮನಿಸಿ ನನಗೆ ಖೇದವಾಯಿತು. ಸಂಬಂಧಿಸಿದ ವಿದ್ವಾಂಸರ ಸಮೂಹವು ಸಿರಿಭೂವಲಯವನ್ನು ಸಮರ್ಪಕವಾಗಿ ಅಧ್ಯಯನಮಾಡದೇ, ನಾನಾರೀತಿಯ ಒತ್ತಡಗಳಿಗೆ ಸಿಲುಕಿ, ಸಿರಿಭೂವಲಯದ ಘನತೆಗೆ ಕುಂದುತರುತ್ತಿರುವರೆಂಬ ಅಸಮಾಧಾನ ನನ್ನಲ್ಲಿ ಉಂಟಾಯಿತು. ಈ ಕಾರಣದಿಂದಾಗಿ ನಾನು ಸಿರಿಭೂವಲಯಸಾರದಲ್ಲಿ ಸಂಬಂಧಿಸಿದ ವಿದ್ವಾಂಸರೆಲ್ಲರ ಹಾಗೂ ಹಿಂದೆ ಈ ಗ್ರಂಥದ ಅಕ್ಷರ ಸಂಸ್ಕರಣೆಯ ಪ್ರಕಟಣೆಯ ಪ್ರಾರಂಭದಲ್ಲಿ ವಿರೋಧ ಸೂಚಿಸಿದ ಅಂದಿನ ಸಾಹಿತ್ಯಕ್ಷೇತ್ರದ ದಿಗ್ಗಜಗಳ ವಿರುದ್ಧ ಸಕಾರಣವಾದ, ಸಮರ್ಪಕವಾದ, ವಾಕ್ಸಮರನಡೆಸಿದಾಯಿತು.
ಸಿರಿಭೂವಲಯದ ನಿಜವಾದ ಕಠಿಣತೆ, ಅದನ್ನ ಸರಳವಾಗಿ ಓದಲು ಸಾಧ್ಯವಿರದ ವಿಚಾರ, ತಮ್ಮ ವೃತ್ತಿ, ಪ್ರವೃತ್ತಿಗಳೊಂದಿಗೆ ವಿದ್ವಾಂಸರು ಇದನ್ನು ಸರಿಯಾಗಿ ತಿಳಿಯಲು ಅವಕಾಶವಾಗದೆ ಹೋದುದು ಸಹಜ ಎಂಬ ವಿಚಾರ ನನಗೆ ಈಗ ಮನವರಿಕೆಯಾಗಿದೆ. ಏಕೆಂದರೆ, ಎಲ್ಲರೂ ಎಲ್ಲವಿಚಾರಗಳಲ್ಲೂ ಸಮಾನವಾದ ಆಸಕ್ತಿ ಹೊಂದಿರುವು ಅಸಂಭವ. ನನ್ನ ವಿಚಾರವನ್ನೇ ತೆಗೆದುಕೊಂಡರೂ ಸಿರಿಭೂವಲಯದ ವಿಚಾರದಲ್ಲಿ ನನಗಿರುವಷ್ಟು ತೀವ್ರವಾದ ಆಸಕ್ತಿಯು ಬೇರೆ ಯಾವುದೇ ವಿಚಾರದಲ್ಲೂ ಇಲ್ಲವೆಂಬುದು ನನ್ನ ಸ್ವಾನುಭವ. ಅಲ್ಲದೇ ಈ ಸಿರಿಭೂವಲಯದ ಸರಳ ಪರಿಚಯದ ಕಾರ್ಯವನ್ನು ಈಹಿಂದೆಯೇ ಯಾರಾದರೂ ಮಾಡಿದ್ದರೆ, ನನಗೆ ಅಲ್ಲಿ ಪ್ರವೇಶವೇ ಇರುತ್ತಿರಲಿಲ್ಲ! ಒಟ್ಟಿನಲ್ಲಿ ಸಿರಿಭೂವಲಯದ ವಿಚಾರವಾಗಿ ಸೂಕ್ತ ಗಮನಹರಿಸಲಿಲ್ಲವೆಂದು ಉಳಿದವರನ್ನು ಆಕ್ಷೇಪಿಸುವುದು ಸೂಕ್ತವಲ್ಲವೆನಿಸಿತು. ನನ್ನ ಕಠಿಣವಾದ ಬರಹದ ವಿಚಾರವಾಗಿ ನನಗೇ ಮುಜುಗರವಾಯಿತು, ಇದರ ಪರಿಣಾಮವಾಗಿಯೇ ಮೈಸೂರಿಗೆ ಹೋದಾಗ, ಡಾ|| ಟಿ. ವಿ. ವೆಂಕಟಾಚಲಶಾಸ್ತ್ರಿಯವರನ್ನು ಕಂಡು ಮಾತನಾಡಿದ್ದಾಯಿತು. ನನ್ನ ಭಾವನೆಯೊಂದಿಗೆ ಅವರು ಪೂರ್ಣ ಸಹಮತ ಸೂಚಿಸದೇ ಹೋದರೂ, ನಾನು ಆ ವಿಚಾರದಲ್ಲಿ ತಟಸ್ಥನಾದೆ. ಕನ್ನಡ ಚೆನ್ನುಡಿಯ ಈ ಮಹಾ ಚೇತನಕ್ಕೆ ನನ್ನ ಗೌರವ ಸೂಚಿಸುವಲ್ಲಿ ಸಿರಿಭೂವಲಯದ ಜಯಾಖ್ಯಾನಾಂತರ್ಗತ ಭಗವದ್ಗೀತಾ ಕೃತಿಯನ್ನು ಅವರಿಗೆ ಅರ್ಪಿಸಿದೆ. ಇದುವರೆವಿಗೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ವ್ಯಕ್ತಿಜೀವನದ ಸಾರ್ಥಕತೆಯ ದಿಸೆಯಲ್ಲಿ ಸಾಹಿತ್ಯದ ಪಾತ್ರವು ಬಹಳ ಪ್ರಮುಖವಾದುದೆಂಬುದು ನಿರ್ವಿವಾದ. ಪ್ರತಿಯೊಂದು ಸಾಹಿತ್ಯಕೃತಿಗೂ ತನ್ನದೇಆದ ನೆಲೆಬೆಲೆ ಇರುತ್ತದೆ. ಈ ಕಾರಣದಿಂದಾಗಿಯೇ ವೇದಮಂತ್ರಗಳು, ಉಪನಿಷತ್ತುಗಳು, ಸಹಸ್ರನಾಮಗಳು ಮುಂತಾದುವು ರಚನೆಯಾಗಿವೆ, ಇಂಥ ಸಾರ್ಥಕ ಸಾಹಿತ್ಯಕೃತಿಗಳ ನಿಜವಾದ ಪ್ರಯೋಜನ ನಮಗೆ ದೊರೆಯಬೇಕಾದರೆ ನಾವು ಓದಿದ ಸಾಹಿತ್ಯಕೃತಿ ನಮಗೆ ಅರ್ಥವಾಗಬೇಕು! ಅಂದರೆ, ಸಾಹಿತ್ಯಕೃತಿಯಲ್ಲಿ ಬಳಸಿರುವ ಪ್ರತಿಯೊಂದು ಪದದ ಅರ್ಥವೂ ನಮಗೆ ಖಚಿತವಾಗಿ ತಿಳಿದಿರಬೇಕು. ಈ ರೀತಿಯಲ್ಲಿ ಯಾವುದೆ ಭಾಷೆಯ ಯಾವುದೇ ಪದವು ಪ್ರತಿನಿಧಿಸುವ ನಾನಾ ರೀತಿಯ ಅರ್ಥಗಳನ್ನು ನಮಗೆ ತಿಳಿಸಿಕೊಡುವ ಕಾರ್ಯವನ್ನು ಅರ್ಥಕೋಶವು ನಿರ್ವಹಿಸುತ್ತದೆ. ವ್ಯಾಪಕವಾದ ಜೀವನಾನುಭವದ ಸಂಪಾದನೆಗೆ ಸಮರ್ಪಕವಾದ ಪ್ರವಾಸವು ನೆರವಾಗುತ್ತದೆ. ಈ ಕಾರಣದಿಂದಾಗಿಯೇ ದೇಶಸುತ್ತಿನೋಡು; ಕೋಶ ಓದಿನೋಡು ಎಂಬ ಗಾದೆಯಮಾತು ರೂಢಿಗೆ ಬಂದಿದೆ. ಇಂದಿಗೂ ಜಗದ್ವ್ಯಾಪಿಯಾಗಿರುವ ಸಂಸ್ಕೃತಭಾಷೆಗೆ ಬಹಳ ಪ್ರಾಚೀನ ಕಾಲದಲ್ಲಿ ನಿರೂಪಿತವಾದ ನಿರುಕ್ತ ಎಂಬ ಅರ್ಥಕೋಶವನ್ನು ನಿರೂಪಿಸಿದ ಯಾಸ್ಕಾಚಾರ್ಯನ ಕಾಲದಿಂದ ಇಂದಿನ ವರೆವಿಗೂ ಜಗತ್ತಿನಲ್ಲಿ ಸಾವಿರಾರು ಭಾಷೆಗಳಿಗೆ ಲಕ್ಷಾಂತರ ನಿಘಂಟುಗಳು ರಚನೆಯಾಗಿವೆ. ಕನ್ನಡಭಾಷೆಯಲ್ಲಿ ಕಿಟೆಲ್ ಕೋಶವು ಪ್ರಸಿದ್ಧವಾಗಿತ್ತು. ಅನಂತರ ಹಲವಾರು ಜನಗಳು ಈ ಅರ್ಥಕೋಶದ ರಚನೆಯಲ್ಲಿ ಕೈಹಾಕಿರುವುದುಂಟು. ನಿಘಂಟು, ಶಬ್ದಕೋಶ, ಅರ್ಥಕೋಶ, ಶಬ್ದಾರ್ಥಚಿಂತಾಮಣಿ, ಪದಾರ್ಥಚಿಂತಾಮಣಿ ಮುಂತಾದ ಶಬ್ದಗಳೆಲ್ಲವೂ ನಾವು ಬಳಸುವ ಭಾಷೆಯ ಪದಗಳ ಅರ್ಥವನ್ನು ಸೂಚಿಸುವ ಡಿಕ್ಷ್‌ನರಿ ಎಂಬ ಶಬ್ದದವ್ಯಾಪ್ತಿಗೇ ಬರುತ್ತವೆ. ಇವುಮಾತ್ರವಲ್ಲ; ಸಮಯಾವಕಾಶವಿದ್ದು, ಲಭ್ಯವಿರುವ ಹಲವಾರು ಶಬ್ದಕೋಶಗಳನ್ನು ತೆರೆದು, ಅವುಗಳ ಅರ್ಥವಿವರಣೆಯನ್ನು ಗಮನಿಸಿದಾಗ, ಅಲ್ಲಿ ಕಾಣಬರುವ ಪ್ರತಿಯೊಂದು ಶಬ್ದದ ಅರ್ಥವ್ಯಾಪ್ತಿಯೂ ಒಂದಲ್ಲ ಒಂದು ರೀತಿಯಲ್ಲಿ ಪರಸ್ಪರ ಸಂಬಂಧ ಹೊಂದಿ ಎಲ್ಲವೂ ಒಂದೇ ಎಂಬುದು ಮನವರಿಕೆಯಾಗುತ್ತದೆ. ಅದನ್ನೇ ಶಬ್ದಬ್ರಹ್ಮವೆನ್ನುವುದು. ಅನಾದಿ, ಅನಂತಕಾಲಾವಾಧಿಯಲ್ಲಿ ಒಂದೇ ಒಂದಾಗಿರುವ ಪರಮಾತ್ಮವು ಜೀವಾತ್ಮವಾಗಿ, ಕೋಟ್ಯಾಂತರ ದೇಹಗಳ ರೂಪದಲ್ಲಿ ಪ್ರಕಟವಾಗಿರುವಂತೆ! ಸಹಸ್ರನಾಮಗಳಲ್ಲಿಯೂಕೂಡ ಇದೇ ಮಾತುಗಳು ವ್ಯಕ್ತವಾಗುತ್ತವೆ. ಅನೇಕಕೋಟಿಬ್ರಹ್ಮಾಂಡಜನನಿ ಆಬ್ರಹ್ಮಕೀಟ ಜನನಿ ಮುಂತಾದ ಪದಪುಂಜಗಳ ಅರ್ಥವು ಧ್ವನಿಸುವುದೂ ಇದನ್ನೇ. ಕನ್ನಡ ಭಾಷೆಗೆ ಸಂಬಂಧಿಸಿದ ಲಕ್ಷಾಂತರ ಪದಗಳ -ಶಬ್ದಗಳ ಅರ್ಥವಿವರಿಸಿರುವ ಮಹಾನ್ ಚೇತನ ಪ್ರೊ. ಜಿ, ವೆಂಕಟಸುಬ್ಬಯ್ಯನವರು. ಸಮಕಾಲೀನ ಸಾಹಿತ್ಯ ಕ್ಷೆತ್ರದಲ್ಲಿ ಹೆಚ್ಚು ಉಪಯೋಗಕ್ಕೆ ಬಂದು, ಹೆಚ್ಚು ಪ್ರಸಿದ್ಧಿಗೆ ಬಂದಿರುವ ಹಲವಾರು ಅರ್ಥಕೋಶಗಳನ್ನು ನಿರೂಪಿಸಿ ನಿಘಂಟುಬ್ರಹ್ಮ ಎಂದೇ ಪ್ರಖ್ಯಾತರಾಗಿರುವ ಈ ಮಹನೀಯರದು ಜಗದ್ವಿಖ್ಯಾತವಾದ ವ್ಯಕ್ತಿತ್ವ. ನಾಡಿನ ಜ್ಞಾನವೃದ್ಧರೂ, ವಯೋವೃದ್ಧರೂ ಆಗಿರುವ ಈ ಹಿರಿಯ ಚೇತನವು ಈಗ ಶತಾಯುಷಿ. ಇಂಥ ಮಹನೀಯರ ಸಂಪರ್ಕ ಹೊಂದಿರುವುದು ಸಾಧಾರ್ಥಿಯ ಸುಕೃತವಾಗಿದೆ.
