Friday, 9 April 2021

ವೇದ, ವೇದ. ಏನಿದನ್ನು ಕುರಿತ ವಾದ ಪ್ರತಿವಾದ; ವಿವಾದ!? (ಭಾಗ: ೪)

 

ಸಂಕಲ್ಪಮಂತ್ರ:

ಶುಭತಿಥೌ ಶೋಭನೇ ಮುಹೂರ್ತೇ ಅದ್ಯಬ್ರಹ್ಮಣಃ  ದ್ವಿತೀಯ ಪರಾರ್ಧೇ ಶ್ವೇತವರಾಹಕಲ್ಪೇ  ವೈವಸ್ವತಮನ್ವಂತರೇ ಅಷ್ಟಾವಿಂಶತಿತಮೇ ಕಲಿಯುಗೇ ಪ್ರಥಮಪಾದೇ  ಜಂಬೂದ್ವೀಪೇ  ಭರತವರ್ಷೇ ಭರತಖಂಡೇ  ದಂಡಕಾರಣ್ಯೇ ಗೋದಾವರ್ಯಾಃ ದಕ್ಷಿಣೇ ತೀರೇ  ಶಾಲಿವಾಹನಶಕೇ  ಬೌದ್ಧಾವತಾರೆ  ರಾಮಕ್ಷೇತ್ರೇ  ಅಸ್ಮಿನ್ ವರ್ತಮಾನೇ  ಚಾಂದ್ರಮಾನೇನ  ಪ್ರಭವಾದಿ ಷಷ್ಠಿ ಸಂವತ್ಸರಾಣಾಂ  ಮಧ್ಯೇ .... ಸಂವತ್ಸರೇ  ...... ಅಯನೇ  ...ಋತೌ ..... ಪಕ್ಷೇ.... ಶುಭ ತಿಥೌ ...(ತಿಥಿ) ....ವಾಸರಯುಕ್ತಾಯಾಂ... ಶುಭನಕ್ಷತ್ರ ಶುಭಕರಣ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ಮಮ ಉಪಾತ್ತ ಸಮಸ್ತದುರಿತಕ್ಷಯದ್ವಾರಾ ಶರೀರ ಶುದ್ಧ್ಯರ್ಥಂ ಭಸ್ಮಧಾರಣಮಹಂ ಕರಿಷ್ಯೇ||

ಎಂದು ಸಂಕಲ್ಪಮಾಡುವ ಕ್ರಮವಿದೆ. ಇದರ ಆಧಾರದಲ್ಲಿ ನಾವು ಇದುವರೆವಿಗೂ ಆಗಿಹೋಗಿರುವ ಕಲ್ಪ, ಮನ್ವಂತರ, ಎಷ್ಟನೇ ಚತುರ್ಯುಗ ಇತ್ಯಾದಿಗಳನ್ನು ಸ್ಮರಿಸುವುದರಿಂದ ಮತ್ತು ಕ್ರಿಯೆಯು ನಡೆಯುವ ಸ್ಥಳದ ಪರಿಚಯ (ವಿಳಾಸ) ನೀಡುವುದರೊಂದಿಗೆ,  ಗೋತ್ರ, ಸೂತ್ರ ಸಹಿತವಾದ ಪ್ರವರವನ್ನು  ಸೂಚಿಸುವುದರಿಂದ   ಸಂಬಂಧಿಸಿದ ಕಾರ್ಯ ನಡೆಸುತ್ತಿರುವವರು ಯಾರೆಂಬುದು ಖಚಿತವಾಗುತ್ತದೆ.   ಇಂಥದೊಂದು ಅನೂಹ್ಯವಾದ ಸಂಪ್ರದಾಯ ರುವುದರಿಂದ ನಾವು  ಅತ್ಯಂತ ಪ್ರಾಚೀನ ಕಾಲದ ಮಾಹಿತಿಯನ್ನು ಸುಲಭವಾಗಿ ತಿಳಿಯಲು ಸಾಧ್ಯವಾಗಿದೆ.  ಇಂಥ ಧಾರ್ಮಿಕ ಕ್ರಿಯೆಗಳು ಬ್ರಾಹ್ಮಣಸಮುದಾಯದಲ್ಲಿ ತಪ್ಪದೇ ನಡೆಯುವವರೆವಿಗೂ ಇಂಥ ಮಾಹಿತಿಗಳ ಖಚಿತವಾದ ವಿವರಗಳು ದೊರೆಯುತ್ತವೆ. ಈ ಬ್ರಾಹ್ಮಣಸಮುದಾಯವು ತನ್ನ ದೈನಂದಿನ ಧಾರ್ಮಿಕಕ್ರಿಯೆಗಳಲ್ಲಿ ಲೋಪವೆಸಗಿದಾಗ ಇಂಥ ಮಾಹಿತಿಗಳೂ ಕಣ್ಮರೆಯಾಗಿ  ಸಮಾಜದ ಎಲ್ಲ ಸದಸ್ಯರಲ್ಲೂ ಸಮಾನತೆಯು ನೆಲೆಸಿ, ವೇದವಿರೂಧಿ ಜೀವನಕ್ಕೆ ಹಾದಿ ಸುಗಮವಾಗುತ್ತದೆ!

ಕಾಲಗಣನೆಯ ಪ್ರಮಾಣವನ್ನು ಲೆಕ್ಕಹಾಕುವಲ್ಲಿ  ಅದರ ಸ್ಥಾನವನ್ನು ಏಕ, ದಶಕ,  ಶತಕ, ಸಾವಿರ, ದಶಸಾವಿರ, ಲಕ್ಷ,  ದಶಲಕ್ಷ, ಕೋಟಿ ಇತ್ಯಾದಿಯಾಗಿ ಪರಿಗಣಿಸಲಾಗಿದೆ. ಕೋಟಿಯಲ್ಲಿ ಎಂಟು ಸ್ಥಾನಗಳಿರುತ್ತವೆ.  ಅಲ್ಲಿಂದ ಮುಂದಕ್ಕೆ  ಅರ್ಬುದ, ಪದ್ಮ, ಖರ್ವ, ನಿಖರ್ವ, ಬೃಂದ,  ಮಹಾಪದ್ಮ, ಶಂಖ, ಮಹಾಶಂಖ, ಸಮುದ್ರ, ಮಹಾಸಮುದ್ರ, ಮಧ್ಯಮ,  ಪರಾರ್ಧಮ್,  ಪರಾ ಎಂಬುದಾಗಿ  ೨೦ ಸ್ಥಾನಗಳ ವರೆವಿಗೆ  ಅವುಗಳನ್ನು ನಿರ್ಧರಿಸಲಾಗಿದೆ.  ಇವುಗಳನ್ನು ಕಾಲಮಾಪನಕ್ಕೆ ಅನ್ವಯಿಸಿದಾಗ, ಪರಾ ಎಂಬುದು ಸರ್ವಶಕ್ತವಾದ ಪರಬ್ರಹ್ಮನ್ ಎಂಬುದು  ಒಮ್ಮೆ ತನ್ನಕಣ್ಣರೆಪ್ಪೆಯನ್ನು ಮುಚ್ಚಿ ತೆರೆಯುವಷ್ಟು ಕಲಾವಧಿ ಎಂಬ ವಿವರಣೆ ಇದೆ.   ( ಪರಬ್ರಹ್ಮನ್ ಎಂಬುದಕ್ಕೆ ಕಣ್ಣು ಕಿವಿ ಮೂಗುಗಳಿಲ್ಲವೇದು ಹೇಳಿದಮೇಲೆ ಅದು ಕಣ್ಣು ಮುಚ್ಚಿ ತೆರೆಯುವಷ್ಟು ಕಾಲವಧಿಯು ಪರಎಂದು ಸೂಚಿಸುವುದು ವಿರೋಧವಲ್ಲವೇ? ಎಂದು ವಾದಿಸಬೇಡಿ! ಪರಬ್ರಹ್ಮನ್ ಎಂಬುದರ ಗಾತ್ರವನ್ನು ಅಳೆಯಲಾಗದೆಂಬ ವಿವರಣೆಯಿದ್ದರೂ,  ಅಷ್ಟು ಊಹಾತೀತವಾದ ಬೃಹದ್ದೇಹದ ಕಣ್ಣುಗಳು ಎಷ್ಟು ವಿಶಾಲವಾಗಿರಬಹುದೆಂಬ ಕಲ್ಪನೆಯು ಸಾಕಾರಕ್ಕೆ  ಸಿಗಲೆಂದೂ, ಅದು ಒಮ್ಮೆ ಕಣ್ಣು ರೆಪ್ಪೆಯನ್ನು ಮುಚ್ಚಿ ತೆರೆಯುವಲ್ಲಿ ಕಳೆದು ಹೋಗುವ ಸಮಯದ ಅವಧಿಯು ಕಲ್ಪನೆಗೆ ಸಿಗುವುದೆಂಬ  ಉದ್ದೇಶದಿಂದ ಈ  ಅರ್ಥ ವಿವರಣೆಯನ್ನು ನೀಡಲಾಗಿದೆ!!) ಈ ಅಗಾಧ ಕಾಲಾವಧಿಯನ್ನು ಕಲ್ಪ,  ಮನ್ವಂತರ; ಎಂಬುದಾಗಿ ವಿಂಗಡಿಸಲಾಗಿದೆ.  ಕೃತ,  ತ್ರೇತಾ, ದ್ವಾಪರ, ಕಲಿ ಎಂಬ ನಾಲ್ಕು ಯುಗಗಳು.  ಇವುಗಳ ಒಟ್ಟು ಕಾಲಾವಧಿಯಾದ  ೩೪೬೨೦೦ ವರ್ಷಗಳು. ಇಂಥ ೭೧ ಚತುರ್ಯುಗದ ಅವಧಿಯಾದ ೨೯ಕೋಟಿವರ್ಷಗಳ ಮನ್ವಂತರ,  ಇಂಥ ೨೮ ಮನ್ವಂತರಗಳ ಅವಧಿಯ ಒಂದು ದಿನವನ್ನು ಹೊಂದಿದ ಕಲ್ಪದ ಬ್ರಹ್ಮ. ಇವನಿಗಿಂತ  ದೀರ್ಘಕಾಲವಧಿಯ ಜೀವನಹೊಂದಿದ ಹಿರಣ್ಯಗರ್ಭ ಬ್ರಹ್ಮ,  ಲೆಕ್ಕವಿಲ್ಲಷ್ಟು ಜನ ಇಂಥ ಹಿರಣ್ಯಗರ್ಭ ಬ್ರಹ್ಮರ ಜೀವಿತಕ್ಕೆ ಸಾಕ್ಷಿಯಾಗಿರುವ ಪರಬ್ರಹ್ಮನ್ ; ಅಳೆಯಲಾಗದ ಕಾಲಾವಧಿಯ  ಈ ಪರಬ್ರಹ್ಮನ್ ನ ಜೀವಿತಾವಧಿ ಇತ್ಯಾದಿಗಳನ್ನು ಕುರಿತು ಯೋಚಿಸಿದಾಗ  ಈ ಮಹಾನ್ ವ್ಯವಸ್ಥೆಯ ಆಡಳಿತಕ್ರಮದಲ್ಲಿ  ನಾವು ಎಷ್ಟು ನಗಣ್ಯರೆಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ!! 

