Tuesday, 7 January 2020

ಸಿರಿಭೂವಲಯಾಂತರ್ಗತ ಜ್ಞಾನದ ಪರಿಧಿಯೆಷ್ಟು


*** ಸಿರಿಭೂವಲಯಾಂತರ್ಗತ ಜ್ಞಾನದ ಪರಿಧಿಯೆಷ್ಟು!!!??***

ಕುಮುದೇಂದುಮುನಿಯ ಸಿರಿಭೂವಲಯದಲ್ಲಿ ಅಡಕವಾಗಿರುವ ಜ್ಞಾನದ ವಿಸ್ತಾರವೆಷ್ಟೆಂಬುದನ್ನು ಅಳತೆಮಾಡಿ ತಿಳಿಯಲು ಯಾರಿಂದಲೂ ಸಾಧ್ಯವಿಲ್ಲ!
ನಮ್ಮ ಕಣ್ಣಿಗೆ ಕಾಣಿಸುವ, ಕಾಣಿಸದಿರುವ  ಹಲವಾರು ಲೋಕಗಳಿಗೆ  ಅವುಗಳ ನಿಯಮದಂತೆ ಸಂಚರಿಸಲು ಅವಕಾಶನೀಡಿರುವ ಆಕಾಶದ ವಿಸ್ತಾರವನ್ನು ಇದುವರೆವಿಗೂ ಯಾರೊಬ್ಬ ಮೇಧಾವಿಯೂ  ಅಳತೆಮಾಡಲಾಗಿಲ್ಲ!!
ಈಗಿನ ಕಾಲದಲ್ಲಿ, ಯಾವುದೋಒಂದುಕಾಲದಲ್ಲಿ, ಹಿಂದಿನ ಕಾಲದಲ್ಲಿ, ಮುಂದೆಬರುವ ಎಲ್ಲಕಾಲವನ್ನೂ ಆಕಾಶವು ನೋಡುತ್ತಿರುತ್ತದೆ!
ಈ ರೀತಿಯ ಆಕಾಶದರೀತಿಯಲ್ಲಿ ಗಮನಹರಿಸುವಂಥ ಐವರು ಗುರುಗಳ ಜ್ಞಾನವು ಈ ಕಾವ್ಯದಲ್ಲಿ ಅಡಕವಾಗಿದೆ!  ಎಂದು ಕವಿ ಸೂಚಿಸಿದ್ದಾನೆ. ಇದಕ್ಕೊಂದು ಉದಾಹರಣೆಯನ್ನು ನಾವಿಲ್ಲಿ ಗಮನಿಸಬಹುದು.
ಆಧುನಿಕ ವಿಜ್ಞಾನದ ಅಗಾಧವಾದ ಸಾಧನೆಗಳ ಪ್ರತೀಕವಾಗಿ ಕಂಪ್ಯೂಟರ್ ತಂತ್ರಜ್ಞಾನವು ಊಹಾತೀತವಾಗಿ  ಬೆಳವಣಿಗೆ ಹೊಂದಿರುವುದು ಸರ್ವವೇದ್ಯ.
ಹಿಂದೆಲ್ಲ  ’ ಥರ್ಡ್ ಜನರೇಷನ್, ಫೋರ್ತ್  ಜನರೇಷನ್,  ಫಿಫ್ತ್ ಜನರೇಷನ್ ’ ಕಂಪ್ಯೂಟರ್ ಗಳೆಂದು ವರ್ಗೀಕರಣವಿತ್ತು. ಕೊನೆಗೆ ’ವಿಂಡೋಸ್’ ಕಾಲಿಟ್ಟಿತು. ಈಗ ಅದರಲ್ಲಿಯೂ ಹಲವಾರು ಆವೃತ್ತಿಗಳಾದುವು.
