Thursday 28 November 2013

ಸಿರಿಭೂವಲಯದಲ್ಲಿ ನರ್ತನಶಾಸ್ತ್ರಕ್ಕೆ ಸಂಬಂಧಿಸಿದಂತೆ ಒಂದು ತುಣುಕು:


  ಜಗತ್ತಿನಲ್ಲಿ ಜ್ಞಾನಕ್ಕೆ ಸಂಬಂಧಿಸಿದಂತೆ ಸಕಲಭಾಷೆಗಳು ಹಾಗೂ ಸಕಲ ವಿಚಾರಗಳಿಗೂ ಸೇರಿದ, ಸಕಲ ಸಾಹಿತ್ಯವನ್ನೂ ಕೇವಲ ಸೊನ್ನೆಸಹಿತವಾದ ೧ ರಿಂದ ೯ ಕನ್ನಡ ಅಂಕಿಗಳ ರೂಪದಲ್ಲಿ ೬ ಲಕ್ಷ ಮೂಲ ಕನ್ನಡ ಸಾಂಗತ್ಯ ಪದ್ಯಗಳಲ್ಲಿ; ನೂರುಸಾವಿರಲಕ್ಷಕೋಟಿ ಶ್ಲೋಕಗಳ ವ್ಯಾಪ್ತಿಯಲ್ಲಿ ಆಯಾಯಾ ಭಾಷೆಗಳ ಮೂಲಸ್ವರೂಪದಲ್ಲಿ ಕನ್ನಡಭಾಷೆಯಲ್ಲಿ ಕಟ್ಟಿರಿಸಿರುವ ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯವು ಈ ಜಗತ್ತಿನ ಹತ್ತನೇ ಅಚ್ಚರಿಯೆಂದು ಪ್ರಖ್ಯಾತವಾಗಿದೆ!
  ಕುಮುದೇಂದು ಮುನಿಯು ಸರ್ವಧರ್ಮಗಳನ್ನೂ ಸಮನ್ವಯಗೊಳಿಸಿಕೊಂಡಿದ್ದ ಯಾಪನೀಯ ಜೈನಸಂಪ್ರದಾಯದ ದಿಗಂಬರ ಮುನಿ. ಜೈನಸಂಪ್ರದಾಯದ ಪ್ರಮುಖ ಗ್ರಂಥಗಳಾದ ಷಟ್ಖಂಡಾಗಮಗಳಿಗೆ ಧವಳಟೀಕೆಯನ್ನು ರೂಪಿಸಿದ ವೀರಸೇನಾಚಾರ್ಯ ಹಾಗೂ ಜಿನಸೇನಾಚಾರ್ಯರ ಶಿಷ್ಯನಾಗಿದ್ದವನು.  ಕರ್ನಾಟಕದ ಪ್ರಸಿದ್ಧ ರಾಜರುಗಳಾದ ಗಂಗರಸ ಸೈಗೊಟ್ಟಸಿವಮಾರನಿಗೂ, ಅಮೋಘವರ್ಷ ನೃಪತುಂಗನಿಗೂ ಗುರುವಾಗಿದ್ದವನು. ಕಾವ್ಯದಲ್ಲಿ ಕಾಣಬರುವ ಈ ಮಾಹಿತಿಗಳ ಆಧಾರದಲ್ಲಿ ಈ ಮುನಿಯ ಕಾಲವು ಕ್ರಿ. ಶ. ೮೦೦ ರ ಸುಮಾರು. ನಂದಿಬೆಟ್ಟದ ತಪ್ಪಲಿನಲ್ಲಿರುವ ಯಲವಳ್ಳಿ ಎಂಬ ಗ್ರಾಮವು ಈತನ ವಾಸಸ್ಥಳ.
  ಪಂಪನಿಗಿಂತಲೂ  ಪ್ರಾಚೀನನಾದ ಈ ಮಹಾನ್ ಕವಿಯು ತನ್ನ ಈ ಅಚ್ಚರಿಯ ಕಾವ್ಯದಲ್ಲಿ ಭೂತ, ವರ್ತಮಾನ ಹಾಗೂ ಭವಿಷ್ಯತ್ ಕಾಲಗಳಲ್ಲಿ ಬಳಕೆಯಾಗುವ ಕನ್ನಡಭಾಷೆಯನ್ನು ಬಳಸುವ ಮೂಲಕ ಓದುಗರಿಗೆ ವಿಸ್ಮಯವನ್ನುಂಟುಮಾಡಿದ್ದಾನೆ! ತನ್ನದೇ ಆದ ಒಂದು ವಿಶೇಷಕ್ರಮದಲ್ಲಿ ಬಳಕೆಯಾಗಿರುವ ಇಲ್ಲಿನ ಕನ್ನಡಭಾಷೆಯು ಬಹಳ ಕಠಿಣವೆಂದು ಭಾಸವಾಗುತ್ತದೆ. ಆದರೆ, ಭಾಷೆಯ ಬಳಕೆಯ ಪರಿಚಯವಾದರೆ, ಯಾರುಬೇಕಾದರೂ ಓದಿ, ತಿಳಿಯಬಹುದಾದ ಸರಳ ಕಾವ್ಯವಾಗಿದೆ. ಈ ಸಿರಿಭೂವಲಯ ಕಾವ್ಯ!   