***

ಸೃಷ್ಟಿಯ ವಿವಿಧ ಹಂತಗಳ ಅಧಿಕಾರಿಗಳು:

 ಸೂಕ್ಷ್ಮವಾದ ಶರೀರವನ್ನೂ ಹೊಂದದಿರುವ ಪರಬ್ರಹ್ಮನ್ನನ್ನು ಕಲ್ಪಿಸಿಕೊಳ್ಳಲೂ ಆಗದು.. ಇವನಿಗಿಂತ ಕೆಳಹಂತದ ಶಕ್ತಿ ,ಕಲ್ಪದ ಬ್ರಹ್ಮ.  ಹಿರಣ್ಯಗರ್ಭನೆಂಬುದು. ಇವನಿಗೆ ಸೂಕ್ಷ್ಮವಾದ ಶರೀರವಿದ್ದರೂ ಅದೂಕೂಡ ಯಾರೊಬ್ಬರ ದೃಷ್ಟಿಗೆ ಗೋಚರವಾಗದ್ದು. ಅವನ ಸೂಕ್ಷ್ಮಶರೀರವು  ಸಮಷ್ಟಿ ರೂಪದ್ದು.   ಇವನಿಗಿಂತ ಕೆಳಹಂತದ ಸೃಷ್ಟಿಕರ್ತ ಮನ್ವಂತರದ  ಚತುರ್ಮುಖ  ಬ್ರಹ್ಮ. ಇವನಿಗೆ ಸ್ಥೂಲಶರೀರವಿದ್ದರೂ ಅದು ನಮ್ಮ ಕಣ್ಣಿಗೆ ಕಾಣಿಸದಿರುವಂಥದು.  ಇವನೊಂದಿಗೆ  ಸೃಷ್ಟಿಯ ವ್ಯವಸ್ಥೆಯನ್ನು ನೋಡಿಕೊಳ್ಳುವ ಅಧಿಕಾರ ಹೊಂದಿದ ವಿಷ್ಣು, ಹಾಗೂ ಸೃಷ್ಟಿಯ ಲಯದ ಅಧಿಕಾರ ಹೊಂದಿದ ಶಿವ  ಮೂವರೂ ಪ್ರಮುಖ ದೇವತಾ ಸ್ವರೂಪರು.

ಈ ಚತುರ್ಮುಖ ಬ್ರಹ್ಮನಿಗೆ  ಪ್ರಜಾಪತಿಎಂದೂ ಹೆಸರಿದೆ.  ಮನುವೆಂದೂ ಸೂಚಿಸಿರುವುದಿದೆ. ಇವನು ಸೃಷ್ಟಿಯ ಆರಂಭದಲ್ಲಿ ಮನು ಎಂಬ ಪುರುಷ ಶಕ್ತಿಯಾಗಿಯೂ; ಶತರೂಪೆ ಎಂಬ ಸ್ತ್ರೀಶಕ್ತಿಯಾಗಿಯೂ  ಪರಿವರ್ತನೆಯಾಗಿ ವಿಹರಿಸುತ್ತಾನೆ. ಶತರೂಪೆಯು ನೂರಾರು ರೂಪಗಳನ್ನು ಧರಿಸಿಬದಲಾದಂತೆ ಮನುವೂ ಅದೇ ರೂಪದ ಪುರುಷನಾಗಿ  ಬದಲಾಗುತ್ತಾನೆ. ಮುಂದೆ ಇವರ ಸಂತತಿಯು ಬೆಳೆಯುತ್ತದೆ.

 ಪ್ರತಿಯೊಂದು ಮನ್ವಂತರದಲ್ಲಿಯೂ ಅಯೋನಿಜರಾದ ಮಾನವ ಸಂತತಿಯೇ ಮೊದಲಿಗೆ   ಪ್ರಕಟವಾಗುತ್ತದೆ. ಇವರೆಲ್ಲರೂ ಬ್ರಹ್ಮನ ಮಾನಸ ಪುತ್ರರೆನಿಸುತ್ತಾರೆ.  ಇವರು ಮಹಾನ್ ಜ್ಞಾನಿಗಳೂ ಹೌದು. ಇಂದಿನ ಮಾನವ ಸಂತತಿಯು ಸ್ತ್ರೀಪುರುಷರ ಸಂಭೋಗದಿಂದ ಹೆಣ್ಣಿನ ಗರ್ಭದಲ್ಲಿ ಬೆಳೆದು, ಯೋನಿಯಮೂಲಕ ಜನನವಾಗಿ ಭೂಮಿಗೆ ಬರುವ ಕ್ರಮವಿದೆ. ಆದರೆ ಮನ್ವಂತರದ ಅಥವಾ ಕಲ್ಪಾರಂದಲ್ಲಿ ಬರುವ ಮಾನವ ಸಂತತಿಯು ಮಹಾನ್ ಪ್ರಜ್ಞಾವಂತರಾಗಿರುತ್ತಾರೆ, ಅಯೋನಿಜರಾಗಿರುತ್ತಾರೆ,  ಅಥವಾ   ಮಡಕೆ ಕುಡಿಕೆಗಳಲ್ಲಿ ಗರ್ಭಾವಸ್ತೆಯನ್ನು ಕಳೆದು,  ಹೆಣ್ಣಿನ ಯೋನಿದ್ವಾರದ ಸಂಪರ್ಕವೇ ಇಲ್ಲದೇ ನೇರವಾಗಿ ಭೂಮಿಗೆ ಬಂದವರಾಗಿರುತ್ತಾರೆ!  ಈ ಕಾರಣದಿಂದ ಅವರಿಗೆ ಅಯೋನಿಜರುಎಂದು ಸೂಚಿಸಲಾಗುತ್ತದೆ. ಇಂದಿನ ವಿಜ್ಞಾನಯುಗದಲ್ಲಿಯೂ ಪ್ರನಾಳಶಿಶುವಿನ  ಸೃಷ್ಟಿಯ ಪ್ರಯೋಗವಿದೆ! ಆದರೆ, ಆ ಶಿಶುವಿನ  ಪೂರ್ಣ ಬೆಳವಣಿಗೆಗೆ ಯಾವುದಾದರೂ ಹೆಣ್ಣಿನ ಗರ್ಭಾಶಯದ ಅಗತ್ಯವಿರುತ್ತದೆ!  ಜಗತ್ತಿನಲ್ಲಿ ಜೀವವಿಕಾಸವನ್ನು ಕುರಿತಂತೆ ಮಂಗನಿಂದ ಮಾನವಎಂಬ ಸಿದ್ಧಾಂತವು ಭಾರತಂಥ ಪ್ರಜ್ಞಾವಂತ ಭೂಮಿಯಲ್ಲಿ ಚಲಾವಣೆಯಾಗುವ ನಾಣ್ಯವಲ್ಲ!! 