ಹಿಂದೆಲ್ಲ  ಮಾಹಿತಿಗಳ ಸಾಗಾಣಿಕೆಗೆ ’ ಫ್ಲಾಫಿ’ ಗಳ ನೆರವಿತ್ತು. ಅದಕ್ಕೆ ಒಂದು ಮಿತಿಯೂ ಇತ್ತು. ಅನಂತ ’ಸಿಡಿ’ ಗಳು ಬಂದುವು. ಅವುಗಳ ಸಾಮರ್ಥ್ಯ ಹೆಚ್ಚಿತು.  ಈಗ ’ಪೆನ್ಡ್ರೈವ್’ ಬಂದಿದೆ! ಇವುಗಳ ಸಾಮಾರ್ಥ್ಯ ವ್ಯಾಪಕವಾದುದು.  ಇದನ್ನೂ ಮೀರಿಸಿದ ಸಾಧನೆಯತ್ತ ವಿಜ್ಞಾನದ ಕ್ಷೇತ್ರವು ಯೋಚಿಸುವುದು  ಸಹಜ.
ಇಂಥ ಪರಿಸರಿದಲ್ಲಿ ಯಾರಿಗೂತಿಳಿಯದ ಅನಾಮಧೇಯ ಪರಿಚಯಕಾರನೊಬ್ಬನು  ಸುಮಾರು ೧೨೦೦ ವರ್ಷಗಳಿಗೆ ಹಿಂದೆಯೇ ಇಂದಿನ ’ಪೆನ್ ಡ್ರೈವ್ ’ ಅನ್ನೂ ಮೀರಿಸಿದ ಸಾಮರ್ಥ್ಯದ ಸಾಧನದ ವಿಚಾರ ಪ್ರಚಲಿತವಿತ್ತು ಎಂದು ವಿವರಿಸಿದರೆ, ಅದನ್ನು ಯಾರೂ ನಂಬಲಾರರು!! ಮತ್ತು ಆರೀತಿ ವಿವರಿಸಿದವನ ವಿಚಾರವಾಗಿ ’ಅನುಕಂಪ’ ಸೂಚಿಸಬಹುದು!
ಆದರೆ, ನಿಜಕ್ಕೂ ಇಂಥ ಅನುಕಂಪದ ಅಗತ್ಯವಿಲ್ಲ.  ತನ್ನ ಅಚ್ಚರಿಯಕಾವ್ಯ ಸಿರಿಭೂವಲಯದಲ್ಲಿ ಅಡಗಿರುವ ಜ್ಞಾನದ ಪರಿಧಿಯನ್ನು ಈಗ ಮೇಲೆ ವಿವರಿಸಿದಂತೆ ಸೂಚಿಸಿರುವ ಕುಮುದೇಂದು ಮುನಿಯು  ಜಗತ್ತಿನಲ್ಲಿ ವಿಜ್ಞಾನಕ್ಷೇತ್ರದ ಸಾಧನೆಗಳಿಗೆ ಮೂಲಾಧಾರವಾಗಿರುವ ’ಗಣಿತ’ಶಾಸ್ತ್ರದ ಮಹೋನ್ನತ ಸಾಧನೆಯ ಬಲದಿಂದ ಅಂದಿನ ಕಂಪ್ಯೂಟರ್ ಕ್ಷೇತ್ರದಲ್ಲಿ ಬಳಕೆಯಲ್ಲಿದ ತಂತ್ರಜ್ಞಾನವನ್ನು ಬಹಳ ಸರಳವಾಗಿ ಸೂಚಿಸಿರುವುದಿದೆ!!!
ಕುಮುದೇಂದುವಿನ ಗಣಿತಶಾಸ್ತ್ರದಲ್ಲಿ ದಶಮಾಂಶಪದ್ಧತಿಯಿಲ್ಲ! ಅಲ್ಲಿ ಬಳಕೆಯಾಗುವುದು ’ನವಮಾಂಕ’ಕ್ರಮ!!  ಈ ಕ್ರಮದಲ್ಲಿ  ಖಚಿತವಾದ ಲೆಕ್ಕಾಚಾರಕ್ಕೆ ಮಾನ್ಯತೆಯೇ ಹೊರತು, ಎಷ್ಟೇ ಸೂಕ್ಷ್ಮವಾದ ಅಂದಾಜಿನ ಲೆಕ್ಕಾಚಾರಕ್ಕೂ ಅವಕಾಶವಿಲ್ಲ!!!