   ಕರ್ಲಮಂಗಲಂ ಶ್ರೀಕಂಠಯ್ಯನವರು ಈ ಸಿರಿಭೂವಲಯ ಗ್ರಂಥದ ವಿಚಾರವಾಗಿ ತಮ್ಮ್ಮ ಜೀವಮಾನ ಪೂರ್ತ ಶ್ರಮಿಸಿದವರು. ಮೂಲಗ್ರಂಥದ ವಾರಸುದಾರರಾಗಿದ್ದ  ಪಂಡಿತ ಯಲ್ಲಪ್ಪಶಾಸ್ತ್ರಿಯೆಂಬುವವರು ಹಾಗೂ ಕನ್ನಡ ಟೈಪ್ ರೈಟರ್ ಜನಕ ಕೆ. ಅನಂತಸುಬ್ಬರಾಯರು ಈ ಮಹಾನ್ ಗ್ರಂಥದ ಪ್ರಚಾರಕಾರ್ಯದಲ್ಲಿ ತೊಡಗಿದ್ದವರು. ಹಾಸನದ ಸುಧಾರ್ಥಿಯು ಈ ಗ್ರಂಥವನ್ನು ಸರಳವಾದ ಕನ್ನಡಭಾಷೆಯಲ್ಲಿ ಪರಿಚಯಮಾಡಿದ್ದಾಗಿದೆ.
  ಸಿರಿಭೂವಲಯಗ್ರಂಥದಲ್ಲಿ ನರ್ತನಶಾಸ್ತ್ರಕ್ಕೆ ಸಂಬಂಧಿಸಿದಂತೆ ಕಾಣಬರುವ ಮಾಹಿತಿಯನ್ನು ಕೆ. ಶ್ರೀಕಂಠಯ್ಯನವರು  ಸಂಸ್ಸೃತ ಭಾಷೆಯಲ್ಲಿ ಹಾಡುಗಬ್ಬಗಳು ಎಂಬ ಲೇಖನದಲ್ಲಿ  ಉಲ್ಲೇಖಿಸಿರುವುದನ್ನು ಕಾಣಬಹುದು.
   ಈ ಭಾಗವು ಸಿರಿಭೂವಲಯದ ಪ್ರಥಮಖಂಡದ ೫೨ನೇ ಅಧ್ಯಾಯದ ಪೂರ್ಣಪದ್ಯಗಳ ೪ನೇ ಪಾದದ ಕೊನೆಯಿಂದ ೪ನೇ ಅಕ್ಷರವನ್ನು ಹಿಡಿದು ಮೇಲಿನಿಂದ ಕೆಳಕ್ಕೆ ಸಾಗಿದಾಗ ದೊರೆಯುವ ಅಕ್ಷರಗಳ ಸರಪಣಿಯಲ್ಲಿ ಕಾಣಬರುತ್ತದೆ. (ಇದರ ಹಿಂದಿನ ಹಾಗೂ ಮುಂದಿನ ಅಧ್ಯಾಯಗಳಲ್ಲೂ ಇದೇ ಸ್ಯಾನದಲ್ಲಿ ಈ ಸಾಹಿತ್ಯಭಾಗವು ಪ್ರವಹಿಸಿದೆ)
  ಸಾಮಾನ್ಯವಾಗಿ ಮಾತೃದೇವೋಭವ, ಪಿತೃದೇವೋಭವ ಎಂಬುದಾಗಿ ಮೊದಲಿಗೆ ತಾಯಿಯನ್ನೂ ಅನಂತರ ತಂದೆಯನ್ನೂ ಸ್ಮರಿಸುವುದು ವೈದಿಕಸಂಪ್ರದಾಯದ ಕ್ರಮ. ಆದರೆ, ಜೈನಸಂಪ್ರದಾಯದ ಸಿರಿಭೂವಲಯದಲ್ಲಿ ನರ್ತನದ ವಿಚಾರಕ್ಕೆ (ಕುಣಿತ) ಸಂಬಂಧಿಸಿದ ಈ ಸಾಹಿತ್ಯಭಾಗದಲ್ಲಿ   ಮೊದಲಿಗೆ ವಾಸುದೇವನನ್ನೂ, ಕೊನೆಗೆ ಶ್ರೀಲಕ್ಷ್ಮಿಯನ್ನೂ ಸ್ತುತಿಸಿರುವುದು  ಒಂದು ವಿಶೇಷ ಸಂಗತಿಯಾಗಿದೆ! ಇದಕ್ಕೆ ಸಂಬಂಧಿಸಿದ ಮೂಲ ಸಾಹಿತ್ಯದ ರುಚಿಯನ್ನು ನೀವೀಗ ಸವಿಯಬಹುದು.   
*  *  *

