ಮೊದಲಮಾತು:
ನನ್ನ ಜೀವಿತಲ್ಲಿ ೭೭ ಸಂವತ್ಸರಗಳನ್ನು ಸವೆಸಲಿರುವ ನೆನಪಿಗಾಗಿ ’ಸಿರಿಭೂವಲಯದ ಅಂತರ್ಸಾಹಿತ್ಯ ಸೌರಭ’ ಎಂಬ ನಾಲ್ಕು ಸಂಪುಟಗಳ ಕೃತಿಯೊಂದನ್ನು ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಜ್ಞಾನದಾನವಾಗಿ ನೀಡುವ ಉದ್ದೇಶದಿಂದ ಪ್ರಯತ್ನ ನಡೆಸಿದೆ. ಕಾರಣಾಂತರದಿಂದಾಗಿ ಅದಕ್ಕೆ ತಾತ್ಕಾಲಿಕ ಅಡಚಣೆಯುಂಟಾಯಿತು. ಅದರ ಬದಲಿಗೆ ಈ ಕಿರು ಲೇಖನಮಾಲಿಕೆಯನ್ನು ನನ್ನ ಅಭಿಮಾನಿ ಓದುಗರಿಗೆ ವಿಶ್ವಾಸ ಪೂರ್ವಕವಾಗಿ ಮುಂಗಡವಾಗಿ ಅರ್ಪಿಸಿದ್ದೇನೆ. ಕೆಲವರಿಗಾದರೂ ಇದು ಉಪಯುಕ್ತವಾದೀತೆಂದು ಭಾವಿಸಿದ್ದೇನೆ. ಸಾಧ್ಯವಿರುವಷ್ಟು ಶೀಘ್ರವಾಗಿ ’ಸಿರಿಭೂವಲಯದ ಅಂತರ್ಸಾಹಿತ್ಯ ಸೌರಭ’ವೂ ನಿಮ್ಮ ಕೈಸೇರಲಿದೆ.
***
ವೇದವೆಂದರದೇನು?
ವೇದಗಳನ್ನು ಓದಿದವರಿಗೆ ಅದು ’ವೇದ್ಯ’ವಾಗುತ್ತದೆ! ವೇದವೆಂಬ ಶಬ್ದಕ್ಕೆ ಹಳೆಯಮಾತು; ’ಜ್ಞಾನ’ ತಿಳಿವು ಎಂಬ ಅರ್ಥಗಳಿವೆ. ಜ್ಞಾನವೆಂದರೆ, ’ಅರಿವು’ ’ಎಚರ’ ಎಂಬ ಅರ್ಥಗಳೂ ಇವೆ! ಇವುಗಳ ಹಿನ್ನೆಲೆಯಲ್ಲಿ ನೋಡಿದಾಗ: ’ತಿಳುವಳಿಕೆ’ ಎಂಬ ವಿವರಣೆಯೂ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ; ಜಗತ್ತಿನಲ್ಲಿ ತಿಳುವಳಿಕೆಗೆ ಸಂಬಂಧಿಸಿದ್ದೆಲ್ಲವೂ ವೇದಮೂಲದ್ದೇ ಆಗಿರುತ್ತದೆ!!
’ವೇದ’ವೆಂಬುದು ಅಪೌರುಷೇಯವಾದುದು ಎಂಬ ವಿಚಾರವು ಪ್ರಾಚೀನಕಾಲದಂದಲೂ ಪ್ರಚಲಿತವಿರುವ ಸನಾತನಿಗಳ ನಂಬಿಕೆ. ಈ ವೇದವೆಂಬ ಮಹಾನ್ ಸಾಹಿತ್ಯರಾಶಿಯು ಅಪಾರವಾದುದು. ಓದಲು ಅತ್ಯಂತ ಕ್ಲಿಷ್ಟಕರವಾದುದು, ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲದ್ದು. ಎಂಬುದು ಪ್ರಾಮಾಣಿಕರಾದ ಕೆಲವರ ಅಭಿಪ್ರಾಯ.
ವೇದಗಳು ಅಪೌರುಷೆಯ ಎಂಬುದು ಅರ್ಥಹೀನವಾದ ನಂಬಿಕೆ. ಈ ವೇದವನ್ನು ಪ್ರಾಚೀನಕಾಲದ ಯಾರೋ ಕೆಲವು ಋಷಿ ಮುನಿಗಳು ಬರೆದಿರುವುದು, ವೇದಗಳಲ್ಲೇ ಖಚಿತವಾಗಿದೆ! ಆದ್ದರಿಂದ ವೇದಗಳು ಮಾನವಕೃತವೇ ಹೊರತು; ಅಪೌರುಷೇಯವೆಂಬುದೇನೂ ಇಲ್ಲ! ಎಂಬುದು ಕೆಲವರ ವಾದ.