ಗಣಿತಕ್ಷೇತ್ರದಲ್ಲಿ  ಎಣಿಕೆ ಮಾಡಲು ಬಿಡಿ, ಹತ್ತು ನೂರು, ಸಾವಿರ, ದಶಸಾವಿರ, (ಅಯುತಂ) ಲಕ್ಷ,  ದಶಲಕ್ಷ,  (ಪ್ರಯುತಂ) ಕೋಟಿ, ಅರ್ಬುದಮ್, ಪದ್ಮಮ್,ಖರ್ವಮ್, ನಿಖರ್ವಮ್, ಬೃಂದಮ್, ಮಹಾಪದ್ಮಮ್,ಶಂಖ, ಮಹಾಶಂಖಃ,  ಸಮುದ್ರಃ, ಮಹಾಸಮುದ್ರಃ, ಮಧ್ಯಮ್, ಪರಾರ್ಧಮ್,  ಪರಾ ಎಂಬುದಾಗಿ ಸುಮಾರು ೨೨ ಸ್ಥಾನಗಳಿಗಿಂತ ಹೆಚ್ಚಿನ ಅಂಕಿಯನ್ನು ಬಳಸಲಾಗುತ್ತದೆ. ಇದೊಂದು ಸಾಮಾನ್ಯ ಬಳಕೆಯ ಸ್ಥಾನನಿರ್ಣಯವಾಯಿತು. ಕುಮುದೇಂದು ಮುನಿಯು ಸೂಚಿಸುವ ಲೆಕ್ಕಾಚಾರದಲ್ಲಿ ಸುಮಾರು  ೧೨೦ ಸ್ಥಾನಗಳವರೆವಿಗೂ  ಲೆಕ್ಕಾಚಾರ ಮುಂದುವರೆಯುತ್ತದೆ!!! ( 64 to the power of 64)
ಇದನ್ನೂ ಮೀರಿದಲ್ಲಿ ’ಅನಂತ’  (Infinate) ಎಂದು ಸೂಚಿಸಲಾಗುತ್ತದೆ. ಇಂಥ ’ಅನಂತವಾದ  ಅನಂತ’ಗಳ ವಿಚಾರವನ್ನು ಕುಮುದೇಂದುಮುನಿಯು ಸೂಚಿಸುವುದಿದೆ. ಅದನ್ನು  ’ಅನಂತಾನಂತ’  ಎಂಬ ಹೆಸರಿಂದ ಕಾವ್ಯದಲ್ಲಿ  ನಿರ್ದೇಶಿಸಿರುವುದಿದೆ.! ಇವುಗಳನ್ನು ಕುರಿತು ಗಣಿತಶಾಸ್ತ್ರವಿಶಾರದರು ಸೂತ್ರರೂಪದಲ್ಲಿ ಸಂಕ್ಷಿಪ್ತವಾಗಿ ನಿರ್ಧಾರಿಸುವುದಿದೆ.  ಇಂಥ ಅನಂತಾನಂತವಾದ ಜಗತ್ತನ್ನು ಒಂದು ಅಕ್ಕಿಯಕಾಳಿನ ವಿಸ್ತಾರದಷ್ಟು ಕೇತ್ರದಲ್ಲಿ ಅಡಗಿಸಿಡುವ ತಂತ್ರಜ್ಞಾನವನ್ನು ಕುಮುದೇಂದುಮುನಿಯು ಸಿರಿಭೂವಲಯದಲ್ಲಿ ಅಡಗಿಸಿರುವುದುಅಚ್ಚರಿಯಲ್ಲವೇ!!??!