 ಶ್ರೀವಾಸುದೇವಂ ವಸುಪೂಜ್ಯನಾಥಂ| ಸುದೇವ ಪೂಜ್ಯಂ ಖಗಭರ್ತೃ ಪೂಜ್ಯಂ|
 ಸದ್ಧರ್ಮಬೀಜಂ ವರ ಬೋಧಬೀಜಂ| ಸುಶರ್ಮಕಾರಂ ಪ್ರಣಮಾಮಿ ನಿತ್ಯಂ||೧||

ವ್ಯಂತರೀ ಕಿನ್ನರೀ ಸ್ವರ್ಗದೇವಾಮರೀ| ಭೂಚರೀ ಖೇಚರೀ ಸರ್ವವಿದ್ಯಾಧರೀ|
ಹಾವಭಾವ ವಿಲಾಸ ಸಂಸದಾ ಸುಂದರಾ| ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ ||೨||

ಧುಮಿ ಧುಮಿ ಧುಮಿ ಧುಮಿ ಮದ್ದಲಾವಜ್ಜಯಾ| ದುಮಿ ದುಮಿ ದುಮಿ ದುಮಿ ದೋಂದಲಾಗಜ್ಜಲಾ|
ಝಿಮಿಕಿಟೀ ಝಿಮಿಕಿಟೀ ಘಂಗರೀ ಸುಂದರಾ| ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೩||