ಸಿರಿಭೂವಲಯದ ಪರಿಚಯಕ್ಕೆ ಸೇರಿದ ಐದು ಕೃತಿಗಳ ಪ್ರಕಟಣೆಯಾದಮೇಲೆ, ಬೆಂಗಳೂರಿಗೆ ಹೋಗಿದ್ದಾಗ ನಾಡಿನ ಸಾಹಿತ್ಯಕ್ಷೇತ್ರದ ಹಿರಿಯ ಚೇತನ ಶ್ರೀ ಜಿ. ವೆಂಕಟಸುಬ್ಬಯ್ಯನವರನ್ನು ಭೇಟಿಯಾಗಲು ಹೋದೆ. ನನ್ನ ಸಾಹಿತ್ಯಿಕ ಚಟುವಟಿಕೆಯ ವಿಚಾರದಲ್ಲಿ ಸುಮಾರು ನಲವತು ವರ್ಷಗಳಿಂದ ಪರಿಚಿತರಾಗಿ ಹಿತೈಷಿಯಾಗಿರುವ ಈ ಮಹನೀಯರನ್ನು ಕಳೆದ ಸುಮಾರು ೧೪ ವರ್ಷಗಳಿಂದ ಸಂಪರ್ಕಿಸಿರಲಿಲ್ಲ! ಸಿರಿಭೂವಲಯಸಾರ ದಲ್ಲಿನ ನನ್ನ ನಿಷ್ಟುರವಾದ ಬರಹದಿಂದ ಅವರಿಗೆ ಮನನೊಂದಿರುವ ವಿಚಾರದಲ್ಲಿ ನನಗೆ ಸಂಶಯವೇನಿರಲಿಲ್ಲ. ಹೀಗಿದ್ದೂ ಮನೆಗೆ ಹೋಗಿ, ಕರೆಗಂಟೆಯ ಗುಂಡಿ ಒತ್ತಿದಾಗ, ಸ್ವತಃ ತಾವೇ ಬಂದು ಬಾಗಿಲು ತೆರೆದು, ಸಾಂಪ್ರದಾಯಿಕವಾಗಿ ನಾನು ನಮಸ್ಕರಿಸುವ ಮೊದಲೇ ಓಹೋ, ಬನ್ನಿ ಬನ್ನಿ. ಬಹಳದಿನಗಳಮೇಲೆ ಹಳೇ ಪರಿಚಯದವರನ್ನು ನೋಡಿದಂತಾಯ್ತು ಎಂದು ನಗುಮೊಗದಿಂದ ಸ್ವಾಗತಿಸಿದರು! ನಿಜಕ್ಕೂ ನನಗೆ ಬಹಳ ನಾಚಿಕೆಯಾಯ್ತು. ಸಾಕಷ್ಟು ಸಮಯ ಮಾತನಾಡಿದಮೇಲೆ, ನಾನು ಬರೆದಿರುವ ಸಿರಿಭೂವಲಯದ ಪರಿಚಯ ಕೃತಿಗಳನ್ನು ಅವರಿಗೆ ಒಪ್ಪಿಸಿದೆ. ಏನಪ್ಪ, ಇಷ್ಟು ಅಲ್ಪ ಕಾಲದಲ್ಲಿ ಇಷ್ಟೊಂದು ಕೃತಿಗಳನ್ನು ಪ್ರಕಟಿಸಿದ್ದೀಯೆ. ಕುಮುದೇಂದುವನ್ನು ಕುರಿತು ಒಂದು ಪುಟ್ಟ ಗ್ರಂಥಾಲಯವೇ ಸಿದ್ಧವಾಗಿದೆ! ಇರಲೀ ನಿಧಾನವಾಗಿ ಓದಿ ನನ್ನ ಅನಿಸಿಕೆಯನ್ನು ಬರೆಯುತ್ತೇನೆ ಎಂದು ಆಶಿರ್ವದಿಸಿದರು. ಅಲ್ಲಿಂದ ಮುಂದೆ ಸಿರಿಭೂವಲಯಕ್ಕೆ ಸಂಬಂಧಿಸಿದ ನನ್ನ ಚಟುವಟಿಕೆಗಳನ್ನೆಲ್ಲ ಅವರಿಗೆ ವರದಿ ಮಾಡುವುದು ರೂಢಿಯಾಯಿತು. ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ನನ್ನ ಶ್ರೀಮತಿಯು ಪ್ರಕಟಿಸಿರುವ ಯಾವ ಕೃತಿಯೂ ಸರ್ಕಾರದ ಯಾವುದೇ ಇಲಾಖೆಯ ಗ್ರಂಥಾಲಯಕ್ಕೆ ಆಯ್ಕೆಯಾಗದೇ ತಿರಸ್ಕೃತವಾಗಿರುವ ಸಂಗತಿ ಅವರಿಗೆ ಅಚ್ಚರಿಯನ್ನುಂಟುಮಾಡಿತು. ಅದಕ್ಕೆ ಸಂಬಂಧಿಸಿದಂತೆ ನಾನು ಗಮನವನ್ನೇ ಹರಿಸಿರಲಿಲ್ಲ!
ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ನನ್ನ ಮುಂದಿನ ಹೆಜ್ಜೆಯಾಗಿ ಸಿರಿಭೂವಲಯಸಾಗರರತ್ನಮಂಜೂಷ ವನ್ನು ನಿರೂಪಿಸಿರುವ ವಿಚಾರ ತಿಳಿಸಿ, ಅದರ ಪ್ರಮುಖ ಮಾಹಿತಿಗಳನ್ನು ಅವರಿಗೆ ಪ್ರತ್ಯೇಕವಾಗಿ ಸಿದ್ಧಪಡಿಸಿ, ಓದಲು ಸಲ್ಲಿಸಿ, ಈ ಪ್ರಯತ್ನಕ್ಕೆ ನಿಮ್ಮಿಂದ ಮುನ್ನುಡಿಯಾಗಬೇಕೆಂದು ವಿನಂತಿಸಿದೆ. ಸಂತೋಷದ ಮುಗುಳ್ನಗೆ ಸೂಸಿದ ಈ ಶತಾಯುಷಿಯು ಯಾವುದೇ ಆಕ್ಷೇಪ ಸೂಚಿಸದೇ ನನ್ನ ವಿಂತಿಗೆ ಸಮ್ಮತಿಸಿದರು! ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ಈಗ ತಮ್ಮ ಅಂತರಂಗದ ಭಾವನೆಗಳಿಗೆಲ್ಲ ಅಕ್ಷರ ರೂಪನೀಡಿದ ಮೌಲಿಕವಾದ ಮುನ್ನುಡಿಗೆ ಅಂಕಿತವಿಟ್ಟು ನನ್ನ ಈ ಪ್ರಯತ್ನವನ್ನು ತುಂಬು ಹೃದಯದಿಂದ ಆಶೀರ್ವದಿಸಿರು. ಮೊದಲಿಗೆ ಈ ಸಂತಸದ ಸುದ್ದಿ ತಿಳಿದ ನನ್ನ ಆತ್ಮೀಯ ಗೆಳೆಯರಬಳಗದ ಶ್ರೀ ನೀರಗುಂದ ಕೇಶವಮೂರ್ತಿರಾವ್ ಅವರಂತೂ ನಿನ್ನ ಮೂರುದಶಕಗಳ ಪ್ರಯತ್ನವು ಸಾರ್ಥಕವಾಯಿತು. ಶೀಘ್ರಕೋಪಿಯಾದ ವಿಶ್ವಾಮಿತ್ರನು ಸದಾ ಶಾಂತಿಸ್ವರೂರಾದ ವಸಿಷ್ಠರಿಂದ ಬ್ರಹ್ಮರ್ಷಿ ಪದವಿ ಪಡೆದಂತಾಯ್ತು ಎಂದು ಅಭಿನಂದಿಸಿದರು. ಈವಿಚಾರ ಕೇಳಿತಿಳಿದು ಶತಾಯುಷಿಯು ಸಂತೋಷದಿಂದ ಮನಃಪೂರ್ವಕವಾಗಿ ನಕ್ಕದ್ದೂ ಆಯಿತು. ಜೀವನದಲ್ಲಿ ಇದಕ್ಕಿಂತ ಹೆಚ್ಚಿನ ಸಂತೋಷ, ಸಂಭ್ರಮ ಇನ್ನೇನಿದೆ?!
ಸಿರಿಭೂವಲಯ ಕುರಿತು ಸುಧಾರ್ಥಿಯು ನಿರೂಪಿಸಿರುವ ಪರಿಚಯ ಕೃತಿಗಳಲ್ಲಿ ಕಿರೀಟಪ್ರಾಯವಾದ ಸಿರಿಭೂವಲಯಸಾಗರರತ್ನಮಂಜೂಷವು ಈ ಮಹನೀಯರ ಮುನ್ನುಡಿಯಿಂದಾಗಿ ತನ್ನದೆ ಆದ ಘನತೆ, ಗಾಂಭೀರ್ಯವನ್ನು ಪಡೆದಂತಾಗಿದೆ. ನನ್ನ ಪಾಲಿಗೆ ಇದು ಜಗತ್ತಿನ ಯಾವುದೇ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿಗಿಂತಲೂ ಮಿಗಿಲಾದುದು. ಯಾವುದೇ ಪ್ರತಿಷ್ಠಿತ ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಪ್ರಶಸ್ತಿಗಿಂತಲೂ ಉನ್ನತವಾದುದು. ನನ್ನ ಜೀವನದ ಸಾರ್ಥಕತೆ ನನಗೆ ಲಭಿಸಿದೆ. ಇದಕ್ಕಿಂತ ಮಿಗಿಲಾದುದು ನನಗೆ ಏನೂಯಿಲ್ಲ. ಈ ಸಾರ್ಥಕತೆಯನ್ನು ಅನುಗ್ರಹಿಸಿದ್ದಕ್ಕಾಗಿ ನಾನು ಈ ಶತಾಯುಷಿಗೆ ಈ ಸಿರಿಭೂವಲಯಸಾಗರರತ್ನಮಂಜೂಷವನ್ನು ಸಮರ್ಪಿಸುವದರೊಂದಿಗೆ, ನನ್ನ ಅನಂತ ವಂದನೆಗಳನ್ನರ್ಪಿಸುತ್ತಿದ್ದೇನೆ.