ಸೃಷ್ಟಿ; ಸ್ಥಿತಿ, ಲಯಗಳ ಸಮರ್ಪಕ ನಿರ್ವಹಣೆಗಾಗಿ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ  ದೇವತಾ ವಿಶೇಷಗಳ ಜೊತೆಗೆ, ದೇವೇಂದ್ರ, ಯಮ, ಅಷ್ಟದಿಕ್ಪಾಲಕರು, ಅವರ ಪರಿವಾರ  ಮುಂತಾದ ಹಲವಾರು ದೇವತೆಗಳು ಇರುತ್ತಾರೆ.  ಇವರುಗಳೊಂದಿಗೆ,  ಮನ್ವಂತರದ ಹಾಗೂ ಕಲ್ಪದ ಸೃಷ್ಟಿ, ಸ್ಥಿತಿ,  ಪ್ರಲಯಗಳ ಉಸ್ತುವಾರಿಗೆ ಸಪ್ತರ್ಷಿಗಳ ಪರಿಷತ್ತು ಅಸ್ಥಿತ್ವದಲ್ಲಿರುತ್ತದೆ. ಇವರೆಲ್ಲರ ಮೇಲೂ ಪ್ರಭುತ್ವಹೊಂದಿದ ನಿಯತಿಯ’ (ಕಾನೂನು ದೇವತೆಯ)  ನಿಯಮಕ್ಕೆ ಅನುಗುಣವಾಗಿಯೇ ಇವರೆಲ್ಲರೂ ತಮ್ಮ ಕಾರ್ಯವನ್ನು ನಿರ್ವಹಿಸಬೇಕಿರುತ್ತದೆ! ಯಾರೊಬ್ಬರೂ ತಮ್ಮಿಚ್ಚಾನುಸಾರವಾಗಿ, ತಮಗೆ ಬೇಕಾದವರಿಗೆ  ಪುಕ್ಕಟೆಭಾಗ್ಯಗಳನ್ನುನೀಡುವ ಉದ್ಧಟತನ ತೋರಿಸುವುದಕ್ಕೆ ಅವಕಾಶವಿರುವುದಿಲ್ಲ!  ಈಗ ಅದೇ ಅಕ್ರಮವಾದ ಆಡಳಿತ ನಡೆಯುತ್ತಿದೆಯಲ್ಲಾ!? ಎಂದು ವಾದಿಸಬಹುದು. ಪ್ರಜೆಗಳಾಗಲೀ. ಪ್ರಭುವಾಗಲೀ,  ಪಾರಮಾರ್ಥಿಕವಾದ ವೇದೋಕ್ತ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ. ಉದ್ಧಟತನದಿಂದ ಉಲ್ಲಂಘಿಸಿದಲ್ಲಿ ಅದಕ್ಕೆ ಸೂಕ್ತವಾದ ಕರ್ಮಫಲವನ್ನು ಅವರು  ಅನುಭವಿಸಲೇ ಬೇಕಾದುದು ಅನಿವಾರ್ಯ!!  ದೇವತೆಗಳಿಗೂ ಅನ್ವಯವಾಗುವ ಇಂಥ ಹಲವಾರು ಪ್ರಸಂಗಗಳನ್ನು ನಾವು ಕಾಣಬಹುದು. ಇವೆಲ್ಲವೂ ಕಾಗೆ ಗೂಬೆಯ ಕಥೆಗಳ ಸ್ವರೂಪದ ಮಾಹಿತಿಗಳು. ಇವನ್ನು ನಾವು ನಂಬುವುದಿಲ್ಲವೆಂದು ಯಾರುಬೇಕಾದರೂ, ನಿರಾಕರಿಸಬಹುದು. ಅವರನ್ನು ಅಡ್ಡಿಪಡಿಸುವವರು ಯಾರೂ ಇಲ್ಲ!!

ಪ್ರತಿಯೊಂದು ಕಲ್ಪಾರಂಭದಲ್ಲಿಯೂ ಜಗತ್ತು ಹೊಸದಾಗಿ  ವಿಕಾಸಗೊಂಡು, ಕಲ್ಪಾಂತ್ಯದಲ್ಲಿ ಪ್ರಲಯದೊಂದಿಗೆ  ಮೂಲದಲ್ಲಿ ವಿಲಿನವಾಗುತ್ತದೆ.  ಪ್ರತಿಯೊಂದು ಕಲ್ಪಾರಂಭದಲ್ಲಿಯೂ  ಮಹಾ ಮೇಧಾವಿಗಳಾದ ಮಾನವರೇ ಅಯೋನಿಜರಾಗಿ ಭೂಮಿಯಲ್ಲಿ ಹುಟ್ಟುತ್ತಾರೆ.  ಅವರಿಂದ ಅವರ ಮುಂದಿನ ಸಂತತಿ ಬೆಳೆಯುತ್ತದೆ.  ಎಂದು ವೇದೋಪನಿಷತ್ತುಗಳು ಸೂಚಿಸುತ್ತವೆ.  ಈ ಕ್ರಮದಲ್ಲಿ  ಈಗ ಸೃಷ್ಟಿಯ ಹೊಣೆ ಹೊತ್ತಿರುವ ಚತುರ್ಮುಖ ಬ್ರಹ್ಮನ ಆಡಳಿತಾವಧಿಯಲ್ಲಿ ೨೭ ಚತುರ್ಯುಗಗಳು ಮುಕ್ತಾಯವಾಗಿ ೨೮ನೇ ಚತುರ್ಯುಗಕ್ಕೆ ಸೇರಿದ ಕಲಿಯುಗದ ಮೊದಲನೇ ಪಾದವು ನಡೆಯುತ್ತಿದೆ. ಇದೆಲ್ಲವನ್ನೂ ನಮ್ಮಶಾಸ್ತ್ರಗಳು ಕರಾರುವಾಕ್ಕಾಗಿ ಸೂಚಿಸಿವೆ. ಇದು ಸೃಷ್ಟಿಯಲ್ಲಿ ಕಾಲಗಣನೆಗೆ ಸಂಬಂಧಿಸಿದಂತೆ ಒಂದು ಸಣ್ಣ ಭಾಗ.  ಇದಿಷ್ಟು ಮಾಹಿತಿಗಳನ್ನರಿತಾಗ ನಮಗೆ  ಭೂಮಿಯಲ್ಲಿ ಮಾನವರ ಉಗಮವಾದದ್ದು ಹೇಗೆ  ಎಂಬ ವಿಚಾರವು  ಸ್ಪಷ್ಟವಾಗುತ್ತದೆ.

***

 ಸೃಷ್ಟಿಕ್ರಿಯೆಯಲ್ಲಿ ಕರ್ಮಫಲದ ಪ್ರಾಮುಖ್ಯತೆ:

ಪ್ರಕೃತಿಯ ಕೆಲವೊಂದು ಸಣ್ಣಪುಟ್ಟ  ರಹಸ್ಯಗಳನ್ನು  ಅರಿಯಲು ಮಾನವರಿಗೆ  ಸಹಾಯಕವಾಗಲೆಂದು  ಸರ್ವಶಕ್ತನು ಕರುಣಿಸಿದ ಒಂದು ಸಾಧನ ವಿಜ್ಞಾನ’.  ಈ ವಿಜ್ಞಾನವು  ತನ್ನದೇ ಆದ ಇತಿ ಮಿತಿಗಳನ್ನು  ಹೊಂದಿದೆ. ಈ ಕಾರಣದಿಂದಾಗಿ ಈ ಭೂಮಿಯಲ್ಲಿ  ಮನವನು ಉಗಮವಾದ ವಿಚಾರವನ್ನು ಕುರಿತಂತೆಯೇ ವಿಜ್ಞಾನದಲ್ಲಿ  ಇದುವರೆವಿಗೂ ಸರ್ವಸಮ್ಮತವಾದ  ಸಿದ್ಧಾಂತವೊಂದು ಇಲ್ಲವಾಗಿದೆ.  ವಸ್ತುಸ್ಥಿತಿ ಹೀಗಿರುವಲ್ಲಿ,  ಸೃಷ್ಠಿಯ ಸಮಸ್ಥ ರಹಸ್ಯವನ್ನೂ  ವಿಜ್ಞಾನವು ಬೇಧಿಸಿ, ವಿವರಿಬಲ್ಲುದೆಂದು ಭಾವಿಸುವುದು ಹಾಸ್ಯಾಸ್ಪದವಾದೀತು!! ಅಂದಮಾತ್ರಕ್ಕೇ ವಿಜ್ಞಾನವು ನಿಷ್ಪ್ರಯೋಜಕವೆಂದು  ಅರ್ಥವಲ್ಲ.  ಪುನರ್ಜನ್ಮಕುರಿತಂತೆ  ವಿಜ್ಞಾನವು  ನಡೆಸಿರುವ ಹಲವಾರು  ಸಂಶೋಧನೆಗಳು ; ಹೊಂದಿರುವ ನೂತನ ಸಿದ್ಧಾಂತಗಳು,  ಕ್ರಿಶ್ಚಿಯನ್ ಹಾಗೂ ಇಸ್ಲಾಮ್  ಧರ್ಮದ ಹಿಂದಿನ ತಪ್ಪು ತಿಳುವಳಿಕೆಗಳನ್ನು  ತಿದ್ದುವುದರೊಂದಿಗೆ, ಈ ವಿಚಾರಕುರಿತು ಸನಾತನಧರ್ಮದ ಹೇಳಿಕೆಗಳನ್ನು ಪ್ರತಿಪಾದಿಸ ತೊಡಗಿವೆ!!  ಆದರೆ, ಶಾಸ್ತ್ರಗ್ರಂಥಗಳ  ಸಮ್ಯಜ್ಞಾನವನ್ನು ವಿಜ್ಞಾನವು ಸಮಗ್ರವಾಗಿ ಪರಿಶೀಲಿಸಿ ಅರಿಯುವುದು ಮಾತ್ರ ಅಸಾಧ್ಯದ ಸಂಗತಿಯಾಗಿದೆ. ಇದಕ್ಕೆ ಉದಾಹರಣೆಯಾಗಿ ಒಂದೆರಡು ಪ್ರಸಂಗಗಳನ್ನು ಗಮನಿಸೋಣ: ಅಟ್ಲಾಂಟಿಕ ಸಾಗರದ ಪಶ್ಚಿಮ ಭಾಗದಲ್ಲಿ  ಕಾಣಬರುವ         ಬರ್ಮುಡಾ ತ್ರಿಕೋನಎಂಬ ಅಚ್ಚರಿಯ ಪ್ರದೇಶವು ನಿಗೂಢವಾದ ಅಪಘಾತಗಳ ತಾಣವಾಗಿದೆ.  ಈ ತ್ರಿಕೋನ ಪ್ರದೇಶದ ವ್ಯಾಪ್ತಿಯನ್ನು ಪ್ರವೇಶಿಸುವ ಹಡಗುಗಳು ಅವಘಡಕ್ಕೆ ಸಿಕ್ಕಿ ಯಾವುದೇ ಗುರುತೂ ಸಿಗದಂತೆ ನಾಶವಾಗುವುದು ಮಾತ್ರವಲ್ಲ; ಈ ವಿಶಾಲವಾದ ಪ್ರದೇಶದ ಮೇಲೆ ಹಾರಾಡುವ ವಿಮಾನಗಳೂ ಕೂಡ ಅನಿರೀಕ್ಷಿತವಾಗಿ ಕಣ್ಮರೆಯಾದ ಪ್ರಕರಣಗಳು ಹಲವಾರಿವೆ!! ಅವುಗಳು  ಇಂದಿಗೂ ನಿಗೂಢವಾಗಿವೆ!  ವೈಜ್ಞಾನಿಕವಾಗಿ ಇದರ ರಹಸ್ಯವನ್ನು  ಬಯಲುಮಾಡಲು  ಸಾಧ್ಯವಾಗಿಲ್ಲ. ಜಗತ್ತಿನಾದ್ಯಂತವೂ ಸಾಗರದ ದಡದಲ್ಲಿ ಹಲವಾರು ಅಪಾಯಕಾರಿ ಸ್ಥಳಗಳಿರುವುದು ಸರ್ವವೇದ್ಯ. ಹೀಗಾಗಿ ಇಲ್ಲಿ ಹಡಗುಗಳು ಕಣ್ಮರೆಯಾಗುವುದನ್ನು  ಅಪಘಾತ ಎಂದು ತಿಳಿಯಬಹುದು. ಆದರೆ, ಅಲ್ಲಿ ವಿಮಾನಗಳು ಕಣ್ಮರೆಯಾಗುವ ಪ್ರಸಂಗ ಅಚ್ಚರಿಯದು! ಇದನ್ನು ಕುರಿತಂತೆ ಹಲವಾರು ಮೇಧಾವಿಗಳು ಪುಸ್ತಕಗಳನ್ನು ಬರೆದಿರುವುದುಂಟು. ಒಬ್ಬರ ಅನಿಸಿಕೆಯನ್ನು ಮತ್ತೊಬ್ಬರು ವಿರೋಧಿಸುವುದಿದೆ.  ಈಗ ಇದಕ್ಕೆ ರಾಮಾಯಣದ ಪ್ರಸಂಗವೊಂದನ್ನು  ಜೋಡಿಸಿ, ಕಾರಣ ವಿವರಿಸುವ ಪ್ರಯತ್ನ ನಡೆದಿದೆ!!