ಸಾಕಷ್ಟು ದೀರ್ಘಕಾಲಾವಧಿಗೆ ನಮ್ಮ ದೇಶದಲ್ಲಿ ಆಡಳಿತದ ಚಿಕ್ಕಾಣಿ ಹಿಡಿದಿದ್ದ ಪರಕೀಯರು ಈ ದೇಶದ ಅಪಾರ ಸಂಪತ್ತನ್ನು ಲೋಟಿಮಾಡಿದ್ದು ಮಾತ್ರವಲ್ಲ, ಇಲ್ಲಿನ ಪ್ರಾಚೀನ ಸಂಸ್ಕೃತಿಯ ನಾಶಕ್ಕೂ ಸಾಕಷ್ಟು ಶ್ರಮಿಸಿದವರು. ಈ ದೇಶದ ಪ್ರಾಚೀನ ಇತಿಹಾಸದ ನೆನಪನ್ನೂ ವಿರೂಪಗೊಳಿಸಿ, ಇಲ್ಲಿನವರನ್ನು ಚರಿತ್ರಹೀನರೆನಿಸುವ ಮಟ್ಟಕ್ಕೆ ತಂದವರು. ಇದಕ್ಕೂ ಮೊದಲು ಈ ಪ್ರಾಚೀನ ಸಂಸ್ಕೃತಿಯ ಕವಲುಗಳಾದ ನಿಶ್ರೇಯಸವಾದಿಗಳು (ಜೈನಸಂಪ್ರದಾಯ ದವರು) ಹಾಗೂ ಇವರದೇ ಆದ ಇನ್ನೊಂದು ಕವಲಾಗಿ ಉಗಮವಾದ ’ಬೌದ್ಧರು’ ಇಲ್ಲಿನ ಸಾಮಾಜಿಕ ಪರಿಸರದಲ್ಲಿ ರಾಜಾಶ್ರಯದ ಬೆಂಬಲದಿಂದ, ಪ್ರಾಚೀನವಾದ ಸನಾತನ ಸಂಸ್ಕೃತಿಯಮೇಲೆ ಹೆಚ್ಚಿನ ಪ್ರಮಾಣದ ಧಾಳಿ ನಡೆಸಿದ್ದವರು. ಈ ಸನಾತನ ಸಂಸ್ಕೃತಿಯ ವಿರೋಧಿಗಳ ಪ್ರಾಭಲ್ಯ ಹಾಗೂ ನಿಗೂಢ ತಂತ್ರಗಳು ಹಾಗೂ ಅನುಸರಿಸುತ್ತಿದ್ದ ಕೃತ್ರಿಮ ಮಾರ್ಗಗಳು ಊಹಾತೀತ ವಾಗಿದ್ದವು!
ಉಪಲಬ್ಧವಿರುವ ಸಾಹಿತ್ಯಿಕ ಮಾಹಿತಿಗಳು; ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿ ಬಂದಿರುವ ವೇದೋಕ್ತ ಕ್ರಿಯಾಕಲಾಪಗಳ ಮಾಹಿತಿಗಳ ವಿವರ ಹಾಗೂ ಮಹತ್ತರವಾದ ಧಾರ್ಮಿಕ ಸಾಹಿತ್ಯಗಳ ಆಧಾರದಲ್ಲಿ ವಿವೇಚಿಸಿದಾಗ ಸುಮಾರು ೭೫೦ ಕೋಟಿವರ್ಷಗಳಹಿಂದೆ ಜೈನ ಸಂಪ್ರದಾಯದ ಪ್ರವರ್ತಕ (ಪ್ರಥಮ ತೀರ್ಥಂಕರ) ಋಷಭದೇವನು ಅಂದು ಪ್ರಚಲಿತವಿದ್ದ ’ಅಭ್ಯುದಯವಾದ’ ಕ್ಕೆ (ಸನಾತನಧರ್ಮ) ಪ್ರತಿಯಾಗಿ ’ನಿಶ್ರೇಯಸವಾದವನ್ನು’ ರೂಪಿಸಿದನು ಎಂಬ ಮಾಹಿತಿಯನ್ನು ಕಾಣಬಹುದು.
(ದೇವತೆಗಳಕೃಪೆಯಿಂದ ಮಾನವರ ಜೀವನದ ಭದ್ರತೆ ಎಂಬುದು ಅಭ್ಯುದಯವಾದ. ತಮ್ಮ ಜೀವನನಿರ್ವಹಣೆಗಾಗಿ ದೇವತೆಗಳನ್ನು ಮೆಚ್ಚಿಸಲು ಹಿಂಸಾತ್ಮಕವಾದ ಯಜ್ಞ ಯಾಗಗಳ ಅಗತ್ಯವಿಲ್ಲ, ಎಂಬುದು ನಿಶ್ಶ್ರೇಯಸವಾದ. ಇದರಲ್ಲಿ ಸಂಪ್ರದಾಯಗಳ ಆಚರಣೆಯಲ್ಲಿ ಪ್ರತ್ಯೇಕತೆಯೇ ವಿನಃ. ಪ್ರಾಚೀನವಾದ ವೇದಗಳನ್ನೇ ಅಲ್ಲಗಳೆಯುವ ವಿರೋಧವೇನೂ ಇರಲಿಲ್ಲ. ಕಾಲಕ್ರಮದಲ್ಲಿ ಆ ಸಂಪ್ರದಾಯದ ವಿದ್ವಾಂಸರ ಅಗತ್ಯಕ್ಕನುಗುಣವಾಗಿ ವೇದವಿರೋಧವು ಹುಟ್ಟಿ ಬೆಳೆಯಿತು!) ಈ ಸಂಪ್ರದಾಯದವರು ತಮ್ಮ ಧಾರ್ಮಿಕ ಸಾಹಿತ್ಯದಲ್ಲಿ ಋಷಭನಾಥನೇ ಮೊದಲಿಗನಲ್ಲ; ಭೂತಕಾಲದಲ್ಲಿ ೨೪ ಜನ ತೀರ್ಥಂಕರರು, ವರ್ತಮಾನಕಾಲದಲ್ಲಿ ೨೪ ಜನ ತೀರ್ಥಂಕರರು, ಭವಿಷ್ಯತ್ ಕಾಲದಲ್ಲಿ ೨೪ ಜನ ತೀರ್ಥಂಕರರು, ಈ ತೀರ್ಥಂಕರರ ಜೀವಿತಾವಧಿಯು ಲಕ್ಷಾಂತರವರ್ಷಗಳು ಎಂಬ ಅತಿದೊಡ್ಡ ಕಾಲಾವಧಿಯ ಚರಿತ್ರೆಯನ್ನು ರೂಪಿಸಿಕೊಂಡಿದ್ದಾರೆ! ಒಟ್ಟಿನಲ್ಲಿ ವೇದಗಳನ್ನು ಅಲ್ಲಗಳೆಯುವುದು ಅವರ ಮೂಲ ಉದ್ದೇಶ. ಕಾಲಕ್ರಮದಲ್ಲಿ ಈ ಜೈನಸಂಪ್ರದಾಯದಿಂದಲೇ ಹೊರಹೊಮ್ಮಿದ ಬೌದ್ಧ ಸಂಪ್ರದಾಯವು ಸನಾತನಧರ್ಮ ಹಾಗೂ ಜೈನ ಸಂಪ್ರದಾಯಕ್ಕೆ ವಿರೋಧಿಯಾಗಿ ಬೆಳವಣಿಗೆ ಹೊಂದಿ, ನೆರೆಯ ರಾಷ್ಟ್ರ ಚೀನಾದಲ್ಲೂ ಜನಪ್ರಿಯವಾಯಿತು. ಸನಾತನ ಧರ್ಮವು ಆಸ್ತಿಕವಾದವನ್ನು ಪ್ರತಿಪಾದಿಸಿದರೆ , ಜೈನ ಹಾಗೂ ಬೌದ್ಧ ಸಂಪ್ರದಾಯಗಳು ನಾಸ್ತಿಕವಾದವನ್ನು ತಮ್ಮದೇ ಆದ ರೀತಿಯಲ್ಲಿ ಬೆಂಬಲಿಸುತ್ತವೆ.
ವಿದೇಶಿಯರ ವಿಕೃತ ವಾದಸರಣಿ:
ಚೀನಾದೇಶದ ನಿವಾಸಿಗಳು ಪ್ರಾಚೀನ ಕಾಲದಿಂದಲೂ ನಿರೀಶ್ವರವಾದಿಗಳು. ಇದೇ ಜಾಡಿನಲ್ಲಿ ಸಾಗಿದ ಬೌದ್ಧ ಧರ್ಮವು ಸಹಜವಾಗಿಯೇ ಅವರನ್ನು ಆಕರ್ಷಿಸಿತು! ತಮ್ಮಲ್ಲಿ ಹೆಚ್ಚು ಪ್ರಚಾರಕ್ಕೆ ಬಂದ ಬುದ್ಧನ ತತ್ವಗಳ ಪ್ರಭಾವದಿಂದ, ಬುದ್ಧನು ಹುಟ್ಟಿಬೆಳೆದ ದೇಶವೆಂಬ ಅಭಿಮಾನದಿಂದ ಚೀನಾದೇಶದ ಕೆಲವು ವಿದ್ವಾಂಸರು ಇಲ್ಲಿಗೆ ಆಗಮಿಸಿ, ಇಲ್ಲಿನ ಸಾಮಾಜಿಕ ಪರಿಸರದ ಕೆಲವು ವಿವರಗಳು ಹಾಗೂ ಇಲ್ಲಿನ ಸಂಸ್ಕೃತಭಾಷೆಯ ಅಮೂಲ್ಯ ಸಾಹಿತ್ಯದಕೆಲವು ಭಾಗಗಳನ್ನು ತಮ್ಮ ಭಾಷೆಗೆ ಅನುವಾದ ಮಾಡಿಕೊಂಡು, ತಮ್ಮಲ್ಲಿ ಪ್ರಚಾರ ನಡೆಸಿರುವುದಿದೆ.