ಸಿರಿಭೂವಲಯವು ಮೂಲತಃ ಒಂದು ಪದ್ಧತಿಗ್ರಂಥ. ಅಂದರೆ, ಕನ್ನಡ; ಪ್ರಾಕೃತ; ಸಂಸ್ಕೃತಭಾಷಾ ಮಿಶ್ರಿತ ಕಾವ್ಯವೆಂಬ ಆಧಾರದಲ್ಲಿ ಅಶ್ವಗತಿಯ ಅಂತರ್ಸಾಹಿತ್ಯವನ್ನು ಪ್ರತ್ಯೇಕಿಸುವಾಗ, ಅಲ್ಲಿನ ಶಬ್ದಗಳ ಆಧಾರದಲ್ಲಿ ಕನ್ನಡ,ಪ್ರಾಕೃತ,ಸಂಸ್ಕೃತಭಾಷಾ ಅಂತರ್ಸಾಹಿತ್ಯಎಂದು ಸೂಚಿಸಲಾಗಿದೆ. ಆದಾಗ್ಯೂ ಅಲ್ಲಿ ಮಾಗಧಿ, ಅರ್ಧಮಾಗಧಿ, ಶೂರಸೇನಿ, ಪೈಶಾಚಿಕ, ಅಪಭ್ರಂಶ ಇತ್ಯಾದಿ ಬೇರೆಬೇರೆ ಭಾಷೆಗಳ ಶಬ್ದಗಳೂ ಅಡಕವಾಗಿರುವ ಸಾಧ್ಯತೆ ಉಂಟು. ಅಂಥ ಶಬ್ದಗಳ ಸಮೂಹವನ್ನು ಪ್ರತ್ಯೇಕಿಸಿ ಅವು ಯಾವ ಭಾಷೆಗೆ ಸೇರಿದುವುಗಳು ಎಂಬುದನ್ನು ತಿಳಿದವರು ಗುರುತಿಸಿ, ಅದರ ಪರಿಚಯ ಮಾಡಿಕೊಡಬೇಕಾಗಿದೆ. ಮೂಲ ಸಾಹಿತ್ಯದಲ್ಲಿ ಕೆಲವು ಭಾಗವನ್ನು ಬಿಟ್ಟು, ಒಟ್ಟುಸೇರಿರುವ ಈ ಅಂತರ್ಸಾಹಿತ್ಯದಲ್ಲಿ ಬೇರೆಭಾಷೆಯ ಸಾಹಿತ್ಯಕ್ಕಾಗಿ ಹುಡುಕಾಟ ನಡೆಸುವವರಿಗೆ ನೆರವಾಗಲೆಂಬ ಉದ್ದೇಶದಿಂದ ಈ ಪ್ರಯತ್ನನಡೆಸಲಾಗಿದೆ.
ಕೆ. ಅನಂತಸುಬ್ಬರಾಯರ ಸಮರ್ಪಕ ಮಾರ್ಗದರ್ಶನದ ನೆರವಿದ್ದೂ, ಸಿರಿಭೂವಲಯದ ೧೯೫೩ರ ಪ್ರಥಮ ಮುದ್ರಣದ ೩೩ ಅಧ್ಯಾಯಗಳನ್ನು ಓದಿ ಅರ್ಥಮಾಡಿಕೊಂಡು, ಅದರಿಂದ ಪುನರುತ್ಪತ್ತಿಯಾಗುವ ಅಂತರ್ಸಾಹಿತ್ಯವನ್ನು ಕ್ರಮವರಿತು ಪ್ರತ್ಯೇಕವಾಗಿ ನಿರೂಪಿಸಿ, ಮುದ್ರಣಮಾಡಿಸುವ ಕಾರ್ಯಕ್ಕೆ ಸುಮಾರು ೨೭ ವರ್ಷಗಳ ಕಾಲಾವಧಿ ಹಿಡಿದಿತ್ತು. ಈಗ ಮುಂದಿನ ೨೬ ಅಧ್ಯಾಯಗಳ ಕಾರ್ಯವನ್ನು ಕೈಗೆತ್ತಿಕೊಂಡಾಗ, ಅಸಮರ್ಪಕವಾದ ಕೈಬರಹದ ಕರಡುಪ್ರತಿಯನ್ನು ಮುಂದಿರಿಸಿಕೊಂಡು ಅಧ್ಯಯನ ಮಾಡುವುದು ಅಸಾಧ್ಯವಾದಕಾರ್ಯವೆಂದು ಭಾಸವಾಯಿತು. ಅಲ್ಲಿನ ಅಶ್ವಗತಿಯ ಗುರುತುಗಳನ್ನು ಗಮನಿಸಿದಾಗ, ಯಾವ ಅಕ್ಷರವನ್ನು ತೆಗೆದುಕೊಳ್ಳುವುದು? ಯಾವ ಅಕ್ಷರವನ್ನು ಬಿಡುವುದು? ಎಂಬ ಸಮಸ್ಯೆ ಎದುರಾಯಿತು. ಇದರೊಂದಿಗೆ ಝರಾಕ್ಸ್ ಪ್ರತಿಯಲ್ಲಿನ ಕೈಬರಹದಲ್ಲಿ ಹಲವೆಡೆ ಕ/ತ, ಅ/ಲ; ರ/ಲ, ಪ/ಷ, ಮ/ಯ, ಲಿ/ತಿ/ರೆ, ಉ/ಲು ರ/ಗ ಮುಂತಾದ ಅಕ್ಷರಗಳನ್ನು ಸರಿಯಾಗಿ ಗುರುತಿಸುವುದು ಕಠಿಣವಾಗಿತ್ತು. ಅಂಥಲ್ಲಿ ಕೆಲವು ಅಕ್ಷರ ದೋಷಗಳು ಉಳಿದಿರುವ ಸಾಧ್ಯತೆ ಉಂಟು. ಅಂತರ್ಸಾಹಿತ್ಯವನ್ನು ಓದುವಾಗ ಕೆಲವೆಡೆ ಇಂಥ ತಪ್ಪುಗಳು ತಕ್ಷಣವೇ ಗಮನಕ್ಕೆ ಬಂದಿವೆ ಸಾಧ್ಯವಿರುವ ಮಟ್ಟಿಗೆ ಅವುಗಳನ್ನು ತಿದ್ದಲಾಗಿದೆ.