ಭೋಂ ಭೋಂ ಭೋಂ ಭೋಂ ಭೋಂ ಭೋಂ ಶಬ್ದಯಾ ಭುಂಗಲಾ|
ಥೋಂಗಿಣಿ ಥೋಂಗಿಣಿ ಗಜ್ಜಯಾ ಮದ್ದಲಾ|
ತಿಮಿಕಿಟ ತಿಮಿಕಿಟ ತಾಲಶಬ್ದಾಕರಾ| ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೪||

ರುಣು ರುಣು ರುಣು ರುಣೂ ದಿವ್ಯ ವೀಣಾಸ್ವರಾ| ದಪಮಧ ಸಮಧಪ ಡೋಲಶಬ್ದಾಕರಾ|
ದಮ ದಮ ದಮ ದಮ ಸದ್ದಮೀ ಕಿನ್ನರಾ| ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೫||

ಖಿಣಿ ಖಿಣಿ ಖಿಣಿ ಖಿಣಿ ಕಂಸ ಕಂಸಾಲಯಾ| ಪಿಮಿ ಪಿಮಿ ಪಿಮಿ ಪಿಮೀ ವಂಶ ವಿಶಾಲಯಾ| ಝರ ಝರಾ ಝರ ಝರಾ ಝಲ್ಲರೀ ಸುಸ್ವರಾ| ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೬||

ತೋಂ ತೋಂ ತೋಂ ತೋಂ ತೋಂ ತೋಂ ವಾದ್ಯಶ್ರೀಮಂಡಲಾ|
ಭುಂ ಭುಂ ಭುಂ ಭುಂ ಭುಂ ಭುಂ ಶಬ್ದಶೋಭಾಮಲಾ|
ಹುಂ ಹುಂ ಹುಂ ಹುಂ ಹುಂ ಹುಂ ಶಂಖ ಶೋಭಾಕರಾ| ಣಚ್ಚ ಈ ಅಪ್ಸರಾದಿವ್ಯರೂಪಾಧರಾ||೭||

ಪಂಚಮಂ ಭೈರವ ನಾದಮಲ್ಹಾರಯಾ|ಥಾಥ ಈ ಥಾಥ ಈ ಪಾದಸಂಚಾರಯಾ|
ನಿತ್ಯ ಗಾನಾಸನ ದೇವ ಚೇತೋಹರಾ| ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೮||

ಕರ್ಜಕೈ ರ್ಮೋದಕೈ ಸೇವಸೋಹಾಲಯಾ|ಪಂಕಜೈ ಶ್ಚಂಪಕೈ ರ್ಜಾತಿಸನ್ಮಾಲಕೈಃ| ಪೂಜಯೋಜ್ಜೀವರಂ ದೇವಯೋಗೀಶ್ವರಂ| ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೯||

ಧರ್ಮಶೋಭಾಕರೇ ಚೈತ್ಯಶ್ರೀಮಂದಿರೇ| ನರ್ತನಾ ಗೀತ ಗಾನಾ ಸದಾ ಚಕ್ರಿರೇ|
ಕರ್ಪುರೇ ರಾರತೀಭವ್ಯ ಅರ್ತೀಹರಾ| ಣಚ್ಚ ಈ ಅಪ್ಸರಾ ದಿವ್ಯರೂಪಾಧರಾ||೧೦||

ವಕ್ತ್ರಾಬ್ದೇ ಶಂಖಲಕ್ಷ್ಮೀ: ಕರತಲ ಕಮಲೇ ಸರ್ವದಾ ದಾನಲಕ್ಷ್ಮೀಃ |
ದೋರ್ದಂಡೇ ವೀರಲಕ್ಷ್ಮೀರ್ಹೃದಯ ಸರಸಿಜೇ ಭೂತಕಾರುಣ್ಯಲಕ್ಷ್ಮೀಃ|
ಸರ್ವಾಂಗೇ ಸೌಮ್ಯಲಕ್ಷ್ಮೀರ್ನಿಖಿಲ ಗುಣಗಣಾಡಂಬರೇ ಕೀರ್ತಿಲಕ್ಷ್ಮೀಃ|
ಖಡ್ಗೇಸೌಂದರ್ಯಲಕ್ಷ್ಮೀರ್ಜಯತು ಭುವಲಯೇ ಸರ್ವಸಾಂರಾಜ್ಯಲಕ್ಷ್ಮೀಃ||