ಇದೇ ಕ್ರಮದಲ್ಲಿ ವಿಲ್ಸನ್; ವೆಬರ್; ಮ್ಯಾಕ್ಸ್ ಮುಲ್ಲರ್; ಮ್ಯಾಕ್ಡೊನಾಲ್ಡ್; ವಿಂಟರ್ನಿಟ್ಸ್; ಕೀತ್; ಮುಂತಾದವರು ಜರ್ಮನಿ, ಇಂಗ್ಲೇಂಡ್
ದೇಶಗಳವರು ಇಲ್ಲಿನ ಪ್ರಾಚೀನ ಸಾಹಿತ್ಯವನ್ನು ತಮ್ಮ ಭಾಷೆಗಳಿಗೆ ಅನುವಾದ
ಮಾಡಿಕೊಂಡಿದ್ದಾರೆ. ಇವರುಗಳಾರೂ ಭಾರತೀಯ ಶಾಸ್ತ್ರ, ಸಂಪ್ರದಾಯ, ಪ್ರಾಚೀನ
ನಾಗರೀಕತೆಯನ್ನು ಒಪ್ಪದೇ ’ಗ್ರೀಕ್’ ನಾಗರಿಕತೆಯೇ ಜಗತ್ತಿನಲ್ಲಿ
ಶ್ರೇಷ್ಠವೆಂದು ಬಿಂಬಿಸಿದವರು. ನಮ್ಮ ಪ್ರಾಚೀನ ಕಾಲದ ಗ್ರಾಮೀಣಜನರು ಬೆಳಗಾಗ ಎದ್ದಕೂಡಲೇ ಕೆರೆಯಕಡೆ ಹೋಗುವ ಪದ್ಧತಿಯನ್ನು ಅನುಸರಿಸುತ್ತಿದ್ದರು. ಹೊಟ್ಟೆಯಲ್ಲಿದ್ದ ಹೊಲಸು ಹೊರಹೋದಮೇಲೆ. ಹೊಲಸು ಹೋಗುವ ದ್ವಾರವನ್ನು
ನೀರಿನಿಂದ ತೊಳೆಯುವ ಆರೋಗ್ಯಕರ ಜ್ಞಾನ ಅವರಿಗಿತ್ತು. ಆಗಿನಿಂದಲೂ ವಿದೇಶಿಯರು
ಕಾಗದದಿಂದ ಈ ಕೆಲಸ ಮಾಡುತ್ತಿದ್ದರು! ನೀರಿನ ಉಪಯೋಗದ ಸುರಕ್ಷತೆಯನ್ನೇ ಅರಿಯದವರು ಇನ್ನೆಂಥ ನಾಗರಿಕತೆ ಹೊಂದಿರಬಹುದು!
’ಅದು ಶೀತದೇಶ. ನೀರಿನಿಂದ ತೊಳೆಯುವುದು ಸಾಧ್ಯವಿಲ್ಲ’
ಎಂದು ವಾದಿಸಬಹುದು. ಬಿಸಿನೀರು ಬಳಸಿದರೆ ಜೀವವೇನೂ ಹೋಗಲಾರದಲ್ಲವೇ!?
ಇದನ್ನೂ ಅನುಸರಿಸದವರು ಇನ್ನೆಂಥ ’ನಾಗರಿಕ’ ರಿರಬೇಕು!?
ವೇದಸಾಹಿತ್ಯದ ಅರ್ಥನಿರ್ಣಯ ಮಾಡುವುದು ಸುಲಭದ ಕಾರ್ಯವಲ್ಲ. ಪಾಶ್ಚಾತ್ಯರು ಈ ವಿಚಾರವಾಗಿ ಎಷ್ಟೇ ಬರೆದರೂ ಅದು ವಾಸ್ತವತೆಯ ಪರಿಧಿಯಲ್ಲಿ ಬರುವುದಲ್ಲವೇ ಅಲ್ಲ!
ಮೋಕ್ಷಮೂಲರು ಎಂಬ ಬಿರುದು ಪಡೆದ ಜರ್ಮನಿಯಮೂಲದ ಮ್ಯಾಕ್ಸ್ ಮುಲ್ಲರ್ ಎಂಬುವವನು ವೇದಗಳು ಹುಟ್ಟಿದ ದಿನಾಂಕವನ್ನೇ ಕರಾರುವಾಕ್ಕಾಗಿ ನಿರ್ಧರಿಸಿದವನು!!
’ಆರ್ಯರು’ ಭಾರತಕ್ಕೆ ವಲಸೆಬಂದು ಇಲ್ಲಿನ ಅನಾಗರಿಕ ಸಮಾಜವನ್ನು ಉದ್ಧಾರಮಾಡಿದವರು ಎಂಬ ನಿಲುವು ಪಾಶ್ಚಾತ್ಯ ವಿದ್ವಾಂಸರದು.
ತನ್ನ ಜೀವಿತಕಾಲದಲ್ಲಿ ಒಮ್ಮೆಯೂ ಭಾರತಕ್ಕೆ ಕಾಲಿರಿಸದೇ ಸಂಸ್ಕೃತಭಾಷೆಯ ಪ್ರಾಥಮಿಕ ಪರಿಚಯವೂ ಇಲ್ಲದೇ ಮ್ಯಾಕ್ಸ್ ಮುಲ್ಲರ್ ಮಹಾಶಯನು ಅಪೌರುಷೇಯವಾದ ವೇದಗಳ ರಾಶಿಯನ್ನು ಅರೆದು ಕುಡಿದು, ಬೆಟ್ಟದಷ್ಟು ರಾಶಿಯ ಮಾಹಿತಿಗಳನ್ನು ರಚಿಸಿರುವುದಿದೆ! ಭಾರತದ ಬಹಳಷ್ಟುಜನ ಎಡಬಿಡಂಗಿ ವಿದ್ಯಾವಂತರಿಗೆ; ಕೆಲವು ವೇದವಿದ್ವಾಂಸರಿಗೆ ಇಂಥವರ ಹೇಳಿಕೆಗಳೇ ’ವೇದವಾಕ್ಯ’ !!