ಜಗತ್ತಿನಲ್ಲಿರುವ ಚರಾಚರವಸ್ತುಗಳೆಲ್ಲವನ್ನೂ  ಪರಮಾಣುರೂಪಕ್ಕೆ ಪರಿವರ್ತಿಸಿ ಅವುಗಳಿಗೆ  ಪ್ರತಿಯೊಂದಕ್ಕೂ ಒಂದೊಂದು ಸಂಖ್ಯೆಯನ್ನು ಕೊಟ್ಟಾಗ, ಅದು  ಜಗತ್ತನ್ನೇ ತುಂಬುವವಷ್ಟು ಅಗಾಧವ್ಯಾಪ್ತಿಹೊಂದುತ್ತವೆ.  ಅವುಗಳನ್ನು ಒಂದರೊಳಗೆ ಒಂದನ್ನು ಸೂತ್ರರೂಪದಲ್ಲಿ ಜೋಡಿಸುತ್ತ ಮೂರು ಅಂಕಿಗಳಾಗಿ ಪರಿವರ್ತಿಸಬೇಕು.    ಈ ಮೂರು ಅಂಕಿಗಳನ್ನು ಅಕಾರ ಓಕಾರ, ಮಕಾರವೆಂಬ ಮೂರು ಅಕ್ಷರಗಳು ಪ್ರತಿನಿಧಿಸುತ್ತವೆ. ಇದೇ ಮೂರು ಅಕ್ಷರಗಳು ಜಗತ್ತಿನ ಸೃಷ್ಟಿ, ಸ್ಥಿತಿ, ಲಯವನ್ನೂ ಪ್ರತಿನಿಧಿಸುತ್ತವೆ!
ಈ ಮೂರು ಅಕ್ಷರಗಳ ಸಂಯುಕ್ತರೂಪವು  ’ಓಂ’ ಕಾರವಾಗುತ್ತದೆ. ಇದು ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳ ಸಂಯುಕ್ತರೂಪ. ಈ ಸೃಷ್ಟಿ, ಸ್ಥಿತಿ. ಲಯಗಳು ಬೇರೆ ಬೇರೆ ಕಾಲಘಟ್ಟದ ಅಗಾಧವಾದ ಕಾಲವಧಿಯಲ್ಲಿ ನಡೆಯುವ ಘನೆಗಳು. ಇದನ್ನು ಒಂದೇ ಕಾಲಘಟ್ಟದಲ್ಲಿ ನೋಡುವ ಅಸಾಮಾನ್ಯ ಸಾಧನೆಗಾಗಿಯೇ ಪ್ರಾಚೀನಕಾಲದಿಂದಲೂ ಋಷಿ, ಮುನಿಗಳು ಏಕಾಗ್ರಚಿತ್ತದಿಂದ ’ಓಂ’ ಕಾರದ ಅನುಸಂಧಾನದಲ್ಲಿ  ಲೀನವಾಗಿದ್ದಾರೆ!
 ಈ ವಿಚಾರ ಹಾಗಿರಲೀ,  ಕಂಪ್ಯೂಟರಿಗೆ ಸಂಬಂಧಿಸಿದ ವಿಚಾರನ್ನು ಈಗ ಮುಕ್ತಾಯಮಾಡೋಣ.  ’ಪೆನ್ ಡ್ರೈವ್’ ಗಳಲ್ಲಿಯೂ ಅದರ ಸಾಮರ್ಥ್ಯಕ್ಕೆ  ಇತಿಮಿತಿಗಳಿರುತ್ತವೆ. ಆದರೆ  ಮೇಲೆಸೂಚಿಸಿದ ಜಗತ್ತಿನ ಎಲ್ಲ ವಸ್ತುಗಳ ಪ್ರಾತಿನಿಧಿಕವಾದ ಪರಮಾಣುಗಳ ಅಗಾಧ ಸಂಖ್ಯೆಗಳನ್ನು  ಒಂದು ಅಕ್ಕಿಯಕಾಳಿನ ಕ್ಷೇತ್ರದ ವಿಸ್ತಾರದಲ್ಲಿ ಅಡಕಗೊಳಿಸುವ ವಿಚಾರವನ್ನು ಕುಮುದೇಂದುಮುನಿಯು ಸೂಚಿಸಿರುವುದಿದೆ.  ನೋಡಿ: " ಯವೆಯಕಾಳಿನ ಕ್ಷೇತ್ರದಳತೆಯೊಳಡಗಿಸಿ|ಅನಂತವ ಸಕಲಾನ್|ಕವನವದೊಳ್ ಸವಿಯಾಗಿಸಿಪೇಳುವ| ನವಸಿರಿ ಇರುವ ಭೂವಲಯ"