*   *   *

 ಈ ಸಂಸ್ಕೃತ ಹಾಡುಗಬ್ಬವನ್ನು ಅಕ್ಷರಗಣ-ಮಾತ್ರಾಗಣಗಳಲ್ಲಿ ಬರೆಯದೇ ಕುಮುದೇಂದುವು ಶಬ್ದಗಣದಲ್ಲಿ ಬರೆದಿದ್ದಾನೆ. ನಾಟ್ಯಕ್ಕೇ (ಕುಣಿತ) ಮೀಸಲಾದ ವಿಷಯಗಳನ್ನು ನಾಟ್ಯ ಪದ್ಧತಿಗೆ ಹೊಂದಿಬರುವ ಹಾಡುಗಬ್ಬಗಳಲ್ಲೇ ವಿವರಿಸಿರುವುದು ಮತ್ತೊಂದು ಹೆಚ್ಚಿನ ವಿಷಯ. ಈ ಪದ್ಯಗಳಲ್ಲಿ ನಾಟ್ಯರಂಗ ಪರಿವಾರ-ಉಪಪರಿವಾರಗಳನ್ನೂ ನಿರ್ದೇಶಿಸುತ್ತಾ ಮದ್ದಲ, ದೊಂದಲ, ಘುಂಗರಿ, ಭುಂಗಲ, ಗಜ್ಜೆ(ಗೆಜ್ಜೆ) ತಾಲ,ವೀಣಾ, ಡೋಲ, ಕಿನ್ನರಿ, ಕಂಸ, ವಂಶ, ಝಲ್ಲರಿ, ಮಂಡಲ, ಶೋಭಾ, ಶಂಖ ಇವುಗಳನ್ನೂ; ಅವುಗಳಲ್ಲಿ ಕೆಲವು ಮೊದಲಿನ ಸ್ವರಗಳನ್ನೂ ಹೇಳುತ್ತಾನೆ. ಇವುಗಳಿಗೆ ಅನುಸರಿಸಿ ಕುಣಿಯುವ ಥಾಥ ಈ ಥಾಥ ಈ ಈ ಪಾದ ಸಂಚಾರ ಪದ್ಧತಿಯನ್ನೂ ಮನೋಹರವಾಗಿ ನಿರೂಪಿಸುತ್ತಾನೆ. ಇಲ್ಲಿ ಕುಮುದೇಂದುವು ಹೇಳಿರುವ ವಾದ್ಯಗಳಲ್ಲಿ, ಅವುಗಳ ಸ್ವರಪದ್ಧತಿಗಳಲ್ಲಿ ಅನೇಕ ಹೆಸರುಗಳೂ, ಸ್ವರ ವಿಶೇಷಗಳೂ ತೀರ ಅಪರಿಚಿತವಾದವುಗಳು. ಇದನ್ನೂ ದೊರೆಯುವ ನರ್ತನ ಶಾಸ್ತ್ರ ಗ್ರಂಥಗಳಿಗೆ ಹೋಲಿಸಿ, ಇದಕ್ಕೂ ಉಪಲಬ್ದವಿರುವ ಶಾಸ್ತ್ರ ಪದ್ಧತಿಗಳಿಗೆ ಸಾಮ್ಯವೆಷ್ಟು? ವೈಷಮ್ಯವೆಷ್ಟು? ಮೊದಲಾದ ಸಂಗತಿಗಳನ್ನು ವಿವೇಚಿಸುವ ವಿಷಯವನ್ನು ನಾಟ್ಯಾಚಾರ್ಯರು ಮಾಡಬೇಕು ಎಂಬುದಾಗಿಯೂ ಕೆ. ಶ್ರೀಕಂಠಯ್ಯನವರು ತಮ್ಮ ಲೇಖನದಲ್ಲಿ ಸೂಚಿಸಿದ್ದಾರೆ. ಈ ಲೇಖನವು ಪ್ರಕಟವಾಗಿ ಅರ್ಧಶತಮಾನವೇ ಕಳೆದರೂ ಯಾರೊಬ್ಬರೂ ಇತ್ತ ಗಮನಹರಿಸಿದಂತಿಲ್ಲ! ಇದಕ್ಕೆ ಮುಖ್ಯಕಾರಣ: ಈ ಪ್ರಾಚೀನ ಕನ್ನಡಕಾವ್ಯವು ಇದುವರೆವಿಗೂ ಕಬ್ಬೀಣದಕಡಲೆ ಎನಿಸಿಕೊಂಡು ಸಾಮಾನ್ಯ ಓದುಗರ ಗಮನಕ್ಕೆ ಬಾರದೇ ಅಜ್ಞಾತವಾಗಿದ್ದುದು!
   ಹಾಸನದ ಸುಧಾರ್ಥಿಯ ಮೂಲಕ ಈಗ ಈ ಮಹಾನ್ ಗ್ರಂಥದ ಸರಳ ಪರಿಚಯಕೃತಿಗಳು ರಚನೆಯಾಗಿ ಪ್ರಕಟವಾಗಿರುವ ಕಾರಣ ಈ ಭಾಗವನ್ನು  ನರ್ತನಶಾಸ್ತ್ರ್ರ ವಿಶಾರದರ ಗಮನಕ್ಕೆ ತಂದು, ಇದರ ಸೊಬಗನ್ನು ನೃತ್ಯಾಭ್ಯಾಸಿಗಳಿಗೆ ಪರಿಚಯಿಸುವ ಪ್ರಯತ್ನಮಾಡಲಾಗಿದೆ. ಈ ಭಾಗದಲ್ಲಿ ಕುಮುದೇಂದುವು ಸೂಚಿಸಿರುವ ಸಂಗೀತವಾದ್ಯಗಳ ಪೈಕಿ ಕಂಸಾಳೆ; ವಂಶ (ಬಿದಿರಿನ ಕೊಳಲು) ಶಂಖ; ಕಿನ್ನರಿ; ಗಜ್ಜೆ(ಗಜ್ಜುಗದ ಆಕಾರವಿರುವ ಗೆಜ್ಜೆ) ಮದ್ದಲೆ; ಡೋಲು; ವೀಣಾ; ತಾಲ ಮುಂತಾದುವು ಇಂದಿಗೂ ಪರಿಚಿತವಾದುವು. ದೊಂದಲ; ಭುಂಗಲ; ಮಂಡಲ; ಘುಂಗರಿ; ಝಲ್ಲರಿ; ಶೋಭಾ ಮುಂತಾದ ಅಪರಿಚಿತ ವಾದ್ಯಗಳ ಸ್ವರೂಪವನ್ನು ಅನುಭವಶಾಲಿಗಳಾದ ವಿದ್ವಾಂಸರು ಖಚಿತವಾಗಿ ವಿವರಿಸಬೇಕಾದ ಅಗತ್ಯವಿದೆ.  
*   *   *

ವಿವರಗಳಿಗೆ ಸಂಪರ್ಕಿಸಿ: ಸಿರಿಭೂವಲಯದ ಸುಧಾರ್ಥಿ, ಹಾಲುವಾಗಿಲು, ತಟ್ಟೇಕೆರೆ ಅಂಚೆ, ಹಾಸನ. ಸಂಚಾರಿ ದೂರವಾಣಿ: ೯೪೪೯೯೪೬೨೮೦.
sudharthyhassan@gmail.com