ಇದೆಲ್ಲ ಮಾಹಿತಿಗಳನ್ನು ಕುರಿತು ಬರೆಯುತ್ತಿರುವ ಈ ಬರಹಗಾರನ ಜ್ಞಾನದ ಪರಿಧಿ ಏನಿದ್ದರೂ, ಕನ್ನಡ ಭಾಷೆಯಲ್ಲಿರುವ ಈ ವಿಚಾರಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಸಾಹಿತ್ಯ ಕೃತಿಗಳ ಅಧ್ಯಯನವಷ್ಟೇ ಈತನ ಬರಹಕ್ಕೆ ಆಶ್ರಯತಾಣ! ವಾಸ್ತವವಾದ ಈ ಮಾಹಿತಿಯನ್ನರಿತು ಓದುಗರು ಈ ಬರಹದ ಓದುವಿಕೆಯನ್ನು ಮುಂದುವರೆಸಬಹುದು; ಅಥವಾ ಇದೊಂದು ನಿರುಪಯೋಗಿಯಾದ ಮಾಹಿತಿ ಎಂದು ನಿರ್ಧರಿಸಿ, ದೂರವಾಗಬಹುದು!!
ಶಾಸ್ತ್ರಾಧ್ಯಯನ ಸುಲಭದ ವಿಚಾರವಲ್ಲ:
ಯಾವುದೇ ಒಂದು ಶಾಸ್ತ್ರವನ್ನು ಸಮಗ್ರವಾಗಿ ಅಧ್ಯಯನ ಮಾಡಲು ಮಾನವನ ಒಂದು ಜೀವಿತಕಾಲದ ಅವಧಿಯು ಸಾಲದೆಂಬ ಹೇಳಿಕೆ ಇದೆ. ವೇದಗಳಲ್ಲಿರುವ ವಿವರಗಳು ಜಗತ್ತಿನ ಎಲ್ಲ ವಿಚಾರಗಳನ್ನೂ ಒಳಗೊಂಡಿರುವುದೆಂಬ ಮಾಹಿತಿಯೂ ಪ್ರಚಲಿತವಿದೆ. ವೇದಗಳನ್ನು ಸಂಪೂರ್ಣವಾಗಿ ಓದದೇ ಅದರಲ್ಲಿರುವ ಸಮ್ಯಜ್ಞಾನವನ್ನು ಅರಿಯಲಾಗದು ಎಂಬುದೂ ಸಹಜವಾದುದು. ಇಂದಿನವರಿರಲೀ, ಹಿಂದಿನ ವಿದ್ಯಾವಂತರಿಗೇ ಈ ರೀತಿಯಲ್ಲಿ ಸಮ್ಯಜ್ಞಾನ ಸಂಪಾದಿಸುವುದು ಶ್ರಮದ ಸಂಗತಿಯಾಗಿತ್ತು! ಇದನ್ನರಿತೇ ಕೆಲವು ಮಹಾತ್ಮರು ತಮ್ಮ ಕಾಲಘಟ್ಟದ ಹಾಗೂ ತಮ್ಮ ನಂತರದ ಮುಂದಿನ ಸಮಾಜದ ನೆರವಿಗಾಗಿ ಈ ಸಮ್ಯಜ್ಞಾನವನ್ನು ಕುರಿತು ಅಪರೂಪದ್ದಾದ; ಮಹತ್ವಪೂರ್ಣವಾದ ಮಾಹಿತಿಗಳನ್ನು ಬರೆದಿರಿಸಿರುವುದಿದೆ. ಅವುಗಳ ಅಂತರಾರ್ಥವನ್ನು ನಾವು ಗಮನಿಸಿದಾಗ; ವೇದಗಳು ಉಗಮವಾಗಿರುವುದು ಜನಸಾಮಾನ್ಯರ ಮನರಂಜಿಸುವ ಉದ್ದೇಶದಿಂದಲ್ಲ. ಎಂಬುದು ನಮಗೆ ಮನವರಿಕೆ ಯಾಗಬೇಕು. ವೇದೋಪನಿಷತ್ತುಗಳ ಸಮ್ಯಜ್ಞಾನವನ್ನು ಸಮರ್ಪಕವಾಗಿ ವಿವರಿಸುವ ಜನೋಪಯೋಗಿ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಮೊದಲ ಯತಿ ಶಂಕರಭಗವತ್ಪಾದರು ಎಂಬುದು ಗಮನಾರ್ಹ ಸಂಗತಿ.
ಸಾಮಾನ್ಯವಾಗಿ ಸಂಗೀತ ಹಾಗೂ ನೃತ್ಯಶಾಸ್ತ್ರಗಳಲ್ಲಿ ಪರಿಪೂರ್ಣವಾದ ಪ್ರಭುತ್ವ ಪಡೆಯಲು ಹಲವಾರು ವರ್ಷಗಳ ಸತತ ಅಭ್ಯಾಸದ ಅಗತ್ಯ ವಿರುತ್ತದೆ. ಇವು ಒಂದೊಂದು ಶಾಸ್ತ್ರಕ್ಕೆ ಸಂಬಂಧಿಸಿದ್ದು. ವೇದಗಳಲ್ಲಿ ಜಗತ್ತಿನ ಎಲ್ಲ ಶಾಸ್ತ್ರಗಳ ಮಾಹಿತಿಯೂ ಅಡಕವಾಗಿದೆ. ಅಂದಮೇಲೆ, ಅವುಗಳನ್ನು ಸಮರ್ಪಕವಾಗಿ ಅಧ್ಯಯನ ಮಾಡಲು ಎಷ್ಟು ಜೀವಿತದ ಅವಧಿ ಬೇಕಾದೀತೆಂಬುದು ಊಹಾತೀತ!