 ಇದರಂತೆಯೇ ಜಗತ್ತಿನಲ್ಲಿ ಅಚ್ಚರಿ ಎಂದು ಪ್ರಚಾರಪಡೆದಿರುವ ಇನ್ನೊಂದು ವಿಚಾರ  ಕಪ್ಪುರಂದ್ರ  (ಬ್ಲಾಕ್ ಹೋಲ್) ಎಂಬುದಕ್ಕೆ ಸೇರಿದ್ದಾಗಿದೆ.  ಸಾಮಾನ್ಯವಾಗಿ  ಕ್ರಿಕೆಟ್ ಆಟದಲ್ಲಿ  ಬ್ಯಾಟ್ಮನ್ನನ್ನು ಆತಂಕಕ್ಕೀಡುಮಾಡುವಂತೆ ಒಂದು ನಿರ್ಧಿಷ್ಟ ಸ್ಥಾನದಲ್ಲಿ ಗುರಿಯಿಟ್ಟು ಚೆಂಡನ್ನು ಹಾಕುವ ಕ್ರಮ ಇರುತ್ತದೆ. ಬೌಲರನ ಚಾಚಕ್ಯತೆಯಿಂದಾಗಿ ಅಲ್ಲಿ ಬೀಳುವ ಚೆಂಡು  ಎತ್ತ ಸಾಗುವುದೆಂಬ ಅರಿವೂ  ಬ್ಯಾಟ್ ಮನ್ನಿಗೆ ಇರುವುದಿಲ್ಲವಂತೆ. ಅದನ್ನು ಕುರಿತು ವಿವರಿಸುವಲ್ಲಿ ಈ ಬ್ಲಾಕ್ ಹೋಲ್ ಎಂಬ ಪದದ ಬಳಕೆಯಾಗುತ್ತದೆ. ಇದಕ್ಕೂ ವಿಜ್ಞಾನಕ್ಕೂ ಏನು ಸಂಬಂಧ!? ಎಂದು ಪ್ರಶ್ನಿಸಬಹುದು. ಖಗೋಳವಿಜ್ಞಾನಕ್ಕೆ ಸಂಬಂಧಿಸಿದವರೇ ಇದಕ್ಕೆ ವಿಜ್ಞಾನದ ಸಂಬಂಧ ಕಲ್ಪಿಸಿರುವುದಿದೆ. ಅಮೆರಿಕದ  ನಾಸಾ (NASA) ಸಂಸ್ಥೆಯವರು ಇದನ್ನು ಕುರಿತು ಸಾಕಷ್ಟು ಮಾಹಿತಿಗಳನ್ನು ಪ್ರಸಾರಮಾಡಿರುವುದಿದೆ.  

ಅಂತರಿಕ್ಷದ ಹಲವಾರು ಕಡೆ ಈರೀತಿಯಕಪ್ಪುರಂಧ್ರಗಳು ವಿಜ್ಞಾನ ಜಗತ್ತಿನ ಬಗೆಹರಿಸಲಾಗದ ಕೌತುಕಗಳಾಗಿ ಉಳಿದಿವೆ. ಇಂಥ ಪ್ರದೇಶದೊಳಗೆ ಸೇರಿದ  ವಸ್ತುಗಳು, ವಾಹನಗಳು, ಮಾನವರಿರಲೀ,  ಬೆಳಕೂ ಕೂಡ ಕಣ್ಣಿಗೆ ಕಾಣದಂತೆ ಮಾಯವಾಗುವ ವಿವರಣೆಗಳಿವೆ!  ಇದನ್ನು ಕುರಿತೂ ವಾದ ಪ್ರತಿವಾದಗಳು ಮುಗಿಯದ ಕಥೆಯಾಗಿದೆ.

ಬ್ರಹ್ಮಾಂಡದ ಸೃಷ್ಟಿಯ ವಿಸ್ತಾರವನ್ನು ವಿವರಿಸುವಲ್ಲಿ ಹಲವಾರು ಕ್ಷೀರಪಥಗಳು; ನಕ್ಷತ್ರಪುಂಜಗಳ ವಿಚಾರಬರುತ್ತದೆ. ಸೂರ್ಯನಿಗಿಂತಲೂ ದೊಡ್ಡದಾದ ನಕ್ಷತ್ರಗಳ ವಿಚಾರ ಬರುತ್ತದೆ.  ವಿಜ್ಞಾನವೂ ಇದನ್ನು ಸಮರ್ಥಿಸುತ್ತದೆ! ವಿಶೇಷವಾದ ಶಕ್ತಿಯನ್ನು ಹೊಂದಿದ ಮಾನವರೂ ಊಹಿಸಿಕೊಳ್ಳಲಾಗದಂಥ ಪರಿಸರಗಳನ್ನು ಕುರಿತ ಮಾಹಿತಿಗಳನ್ನು ಉಪನಿಷತ್ತುಗಳು ಸೂಚಿಸಿರುವುದಿರುತ್ತವೆ. ಇವೆಲ್ಲವೂಬ್ರಹ್ಮರಹಸ್ಯಎನಿಸಿಕೊಳ್ಳುತ್ತವೆ. ಇಂಥ ರಹಸ್ಯ ಸ್ಥಳಗಳಿಗೆ ಅನರ್ಹರು ಯಾರೂ ಪ್ರವೇಶಿಸುವಂತಿಲ್ಲ. ಯಾರಾದರೂ ಇದನ್ನು ಮೀರಿ ಮುಂದಕ್ಕೆ ಸಾಗುವುದೆಂದರೆ, ಸೃಷ್ಟಿಯ ಸಮಸ್ತ ರಹಸ್ಯವನ್ನೂ ಸೂರೆಗೊಳ್ಳುವುದೆಂದಾಗುತ್ತದೆ! ಪ್ರಕೃತಿಯು ಎಂದಿಗೂ ಇದಕ್ಕೆ ಅವಕಾಶನೀಡುವುದಿಲ್ಲ!! ಎಂಬ ಸಾಮಾನ್ಯ ವಿಚಾರವನ್ನು ಮಾನ್ಯಮಾಡಲು ಯಾರೂ ಗಮನಹರಿಸುವುದಿಲ್ಲ!!! ಬ್ರಹ್ಮರಹಸ್ಯವನ್ನು ಬಯಲುಮಾಡಲು ಹೋದವರ ತಲೆಯು ಸಾಹಸ್ರ ಹೋಳುಗಳಾಗಿ ಸಿಡಿದು ಚೂರಾಗುವುದೆಂಬ ಮಾಹಿತಿಯೂ ಪ್ರಚಲಿತವಿದೆ.  ಇಲ್ಲಿಗೆ ಈ ವಿಚಾರ ಸಾಕು. ಮುಂದೆ ಪುನರ್ಜನ್ಮಕ್ಕೆ ಸಂಬಂಧಿಸಿದ ಅಂಶಗಳನ್ನು ಗಮನಿಸೋಣ.