ಈ ಕಾರ್ಯವನ್ನು ಸಾಧಿಸಲೇಬೇಕೆಂಬ ಛಲದಿಂದ, ನನ್ನಿಂದ ಸಾಧ್ಯವಾದಷ್ಟು ಕಾರ್ಯಪ್ರಗತಿಯನ್ನು ಸಾಧಿಸಿದ್ದೇನೆ. ಈ ಕಾರ್ಯಸಾಧಿಸಲು ಸಿರಿಭೂವಲಯಸಾರ ನಿರೂಪಣೆಯ ಕಾಲಾವಧಿಯಂತೆಯೇ ಲೆಕ್ಕಹಾಕಿದರೆ, ೧೫-೨೦ ವರ್ಷಗಳ ಕಾಲಾವಧಿಯಾದರೂ ಬೇಕೇನೋ ಎನಿಸಿತ್ತು. ಆದರೆ ಜೀವನಾವಧಿಯು ಕೊನೆಯಾಗುವುದರೊಳಗೆ ಈ ಕಾರ್ಯಕ್ಕೆ ಒಂದು ಖಚಿತ ಸ್ವರೂಪವನ್ನು ನೀಡಲೇಬೇಕೆಂಬ ಆತಂರಿಕ ಒತ್ತಡದ ಕಾರಣದಿಂದಾಗಿ, ಹಗಲು ಇರುಳಿನ ಪರಿವೆಯೂ ಇಲ್ಲದೇ ಅಧ್ಯಯನವು ಮುನ್ನಡೆಯಿತು. ಅಲ್ಲಿ ಎದುರಾದ ಅಡ್ಡಿ ಆತಂಕಗಳ ವಿವರವು ಇಲ್ಲಿ ಅನಗತ್ಯವಾದುದು. ನನ್ನ ನಿರೀಕ್ಷೆಮೀರಿ ಕೇವಲ ೧೫-೨೦ ತಿಂಗಳ ಅವಧಿಯೊಳಗಾಗಿಯೇ ಈ ಅಚ್ಚರಿಯ ಕಾವ್ಯದ ಮುಂದಿನ ಪರಿಚಯವು ಸಿರಿಭೂವಲಯಸಾಗರರತ್ನಮಂಜೂಷ ಎಂಬ ರೂಪದಲ್ಲಿ ಒಂದು ಸೀಮಿತ ಹಂತದ ಪರಿಧಿಯನ್ನು ತಲುಪಿತು. ಇದು ನಿಜಕ್ಕೂ ನನಗೆ ನೆಮ್ಮದಿಯ ವಿಚಾರವಾಗಿದೆ. ಈ ಪರಿಚಯಕೃತಿ ನಿರೂಪಣೆಯ ಕಾರ್ಯದಲ್ಲಿ ಶ್ರಮಿಸಿದವನು ಈಗ ನಾನೊಬ್ಬನೇ ಅಲ್ಲ. ನನ್ನ ಅರ್ಧಾಂಗಿ ಶ್ರೀಮತಿ ಗಿರಿಜೆಯಪಾಲೂ ಈ ಕಾರ್ಯದಲ್ಲಿ ನನಗಿಂತಲೂ ಮಿಗಿಲಾದುದು ಎಂದರೆ, ಅದು ಅತಿಶಯೋಕ್ತಿಯಲ್ಲ. ಮನೆಗೆಲಸದ ದಿನನಿತ್ಯದ ಕಾಯಕವನ್ನು ನಿರ್ವಹಿಸುವುದರೊಂದಿಗೆ ಈ ಸಾಧ್ವಿಯು ಅಕ್ಷರಶಃ ಹಗಲಿರುಳೂ ಶ್ರಮಿಸಿ, ೨೫ ಅಧ್ಯಾಯಗಳ ಸ್ತಂಭಕಾವ್ಯರೂಪದ ಅಂತರ್ಸಾಹಿತ್ಯವನ್ನು ಒಂದೊಂದೇ ಅಕ್ಷರವಾಗಿ ಬಿಡಿಸಿ; ಜೋಡಿಸಿಕೊಟ್ಟು, ಪರಿಚಯ ಕೃತಿ ನಿರೂಪಣೆಯ ಕಾರ್ಯದಲ್ಲಿ ನೆರವಾದುದು ನಿಜಕ್ಕೂ ಶ್ಲಾಘನೀಯವಾದ ಕಾರ್ಯ. ಈ ನಿರೂಪಣೆಯಲ್ಲಿ ಸುಧಾರ್ಥಿಯ ಶ್ರಮಕ್ಕೆ ಸರಿಮಿಗಿಲಾಗಿ ಗಿರಿಜೆಯೂ ಪಾಲುದಾರಳೆಂದು ಸಂಕೋಚವಿಲ್ಲದೇ ಸಂತೋಷದಿಂದ ಸೂಚಿಸುತ್ತಿದ್ದೇನೆ. ಆದರೆ ಒಂದೇ ಒಂದು ಪ್ರಮುಖ ಕೊರತೆ. ನನ್ನಂತೆಯೇ ಈಕೆಗೂ ವಿಶ್ವವಿದ್ಯಾಲಯದ ಶಿಕ್ಷಣಾರ್ಹತೆಯ ಮುದ್ರೆ ಇಲ್ಲ!.
ಸಿರಿಭೂವಲಯಸಾರವನ್ನು ನೋಡಿದ, ಓದಿದ ಕೆಲವು ಅಭಿಮಾನಿಗಳು ನನ್ನ ಬರವಣಿಗೆಯ ವಿಚಾರವಾಗಿ ಮೆಚ್ಚುಗೆಯ ಮಾತುಗಳನ್ನು ಸೂಚಿಸಿರುವುದಿದೆ. ಅಲ್ಲಿನ ವಿಷಯವ್ಯಪ್ತಿಯನ್ನು ಗಮನಿಸಿದ ಕೆಲವರು ನೀವು ಎಷ್ಟೊಂದು ಕಷ್ಟಪಟ್ಟು ಈ ಗ್ರಂಥ ರಚಿಸಿದ್ದೀರಿ ಎಂದಿರುವುದಿದೆ. ಇನ್ನು ಕೆಲವರು ನೀವಾಗುವ ಹೊತ್ತಿಗೆ ಈ ಗ್ರಂಥ ರಚಿಸಿದ್ದೀರಿ, ನಮಗೆ ಸಾಧ್ಯವಿಲ್ಲ ಎಂದಿರುವುದುಂಟು. ಮತ್ತೆ ಕೆಲವರು ಕಾಲೇಜು ಶಿಕ್ಷಣವೂ ಇಲ್ಲದ ಈ ಮನುಷ್ಯ ಇದನ್ನು ಹೇಗೆ ಬರೆದ?! ಎಂದು ಅಚ್ಚರಿಪಟ್ಟಿರುವುದಿದೆ. ಆತ್ಮೀಯ ಗೆಳೆಯ ಶ್ರೀ ಹೆಚ್.ಎಂ ಸದಾನಂದ ಅವರಂತೂ ಸುಧಾರ್ಥಿಯನ್ನು ಬಿಟ್ಟರೆ ಬೆರೆ ಯಾರೂ ಈ ಪರಿಚಯಗ್ರಂಥಗಳನ್ನು ಇಷ್ಟು ಶ್ರಮವಹಿಸಿ, ಇಷ್ಟು ಸಮರ್ಪಕವಾಗಿ ರೂಪಿಸಲು ಸಾಧ್ಯವೇ ಇಲ್ಲ ಎಂದು ಮೆಚ್ಚುಗೆ ಸೂಚಿಸಿರುವುದಿದೆ. ಇವರೆಲ್ಲರ ಅಂತರಂಗದ ಭಾವನೆಯನ್ನೂ ಸುಧಾರ್ಥಿಯು ಅರ್ಥಮಾಡಿಕೊಳ್ಳಬಲ್ಲ. ಸರಿಯಾದ ವಿಳಾಸವಿದ್ದರೂ ಕೆಲವೆಡೆ ನಮಗೆ ಬೇಕಾದವರ ಮನೆಯನ್ನು ಹುಡುಕುವುದು ಶ್ರಮದ ಕೆಲಸ. ಕಾಡಿನಲ್ಲಿಓಡಾಡಿ ಅನುಭವವಿಲ್ಲದವರು ಅಲ್ಲಿ ಒಳಗೆಸೇರಿದರೆ, ಸುರಕ್ಷಿತವಾಗಿ ಹೊರಬರುವುದು ಬಹಳ ಕಷ್ಟ. ಆದರೂ ಈ ಸಿರಿಭೂವಲಯದ ಕೆಲಸ ಸುಧಾರ್ಥಿಗೆ ಬಹಳ ಇಷ್ಟ!
ಈ ಸಿರಿಭೂವಲಯದ ಸಾಗರದಲ್ಲಿ ಸುಳಿವು ಸಿಗದಂತೆ ಒಳಗೆ ಅಡಗಿಕುಳಿತ ಒಂದೊಂದೇ ಅಕ್ಷರದ ಜಾಡನ್ನು ಹಿಡಿದು ಅವುಗಳನ್ನು ಒಂದೆಡೆ ಕಲೆಹಾಕಿ, ಅವುಗಳನ್ನು ವಿಂಗಡಿಸಿ, ಅರ್ಥಪೂರ್ಣವಾಗಿ ಸರಳವಾಗಿ ಪರಿಚಯಿಸುವ ಕಾರ್ಯವು ಸುಲಭವಾದುದಲ್ಲ; ನಿಜ. ಆದರೆ ಆಸಕ್ತಿಯಿದ್ದು, ಇಚ್ಛಾಶಕ್ತಿಯನ್ನು ಹೊಂದಿ, ಕ್ರಿಯಾಶಕ್ತಿಯನ್ನು ಸೂಕ್ತವಾಗಿ ಬಳಸಿಕೊಳ್ಳುವ ಜ್ಞಾನಶಕ್ತಿ ಉಳ್ಳವರಾದರೆ, ಅವರು ಸುಧಾರ್ಥಿಗಿಂತಲೂ ಸಾಮಾನ್ಯವ್ಯಕ್ತಿಗಳಾಗಿದ್ದರೂ, ಒಬ್ಬಿರಲ್ಲ; ಹಲವಾರು ಜನಗಳು ಈ ಸಾಧನೆಯನ್ನು ಸಾಧಿಸಬಲ್ಲರೆಂಬ ನಂಬಿಕೆ ಸುಧಾರ್ಥಿಗಿದೆ. ಇದುವರೆವಿಗೂ ಯಾರೊಬ್ಬರೂ ಸೂಕ್ತವಾಗಿ ಕೈಹಾಕದೇ ಇದ್ದ ಕೆಲಸಕ್ಕೆ ಈಗ ಸುಧಾರ್ಥಿಯು ಕೈಹಾಕಿ ಸಾಧ್ಯವಿವಷ್ಟು ಸಾಧನೆ ಮಾಡಿದ್ದಾಗಿದೆ. ಇಲ್ಲವಾಗಿದ್ದರೆ, ಇನ್ನಾರಾದರೂ ಈ ಕೆಲಸಕ್ಕೆ ಕೈಹಾಕಿ ಯಶಸ್ಸು ಪಡೆಯುತ್ತಿದ್ದುದು ಖಚಿತ. ಪ್ರಕೃತ ಸುಧಾರ್ಥಿಯು ಈ ಕಾರ್ಯಕ್ಕೆ ನಿಮಿತ್ತಮಾತ್ರವೇ ವಿನಃ, ಅವನಿಲ್ಲದಿದ್ದರೆ ಇದು ಸಾಧ್ಯವೇ ಆಗುತ್ತಿರಲಿಲ್ಲ ಎಂಬ ಭಾವನೆಯು ಸರ್ವಥಾ ಸಲ್ಲದು. ಈಗಲೂ ಅಷ್ಟೇ, ಸುಧಾರ್ಥಿಯ ಕಾಲಮುಗಿದಕೂಡಲೇ ಬೇರೊಬ್ಬರು ಈ ಕಾರ್ಯವನ್ನು ಮುಂದುವರೆಸಲೇಬೇಕು. ಮುಂದುವರೆಸುತ್ತಾರೆ. ಶ್ರೀಕಂಠಯ್ಯನವರಿಗೆ ಅಕ್ಷರಭೂವಲಯದ ಮಾರ್ಗದರ್ಶನವಿದ್ದಂತೆ; ಕೆ. ಅನಂತಸುಬ್ಬರಾಯರಿಗೆ ಶ್ರೀಕಂಠಯ್ಯನವರ ಮಾರ್ಗದರ್ಶನವಿದ್ದಂತೆ, ಸುಧಾರ್ಥಿಗೆ ಅನಂತಸುಬ್ಬರಾಯರ ಮಾರ್ಗದರ್ಶನವಿದ್ದಂತೆ, ಸುಧಾರ್ಥಿಯ ಕೃತಿಗಳು ಮುಂದಿನವರಿಗೆ ದಿಕ್ಸೂಚಿಯಾಗಿ, ಅವರು ಇನ್ನಷ್ಟು ಹೆಚ್ಚಿನ ಸಾಧನೆ ಸಾಧಿಸಲೆಂದು ನಾನು ಆಶಿಸುತ್ತೇನೆ.
೧೯೫೩ ರಲ್ಲಿ ಸರ್ವಾರ್ಥಸಿದ್ಧಿಸಂಘವು ಸಿರಿಭೂವಲಯದ ಅಕ್ಷರ ಅವತರಣಿಕೆಯನ್ನು ರೂಪಿಸಿದಾಗ, ಕರ್ಲಮಂಗಲಂ ಶ್ರೀಕಂಠಯ್ಯನವರ ಅಪಾರ ವಿದ್ವತ್ತು ಹಾಗೂ ಯುಗಾಂತರ ಮುದ್ರಣಾಲಯದವರ ತಾಳ್ಮೆ, ಶ್ರದ್ಧೆ ಹಾಗೂ ಕೌಶಲ್ಯದ ಪರಿಣಾಮವಾಗಿ ಮೂಲಸಾಹಿತ್ಯದಲ್ಲಿ ಸಂಸ್ಕೃತ; ಪ್ರಾಕೃತ ಇತ್ಯಾದಿ ಅನ್ಯ ಭಾಷೆಗಳ ಸಾಹಿತ್ಯವನ್ನು ಗುರುತಿಸಲು ಓದುಗರಿಗೆ ಸುಲಭವಾಗುವಂತೆ ಹಲವಾರು ಲೇಖನ ಚಿಹ್ನೆಗಳನ್ನು ಬಳಸಿ, ಬಹಳ ಸುಂದರವಾಗಿ ಮದ್ರಣಮಾಡಲಾಗಿದೆ. ನನಗೆ ಆಮಟ್ಟದ ಸಮರ್ಥ್ಯವಿಲ್ಲ. ಈ ನನಗೆ ಸಾಧ್ಯವಾದಮಟ್ಟಿಗೆ ಮೂಲಸಾಹಿತ್ಯದ ವಿನ್ಯಾಸವನ್ನು ರೂಪಿಸಿದ್ದೇನೆ. ಸಮರ್ಥರಾದ ಮುಂದಿನ ಆಸಕ್ತ ಸಂಶೋಧಕರು ಈ ನ್ಯೂನತೆಯನ್ನು ಪರಿಷ್ಕರಿಸಬೇಕಾಗಿ ವಿನಂತಿ.
ಸಿರಿಭೂವಲಯವನ್ನು ಕುರಿತು ಕನ್ನಡ ನಾಡಿನಲ್ಲೇ ಸಾಕಷ್ಟು ಅನಾದರಣೆಯಿರುವುದು ವಾಸ್ತವ ವಿಚಾರ. ವಿಶ್ವವಿದ್ಯಾಲಯಗಳೂ ಈ ಅಚ್ಚರಿಯ ಕೃತಿಯಿಂದ ದೂರವುಳಿದಿವೆ. ಇಂಥ ಪರಿಸರದಲ್ಲಿ ಹಂಪಿಯ ಕನ್ನಡವಿಶ್ವವಿದ್ಯಾಲಯದವರು ಈ ವಿಚಾರದಲ್ಲಿ ಈಚೆಗೆ ಆಸಕ್ತಿವಹಿಸಿರುವುದು ಸಂತೋಷದ ಸಂಗತಿಯಾಗಿದೆ. ಇಲ್ಲಿನ ಆಡಳಿಯವು ಸಿರಿಭೂವಲಯ ಕುರಿತು ಮಹಾಪ್ರಬಂಧ ರಚಿಸುವವರಿಗೆ ಸೂಕ್ತ ಅವಕಾಶಕಲ್ಪಿಸಿರುವುದು ಹೆಮ್ಮೆಯ ವಿಚರ. ಉಳಿದೆಲ್ಲ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗವೂ ಇತ್ತ ಗಮನ ಹರಿಸಿ, ಸಿರಿಭೂವಲಯದ ಅಧ್ಯಯನವನ್ನು ತಮ್ಮ ಪಠ್ಯಕ್ರಮದಲ್ಲಿ ಅಳವಡಿಸುವತ್ತ ಗಮನ ಹರಿಸಿದರೆ, ಮುಂದಾದರೂ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಸಿರಿಭೂವಲಯದ ವ್ಯಾಪಕವಾದ ಅಧ್ಯಯನಕ್ಕೆ ಅವಕಾಶ ಲಭಿಸಲು ಸಾಧ್ಯವಾದೀತು.