ಇವುಗಳ ಅಭಾಸಕ್ಕೆ ಸಾಹಿತ್ಯಜ್ಞಾನ; ಸಂಗೀತಜ್ಞಾನ, ರಾಗ ತಾಳಗಳಿಗೆ ಸಂಬಂಧಿಸಿದ ಜ್ಞಾನ, ಸಾಹಿತ್ಯಕ್ಕೆ ಅನುಗುಣವಾದ ಆಂಗಿಕ ಅಭಿನಯದ ಮುದ್ರೆಗಳು, ಇವೆಲ್ಲವುಗಳಿಗೂ ಮೂಲಾಧಾರವಾದ ಗಣಿತಜ್ಞಾನವು ಅತ್ಯವಶ್ಯಕವಾದುದು. ಇದನ್ನೆಲ್ಲ ಕಲಿತು, ಸಂಗೀತದಲ್ಲಾಗಲೀ, ನೃತ್ಯದಲ್ಲಾಗಲೀ ಪರಿಣತಿ ಪಡೆಯುವುದರೊಳಗೆ ಸಂಬಂಧಿಸಿದ ಕಲಾವಿದನ ಆಯುಷ್ಯದ ಬಹುಭಾಗವು ವ್ಯಯವಾಗಿರುತ್ತದೆ!
ಆದರೂ ಕೆಲವೊಂದು ವಿಶೇಷ ಸನ್ನಿವೇಶಗಳಲ್ಲಿ ಕೆಲವು ಪ್ರತಿಭಾಶಾಲಿ ಮಕ್ಕಳು ತಮ್ಮ ಎಂಟು- ಹತ್ತು ವರ್ಷಗಳ ಪ್ರಾಯಕ್ಕೇ ಈ ಶಾಸ್ತ್ರದಲ್ಲಿ ಊಹಾತೀತವಾದ ಪ್ರತಿಭೆಯನ್ನು ಸಾಧಿಸಿ; ಪ್ರದರ್ಶಿಸುವುದನ್ನು ಪ್ರತ್ಯಕ್ಷವಾಗಿ ಕಾಣುತ್ತೇವೆ!! ಇದಕ್ಕೆ ಅವರ ಪೂರ್ವಜನ್ಮದ ಸಂಸ್ಕಾರವು ಪ್ರಮುಖ ಕಾರಣವಾಗಿರುತ್ತದೆ. ಕೆಲವು ಮೇಧಾವಿಗಳು ತಮ್ಮ ಜೀವಿತಾವಧಿಯಲ್ಲಿ ಹಲವಾರು ವರ್ಷಗಳ ಅಧ್ಯಯದಿಂದ ’ಡಾಕ್ಟರೇಟ್’ ಪಡೆಯುತ್ತಾರೆ. ಇವರ ಪ್ರತಿಭೆಯು ಎಷ್ಟು ವ್ಯಾಪಕವೆಂದರೆ, ಇಂಥವರಲ್ಲಿ ಕೆಲವರು ಹಲವಾರು ಶಾಸ್ತ್ರಗಳನ್ನು ಅಧ್ಯಯನಮಾಡಿ ನಾಲ್ಕಾರು ಶಾಸ್ತ್ರಗಳಲ್ಲಿ ಈ ರೀತಿಯ ಡಾಕ್ಟರೇಟ್ ಪಡೆಯುತ್ತಾರೆ!!
ಆದರೆ, ಇಂಥ ಗಹನವಾದ ಹಲವಾರು ಶಾಸ್ತ್ರಗಳನ್ನು ಒಳಗೊಂಡು ಸರ್ವಶಾಸ್ತ್ರಮಯಿಯಾದ ವೇದಗಳನ್ನು ಸಮಗ್ರವಾಗಿ ಅಧ್ಯಯನಮಾಡಿ , ಪಾರಂಗತರಾಗಲು ಹಲವು ಸಾವಿರ ವರ್ಷಗಳ ಸಾಧನೆಯೂ ಸಾಲದೆಂಬುದು ಬಲ್ಲವರ ಅನಿಸಿಕೆ. ಈ ಕಾರಣದಿಂದಾಗಿ ಯಾವುದೇ ವ್ಯಕ್ತಿಯು ತನ್ನ ಬಾಲ್ಯಾವಸ್ಥೆಯಲ್ಲಿಯೇ ವೇದವಿದ್ಯಾ ಪಾರಂಗತ ಎನಿಸಿಕೊಂಡು, ಜಗತ್ತಿನ ಗಮನ ಸೆಳೆದಿರುವ ಉದಾಹರಣೆಯು ಬಹಳ ಅಪರೂಪದ್ದು!!