ನಮಗೆ ಪುನರ್ಜನ್ಮ ಬರಬೇಕಾದರೆ ನಾವು ಈಗ ಹೊಂದಿರುವ ಜನ್ಮವು ಕೊನೆಗೊಳ್ಳಬೇಕು.  ಈ ರೀತಿಯ ಸಾವಿನಲ್ಲಿ ನಮ್ಮ ಜೀವನವು ಮುಕ್ತಾಯವಾದನಂತರ ಮುಂದೆ ಏನಾದೀತೆಂಬ ವಿಚಾರವನ್ನು ಕುರಿತು ವಿಜ್ಞಾನವು ಸಾಕಷ್ಟು ಪರಿಶೋಧನೆ ನಡೆಸಿದ್ದರೂ ಅದರ ಪ್ರಗತಿಮಾತ್ರ ಹೆಚ್ಚು ದೂರ ಹೋಗಿಲ್ಲ! ಮಿದುಳಿನ ಕ್ರಿಯೆ ನಿಲ್ಲುತ್ತಲೇ ಶರೀರದ ಚೈತನ್ಯ ಉಡುಗಿ, ಚಟುವಟಿಕೆಯು ನಿಲ್ಲುತ್ತದೆ  ಎಂಬುದಷ್ಟೇ ವಿಜ್ಞಾನಕ್ಕೆ  ತಿಳಿದಿರುವ ಸಂಗತಿ. ಆದರೆ, ಸನಾತನ ಧರ್ಮಶಾಸ್ತ್ರಗಳು ಈ ಸಾವಿನ ವಿಚಾರವನ್ನು ಬಹಳಸ್ಪಷ್ಟವಾಗಿ ವಿವರಿಸುವುದಿದೆ.

ಈ ಜಗತ್ತಿನ ಸೃಷ್ಟಿ; ಸ್ಥಿತಿ, ಲಯಗಳು ಅನಾದಿಕಾಲದಿಂದಲೂ ನಡೆಯುತ್ತಲೇ ಇವೆ.  ಸಕಲ ಚರಾಚರ ಜೀವಜಂತುಗಳೂ  ತಮ್ಮ ಪೂರ್ವಜನ್ಮದ ಕರ್ಮಫಲಕ್ಕೆ ಅನುಸಾರವಾಗಿ ಹೊಸ ಹೊಸ ಜನ್ಮಗಳನ್ನು ಪಡೆದು ಹುಟ್ಟುತ್ತವೆ. ನಮ್ಮ ಇಂದಿನ ದೇಹದಲ್ಲಿ  ಅಂತರ್ಗತವಾಗಿರುವ  ಆತ್ಮಕ್ಕೆ ಅದರ ಹಿಂದಿನ ಜನ್ಮದ  ಕರ್ಮಫಲ ಕಾರಣವಾಗಿರುತ್ತದೆ. ನಮ್ಮ ದೇಹಾಂತರ್ಗತವಾಗಿರುವ  ಜೀವಾತ್ಮವು ಒಂದು ನಿರ್ಧಿಷ್ಟ ಕಾಲಾವದಿಯ ನಂತರ ಈ ದೇಹವನ್ನು ತ್ಯಜಿಸಿ ಹೊರಹೋಗಲೇ ಬೇಕು.  ವಾಕ್ಕು; ಮನಸ್ಸು; ಪ್ರಾಣಗಳ ರೂಪದಲ್ಲಿ ಜೀವಾತ್ಮವು ದೇಹದಲ್ಲಿ ವರ್ತಿಸುತ್ತದೆ.  ಸಾವು ಸಮೀಪಿಸಿದಾಗ,  ಮಾತನಾಡುವ ಶಕ್ತಿ ಉಡುಗಿಹೋಗುತ್ತದೆ.  ಈ ವಾಕ್ ಶಕ್ತಿಯು  ಬಹಳ ಸೂಕ್ಷ್ಮರೂಪತಾಳಿ ಮನಸಿನಲ್ಲಿ ಸೇರಿಹೋಗುತ್ತದೆ. (ಮಾತುನಿಂತರೂ, ಕಣ್ಣಿನನೋಟ, ಕೈಬಾಯಿಯ ಸನ್ನೆಯಮೂಲಕ  ನಾವು ನಮ್ಮ ಇಚ್ಛೆಯನ್ನು ಪ್ರಕಟಿಸುವ ಪ್ರಯತ್ನ ಮಾಡುತ್ತೇವೆ)  ಮುಂದಿನ ಹಂತದಲ್ಲಿ  ಇಂದ್ರಿಯಗಳ ಸೂಕ್ಷ್ಮಶಕ್ತಿಯೂ  ಒಂದೊಂದಾಗಿ ಮನಸ್ಸಿನಲ್ಲಿ  ಸೇರಿಹೋಗುತ್ತವೆ. ಅವುಗಳ ಚಟುವಟಿಕೆ ಅಸ್ತವ್ಯಸ್ತವಾಗುತ್ತದೆ.  ಅನಂತರ ಈ ಸಂಯುಕ್ತರೂಪದ ಸೂಕ್ಷ್ಮಮನಸ್ಸು  ಇನ್ನೂ ಸೂಕ್ಷ್ಮರೂಪತಾಳಿ  ಪ್ರಾಣದಲ್ಲಿ ಅಡಗುತ್ತದೆ.  (ಆಗ ಸುತ್ತಲಿದ್ದವರನ್ನು ಗುರುತಿಸುವುದೂ ಸಾಧ್ಯವಾಗುವುದಿಲ್ಲ. ಇನ್ನೇನು ಪ್ರಾಣಹೋಗುವ ಸಮಯ ಸನ್ನಿಹಿತವಾಯಿತೆಂದು ತಿಳಿದು ಬಯಿಗೆ ನೀರು ಬಿಡುತ್ತಾರೆ) ಇದಾದನಂತರ ಈ ವಾಕ್ಕ್, ಮನೋ ವೃತ್ತಿಗಳನ್ನೊಳಗೊಂಡ  ಪ್ರಾಣವೂ ಒಂದು ನಿರ್ಧಿಷ್ಟ ವೃತ್ತಿಯಾಗಿ ಪರಿವರ್ತನೆ ಹೊಂದಿ ಜೀವಾತ್ಮದಲ್ಲಿ ಸೇರುತ್ತದೆ. ಈ ವೇಳೆಗೆ ಶರೀರದ ಸಮಸ್ಥ ಚಟುವಟಿಕೆಯೂ ಸ್ಥಗಿತವಾಗಿರುತ್ತದೆ.  ಆದರೆ, ಶರೀರದ ಶಾಖಮಾತ್ರ ಇನ್ನೂ ಇರುತ್ತದೆ. ಇಂಥ ಸನ್ನಿವೇಶದಲ್ಲಿ  ಅಪಾರ ಹಣ ಉಳ್ಳವರು ವೈದ್ಯರ ಕೈಕಾಲು ಹಿಡಿದು, ಈ ಪ್ರಾಣ ಉಳಿಸಿಕೊಡಿ. ಎಷ್ಟೇ ಹಣ ಖರ್ಚಾದರೂ ಸರಿ, ಕೊಡುತ್ತೇನೆ ಎಂದು ಅಂಗಲಾಚಿ ಬೇಡಿಕೊಳ್ಳುತ್ತಾರೆ!! ಎಷ್ಟೇ ಹಣವಿರಲೀ, ಯಾರೇ ವೈದ್ಯನಿರಲೀ, ಜೀವವನ್ನು ಉಳಿಸಿಕೊಡಲು ಯಾರಿಂದಲೂ ಸಾಧ್ಯವಿಲ್ಲವೆಂಬ ಅರಿವು ನಮಗಿರುವುದಿಲ್ಲ!! ಕೆಲವೇ ಕ್ಷಣದಲ್ಲಿ  ಈ ಸಂಯುಕ್ತರೂಪದ ಜೀವಾತ್ಮನು ತಾಪರೂಪದಲ್ಲಿ  ಶರೀರದಿಂದ ಹೊರಹೊರಡುತ್ತಾನೆ.  ಶರೀರವು ತಣ್ಣಗಾಗುತ್ತದೆ. ಇದನ್ನೇ ಶಾಸ್ತ್ರಗಳು  ಮರಣ  ಎಂದು ಸೂಚಿಸುತ್ತವೆ.  ಪ್ರಾಮಾಣಿಕರಾದ ವೈದ್ಯರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿ, ವಾಸ್ತವ ವಿಚಾರವನ್ನು ಸಂಬಂಧಿಸಿದವರಿಗೆ ತಿಳಿಸಿಬಿಡುತ್ತಾರೆ. ಆದರೆ, ’ಎಷ್ಟೇ ಹಣ ವೆಚ್ಚವಾದರೂ ಚಿಂತೆಯಿಲ್ಲ, ಜೀವ ಉಳಿಸಿಕೊಡಿಎಂಬ ಪ್ರಾರ್ಥನೆಯನ್ನು ತಿಳಿದ ಕೆಲವು ವೈದ್ಯರುಕೂಡಲೇ ವ್ಯಕ್ತಿಯ  ದೇಹವನ್ನು ತೀವ್ರನಿಗಾ ಘಾಟಕ್ಕೆ ಸಾಗಿಸಿ,  ಅಲ್ಲಿಗೆ ಹೆಚ್ಚಿನವರ ಪ್ರವೇಶವನ್ನು ನಿರ್ಬಂಧಿಸಿ, ಹೆಚ್ಚು ದುಬಾರಿಯ ಔಷಧಿಗಳ ಪ್ರಯೋಗವಾಗಬೇಕೆಂದು ವಂಚಿಸಿ, ಸಂಬಂಧಿಕರಿಂದ ಹೆಚ್ಚು ಹಣ ಸುಲಿಗೆಮಾಡಿ, ಸಾಧ್ಯವಿರುವಷ್ಟು ದಿನ ಆ ದೇಹಕ್ಕೆ ಚಿಕಿತ್ಸೆನಡೆಸಿದೆವೆಂದು ನಟಿಸುತ್ತಾರೆ! ಹಣಬರಿದಾದ ಮೇಲೆ. ತಮ್ಮ ಪ್ರಯತ್ನ ವಿಫಲವಾಯಿತೆಂದು  ಘೋಷಿಸಿ, ಶವವನ್ನು ವರಸುದಾರರಿಗೆ ಒಪ್ಪಿಸುತ್ತಾರೆ!! ಇಂಥವೆಲ್ಲವೂ ಅವರವರ ಕರ್ಮಫಲಕ್ಕೆ ಸೇರಿದ್ದು.