ಈ ಪರಿಚಯಕೃತಿಯ ರಚನೆಯಲ್ಲಿ ನೆರವಾದವರಿಗೆ ಕೃತಜ್ಞತೆಯನ್ನರ್ಪಿಸುವುದು ಕೃತಿಕರ್ತೃವಿನ ಆದ್ಯಕರ್ತವ್ಯ. ಈ ದಿಸೆಯಲ್ಲಿ ನಾನು ಕೃತಜ್ಞತೆ ಸೂಚಿಬೇಕಾದುದು ನನ್ನ ಈ ಪ್ರತ್ನಕ್ಕೆ ಮೂಲಕರಣರಾಗಿ, ನನಗೆ ಸಿರಿಭೂವಲಯದ ಮೂಲಕೃತಿಯ ಝೆರಾಕ್ಸ್ ಪ್ರತಿಯನ್ನು ಅನಿರೀಕಿತವಾಗಿ, ಅಯಾಚಿತವಾಗಿ ತಂದು ತಲುಪಿಸಿದ ಅಪರಿಚಿತ ಮಿತ್ರರೊಬ್ಬರಿಗೆ. -ಅವರು ಅಪರಿಚಿತರಾಗಿಯೇ ಉಳಿಯುವಂತಾದುದು ನನಗೆ ಖೇದದ ಸಂಗತಿಯಾದರೂ- ನನ್ನ ಈ ಪ್ರಯತ್ನಕ್ಕೆ ಮೂಲಕಾರಣರಾದ ಅವರಿಗೆ ನನ್ನ ಹೃದಯಪೂರ್ವಕ ನಮನಗಳನ್ನರ್ಪಿಸುತ್ತಿದ್ದೇನೆ.
ಈ ಅಪರಿಚಿತ ಮಿತ್ರನಿಂದ ದೊರೆತ ಅಸಮರ್ಪಕವಾದ ಪ್ರತಿಯನ್ನು ಸುವ್ಯವಸ್ಥಿತಗೊಳಿಸುವಲ್ಲಿ ನೆರವಾಗುವುದರೊಂದಿಗೆ, ತಮ್ಮ ಸಂಶೋಧನಾ ಪ್ರಬಂಧ ರಚನೆಗಾಗಿ, ತಾವು ಅಧಿಕೃತವಾಗಿ ನಿಗಧಿತ ಶುಲ್ಕತೆತ್ತು ದೆಹಲಿಯ ಪಾಚ್ಯಪತ್ರಾಗಾರದಿಂದ ಸಂಗ್ರಹಿದ ಸಿರಿಭೂವಲಯದ ಮೂಲಪ್ರತಿಯ ಝೆರಾಕ್ಸ್ ನಕಲನ್ನು ನನ್ನ ಪರಿಶೀಲನೆಯ ಕಾರ್ಯಕ್ಕೆ ಕೆಲವು ಸಮಯ ಎರವಲು ನೀಡಿದ ಆತ್ಮೀಯ ಮಿತ್ರ ಶ್ರೀ ಎಚ್. ಎಂ. ಸದಾನಂದರಿಗೆ, ತಾವು ಇಂದೂರಿನ ಕುಂದ ಕುಂದ ಜ್ಞಾನಪೀಠದ ಪದಾಧಿಕಾರಿಗಳಿಂದ ಪಡೆದು ತಂದ ಸಿರಿಭೂವಲಯದ ಅಕ್ಷರಪ್ರತಿ ಹಾಗೂ ಅಂಕಪ್ರತಿಯನ್ನು ನನ್ನ ಪರಿಶೀಲನೆಗೆ ಒದಗಿಸುವ ಮೂಲಕ ಈ ಮಹತ್ಕಾರ್ಯಕ್ಕೆ ನೆರವಾದ ಹಿರಿಯ ಮಿತ್ರ, ವೇದಗಣಿತ ತಜ್ಞ ಶ್ರೀ ಎಂ.ಕೆ. ಶಿವಪ್ಪನವರಿಗೆ, ಎಂದಿನಂತೆ ಇಂದಿಗೂ ನನ್ನ ಈ ಸಾಹಿತ್ಯಿಕ ಸಾಧನೆಯ ಆರ್ಥಿಕ ಸಾಮಥಕ್ಕೆ ಸಹಕಾರಿಯಾಗಿರುವ ಆತ್ಮೀಯ ಮಿತ್ರ ಶ್ರೀ ಯತಿರಾಜುಲುನಾಯ್ಡು ಹಾಗೂ ಅವರ ಕುಟುಂಬಕ್ಕೆ ನನ್ನ ಅನಂತ ವಂದನೆಗಳು.
ಹಿರಿಯಮಿತ್ರ ಶ್ರೀ ವೆಂಕಟರಮಣಯ್ಯನವರಿಗೆ; ಬೆಳಗಾವಿಯ ಶ್ರೀ ಧರಣೇಂದ್ರಕುಮಾರ್, ಹಾಗೂ ಪತ್ರಿಕೋದ್ಯೋಗಿ ಮಿತ್ರರು- ಮೂಲತಃ ವಕೀಲರಾದ ಗೆಳೆಯ ಶ್ರೀ ಎಂ.ವಿ.ಆರ್. ಅವರಿಗೆ, ವೈದ್ಯರೂ ಬರಹಗಾರರೂ ಆದ ಡಾ|| ಪ್ರದೀಪಕುಮಾರ್ ಹೆಬ್ರಿ ಅವರಿಗೆ, ಶ್ರೀ ಡಿ. ಎನ್. ಅಕ್ಕಿ ಮಾಸ್ತರಿಗೆ, ಕೊಕ್ಕರಣೆ ಅರಮನೆಯ ಶ್ರೀ ಗುಣವರ್ಮರಾಜಾ ಅವರಿಗೆ, ಬೆಳಗಾವಿಯ ಭರತೇಶ ಶಿಕ್ಷಣ ಸಮೂಹದ ಪದಾಧಿಕಾರಿಗಳಿಗೆ, ಶ್ರೀ ಹರಿಹರಪುರ ಶ್ರೀಧರ್ ಅವರಿಗೆ; ಶ್ರೀ ಹೆಚ್. ಎಸ್. ಪ್ರಭಾಕರ್ ಅವರಿಗೆ; ಮಾಧ್ಯಮದ ಮಿತ್ರರೆಲ್ಲರಿಗೆ; ನನ್ನ ಬರಹದ ವಿಚಾರದಲ್ಲಿ ಅದರಲ್ಲೂ ಸಿರಿಭೂವಲಯಕ್ಕೆ ಸಂಬಂಧಿಸಿದ ಪರಿಚಯಗ್ರಂಥಗಳ ವಿಚಾರದಲ್ಲಿ ಆಸಕ್ತಿವಹಿಸಿ, ಅದರ ಪ್ರಚಾರಕ್ಕೆ ನೆರವಾಗಿರುವ ನೂರಾರು ಅಭಿಮಾನಿಗಳಿಗೆನನ್ನ ಕೃತಜ್ಞತೆಗಳು.