ಕಲಿಯುಗದ ಜಗದ್ಗುರು ಎಂಬ ಪ್ರಖ್ಯಾತಿಹೊಂದಿರುವ ಶಂಕರಭಗವತ್ಪಾದರು ತಮ್ಮ ಐದನೇ ವಯಸ್ಸಿಗೇ ಸಮಗ್ರವಾಗಿ ವೇದಜ್ಞಾನವನ್ನು ಸಂಪಾದಿಸಿ, ಎಂಟನೆಯ ವಯಸ್ಸಿಗೇ ವೇದೋಕ್ತವಾದ ನಿವೃತ್ತಿಮಾರ್ಗದ ನೆಲೆಯಾದ - ಸನ್ಯಾಸಾಶ್ರಮದ ದೀಕ್ಷೆಹೊಂದಿ, ವೇದೋಪನಿಷತ್ತುಗಳಿಗೆ ಸಂಬಂಧಿಸಿದ ಸಮಗ್ರಜ್ಞಾನವನ್ನು ಸಂಪಾದಿಸಿ, ಪ್ರಾಚೀನ ಕಾಲದಿಂದಲೂ ಪ್ರಚಲಿತವಿದ್ದ ಮೂರು ಅಧ್ಯಾಯಗಳ ೩೬೩ ಶ್ಲೋಕಗಳ ಭಗವದ್ಗೀತೆಯನ್ನು ಹದಿನೆಂಟು ಅಧ್ಯಾಯಗಳ ೭೦೦ ಶ್ಲೋಕಗಳ ಅದ್ವೈತಾಮೃತವರ್ಷಿಯಾಗುವಂತೆ ಉಪನಿಷತ್ತಿನ ಮಂತ್ರಗಳ ಆಧಾರದಲ್ಲಿ ವಿಸ್ತರಿಸಿ, ಅದನ್ನೂ ಒಂದು ಪ್ರಸ್ಥಾನ ಗ್ರಂಥವನ್ನಾಗಿಸಿದರು. ಉಪನಿಷತ್ತುಗಳು; ಬ್ರಹ್ಮಸೂತ್ರಗಳು ಹಾಗೂ ಭಗವದ್ಗೀತೆಗೆ (ಪ್ರಸ್ಥಾನತ್ರಯಕ್ಕೆ) ಸೂಕ್ತವಾದ ವ್ಯಾಖ್ಯಾನವನ್ನು ರಚಿಸಿ, ಲೋಕೋಪಕಾರದ ಕಾರ್ಯವನ್ನು ಎಸಗಿದವರು. ತಮ್ಮ ಜೀವಿತದ ೩೨ ಸಂವತ್ಸರಗಳು ಕಳೆಯುವ ವೇಳೆಗೆ ಇಹಲೋಕದ ವ್ಯವಹಾರವನ್ನು ತ್ಯಜಿಸಿದ ಮಹಾಮಹಿಮರು ಶಂಕರಭವತ್ಪಾದರು. ವ್ಯಾಸಮಹರ್ಷಿಯು ರಚಿಸಿದ್ದು ’ಜಯ’ಕಾವ್ಯ, ಇದರಲ್ಲಿ ಪ್ರಾಚೀನವಾದ ಭಗವದ್ಗೀತೆಯು ೩೬೩ ಶ್ಲೋಕಗಳವ್ಯಾಪ್ತಿಯದು ಎಂಬುದಕ್ಕೆ ೧೨೦೦ ವರ್ಷಗಳ ಹಿಂದಿನದೆಂದು ಪ್ರಚಲಿತವಿರುವ ’ಸಿರಿಭೂವಲಯ’ದ ಖಚಿತ ಆಧಾರವಿದೆ.
ಇಲ್ಲಿ ’ಪ್ರಸ್ಥಾನತ್ರಯ’ ಎಂಬ ಶಬ್ಧಕ್ಕೆ ನಾವು ಅರ್ಥವನ್ನರಿಯಬೇಕು. ಪ್ರಸ್ಥಾನವೆಂದರೆ, ಪ್ರಯಾಣ, ಯುದ್ಧಸಿದ್ಧತೆ, ಹೋರಾಟಕ್ಕೆ ಹೊರಡುವುದು ಎಂಬ ಅರ್ಥವಿದೆ. ಇದು ವ್ಯಕ್ತಿ ವ್ಯಕ್ತಿಗಳ ನಡುವಿನ ಹೋರಾಟದ ಪರಿಯಲ್ಲ!! ಜಗತ್ತಿನಲ್ಲಿ ಜೀವನದ ಜಂಜಡಗಳಿಂದ ಬಿಡುಗಡೆಹೊಂದಲು, ಆತ್ಮೋನ್ನತಿಯ ಹಾದಿಯಲ್ಲಿ ನಡೆಸುವ ಹೋರಾಟದ ವಿಚಾರ!
ಈ ಹೋರಾಟದಲ್ಲಿ, ಆತ್ಮದ ವಿಚಾರವನ್ನು ಸರಿಯಾಗಿ ತಿಳಿದಿರುವ ಉಪನಿಷತ್ತುಗಳು, ಬ್ರಹ್ಮಸೂತ್ರಗಳು ಹಾಗೂ ಭಗವದ್ಗೀತೆಯೆಂಬ ಪ್ರಸ್ಥಾನತ್ರಯಗಳು. ನಮ್ಮ ಆತ್ಮದ ಹೋರಾಟಕ್ಕೆ ಬೆಂಬಲನೀಡಿ, ನಮ್ಮ ಹೋರಾಟದಲ್ಲಿ ಜಯಸಾಧಿಸಲು ನೆರವಾಗುತ್ತವೆ ಈ ಪ್ರಸ್ಥಾನತ್ರಯಗಳು!! ಈ ಕಾರಣಕ್ಕಾಗಿ ನಾವು ಈ ಪ್ರಸ್ಥಾನ ತ್ರಯಗಳ ವಿಚಾರಗಳನ್ನು ಸತತವಾಗಿ ಅಭ್ಯಾಸಮಾಡಬೇಕೆಂಬುದು ಸಾವಿರಾರುವರ್ಷಗಳಿಂದ ನಮ್ಮ ಪ್ರಾಚೀನರ ಉಪದೇಶ.