ನಾವು ನಮ್ಮ ಜೀವಿತಾವಧಿಯಲ್ಲಿ ಪ್ರತಿಕ್ಷಣವೂ ಮಾಡುವ ಪ್ರತಿಯೊಂದು ಚಟುವಟಿಕೆಯೂ  ನಮ್ಮ ವಾಕ್, ಮನೋ ಪ್ರಾಣಗಳಲ್ಲಿ ತನ್ನದೇ ಆದ ಸೂಕ್ಷ್ಮರೂಪದಲ್ಲಿ  ದಾಖಲಾಗುತ್ತದೆ.  ಇದನ್ನು ಸಂಸ್ಕಾರ ಎನ್ನಲಾಗುತ್ತದೆ.  ಇದೊಂದು ವಸ್ತುವಲ್ಲ.  ಭಾವನಾ ವಿಶೇಷ.  ನಮ್ಮ ಜೀವಮಾನಪೂರ್ತ ಸಂಗ್ರಹವಾಗುವ ಈ ಸಂಸ್ಕಾರವೇ  ನಮ್ಮ ಮರಣ ಕಾಲದಲ್ಲಿ  ವಾಕ್, ಮನೋ ಪ್ರಾಣಗಳ ಸೂಕ್ಷ್ಮ ವೃತ್ತಿಯಲ್ಲಿ ಪ್ರಮುಖವಾದ ಅಂಶವಾಗಿ ಸೇರಿಕೊಂಡು, ಜೀವಾತ್ಮದೊಂದಿಗೆ ಈ ದೇಹವನ್ನು ತ್ಯಜಿಸಿ ಲೋಕಾಂತರಕ್ಕೆ ತೆರಳುತ್ತದೆ.

ಜಡದೇಹದಿಂದ ಹೊರಹೋಗುವ ಚೈತನ್ಯವು ಹೊಂದಿರುವ ಅತಿ ಸೂಕ್ಷ್ಮವಾದ ವಾಕ್; ಮನೋ, ಪ್ರಾಣಗಳನ್ನು  ಸೂಚಿಸುವ ಸಂಸ್ಕಾರವು  ಆಧುನಿಕ ಜೀವವಿಜ್ಞಾನದ ಪರಿಭಾಷೆಯಲ್ಲಿ   D.N.A.- Deoxyribonucleic Acids  ಎಂದು ಸೂಚಿಸುವರೇನೋ? (ಸಂಸ್ಕಾರದಲ್ಲಿ ಅಡಕವಾಗಿರುವ  ವಾಕ್, ಮನೋ, ಪ್ರಾಣಗಳ ಸೂಕ್ಷ್ಮರೂಪವು  ಮುಂದಿನ ಜೀವನದ ರಹಸ್ಯವಾಗಿರುತ್ತದೆ.  ಡಿ. ಎನ್. ಎ.  ನಲ್ಲಿರುವ ಸೂಕ್ಷ್ಮ ರಹಸ್ಯವು  ಇದಕ್ಕೆ ಸಮಾನಾರ್ಥಕವಿರಬಹುದು.  ಅದನ್ನು ಕುರಿತು ಸಮರ್ಥರಾದ ಜೀವ ವಿಜ್ಞಾನಿಗಳು ವಿವರಿಸಬೇಕಷ್ಟೇ) 

ನಮ್ಮ ದಿನನಿತ್ಯದ ಜೀವನವು ಹೇಗಾದರೂ  ಇರಲೀ, ಸಾವಿನ ಸಮಯದಲ್ಲಿ ಕಾಯಾ, ವಾಚಾ, ಮನಸಾ ಒಳ್ಳೆಯವರಾಗಿಬಿಟ್ಟರೆ, ನಮ್ಮ ಸಂಸ್ಕಾರವನ್ನು ಉತ್ತಮಪಡಿಸಿ, ಜೀವಾತ್ಮನಿಗೆ ಮುಂದೆಯೂ ಉತ್ತಮಜನ್ಮ ದೊರೆಯುವಂತೆ ಮಾಡಬಹುದಲ್ಲ! ಎಂದು ಕೆಲವು ಮೇಧಾವಿಗಳು  ಯೋಚಿಸಬಹುದು. ಆದರೆ, ಇಂಥ ಸಂಸ್ಕಾರವು ನಾವು ಹುಟ್ಟಿದಂದಿನಿಂದಲೂ ರೂಪತಾಳುವ ಭವನಾ ವಿಶೇಷವೇ ವಿನಃ ಮರಣ ಸಮಯದಲ್ಲಿ ಸುಲಭವಾಗಿ ಬದಲಾಯಿಸಬಹುದಾದ ಪುರುಷಪ್ರಯತ್ನವಲ್ಲ.

ತಮ್ಮ ಜೀವಿತಾವಧಿಯ ಪೂರ್ತಿ, ವಾಕ್ ಶಕ್ತಿ ಇಲ್ಲದೇ ಮೂಕರಾಗಿರುವವರು  ಹಾಗೂ ಕಣ್ಣು ಕಾಣದ ಕುರುಡರು, ಮತ್ತು ಬುದ್ಧಿಹೀನರಾದವರು ಮತ್ತು ಅಂಗವಿಕಲರು ಅನುಭವಿಸುವ ಯಾತನೆಯು ಯಾವ ಮಟ್ಟದೆಂಬುದನ್ನು ಊಹಿಸಿಕೊಂಡರೆ, ನಮಗೆ ಜೀವನದಲ್ಲಿ ಕಷ್ಟ ಎಂದರೆ ಏನೆಂಬುದು ಅರ್ಥವಾಗುತ್ತದೆ.

 ಇಂಥ ಉತ್ತಮವಾದ ಸಂಸ್ಕಾರವನ್ನು ರೂಪಿಸಲು  ಹುಟ್ಟಿನಾರಂಭದಿಂದ ಮೊದಲ್ಗೊಂಡು ಜೀವಮಾನ ಪೂರ್ತಿ  ಸಾಧನೆಮಾಡಬೇಕಾದುದು ಅನಿವಾರ್ಯ.  ಮರಣಕಾಲದಲ್ಲಿ  ನಮ್ಮ ವಾಕ್, ಮನೋಪ್ರಾಣಗಳ ಸ್ಥಿತಿಯು  ಹೇಗಿರುತ್ತದೆಯೋ ಅದೇ ಸ್ಥಿತಿಯು ನಮ್ಮ ಮುಂದಿನ ಜನ್ಮದ ಮೂಲಗುಣ ಸ್ವಭಾವಗಳಾಗಿರುತ್ತದೆ.  ಇದನ್ನು ಅನುಸರಿಸಿಯೇ ಹುಟ್ಟಿದ ಮಕ್ಕಳು ಮೂಕರಾಗಿಯೋ, ವಾಚಾಳಿಗಳಾಗಿಯೋ, ಕಪಟಿಗಳಾಗಿಯೋ, ಸತ್ಯವಂತರಾಗಿಯೋ, ವಂಚಕರಾಗಿಯೋ, ಅಂಗವಿಕಲರಾಗಿಯೋ  ಹುಟ್ಟುತ್ತಾರೆ.  ನಮ್ಮ ಪಾಪಪುಣ್ಯಗಳ ಕರ್ಮಕ್ಕೆ ಅನುಗುಣವಾಗಿ ಮುಂದಿನ ಜನ್ಮದ ಪ್ರಾಪ್ತಿಯಾಗುತ್ತದೆ.