ಸಿರಿಭೂವಲಯಸಾರದಲ್ಲಿ ಪ್ರಥಮ ಖಂಡದ ೧ ರಿಂದ ೩೩ ಅಧ್ಯಾಯಗಳ ಅಂತರ್ಸಹಿತ್ಯ ಹಾಗೂ ಅದಕ್ಕೆ ಪೂರಕವಾದ ಕೆಲವರು ಮಾಹಿತಿಗಳನ್ನು ಅಳವಡಿಸಲಾಗಿತ್ತು. ಇದರ ಮುಂದುವರೆದ ಭಾಗವಾಗಿ ಸಿರಿಭೂವಲಯಸಾರ ೨ ಎಂಬ ಹೆಸರಿನಿಂದ ೩೪ ರಿಂದ ೫೯ನೇ ಅಧ್ಯಾಯದ ವರೆಗಿನ ಮೂಲಸಾಹಿತ್ಯ, ಅವುಗಳ ಅಂತರ್ಸಾಹಿತ್ಯ ಹಾಗೂ ಪೂರಕವಾದ ಕೆಲವಾರು ಮಾಹಿತಿಗಳನ್ನು ನಿರೂಪಿಸಿ, ಪ್ರಕಟಿಸುವ ನಿರ್ಧಾರವಾಗಿತ್ತು. ವಿವಿಧ ಮೂಲಗಳಿಂದ ಲಭ್ಯವಾದ ಮೂಲಸಾಹಿತ್ಯದ ಝೆರಾಕ್ಸ್ ಪ್ರತಿಗಳನ್ನು ಪರಸ್ಪರ ತಾಳೆನೋಡಿ, ಅಲ್ಲಿನ ವ್ಯತ್ಯಾಸಗಳನ್ನು ಸಾಧ್ಯವಿರುವಷ್ಟು ಸಮರ್ಪಕವಾಗಿ ಸರಿಪಡಿಸಿಕೊಂಡು, ಮೂಲಸಾಹಿತ್ಯವನ್ನು ರೂಪಿಸಿಕೊಳ್ಳುವುದೇ ಸಾಕಷ್ಟು ಸಮಯವನ್ನು ತೆಗೆದುಕೊಂಡಿತು. ಉಳಿದ ವಿಚಾರಗಳ ಸೂಕ್ತ ನಿರ್ವಹಣೆ ಇತ್ಯಾದಿಗಳಿಂದಾಗಿ, ನಿಗದಿತ ಗುರಿಯನ್ನು ಕ್ಲುಪ್ತಕಾಲವಧಿಯಲ್ಲಿ ಮಾಡಿ ಮುಗಿಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ೩೪ ರಿಂದ ೫೦ನೇ ಅಧ್ಯಾಯದ ವರೆವಿಗೆ ಮಾತ್ರರವೇ ಮೂಲಸಾಹಿತ್ಯ ಹಾಗೂ ಸಂಬಂಧಿಸಿದ ಅಂತರ್ಸಾಹಿತ್ಯವನ್ನು ನಿರೂಪಿಸಿ ಪ್ರಕಟಿಸಲು ಸಾಧ್ಯವಾಯಿತು. ಪ್ರಥಮ ಖಂಡದ ಉಳಿದ ಅಧ್ಯಾಯಗಳು ಹಾಗೂ ಮುಂದಿನ ಅಪಾರ ಸಾಹಿತ್ಯಸಾಗರದ ಮೂಲಸಾಹಿತ್ಯ ಹಾಗೂ ಅದಕ್ಕೆ ಸಂಬಂಧಿಸಿದ ಅಂತರ್ಸಾಹಿತ್ಯ ಮತ್ತು ಇತರ ಮಾಹಿತಿಗಳನ್ನು ಪರಿಚಯಿಸಿ, ಪ್ರಕಟಿಸುವ ನಿರ್ಧಾರವಿದೆ. ನನ್ನ ಶ್ರೀಮತಿಯ ನಿರ್ಧಾರದಂತೆ ಈ ಪರಿಚಯ ಕೃತಿಗೆ ಸಿರಿಭೂವಲಯಸಾಗರರತ್ನಮಂಜೂಷ ಎಂದು ನಾಮಕರಣ ಮಾಡಲಾಯಿತು. ಮಕ್ಕಳನ್ನು ಹೆತ್ತವಳು ತಾಯಿಯಾದರೂ ಹೆಸರಿಡುವವರು ಬೇರೆಯವರೇ ತಾನೆ!
ತಂದೆಯಮಾತಿಗೆ ಪ್ರತಿಯಾಡದೇ ತಾಯಿಯ ಶಿರವನ್ನೇ ತರಿದೊಗೆದ ಕೊಡಲಿಯಾಯುಧನ (ಪರಶುರಾಮನ) ತಂದೆಯಗೋತ್ರದಲ್ಲಿ ಜನಿಸಿದ ಈ ಮುಂಗೋಪಿ ಗಂಡನ ಕೈಹಿಡಿದಂದಿನಿಂದಲೂ ನೆರಳಿನಂತೆ ಸಹಚರಳಾಗಿದ್ದು, ಮಾತೃಸ್ವರೂಪಳಾಗಿ ಇಲ್ಲಿಯವರೆವಿಗೂ ನನ್ನನ್ನು ತಾಳ್ಮೆಯಿಂದ ಸಹಿಸಿರುವುದರೊಂದಿಗೆ, ಈಗ ಸಿರಿಭೂವಲಯದ ಅಂತರ್ಸಾಹಿತ್ಯದ ಅಕ್ಷರಸರಪಣಿಯನ್ನು ಹೊರತೆಗೆಯುವಲ್ಲಿ ನನಗಿಂತ ಹೆಚ್ಚು ಉತ್ಸಾಹದಿಂದ ಮುನ್ನುಗ್ಗಿ, ಈ ಕೃತಿರಚನೆಯಲ್ಲಿ ನನಗೆ ನೆರವು ನೀಡಿದ್ದು ಮಾತ್ರವಲ್ಲ; ಇದನ್ನು ಪ್ರಕಟಿಸುವ ಗುರುತರವಾದ ಹೊಣೆಯನ್ನು ಅಕ್ಷರಶಃ ಶ್ರಮವಹಿಸಿ ನಿರ್ವಹಿಸಿರುವ ನನ್ನ ಶ್ರೀಮತಿ ಗಿರಿಜೆಗೂ, ಈ ಯಜ್ಞದ ಫಲವನ್ನು ಆತ್ಮೀಯತೆಯಿಂದ ಸ್ವೀಕರಿಸಿ ನಮಗೆ ಸಾರ್ಥಕತೆಯನ್ನೊದಗಿಸುವ ನನ್ನ ಆತ್ಮೀಯ ಓದುಗರಿಗೂ, ಈ ಪ್ರಯತ್ನದಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ನೆರವಾಗಿರಯವ ಆತ್ಮೀಯರೆಲ್ಲರಿಗೂ ಈಮೂಲಕ ನನ್ನ ತುಂಬುಹೃದಯದ ವಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಸರ್ವಜ್ಞ ಸ್ರೂಪಿಯಾದ ಕುಮುದೇಂದು ಮುನಿಯ ಕೃಪೆಯು ಸಜ್ಜನರೆಲ್ಲರಿಗೂ ಒದಗಿಬಂದು ಈ ಕೃತಿಯ ವಾಚನದಿಂದ ಅವರು ಪಾರಮಾರ್ಥಿಕವಾಗಿ ಹೊಸಮಾನವರಾಗುವಂತಾಗಲೆಂದು ಪ್ರಾರ್ಥಿಸುತ್ತೇನೆ.
ದಿನಾಂಕ ೧೩ -೦೫- ೨೦೧೩.
ಸುಧಾರ್ಥಿ ಹಾಸನ. ಸಂಚಾರಿದೂರವಾಣಿ: ೯೪೪೯೯೪೬೨೮೦.