ಇದಿಷ್ಟನ್ನು ಸಮರ್ಪಕವಾಗಿ ತಿಳಿಯುವುದರಿಂದ; ನಾವು ಸಮಸ್ಥ ವೇದಗಳ ಸಾರವನ್ನೂ ಅರಿತು, ವೇದೋಕ್ತ ಜೀವನಕ್ರಮವನ್ನು ನಡೆಸುವುದರಿಂದ, ನಮ್ಮ ಜೀವನದಲ್ಲಿ ಸಾರ್ಥಕತೆ ದೊರೆಯುತ್ತದೆಂಬ ಮಾಹಿತಿ ಪ್ರಚಲಿತವಿದೆ. ಆಸಕ್ತಿ ಹೊಂದಿರುವವರು ಇದನ್ನು ಪಾಲಿಸಬಹುದು. ಇಲ್ಲವರು ನಿರಾಕರಿಸಿ, ತಮ್ಮಿಚ್ಚೆಯಂತೆ ಜೀವಿಸಲು ಸ್ವತಂತ್ರರು.
ವೇದಗಳಾಗಲೀ, ವೇದಾಂತವಾಗಲೀ, ಭಗವದ್ಗೀತೆಯಾಗಲೀ ಯಾರೊಬ್ಬರನ್ನೂ ಇದೇ ಕ್ರಮದಲ್ಲಿ ಜೀವಿಸಲೇ ಬೇಕೆಂದು
ಒತ್ತಾಯಪಡಿಸಿಲ್ಲ! ಜಗತ್ತಿನಲ್ಲಿ ಬೇರಾವುದೇ ಜೀವನ ಸಂಪ್ರದಾಯವೂ ಈ ರೀತಿಯ
ಸ್ವಾತಂತ್ರ್ಯವನ್ನು ವ್ಯಕ್ತಿಗೆ ನೀಡಿಲ್ಲವೆಂಬುದು ಸರ್ವವೇದ್ಯ. ಯಾವುದೇ ವ್ಯಕ್ತಿಯು ತನ್ನ ಜೀವಿತದಲ್ಲಿ ಎಸಗಿದ
ಕರ್ಮಕ್ಕೆ ಅನುಗುಣವಾದ ಫಲವನ್ನು ತಾನೇ ಅನುಭವಿಸಬೇಕು ಎಂಬುದು ಇಲ್ಲಿನ ನಿಯಮ. ಕೆಲಮಟ್ಟಿಗೆ
ನಿಶ್ರೇಯಸವಾದವೂ ಈ ನಿಯಮವನ್ನು ಹೊಂದಿದೆ. ಆದರೆ ಉಳಿದವರು ಪಾರಮಾರ್ಥಿಕ ಜೀವನದಿಂದ ದೂರವಾಗಿ;
ಲೌಕಿಕ ಜೀವನದಲ್ಲೇ ಆಸಕ್ತರಾಗಿ, ಜೀವನದ ಜಂಜಡಗಳಿಂದ ಬೇಸತ್ತರೂ, ವ್ಯರ್ಥವಾದ
ಸ್ವೇಚ್ಛಾಜೀವನವನ್ನೇ ’ಸುಖ’ ಎಂದು ಭ್ರಮಿಸಿ, ಜೀವಿಸುತ್ತಾರೆ!! ಇತ್ತೀಚಿನ ದಿನಗಳಲ್ಲಿ ವಿದೇಶಿಯರೂ ಕೆಲವರು ಈ
ನೆಮ್ಮದಿಯ ಜೀವನಕ್ರಮವನ್ನು ಅನುಸರಿಸಲು ಸ್ವಪ್ರೇರಣೆಯಿಂದ ಮುಂದೆಬರುತ್ತಿರುವು ದುಂಟು.
ಜೀವನದಲ್ಲಿ ಅನುಸರಿಸಲು ಸರಳವಾದುದು; ಸುಲಭವಾದುದು ಎಂಬ ಕಾರಣಕ್ಕಾಗಿ ತಾವು
ಹುಟ್ಟಿಬೆಳೆದ ಪರಿಸರದ ಧರ್ಮವನ್ನು ತ್ಯಜಿಸಿ; ಬೇರೊಂದು ಧರ್ಮಕ್ಕೆ ಸೇರಿಕೊಳ್ಳುವುದು ಕೆಲವರಿಗೆ ಒಂದು ಹವ್ಯಾಸವಾಗಿರುತ್ತದೆ. ಇದನ್ನು
ಕುರಿತು ಶಂಕರಭಗವತ್ಪಾದರು ’ಸ್ವಧರ್ಮೇ ನಿಧನಃ ಶ್ರೇಯಃ
ಅನ್ಯಧರ್ಮ ಭಯಾವಹ’ ಎಂದು ಎಚ್ಚರಿಸಿರುವುದಿದೆ.
ಇದನ್ನು ಅರಿತು ಲೌಕಿಕ ಬಂಧನದಿಂದ ಬಿಡುಗಡೆಯನ್ನು ಬಯಸುವವರಿಗೆ ಮಾತ್ರವೇ ಇಲ್ಲಿನ ಮಾಹಿತಿಗಳು ಉಪಯುಕ್ತವಾಗುತ್ತವೆ.
ಉಳಿದವರಿಗೆ ವ್ಯರ್ಥವಾದ ಕಾಲಹರಣವೆಂಬುದು ನಿಶ್ಚಿತ.
-ಸಿರಿಭೂವಲಯದಸುಧಾರ್ಥಿ