ಭೌತಿಕದೇಹದಲ್ಲಿ ಅಶ್ರಯಪಡೆದಿದ್ದ ಜೀವಜ್ಯೋತಿಯು ದೇಹವನ್ನು ತೊರೆಯುವ ಸಮಯದಲ್ಲಿ (ಮರಣದಲ್ಲಿ) ಜಡದೇಹವನ್ನು  ತ್ಯಜಿಸಿದಕೋಡಲೇ ಅದರ ಕರ್ಮಾನುಸಾರವಾಗಿ ಅದಕ್ಕೆ ಪ್ರೇತತ್ವವು ಪ್ರಾಪ್ತವಾಗುತ್ತದೆ. ಪ್ರೇತತ್ವವೆಂದರೆ, ಅದೊಂದು ಅತಿ ಸೂಕ್ಷ್ಮವಾದ ಶರೀರ.  ಇದು ಮರಣಹೊಂದಿದ ಪ್ರತಿಯೊಬ್ಬ ವ್ಯಕ್ತಿಗೂ ಪ್ರಾಪ್ತವಾಗುವ ಸ್ಥಿತಿ. ಇದಕ್ಕೆ ಒಳ್ಳೆಯವರು; ಕೆಟ್ಟವರು ಎಂಬ ವಿನಾಯ್ತಿಯೇನೂ ಇರುವುದಿಲ್ಲ!    ಪ್ರೇತಾತ್ಮದ ಸೂಕ್ಷ್ಮಶರೀರವು ನಮ್ಮ ಜಡದೇಹದಂತೆ  ಪಂಚಭೂತಗಳಿಂದ ಆಗದಿರುವ ಶರೀರ. ಜೀವಾತ್ಮವು ಪ್ರೇತಶರೀರವನ್ನು ಪ್ರವೇಶಿಸಿದ ಕೂಡಲೇ  ಅದಕ್ಕೆ ಪರಮಾತ್ಮನನ್ನು ಕುರಿತಂತೆ  ಜ್ಞಾನೋದಯವಾಗುತ್ತದೆ. ಆಗ, ತನಗೊದಗಿದ  ಹೀನಸ್ಥಿತಿಗಾಗಿ ಚಿಂತಿಸಿ, ಪರಮಾತ್ಮದ ಕೃಪೆಗಾಗಿ ಹಂಬಲಿಸುತ್ತದೆ.  ಪ್ರೇತತ್ವದಿಂದ ತಾನೇ ಬಿಡುಗಡೆಹೊಂದಲು  ಸಾಧ್ಯವಿಲ್ಲದೇ, ಬೇರೆಯವರ ಸಹಾಯಕ್ಕಾಗಿ ಪರದಾಡುತ್ತದೆ.  ಯಮಧೂತರು ಈ ಪ್ರೇತಶರೀರವನ್ನು ಯಮಲೋಕಕ್ಕೆ ಸೆಳೆದೊಯ್ಯುತ್ತಾರೆ.  ಅಲ್ಲಿ ನಮ್ಮ ಆತ್ನವು ಗಳಿಸಿದ ಪಾಪ ಪುಣ್ಯಗಳ ಲೆಕ್ಕಾಚಾರ ನಡೆದು, ಆ ಆತ್ಮದ ಮುಂದಿನ ಜನ್ಮದ ನಿರ್ಣಯವಾಗುತ್ತದೆ.  ಈ ವೇಳೆಗೆ ಮೃತನ ಸಂಬಂಧಿಕರು ನಡೆಸುವ ಶವಸಂಸ್ಕಾರ, ಉತ್ತರಕ್ರಿಯಾದಿಗಳಿಂದ ಮೃತವ್ಯಕ್ತಿಯ ಆತ್ಮದ ಪ್ರೇತತ್ವವು ಕಳೆದು, ಅತ್ಮವು ಸೂಕ್ಷ್ಮಾತಿ ಸೂಕ್ಷ್ಮರೂಪದಿಂದ ಪುನರ್ಜನ್ಮಕ್ಕೆ ಸಿದ್ಧವಾಗುತ್ತದೆ.

ಯಮಲೋಕದಿಂದ ಸೂಕ್ಷ್ಮರೂಪದಲ್ಲಿ ಹೊರಟ ಆತ್ಮವು ಆಕಾಶಮಾರ್ಗದಲ್ಲಿ ಮಳೆಯ ನೀರಿನೊಂದಿಗೆ ಭೂಮಿಗೆಬಂದು, ನೀರಿನಲ್ಲೋ, ಅಥವಾ ಯಾವುದಾದರೊಂದು ಸಸ್ಯದಲ್ಲೋ ಆಶ್ರಯ ಪಡೆದಿದ್ದು, ಸರ್ವಶಕ್ತನ ನಿಯಮದಂತೆ ಮುಂದಿನ ಜನ್ಮ ಪಡೆಯಲು ಕಾರಣವಾಗಲಿರುವ ಪುರುಷ ಪ್ರಾಣಿಯ ಶರೀರವನ್ನು ಸೇರಿ, ಅಲ್ಲಿನ ವೀರ್ಯಕೋಶದಲ್ಲಿ ಬೆಳೆದು, ಅನಂತರ ಹೆಣ್ಣುಶರೀರಕ್ಕೆ ವರ್ಗಾವಣೆಯಾಗಿ, ಅಲ್ಲಿ ಗರ್ಭಾಶಯದಲ್ಲಿ ವಿಕಾಸಗೊಂಡು ತನ್ನ ಪೂರ್ವಾರ್ಜಿತ ಕರ್ಮಕ್ಕನುಗುಣವಾಗಿ ಪುನರ್ಜನ್ಮಪಡೆಯುತ್ತದೆ.  ಈರೀತಿಯಲ್ಲಿ ದೊರೆಯುವ ಪುನರ್ಜನ್ಮದಲ್ಲಿ  ರೂಪವಂತನೋ; ಕುರೂಪಿಯೋ;  ರೋಗಿಷ್ಟನೋ; ಆರೋಗ್ಯಶಾಲಿಯೋ; ಶ್ರೀಮಂತನೋ; ದರಿದ್ರನೋ; ಸುಖಿಯೋ; ದುಃಖಿಯೋ;  ಗಂಡೋ; ಹೆಣ್ಣೋ ಆಗುವುದು ಆ ಆತ್ಮವು ತನ್ನ ಹಿಂದಿನ ಜನ್ಮದಲ್ಲಿ ಪಡೆದಿದ್ದ ಕರ್ಮಫಲಕ್ಕೆ ಅನುಸಾರವಾಗಿರುತ್ತದೆ ಎಂಬುದನ್ನು ಈಗಾಗಲೇ ಅರಿತಿದ್ದಾಗಿದೆ. . ಇದನ್ನು ಆತ್ಮವು ಅನುಭವಿಸಲೇಬೇಕು.  ಇದು ನಮ್ಮ ಶಾಸ್ತ್ರಗಳು ಸೂಚಿಸುವ  ರೀತಿಯಲ್ಲಿ ನಮಗೆ ಪುನರ್ಜನ್ಮ ದೊರೆಯುವ ಕ್ರಮ.

***

ಸನಾತನಧರ್ಮದ ಹಿರಿಮೆ:

ನಮ್ಮ ಸಾವಿನ ಆಚೆಗೆ ಇರುವ ಹಲವಾರು ಲೋಕಗಳ ಪರಿಚಯವು  ಸನಾತನ ಧರ್ಮವೊಂದನ್ನು ಬಿಟ್ಟರೆ, ಉಳಿದ ಧರ್ಮಗಳಿಗೆ ಇರಲಿಲ್ಲ.  ಈ ಕಾರಣದಿಂದಾಗಿ ಇತರ ಧರ್ಮಾನುಯಾಯಿಗಳು ಈ ವಿಚಾರವನ್ನು ನಂಬುವುದಿಲ್ಲ!  ಯಾರು ನಂಬಲೀ, ನಂಬದಿರಲೀ ನಡೆಯುವ, ನಡೆಯುತ್ತಿರುವ ಹಾಗೂ ನಡೆಯಲಿರುವ ವಿಚಾರಗಳು ಸುಳ್ಳು ಎಂದು ಯಾರೂ ನಿರಾಕರಿಸುವಂತಿಲ್ಲ!!

ಕಣ್ಣೆದುರಿಗೆ ಪ್ರತ್ಯಕ್ಷವಾಗಿರುವುದನ್ನು ಮಾತ್ರ  ನಂಬುವುದು ಕೆಲವರ  ಪದ್ಧತಿ.  ಈ ರೀತಿಯ ನಂಬಿಕೆಗೂ  ಅವರವೇ ಆದ  ಹಲವಾರು  ಅನುಮಾನ; ಪ್ರಮಾಣ; ಪರೀಕ್ಷೆಗಳು ಇದ್ದು, ಅದರಲ್ಲಿ ಖಚಿತವಾದನಂತರವಷ್ಟೇ  ಅವರು ಅದನ್ನು ನಂಬುವ ಸಿದ್ಧಾಂತಕ್ಕೆ ಬರುತ್ತಾರೆ.  ಪುನರ್ಜನ್ಮವನ್ನಾಗಲೀ  ಪೂರ್ವ ಜನ್ಮವನ್ನಾಗಲೀ  ನಂಬದವರು  ಆರೀತಿ ನಂಬದಿರುವುದಕ್ಕೆ ತಮ್ಮದೇ ಆದ ಹಲವರು ಸಂದೇಹಗಳನ್ನು ಹೊಂದಿರುತ್ತಾರೆ.  ಇಂ  ಸಂದೇಹಗಳು  ಸಮರ್ಪಕವಾಗಿ ಪರಿಹಾರವಾದರೆ ಈ ವಿಚಾರದಲ್ಲಿ ಅವರ ನಂಬಿಕೆ ದೃಢವಾಗಲು ಸಹಾಯಕವಾಗುತ್ತದೆ. ಪುನರ್ಜನ್ಮಕ್ಕಿಂತಲೂ ಮೊದಲು ನಮಗೆ ಪೂರ್ವಜನ್ಮ ಒಂದಿತ್ತೆಂಬುದನ್ನು  ನಾವು ಖಚಿತಪಡಿಸಿಕೊಂಡರೆ, ಇಂದಿನ ಜನ್ಮದ ವಿಚಾರ ನಮಗೆ ಖಚಿತವಾಗಿ ತಿಳಿದಿರುವುದರಿಂದ  ಮುಂದಿನ ಪುನರ್ಜನ್ಮವನ್ನೂ  ನಿಶ್ಚಯವೆಂದು  ತಿಳಿಯಲು ಅವಕಾಶವಾಗುತ್ತದೆ.