ನವಮಾಂಕಕ್ರಮದಲ್ಲಿ ಪರಸ್ಪರ ಸಂಯೋಗಗೊಳಿಸಿ ಮೂರು ಅಂಕಿಗಳಾಗಿ ಪರಿವರ್ತಿಸಿ, ಅದನ್ನೂ ’ಓಂ’ ಕಾರದಲ್ಲಿ ಅಡಕಗೊಳಿಸಿರುವ ಕ್ರಮವನ್ನು ಬಳಸಿಕೊಂಡು,  ಕುಮುದೇಂದು ಮುನಿಯು  ಒಂದು ಅಕ್ಕಿಕಾಳಿನ ವಿಸ್ತಾರದ ಕ್ಷೇತ್ರದಳತೆಯಲ್ಲಿ  ಅದನ್ನು ಸಂಗ್ರಹಿಸುವುದು ಪ್ರಾಯೋಗಿಕವಾಗಿಯೂ ಸಾಧ್ಯವಾದ ಸಂಗತಿಯಾಗಿದೆ.
 ರಾಮಾಯಣವನ್ನೇ  ಒಂದು ಅಕ್ಕಿಯಕಾಳಿನಮೇಲೆ ಬರೆಯವಂಥ ಸೂಕ್ಷ್ಮಬರಗಾರರಿರುವಲ್ಲಿ  ’ಓಂ’ ಕಾರವನ್ನು ಒಂದು ಅಕ್ಕಿಯಕಾಳಿನಲ್ಲಿ ಅಡಗಿಸಿಡುವುದು ಕಷ್ಟವೇ!!??   ಆದರೆ, ಅನಂತಾನಂತವಾದ ಜಗತ್ತನ್ನು ಸೂತ್ರಬದ್ಧವಾಗಿ ಓಂ’ ಕಾರಕ್ಕೆ ಪರಿವರ್ತಿಸಿದಂತೆಯೇ ಅದನ್ನು  ಯಾವುದೇ ಅಪಾಯಕ್ಕೂ ಸಿಗದಂತೆ , ಯಾವುದಕ್ಕೂ ಯಾವುದೇ ಊನವಾಗದಂತೆ ಎಚ್ಚರಿಕೆಯಿಂದ ಬಿಡಿಸುತ್ತ, ಪುನಃ ಅವುಗಳಿಗೆ  ಮೊದಲಿನದೇ ಆದ ನದಿ, ಬೆಟ್ಟ, ಸಾಗರ, ಮಾನವ, ಪಶು, ಪ್ರಾಣಿ,  ಪಕ್ಷಿಗಳ ಸಹಜರೂಪವನ್ನು ರೂಪಿಸಿಕೊಡುವ ಜ್ಞಾನವೂ ಸಾಧಕನಿಗೆ ಇರಬೇಕು!!
ಇಲ್ಲವಾದಲ್ಲಿ ಯಾವ ಚಮತ್ಕಾರವೂ ಸಾಧ್ಯವಿಲ್ಲ ಎಂಬುದನ್ನು ನಾವು ಮನಗೊಂಡಿರಬೇಕಲ್ಲವೇ?  ಇದು ನಿಜಕ್ಕೂ ಸಿರಿಭೂವಲಯದಲ್ಲಿ ಅಡಗಿರುವ ’ನವಸಿರಿ’ ಅಲ್ಲವೇನು!?  ಇದರಲ್ಲಿ ಊಹೆಯೂಇಲ್ಲ; ಸ್ವಕಪೋಲಕಲ್ಪಿತವಾದ ಮಾಹಿತಿಯೂ ಅಲ್ಲವೆಂಬುದು ಖಚಿತತಾನೇ!!!?? !!
                                 -ಸಿರಿಭೂವಲಯದಸುಧಾರ್ಥಿ.          

No comments:

Post a Comment