ನಾವು ನಮ್ಮ ದಿನನಿತ್ಯದ ವ್ಯವಹಾರದಲ್ಲಿ ಯಾವುದೇ ಒಂದು ಭಾವನೆಯನ್ನು ಅನುಭವಿಸಲು, ಕಾರ್ಯನಿರ್ವಹಿಸಲು  ನಮಗೆ ಸ್ವಲ್ಪವಾದರೂ ಪೂರ್ವಾನುಭವ ಇರಲೇ ಬೇಕೆಂಬುದು ಸಾಮಾನ್ಯ ಸಂಗತಿ.  ಆಗತಾನೇ ಹುಟ್ಟಿದ ಮಕ್ಕಳಿಗೆ ಈ ಜನ್ಮದಲ್ಲಿ ಯಾವುದೇ ಪೂರ್ವಾನುಭವವೂ  ಇರುವುದಿಲ್ಲವೆಂಬುದು ಎಲ್ಲರಿಗೂ ತಿಳಿದ ಸಂಗತಿ.  ಸಸ್ತನಿಗಳಿಗೆ ಹುಟ್ಟಿದ ಕೂಡಲೇ ತಾಯಿಯಹಾಲು ಅಗತ್ಯವಾಗಿರುತ್ತದೆ.  ತಾಯಿಯ ಮೊಲೆಯನ್ನು ಅವುಗಳ ಬಾಯಿಗೆ ಇಟ್ಟಾಗ ಕೂಡಲೇ ಅವು ಅದನ್ನು ಚೀಪಿ, ಹಾಲನ್ನು ಕುಡಿಯುವ ಸಂಗತಿ ನಮಗೆಲ್ಲ ತಿಳಿದಿಲ್ಲವೇ?  ಹಾಗಾದರೆ ಅದಕ್ಕೆ ಈ ಕೆಲಸದ ಅನುಭವ ಎಲ್ಲಿಂದ ಬಂತು!?

ಈಚಿನ ದಿನಗಳಲ್ಲಿ ಅಸ್ಪತ್ರೆಯಲ್ಲಿ   ಕೆಲವು ಮಕ್ಕಳು  ಹುಟ್ಟಿದಕೂಡಲೇ ಯಾವುದೇ ಚಟುವಟಿಕೆಯನ್ನೂ ತೋರಿಸದೆ ನಿಶ್ಚೇತನವಾಗಿರುತ್ತವೆ. ಅಂಥವು ಹುಟ್ಟಿದ ಕೂಡಲೇ  ವೈದ್ಯರು  ಅದನ್ನು ಪರೀಕ್ಷಿಸುವ ದಿಸೆಯಲ್ಲಿ ಮೇಲಕ್ಕೆಸೆದು, ಕೆಳಗೆ ಬರುತ್ತಲೇ ಕೈನಲ್ಲಿ ಹಿಡಿಯುತ್ತಾರೆ.  ಮೇಲಿನಿಂದ ಕೆಳಗೆ ಬರುವಾಗ ಅದಕ್ಕೆ ಯಾವುದೇ ಯಾತನೆಯಾಗದಿದ್ದರೂ ಆಸರೆ ಇಲ್ಲದೆ ತತ್ತರಿಸುವ ಅದು ಗಾಭರಿಯಿಂದ ಅರಚಿಕೊಳ್ಳುತ್ತದೆ.  ಈಗಾಗಲೇ  ಕೆಳಗೆ ಬೀಳುವುದರಿಂದ ಉಂಟಾಗುವ  ನೋವಿನ ಅನುಭವವಿಲ್ಲದೇ ಮಗು ಅಳುವುದಕ್ಕೆ ಕಾರಣವೇನು?

ಕೋತಿಗಳು ಮರಿಗಳನ್ನು ಹೆರುತ್ತಲೇ ಆ ಮರಿಗಳು ತನ್ನ ತಾಯಿಯ ಹೊಟ್ಟೆಯನ್ನು  ಬಿಗಿಯಾಗಿ ಹಿಡಿದು ಕೊಳ್ಳುತ್ತವೆ. ಮರುಕ್ಷಣವೇ  ತಾಯಿ ಕೋತಿಯು  ಮರದ ಮೇಲೆ ಕೊಂಬೆಯಿಂದ ಕೊಂಬೆಗೆ  ನೆಗೆದಾಡಿದರೂ ಅದರ ಮರಿಮಾತ್ರ ಯಾವಭಯವೂ ಇಲ್ಲದೇ  ತಾಯಿಯ  ಹೊಟ್ಟೆಯನ್ನು ಬಿಗಿಯಾಗಿ ಹಿಡಿದುಕೊಂಡಿರುತ್ತದೆ!! ಇದನ್ನು ಆ ಕೋತಿಯಮರಿಗೆ ಕಲಿಸಿದ್ದು ಯಾರು!?

ಕೆಲವಾರು ವರ್ಷಗಳ ಹಿಂದೆ,  ಆರೇಳುತಿಂಗಳ ಎಳೆಗೂಸು ಆಳವಾದ ಈಜುಕೊಳದಲ್ಲಿ ಲೀಲಜಾಲವಾಗಿ ಈಜಾಡಿದ ಸಂಗತಿಯನ್ನು ಪತ್ರಿಕೆಗಳಲ್ಲಿ ಓದಿದ ನೆನಪು ಕೆಲವರಿಗಿರಬಹುದು.  ಚಿಕ್ಕ ವಯಸ್ಸಿನ ಮಕ್ಕಳು  ಸಂಗೀತ; ಗಣಿತ, ವಿಜ್ಞಾನ ಮುಂತಾದ ಬೇರೆ ಬೇರೆ  ಕ್ಷೇತ್ರಗಳಲ್ಲಿ  ಹಲವಾರು ವರ್ಷಗಳ ಪರಿಣತಿ ಪಡೆದವರು  ಹೊಂದಿರುವಂಥ ಮೇಧಾವಿತನವನ್ನು  ಪ್ರದರ್ಶಿಸಿರುವುದನ್ನು ನಾವು ಕಾಣಬಹುದು.  ಪ್ರಾಣಿಗಳಲ್ಲಿರುವ  ಮಾನವೀಯ ಗುಣ; ಮಾನವರಲ್ಲಿರುವ  ಮೃಗೀಯ ವರ್ತನೆ ಮುಂತಾದ ಲಕ್ಷಾಂತರ ಉದಾಹರಣೆಗಳನ್ನು ನಾವು ಸಮಂಜಸವಾಗಿ ಅರ್ಥೈಸಿಕೊಂಡರೆ ನಮಗೆ ಪೂರ್ವಜನ್ಮ ಇದ್ದದ್ದು ನಿಜ ಎಂಬುದು ಖಚಿತವಾಗಿ ಮನವರಿಕೆಯಾಗುತ್ತದೆ.

ಸರ್ವಶಕ್ತವಾದ ದೇವರು ಆಕಾಶದಿಂದ ಅನ್ನದವರೆಗೆ ಎಲ್ಲವನ್ನೂ ಸೃಷ್ಟಿಸಿ, ಇಂಥ ಸೃಷ್ಟಿಯಲ್ಲಿ ಜನ್ಮಪಡೆಯಲು ಬೇಕಾದ  ಎಲ್ಲ ಜೀವಿಗಳಿಗೂ ಅವುಗಳ ಕರ್ಮಾನುಸಾರವಾಗಿ  ಶರೀರಗಳನ್ನು  ಒದಗಿಸುತ್ತಾನೆ.  ಇದೇ ಕ್ರಮದಲ್ಲಿ ನಾವೂ ಮಾನವರಾಗಿ ಹುಟ್ಟಿದ್ದೇವೆ.  ಮಾನವರಾಗಿ ಹುಟ್ಟಿದಮೇಲೆ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವುದು ಮಾನವಶರೀರಾಂತರ್ಗತವಾಗಿರುವ ಆತ್ಮದ ಹೊಣೆಗಾರಿಕೆ.  ದೇವರು ಸೃಷ್ಟಿಸಿರುವ ವಸ್ತುಗಳನ್ನು ಬಳಸಿಕೊಂಡು ಅಡುಗೆಮಾಡಿಕೊಳ್ಳುವುದು, ಮನೆಯನ್ನು ಕಟ್ಟಿಕೊಳ್ಳುವುದು, ಮಕ್ಕಳಿಗಾಗಿ ಸಂಪತ್ತನ್ನು ಸಂಗ್ರಹಿಸುವುದು ಮುಂತಾದ ಎಲ್ಲ ಕರ್ಮಗಳೂ ಮನುಷ್ಯರಿಗೆ ಸೇರಿದ್ದು. ಈ ಎಲ್ಲ ಕರ್ಮಗಳನ್ನೂ ಮಾಡುವುದು ಅದರ ಫಲವನ್ನು ಅನುಭವಿಸುವುದು  ಮನುಷ್ಯರಿಗೆ ಸೇರಿದ್ದೇ ವಿನಹ, ದೇವರು ಇದಕ್ಕೆಲ್ಲ ಹೊಣೆಗರನಲ್ಲ!! ಧರ್ಮಸಮ್ಮತವಾಗಿ ಜೀವನಸಾಗಿಸಿದವರು ಚಿತ್ತಶುದ್ಧಿಪಡೆದು,  ಮುಂದೆಹೋಗುತ್ತಾರೆ.  ಇಲ್ಲದವರು ತಮ್ಮ ಕರ್ಮಫಲದ  ಅನುಭವಕ್ಕಾಗಿ  ಸೂಕ್ತವಾದ ಪುನರ್ಜನ್ಮ ಹೊಂದುತ್ತಾರೆ.

-ಸಿರಿಭೂವಲಯದಸುಧಾರ್ಥಿ

 (ಭಾಗ ರಲ್ಲಿ ಮುಂದುವರೆದಿದೆ)

No comments:

Post a Comment